ಬೀಜಿಂಗ್: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಮೆದುಳಿನ ರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 2021ರ ಅಂತ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
‘ರಕ್ತನಾಳಗಳನ್ನು ದುರ್ಬಲಗೊಳಿಸಲಿದೆ ಎಂಬ ಕಾರಣಕ್ಕೆ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ, ಚೀನೀ ಸಾಂಪ್ರದಾಯಿಕ ಚಿಕಿತ್ಸೆಗೆ ಒಲವು ಹೊಂದಿದ್ದಾರೆ’ ಎಂದು ಸ್ಥಳೀಯ ಮಾಧ್ಯಮವನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಚೀನಾದಲ್ಲಿ ಕೊರೊನಾ ಸೋಂಕು ಹಾವಳಿ ಆರಂಭವಾದಾಗಿನಿಂದ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗುವವರೆಗೆ ಷಿ ಜಿನ್‌ಪಿಂಗ್ ಅವರು ವಿದೇಶಿ ಗಣ್ಯರ ಭೇಟಿ ಮಾಡಿರಲಿಲ್ಲ. ಆಗಿನಿಂದಲೂ ಅವರ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು.
2019ರಲ್ಲಿ ಇಟಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿನ್‌ಪಿಂಗ್ ಅವರ ನಡಿಗೆಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ನಂತರ ಫ್ರಾನ್ಸ್ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಸಹ ಅವರು ಮತ್ತೊಬ್ಬರ ನೆರವು ಪಡೆಯುತ್ತಿದ್ದರು ಎಂದೂ ಮಾಧ್ಯಮಗಳು ವರದಿ ಮಾಡಿವೆ. 2020ರಲ್ಲಿ ಶೆಂಜೆನ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮಕ್ಕೆ ಅವರು ತಡವಾಗಿ ಬಂದಿದ್ದರು. ಕೆಮ್ಮುತ್ತಿದ್ದ ಅವರು ಬಹಳ ನಿಧಾನವಾಗಿ ಮಾತನಾಡುತ್ತಿದ್ದುದ ಸಹ ಅವರ ಆರೋಗ್ಯದ ಕುರಿತು ಹಲವು ಊಹಾಪೋಹಗಳಿಗೆ ಎಡೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.