ಬೀಜಿಂಗ್: ಚೀನಾವು ತನ್ನ ನಾಗರಿಕರಿಗೆ ಗರಿಷ್ಠ ಮೂರು ಮಕ್ಕಳನ್ನು ಹೊಂದಲು ಅವಕಾಶವನ್ನು ನೀಡಿದೆ. ಆದರೂ ಹೆಚ್ಚಿದ ಜೀವನ ವೆಚ್ಚ ಮತ್ತು ಕುಟುಂಬದ ಬಗ್ಗೆ ಬದಲಾಗುತ್ತಿರುವ ಮನೋಸ್ಥಿತಿಯಿಂದಾಗಿ ಯುವ ಪೀಳಿಗೆಯು ಮೂರು ಮಕ್ಕಳು ಬೇಡ ಎನ್ನುತ್ತಿದೆ.
ಕಳೆದ ವರ್ಷ ಚೀನಾದಲ್ಲಿ 1.2 ಕೋಟಿ ಮಕ್ಕಳು ಜನಿಸಿದ್ದಾರೆ. ಇದು ಈವರೆಗಿನ ಅತಿ ಕಡಿಮೆ ಜನನ ಪ್ರಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚೀನಾ ಸರ್ಕಾರವು ಸೋಮವಾರ, ದಂಪತಿಗೆ ಮೂರು ಮಕ್ಕಳನ್ನು ಹೊಂದಲು ಅನುಮತಿಯನ್ನು ನೀಡಿತು. ಆದರೆ ಹೆಚ್ಚಿದ ಜೀವನ ವೆಚ್ಚ, ಕಡಿಮೆ ಸ್ಥಳ, ಸಾಮಾಜಿಕ ಮಾನದಂಡಗಳು ಕುಟುಂಬದ ಗಾತ್ರವನ್ನು ಸೀಮಿತಗೊಳಿಸಿವೆ.
‘ಸಾಕಷ್ಟು ಮಹಿಳೆಯರು ಮಕ್ಕಳನ್ನು ಹೊಂದಲು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ ಮೂರು ಮಕ್ಕಳ ಬಗ್ಗೆ ಯೋಚಿಸಲು ಸಾಧ್ಯವಿಲ್ಲ’ ಎಂದು 22 ವರ್ಷದ ವಿದ್ಯಾರ್ಥಿನಿ ಯಾನ್ ಜಿಯಾಕಿ ಹೇಳಿದರು.
ಚೀನಾ ಸುಮಾರು ವರ್ಷಗಳ ಕಾಲ 'ಒಂದೇ ಮಗು' ನೀತಿ ಅನುಸರಿಸುತ್ತಾ ಬಂದಿತ್ತು. ಇದು ವಿಶ್ವದ ಕಟುವಾದ ಕುಟುಂಬ ಯೋಜನೆ ನಿಯಮಗಳಲ್ಲಿ ಒಂದು ಎನಿಸಿಕೊಂಡಿತ್ತು. ಆದರೆ, ಜನರಿಗೆ ವಯಸ್ಸಾಗುತ್ತಿರುವುದರಿಂದ ಅದು, ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಹೀಗಾಗಿ 2016ರಲ್ಲಿ ಈ ಕಠಿಣ ಕಾನೂನು ತೆಗೆದುಹಾಕಿ, ಎರಡು ಮಕ್ಕಳಿಗೆ ಅವಕಾಶ ನೀಡಲಾಯಿತು.
‘ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು, ಮಕ್ಕಳ ಶಿಕ್ಷಣಕ್ಕಾಗಿ ತೀವ್ರ ಹೂಡಿಕೆ, ಮಹಿಳೆಯರಲ್ಲಿ ಹೆಚ್ಚುತ್ತಿರುವ ವೃತ್ತಿ ಜೀವದ ಆಶಯದಿಂದಾಗಿ ದಂಪತಿಗಳು ಹೆಚ್ಚಿನ ಮಕ್ಕಳನ್ನು ಹೊಂದಲು ಹಿಂಜರಿಯುತ್ತಿದ್ದಾರೆ. ಹಾಗಾಗಿ ಸರ್ಕಾರ ಕೇವಲ ನೀತಿಯಲ್ಲಿ ಸಡಿಲಿಕೆ ತರುವುದಕ್ಕಿಂತ ಹೆಚ್ಚಿನದ್ದನ್ನು ಮಾಡಬೇಕಾಗುತ್ತದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.