ADVERTISEMENT

YouTube ಮಾಜಿ ಸಿಇಒ ಸುಸಾನ್‌ ನಿಧನ; ಕಂಬನಿ ಮಿಡಿದ ಸುಂದರ್ ಪಿಚೈ

ಏಜೆನ್ಸೀಸ್
Published 10 ಆಗಸ್ಟ್ 2024, 13:29 IST
Last Updated 10 ಆಗಸ್ಟ್ 2024, 13:29 IST
<div class="paragraphs"><p>ಸುಸಾನ್ ವೊಜ್ಕಿಕಿ</p></div>

ಸುಸಾನ್ ವೊಜ್ಕಿಕಿ

   

ಬೆಂಗಳೂರು: ಗೂಗಲ್‌ನ ಯುಟ್ಯೂಬ್ ಅನ್ನು ಸಾಕಷ್ಟು ಜನಪ್ರಿಯಗೊಳಿಸಿದ ಶ್ರೇಯಕ್ಕೆ ಭಾಜನರಾಗಿದ್ದ ಮಾಜಿ ಸಿಇಒ ಸುಸಾನ್ ವೊಜ್ಕಿಕಿ ಅವರು ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಶನಿವಾರ ತಿಳಿಸಿದ್ದಾರೆ.

‘ಕ್ಯಾನ್ಸರ್‌ ವಿರುದ್ಧ ಎರಡು ವರ್ಷಗಳ ಕಾಲ ಹೋರಾಡಿದ ನನ್ನ ಗೆಳತಿ ಸುಸಾನ್‌ ಅಗಲಿಕೆ ನಂಬಲು ಸಾಧ್ಯವಾಗುತ್ತಿಲ್ಲ. ಯಾರೂ ಹೊಂದಿರದಷ್ಟು ಆಳವಾದ ಸಂಬಂಧವನ್ನು ಅವರು ಗೂಗಲ್‌ನೊಂದಿಗೆ ಹೊಂದಿದ್ದರು. ಅವರಿಲ್ಲದ ಜಗತ್ತನ್ನು ಊಹಿಸುವುದೂ ಕಷ್ಟವಾಗಿದೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸುಂದರ್ ಬರೆದುಕೊಂಡಿದ್ದಾರೆ.

ADVERTISEMENT

‘ಒಬ್ಬ ಅದ್ಭುತ ವ್ಯಕ್ತಿ, ನಾಯಕಿ ಹಾಗೂ ಸ್ನೇಹಿತೆಯಾಗಿದ್ದ ಸುಸಾನ್, ಜಗತ್ತಿನ ಮೇಲೆ ಅಪಾರವಾದ ಪ್ರಭಾವ ಬೀರಿದವರು. ಸುಸಾನ್ ಅವರನ್ನು ಬಲ್ಲ ಅಸಂಖ್ಯಾತ ಗೂಗಲರ್‌ಗಳಲ್ಲಿ ನಾನೂ ಒಬ್ಬ. ಅವರು ಇಲ್ಲದ ಭಾವ ನಮ್ಮೆಲ್ಲರನ್ನೂ ಕಾಡುತ್ತಿದೆ. ಅವರ ಕುಟುಂಬದೊಂದಿಗೆ ನಾವಿದ್ದೇವೆ. RIP ಸುಸಾನ್’ ಎಂದು ಪಿಚೈ ಬರೆದಿದ್ದಾರೆ.

ಸುಸಾನ್ ಅವರು ಪರಿಚಯಿಸಿದ ಆ್ಯಡ್‌ಸೆನ್ಸ್ ಎಂಬುದು ಗೂಗಲ್‌ಗೆ ಸಾಕಷ್ಟು ಆದಾಯ ತಂದುಕೊಟ್ಟಿತ್ತು. ಹೀಗಾಗಿ ಗೂಗಲ್ ಸಂಸ್ಥಾಪಕ ಪ್ರಶಸ್ತಿಯನ್ನು ಪಡೆದಿದ್ದರು. ಗೂಗಲ್ ಕಂಪನಿಯಲ್ಲಿ ಹಲವು ವರ್ಷಗಳ ಕಾಲ ಅವರು ಕೆಲಸ ಮಾಡಿದ್ದರು.

ಗೂಗಲ್ ಇಮೇಜ್ ಸರ್ಚ್‌ ಅಭಿವೃದ್ಧಿಪಡಿಸಿದವರಲ್ಲಿ ಸುಸಾನ್ ಅವರೂ ಒಬ್ಬರು. ಗೂಗಲ್ ಫಸ್ಟ್ ವಿಡಿಯೊ, ಬುಕ್ ಸರ್ಚ್‌, ಆ್ಯಡ್‌ಸೆನ್ಸ್‌ ಸೇರಿದಂತೆ ಹಲವು ಹೊಸ ಆವಿಷ್ಕಾರಗಳ ಮೂಲಕ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದರು.

ಕೇವಲ ಯುಟ್ಯೂಬ್‌ ಮಾತ್ರವಲ್ಲದೇ, ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರನ್ನು ಉತ್ತೇಜಿಸಲು ಸುಸಾನ್ ಸಾಕಷ್ಟು ಶ್ರಮಿಸಿದ್ದರು. ಹೀಗಾಗಿ ಸುಸಾನ್ ಅವರನ್ನು ಮೆಚ್ಚುವ ಬಹುದೊಡ್ಡ ಅಭಿಮಾನ ಬಳಗ ಜಾಗತಿಕ ಮಟ್ಟದಲ್ಲಿದೆ.

2023ರಲ್ಲಿ ಸುಸಾನ್ ಅವರು ಯುಟ್ಯೂಬ್ ಸಿಇಒ ಸ್ಥಾನದಿಂದ ಕೆಳಗಿಳಿದರು. ಇವರ ನಂತರ ಭಾರತ–ಅಮೆರಿಕ ಮೂಲದ ನೀಲ್ ಮೋಹನ್ ಅವರನ್ನು ಯುಟ್ಯೂಬ್‌ ಸಿಇಒ ಆಗಿ ಕಂಪನಿ ನೇಮಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.