ADVERTISEMENT

ಅರಮನೆ ಕತ್ತಲು, ರೆಡ್ಡಿ ಪೌಂಡ್, ವಿವಾದಿತ ಸ್ಕ್ರಿಪ್ಟ್!

ಐ.ಎಂ.ವಿಠಲಮೂರ್ತಿ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST
ಅರಮನೆ ಕತ್ತಲು, ರೆಡ್ಡಿ ಪೌಂಡ್, ವಿವಾದಿತ ಸ್ಕ್ರಿಪ್ಟ್!
ಅರಮನೆ ಕತ್ತಲು, ರೆಡ್ಡಿ ಪೌಂಡ್, ವಿವಾದಿತ ಸ್ಕ್ರಿಪ್ಟ್!   

ಕಳೆದ ಮಂಗಳವಾರ ಮೈಸೂರಿನಲ್ಲಿದ್ದೆ. ನನ್ನ ಜತೆ ಅಮೆರಿಕದಿಂದ ಆಗಮಿಸಿದ್ದ ನನ್ನ ಸಂಬಂಧಿ ಡಾ.ಚೆಂಗಪ್ಪ ಅವರೂ ಇದ್ದರು. ಅವರು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ (ನಾಲ್ಕು ದಶಕಗಳ ಹಿಂದೆ) ಓದಿ, ಈಗ ಅಮೆ­ರಿಕ­ದಲ್ಲಿ ನೆಲೆಸಿದ್ದಾರೆ. ಅವರಿಗೆ ಸಹಜವಾಗಿ ಈಗಿನ ಮೈಸೂರು ಹೇಗಿದೆ ಎಂದು ತಿಳಿಯುವ ತವಕ­ವಿತ್ತು. ಸಂಜೆ ೬.೩೦ರ ಸುಮಾರು ಇಬ್ಬರೂ ಮೈಸೂರು ಅರಮನೆ ಸಮೀಪ ಹೋದೆವು.

ಕತ್ತಲು ಕವಿದಿತ್ತು. ಅರಮನೆಯ ಎಲ್ಲ ಮುಖ್ಯ ದ್ವಾರ­ಗಳು ಮುಚ್ಚಿದ್ದವು. ಹಾಳು ಸುರಿಯು­ತ್ತಿತ್ತು. ಮೂರು ದೇವಾಲಯಗಳಿರುವ ಪ್ರಮುಖ ದ್ವಾರದ ಬಳಿ ಯಾವುದೋ ಧ್ವನಿಮುದ್ರಿತ ಹರಿ­ಕಥೆ ನಡೆದಿತ್ತು. ಕುದುರೆ ಲದ್ದಿಯ ವಾಸನೆ ಮೂಗಿಗೆ ರಾಚುತ್ತಿತ್ತು. ಮಬ್ಬುಗತ್ತಲಿನಲ್ಲಿ ಬಡ ಕುದುರೆಗಳ ಒಡೆಯರು ಗಿರಾಕಿಗಳನ್ನು ಹುಡು­ಕುತ್ತಾ ತಿರುಗುತ್ತಿದ್ದರು. ಅರಮನೆಯಲ್ಲೂ ಕತ್ತಲು, ಹೊರಗೂ ಕತ್ತಲು. ಗೇಟ್‌ಗಳ ಕಿಂಡಿಯಿಂದ ಅರಮನೆಯ ಫೋಟೊ ಕ್ಲಿಕ್ಕಿಸಲು ವಿದೇಶಿ ಪ್ರವಾಸಿಗರ ಸ್ಥಿತಿ ದಯನೀಯವಾಗಿತ್ತು.

ಮೈಸೂರಿನಲ್ಲಿ ಎಷ್ಟೊಂದು ಸುಂದರವಾದ ಪಾರಂಪರಿಕ ಕಟ್ಟಡಗಳಿವೆ. ಅವೆಲ್ಲವನ್ನೂ ಯಾರಿಗೂ ಕಾಣಿಸದಂತೆ ಮುಚ್ಚಿಟ್ಟಿದ್ದೇವೆ. ಅಲ್ಲಿ ಸುಂದರವಾದ ಚಾಮುಂಡಿ ಬೆಟ್ಟವಿದೆ. ಅದಕ್ಕೂ ಬೆಳಕಿನ ಸೋಂಕಿಲ್ಲ. ದೇಶ, ವಿದೇಶಗಳ ಪ್ರವಾಸಿ­ಗರು ಅಪಾರ ಸಂಖ್ಯೆಯಲ್ಲಿ ವರ್ಷವಿಡೀ ಮೈಸೂ­ರಿಗೆ ಬರುತ್ತಾರೆ. ಒಂದು ಅಂದಾಜಿನಂತೆ ಲಂಡ­ನ್ನಿನ ಮೇಡಮ್ ಟುಸ್ಸಾಡ್ಸ್‌ ಮ್ಯೂಸಿಯಂ ನೋಡಲು ಬರುವವರ ಸಂಖ್ಯೆಯಷ್ಟೇ (ಸುಮಾರು ೨೫ ಲಕ್ಷ ಜನ) ಮೈಸೂರಿಗೂ ಬರುತ್ತಾರೆ. ಆದರೆ, ಈ ಪ್ರವಾಸಿಗರಿಗೆ ನಾವು ಏನು ಕೊಡುತ್ತೇವೆ?

ಪ್ರವಾಸೋದ್ಯಮ ಇಲಾಖೆಯಿಂದ ಕೇವಲ ೧೩ ತಿಂಗಳಿನಲ್ಲಿ ನನಗೆ ಎತ್ತಂಗಡಿಯಾದ ನಂತರ ಹಿಂದೆ ಪ್ರಾರಂಭವಾದ ಹಲವಾರು ಯೋಜನೆ­ಗಳು ನನೆಗುದಿಗೆ ಬಿದ್ದಿದ್ದವು. ಯಾವುದೇ ಹೊಸ ಯೋಜನೆಗಳು ಪ್ರಾರಂಭವಾಗಲಿಲ್ಲ. ‘Karnataka is theatre of inspiration’ ಎಂಬ ಘೋಷವಾಕ್ಯ ಮಾತ್ರ ಬದಲಾಗಿ ‘Karnataka –one state many worlds’ ಎಂದು ರೂಪಾಂತರ ಹೊಂದಿತ್ತು. ನಂತರ ಬಂದ ಅಧಿಕಾರಿಗಳನ್ನು ಸಹ ಹೆಚ್ಚು ಕಾಲ ಉಳಿಸಲಿಲ್ಲ. ಉಳಿದ ಒಬ್ಬರೇ ಒಬ್ಬರೆಂದರೆ ಮಾಜಿ ಪ್ರಧಾನಿ­ಗಳಿಗೆ ಆಪ್ತ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದ್ದ ಒಬ್ಬ ಅಧಿಕಾರಿ. ತಾವು ಪ್ರಪಂಚ ತಿರುಗುವುದರಿಂದ ಕರ್ನಾಟಕದ ಪ್ರವಾಸೋ­ದ್ಯಮ ಉದ್ಧಾರವಾಗುತ್ತದೆಂದು ತಿಳಿದು ಅವರು  ಪ್ರಪಂಚದ ಹಲವಾರು ದೇಶಗಳನ್ನು ಒಬ್ಬರೇ ಸುತ್ತಿಕೊಂಡು ಬಂದರು. ಅವರು ರಾಜ್ಯದ, ದೇಶದ ಹೊರಗಿದ್ದುದೇ ಹೆಚ್ಚು. ಎಂಎಂಎಲ್ ಹಗರಣದಲ್ಲಿ ಸಿಲುಕಿದ ನಂತರ ಇಲ್ಲಿಯವರೆಗೆ ರಾಜ್ಯದ ಸೇವೆಗೆ ಹಿಂದಿರುಗಿ ಬಂದಿಲ್ಲ!

‘ಸುವರ್ಣ ರಥ’ದ ಯೋಜನೆ ಒಂದಂಗುಲ ಕದಲಿ­ರಲಿಲ್ಲ. ಹಂಪಿಯನ್ನು ವಿಶ್ವ ಪಾರಂಪರಿಕ ತಾಣ­ದಲ್ಲಿ ಉಳಿಸಿಕೊಳ್ಳಲು ಸಮರ್ಪಕವಾದ ಕಾರ್ಯ­ಕ್ರಮಗಳು ರೂಪಿತವಾಗಿರಲಿಲ್ಲ. ಪ್ರಮುಖ ಪ್ರವಾಸಿ ತಾಣಗಳಿಗೆ ಮೂಲ ಸೌಕರ್ಯ ಒದಗಿಸುವ ಯೋಜನೆಗಳು ಸಹ ಮಂದಗತಿಯಲ್ಲಿ ಸಾಗುತ್ತಿದ್ದವು. ‘ಅತಿಥಿ’ ಯೋಜನೆ ಸಹ ಮಾರ್ಗಸೂಚಿಗಳಿಲ್ಲದೆ ಸ್ಥಳೀಯ ಅಧಿಕಾರಿಗಳ ಶೋಷಣೆಗೆ ಒಳಪಟ್ಟಿದ್ದವು.
ಪುನಃ ಕನ್ನಡ ಸಂಸ್ಕೃತಿ ಮತ್ತು ಪ್ರವಾ­ಸೋ­ದ್ಯಮ ಇಲಾಖೆಗೆ 2006ರಲ್ಲಿ ಕಾರ್ಯದರ್ಶಿ­ಯಾಗಿ ನೇಮಕಗೊಂಡೆ.

ನನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳನ್ನು ನಿರ್ದಿಷ್ಟ ಕಾಲಾವಧಿ­ಯಲ್ಲಿ ಪೂರ್ಣಗೊಳಿಸಲು ಸಿದ್ಧತೆ ನಡೆಸಿದೆ. ನಾಳೆಯೇ ಇಲ್ಲವೇನೋ ಎನ್ನುವ ರೀತಿ ‘ಸುವರ್ಣ ರಥ’ ಯೋಜನೆಗೆ ಚಾಲನೆ ಕೊಟ್ಟೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಸಮ­ಯ­ದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ಒದಗಿಸಿದರು. ಹಣಕಾಸು ಸಚಿವರಾಗಿದ್ದ ಬಿ.ಎಸ್‌.­ಯಡಿಯೂರಪ್ಪ ಅವರೊಡನೆ ಕಾಡಿ, ಬೇಡಿ ಹಣ ಪಡೆದೆ.

ನಮ್ಮ ಇಲಾಖೆಗೆ ‘ಕಿರಾಣಿ ಅಂಗಡಿ ಬಜೆಟ್’ ಕೊಡುತ್ತೀರೆಂದು ಜಗಳವಾ­ಡಿದೆ. ಪ್ರವಾಸೋದ್ಯಮ ಇಲಾಖೆಯಿಂದ ಉಂಟಾ­ಗುವ ಉದ್ಯೋಗ ಸೃಷ್ಟಿ, ಪ್ರವಾಸಿ ತಾಣ­ಗಳ ಅಭಿವೃದ್ಧಿ ಹೀಗೆ ಹತ್ತು-–ಹಲವಾರು ವಿಷ­ಯ­ಗಳನ್ನು ತಿಳಿಸಿ ಅವರನ್ನು ಒಪ್ಪಿಸಿದೆ. ‘ಸುವರ್ಣ ರಥ’ಕ್ಕೆ ಹಣ ಒದಗಿಸಿದರು. ಅದು ಯಾವ ಮಾರ್ಗ­ದಲ್ಲಿ ಚಲಿಸಬೇಕು, ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳನ್ನು ಹೇಗೆ ಪ್ರಸಿದ್ಧಿ­ಗೊಳಿಸಬೇಕೆಂದು ಚರ್ಚಿಸಿ ನಿಗದಿಗೊಳಿಸ­ಲಾಯ್ತು.

ಅಲ್ಲಿ ರೈಲ್ವೆ ನಿಲ್ದಾಣಗಳನ್ನು ಹೇಗೆ ಸ್ವಚ್ಛವಾಗಿಡಬೇಕೆಂದು ರೈಲ್ವೆ ಇಲಾಖೆಯ­ವ­ರೊಂದಿಗೆ ಸಮಾಲೋಚಿಸಿ ಅಭಿವೃದ್ಧಿಗೊಳಿಸ­ಲಾಯ್ತು. ಕೋಚ್‌ಗಳ ನಿರ್ಮಾಣ, ಅವುಗಳಿಗೆ ಐಷಾರಾಮಿ ಒಳಾಂಗಣ ವಿನ್ಯಾಸ, ಅಡುಗೆಮನೆ, ರೆಸ್ಟೋರೆಂಟ್, ಗ್ರಂಥಾಲಯ, ಇಂಟರ್‌ನೆಟ್ ಸೌಲಭ್ಯ... ಒಟ್ಟಿನಲ್ಲಿ ಚಲಿಸುವ ಪಂಚತಾರಾ ಹೋಟೆಲ್ ಸಿದ್ಧಗೊಂಡಿತು.

ಅದಕ್ಕೆ ಹೆಸರು ಸೂಚಿಸಲು ಸ್ಪರ್ಧೆ ಏರ್ಪಟ್ಟು ‘ಸುವರ್ಣ ರಥ’ವೆಂದು ನಾಮಕರಣವಾಯ್ತು. ಕುಮಾರ­ಸ್ವಾಮಿ–-ಯಡಿಯೂರಪ್ಪನವರ ಟ್ವೆಂಟಿ–-೨೦ ಪಂದ್ಯ ಮುಗಿದು ರಾಜ್ಯಪಾಲರ ಆಡಳಿತ ನಡೆ­ದಿತ್ತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ‘ಸುವರ್ಣ ರಥ’ ಉದ್ಘಾಟಿಸಿದರು. ಇಡೀ ಯೋಜನೆಯ ಅನುಷ್ಠಾನ ನನಗೊಂದು ಎಂದೂ ಮರೆಯಲಾ­ಗದ ಅನುಭವ ನೀಡಿತ್ತು.

ಪ್ರವಾಸಿಗಳಿಗೆ ತುಂಬ ಇಷ್ಟವಾಯ್ತು. ನನ್ನ ವರ್ಗಾವಣೆ ನಂತರ ಅದರ ಮಾರ್ಗ ಬದಲಾಯ್ತು. ನಿಗದಿತವಾಗಿ ಅದನ್ನು ನಡೆಸಲಿಲ್ಲ. ಕರ್ನಾಟಕದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಬದಲು ದಕ್ಷಿಣ ಭಾರತದ ನಿಗದಿತವಲ್ಲದ ತಾಣಗಳಿಗೆ ಸಂಚರಿಸಲು ಶುರು ಮಾಡಿದ್ದರಿಂದ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳನ್ನು ಪ್ರಸಿದ್ಧಿಪಡಿಸುವಲ್ಲಿ ವಿಫಲ
ವಾ­ಯ್ತು. ಒಂದು ರೀತಿಯಲ್ಲಿ ‘ಸುವರ್ಣ ರಥ’ ಹಳಿ ತಪ್ಪಿತು.

ಮೈಸೂರು ನಗರ ಮತ್ತು ಅರಮನೆಯನ್ನು ಹೆಚ್ಚು ಆಕರ್ಷಕಗೊಳಿಸಲು ಸಿದ್ಧಪಡಿಸಿದ ಮತ್ತೊಂದು ಯೋಜನೆ ಅರಮನೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ. ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ಮಾರ್ಗದರ್ಶನ­­ದಲ್ಲಿ ಅದನ್ನು ಸಿದ್ಧಪಡಿಸಲಾಗಿತ್ತು. ಭಾರತದ ಇನ್ನಿತರ ಪ್ರಮುಖ ಪ್ರವಾಸಿ ತಾಣಗಳಲ್ಲಿ (ಕೆಂಪುಕೋಟೆ, ಗ್ವಾಲಿಯರ್, ಗೋಲ್ಕೊಂಡ ಕೋಟೆ) ಮಾಡಿದ ರೀತಿಯಲ್ಲಿ ಮೈಸೂರಿನಲ್ಲಿ ಮೊದಲ ಪ್ರಯತ್ನ ಮಾಡಲಾಯ್ತು. ಅದರ ಬಗ್ಗೆ ಶ್ರೀಕಂಠದತ್ತ ಒಡೆಯರ್ ಅವರೊಡನೆ ನಾಲ್ಕಾರು ಬಾರಿ ಮಾತ­ನಾಡಿ ಒಪ್ಪಿಸಿದ್ದೆ.

ಆದರೆ, ಅದರ ಸ್ಕ್ರಿಪ್ಟ್ ಬಗ್ಗೆ ಮೈಸೂರಿನ ಕೆಲವು ವಿದ್ವಾಂಸರ ಭಿನ್ನಮತ ವ್ಯಕ್ತವಾಗಿದ್ದರಿಂದ ಅದು ವಿವಾದಕ್ಕೆ ಕಾರಣ­ವಾಗಿ ಕೇವಲ ಕೆಲವು ಪ್ರದರ್ಶನ ಕಂಡು ನಿಂತಿತು. ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದರೂ ಅದು ವಿವಾದದಿಂದ ಹೊರಬರಲಾಗಲಿಲ್ಲ.

ಚರಿತ್ರೆಯ ಸಿಕ್ಕುಗಳಲ್ಲಿ ಸಿಲುಕಿಕೊಂಡವರಿಂದ ಅದನ್ನು ಬಿಡಿಸಲಾಗಲಿಲ್ಲ. ಜನರ ರಂಜನೆಗಾಗಿ ಕತೆ ಹೇಳು­ವಾಗ myth, legend, drama ಎಲ್ಲ ಒಳ­ಗೊಂ­ಡಿರುತ್ತದೆ ಎಂಬುದನ್ನು ಅವರಿಗೆ ಮನ­ವ­ರಿಕೆ ಮಾಡಲು ಸಾಧ್ಯವಾಗಲಿಲ್ಲ. ಮೊನ್ನೆ ಮೈಸೂರಿನಲ್ಲಿ­ದ್ದಾಗ ಅನಾಥವಾದಂತೆ ಕಂಡ ಅರಮನೆಯ ಆವರಣ, ಕತ್ತಲಲ್ಲಿ ಮುಳುಗಿದ್ದ ಮೈಸೂರು ನೋಡಿ ನಿಜವಾಗಿ ದುಃಖಿತನಾದೆ.

ಸಿದ್ದ­ರಾಮಯ್ಯ­ನವರು ಅದೇ ಊರಿನವರು. ಮೈಸೂ­ರನ್ನು ಹೇಗೆ ಪ್ರವಾಸಿಸ್ನೇಹಿ ಮಾಡಬಹುದೆಂದು ಯೋಚಿಸಿದರೆ ಇದನ್ನೆಲ್ಲ ಸರಿಪಡಿಸಲು ಸಾಧ್ಯ­ವಿದೆ. ಎಲ್ಲ ರೀತಿಯಲ್ಲಿ ಕತ್ತಲು ಕವಿದಿರುವ ಮೈಸೂ­ರಿಗೆ ಬೆಳಕು ತರಲು ಸಾಧ್ಯವಿದೆ. ಅವರ ಅಧಿಕಾರದ ಅವಧಿ ಮುಗಿದ ಮೇಲೆ ಹಳಹಳಿಸಿ ಪ್ರಯೋಜನವಿಲ್ಲ. ರಾಜಸ್ತಾನದಲ್ಲಿ ರಾಜಮನೆ­ತನದ ಪರಂಪರೆ ಬಳಸಿಕೊಂಡು ಪ್ರವಾಸೋ­ದ್ಯ­ಮಕ್ಕೆ ಅದ್ಭುತವಾದ ನೆಲೆಗಟ್ಟು ನಿರ್ಮಿಸಿದ್ದಾರೆ. ಮೈಸೂರಿನಂತಹ ಸುಂದರನಗರ ಅತಿ ವಿರಳ. ಉತ್ತಮ ಹವಾಮಾನ, ಶಾಂತ ವಾತಾವರಣ, ಸ್ನೇಹ­ಮಯಿ ಜನ, ಕಳಶಪ್ರಾಯವಾದ ಚಾಮುಂಡಿ­ಬೆಟ್ಟ, ಸಮೀಪದಲ್ಲಿರುವ ಶ್ರೀರಂಗ­ಪಟ್ಟಣ, ಸೋಮನಾಥಪುರ, ನಂಜನಗೂಡು, ಸ್ವಲ್ಪ ದೂರ ಹೋದರೆ ಊಟಿ... ಹೀಗೆ ಎಲ್ಲವೂ ಇದೆ. ಮೈಸೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ನಡೆದಾಡುವುದೇ ಒಂದು ಅವಿಸ್ಮರಣೀಯ ಅನುಭವ.

ಕರ್ನಾಟಕದಲ್ಲಿ ಉತ್ತಮ ಗೈಡ್‌ಗಳ ಕೊರತೆ­ಯನ್ನು ಮನಗಂಡು ಚೀನಾ ಮಾದರಿಯ ಪ್ರಯೋಗ ಮಾಡಿ  ರಾಜ್ಯದ ನಾಲ್ಕು ವಿಭಾಗಗಳ ವಿಶ್ವವಿದ್ಯಾಲಯಗಳಲ್ಲಿ ಒಂದೊಂದು ಕಾಲೇಜಿ ನಲ್ಲಿ ಐದು ವರ್ಷಗಳ ಮಾಸ್ಟರ್ ಇನ್ ಟೂರಿ­ಸಂ ಎಡ್ಮಿನಿಸ್ಟ್ರೇಷನ್ ವಿಭಾಗಕ್ಕೆ ಸರ್ಕಾರದ ವತಿಯಿಂದ ಅನುದಾನ ನೀಡಿ ಪ್ರಾರಂಭಿಸ­ಲಾಯ್ತು. ಬಹಳ ನಿರೀಕ್ಷೆಯೊಂದಿಗೆ ಆರಂಭ­ವಾದ ವಿಭಾಗ ಈಗಾಗಲೇ ನಮ್ಮ ವಿಶ್ವವಿದ್ಯಾ­ಲಯಗಳಲ್ಲಿ ಆಗುವ ಎಲ್ಲ ಕೋರ್ಸ್‌ಗಳಂತೆ ಬರೀ ಅಕಾಡೆಮಿಕ್ ಆಗಿ ಹೋಗಿದೆ. ಇಂತಹ ವಿಭಾಗಗಳನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಿ ಆತಿಥ್ಯ ಉದ್ಯಮದ ಎಲ್ಲ ಪಾಲುದಾರರು ಇದ­ರಲ್ಲಿ ಭಾಗಿಗಳಾಗುವಂತೆ ಮಾಡುವ ಅಗತ್ಯವಿದೆ.

ಹೋಂ ಸ್ಟೇಗಳಿಗೆ ಒಂದು ನೀತಿ ಸಂಹಿತೆಯ ಅಗತ್ಯವಿದೆ. ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಹಲವು ಹೋಂ ಸ್ಟೇಗಳು ಅತ್ಯುತ್ತಮ ಸೇವೆ ಒದಗಿಸುತ್ತಿವೆ. ಮಧ್ಯಮ ವರ್ಗ­ದವರಿಗೆ ಒಂದು ಉತ್ತಮ ಆದಾಯದ ಮೂಲವಾಗಿದೆ. ಆದರೆ, ಅಷ್ಟೇ ಸಂಖ್ಯೆಯ ಹೋಂ ಸ್ಟೇಗಳು ಐಟಿ, ಬಿಟಿ ವ್ಯಸನಿಗಳ, ಕುಡುಕರ ಕೇಂದ್ರಗಳಾಗಿವೆ. ನಿಯಂತ್ರಣ ತಪ್ಪಿದರೆ ಅವು ಹಾದಿ ತಪ್ಪಬಹುದು. ಹೋಂ ಸ್ಟೇಗಳ ಸಮಾ­ವೇಶ ನಡೆಸಿ ಅವರಿಗೆ ಸೂಕ್ತ ಮಾರ್ಗ­ದರ್ಶನ ನೀಡಿ ಸ್ವಯಂ ನೀತಿಸಂಹಿತೆ ಪಾಲನೆಗೆ ಅಣಿಗೊಳಿಸಿದರೆ ಗ್ರಾಮೀಣ ಪ್ರವಾಸೋದ್ಯಮದ ಅಭಿವೃದ್ಧಿಗೆ ಅನುಕೂಲವಾಗುತ್ತದೆ.

ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮೇಳ­ ಗ­ಳಲ್ಲಿ ಭಾಗವಹಿಸುವುದು ಒಂದು ವಿಶೇಷ ಅನು­ಭವ. ಪ್ರಪಂಚದ ನಾನಾ ದೇಶಗಳಿಗೆ ತಮ್ಮ ಪ್ರವಾಸಿ ಆಕರ್ಷಣೆಗಳನ್ನು ಪ್ರಚಾರ ಮಾಡಿ, ಪ್ರವಾ­ಸಿಗರನ್ನು ಆಕರ್ಷಿಸಲು ವಿನೂತನ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಹಲವಾರು ಕಲಾ­ವಿದರು, ಕುಶಲಕರ್ಮಿಗಳನ್ನು ಬಳಸಿ­ಕೊಂಡು ಉದ್ದಿಮೆ ವೃದ್ಧಿಸಿಕೊಳ್ಳುತ್ತಾರೆ. ಮೊದಲ ಬಾರಿಗೆ ಬರ್ಲಿನ್‌ ಪ್ರವಾಸೋದ್ಯಮ ಮೇಳಕ್ಕೆ ಹೋಗಿ ಕರ್ನಾಟಕದ ಒಂದು ಪ್ರತ್ಯೇಕ  ಮಳಿಗೆ ಪಡೆದು ಭಾಗವಹಿಸಿದ್ದು ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಲು ಅನುಕೂಲ­ವಾಯ್ತು.

ಎರಡನೇ ಬಾರಿಗೆ ಹೋದಾಗ ನಮ್ಮ ಜತೆ ಡಿ.ಬಿ. ಇನಾಂದಾರ್ ಬಂದಿದ್ದರು. ಬಹಳ ಸಜ್ಜನಿಕೆಯ ಸರಳ ಸಚಿವರು. ಆದರೆ, ಅವರ ಪತ್ನಿ ತಮ್ಮ ವೈಯಕ್ತಿಕ ಟ್ರಾವೆಲರ್‌್ಸ ಚೆಕ್‌ಗಳನ್ನು ಕೊಟ್ಟಿದ್ದರಿಂದ ಅವುಗಳನ್ನು ಕ್ಯಾಶ್ ಮಾಡಿಸಿ­ಕೊಳ್ಳಲು ಸಚಿವರೂ ಮತ್ತು ಅಧಿಕಾರಿಗಳೂ ಹೆಣಗಾಡಿದ್ದು ಒಂದು ತಮಾಷೆಯಾಯ್ತು.
ಲಂಡನ್ನಿನ ವಿಶ್ವ ಪ್ರವಾಸೋದ್ಯಮ (ಡಬ್ಲ್ಯು­ಟಿಎಂ) ಮೇಳಕ್ಕೆ ಹೋದಾಗ ಸಚಿವ ಶ್ರೀ­ರಾಮುಲು ಹಾಗೂ ವಿಧಾನ ಪರಿಷತ್ ಸದಸ್ಯ­ರಾಗಿದ್ದ ಜಿ. ಜನಾರ್ದನ ರೆಡ್ಡಿ ಜತೆಯಲ್ಲಿ ಆಗ­ಮಿ­ಸಿದ್ದರು. ನಾನು ಬಳ್ಳಾರಿಯಲ್ಲಿ ಜಿಲ್ಲಾ ಪಂಚಾ-­ಯ್ತಿ ಸಿಇಒ ಆದಾಗಿನಿಂದ ಪರಿಚಿತರಾಗಿದ್ದ ಈ ಇಬ್ಬರು ನನ್ನನ್ನು ತುಂಬಾ ವಿಶ್ವಾಸ ಹಾಗೂ ಗೌರವದಿಂದ ನಡೆಸಿಕೊಂಡರು.

ಅದು ಅವರಿ­ಬ್ಬರ ಮೊದಲ ವಿದೇಶ ಪ್ರವಾಸ. ಪ್ರವಾಸದಲ್ಲಿ ಅವರ ಖರ್ಚಿಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದರ ಅರಿವಿಲ್ಲದೆ ಯಾರಿಂದಲೋ ಬಹಳ ಪೌಂಡುಗಳನ್ನು ಪಡೆದುಕೊಂಡಿದ್ದರು. ಬೆಳಿಗ್ಗೆ ಮೇಳಕ್ಕೆ ಹೊರಡುವ ಮುನ್ನ ಅವರನ್ನು ಕರೆ­ಯಲು ಹೋದಾಗ ಇಬ್ಬರೂ ಮಂಚದ ಮೇಲೆ ಬೆಡ್‌ಶೀಟ್ ಹಾಕಿಕೊಂಡು ಪೌಂಡ್‌ಗಳ ಕಟ್ಟನ್ನು ಎಣಿಸಿ ರಬ್ಬರ್ ಬ್ಯಾಂಡ್ ಹಾಕುತ್ತಾ ಕುಳಿತಿದ್ದರು.

ಹೊಂದಿದ್ದ ಪೌಂಡ್‌ಗಳನ್ನು ಪೂರ್ತಿ ಖರ್ಚು ಮಾಡಲಾಗದೆ ವಾಪಸ್ ಬರುವಾಗ ಹಿಥ್ರೂ ವಿಮಾನ ನಿಲ್ದಾಣದಲ್ಲಿ ನನಗೆ ಬಹಳ ಕಸಿವಿಸಿ ಉಂಟು­ಮಾಡಿದರು. ಅಲ್ಲಿನ ಕಸ್ಟಮ್ಸ್ ಅಧಿಕಾ­ರಿಗಳ ಅನುಮತಿ ಕೇಳಿದ್ದಾಗ ‘even if queen victoria were to come here with more than five thousand pounds in cash she will be in trouble’ ಎಂದರು. ತಂಡದಲ್ಲಿದ್ದ ಉಳಿದ ಸದಸ್ಯರು ಅವರ ನೆರವಿಗೆ ಬಂದು ನನ್ನ ಮಾನ ಉಳಿಸಿದರು.

ದುಬೈನಲ್ಲಿ ನಡೆದ ಅರಬ್ ಪ್ರವಾಸೋದ್ಯಮ ಮೇಳಕ್ಕೆ ಬಂದಿದ್ದ ಅಂದಿನ ಪ್ರಧಾನ ಕಾರ್ಯ­ದರ್ಶಿ ಮತ್ತು ಪ್ರವಾಸೋದ್ಯಮ ಸಚಿವರು ಅಪ­ರೂಪಕ್ಕೊಮ್ಮೆ ನಮ್ಮ ಸ್ಟಾಲ್‌ಗೆ ಅತಿಥಿಗಳಂತೆ ಬಂದು ವಿಚಾರಿಸಿ ಮಾಯವಾಗುತ್ತಿದ್ದರು. ಒಟ್ಟಿ­ನಲ್ಲಿ ಸರ್ಕಾರದ ಲೆಕ್ಕದಲ್ಲಿ ಕಾರ್ಯನಿಮಿತ್ತ ವಿದೇ­ಶಗಳಿಗೆ ಹೋಗುವವರಿಂದ ರಾಜ್ಯಕ್ಕೆ ಏನು ಮತ್ತು ಎಷ್ಟು ಉಪಯೋಗವಾಗುತ್ತದೆ ಎನ್ನು­ವುದು ಅವರವರ ವೈಯಕ್ತಿಕ ನೈತಿಕತೆ ಮತ್ತು ಬದ್ಧತೆಗೆ ಬಿಟ್ಟ ವಿಷಯ.

ಪ್ರಪಂಚದೆಲ್ಲೆಡೆ ಪ್ರವಾಸೋದ್ಯಮ ಒಂದು ದೊಡ್ಡ ಉದ್ದಿಮೆ. ಕೋಟ್ಯಂತರ ಡಾಲರ್‌ಗಳ ಆದಾಯ ತರುವ ಕ್ಷೇತ್ರ. ಪ್ರಪಂಚದಾದ್ಯಂತ ೧೦೦ ಕೋಟಿಗೂ ಮೀರಿದ ಪ್ರವಾಸಿಗರು ೨೫ ಕೋಟಿಗೂ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣ­ವಾಗಿದ್ದಾರೆ. ವಿಶ್ವದಲ್ಲಿ ಶೇ ೮ರಿಂದ ೯ರಷ್ಟು ಜನ ಪ್ರವಾಸೋದ್ಯಮದಡಿ ಉದ್ಯೋಗದಲ್ಲಿದ್ದಾರೆ. ದುಬೈ, ಸಿಂಗಪುರದಂತಹ ಸಣ್ಣ ನಗರಗಳು ಭಾರ­ತಕ್ಕಿಂತ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿ­ಸು­ತ್ತವೆ. ನಮ್ಮ ದೇಶದಲ್ಲಿ ದೆಹಲಿ, ರಾಜಸ್ತಾನ, ಕೇರಳ, ಗುಜರಾತ್ ರಾಜ್ಯಗಳು ಪ್ರವಾಸೋದ್ಯ­ಮ­ವನ್ನು ಮುಂಚೂಣಿ ಕ್ಷೇತ್ರವನ್ನಾಗಿಸಲು ಸದಾ ಪ್ರಯತ್ನ ನಡೆಸುತ್ತಿವೆ.

ನಮ್ಮ ರಾಜ್ಯ ಮಾತ್ರ ಪ್ರವಾಸೋದ್ಯಮದ ಮಟ್ಟಿಗೆ ಆಲಸ್ಯ ಮನೋ­ಭಾವ ಹೊಂದಿದೆ. ಮುಖ್ಯಮಂತ್ರಿಗಳು ಪ್ರವಾ­ಸೋ­ದ್ಯಮದತ್ತ ಗಮನಹರಿಸಿ ಉಳಿದ ಇಲಾಖೆ­ಗಳೊಂದಿಗೆ ಸಮನ್ವಯತೆ ಸಾಧಿಸಿ ಈ ವರ್ಷ ಆಯ-ವ್ಯಯದಲ್ಲಿ ಒದಗಿಸಿರುವ ₨ 399 ಕೋಟಿ ಅನುದಾನ ಸದ್ಬಳಕೆ ಮಾಡುವಂತಹ ವಾತಾ­ವ­ರಣ ಕಲ್ಪಿಸಬೇಕು. ಇಲ್ಲದಿದ್ದರೆ ಎಲ್ಲ ಕಡೆಗೆ ಹೆಲಿ­ಕಾಪ್ಟರ್ ಹಾರಿಸುತ್ತೇವೆಂದು ಹೇಳಿ ವಾಸ್ತವಕ್ಕೆ ಹತ್ತಿರವಿಲ್ಲದ ವಿಷನ್ ಗ್ರೂಪ್ ಕನಸುಗಳು ನಿಜ ನೆಲದ ಯೋಜನೆಗಳಾಗಿ ಕಾಣುವುದಿಲ್ಲ. ಸಿದ್ದ­ರಾಮಯ್ಯನವರು ಅನ್ನ ಭಾಗ್ಯ, ಕ್ಷೀರಭಾಗ್ಯ ನೀಡಿ ಬಡವರ ಹಸಿವು ನೀಗಿಸಿ ಒಳ್ಳೆಯ ಕೆಲಸ ಮಾಡಿ­ದ್ದಾರೆ.

ಆದರೆ ರಾಜ್ಯದಲ್ಲಿ ಎಂಜಿನಿಯರ್ ಪದ­ವೀ­ಧರರಾಗಲು ‘ಭಾಗ್ಯ’­ವಿಲ್ಲದ ಲಕ್ಷಾಂತರ ಯುವ­ಕರು ಉದ್ಯೋಗಕ್ಕಾಗಿ ಹಾತೊರೆಯುತ್ತಿ­ದ್ದಾರೆ. ಅಂತಹ ದುಡಿಯುವ ಕೈಗಳಿಗೆ ಕೈತುಂಬ ಕೆಲಸ ಒದಗಿಸುವ, ಸ್ವಂತ ದುಡಿಮೆ ಮೂಲಕ ಸ್ವಾಭಿ­ಮಾನದಿಂದ ಬದುಕುವ, ನಾಡಿನ ಪರಂಪರೆ ಮತ್ತು ಭವ್ಯತೆ, ರಮ್ಯತೆಯನ್ನು ಲೋಕಕ್ಕೆ ಪರಿಚಯಿಸುವ ಅದ್ಭುತ ಸಾಧ್ಯತೆ ಇರುವುದು ನಮ್ಮ ಪ್ರವಾಸೋದ್ಯಮದಲ್ಲಿ.
ಮುಖ್ಯಮಂತ್ರಿಯವರು ವರ್ಷದಲ್ಲಿ ಒಂದು ದಿನ­ವನ್ನು ಪ್ರವಾಸೋದ್ಯಮ ಅಭ್ಯುದಯಕ್ಕೆ ಯೋಚಿ­ಸಲು ಮೀಸಲಿಟ್ಟರೆ ಅದರ ಸಾಧ್ಯತೆಗಳು ಖಂಡಿತ ಮನದಟ್ಟಾಗುತ್ತವೆ. ಅದು ಕಾರ್ಯ-­ಗತ­ವಾ­ದರೆ ‘Karnataka– one state
many worlds’ ಎಂಬ ಘೋಷವಾಕ್ಯ ಸಾರ್ಥಕ­­ವಾಗು­ತ್ತದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT