ADVERTISEMENT

ಕೆಂಗಲ್‌ ಮೋಡವೂ, ಮೋದಿ ಮೋಡಿಯೂ

ಐ.ಎಂ.ವಿಠಲಮೂರ್ತಿ
Published 25 ಮೇ 2014, 19:30 IST
Last Updated 25 ಮೇ 2014, 19:30 IST
ಕೆಂಗಲ್‌ ಮೋಡವೂ, ಮೋದಿ ಮೋಡಿಯೂ
ಕೆಂಗಲ್‌ ಮೋಡವೂ, ಮೋದಿ ಮೋಡಿಯೂ   

ಒಂದು ಕಾಲದಲ್ಲಿ ಬೆಂಗಳೂರಿನ ಸೆಂಟ್ರಲ್‌ ಕಾಲೇಜು ಇಡೀ ದೇಶದ ಪ್ರತಿಷ್ಠಿತ ವಿಜ್ಞಾನದ ಕಾಲೇಜು ಆಗಿತ್ತು. 1858ರಲ್ಲಿ ಮದ್ರಾಸ್‌ ವಿಶ್ವವಿದ್ಯಾಲಯಕ್ಕೆ ಸೇರಿದ್ದ ಕಾಲೇಜು, 1964ರ ವೇಳೆಗೆ ಬೆಂಗ­ಳೂರು ವಿಶ್ವವಿದ್ಯಾಲಯಕ್ಕೆ ಸೇರಿತು. ದೇಶದ ಪ್ರಸಿದ್ಧ ವಿಜ್ಞಾನಿಗಳು, ಶಿಕ್ಷಣ ತಜ್ಞರು ಈ ಕಾಲೇಜಿನ ವಿದ್ಯಾರ್ಥಿಗಳಾಗಿ, ಉಪನ್ಯಾಸಕ­ರಾಗಿ, ರೂವಾರಿಗಳಾಗಿ ಘನತೆ ಹೆಚ್ಚಿಸಿದರು; ತಾವೂ ಎತ್ತರಕ್ಕೇರಿದರು. ಸರ್‌ ಎಂ.­ವಿಶ್ವೇಶ್ವರಯ್ಯ ಅವರಂತಹ ಮೇಧಾವಿಯಿಂದ ಹಿಡಿದು ಸಿ.ಎನ್‌.ಆರ್‌. ರಾವ್‌ ಅವರಂತಹ ವಿಜ್ಞಾನಿಗಳವರೆಗೆ ಅಪ್ರತಿಮ ಪ್ರತಿಭೆಗಳನ್ನು ಹೊಂದಿದ್ದ ಸೆಂಟ್ರಲ್‌ ಕಾಲೇಜು ಒಂದು ಜ್ಞಾನ ದೇಗುಲ. ಅದರ ಸಾಧನೆ ಯಶೋಗಾಥೆ ಈಗ ಇತಿಹಾಸ.

ನಮ್ಮ ಪೀಳಿಗೆಯವರು ಈ ಕಾಲೇಜಿಗೆ ಸೇರುವ ವೇಳೆಗೆ ಇದೊಂದು ಪ್ರತಿಷ್ಠಿತರ ಕಾಲೇಜು ಎನಿಸಿತ್ತು. ಇಡೀ ಬೆಂಗಳೂರಿನಲ್ಲಿ ಬಹಳ ಶೋಕಿಯಾಗಿದ್ದ ಹುಡುಗ–ಹುಡುಗಿ­ಯರ ಈ ಕಾಲೇಜು, ಉಳಿದ ಕಾಲೇಜುಗಳ ಹುಡುಗರಲ್ಲಿ  ಹೊಟ್ಟೆಕಿಚ್ಚು ಹುಟ್ಟಿ­ಸಿತ್ತು. ಸಣ್ಣ–ಪುಟ್ಟ ಕಾರಣಗಳಿಗೆ ಆಗಾಗ  ಹೊಡೆ­ದಾಟಗಳು ನಡೆಯುತ್ತಿದ್ದವು (ಸಾಮಾನ್ಯ­ವಾಗಿ ಹುಡುಗಿಯರ ವಿಚಾರಕ್ಕಾಗಿ!).

ಪ್ರೊ. ಕೆ.ವೆಂಕಟಗಿರಿಗೌಡರು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಆಗಲೇ ಪ್ರಖ್ಯಾತ­ರಾಗಿದ್ದರು. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ತರಹ ಕಾಣುತ್ತಿದ್ದರು. ಶಿಸ್ತು, ಆಕರ್ಷಕ ವ್ಯಕ್ತಿತ್ವ, ಹರಿತವಾದ, ಅತಿ ತೀಕ್ಷ್ಣವಾದ ಮಾತು, ಮಹಾ ಮುಂಗೋಪ, ಅರ್ಥಶಾಸ್ತ್ರದ ಅಪಾರ ಜ್ಞಾನ, ಸದಾ ಧರಿಸುತ್ತಿದ್ದ ತ್ರೀ ಪೀಸ್‌ ಸೂಟ್‌... ಹೀಗೆ ಅವರ ಖ್ಯಾತಿಗೆ ಹತ್ತು–ಹಲವು ಕಾರಣಗಳಿದ್ದವು. ಕಾಲೇಜಿನ ಸಿಪಾಯಿಯಿಂದ ವಿಶ್ವವಿದ್ಯಾಲಯದ ಕುಲಪತಿವರೆಗೆ ಅವರನ್ನು ಕಂಡರೆ ಎಲ್ಲರಿಗೂ ಭಯ. ಯಾವಾಗ ಮುಂಗೋಪ­ದಿಂದ ಏನು ಹೇಳುತ್ತಾರೋ, ಬೈಯು­ತ್ತಾರೋ ಎಂಬ ಆತಂಕ. ಒಬ್ಬ ಐಎಎಸ್‌ ರಿಜಿಸ್ಟ್ರಾರ್‌ ಅವರಿಗೆ ‘I have produced many IAS like you, but unlike you all of them have good manners’ ಎಂದರು. ಹೀಗಿರುವಾಗ ನನ್ನಂತಹ ಬಡಪಾಯಿ ವಿದ್ಯಾರ್ಥಿಗಳ ಪಾಡೇನು? ಮೌಂಟ್‌ ಕಾರ್ಮೆಲ್‌ ಕಾಲೇಜಿನ ಹುಡುಗಿಯರಿಗೆ ‘you mount carmel monkeys, Are you in the class room or in a fashion show’ ಎಂದು ರೇಗಿದ್ದರು. 

ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಅವರಷ್ಟು ಚೆನ್ನಾಗಿ ಬೈಯುವ­ವರನ್ನು ನಾನು ಈವರೆಗೆ ಕಂಡಿಲ್ಲ. ಅದರಲ್ಲೂ ಯಾರದ್ದಾದರೂ ಶಿಫಾರಸಿನಿಂದ ಹೋದರೆ ಅವರ ಗತಿ ಮುಗಿಯಿತೆಂದೇ ತಿಳಿಯಬೇಕು. ಒಬ್ಬ ವಿದ್ಯಾರ್ಥಿ, ‘ನಾನು ಸಚಿವರ ಮಗ’ ಎಂದು ಪರಿಚಯಿಸಿಕೊಂಡ. ‘ನಿಮ್ಮಪ್ಪನ ಅಪ್ಪ ನಾನು’ ಎಂದು ಗೌಡರು ಗುಡುಗಿದರು.  ಎಲ್ಲರೂ ತಬ್ಬಿಬ್ಬಾದೆವು.

ಪ್ರೊಫೆಸರ್‌ ಅವರ ವೈಯಕ್ತಿಕ ಜೀವನದಲ್ಲಿ ಕೆಲವು ದುರಂತ ಘಟನೆಗಳು ನಡೆದದ್ದು ದುರ­ದೃಷ್ಟಕರ.  ಅವರ ಪ್ರೀತಿಯ ಮಗಳು ಬಲುಬೇಗ ಅಗಲಿದ್ದಳು. ನಮ್ಮ ಕಾಲೇಜಿನಲ್ಲೇ ಇದ್ದ ಅವರ ಮಗ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆಯೂ ನಡೆಯಿತು. ಮಗ ನಿಧನನಾದ ಮಾರನೆಯ ದಿನ ತರಗತಿಗೆ ಬಂದು, ‘He was a coward, he could not face the facts of life. Why should I care’ ಎಂದು ಹೇಳಿ, ‘ನಾವು ನಿನ್ನೆ ಎಲ್ಲಿಗೆ ಬಿಟ್ಟಿದ್ದೆವು’ ಎಂದು ಕೇಳಿ ಉಪನ್ಯಾಸ ಪ್ರಾರಂಭಿಸಿದ್ದರು. ಅವರು ಕ್ಲಾಸ್‌­ರೂಮ್‌ಗೆ ಬಂದ ತಕ್ಷಣ ಕೊಠಡಿ ಬಾಗಿಲು ಮುಚ್ಚಿ ಬೋಲ್ಟ್‌ ಹಾಕಬೇಕಿತ್ತು. ನಂತರ ಒಳಗೆ ಯಾರಿಗೂ ಪ್ರವೇಶವಿರುತ್ತಿರಲಿಲ್ಲ.

ಪಾಠ ಮುಗಿಸಿ ಹೊರಗೆ ಹೋಗುವವರೆಗೆ ಯಾರೂ ತುಟಿ ಪಿಟಕ್‌ ಎನ್ನುತ್ತಿರಲಿಲ್ಲ. ಒಂದು ದಿನ ಸೆಂಟ್ರಲ್‌ ಕಾಲೇಜು ತಂಡ ವಿಶ್ವವಿದ್ಯಾಲಯ ಫುಟ್‌­ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು. ಸಂಭ್ರಮಾ­ಚರಣೆಗೆ ಗೆಳೆಯ ಮಹದೇವ ನನ್ನನ್ನು ಪ್ರೊಫೆಸರ್‌ ಬಳಿ ರಜೆ ಕೇಳುವಂತೆ ಹೇಳುತ್ತಿದ್ದ. ಅಷ್ಟರಲ್ಲೇ ಹರಿದುಬಂತು ಪ್ರೊಫೆಸರ್‌ ಅವರ ಮಾತು. ‘ಏ ಮಹದೇವ, you may be a footballer, but I can kick you like a football’ ಎಂದರು. ಮಹದೇವ ತನ್ನನ್ನು ಒದ್ದೇ ಬಿಟ್ಟರೇನೋ ಎನ್ನುವಂತೆ ಬೆವರಿ ಉಸಿರಿಲ್ಲದೆ ಕುಳಿತ.

ಒಮ್ಮೆ ನಾನು ಕಾಲೇಜು ಚುನಾವಣೆಯಲ್ಲಿ ಸ್ಪರ್ಧಿಸಿ ಅವರ ಒಂದು ಕ್ಲಾಸ್‌ಗೆ ಚಕ್ಕರ್‌ ಹೊಡೆ­ದಿದ್ದೆ. ಅವರು ನನ್ನನ್ನು ಕುರಿತು ಬೈದ ಮಾತು ಇಡೀ ಕಾಲೇಜಿನಲ್ಲಿ ಪ್ರಸಿದ್ಧಿ ಪಡೆಯಿತು. ‘Where is that gowda from Chikkamagalur? He dresses like a filmstar and roams around like a hero in the campus’ ಎಂಬುದು ಅವರ ಆಶೀರ್ವಾದವಾಗಿತ್ತು. ಅವರಿಗೆ ಹೆದರದೆ ಇದ್ದ ಒಬ್ಬ ವ್ಯಕ್ತಿಯನ್ನೂ ನಾನು ಎಂದಿಗೂ ನೋಡ­ಲಿಲ್ಲ. ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಆಗಬೇಕು ಎಂಬುದು ಅವರ ಹೆಬ್ಬಯಕೆ­ಯಾಗಿತ್ತು. ಎಷ್ಟು ಕೋಪಿಷ್ಟರೋ ಅಷ್ಟೇ ಪ್ರೀತಿ ತೋರಿಸುತ್ತಿದ್ದರು. ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಡಾಕ್ಟರೇಟ್‌ ಪಡೆದು ಅರ್ಥ­ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದು, ಹಲವಾರು ಶ್ರೇಷ್ಠ ಗ್ರಂಥಗಳನ್ನು ರಚಿಸಿದ್ದರು. ಅವರೊಬ್ಬ ಶ್ರೇಷ್ಠ ವಿದ್ವಾಂಸರಾಗಿದ್ದರು, ಅಷ್ಟೇ ಶ್ರೇಷ್ಠ ಗುರುವಾಗಿದ್ದರು. ವಿಶ್ವವಿದ್ಯಾಲಯದ ರಾಜ­ಕೀಯ­ದಲ್ಲಿ ಸಿಕ್ಕಿಹಾಕಿಕೊಂಡು ವಿವಾದಾಸ್ಪದ ವ್ಯಕ್ತಿಯಾದರು ನನ್ನ ಪ್ರೀತಿಯ ಪ್ರೊಫೆಸರ್‌. ಸದಾಕಾಲ ನಾನು ಹೆದರುತ್ತಿದ್ದುದು ನನ್ನ ತಂದೆಗೆ. ಬಿಟ್ಟರೆ ಈ ಪ್ರೊಫೆಸರ್‌ಗೆ ಮಾತ್ರ.

ಪ್ರಾಮಾಣಿಕ ವ್ಯಕ್ತಿತ್ವದ ಪ್ರೊಫೆಸರ್‌ ರಾಜ­ಕೀಯ ಸೇರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಒಮ್ಮೆ ಕಾಂಗ್ರೆಸ್‌ನಿಂದ ಮತ್ತೊಮ್ಮೆ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾದರು. ಡಾ. ಮನಮೋಹನ್‌ ಸಿಂಗ್‌ ಅವರಿಗೆ ತುಂಬಾ ಆತ್ಮೀಯರಾಗಿದ್ದರು. ಪ್ರೊಫೆಸರ್‌ ಅವರಿಗೆ ರಾಜ್ಯ ಪ್ರಶಸ್ತಿ ಬಂದಾಗ ಅವರು ನಿರಾಕರಿಸಿದ್ದರು. ಅವರ ಮನೆಗೆ ಹೋಗಿ ಅವರನ್ನು ಒಪ್ಪಿಸಿ ಪ್ರಶಸ್ತಿ ಕೊಟ್ಟು ಬಂದೆ. ಅವರ ನಿವೃತ್ತಿ ನಂತರದ ದಿನ­ಗಳಲ್ಲಿ ಒಮ್ಮೊಮ್ಮೆ ನನ್ನ ಕಚೇರಿಗೆ ಬಂದು ಭೇಟಿ­ಯಾಗುತ್ತಿದ್ದರು. ‘ನಿನ್ನನ್ನು ಕಾಲೇಜಿನಲ್ಲಿ ಬೈದು ಶಿಸ್ತಿನಿಂದ ಬೆಳೆಸಿದ್ದಕ್ಕೆ ಹೀಗಿದ್ದೀಯಾ’ ಎಂದು ಹೆಮ್ಮೆಪಡುತ್ತಿದ್ದರು. ಇಂದಿಗೂ ಅದು ನಿಜವೆ­ನಿಸುತ್ತದೆ. ಕಾಲೇಜಿನ ಅಹಂಕಾರದ ಅಮಲಿನ ದಿನಗಳಲ್ಲಿ ನಿಜ ನೆಲಕ್ಕೆ ತಂದು ನಿಲ್ಲಿಸುವವರೇ ನಮ್ಮ ಹಿತೈಷಿಗಳು; ಪ್ರಾತಃಸ್ಮರಣೀಯರು. ಅದು ನನ್ನ ಪಾಲಿಗೆ ಪ್ರೊ.ಕೆವಿಜಿ.

ಅರ್ಥಶಾಸ್ತ್ರ ಸಂಘದ ಅಧ್ಯಕ್ಷನಾಗಿ ದೆಹಲಿ­ಯಲ್ಲಿ ನಡೆದ ಏಷ್ಯಾ–72 ಮೇಳಕ್ಕೆ ವಿದ್ಯಾರ್ಥಿ ತಂಡ ಕೊಂಡೊಯ್ಯುವ ಸಂದರ್ಭ ಒದಗಿತು. ದೆಹಲಿಯಲ್ಲಿ ಉಳಿದುಕೊಳ್ಳಲು ಅನುಕೂಲ ಮಾಡಿ­ಕೊಡುವಂತೆ ಕೇಳಲು ಕೆಂಗಲ್‌ ಹನುಮಂತಯ್ಯ ಅವರನ್ನು ಭೇಟಿಯಾದೆವು. ಬಳ್ಳಾರಿ ರಸ್ತೆಯಲ್ಲಿರುವ ಕೆಂಗಲ್‌ ನಿವಾಸ­ದಲ್ಲಿದ್ದ ಹನುಮಂತಯ್ಯನವರು ಬಹಳ ಪ್ರೀತಿ­ಯಿಂದ ಮಾತನಾಡಿಸಿ ದೇಶದ ಸ್ಥಿತಿ ಬಗ್ಗೆ ತಿಳಿಸಿ ರಾಜ್ಯದ ರಾಜಕೀಯದ ಬಗ್ಗೆ ಮಾತನಾಡಿ ‘ನಿಮ್ಮಂತಹ ಯುವಕರೆಲ್ಲ ರಾಜಕೀಯದಲ್ಲಿ ಆಸಕ್ತಿ ವಹಿಸಬೇಕು’ ಎಂದರು. ಎಷ್ಟು ಗಂಭೀರ­ವಾಗಿ ಹೇಳಿದರೆಂದರೆ ನಾವು ಓದುವುದನ್ನು ಬಿಟ್ಟು ರಾಜಕೀಯಕ್ಕೆ ಸೇರಬೇಕೇನೋ ಅನ್ನು­ವಂತಿತ್ತು. ನಮಗೋ ದೆಹಲಿಯಲ್ಲಿ ಉಳಿಯಲು ಸ್ಥಳಾವಕಾಶ ಬೇಕಿತ್ತು ಅಷ್ಟೇ. ನಮ್ಮ ದೇಶದ ಯುವಕರನ್ನು ನೋಡಿದರೆ ಆಕಾಶದಲ್ಲಿರುವ ಮಳೆ ತರುವ ಮೋಡಗಳನ್ನು ನೋಡಿದಂತಾ­ಗುತ್ತದೆ. ಆದರೆ ಒಮ್ಮೊಮ್ಮೆ ಆ ಕಾರ್ಮೋಡ­ಗಳು ಮಳೆ ಸುರಿಸದೆ ಬರೀ ಗೊಡ್ಡು ಮೋಡ­ಗಳಾಗಿ ತೇಲಿಹರಿದು ಹೋಗಿ ನಿರಾಸೆ ಉಂಟು ಮಾಡುತ್ತವೆಂದೂ, ನೀವುಗಳು ಹಾಗಾಗ­ಬಾರದೆಂದೂ ಹೇಳಿದರು. ಒಂದು ರೀತಿಯ ಕನಸುಗಾರನ ತರಹ ಮಾತನಾಡುತ್ತಿದ್ದರು.

ಅಂದು ಆಕಾಶದಲ್ಲಿದ್ದು ಮಳೆ ಸುರಿಸದಿದ್ದ ಕಾರ್ಮೋಡಗಳು (ಯುವಕರು) ಇಂದು ನರೇಂದ್ರ ಮೋದಿ ಅವರಿಗೆ ಭರಪೂರ ಮಳೆ ಸುರಿದು ಸಂಭ್ರಮ ತಂದಿವೆ. ಇಡೀ ದೇಶದ ಯುವ ಜನಾಂಗ ಮೋದಿ ಅವರ ಮೋಡಿಗೆ ಮರುಳಾಗಿದೆ. ನಾಲ್ಕು ದಶಕಗಳ ನಂತರ ಕೆಂಗಲ್‌ ಅವರ ನಿರೀಕ್ಷೆ ನಿಜವಾಗಿದೆ. ಪ್ರಜಾ­ಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿ ಶಿಸ್ತು, ಶ್ರದ್ಧೆ ಮತ್ತು ಬದ್ಧತೆಯಿಂದ ಕೆಲಸ ಮಾಡಿದರೆ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಹಲವಾರು ಉದಾ­ಹರಣೆಗಳಿವೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ­ಯಾಗಿದ್ದ ಚಂದ್ರಬಾಬು ನಾಯ್ಡು ಅವರನ್ನು ಆ ರಾಜ್ಯದ ಸಿಇಒ ಎಂದೇ ಬಿಂಬಿಸ­ಲಾಗಿತ್ತು. ಆಗ ವಾರ್ತಾ ಇಲಾಖೆ ನಿರ್ದೇಶಕ­ನಾಗಿದ್ದ ನಾನು ಆಂಧ್ರ ಮಾದರಿ ಕಾರ್ಯನಿರ್ವ­ಹಣೆ ತಿಳಿಯಲು ಹೋದೆ. ಬೆಳಿಗ್ಗೆ 6ಕ್ಕೆ ಚಂದ್ರ­ಬಾಬು ನಾಯ್ಡು ಕಚೇರಿಗೆ ಬಂದರು. ಮೊದಲು ಗುಪ್ತಚರ ಇಲಾಖೆ ಅಧಿಕಾರಿಗಳೊಡನೆ ಸಭೆ ಮುಗಿಸಿ ಬಂದು ಕುಳಿತರು. ನನ್ನನ್ನು ಅವರಿಗೆ ಪರಿಚಯಿಸಲಾಯ್ತು. ಮುಂದಿನ ಒಂದೂವರೆ ಎರಡು ಗಂಟೆ ಅಲ್ಲಿ ನಡೆದಿದ್ದು ನನಗೆ ಒಂದು ಕನಸಿನ ರೀತಿ ಎನಿಸಿತ್ತು. ಎಲ್ಲ ಪತ್ರಿಕೆಗಳಲ್ಲಿ ಬಂದ ಸುದ್ದಿಗಳು, ಪ್ರತಿ ಜಿಲ್ಲೆಯಲ್ಲಿ ನಡೆದಿರುವ ಘಟನೆ­ಗಳು, ಕೋಮು ಗಲಭೆ, ಅನಾಹುತಗಳು, ಜನರ ದೂರುಗಳು... ಹೀಗೆ ಹತ್ತು ಹಲವಾರು ವಿಷಯ­ಗಳ ಬಗ್ಗೆ ಮಾಹಿತಿ ಪಡೆದು ತಕ್ಷಣ ನೇರವಾಗಿ ಸಂಬಂಧಿಸಿದ ಜಿಲ್ಲಾಧಿಕಾರಿ, ಪೊಲೀಸ್‌ ಅಧಿ­ಕಾರಿ­ಗಳ ಜತೆ ಮಾತನಾಡಿ ವಿವರ ಪಡೆಯು­ತ್ತಿದ್ದರು. ನಿರ್ದೇಶನ ನೀಡುತ್ತಿದ್ದರು.

ಕೆಲವೊಮ್ಮೆ ಜಿಲ್ಲೆಯ ಅಧಿಕಾರಿಗಳಿಗಿಂತ ಮುಖ್ಯಮಂತ್ರಿ ಬಳಿಯೇ ಹೆಚ್ಚಿನ ಮಾಹಿತಿ ಇರುತ್ತಿತ್ತು.  ಒಂದು ವರ್ಷದಲ್ಲಿ ನಡೆಯಬೇಕಿದ್ದ ಸಂಪುಟ ಸಭೆಗಳು, ಪ್ರಮುಖ ಪ್ರವಾಸಗಳು, ಜಿಲ್ಲೆಯ ಭೇಟಿಗಳು, ಇನ್ನಿತರ ಪ್ರಮುಖ ಸಭೆಗಳ ಕ್ಯಾಲೆಂಡರ್‌ ವರ್ಷದ ಪ್ರಾರಂಭದಲ್ಲೇ ನಿಗದಿಗೊಂಡು, ಮುದ್ರಿತವಾಗಿ ಎಲ್ಲರಿಗೂ ಲಭ್ಯವಿರುತ್ತಿದ್ದವು. ವಾರದಲ್ಲಿ ಒಂದುದಿನ ಸಂಜೆ ಎರಡು ಗಂಟೆ ಕಾಲ ಮುಖ್ಯಮಂತ್ರಿ ಸಾರ್ವಜನಿಕರ ಅಹವಾಲು ಕೇಳಲು ರೇಡಿಯೊ ಕಾರ್ಯಕ್ರಮದಲ್ಲಿ ಲಭ್ಯವಿರು­ತ್ತಿದ್ದರು. ಹೈದರಾಬಾದ್‌ನಿಂದ ಮರಳಿ ಬಂದ ನಾನು ಬಹಳ ಹುಮ್ಮಸ್ಸಿನಿಂದ ಸಚಿವ ಪ್ರಕಾಶ್‌ ಅವರೊಡನೆ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರನ್ನು ಕಂಡೆ. ಎಲ್ಲವನ್ನೂ ಬಹಳ ಆಸಕ್ತಿಯಿಂದ ಕೇಳಿದರು. ಅಲ್ಲಿಂದ ತಂದಿದ್ದ ಸಂಪುಟ ಸಭೆ ಮತ್ತಿತರ ಪ್ರಮುಖ ಸಭೆಗಳ ಮುದ್ರಿತ ಕ್ಯಾಲೆಂಡರ್‌ ಅವರ ಕೈಗಿತ್ತೆ. 5–6 ನಿಮಿಷ ಎಲ್ಲವನ್ನೂ ಪರಿಶೀಲಿಸಿ, ‘ನೋಡು ವಿಠಲ್‌, ನಾಯ್ಡು ಹುಡುಗ. ಬೆಳಿಗ್ಗೆ ಎದ್ದು ಇಂಥದ್ದೆಲ್ಲ ಮಾಡ್ತಾನೆ. ನನ್ನ ಕೈಯಲ್ಲಂತೂ ಇದ್ಯಾವುದೂ ಆಗೋದಿಲ್ಲ. ಬೇಕಾದರೆ ಪ್ರಕಾಶ್‌, ನೀನು ಸೇರಿಕೊಂಡು ಇಂಥವೆಲ್ಲಾ ಏನಾದರೂ ಮಾಡಿ’ ಎಂದು ಪ್ರಕಾಶ್‌ ಅವರ ಮುಖ ನೋಡಿದರು. ನಾವಿಬ್ಬರೂ ಎದ್ದೆವು. ಪಟೇಲರು ನನ್ನ ಬೆನ್ನುತಟ್ಟಿ ‘very good academic exercise. ಮುಂದೆ ಯಾರಿಗಾದರೂ ಉಪಯೋಗವಾಗಬಹುದು’ ಎಂದರು.

ಮೋದಿ ಅವರು ನಾಯ್ಡು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಈ ದೇಶದ ಪ್ರಧಾನಿ­ಯಾಗುವ ಕನಸು ಕಂಡವರು. ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಹುದ್ದೆಯಿಂದ ಇಳಿದ ತಕ್ಷಣ ಆ ಹುದ್ದೆಗೆ ಏರಲು ಅಗತ್ಯವಿದ್ದ ಎಲ್ಲ ಪೂರ್ವಸಿದ್ಧತೆ ಮಾಡಿಕೊಂಡು ಪಕ್ಷದ ನಿಯಂತ್ರಣ ತೆಗೆದುಕೊಳ್ಳಲು ಮೋದಿ ಅವರಿಗೆ ಹತ್ತು ವರ್ಷ ಹಿಡಿಯಿತು. ‘ಗುಜರಾತ್‌ ಮಾದರಿ ಅಭಿವೃದ್ಧಿ’ ಎಂಬ ಘೋಷವಾಕ್ಯದೊಡನೆ ದೇಶದ ಉದ್ದಗಲಕ್ಕೂ ತಮ್ಮೆಲ್ಲ ಕನಸುಗಳನ್ನು ಬಿತ್ತಿದರು. ಅದಕ್ಕೆ ಜನಮನ್ನಣೆ ಪಡೆದು ಈಗ ಪ್ರಧಾನಿ ಹುದ್ದೆಗೆ ಏರುತ್ತಿದ್ದಾರೆ.

ಒಂದು ಒಕ್ಕೂಟದ ವ್ಯವಸ್ಥೆಯಲ್ಲಿ ಮೋದಿ ಅವರು ತಮ್ಮ ಎಲ್ಲ ಕನಸು ನನಸು ಮಾಡಲು ಅವಲಂಬಿಸಬೇಕಾಗಿರುವುದು ರಾಜ್ಯ ಸರ್ಕಾರ­ಗಳನ್ನು, ಇನ್ನಿತರ ಸ್ಥಳೀಯ ಸಂಸ್ಥೆಗಳನ್ನು, ಜಡ್ಡು­ಗಟ್ಟಿ, ತುಕ್ಕು ಹಿಡಿದಿರುವ ಅಧಿಕಾರಶಾಹಿಯನ್ನು. ಹಲವಾರು ರಾಜ್ಯಗಳ ಆಡಳಿತ ವ್ಯವಸ್ಥೆ ಹದ­ಗೆಟ್ಟು ಎಷ್ಟು ಅಧೋಗತಿ ತಲುಪಿದೆ ಎಂಬುದು ಸನಿಹದಿಂದ ನೋಡಿದವರಿಗಷ್ಟೇ ಗೊತ್ತು. ಅದಕ್ಷ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರ ಖರ್ಚು ಮಾಡುವ ಪ್ರತಿ ರೂಪಾಯಿಯಲ್ಲಿ ಕೇವಲ 15 ಪೈಸೆ ಅನುಷ್ಠಾನ ಹಂತಕ್ಕೆ ತಲುಪುತ್ತದೆ ಎಂದು ರಾಜೀವ್‌ ಗಾಂಧಿ ಹಿಂದೆ ಹೇಳಿದ್ದರು. ಇಂದು ಸಹ ಆ ಸ್ಥಿತಿಯಲ್ಲಿ ಬಹಳಷ್ಟು ಬದಲಾವಣೆ ಆಗಿಲ್ಲ. ಮುಂದೆ ಮೋದಿ ಯುಗದಲ್ಲಿ ಅದು ಎಷ್ಟಕ್ಕೆ ಏರುತ್ತದೆ ಅಥವಾ ಇಳಿಯುತ್ತದೆ ಎಂಬುದು ಭವಿಷ್ಯಕ್ಕೆ ಬಿಟ್ಟ ವಿಷಯ.

ಮೊನ್ನೆ ಸಂಸತ್‌ ಭವನದಲ್ಲಿ ಮೋದಿಯವರ ಭಾವಪೂರ್ಣ ಭಾಷಣ ಕೇಳಿಬಂದ ಕೆಲವು ಸದಸ್ಯರು, ಊರಿನಲ್ಲಿ ಉತ್ತಮ ‘ಪ್ರವಚನ’ ಕೇಳಿ­ಬಂದವರಂತೆ ಯಥಾಪ್ರಕಾರ ತಮ್ಮ ‘ದೈನಂದಿನ ಕೈಂಕರ್ಯ’ದಲ್ಲಿ ತೊಡಗಿದರೆ ಮೋದಿಯವರ ‘ಮಾದರಿ ಅಭಿವೃದ್ಧಿ ಕನಸು’ ನನಸಾದೀತೆ? ಸದ್ಯಕ್ಕಂತೂ ಅವರ ಭಾವುಕ ಮಾತು, ಆದರ್ಶದ ನುಡಿ ಒಂದು ಹಿತಾನುಭವ ಉಂಟುಮಾಡಿವೆ. ಕತ್ತಲ ಕೊಳವೆಯ ತುತ್ತ ತುದಿಯಲ್ಲಿ ಬೆಳಕಿನ ಹಣತೆ ಇದೆ ಎಂದು ನಂಬಿಸಿದ್ದಾರೆ. ಆ ಒಂದು ಆಶಾಕಿರಣವೇ ಭರವಸೆಯ ಬದುಕಿಗೆ ನಾಂದಿಯಾದೀತೆಂದು ನಂಬೋಣ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.