1985ರಲ್ಲಿ ನಡೆದ ಬೀದರ್ ಸಾಹಿತ್ಯ ಸಮ್ಮೇಳನ ನನಗೊಂದು ವಿಶೇಷ ಅನುಭವ ನೀಡಿತು. ಡಾ.ಹಾ.ಮಾ. ನಾಯಕರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ‘ಕನ್ನಡ ಕಟ್ಟುವ’ ಬಗೆಗಿನ ಅವರ ಅಧ್ಯಕ್ಷೀಯ ಮಾತುಗಳು ಇಂದಿಗೂ ಮನದಲ್ಲಿ ರಿಂಗಣಿಸುತ್ತಿವೆ. ಕೈವಾರ ಸಾಹಿತ್ಯ ಸಮ್ಮೇಳನದ ಅತಿಥ್ಯ ನಿರ್ವಹಿಸಿದ್ದ ಉದ್ಯಮಿ ಎಂ.ಎಸ್.ರಾಮಯ್ಯನವರು ಮತ್ತು ನಾನು ಬೀದರ್ ಕೆಎಸ್‌ಟಿಡಿಸಿಯ ‘ಹೋಟೆಲ್ ಬರೀದ್ ಶಾಹಿ’ನಲ್ಲಿ ಒಂದೇ ಕೊಠಡಿಯಲ್ಲಿ ತಂಗಿದ್ದೆವು.
ಪಕ್ಕದ ಕೊಠಡಿಯಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಇನ್ನೊಂದು ಬದಿಯ ಕೊಠಡಿಯಲ್ಲಿ ಹಾಮಾನಾ ಉಳಿದಿದ್ದರು. ಭಾರೀ ಮಳೆಯಿಂದ ಸಮ್ಮೇಳನದ ವ್ಯವಸ್ಥೆ ಸ್ವಲ್ಪ ಏರುಪೇರಾಯಿತು. ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹೆಗಡೆ ಅವರು ಸಭೆಯಿಂದ ನಿರ್ಗಮಿಸುವ ವೇಳೆಗೆ ಗೊರೂರರು ಅವರಿಗೊಂದು ಪತ್ರ ಕೊಟ್ಟರು. ಅವರು ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಹೋದರು.
ಕೆಲವು ದಿನಗಳ ನಂತರ ಮುಖ್ಯಮಂತ್ರಿಗಳ ಕಚೇರಿಯಿಂದ ನನಗೊಂದು ಪತ್ರದ ಪ್ರತಿ ಬಂದಿತ್ತು. ಅದು ಗೊರೂರು ಅವರು ಬರೆದಿದ್ದ ಕೆಎಸ್‌ಟಿಡಿಸಿ ಹೋಟೆಲ್‌ನಲ್ಲಿದ್ದ ಸೊಳ್ಳೆ ತಿಗಣೆಗಳ ಬಗೆಗಿನ ಒಂದು ವಿಡಂಬನಾತ್ಮಕ ಪ್ರಬಂಧ! ಸರ್ಕಾರಿ ಸ್ವಾಮ್ಯದ ಒಂದು ಹೋಟೆಲ್‌ನಲ್ಲಿದ್ದ ಸೊಳ್ಳೆ–ತಿಗಣೆಗಳ ಜೊತೆಗೆ ಭೀಮಕಾಯದ ಹಲ್ಲಿಗಳು, ಗುಂಪು–ಗುಂಪಾಗಿರುತ್ತಿದ್ದ ಜಿರಲೆಗಳು ಹಾಗೂ ಇಡೀ ರಾತ್ರಿ ಚಪ್ಪಾಳೆ ತಟ್ಟುತ್ತ ಸೊಳ್ಳೆಗಳನ್ನು ಹೊಡೆಯುತ್ತಿದ್ದ ಪರಿ... ಹೀಗೆ ಗೊರೂರು ಅವರ ಸೊಳ್ಳೆ–ತಿಗಣೆಗಳ ವರ್ಣನೆ ಎಷ್ಟು ರಂಜನೀಯವಾಗಿತ್ತೆಂದರೆ ನಾವು ಜಾಹೀರಾತಿಗೆ ಬಳಸಿಕೊಳ್ಳಲು ಯೋಗ್ಯವಿದ್ದಂತಿತ್ತು.
2002ರಲ್ಲಿ ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಮತ್ತು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕನಾಗಿ ನೇಮಕಗೊಂಡಾಗ ಕೆಎಸ್‌ಟಿಡಿಸಿ ಹೋಟೆಲ್‌ಗಳ ಸ್ಥಿತಿಗತಿ ನೋಡಿ ದಿಗ್ಭ್ರಾಂತನಾದೆ. ವಿವಿಧ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ಹಲವಾರು ಅವ್ಯವಹಾರಗಳಲ್ಲಿ ತೊಡಗಿ ಅಮಾನತುಗೊಂಡು ವಿಚಾರಣೆ ಎದುರಿಸುತ್ತಿದ್ದರು. ಅವರಲ್ಲಿ ಹಲವರು ಬೇನಾಮಿಯಾಗಿ ತಮ್ಮದೇ ಸ್ವಂತ ಸಾರಿಗೆ, ಹೋಟೆಲ್ ಉದ್ಯಮ ಪ್ರಾರಂಭಿಸಿಕೊಂಡು ಅಧಿಕಾರಸ್ಥರ ಸ್ನೇಹದೊಂದಿಗೆ ಸಂತೋಷ–ಸಮೃದ್ಧಿಯಿಂದಿದ್ದರು.
ನಮ್ಮ ಹೋಟೆಲ್ಗಳು ಇದ್ದ ಸ್ಥಿತಿ ನೋಡಿ ತಲೆಕೆಟ್ಟುಹೋಗಿತ್ತು. ಮಲ್ಪೆಯ ಬೀಚ್ನಲ್ಲಿ 25 ವರ್ಷಗಳಿಂದ ಅಪೂರ್ಣವಾಗಿ ಉಳಿದಿದ್ದ ಕಟ್ಟಡ (ಈಗಿನ ಪ್ಯಾರಡೈಸ್ ಐಲ್), ಮಂಗಳೂರಿನಲ್ಲಿ ಕಾಡು ಬೆಳೆದು ಮುಚ್ಚಿಹೋಗಿದ್ದ ವೈಸ್‌ರಾಯ್, ಮೈಸೂರಿನಲ್ಲಿ ಬಂದಾಗಿದ್ದ ಮೆಟ್ರೊಪೋಲ್, ಕೆಆರ್‌ಎಸ್‌ನಲ್ಲಿ ಬರಡಾಗಿದ್ದ ಬೃಂದಾವನ ಹೋಟೆಲ್, ಧಾರವಾಡದ ಹಂದಿಮರಿಗಳ ಗೂಡಾಗಿದ್ದ ಕಟ್ಟಡ (ಈಗಿನ ಹೋಟೆಲ್ ಮಂದಾರ), ಮದ್ದೂರಿನಲ್ಲಿ ಹಾಳು ಬಿದ್ದಿದ್ದ ಮಯೂರ ಹೋಟೆಲ್, ಶ್ರೀರಂಗಪಟ್ಟಣದಲ್ಲಿ ಜೂಜು ಅಡ್ಡೆಯಾಗಿದ್ದ ಮಯೂರ ರಿವರ್‌ವ್ಯೂ ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಹೋಟೆಲ್ಗಳು ಆಯಕಟ್ಟಿನ ಸ್ಥಳದಲ್ಲಿದ್ದರೂ ನಿರ್ವಹಣೆ ಕೊರತೆಯಿಂದ ಪ್ರವಾಸಿಗರ ಟೀಕೆಗೆ ಒಳಗಾಗಿದ್ದವು, ಉತ್ತಮ ಸೇವೆ ಒದಗಿಸುವಲ್ಲಿ ವಿಫಲವಾಗಿದ್ದವು.
ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಇವುಗಳ ಜೀರ್ಣೋದ್ಧಾರಕ್ಕೆ ಒಂದು ಯೋಜನೆ ಕೊಟ್ಟೆ. ಐಡಿಇಸಿ (ಇನ್‌ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಾರ್ಪೊರೇಷನ್) ಸಂಸ್ಥೆಯೊಂದಿಗೆ ಸಮಾಲೋಚಿಸಿ ಅವರ ಸಲಹೆ ಮೇರೆಗೆ ಖಾಸಗಿಯವರಿಗೆ ನಿಗದಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ವಹಿಸಿಕೊಡಲಾಯ್ತು.
ಹತ್ತಾರು ವರ್ಷಗಳ ಕಾಲ ದುಃಸ್ಥಿತಿಯಲ್ಲಿದ್ದು ಸರಿಯಾಗಿ ಸೇವೆ ಒದಗಿಸದೆ ನಷ್ಟದಲ್ಲಿದ್ದ ಘಟಕಗಳು ಈಗ ಉತ್ತಮ ಸೇವೆ ಒದಗಿಸುವುದರ ಜೊತೆಗೆ ಸಂಸ್ಥೆಗೆ ಅಧಿಕ ಲಾಭ ತರುತ್ತಿವೆ. ಈಗಲೂ ಹಲವು ಘಟಕಗಳನ್ನು ಕೆಎಸ್‌ಟಿಡಿಸಿ ನಿರ್ವಹಿಸುತ್ತಿದೆ. ಆದರೆ ಅವುಗಳು ಈಗ ಹಿಂದಿನಷ್ಟು ದುಃಸ್ಥಿತಿಯಲ್ಲಿಲ್ಲ. ವೃತ್ತಿಪರತೆ ಇಲ್ಲದೆ ಸರ್ಕಾರ ಒಂದು ಚಹಾ ಅಂಗಡಿಯನ್ನು ಸಹ ನಡೆಸಬಾರದು ಎಂಬುದು ನನ್ನ ಅಭಿಪ್ರಾಯ.
ಕುಡಿಯಲು ನೀರು ಕೇಳಿದರೆ ತನ್ನ ಐದೂ ಕೊಳಕು ಬೆರಳುಗಳನ್ನು ನೀರಿನ ಲೋಟದೊಳಗೆ ಸಂಪೂರ್ಣವಾಗಿ ಅದ್ದಿ ನಿಮ್ಮ ಮುಂದೆ ಕುಡಿಯಲು ಇಟ್ಟು, ‘ತಿಂಡಿಯೇನು ಬೇಕು ಸಾರ್?’ ಎಂದು ಕೇಳಿದರೆ ನಿಮಗೆ ಹೇಗಾಗಬೇಡ? ಇವತ್ತು ಕರ್ನಾಟಕದಲ್ಲಿರುವ ಬಹುಪಾಲು ಖಾಸಗಿ ಹೋಟೆಲ್‌ಗಳ ಹಣೆಬರಹ ಇದು. ರಸ್ತೆ ಬದಿಯಲ್ಲಿ ಇರುವವರು, ತಿಂದು ಬಿಲ್ಲು ಕೊಡದವರೆಲ್ಲ ಸಪ್ಲೈಯರ್‌ಗಳು ಮತ್ತು ಅಡುಗೆಯವರಾಗಿ ಕೆಲಸ ಮಾಡಬಹುದೆಂಬ ನಂಬಿಕೆ ಹೋಟೆಲ್ ಮಾಲೀಕರದು!
ಕರ್ನಾಟಕದಲ್ಲಿ ‘ಪರಿಸರ ಪ್ರವಾಸೋದ್ಯಮ’ ಮತ್ತು ‘ಸಾಹಸ ಪ್ರವಾಸೋದ್ಯಮ’ ಅಪಾರ ಸಾಧ್ಯತೆಗಳನ್ನು ಹೊಂದಿದೆ.
ವರ್ಷದಲ್ಲಿ ಬಹುಕಾಲ ಉತ್ತಮ ಹವಾಮಾನ ಹೊಂದಿರುವ ರಾಜ್ಯ ಕರ್ನಾಟಕ. ಬೆಂಗಳೂರು ಸಹ ಒಂದು ಹವಾ ನಿಯಂತ್ರಿತ ನಗರ ಎಂದು ಹೇಳಬಹುದು. ಪಶ್ಚಿಮಘಟ್ಟದ ಅಭಯಾರಣ್ಯಗಳು, ವನ್ಯಧಾಮಗಳು, ಪರಿಸರ ಚಾರಣದ ಹಾದಿಗಳು ಅಪಾರ ಮತ್ತು ವೈವಿಧ್ಯಮಯ. ಇವುಗಳ ಅನುಭವ ಒದಗಿಸಲು 1980ರಲ್ಲಿ ಪ್ರಾರಂಭವಾಗಿದ್ದೇ ‘ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್’ (ಜೆಎಲ್‌ಆರ್). ಅಂದಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ದೂರದರ್ಶಿತ್ವದಿಂದ ‘ಟೈಗರ್ ಟಾಪ್ಸ್’ ಎಂಬ ಖಾಸಗಿ ಕಂಪೆನಿಯ ಸಹಭಾಗಿತ್ವದಲ್ಲಿ ಪ್ರಾರಂಭವಾದ ಒಂದು ಅಪರೂಪದ ಪ್ರಯೋಗ.
ಕಬಿನಿ ರಿವರ್ ಲಾಡ್ಜ್‌ನಿಂದ ಆರಂಭವಾದ ಜೆಎಲ್‌ಆರ್ ಸಂಸ್ಥೆ ಈಗ ಸುಮಾರು 16 ಘಟಕಗಳನ್ನು ಹೊಂದಿದೆ.
ಪರಿಸರ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮಕ್ಕೆ ಇಡೀ ಪ್ರಪಂಚದಲ್ಲಿ ದೊಡ್ಡ ಹೆಸರು ಮಾಡಿದೆ. ಪ್ರಾರಂಭದ ದಿನಗಳಲ್ಲಿ ಟೈಗರ್ ಟಾಪ್ಸ್ ಸಂಸ್ಥೆಯೊಂದಿಗೆ ಜೆಎಲ್‌ಆರ್ ಸಂಸ್ಥೆಗೆ ಬಂದ ಕರ್ನಲ್ ಜಾನ್ ಫೆಲಿಕ್ಸ್ ವೇಕ್ಫೀಲ್ಡ್ ಒಂದು ಬ್ರ್ಯಾಂಡ್ ಐಡೆಂಟಿಟಿ ತಂದುಕೊಟ್ಟರು. ಪರಿಸರ ಪ್ರವಾಸೋದ್ಯಮದ ಬಗೆಗೆ ಅಷ್ಟು ಆಳವಾದ ಅನುಭವ ಮತ್ತು ಪ್ರಶ್ನಾತೀತ ಬದ್ಧತೆಯನ್ನು ಹೊಂದಿದ್ದ ಮತ್ತೊಬ್ಬ ವ್ಯಕ್ತಿಯನ್ನು ನಾನು ನೋಡಿಲ್ಲ. ಕಬಿನಿ ರಿವರ್ ಲಾಡ್ಜ್‌ನ ಒಂದು ಭಾಗವೇ ಆಗಿ ಸಂಸ್ಥೆಗೆ ತಮ್ಮ ಸರ್ವಸ್ವವನ್ನು ಧಾರೆ ಎರೆದರು.
ನಾರಹೊಳೆ ಅರಣ್ಯಧಾಮದ ಆಸುಪಾಸಿನಲ್ಲಿ ವನ್ಯಜೀವಿ ಸಂರಕ್ಷಣೆಗೆ ಅವರ ಕೊಡುಗೆ ಅಸಾಧಾರಣವಾದದ್ದು. ಪ್ರೀತಿಯಿಂದ ಎಲ್ಲರೂ ಅವರನ್ನು ಪಪ್ಪಾ ಎಂದೇ ಕರೆಯುತ್ತಿದ್ದರು. ಎಂಬತ್ತರ ಇಳಿವಯಸ್ಸಿನಲ್ಲಿ ಸಹ ಅವರೇ ಜೀಪ್‌ನಲ್ಲಿ ಕಾಡು–ಮೇಡು ಸುತ್ತಿಸಿ ‘ಹುಲಿರಾಯ’ನ ದರ್ಶನ ಮಾಡಿಸುತ್ತಿದ್ದರು. ಆನೆಗಳ ಹಿಂಡು ತೋರಿಸುತ್ತಿದ್ದರು. ಅವರೊಡನೆ ಕಳೆದ ದಿನಗಳು, ಪಡೆದ ಅನುಭವ ನನಗೆ ಪರಿಸರ ಪ್ರವಾಸೋದ್ಯಮದ ಬಗೆಗೆ ಒಂದು ಹೊಸ ಒಳನೋಟ ಒದಗಿಸಿತು.
ಅವರ ದಿನಚರಿ ಒಂದು ವಿಸ್ಮಯ. ಕಬಿನಿ ವನ್ಯಧಾಮಕ್ಕೆ ಅಂತರರಾಷ್ಟ್ರೀಯ ಮನ್ನಣೆ ದೊರೆಯಲು ಸಾಧ್ಯವಾಗಿದ್ದು ‘ಪಪ್ಪಾ’ನ ಶ್ರದ್ಧೆ ಮತ್ತು ಪರಿಶ್ರಮದಿಂದ. ಪಪ್ಪಾ ಅವರನ್ನು ಜೆಎಲ್‌ಆರ್ ಸಂಸ್ಥೆಗೆ ರಾಯಭಾರಿ ಮತ್ತು ಗೌರವ ಸಲಹೆಗಾರರನ್ನಾಗಿ ನೇಮಿಸಲಾಯ್ತು. ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಪ್ರಾರಂಭದ ದಿನಗಳಲ್ಲಿ ಜೆಎಲ್‌ಆರ್ ಎಂ.ಡಿ. ಆಗಿದ್ದ ಆರ್.ಎಂ. ರೇ ರಾಜ್ಯದ ವಿವಿಧ ಸ್ಥಳಗಳಲ್ಲಿ ಘಟಕಗಳನ್ನು ತೆರೆಯಲು ಮತ್ತು ಪ್ರಸಿದ್ಧಿಗೊಳಿಸಲು ನಿಷ್ಠೆಯಿಂದ ದುಡಿದ ಹಿರಿಯ ಐಎಫ್‌ಎಸ್ ಅಧಿಕಾರಿ. ಜೆಎಲ್‌ಆರ್‌ಗೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ದುಡಿದ ನಂತರ ಅದರ ಎಂ.ಡಿ. ಆಗಿ ಒಟ್ಟು ಏಳು ವರ್ಷಗಳ ಕಾಲ ಸತತ ಸೇವೆ ಸಲ್ಲಿಸಿ ಜೆಎಲ್‌ಆರ್‌ನ ಇಂದಿನ ಬೆಳವಣಿಗೆಗೆ ಕಾರಣವಾದವರು ಮತ್ತೊಬ್ಬ ಹಿರಿಯ ಐಎಫ್‌ಎಸ್ ಅಧಿಕಾರಿ ವಿನಯ್ ಲೂತ್ರಾ.
ಕರ್ನಾಟಕ ಪ್ರವಾಸೋದ್ಯಮಕ್ಕೆ ಒಂದು ಬ್ರ್ಯಾಂಡಿಂಗ್ ಕೊರತೆಯಿತ್ತು. ಕೇರಳವನ್ನು ದೇವರ ಸ್ವಂತನಾಡು ಎಂದು ಪ್ರಖ್ಯಾತಿಗೊಳಿಸಿದ ಸ್ಟಾರ್ಕ್ ಕಮ್ಯುನಿಕೇಷನ್ಸ್ ಸಂಸ್ಥೆ, ಕರ್ನಾಟಕ ಪ್ರವಾಸೋದ್ಯಮವನ್ನು ವಿಶ್ವಮಟ್ಟದಲ್ಲಿ ಪರಿಚಯಿಸಲು ಪ್ರವಾಸಿ ಮೇಳಗಳಲ್ಲಿ ತಮ್ಮ ಸೃಜನಶೀಲ ಕೆಲಸಗಳಿಂದ ಯಶಸ್ವಿಯಾಯಿತು.
ಪ್ರವಾಸೋದ್ಯಮದ ಜಂಟಿ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ ಸತ್ಯವತಿ (ಈಗ ಪ್ರವಾಸೋದ್ಯಮ ಆಯುಕ್ತರು) ಇಲಾಖೆಗೆ ಒಂದು ಆರ್ಥಿಕ ಮತ್ತು ಆಡಳಿತ ಶಿಸ್ತು ತರಲು ಬಹಳ ಶ್ರದ್ಧೆಯಿಂದ ದುಡಿದರು. ಇಡೀ ಇಲಾಖೆಯ ಮತ್ತು ಕೆಎಸ್‌ಟಿಡಿಸಿ ಹಾಗೂ ಜೆಎಲ್‌ಆರ್ ಅಧಿಕಾರಿಗಳು ಒಂದು ಹೊಸ ಹುಮ್ಮಸ್ಸಿನಿಂದ ಕಾರ್ಯನಿರ್ವಹಿಸಿದರು.
ಕಾರ್ಯದರ್ಶಿಯಾಗಿ ಮತ್ತದೇ ಇಲಾಖೆಗೆ ಬಂದಾಗ ಕುಮಾರ್ ನಾಯಕ್ ಪ್ರವಾಸೋದ್ಯಮ ಇಲಾಖೆ ಆಯುಕ್ತರಾದರು. ಕರ್ನಾಟಕದ ಬಗೆಗೆ ವಿಶೇಷ ಮಮಕಾರವಿರುವ ಅಪರೂಪದ ಯುವ ಅಧಿಕಾರಿ. ವಿಜಾಪುರದಲ್ಲಿ ನನ್ನ ಪ್ರೊಬೇಷನರಿ ಅಧಿಕಾರಿ ಆಗಿದ್ದವರು. ಕುಮಾರ್ ನಾಯಕ್ ಎಲ್ಲ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮೇಳಗಳಲ್ಲಿ ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿದ್ದರು.
ಕರ್ನಾಟಕದಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಮತ್ತೊಂದು ವಿಶೇಷ ಸಾಧ್ಯತೆಯಿರುವ ಕ್ಷೇತ್ರ. ದೇಶದ ಮತ್ತು ಪ್ರಪಂಚದ ವಿವಿಧ ಭಾಗಗಳಿಂದ ಆರೋಗ್ಯ ತಪಾಸಣೆ, ವೈದ್ಯಕೀಯ ಸೇವೆಗೆ ಬಹಳ ಜನ ಬರುತ್ತಾರೆ. ಹಲವಾರು ಬಾರಿ ತಿಂಗಳುಗಟ್ಟಲೆ ಉಳಿಯಬೇಕಾದ ಪ್ರಸಂಗ ಬರುತ್ತದೆ. ಅವರು, ಅವರ ಸಂಬಂಧಿಕರು ಕರ್ನಾಟಕ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಕಾತುರರಾಗಿರುತ್ತಾರೆ. ಕೇರಳದಲ್ಲಿ ಆಯುರ್ವೇದದ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಿದಂತೆ ಕರ್ನಾಟಕದಲ್ಲಿ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೌಲಭ್ಯಗಳಿದ್ದು, ದೇಶ–ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಿದೆ.
ಒಂದು ಪ್ರಾಂತ್ಯದ ಪ್ರವಾಸೋದ್ಯಮ ಒಂಟಿಯಾಗಿ ಬರೀ ಪ್ರವಾಸಿ ತಾಣಗಳಿಂದ ಬೆಳೆಯಲು ಸಾಧ್ಯವಿಲ್ಲ. ಅದಕ್ಕೆ ಹಲವಾರು ಕವಲುಗಳಿವೆ, ಮಜಲುಗಳಿವೆ. ಅವುಗಳನ್ನು ಅರ್ಥಮಾಡಿಕೊಳ್ಳದೆ ಮಾಡುವ ಎಲ್ಲ ಕ್ರಿಯಾ ಯೋಜನೆಗಳು ಬರೀ ಗಾಳಿ ಗೋಪುರವಾಗುತ್ತವೆ ಎಂಬುದು ನನ್ನ ಅನುಭವ. ಪ್ರವಾಸಿ ತಾಣಗಳಿಗಷ್ಟೇ ಜನರನ್ನು ವಿಶೇಷವಾಗಿ ಆಕರ್ಷಿಸಲು ಕಷ್ಟಸಾಧ್ಯ. ಯಾವುದೇ ಪ್ರಾಂತ್ಯ ಪ್ರವಾಸೋದ್ಯಮದಲ್ಲಿ ಸಾಧನೆ ಮಾಡಬೇಕಾದರೆ ಆ ಭಾಗ ಅಡುಗೆ, ತಿಂಡಿ, ತಿನಿಸು, ಊಟ ಉಪಚಾರ ಒಂದು ವಿಶಿಷ್ಟತೆಯನ್ನು ಹೊಂದಿರಬೇಕು.
ಪಾಶ್ಚಿಮಾತ್ಯ ದೇಶದಿಂದ ಬಂದ ಪ್ರವಾಸಿಗರಿಗೆ ಇಲ್ಲಿಯೂ ಬ್ರೆಡ್, ಆಮ್ಲೆಟ್ ಕೊಟ್ಟರೆ ಏನಿದೆ ಹೊಸತನ? ನೀರ್‌ದೋಸೆ, ಕೋಳಿಸಾರು, ಜೋಳದ ರೊಟ್ಟಿ, ಎಣ್ಣೆ ಬದನೆಕಾಯಿ ಕೊಟ್ಟರೆ ಅದು ವಿಶೇಷ. ಏನು ಕೊಡುತ್ತೀರೋ ಅದು ಸ್ವಚ್ಛವಾಗಿರಬೇಕು ಮತ್ತು ಹೊಟ್ಟೆಗೆ ಬೆಂಕಿ ಹಾಕಿದಂತಿರಬಾರದು (ಖಾರವಾಗಿ ಇರಬಾರದು) ಅಷ್ಟೇ. ಕರ್ನಾಟಕ ಊಟ–ತಿಂಡಿಗಳ ಮಟ್ಟಿಗಂತೂ ಬಹು ವೈವಿಧ್ಯವನ್ನು ಕಾಪಾಡಿಕೊಂಡಿದೆ. ಬೆಳಗಾವಿ, ಧಾರವಾಡ, ವಿಜಾಪುರದ್ದು ಒಂದು ವಿಧವಾದರೆ, ಮೈಸೂರು ಪ್ರಾಂತ್ಯದ್ದೇ ಒಂದು ವಿಶೇಷ. ಕೊಡಗಿನ ಬೆಡಗಿನ ಜೊತೆಗೆ ಪಂದಿಕರಿ, ಪುಟ್ಟು ಎಂಥವರಲ್ಲೂ ಬಾಯಲ್ಲಿ ನೀರೂರಿಸುತ್ತದೆ. ಮಲೆನಾಡಿನ ಭಾಗದಲ್ಲಂತೂ ಇರುವೆಗಳ ಜಾತಿಯ ಚಿಗಳಿ ಚಟ್ನಿಯಿಂದ ಹಿಡಿದು ಮಳ್ಳಿ ಮೀನು ಸಾರು, ಏಡಿ ಸಾರಿನ ರುಚಿ ಸವಿದವರಿಗಷ್ಟೇ ಗೊತ್ತು.
ಮಳ್ಳಿ ಮೀನಿನ ಸಾರು, ಅಕ್ಕಿ ರೊಟ್ಟಿ ಕೊಡುತ್ತೇನೆಂದರೆ ನಾನು ಎಷ್ಟು ದೂರ ಹೋಗಲೂ ತಯಾರು. ಈಗ ಗದ್ದೆಗಳಲ್ಲಿ ಶುಂಠಿ, ಪ್ರಪಂಚದ ಎಲ್ಲ ಕೀಟ–ಕ್ರಿಮಿನಾಶಕದ ರಾಸಾಯನಿಕ ಬಳಸಿ ಮಳ್ಳಿ ಮೀನಿನ ಸಂತಾನವೇ ಇಲ್ಲದಂತೆ ಮಾಡಿದ್ದಾರೆ. ಕರಾವಳಿ ಭಾಗದ ಊಟ–ಉಪಚಾರಗಳಂತೂ ಇನ್ನೂ ವರ್ಣರಂಜಿತ ಹಾಗೂ ರುಚಿಕರ.
ಅದೇ ರೀತಿ ಒಂದು ಪ್ರಾಂತ್ಯದ ಕಲೆ ಮತ್ತು ಸಂಸ್ಕೃತಿ ಪ್ರವಾಸಿಗರ ಆಕರ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಉದಾಹರಣೆಗೆ ಹಂಪಿಯಲ್ಲಿ ಉಳಿಯುವ ಪ್ರವಾಸಿಗರಿಗೆ ಆ ಭಾಗದ ಜಾನಪದ ಕಲೆಗಳ ಪ್ರದರ್ಶನ, ಕರಕುಶಲ ವಸ್ತುಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆ ತೋರಿಸಬಹುದು. ಅವುಗಳ ಮಾರಾಟದಿಂದ ಸ್ಥಳೀಯರಿಗೆ ಆದಾಯ ಬರುತ್ತದೆ. ಸಂಸ್ಕೃತಿ ಇಲಾಖೆಯಿಂದ ನಡೆಸಿದ ಜನಪದ ಜಾತ್ರೆ ಯಶಸ್ಸಿನ ಒಂದು ಉದಾಹರಣೆ.
ಜರ್ಮನಿಯ ಮೇಳದಲ್ಲಿ ನಮ್ಮ ಯಕ್ಷಗಾನ ಕಲಾವಿದರ ವೇಷಭೂಷಣ, ಚಂಡೆ–ಮದ್ದಳೆಗಳ ನಿನಾದ ಪ್ರಮುಖ ಆಕರ್ಷಣೆಯಾಗಿತ್ತು. ಅದೇ ರೀತಿ ದುಬೈನಲ್ಲಿ ಅರಬ್ ಪ್ರವಾಸಿ ಮೇಳದಲ್ಲಿ ಡೊಳ್ಳಿನ ಶಬ್ದ ಒಂದು ಹೊಸ ಅನುಭವ ನೀಡಿತು.
ಪ್ರವಾಸೋದ್ಯಮ ಪ್ರವಾಸಿ ತಾಣಗಳೊಂದಿಗೆ ಒಂದು ಪ್ರಾಂತ್ಯದ ಸಂಸ್ಕೃತಿ, ಕರಕುಶಲ ಪರಂಪರೆ ಜತೆಗೆ ಜನಜೀವನದ ಒಂದು ರೋಚಕ ಅನುಭವ ನೀಡುವಂತಾಗಬೇಕು. ಪ್ರವಾಸೋದ್ಯಮ ಕಲೆ, ಸಂಸ್ಕೃತಿ ಮತ್ತು ಕೌಶಲವನ್ನು ಸಂಘಟಿತವಾಗಿ ಬಿಂಬಿಸಬೇಕು. ಈ ಪ್ರಯತ್ನಗಳು ಸತತವಾಗಿ ನಡೆದರೆ ಕರ್ನಾಟಕದ ಪ್ರವಾಸೋದ್ಯಮ, ಮೊಗೆದಷ್ಟೂ ಮುಗಿಯದ ಚಿನ್ನದ ಗಣಿ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.