ಒಂದು ಕೋತಿ ಕೆಂಪುಕೆಂಪಾಗಿದ್ದ ಒಂದು ಪೊಟ್ಟಣ ನೋಡಿತು. ಅದರಲ್ಲಿ ತಿನ್ನುವ ಪದಾರ್ಥ ಏನಾದರು ಇರುವುದೆಂದು ಅದನ್ನು ಎತ್ತಿಕೊಂಡು ಚಂಗನೆ ಮರದ ಮೇಲೆ ಹಾರಿತು. ಅದರಲ್ಲಿ ತಿನ್ನುವ ವಸ್ತುವಿರಲಿಲ್ಲ, ವಜ್ರದ ಹರಳುಗಳಿದ್ದವು. ಒಂದನ್ನು ಬಾಯಿಗೆ ಹಾಕಿಕೊಂಡಿತು. ರುಚಿಯಿಲ್ಲ. ಅದನ್ನು ಕೆಳಗೆ ಒಗೆಯಿತು. ಹೀಗೆ ಎಲ್ಲ ವಜ್ರಗಳನ್ನು ರುಚಿಯಿಲ್ಲವೆಂದು ನೆಲದ ಮೇಲೆ ಬಿಸಾಡಿತು. ಕೆಳಗೆ ಧೂಳಿನಲ್ಲಿ ಬಿದ್ದ ವಜ್ರಕ್ಕೆ ತುಂಬ ಕೆಟ್ಟದ್ದು ಎನಿಸಿತು. ಆಗ ಭೂಮಿತಾಯಿ ವಜ್ರಕ್ಕೆ ಹೇಳಿತು- ‘ಹೇ ಸೋದರ, ದೋಷ ನಿನ್ನದಲ್ಲ. ದೋಷ ಅಪಾತ್ರದ್ದು. ವಜ್ರವನ್ನು ತಿಳಿದವನೇ ಅದರ ಬೆಲೆಯನ್ನು ತಿಳಿಯುತ್ತಾನೆ. ಯಾರಿಗೆ ವಜ್ರದ ಮೌಲ್ಯಗೊತ್ತಿಲ್ಲವೋ ಅವರು ಕೋತಿಯ ಹಾಗೆ ವ್ಯರ್ಥ ಮಾಡುತ್ತಾರೆ’. ‘ನಮ್ಮ ಜೀವನವೂ ಸಹ ವಜ್ರಕ್ಕಿಂತ ಕಡಿಮೆ ಬೆಲೆಯದ್ದಲ್ಲ. ಇದರ ಮಹತ್ವ ತಿಳಿದವನು ಇದನ್ನು ಸತ್ಕರಿಸಿ, ಮಹತ್ವವಾದುದನ್ನು ಸಾಧಿಸುತ್ತಾನೆ. ತಿಳಿಯದವನು ಬದುಕನ್ನು ಹಾಳುಮಾಡಿಕೊಳ್ಳುತ್ತಾನೆ’.
ಹೊರಗೆ ಸಾಧುವಾಗಿ ಕಂಡರೂ ಒಳಗೆ ಸಾಧುತ್ವವಿಲ್ಲದಿದ್ದರೆ ಫಲವೇನು? ಹೊರಗಿನ ಲೋಕಕ್ಕೆ ಧರ್ಮಾತ್ಮನಾಗಿ ಕಂಡವನು, ಒಳಗೊಳಗೇ ಅಧರ್ಮ ಕಾರ್ಯಗಳಲ್ಲಿ ನಿರತನಾಗಿದ್ದರೆ, ಆತನಿಗೆ ಧರ್ಮಾತ್ಮನ ಫಲ ದೊರೆಯುವುದೇ? ಆದ್ದರಿಂದಲೇ ಒಳಗಿನಿಂದಲೇ ಧರ್ಮವನ್ನು ಉಜ್ವಲಗೊಳಿಸಿಕೊಳ್ಳಬೇಕು. ಇದಕ್ಕೆ ಒಳಗಿನ ಪಾಪದಿಂದ ಪಾರಾಗಬೇಕು. ಅಂತರಂಗದ ವಿಕಾರವೇ ಒಳಗಿನ ಪಾಪ. ಇದು ಆತ್ಮನನ್ನು ಪತನಗೊಳಿಸುವುದು, ಭವಭವಗಳಲ್ಲಿ ಭ್ರಮಣೆಗೊಳಿಸುವುದು, ದುಃಖವನ್ನುಂಟು ಮಾಡುವುದು. ಈ ಪಾಪಾತ್ಮ ಭಾವಗಳಿಂದ ಪಾರಾಗುವುದೇ ಒಂದು ದೊಡ್ಡ ಸವಾಲು. ಇಂಥ ಒಳಗಿನ ಪಾಪಗಳಲ್ಲಿ ಒಂದು ಈರ್ಷೆ, ಎಂದರೆ ಅಸೂಯೆ, ಹೊಟ್ಟೆಕಿಚ್ಚು. ಇದು ತುಂಬ ಭಯಾನಕವಾದುದು. ಇದರ ಲಕ್ಷಣಗಳೇನು? ಇದಕ್ಕೆ ಕಾರಣಗಳೇನು? ಇದಕ್ಕೆ ಪರಿಹಾರಗಳೇನು? ಎಂಬುದರ ಬಗ್ಗೆ ನಾವೆಲ್ಲರು ಗಂಭೀರವಾಗಿ ಚಿಂತಿಸಬೇಕಾಗಿದೆ.
ಈರ್ಷ್ಯಯ (ಈರ್ಷ್ಯಯುಳ್ಳವನ) ನಾಲ್ಕು ಲಕ್ಷಣವನ್ನು ಗುರುತಿಸಬಹುದು. ಅವು ಹೀಗಿವೆ- 1. ಆತ ಇನ್ನೊಬ್ಬರ ಪ್ರಗತಿಯನ್ನು ಸಹಿಸುವುದಿಲ್ಲ. ಬೇಕಾದರೆ ಲೋಕದ ಪ್ರಗತಿಯನ್ನು ಸಹಿಸಬಲ್ಲ. ಆದರೆ ತನ್ನ ಸಮೀಪದವರ ಪ್ರಗತಿಯನ್ನು ಸಹಿಸುವುದಿಲ್ಲ, ಕರಬುತ್ತಾನೆ. ವಿಘ್ನ ಬಯಸುತ್ತಾನೆ. ಇಂಥ ಭಾವನೆ ನಮ್ಮಲ್ಲಿದ್ದರೆ ನಮ್ಮಲ್ಲಿ ಖಂಡಿತ ಈರ್ಷ್ಯ ಇದೆಯೆಂದೇ ಭಾವನೆ. 2. ಆತ ಇನ್ನೊಬ್ಬರ ಪ್ರಶಂಸೆಯನ್ನು ಸಹಿಸುವುದಿಲ್ಲ. ನಮ್ಮ ಸುತ್ತಲ ಪರಿಚಿತರ ಪ್ರಶಂಸೆಯನ್ನು ಆಲಿಸಿದಾಗ, ನಾವು ಸಿಡಿಮಿಡಿಗೊಂಡರೆ, ನಮ್ಮಲ್ಲಿ ಹೊಟ್ಟೆಕಿಚ್ಚು ಇದೆಯೆಂದೇ ಅರ್ಥ. 3. ಆತ ತನ್ನ ಅಸಾಮರ್ಥ್ಯವನ್ನು ಗಮನಿಸದೆ, ಇನ್ನೊಬ್ಬರ ಮೇಲೆ ದೋಷ ಆರೋಪಿಸುತ್ತಾನೆ. ಉನ್ನತ ಹುದ್ದೆ, ಗೌರವ ದೊರೆಯದಿದ್ದಾಗ ಈ ವರ್ತನೆಯನ್ನು ಕಾಣುತ್ತೇವೆ. 4. ಆತ ಸ್ವಭಾವದಿಂದಲೇ ಅಸೂಯಾಪರನು. ಇತರರ, ನೆರೆಹೊರೆಯವರ ಅಭ್ಯುದಯವನ್ನು ಸಹಿಸದೆ ಅವರಿಗೆ ಕೇಡನ್ನು ಉಂಟುಮಾಡಲು ವ್ಯಂತರ ದೇವತೆಗಳಲ್ಲಿವರವನ್ನು ಬೇಡುವ ಮನೋಧರ್ಮದವನು. ಇವರು ಸದಾಹಿಂಸಕರು, ರೌದ್ರಧ್ಯಾನಿಗಳು. ಇವೆಲ್ಲ ಭಾವನೆಗಳು ಅಂತರಂಗದವಿಕಾರಗಳು, ಒಳಗಿನ ಪಾಪಗಳು. ಇವುಗಳನ್ನು ಪರಿಹರಿಸಿಕೊಳ್ಳದೆ ಆತ್ಮನ ಉತ್ಥಾನವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.