ADVERTISEMENT

ಔತಣಕೂಟದಲ್ಲಿ ದ್ರಾಕ್ಷಾರಸದ ಕೊರತೆ

ಫಾ.ಚೇತನ್ ಕಾಪುಚಿನ್
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
ಫಾ. ಚೇತನ್ ಕಾಪುಚಿನ್
ಫಾ. ಚೇತನ್ ಕಾಪುಚಿನ್   

ಯೆಹೂದ್ಯ ಸಂಪ್ರದಾಯದಂತೆ ಮದುವೆಯು ಅನೇಕ ದಿನಗಳ ಸಂಭ್ರಮವಾಗಿತ್ತು. ಅಂತಿಮವಾಗಿ ನಡೆಯುವ ಔತಣಕೂಟ ಏಳು ದಿನಗಳ ಕಾಲ ನಡೆಯುತ್ತಿತ್ತು. ಈ ದಿನಗಳಲ್ಲಿ ನೆಂಟರಿಷ್ಟರು, ಮಿತ್ರರು, ಹಿತೈಷಿಗಳು ಮತ್ತಿನ್ನಿತರರು ತಂಡೋಪತಂಡವಾಗಿ ಬಂದು ದೀರ್ಘವಾಗಿ ನಡೆಯುವ ಔತಣಕೂಟದಲ್ಲಿ ಭಾಗವಹಿಸಿ ವಧು-ವರರಿಗೆ ಶುಭ ಹಾರೈಸುತ್ತಿದ್ದರು.

ಇಂತಹ ಒಂದು ಔತಣಕೂಟಕ್ಕೆ ಯೇಸುಸ್ವಾಮಿ ಮತ್ತವರ ಹನ್ನೆರಡು ಶಿಷ್ಯರಿಗೆ ಆಹ್ವಾನವಿತ್ತು. ಅವರು ಅಲ್ಲಿಗೆ ಹೋಗಲು ಅವರೊಡನೆ ಯೇಸುಸ್ವಾಮಿಯ ತಾಯಿ ಮರಿಯಳೂ ಜೊತೆಗೂಡಿದಳು. ಔತಣಕ್ಕೆ ಹುರಿದ ಕುರಿಮಾಂಸ, ರೊಟ್ಟಿ ಹಾಗೂ ಇತರ ತಿನಿಸುಗಳೊಂದಿಗೆ ದ್ರಾಕ್ಷಾರಸವೂ ಇತ್ತು.

ಔತಣಕೂಟವು ಭರ್ಜರಿಯಾಗಿ ನಡೆಯುತ್ತಿರಲು ಯೇಸುಸ್ವಾಮಿಯ ತಾಯಿ ಮರಿಯಳು ಮಗನನ್ನು ಬದಿಗೆ ಕರೆದು, ಮಗನೇ, ದ್ರಾಕ್ಷಾರಸವೆಲ್ಲಾ ಖಾಲಿಯಾಗಿದೆ. ನೆಂಟರ ಮುಂದೆ ಮನೆಯ ಯಜಮಾನನು ಬಹಳ ಮುಜುಗರಕ್ಕೆ ಒಳಗಾಗಿದ್ದಾನೆ ಎಂದು ಹೇಳಿದ ಮೇಲೆ ಸೇವಕರನ್ನು ಕರೆದು ಆತ ಹೇಳುವುದನ್ನು ಮಾಡಿ ಎಂದಳು.

ADVERTISEMENT

ಯೇಸುಸ್ವಾಮಿಯು ಖಾಲಿಯಾದ ದ್ರಾಕ್ಷಾರಸದ ಆರು ಬಾನೆಗಳಲ್ಲಿ ಕಂಠಮಟ್ಟ ನೀರನ್ನು ತುಂಬಿಸಲು ಹೇಳಿ, ಶಿರವೆತ್ತಿ ಪ್ರಾರ್ಥಿಸಿದರು. ಕ್ಷಣಮಾತ್ರದಲ್ಲಿ ಬಾನೆಗಳಲ್ಲಿದ್ದ ನೀರು ಉತ್ಕೃಷ್ಟವಾದ ದ್ರಾಕ್ಷಾರಸವಾಗಿ ಪರಿವರ್ತನೆಯಾಗಿತ್ತು. ಇದು ಯೇಸುಸ್ವಾಮಿ ಮಾಡಿದ ಪ್ರಥಮ ಸೂಚಕ ಕಾರ್ಯವೆಂದು ಬೈಬಲ್ ಶ್ರೀಗ್ರಂಥವು ಹೇಳುತ್ತದೆ. ಇದೊಂದು ಚಾರಿತ್ರಿಕ ಘಟನೆಯೂ ಹೌದು.

ಆದರೆ ಇಲ್ಲಿ ಉಲ್ಲೇಖಿಸಿದ ಮದುವೆಯ ಔತಣಕೂಟದಲ್ಲಿ ದ್ರಾಕ್ಷಾರಸದ ಕೊರತೆಯು, ಕೇವಲ ದ್ರಾಕ್ಷಾರಸವೆಂಬ ಪಾನೀಯಕ್ಕಿಂತ ಹೆಚ್ಚು ಸಾಂಕೇತಿಕವಾಗಿ ಅರ್ಥಗರ್ಭಿತವಾಗಿದೆ. ಹೆಣ್ಣು-ಗಂಡು ವಿವಾಹದ ಮಧುರ ಬಂಧನದಲ್ಲಿ ಜೊತೆಸೇರಿಸಿ ಒಂದು ಕುಟುಂಬವಾಗುತ್ತಾರೆ. ಇದರಲ್ಲಿ ಪ್ರೀತಿಯೆಂಬ ದ್ರಾಕ್ಷಾರಸದ ಕೊರತೆಯು ಬರುವ ಸಾಧ್ಯತೆಗಳಿವೆ. ವಿವಾಹಪೂರ್ವದಲ್ಲಿ ಹಾಗೂ ವಿವಾಹದ ಮೊದಲ ದಿನಗಳಲ್ಲಿ ಇದ್ದ ಪ್ರೀತಿಯ ಪ್ರಮಾಣ ಕ್ರಮೇಣ ಕುಂದಿ ಅನೇಕ ಸಲ ಬರಿದಾಗುತ್ತದೆ. ಪತಿ-ಪತ್ನಿ ಪರಸ್ಪರ ಪ್ರೀತಿರಹಿತರಾಗಿ, ಮಾತುಕತೆಯಿಲ್ಲದೆ ಹಾಸ್ಟೆಲ್‌ನಲ್ಲಿ ಜೀವಿಸುವಂತೆ ಜೀವಿಸುತ್ತಾರೆ. ಇದು ನಿಜವಾದ ದಾಂಪತ್ಯ ಜೀವನವಲ್ಲ.

ದಾಂಪತ್ಯಜೀವನದಲ್ಲಿ ಪ್ರೀತಿಯ ಕೊರತೆಯು ಕಂಡುಬಂದಾಗ ಅದನ್ನು ಗಮನಿಸಿ ಆದನ್ನು ಸರಿಪಡಿಸಲು ಪ್ರಯತ್ನಿಸಬೇಕು. ಪುರುಷ ಮತ್ತು ಸ್ತ್ರೀ ದಾಂಪತ್ಯ ಜೀವನವನ್ನು ನಡೆಸಲು ದೇವನೇ ಅವರನ್ನು ಜೊತೆಗೂಡಿಸಿದ್ದಾನೆಯೆಂದರೆ ದಿನನಿತ್ಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳು, ಕುಂದು ಕೊರತೆಗಳು ಹಾಗೂ ವಿಶೇಷವಾಗಿ ಪ್ರೀತಿಯ ಕೊರತೆಯನ್ನು ನೀಗಿಸುವವನೂ ಅವನೇ ಎಂಬ ವಿಶ್ವಾಸವು ದಂಪತಿಗಳಿಗೆ ಇರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.