ADVERTISEMENT

ಕೈಲಾಸವೆಂಬುದಿದೇನೊ ಕೈಲಾಸ.......

ಡಾ.ಸಿದ್ದರಾಮ ಸ್ವಾಮಿಗಳು
Published 28 ನವೆಂಬರ್ 2017, 19:30 IST
Last Updated 28 ನವೆಂಬರ್ 2017, 19:30 IST

ಕೈಲಾಸವೆಂಬುದು ಭಾರತೀಯರಿಗೆ ಚಿರಪರಿಚಿತವಾದ ಶಬ್ದ. ಬಹುತೇಕ ಭಾರತೀಯ ಪುರಾಣ ಕಾವ್ಯಗಳಲ್ಲಿ ಕವಿಗಳು ಕೈಲಾಸದ ವರ್ಣನೆ ಮತ್ತು ವಿವರಣೆ ಕೊಟ್ಟಿರುವುದು ಸಾಮಾನ್ಯ ಸಂಗತಿ. ಆದರೆ ಶಿವಶರಣರ ದೃಷ್ಟಿಯಲ್ಲಿ ಕೈಲಾಸವು ಇಂಥ ವಿವರಣೆಗಳಿಂದ ತೀರಾ ಭಿನ್ನವಾಗಿರುವುದನ್ನು ಕಾಣುತ್ತೇವೆ.

ಶಿವಶರಣರು ಕೈಲಾಸವನ್ನು ತೃಣವೆಂದು ಭಾವಿಸಿರುವರಲ್ಲದೆ ಭವದ (ಹುಟ್ಟಿದ) ಮೂಲವನ್ನರಿತು ಮಹಾಬೆಳಗಿನಲ್ಲಿ ಬೆರೆತು ಬಯಲಾಗುವುದು ಕೈಲಾಸವಾಸಿಯಾಗುವುದಕ್ಕಿಂತ ಶ್ರೇಷ್ಠವೆನ್ನುತ್ತಾರೆ.

ಶಿವಯೋಗಿ ಸಿದ್ಧರಾಮೇಶ್ವರರು- ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ, ಕೇಳಿರಯ್ಯಾ. ಕೈಲಾಸವೆಂಬುದೊಂದು ಭೂಮಿಯೊಳಿರುವ ಹಾಳುಬೆಟ್ಟ, ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು, ಅಲ್ಲಿರ್ದ ಚಂದ್ರಶೇಖರ ಬಹು ಎಡ್ಡ, ಇದರಾಡಂಬರವೇಕಯ್ಯಾ, ಎಮ್ಮ ಪುರಾತರಿಗೆ ಸದಾಚಾರದಿಂದ ವರ್ತಿಸಿ ಲಿಂಗಾಂಗ ಸಾಮರಸ್ಯ ತಿಳಿದು, ನಿಮ್ಮ ಪಾದಪದ್ಮದೊಳು ಬಯಲಾದ ಪದವೇ ಕೈಲಾಸವಯ್ಯಾ ಕಪಿಲಸಿದ್ಧ ಮಲ್ಲಿಕಾರ್ಜುನಾ- ಎಂದು ವಿವರಿಸಿರುವುದು ಗಮನಿಸಿದರೆ ನಿತ್ಯನಿರಂಜನ, ನಿರಾಕಾರ ಮತ್ತು ಪರವಸ್ತುವೆನಿಸಿದ ಪರಶಿವನೆಂಬ ಮಹಾಬಯಲಿನಲ್ಲಿ ಬೆರೆತು ಬಯಲಾಗುವುದೇ ಕೈಲಾಸ. ನಮ್ಮ ಭಾರತೀಯ ಪರಂಪರೆಯಲ್ಲಿ ಶರಣ-ಸಂತರಿಗೆ ಶಿವನಿಗಿಂತಲೂ ಶ್ರೇಷ್ಠ ಸ್ಥಾನವನ್ನು ಕಲ್ಪಿಸಲಾಗಿದೆ.

ADVERTISEMENT

ಅವರಿರುವ ಸ್ಥಳವೇ ಪವಿತ್ರಸ್ಥಳ. ಅದು ಕೈಲಾಸಕ್ಕಿಂತ ಶ್ರೇಷ್ಠ. ಅವರಿರುವಲ್ಲಿಯೇ ಇಹ, ಪರ, ಮೇರು, ಮಂದರ, ಗಗನ, ಸ್ವರ್ಗ ಎಲ್ಲವೂ ನೆಲೆಸಿವೆ. ಅಷ್ಟೇ ಏಕೆ ಅವರ ಕಾಯವೇ ಕೈಲಾಸವೆನ್ನುತ್ತಾರೆ ಬಸವಣ್ಣನವರು. ಶರಣರು-ಸಂತರು ಮರಣವನ್ನು ಗೆದ್ದವರು. ಆದ್ದರಿಂದ ಮೋಳಿಗೆಯ ಮಾರಯ್ಯನವರು- ‘ಕಾಯ ಸಮಾಧಿಯನೊಲ್ಲೆ, ನೆನಹು ಸಮಾಧಿಯನೊಲ್ಲೆ, ಕೈಲಾಸವೆಂಬ ಭವಸಾಗರವನೊಲ್ಲೆ. ನೀ ಎನ್ನ ಅಲ್ಲಿಗೆ ಇಲ್ಲಿಗೆ ಎಂದೆಳೆಯದೆ ನಿನ್ನಲ್ಲಿಗೆ ಕೂಟಸ್ಥವ ಮಾಡು ನಿಃಕಳಂಕ ಮಲ್ಲಿಕಾರ್ಜುನಾ ಎನ್ನುತ್ತಾರೆ. ಶಿವಶರಣರ ದೃಷ್ಟಿಯಲ್ಲಿ ದೇವಲೋಕ, ಮರ್ತ್ಯಲೋಕ ಎಂಬವು ಬೇರೆ ಬೇರೆ ಅಲ್ಲ. ಆಯ್ದಕ್ಕಿ ಮಾರಯ್ಯ ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು ಎಂದು ಹೇಳುವ ಮೂಲಕ ಸತ್ಯಶುದ್ಧಕಾಯಕದಿಂದ ನಾವಿರುವಲ್ಲಿಯೇ ಕೈಲಾಸವನ್ನು ಸೃಷ್ಟಿಸಿಕೊಳ್ಳಬೇಕೆನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.