‘ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ’ ಎಂದು ಅಲ್ಲಮಪ್ರಭು ಹೇಳಿದರೆ ‘ಜನ್ಮ ಜನ್ಮಾಂತರಗಳಲ್ಲಿ ನಾವು ಹರಿಸಿದ ದುಃಖದ ಕಣ್ಣೀರು ಸಪ್ತಸಾಗರಗಳ ನೀರಿಗಿಂತಲೂ ಅಧಿಕ’ ಎನ್ನುತ್ತಾನೆ ಬುದ್ಧ. ಪತಂಜಲಿಯು ತನ್ನ ಯೋಗ ಸೂತ್ರದಲ್ಲಿ ‘ದುಃಖಮೇವ ಸರ್ವಂ ವಿವೇಕಿನಃ’ ಎಂದು ಹೇಳುವ ಮೂಲಕ ಸಮಗ್ರ ಸಂಸಾರವೇ ದುಃಖಮಯ ಎಂದು ಸ್ಪಷ್ಟಪಡಿಸುತ್ತಾನೆ. ಸಂಸಾರದ ಎಲ್ಲವೂ ಕ್ಷಣಿಕ ಮತ್ತು ದುಃಖಮಯ ಎಂಬುದು ಗೊತ್ತಿದ್ದರೂ ಸಂಸಾರದ ಕ್ಷಣಿಕ ಸುಖಕ್ಕಾಗಿ ಹಾತೊರೆಯುವವರಿಗೆ, ಹೋರಾಡುವವರಿಗೇನೂ ಕೊರತೆಯಿಲ್ಲ. ಅವರಿಗೆ ಸಾಂಸಾರಿಕ ಸುಖವು ಮರೀಚಿಕೆಯಾಗಿ ಕಾಡುತ್ತದೆ. ಸಾಂಸಾರಿಕ ಕ್ಷಣಿಕ ಸುಖಕ್ಕಾಗಿ ಶಾಶ್ವತ ಸುಖವನ್ನು ಪಡೆಯುವ ಮಾರ್ಗದಿಂದ ಅವರೆಲ್ಲ ವಿಚಲಿತರಾಗುತ್ತಿರುವುದು ಸರ್ವೇಸಾಮಾನ್ಯ ಸಂಗತಿಯಾಗಿದೆ.
ನಿತ್ಯ ಜೀವನದಲ್ಲಿ ನಾವು ಅನುಭವಿಸುವ ದುಃಖಗಳಿಗೆ ಲೆಕ್ಕವಿಲ್ಲ. ಕ್ಷಣಿಕವಾದ ಸಾಂಸಾರಿಕ ಸುಖವನ್ನು ಪಡೆಯುವುದಕ್ಕಾಗಿ, ಪಡೆದ ಸುಖವನ್ನು ಉಳಿಸಿಕೊಳ್ಳುವುದಕ್ಕಾಗಿ ದುಃಖವನ್ನು ಅನುಭವಿಸುತ್ತೇವೆ. ಪಡೆದ ಸುಖ ಕೈ ತಪ್ಪಿದರೆ ದುಃಖ, ಒದಗಿಬರುವ ಜನನ, ವಾರ್ಧಕ್ಯ, ಮರಣಗಳ ಭಯದಿಂದ ದುಃಖ, ಅಪ್ರಿಯವಾದುದು ಸಂಯೋಗವಾದರೆ ದುಃಖ, ಪ್ರಿಯವಾದುದು ವಿಯೋಗವಾದರೆ ದುಃಖ, ಬಯಸಿದ ಬಯಕೆ ಈಡೇರದಿದ್ದರೆ ದುಃಖ, ಹಿಂಸೆ-ಸಂಘರ್ಷಗಳಿಂದ ದುಃಖ. ಹೀಗೆ ನಾನಾ ರೀತಿಯಿಂದ ದುಃಖಗಳನ್ನು ಅನುಭವಿಸುತ್ತಿರುತ್ತೇವೆ. ‘ಕೂಡುವಾಗ ದುಃಖ, ಕೂಡಿದ ಒಡವೆಯ ಮಡುಗುವಾಗ ದುಃಖ, ಮಡಗಿದ ಒಡವೆಯ ತೆಗೆವಾಗ ದುಃಖ, ಪ್ರಾಣವ ಬಿಡುವಾಗ ದುಃಖ’ ಎನ್ನುತ್ತಾನೆ ಶರಣ ಅಂಬಿಗರ ಚೌಡಯ್ಯ. ನಮ್ಮ ಸಾವೂ ಕೂಡ ದುಃಖದ ಅಂತ್ಯವಲ್ಲ. ಸಾವಿನ ನಂತರ ಬರುವ ಹುಟ್ಟು, ಹುಟ್ಟಿನ ನಂತರ ಬರುವ ಸಾವು, ಈ ಹುಟ್ಟು-ಸಾವುಗಳ ಭವಚಕ್ರದಲ್ಲಿ ಸಿಕ್ಕು ಅನಂತ ದುಃಖಗಳನ್ನು ಮನುಷ್ಯನು ಅನುಭವಿಸುತ್ತಾನೆ. ಅದಕ್ಕಾಗಿ ದುಃಖವನ್ನು ದೂರಮಾಡುವ ಮಾರ್ಗವನ್ನು ಕಂಡುಕೊಳ್ಳಬೇಕೆಂದು ಶರಣರು, ಸಂತರು ಅಮೂಲ್ಯ ಸಂದೇಶ ನೀಡಿದ್ದಾರೆ. ‘ಸಕಲೇಂದ್ರಿಯಗಳಲ್ಲಿ ವಿಹರಿಸುವ ಮನಸ್ಸು ಸೆಳೆದು ನಿಂದಾತ ಸುಖಿ, ಪಂಚೇಂದ್ರಿಯಗಳಿಚ್ಛೆಯೊಳು ಮನಂಗೊಂಡು ಸುಳಿದಾತ ದುಃಖಿ’ ಎಂಬ ಅವರ ಮಾತುಗಳಿಂದ ಮನಸ್ಸಿನಲ್ಲಿ ಆಶೆ-ಆಮಿಷಗಳನ್ನು ತುಂಬಿಕೊಂಡು ಇಂದ್ರಿಯಗಳಿಗೆ ದಾಸರಾದವರು ಸದಾ ದುಃಖಿಗಳಾಗಿರುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ನಮಗೆ ಯಾವುದು ಹಿತ, ಯಾವುದು ಅಹಿತ ಎಂಬುದನ್ನೂ ಗುರುತಿಸಲಾರದಷ್ಟು ನಾವು ಜ್ಞಾನಶೂನ್ಯರಾಗಿದ್ದೇವೆ. ಆದ್ದರಿಂದ ಸುಖಿಯಾಗಲು ಮನಸ್ಸನ್ನು ಅಂತರ್ಮುಖಗೊಳಿಸಿ ಅವಿರಳ ಜ್ಞಾನವನ್ನು ಪಡೆಯಬೇಕೆಂದು ಅವರು ಆಗ್ರಹಿಸುತ್ತಾರೆ.
ಮನಸ್ಸಿನ ದುರಾಸೆಗಳೇ ದುಃಖದ ಮೂಲವಾಗಿರುವುದರಿಂದ ಅವುಗಳು ಮನಸ್ಸನ್ನು ಆವರಿಸಿಕೊಳ್ಳದಂತೆ ಎಚ್ಚರವಹಿಸಬೇಕು. ಮನಸ್ಸಿನ ಹೀನ ಬಯಕೆಗಳನ್ನು ಹತ್ತಿಕ್ಕಿ ಸಾಂಸಾರಿಕ ವಿಷಯಗಳಲ್ಲಿ ಅನಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಬಂದ ದುಃಖವನ್ನು ಬರೀ ಹಳಿಯುವುದರಿಂದ ಯಾವ ಪ್ರಯೋಜನವೂ ಆಗದು. ಅದನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನ ನಮ್ಮದಾಗಬೇಕು. ಮನಸ್ಸನ್ನು ನಿಯಂತ್ರಿಸಿ ಸಂಯಮಿಯಾಗಬೇಕು. ನಮ್ಮ ನಡೆ-ನುಡಿಗಳಲ್ಲಿ ಪರಿಶುದ್ಧಿಯನ್ನು ಕಾಯ್ದುಕೊಳ್ಳಬೇಕು. ಸದ್ವಿಚಾರ-ಸದಾಚಾರಗಳಿಂದ ಮನುಷ್ಯನ ಅಂತರಂಗದಲ್ಲಿ ಶಕ್ತಿಯ ಪ್ರಾದುರ್ಭಾವವಾಗುತ್ತದೆ. ಆಗ ಹೃದಯದಲ್ಲಿ ಜ್ಞಾನಜ್ಯೋತಿ ಬೆಳಗುತ್ತದೆ. ಜ್ಞಾನಜ್ಯೋತಿಯ ಬೆಳಕಿನಲ್ಲಿ ನಮ್ಮ ಜೀವನ ದಿವ್ಯವಾಗುತ್ತದೆ. ಆಗ ಮಾತ್ರ ಶಾಶ್ವತವಾದ ಮತ್ತು ಅನಿರ್ವಚನೀಯವಾದ ಸುಖ ಅಥವಾ ಆನಂದದ ಅನುಭೂತಿಯುಂಟಾಗುತ್ತದೆ. v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.