ADVERTISEMENT

ದೇಹಾತ್ಮನಾಶ ಮತ್ತು ಅಮರತ್ವ (ಫನಾ ಅಲ್ ಬಖಾ) -2

ಫಕೀರ್ ಮಹಮ್ಮದ ಕಟ್ಪಾಡಿ
Published 21 ಮಾರ್ಚ್ 2018, 19:40 IST
Last Updated 21 ಮಾರ್ಚ್ 2018, 19:40 IST

ಸೂಫಿ ಗುರು ಅಬೂಬಕರ್ ಮುಹಮ್ಮದ್ ಅಲ್ ಕಲಾಲ್ಬಾದಿಯವರು ತನ್ನ ‘ಸೂಫಿ ಸಿದ್ಧಾಂತಗಳು’ ಎಂಬ ಗ್ರಂಥದಲ್ಲಿ ‘ಮನುಷ್ಯ ತನ್ನ ವೈಯಕ್ತಿಕ ಗುಣ
ವಿಶೇಷಗಳಿಂದ ಬಿಡುಗಡೆಯಾಗಿ ಮಾನಸಿಕ ಸಂತುಲನವನ್ನು ಕಳೆದುಕೊಂಡು ಸಂಪೂರ್ಣ ಹುಚ್ಚನೆಂದು ಇತರರು ತಿಳಿಯುವ ಹಂತಕ್ಕೆ ‘ಫನಾ’ ಹೆಚ್ಚುಕಮ್ಮಿ ಸಮಾನವಾದುದು. ಮಿಕ್ಕ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಹಾಗೆ ಈತ ದೇವರಿಗೆ ಸಲ್ಲಿಸಬೇಕಾದ ತನ್ನ ನಿತ್ಯಕರ್ತವ್ಯಗಳನ್ನು ನಿರ್ವಹಿಸುತ್ತಾನೆ. ಇದೂ ಅಲ್ಲದೆ, ತನ್ನೊಂದಿಗೆ ಸಹಚರರಾಗಿರುವವರ ಗುರುವಾಗಿ ನೇಮಿಸಲ್ಪಟ್ಟಿದ್ದಕ್ಕೆ ಸಂಬಂಧಿಸಿದ ಕರ್ತವ್ಯವನ್ನು ಪಾಲಿಸಲು ಕೂಡ ಸಕ್ಷಮವಾಗಿರುತ್ತಾನೆ’ ಎಂದು ವ್ಯಾಖ್ಯಾನಿಸಿದ್ದಾರೆ. ಇಲ್ಲಿ ನಮ್ಮಲ್ಲಿ ಮೂಡುವ ಪ್ರಶ್ನೆ ಎಂದರೆ ಈ ಹಂತಕ್ಕೆ ತಲುಪಿದ ವ್ಯಕ್ತಿ ಮತ್ತೆ ತನ್ನ ವ್ಯಕ್ತಿಸಹಜ ಗುಣಗಳಿಗೆ ತಿರುಗಿ ಬರುತ್ತಾನೆಯೇ ಇಲ್ಲವೇ ಎಂಬುದು. ಇದಕ್ಕೆ ಕೂಡ ಕಲಾಲ್ಬಾದಿಯವರು ‘ಫನಾ ಹಂತಕ್ಕೆ ತಲಪಿದ ಅಧ್ಯಾತ್ಮಿಗಳು ತಮ್ಮ ವ್ಯಕ್ತಿಗತ ಸಹಜಗುಣಗಳಿಗೆ ಹಿಂತಿರುಗಿ ಬರುತ್ತಾರೆಂದು ಗಟ್ಟಿ ನಿಲುವಿನ ಅಭಿಪ್ರಾಯಕ್ಕೆ ಹೆಸರಾಂತ ಸೂಫಿ ಪಂಡಿತರು ಕೂಡ ಬರಲು ಸಾಧ್ಯವಾಗಿಲ್ಲ. ಫನಾ ಹಂತಕ್ಕೆ ಬರುವುದೇ ಒಂದು ದೈವೀ ಹಂತದ ಸಾಧನೆ ಮತ್ತು ಅಧ್ಯಾತ್ಮ ಸಾಧಕನೆಂದು ಪರಿಗಣಿಸಲ್ಪಡುವ ದೈವೀಪ್ರೇರಣೆಯ ಫಲವೇ ಇದು ಹೊರತು ವೈಯಕ್ತಿಕ ಸಾಧನೆಯೆಂದು ತಿಳಿಯಲಾಗದು. ದೈವೀಅನುಗ್ರಹದ ಪ್ರತೀಕವಾಗಿ ಆರಿಸಲಾದ ಕೆಲವೇ ಕೆಲವು ಅಧ್ಯಾತ್ಮ ಸಾಧಕರಿಗೆ ಮಾತ್ರ ದೊರೆಯುವ ಪ್ರತಿಫಲವೆಂದು ಪರಿಗಣಿಸತಕ್ಕದ್ದು’ ಎಂದು ಅಭಿಪ್ರಾಯ ಪಡುತ್ತಾರೆ.

ಇನ್ನೊಂದು ಅಭಿಪ್ರಾಯದಂತೆ ‘ಫನಾ ಎಂಬುದು ವ್ಯಕ್ತಿಗತವಾದ ಅಹಮ್ಮಿನ ನಾಶದ ಸ್ಥಿತಿಯಲ್ಲಿ ಅಂತಿಮ ಸತ್ಯದೊಂದಿಗೆ ಸಂಪೂರ್ಣ ಮಿಲನವಾದಾಗ ಮತ್ತು ಲಕ್ಷ್ಯ ಹಾಗೂ ವಸ್ತುಸ್ಥಿತಿಯು ಭಿನ್ನವಾಗುವ ಮೊದಲು ಉಂಟಾಗುವ ಸಂಪೂರ್ಣ ಪ್ರಜ್ಞೆ ಎನಿಸಲ್ಪಡುತ್ತದೆ. ಇದಕ್ಕೆ ಸೂಫಿ ಅಧ್ಯಾತ್ಮದಲ್ಲಿ ‘ಜಾಮ್’ ಎಂಬ ಪದವನ್ನು ಮಿಲನ, ಒಂದಾಗುವಿಕೆ ಎಂಬ ಅರ್ಥದಲ್ಲಿ ಬಳಕೆಯಾಗುತ್ತದೆ. ಜಗದಲ್ಲಿ ಏನೂ ಇಲ್ಲದ ಶೂನ್ಯಸ್ಥಿತಿಯಲ್ಲಿ ದೇವನೊಬ್ಬ ಮಾತ್ರ ಇದ್ದ ಸಂದರ್ಭಕ್ಕೆ ತಿರುಗುವ ಸ್ಥಿತಿ ಇದು ಎಂದು ಸೂಫಿಗಳು ತಿಳಿಯುತ್ತಾರೆ. ಮೌಲಾನ ಜಲಾಲುದ್ದೀನ್ ರೂಮಿಯವರು ಈ ಸ್ಥಿತಿಯನ್ನು ವಿವರಿಸಲು ವ್ಯಾಕರಣವನ್ನು ಬಳಸುತ್ತ ‘ಝೈದ್ ಸತ್ತುಹೋದ’ ಎಂಬ ವಾಕ್ಯದಲ್ಲಿ ಝೈದ್ ವಸ್ತುಪದವಾಗುತ್ತಾನೆಯೇ ಹೊರತು ಕ್ರಿಯಾವಸ್ತುವೆನಿಸಲಾರ’ ಎಂದು ಸರಳವಾಗಿ ತಮ್ಮ ‘ಮಸ್ನವಿ’ಯಲ್ಲಿ ವ್ಯಾಖ್ಯಾನಿಸಿದ್ದಾರೆ. ವ್ಯಕ್ತಿಯೊಬ್ಬ ‘ಬಖಾ’ ಎಂಬ ನಿರಂತರವಾಗಿ ದೇವರೊಂದಿಗೆ ಮಿಲನವಾಗಿರುವ ಸ್ಥಿತಿಗೆ ತಲಪಬಹುದು. ಈ ಸ್ಥಿತಿಯಲ್ಲಿ ಸೇರ್ಪಡೆಯಲ್ಲಿ ಸೇರಿಕೊಳ್ಳುವುದು ಯಾ ಮಿಲನದಲ್ಲಿ ಮಿಲನವಾಗುವುದು (ಜಾಮ್ ಅಲ್ ಜಾಮ್) ಎಂಬ ಅನುಭವವನ್ನು ಪಡೆಯಬಹುದು. ಮನುಷ್ಯನೊಬ್ಬ ಶೂನ್ಯ ಅವಸ್ಥೆಯಿಂದ ಮರಳಿ ರೂಪವನ್ನು ಪಡೆಯಬಹುದು ಹಾಗೂ ಸಂಪೂರ್ಣ ವ್ಯಕ್ತಿಯಾಗಿ ಮಾರ್ಪಾಡಾಗಬಹುದು. ಇಲ್ಲಿ ವೈವಿಧ್ಯತೆಯು ಮತ್ತೆ ಕಂಡುಬರಬಹುದು. ಆದರೆ ಒಂದು ಅಂತಿಮಸತ್ಯದ ನಿರ್ಧಾರದಲ್ಲಿ ಇದು ಬೇರೆಯೇ ರೂಪಧರಿಸಿರಬಹುದು. ಈ ಹಂತದಲ್ಲಿ ಅಧ್ಯಾತ್ಮಿಗಳು ಸಂಪೂರ್ಣವಾಗಿ ದೇವರ ನಿರ್ಧಾರಕ್ಕೆ ಒಳಪಡುತ್ತಾರೆ. ಪ್ರಖ್ಯಾತ ಸೂಫಿ ಕವಿ ಸಿನಾಯಿ ಈ ಸಂದರ್ಭದಲ್ಲಿ ಹೀಗೆ ಹೇಳುತ್ತಾರೆ: ನಿರಂತರತೆಯನ್ನು (ಬಖಾ) ನೀನು ಪಡೆಯಬಯಸುವಿಯಾದರೆ, ದರ್ವಿಶ್ ಫಕೀರನನ್ನು ಕೇಳು,ದರ್ವಿಶ್ ಸೂಫಿಗಳು ಕಾಬದ (ದೇವ ಮಂದಿರ) ಹೊದಿಕೆಯ ನೆಯ್ಗೆ ಮತ್ತು ಉಣ್ಣೆಯ ದಾರವಾಗಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT