ಇಸ್ಲಾಮಿನ ಐದು ಮುಖ್ಯ ತತ್ವಗಳಲ್ಲಿ ಒಂದೆಂದು ಪರಿಗಣಿಸುವ ಮುಖ್ಯ ವಿಧಿ, ದಿನದ ನಿಗದಿತ ಐದು ಹೊತ್ತು ಮಾಡುವ ನಮಾಜನ್ನು ಪ್ರತಿಯೊಬ್ಬನೂ ಮಾಡಬೇಕಾದ ಕರ್ತವ್ಯವಾಗಿದೆ. ಮುಂಜಾನೆ ಸೂರ್ಯೋದಯದ ಮೊದಲು, ಮಧ್ಯಾಹ್ನ, ಸಂಜೆ, ಸೂರ್ಯಾಸ್ತಮಾನವಾದ ಕೂಡಲೇ ಮತ್ತು ರಾತ್ರಿ (ಸುಬಹ್, ಜೊಹರ್, ಅಸರ್, ಮಗ್ರಿಬ್, ಇಷಾ) ಹೀಗೆ ಐದು ಹೊತ್ತು ನಮಾಜು ಮಾಡಲಾಗುತ್ತದೆ.
ಪ್ರತೀ ನಮಾಜಿನ ಮೊದಲು ನಿಯಮದಂತೆ ಶುದ್ಧವಾಗಿ ಕೈ ಕಾಲು ತೊಳೆದು ‘ವಜೂ’ ಮಾಡಬೇಕು. ಈ ನಮಾಜಿನ ವಿಧಿಗಳು ಪ್ರವಾದಿಯವರು ತನ್ನ ಬದುಕಿನಲ್ಲಿ ಪಾಲಿಸಿದ ರೀತಿಯಲ್ಲಿ ಮುಂದುವರಿಯುತ್ತಿದೆ. ಅಧ್ಯಾತ್ಮ ಸಾಧಕರಿಗೆ ನಮಾಜು ಇನ್ನೂ ಹೆಚ್ಚಿನ ಪ್ರಾಮುಖ್ಯತೆಯುಳ್ಳ ವಿಧಿಯಾಗಿರುತ್ತದೆ. ಅರಬಿ ಭಾಷೆಯ ‘ಸಲಾತ್’ ಎಂಬ ಶಬ್ಧದ ಮೂಲ ‘ವಸಲಾ’ ಎಂದಾಗಿದ್ದು ಇದರ ಅರ್ಥ ‘ಆಗಮಿಸು, ಸಂಘಟಿಸು’ ಎಂದಾಗಿರುತ್ತದೆ.
ಕುರಾನಿನ ಸಂದೇಶದ ಪ್ರಕಾರ ಸೃಷ್ಟಿಕರ್ತನು ಸಮಗ್ರ ಸೃಷ್ಟಿಯನ್ನು ಮಾಡಿರುವುದೇ ಅವನನ್ನು ಸ್ತುತಿಸುವ ಸಲುವಾಗಿ. ಹೀಗೆ ದೇವರ ವಿಶೇಷ ಸಾನಿಧ್ಯವನ್ನು ಬಯಸುವವರು ತಮ್ಮ ವಿಧೇಯತೆಯನ್ನು, ಪರಿಶುದ್ಧ ಪ್ರೇಮವನ್ನು ವ್ಯಕ್ತಪಡಿಸುವ ಸುಲಭ ಮಾರ್ಗ ನಮಾಜಾಗಿದೆ ಎಂದು ಪರಿಗಣಿಸಲಾಗಿದೆ. ಎಷ್ಟರವರೆಗೆ ಎಂದರೆ ಪ್ರಾಣ ಹಿಡಿಯಲು ಬಂದ ದೇವದೂತ ಜಿಬ್ರೀಲ್ ಕೂಡ ನಮಾಜು ಮುಗಿಯುವ ತನಕ ಕಾಯುತ್ತಾನೆಂದು ಹೇಳಲಾಗುತ್ತದೆ.
ನಮಾಜು ಪ್ರಾರ್ಥನೆಯ ಒಂದೊಂದು ಹಂತವೂ ಒಂದೊಂದು ದೈವಕೃಪೆಯ ಅವಕಾಶದ ಸಾಧನವಾಗಿದೆ ಎಂದೂ, ಉದಾಹರಣೆಗೆ ನಮಾಜಿನ ಕೊನೆಯ ಹಂತವಾದ ‘ಅತ್ತಹಿಯ್ಯಾತಿ’ನಲ್ಲಿ ಪ್ರವಾದಿಯವರು ದೇವರೊಂದಿಗೆ ಸಂಭಾಷಣೆ ನಡೆಸಿದ ‘ಮೆಹರಾಜ್’ಗೆ ಸಮಾನವಾದ ಕ್ಷಣವಿರುತ್ತದೆ ಎಂಬ ನಂಬಿಕೆ ಇದೆ.
ಸೂಫಿ ಅಧ್ಯಾತ್ಮ ಸಾಧಕರು ನಮಾಜು ಮಾಡುವುದಿಲ್ಲ ಎಂದು ಕೆಲವರು ಆರೋಪಮಾಡಿದ್ದು ಇತಿಹಾಸದಲ್ಲಿ ಕಂಡುಬರುತ್ತದೆ. ಹೆಸರಾಂತ ಕೆಲವು ಸೂಫಿ ಸಂತರ ಇಂತಹ ಆರೋಪಕ್ಕೆ ಗುರಿಯಾಗಿ ವಿಚಾರಣೆಗೆ ಒಳಗಾದದ್ದು ಇದೆ. ಎಲ್ಲರಿಗೂ ಗೋಚರಿಸುವಂತೆ ಸೂಫಿ ಸಂತರು ನಿತ್ಯದ ನಮಾಜು ಮಾಡದೆ ಗುಪ್ತವಾಗಿ ಮಾಡುತ್ತಾರೆಂದು ಕೂಡ ಹೇಳುವುದಿದೆ.
ಉದಾಹರಣೆಗೆ ಬಿಜಾಪುರದ ಸಂತ ಹಜ್ರತ್ ಷಾ ಅಮೀನುದ್ದೀನ್ ಅಲಾರ ಮೇಲೂ ಇಸ್ಲಾಮಿನ ಮೂಲತತ್ವಗಳನ್ನು ಪಾಲಿಸುತ್ತಿಲ್ಲ, ಐದು ಹೊತ್ತಿನ ನಮಾಜು ಮಾಡುತ್ತಿಲ್ಲ, ಮಸೀದಿಗೆ ಹೋಗುತ್ತಿಲ್ಲ ಎಂಬ ಆರೋಪಗಳಿದ್ದವು. ಷಾ ಅಮೀನುದ್ದೀನರನ್ನು ಬಿಜಾಪುರದ ಸುಲ್ತಾನ ಮತ್ತು ಆಸ್ಥಾನದ ಹಾಗೂ ಜುಮ್ಮಾ ಮಸೀದಿಯ ಶಾಹಿ ಇಮಾಮ್ ಮೌಲಾನಾ ಮುಹಮ್ಮದ್ ಬುಖಾರಿಯವರು ಷಾ ಅಮೀನುದ್ದೀನ್ ಅಲಾರಿಗೆ ಜುಮಾ ಮಸೀದಿಗೆ ಪ್ರಾರ್ಥನೆಗಾಗಿ ಬರುವಂತೆ ಆಹ್ವಾನಿಸುತ್ತಾರೆ.
ಇದಕ್ಕೆ ಒಪ್ಪದ ಸೂಫಿ ಸಂತ, ಬುಖಾರಿಯವರನ್ನು ಶಹಪುರದ ಬೆಟ್ಟದ ತನ್ನ ಆಶ್ರಮಕ್ಕೆ ಬರುವಂತೆ ಆಹ್ವಾನಿಸುತ್ತಾರೆ. ಬುಖಾರಿಯವರು ಆಶ್ರಮಕ್ಕೆ ಬರಲು ಒಪ್ಪುತ್ತಾರೆ. ಅಲ್ಲಿನ ಕೊಳವೊಂದರ ನೀರಿನ ಮೇಲೆ ‘ಜಾನಿಮಾಸ್’ ಪ್ರಾರ್ಥನೆಯ ಚಾಪೆಯನ್ನು ತೇಲುವಂತೆ ಹಾಸಿ ನಿಂತು ಸಂತ ನಮಾಜು ಮಾಡುವುದನ್ನು ಇಮಾಮ್ ನೋಡಿ ದಂಗಾಗುತ್ತಾರೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.