ADVERTISEMENT

ಪ್ರಾಮಾಣಿಕತೆಯ ಪರಾಕಾಷ್ಠೆ

ಫಾ.ಚೇತನ್ ಕಾಪುಚಿನ್
Published 28 ಮೇ 2018, 19:30 IST
Last Updated 28 ಮೇ 2018, 19:30 IST
ಪ್ರಾಮಾಣಿಕತೆಯ ಪರಾಕಾಷ್ಠೆ
ಪ್ರಾಮಾಣಿಕತೆಯ ಪರಾಕಾಷ್ಠೆ   

ಇದೊಂದು ನೈಜ ಘಟನೆ. ಕೇರಳದ ಕಾಂಜಗಾಡಿನಲ್ಲಿ ಸುಧಾಕರನ್ ಎಂಬುವನು ಪುಟ್ಟದಾದ ಅಂಗಡಿಯಿಟ್ಟು ಸಿಹಿ ತಿಂಡಿಗಳು, ಪಾನಕ, ಇನ್ನಿತರ ವಸ್ತುಗಳೊಡನೆ ಲಾಟರಿ ಟಿಕೇಟುಗಳನ್ನು ಮಾರಿ ಜೀವನ ನಡೆಸುತ್ತಿದ್ದ. ಕಷ್ಟಪಟ್ಟು ದುಡಿದರೆ ತಿಂಗಳಿಗೆ ಸಾಧಾರಣ ಹತ್ತು ಸಾವಿರ ರೂಪಾಯಿಗಳನ್ನು ಗಳಿಸುತ್ತಿದ್ದ. ಅದರಲ್ಲಿ ತನ್ನ ಕುಟುಂಬವನ್ನು ಸಾಕಿ ತೃಪ್ತಿಯಿಂದ ಜೀವಿಸುತ್ತಿದ್ದ. ಒಂದು ದಿನ ಅವನ ದಿನನಿತ್ಯದ ಗಿರಾಕಿಯಾದ ಅಶೋಕನ್ ಫೋನ್ ಮಾಡಿ, ತನಗಾಗಿ ಹತ್ತು ಲಾಟರಿ ಟಿಕೇಟುಗಳನ್ನು ತೆಗೆದಿಡಲು ಕೇಳಿಕೊಂಡ. ಸುಧಾಕರನ್ ಹಾಗೆಯೇ ಮಾಡಿದ.

ಅದೇ ಸಂಜೆ ಲಾಟರಿಯ ಫಲಿತಾಂಶ ಹೊರಬಿದ್ದು, ಅಶೋಕನ್‌ನಿಗಾಗಿ ತೆಗೆದಿಟ್ಟ ಹತ್ತು ಟಿಕೇಟುಗಳಲ್ಲಿ ಒಂದಕ್ಕೆ ಬಂಪರ್ ಬಹುಮಾನ ಒಂದು ಕೋಟಿ ರೂಪಾಯಿ ಬಂದಿದ್ದು ಸುಧಾಕರನ್‌ನಿಗೆ ಅರಿವಾಯಿತು. ಸುಧಾಕರನ್ ತಕ್ಷಣ ತನ್ನ ತಂದೆಗೆ ಫೋನಾಯಿಸಿ ಈ ವಿಷಯವನ್ನು ತಿಳಿಸಲು, ತಂದೆಯು, ತಕ್ಷಣ ಅಶೋಕನ್‌ನಿಗೆ ಫೋನ್ ಮಾಡಿ ಈ ವಿಷಯವನ್ನು ತಿಳಿಸು ಎಂದು ಆಜ್ಞಾಪಿಸಿದ. ಸುಧಾಕರನ್ ಹಾಗೆಯೇ ಮಾಡಲು, ಅದನ್ನು ಕೇಳಿದ ಅಶೋಕನ್ ತನ್ನ ಕಿವಿಗಳನ್ನೇ ನಂಬಲಿಲ್ಲ.

ಅಶೋಕನ್ ಲಾಟರಿ ಟಿಕೇಟುಗಳನ್ನು ತೆಗೆದಿಡಲು ಕೇಳಿದ್ದ ಮಾತ್ರ, ಅದಕ್ಕಾಗಿ ಹಣವನ್ನು ಕೊಟ್ಟಿರಲಿಲ್ಲ. ಅದಲ್ಲದೆ ತೆಗೆದಿಟ್ಟ ಲಾಟರಿ ಟಿಕೇಟುಗಳ ಕ್ರಮಸಂಖ್ಯೆಗಳೂ ಅವನಿಗೆ ತಿಳಿದಿರಲಿಲ್ಲ. ಹೀಗಾಗಿ ಸುಧಾಕರನ್ ಈ ವಿಷಯವನ್ನು ಅಶೋಕನ್‌ಗೆ ತಿಳಿಸುವ ಅಗತ್ಯವೇ ಇರಲಿಲ್ಲ. ಆ ಕೋಟಿ ರೂಪಾಯಿಗಳನ್ನು ತಾನು ಜೇಬಿಗಿಳಿಸಬಹುದಿತ್ತು. ಅದು ಅಶೋಕನ್‌ಗೆ ತಿಳಿಯುತ್ತಿರಲಿಲ್ಲ, ಅದು ಅನ್ಯಾಯವೂ ಅಲ್ಲವಾಗಿತ್ತು. ಏಕೆ ಈ ರೀತಿ ಮಾಡಿದೆ ಎಂದು ಸುಧಾಕರನ್‌ನನ್ನು ಪ್ರಶ್ನಿಸಿದಾಗ ಅವನು ತನ್ನ ಪರ್ಸಿನಿಂದ ತನ್ನ ತಂದೆಯ ಪುಟ್ಟ ಫೊಟೊವನ್ನು ಹೊರತೆಗೆದು, ನನ್ನ ತಂದೆಯು ನನಗೆ ಯಾವಾಗಲೂ ಹೇಳಿದ್ದು; ನಿನಗೆ ಅವಶ್ಯಕತೆಯಿದ್ದರೆ ಭಿಕ್ಷೆ ಬೇಡು, ಆದರೆ ಪರರ ಹಕ್ಕನ್ನು ಅಪಹರಿಸಬೇಡ, ಎಂದುತ್ತರವಿತ್ತನು.

ADVERTISEMENT

ಪರರ ಹಕ್ಕುಗಳನ್ನು ಕಸಿದುಕೊಳ್ಳುವ, ಇತರರ ಸಂಪನ್ಮೂಲಗಳನ್ನು ಅನ್ಯಾಯದಿಂದ ಕಿತ್ತು ತಿನ್ನುವ, ಬಡವರನ್ನು ಇನ್ನೂ ಬಡವರಾಗಿಸುವ ಪ್ರಸ್ತುತ ಪರಿಸ್ಥಿತಿಯಲ್ಲಿ ಸುಧಾಕರನ್‌ನಂತಹ ಪ್ರಾಮಾಣಿಕರು ಮರುಭೂಮಿಯಲ್ಲಿ ನೀರಿನ ಒರತೆಯಂತೆ ಕಾಣಿಸಿಕೊಳ್ಳುತ್ತಾರೆ. ಸೃಷ್ಟಿಸಿದ ಭಗವಂತ ಪ್ರತಿಯೊಬ್ಬರನ್ನು ಪ್ರಾಮಾಣಿಕತೆಯ ಜೀವನಕ್ಕೆ ಕರೆ ನೀಡುತ್ತಾನೆ ಎಂದು ಅರಿತರೆ ಕೋಟ್ಯಾಂತರ ಸುಧಾಕರನ್‌ಗಳು ಕಾಣಸಿಗುತ್ತಾರೆ ಎಂಬುದು ಸತ್ಯ. v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.