ಒಬ್ಬ ನಿದ್ರಿಸುತ್ತಿದ್ದ. ನಿದ್ರೆಯಲ್ಲಿ ಕನಸು ಕಾಣುತ್ತಿದ್ದ. ಅವನದು ದೊಡ್ಡ ಸಾಮ್ರಾಜ್ಯ. ಅದು ಸಮುದ್ರದ ತಟದವರೆಗೆ ಹರಡಿತ್ತು. ಜನರೆಲ್ಲ ಅವನನ್ನು ಚಕ್ರವರ್ತಿಯ ರೀತಿಯಲ್ಲಿ ಗೌರವಿಸುತ್ತಿದ್ದರು. ಇಂಥ ವಿಶಾಲ ಸಾಮ್ರಾಜ್ಯವನ್ನು ಪಡೆದು ಒಳಗೊಳಗೇ ಆನಂದಿಸುತ್ತಿದ್ದ. ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುತ್ತಿದ್ದ. ಆಗ ಅವನ ರಾಜಕುಮಾರ ಏನೋ ಹೇಳಲು ಪ್ರಯತ್ನಿಸಿದಾಗ, ಜೋರಾಗಿ ಗದರಿದ. ಸ್ವಪ್ನ ಭಗ್ನಗೊಂಡಿತು. ಆ ವ್ಯಕ್ತಿ ನಿದ್ರೆಯಿಂದ ಎಚ್ಚರಗೊಂಡ. ನೋಡುತ್ತಾನೆ, ತಾನೊಂದು ಪುಟ್ಟ ಮನೆಯಲ್ಲಿ, ಚಾಪೆಯ ಮೇಲೆ ಮಲಗಿದ್ದಾನೆ. ಇಲ್ಲಿಯವರೆಗೆ ತಾನು ನೋಡುತ್ತಾ, ಅನುಭವಿಸುತ್ತಿದ್ದುದು ಬೇರೆಯಾಗಿತ್ತು. ಈಗ ತಾನು ನೋಡುತ್ತಿರುವುದು ಸಹ ಬೇರಯಾಗಿದೆ. ಸತ್ಯ ಯಾವುದು? ಯಾವುದನ್ನು ನಿದ್ದೆಯಲ್ಲಿ ನೋಡುತ್ತಿದ್ದನೋ ಅದು ಸತ್ಯವೊ? ಅಥವಾ ಈಗ ಎಚ್ಚರದಲ್ಲಿ ನೋಡುತ್ತಿರುವುದು ಸತ್ಯವೋ? ಆಧ್ಯಾತ್ಮಿಕ ಸಂತನ ಪ್ರಕಾರ ಸತ್ಯ ಹೀಗಿದೆ. ಯಾವುದನ್ನು ನಿದ್ರೆಯಲ್ಲಿ ನೋಡುತ್ತಿದ್ದನೋ ಅದು ಸತ್ಯವಲ್ಲ. ಯಾವುದನ್ನು ಎಚ್ಚರಗೊಂಡು ನೋಡುತ್ತಿರುವನೋ ಅದೂ ಸಹ ಸತ್ಯವಲ್ಲ. ನಿದ್ರೆಯಲ್ಲಿ ನೋಡಿದ್ದು ಸ್ವಪ್ನವಾಗಿತ್ತು. ಯಾವುದನ್ನು ಈಗ ನೋಡುತ್ತಿರುವನೋ ಅದೂ ಸಹ ಸ್ವಪ್ನವಾಗಿದೆ. ವ್ಯತ್ಯಾಸವಿಷ್ಟೇ ಒಂದು ಮುಚ್ಚಿದ ಕಣ್ಣಿನ ಸ್ವಪ್ನ, ಇನ್ನೊಂದು ತೆರೆದ ಕಣ್ಣಿನ ಸ್ವಪ್ನ. ಪ್ರತಿಯೊಬ್ಬ ಮನುಷ್ಯನೂ ಒಂದಲ್ಲೊಂದು ಪ್ರಕಾರದ ಸ್ವಪ್ನದಲ್ಲಿ ಜೀವಿಸುತ್ತಿದ್ದಾನೆ. ಅದೊಂದು ಭ್ರಮೆ. ಇದ್ದದ್ದನ್ನು ಇದ್ದ ಹಾಗೆ ತಿಳಿಯದೆ, ಬೇರೆಯಾಗಿ ತಿಳಿಯುವುದೇ ಭ್ರಮೆ. ಇಂಥ ಭ್ರಮೆಯನ್ನು ತುಂಡರಿಸಿದಾಗಲೇ ಯಥಾರ್ಥ ತಿಳಿಯುವುದು, ದುಃಖ ನಿವಾರಣೆಯಾಗುವುದು. ಹಗಲು-ರಾತ್ರಿ ಮನುಷ್ಯ ಸ್ವಪ್ನದಲ್ಲಿ ಕಳೆದು ಹೋಗಿರುತ್ತಾನೆ. ಆಗಾಗ ಏನೇನು ಕಲ್ಪನೆಗಳನ್ನು ಮಾಡುತ್ತಿರುತ್ತಾನೋ ಗೊತ್ತಾಗುವುದಿಲ್ಲ. ಎಲ್ಲಿಯವರೆಗೆ ಕನಸ್ಸಿನಲ್ಲಿ ಕಳೆದು ಹೋಗಿರುವೆವೋ ಅಲ್ಲಿಯವರೆಗೆ ಜೀವನದ ಸಾರಸತ್ವವನ್ನು ಉದ್ಘಾಟಿಸಲು ನಾವು ಸಮರ್ಥರಾಗುವುದಿಲ್ಲ. ಆತ್ಮತತ್ವವನ್ನು ಕೇಂದ್ರವಾಗಿಟ್ಟುಕೊಂಡು ಪ್ರಬೋಧಿಸುವ ಸಂತರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯೂ ನಾಲ್ಕು ಪ್ರಕಾರದ ಭ್ರಮೆಗಳಿಂದ ಮುಕ್ತನಾಗಬೇಕು.
1. ಸ್ವಪ್ನವನ್ನು ನಿಜವೆಂದು, ತನ್ನದೆಂದು ಭಾವಿಸುವುದು ಮೊದಲ ಭ್ರಮೆ. 2. ಆತ್ಮನಿಂದ ಬೇರೆಯಾದ ಶರೀರ, ಪತ್ನಿ, ಪುತ್ರರು, ಆಸ್ತಿ- ಪಾಸ್ತಿ ಮೊದಲಾದುವುಗಳನ್ನು (ಪರವನ್ನು) ತನ್ನವು ಎಂದು ಭಾವಿಸುವುದು ಎರಡನೆಯ ಭ್ರಮೆ. 3. ದೇಹ ಮೊದಲಾದುವು ಶಾಶ್ವತವಾದುವಲ್ಲ. ಇಂಥ ದೇಹದಲ್ಲಿ ಆತ್ಮನಿರುತ್ತಾನೆ. ಆದ್ದರಿಂದ ದೇಹವನ್ನೇ ಆತ್ಮವೆಂದು, ಇದು ಶಾಶ್ವತವೆಂದು ಭಾವಿಸುವುದು ಮೂರನೆಯ ಭ್ರಮೆ. 4. ಆತ್ಮನಿಂದ ಬೇರೆಯಾದ ಶರೀರಾದಿಗಳಲ್ಲಿ ಸುಖ ದೊರೆಯುವುದು ಎಂದು ಇಚ್ಛಿಸುವುದು ನಾಲ್ಕನೆಯ ಭ್ರಮೆ. ಈ ಭ್ರಮೆಗಳನ್ನು ಬುದ್ಧಿಪೂರ್ವಕವಾಗಿ ಕತ್ತರಿಸಬೇಕು. ಹಾಗೆ ಮಾಡದಿದ್ದರೆ ಯಥಾರ್ಥ ಸತ್ಯ ತಿಳಿಯುವುದಿಲ್ಲ. ಭ್ರಮೆಗಳನ್ನು ಛೇದಿಸುವ ಮೊದಲು ಭ್ರಮೆಗಳ ಸ್ವಭಾವವನ್ನು ಹಾಗೂ ಆತ್ಮನ ಸ್ವರೂಪವನ್ನು ಚೆನ್ನಾಗಿ ತಿಳಿಯುವುದು ಆವಶ್ಯಕ ಅತ್ತ ನಮ್ಮ ಗಮನ ಹರಿಸಿ, ದುಃಖದಿಂದ ಮುಕ್ತರಾಗೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.