ADVERTISEMENT

ಮೋದಿ ಹೀಗೆ ಮಾಡುತ್ತಾರೆಂಬುದೇ ಆಶ್ಚರ್ಯ!

​ಪ್ರಜಾವಾಣಿ ವಾರ್ತೆ
Published 22 ಜೂನ್ 2015, 14:23 IST
Last Updated 22 ಜೂನ್ 2015, 14:23 IST

ಭ್ರಷ್ಟಾಚಾರವೇ ಪ್ರಮುಖ  ವಿಷಯವಾಗಿದ್ದ 2014ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ನರೇಂದ್ರ ಮೋದಿ ಅವರು, ‘ನಾನು ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ’ ಎಂಬ ಭರವಸೆ ನೀಡಿದರು. ತಾವು ವೈಯಕ್ತಿಕವಾಗಿ ಭ್ರಷ್ಟಾಚಾರ ಎಸಗುವುದಿಲ್ಲ, ಭ್ರಷ್ಟಾಚಾರ ನಡೆಸಲು ತಮ್ಮ ಸುತ್ತ ಇರುವವರಿಗೂ ಬಿಡುವುದಿಲ್ಲ ಎಂಬುದು ಅವರ ಮಾತಿನ ಅರ್ಥ.

ಭ್ರಷ್ಟಾಚಾರದ ವಿಚಾರದಲ್ಲಿ ಮೋದಿ ಅವರು ವೈಯಕ್ತಿಕ ನೆಲೆಯಲ್ಲಿ ನಿಷ್ಕಳಂಕಿತ ವ್ಯಕ್ತಿ ಎಂಬುದರಲ್ಲಿ ನನಗೆ ಅನುಮಾನವೇ ಇಲ್ಲ. ನಾನು ಮೋದಿ ಅವರನ್ನು ವೈಯಕ್ತಿಕವಾಗಿ ಬಲ್ಲೆ. ಯಾರಿಗೋ ಸಹಾಯ ಮಾಡಿಕೊಟ್ಟಿದ್ದಕ್ಕೆ ಪ್ರತಿಯಾಗಿ ಹಣ ಪಡೆಯುವ ವ್ಯಕ್ತಿ ಅವರಲ್ಲ. ನಿಯಮಗಳನ್ನು ಮುರಿದು ಸಹಾಯ ಮಾಡಿ, ಹಣ ಮಾಡಿಕೊಳ್ಳುವಂಥವರೂ ಅವರಲ್ಲ.

ಮೋದಿ ಅವರ ಬಗ್ಗೆ ಇಷ್ಟು ಖಚಿತವಾಗಿ ಮಾತನಾಡುವ ನಾನು ಪ್ರಧಾನಿ ಸ್ಥಾನದಲ್ಲಿ ಇದ್ದ ಇತರರ ಬಗ್ಗೆಯೂ ಹೇಳಬಲ್ಲೆ. ಮನಮೋಹನ್ ಸಿಂಗ್ ಅವರು ಭ್ರಷ್ಟರಾಗಿದ್ದರು ಎಂದು ನನಗನಿಸುವುದಿಲ್ಲ. ಸಿಂಗ್ ವಿರುದ್ಧ ನ್ಯಾಯಾಲಯದಲ್ಲಿ ಒಂದು ಪ್ರಕರಣ ಬಾಕಿ ಇದೆಯಾದರೂ, ಅವರು ಪ್ರಾಮಾಣಿಕರು ಎಂಬುದನ್ನು ವಿರೋಧಿಗಳೂ ಒಪ್ಪುತ್ತಾರೆ.

ಅಟಲ್ ಬಿಹಾರಿ ವಾಜಪೇಯಿ, ಐ.ಕೆ. ಗುಜ್ರಾಲ್, ಜವಾಹರಲಾಲ್ ನೆಹರೂ, ಗುಲ್ಜಾರಿಲಾಲ್ ನಂದಾ ಅವರ ವಿರುದ್ಧವೂ ವೈಯಕ್ತಿಕವಾಗಿ ಭ್ರಷ್ಟಾಚಾರದ ಯಾವುದೇ ಆರೋಪಗಳು ಇಲ್ಲ. ಭ್ರಷ್ಟಾಚಾರ ರಹಿತ ರಾಜಕಾರಣದ ವಿಚಾರದಲ್ಲಿ ಇವರೆಲ್ಲ ಮೇಲ್ಪಂಕ್ತಿಯ ಜೀವನ ಸಾಗಿಸಿದವರು.

ಹಾಗಾಗಿ, ಮೋದಿ ಅವರು ಹೇಳಿದ ‘ನಾನು ತಿನ್ನುವುದಿಲ್ಲ’ ಮಾತು ಹೆಚ್ಚಿನ ಪರಿಣಾಮ ಉಂಟು ಮಾಡುವುದಿಲ್ಲ. ಏಕೆಂದರೆ ಹಾಗೆ ಬದುಕಿದ ಪ್ರಧಾನಿಗಳನ್ನು ದೇಶ ಕಂಡಿದೆ. ಆದರೆ, ಮೋದಿ ಹೇಳಿದ ‘ಬೇರೆಯವರಿಗೂ ತಿನ್ನಲು ಬಿಡಲಾರೆ’ ಎಂಬ ಮಾತು ಹೆಚ್ಚು ಕುತೂಹಲಕರ. ಈ ಮಾತಿಗೆ ಎರಡು ಮುಖಗಳಿವೆ. ಮೊದಲ ಮುಖ- ಮೋದಿಯವರ ಮಾತು ಜನ ದಿನನಿತ್ಯ ಅನುಭವಿಸುವ ಭ್ರಷ್ಟಾಚಾರ  ಉದ್ದೇಶಿಸಿ ಆಡಿದ್ದು.  ಚಾಲನಾ ಪರವಾನಗಿ ಪಡೆಯಲು, ಜಮೀನು ದಾಖಲೆ ಪಡೆಯಲು ಜನ ಕೊಡುವ ಲಂಚ ಇದರಲ್ಲಿ ಸೇರಿದೆ. ಅನಗತ್ಯ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಜನರೇ ಸ್ವಯಂಪ್ರೇರಣೆಯಿಂದ ಲಂಚ ಕೊಡುವುದೂ ಇದೆ. ಹೀಗೆ ಲಂಚ ಕೊಡುವುದು ನಮ್ಮ ಸಂಸ್ಕೃತಿಯಲ್ಲೇ ಸೇರಿಹೋಗಿದೆ. ಆಡಳಿತ ಮತ್ತು ಕಾನೂನುಗಳ ಮೂಲಕ ಇದನ್ನು ತೊಡೆದುಹಾಕುವುದು ಕಷ್ಟದ ಕೆಲಸ.

ನಮ್ಮ ಸಂಸ್ಕೃತಿಯಲ್ಲೇ ಸೇರಿಹೋಗಿರುವ, ನಿತ್ಯ ಜೀವನದಲ್ಲಿ ಜನ ಎದುರಿಸುವ ಭ್ರಷ್ಟಾಚಾರವನ್ನು ಪ್ರಧಾನಿಯೊಬ್ಬರೇ ತೊಡೆದುಹಾಕಬೇಕು ಎಂದು ನಿರೀಕ್ಷಿಸುವುದು ಸಾಧುವಲ್ಲ. ಅಲ್ಲದೆ, ಯಾವುದೇ ನಾಯಕ ತಾನು ಇಂಥ ಭ್ರಷ್ಟಾಚಾರವನ್ನು ಇಲ್ಲವಾಗಿಸುವೆ ಎಂದು ಹೇಳಿಕೊಳ್ಳುವುದೂ ವಿವೇಕಯುತವಲ್ಲ.

ಈಗ ಮೋದಿ ಅವರ, ‘ನಾನು ಬೇರೆಯವರಿಗೂ ತಿನ್ನಲು ಬಿಡಲಾರೆ’ ಎಂಬ ಮಾತನ್ನು ಗಮನಿಸೋಣ. ತಮ್ಮ ಸಂಪುಟದ ಇತರ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಲು ಅವಕಾಶ ನೀಡುವುದಿಲ್ಲ ಎಂಬುದು ಮೋದಿ ಅವರ ಮಾತಿನ ಅರ್ಥ ಎಂದು ಭಾವಿಸೋಣ.

‘ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ’ ಎನ್ನುವ ಮಾತನ್ನು ಕೃತಿಯಲ್ಲಿ ತೋರಲು ಮೋದಿ ಅವರಿಗಿಂತ ಮೊದಲು ದೇಶ ಆಳಿದ ಹಲವು ಪ್ರಧಾನಿಗಳು ವಿಫಲರಾದರು. ತಮ್ಮ ಸಂಪುಟದ ಹಲವು ಸದಸ್ಯರ ಚಟುವಟಿಕೆಗಳ ಬಗ್ಗೆ ಮನಮೋಹನ್ ಸಿಂಗ್ ಅವರಿಗೆ ಹೆಚ್ಚಿನ ನಿಯಂತ್ರಣ ಇರಲಿಲ್ಲ. ಈ ನಿಟ್ಟಿನಲ್ಲಿ ವಾಜಪೇಯಿ ಕೂಡ ಸಾಕಷ್ಟು ಹೆಣಗಿದರು. ಸಿಂಗ್ ಮತ್ತು ವಾಜಪೇಯಿ ಪ್ರತಿನಿಧಿಸುತ್ತಿದ್ದ ಪಕ್ಷಗಳಿಗೆ ಬಹುಮತ ಇಲ್ಲವಾಗಿದ್ದ ಕಾರಣ, ಮಿತ್ರಪಕ್ಷಗಳ ಸಚಿವರು ಶಿಸ್ತಿನಿಂದ ಇರುವಂತೆ ನೋಡಿಕೊಳ್ಳಲು ಆಗಲಿಲ್ಲ. ಹಾಗಂತ, ಬಹುಮತ ಇರಲಿಲ್ಲ ಎಂಬುದು ಅಶಿಸ್ತಿಗೆ ನೆಪ ಆಗಬಾರದು.

ಸಚಿವರೊಬ್ಬರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಾಗ ಮೋದಿ ಅವರು ಏನು ಮಾಡಿಯಾರು? ತಾನೇನು ಮಾಡಬಲ್ಲೆ ಎಂಬುದನ್ನು ತೋರಿಸುವ ಅವಕಾಶ ಮೋದಿ ಅವರಿಗೆ ಈ ತಿಂಗಳಲ್ಲಿ ದೊರೆತಿದೆ. ಆದರೆ, ಅವರು ಇದುವರೆಗೆ ಏನೂ ಮಾಡಿಲ್ಲ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಮೋದಿ ಅವರು ಸಮರ್ಥಿಸಿಕೊಂಡಿಲ್ಲ. ಆದರೆ, ‘ಬೇರೆಯವರಿಗೆ ತಿನ್ನಲು ಬಿಡಲಾರೆ’ ಎಂಬ ಭರವಸೆ ಏನಾಯಿತು ಎನ್ನುವ ಬಗ್ಗೆ ಮೋದಿ ಅವರು ದೇಶಕ್ಕೆ ವಿವರಣೆ ನೀಡಿಲ್ಲ.

ಸುಷ್ಮಾ ಸ್ವರಾಜ್ ಮತ್ತು ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಎಸಗಿದ ಕೃತ್ಯ ‘ಒಂದು ಸಣ್ಣ ಸಂಗತಿ’ ಎಂದು ಪಕ್ಕಕ್ಕೆ ತಳ್ಳಿಬಿಡುವುದು ಸರಿಯಲ್ಲ ಎಂಬುದು ನನ್ನ ಅನಿಸಿಕೆ (ಇಂಡಿಯನ್ ಪ್ರೀಮಿಯರ್ ಲೀಗ್ ಸಂಸ್ಥಾಪಕ ಮತ್ತು ದೇಶಭ್ರಷ್ಟ ಲಲಿತ್ ಮೋದಿ ಅವರಿಗೆ ಸಹಾಯ ಮಾಡಿದ ಆರೋಪ ಇವರಿಬ್ಬರ ಮೇಲಿದೆ). ಇಂಥ ಹಗರಣ ನಡೆಸಿಯೂ ಹುದ್ದೆಯಲ್ಲಿ ಮುಂದುವರಿದ ವಿದೇಶಾಂಗ ಸಚಿವೆ, ಮುಖ್ಯಮಂತ್ರಿ ಯಾವುದೇ ನಾಗರಿಕ ಸಮಾಜದಲ್ಲಿ ಇಲ್ಲ.

ಸಚಿವೆ ಸುಷ್ಮಾ, ಲಲಿತ್ ಮೋದಿ ವಿಚಾರದಲ್ಲಿ ನೇರ ಸಹಾಯ ಮಾಡಿರುವ ಬಗ್ಗೆ, ಒಪ್ಪಲಾಗದ ರೀತಿಯಲ್ಲಿ ನೆರವು ನೀಡಿರುವ ಬಗ್ಗೆ ಪ್ರಶ್ನಿಸಲಾಗದ ಆರೋಪಗಳಿವೆ. ಲಲಿತ್ ಮೋದಿ ಅವರಿಗೆ ನೆರವು ನೀಡಿದ ವಿಚಾರ, ಅಲ್ಲಿ ಕೇಳಿಬಂದ ಹಣದ ವಿಚಾರವನ್ನು ಏನೋ ಒಂದು ಸಣ್ಣ ಸಂಗತಿ ಎಂದು ತಳ್ಳಿ ಹಾಕಲು ಬರುವುದಿಲ್ಲ.

ಸುಷ್ಮಾ ಅವರು ಲಲಿತ್ ಮೋದಿ ಅವರಿಂದ ಪಡೆದ ಸಹಾಯಕ್ಕೆ ಪ್ರತಿಯಾಗಿ ಹಣದ ವ್ಯವಹಾರ ನಡೆದ ಬಗ್ಗೆ ಆರೋಪ ಇಲ್ಲದ ಕಾರಣ, ಸುಷ್ಮಾ ಸಚಿವೆಯಾಗಿ ಮುಂದುವರಿಯಬಹುದು (ಸುಷ್ಮಾ ಅವರ ಸಂಬಂಧಿಕರೊಬ್ಬರಿಗೆ ಕಾಲೇಜೊಂದರಲ್ಲಿ ಪ್ರವೇಶ ಸಿಗುವಲ್ಲಿ ಲಲಿತ್ ಮೋದಿ ಸಹಾಯ ಮಾಡಿದ್ದರು. ಸುಷ್ಮಾ ಅವರ ಪತಿ, ಲಲಿತ್ ಅವರ ಖಾಸಗಿ ವಕೀಲರು). ಹೀಗಾಗಿ ಲಲಿತ್ ಮೋದಿಯನ್ನು ಹಿಂದಕ್ಕೆ ಕರೆತರಲು ದೇಶ ಯತ್ನಿಸುತ್ತಿದೆ ಎಂದು ಹೇಳಿಕೊಳ್ಳುತ್ತಲೇ, ಸುಷ್ಮಾ ಅವರು ಲಲಿತ್ ಮೋದಿ ಅವರಿಗೆ ಪ್ರಯಾಣದ ದಾಖಲೆಗಳನ್ನು ಪಡೆಯಲು ನೆರವಾಗಿದ್ದು ದೊಡ್ಡ ಅಪರಾಧ ಅಲ್ಲ ಎಂಬುದು ಅವರ ಪರ ಇರುವ ಒಂದು ವಾದ.

ಈ ವಿಚಾರದ ಬಗ್ಗೆ ಆಲೋಚಿಸುವಾಗ, ಪ್ರಧಾನಿ ಮೋದಿ ಅವರು ನೀಡಿದ ಭರವಸೆಯ ಬಗ್ಗೆಯೂ ಆಲೋಚಿಸಬೇಕು ಎಂಬುದು ನನ್ನ ನಿಲುವು. ತಮ್ಮ ಸುತ್ತ ಭ್ರಷ್ಟಾಚಾರವೇ ಇರುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಹಾಗಾದರೆ, ಭ್ರಷ್ಟಾಚಾರ ಅಂದರೆ ಏನು? ಲಂಚ ಪಡೆಯುವುದೇ ಭ್ರಷ್ಟಾಚಾರ ಎಂದು ನಾವು ಬಹುಪಾಲು ಸಂದರ್ಭಗಳಲ್ಲಿ ನಂಬುತ್ತೇವೆ, ಅದು ಒಂದರ್ಥದಲ್ಲಿ ನಿಜವೂ ಹೌದು. ಆದರೆ, ಭ್ರಷ್ಟಾಚಾರ ನಡೆದಾಗ ಒಂದು ಸಂಸ್ಥೆ ಭ್ರಷ್ಟಗೊಳ್ಳುತ್ತದೆ. ಭ್ರಷ್ಟಾಚಾರವೆಂಬ ಪದದ ನಿಜಾರ್ಥ ಇದು.

ಕೇಂದ್ರ ಸಚಿವೆ ಮತ್ತು ರಾಜಸ್ತಾನದ ಮುಖ್ಯಮಂತ್ರಿ ತಾವು ಪ್ರತಿನಿಧಿಸುವ ಸಂಸ್ಥೆಯನ್ನು ಭ್ರಷ್ಟಗೊಳಿಸಿದ ಆರೋಪ ಎದುರಿಸುತ್ತಿದ್ದಾರೆ. ಅವರು ತಮ್ಮ ಸ್ಥಾನಗಳಲ್ಲಿ ಮುಂದುವರಿಯಲು ಅವಕಾಶ ನೀಡಿದರೆ ಪ್ರಧಾನಿಯವರು ನೀಡಿದ ಭರವಸೆ ದೊಡ್ಡಮಟ್ಟಿಗೆ ಹುಸಿಯಾಗುತ್ತದೆ. ಕಳಂಕರಹಿತ ವ್ಯಕ್ತಿತ್ವ ಹೊಂದಿದ್ದು,   ಅಂದುಕೊಂಡಿದ್ದನ್ನು  ಮಾತಿನಲ್ಲಿ ಆಡಿ ತೋರಿಸುವ ಪ್ರಧಾನಿ ಮೋದಿ ಅವರು ಸಚಿವೆ ಮತ್ತು ಮುಖ್ಯಮಂತ್ರಿಯನ್ನು ರಕ್ಷಿಸುತ್ತಾರೆ ಎಂಬುದೇ ಆಶ್ಚರ್ಯ ಮೂಡಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.