ಜನಜೀವನದಲ್ಲಿ ಸ್ಪ್ರಶ್ಯಾಸ್ಪ್ರಶ್ಯತೆ ಮೇಲುಕೀಳು, ವರ್ಣ-ವರ್ಗ-ಲಿಂಗಭೇದಗಳು, ಅಂಧಶ್ರದ್ಧೆ, ಅನೀತಿ-ಅತ್ಯಾಚಾರಗಳು ತಾಂಡವಾಡುತ್ತಿರುವಾಗ, ಆಡಳಿತಶಾಹಿ ಮತ್ತು ಪುರೋಹಿತಶಾಹಿಗಳು ಒಂದಾಗಿ ಸಮಾಜವನ್ನು ಕಂಗೆಡಿಸಿರುವಾಗ ಮಾನವ ಅಸ್ಮಿತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಹೊಸ ಧರ್ಮದ ಚಿಂತನೆ ಮಾಡಿದವರು ಬಸವಣ್ಣನವರು.
ಧರ್ಮರಹಿತವಾದ ಮಾನವ ಸಮಾಜವನ್ನು ಕಲ್ಪಿಸಿಕೊಳ್ಳುವುದು ಕಷ್ಟದ ವಿಷಯವಾದರೂ, ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ತಪ್ಪಿಸುವುದಕ್ಕಾಗಿ ಪರ್ಯಾಯ ಮಾರ್ಗವನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ. ಮಾನವ ದೌರ್ಬಲ್ಯದಿಂದ ಒಂದು ಧರ್ಮ ಸಂಕುಚಿತಗೊಂಡಾಗ ಹೊಸ ಧರ್ಮದ ಅಥವಾ ಹೊಸ ವಿಚಾರಧಾರೆಯ ಆವಶ್ಯಕತೆ ಉಂಟಾಗುವುದು ಸಹಜ. ಇಂಥ ಸಂದರ್ಭದಲ್ಲಿ ಮನುಷ್ಯನ ದೇಹ, ಮನಸ್ಸು, ಬುದ್ಧಿ ಮತ್ತು ಭಾವನೆಗಳ ಬೆಳವಣಿಗೆಗೆ ಪೂರಕವಾಗಿರುವ, ಇಹಪರಗಳಲ್ಲಿ ಸಮನ್ವಯ ಸಾಧಿಸಲು ಸಹಕಾರಿಯಾಗಿರುವ ಲಿಂಗಾಯತ ಧರ್ಮವನ್ನು ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿರುವುದು ಇಂದು ಇತಿಹಾಸ.
ಆ ಮೂಲಕ ಅವರು ಜಾತಿಭೇದ, ವರ್ಣಭೇದ, ವರ್ಗಭೇದ ಹಾಗೂ ಲಿಂಗ ಭೇದಗಳನ್ನು ಜನಜೀವನದಿಂದ ತೊಡೆದುಹಾಕಿದುದಲ್ಲದೆ ಅಸ್ಪ್ರಶ್ಯತೆ ಎಂಬ ಅನಿಷ್ಟದಿಂದ ಸಮಾಜವನ್ನು ಮುಕ್ತಗೊಳಿಸಿದರು. ಧರ್ಮದ ಹೆಸರಿನಲ್ಲಿ ಶೋಷಣೆ ನಡೆಸುತ್ತಿದ್ದ ಪುರೋಹಿತಶಾಹಿ ವ್ಯವಸ್ಥೆಗೆ ಮತ್ತು ದೇವಾಲಯಗಳ ದುರುಪಯೋಗಕ್ಕೆ ಕೊಡಲಿ ಏಟು ನೀಡಿದರು. ಸಾಮಾಜಿಕ ಸಮತೆ ಹಾಗು ಆಧ್ಯಾತ್ಮಿಕ ಸಾಧನೆಯ ಗುರಿಯೆಡೆಗೆ ಸಾಗುವ ಮಾರ್ಗವನ್ನು ಪ್ರಶಸ್ತಗೊಳಿಸಿದರು.
ಧರ್ಮವು ಕೇವಲ ಪೂಜೆ-ಪುನಸ್ಕಾರಗಳೆಂಬ ಕರ್ಮಕಾಂಡಕ್ಕೆ ಸಿಲುಕಿದರೆ ಅರ್ಥಹೀನವೆನಿಸುತ್ತದೆ. ಆದ್ದರಿಂದ ಯಾವುದೇ ಧರ್ಮವು ತನ್ನ ಅರ್ಥವಂತಿಕೆಯನ್ನು ಉಳಿಸಿಕೊಳ್ಳಲು ಉದಾತ್ತಜೀವನ ಮೌಲ್ಯಗಳ ಚಾರಿತ್ರಿಕ ಸಂಸ್ಕೃತಿ ಮತ್ತು ಅಧ್ಯಾತ್ಮ ಸಾಧನೆಯನ್ನು ಅಳವಡಿಸಿಕೊಳ್ಳಲು ಬೇಕಾದ ಸಂವಿಧಾನವಾಗಬೇಕಾಗುತ್ತದೆ. ಮಾನವನ ಸಂಕೀರ್ಣ ಬದುಕಿಗೆ ಶಾಂತಿಯ ಸಂಜೀವಿನಿಯಾಗಬೇಕಾಗುತ್ತದೆ. ಹಾಗೆಯೇ ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಸರಳ ಸುಂದರ ಮಾಧ್ಯಮವೂ ಆಗಬೇಕಾಗುತ್ತದೆ. ಸಮತೆ, ದಯೆ, ಪ್ರೇಮ ಹಾಗು ಶ್ರಮಸಂಸ್ಕೃತಿಯ ನೆಲೆಗಟ್ಟಿನಲ್ಲಿ ಹುಟ್ಟಿಕೊಂಡಿರುವ ಲಿಂಗಾಯತ ಧರ್ಮವು ಮಹಿಳೆಯರಾದಿಯಾಗಿ ಸಮಾಜದ ಅತ್ಯಂತ ಕೆಳಸ್ತರದ ಜನಾಂಗಕ್ಕೂ ಸಮಾನತೆ ಹಾಗು ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿರುವುದು ಜಾಗತಿಕ ಇತಿಹಾಸದಲ್ಲಿ ವಿನೂತನವಾದುದು.
ಬಸವಣ್ಣನವರ ಮಾನವೀಯ ಕಳಕಳಿ, ಸದಸದ್ವಿವೇಕ ಹಾಗು ಅಂತಃಪ್ರೇರಣೆಗಳು ಕಾರಣವಾಗಿ ಸಮಾಜದ ಎಲ್ಲ ವರ್ಗ ಹಾಗು ದೇಶದ ವಿವಿಧ ಭಾಗಗಳ ಜನರು ಸ್ವಯಂಪ್ರೇರಿತರಾಗಿ ಕಲ್ಯಾಣದಲ್ಲಿ ಒಟ್ಟುಗೂಡಿದರು, ಅನುಭವ ಮಂಟಪದಲ್ಲಿ ಚಿಂತನೆ ನಡೆಸಿದರು. ಇದರ ಪರಿಣಾಮವಾಗಿ ಕಲ್ಯಾಣವು ಹಿಂಸಾರಹಿತ ಕ್ರಾಂತಿಯ ಕೇಂದ್ರವಾಯಿತು. ಹಾಗೆಯೇ ಅನುಭವ ಮಂಟಪವು ಸಾಮಾಜಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಏಳ್ಗೆಯ ಪ್ರಯೋಗಶಾಲೆ ಎನಿಸಿತು.
ಸಮಾನತೆಯ ಜೊತೆಗೆ ವ್ಯಕ್ತಿಯು ತನ್ನ ಹಾಗು ತನ್ನ ಪರಿವಾರದ ಉದರ ಪೋಷಣೆಗಾಗಿ ಕಾಯಕವನ್ನು ಮಾಡಲೇಬೇಕೆಂಬ, ಕಾಯಕದ ಉತ್ಪತ್ತಿಯನ್ನು ಸಮಾಜ ಕಲ್ಯಾಣಕ್ಕೆ ವಿನಿಯೋಗಿಸಬೇಕೆಂಬ ಈ ಧರ್ಮದ ಇತರ ಮೌಲ್ಯಗಳು ಜಿಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯನ್ನು ಹೊಸ ಕಾಂತಿಯಿಂದ ಕಂಗೊಳಿಸುವಂತೆ ಮಾಡಿದವು. ಸಂಸಾರದಲ್ಲಿದ್ದುಕೊಂಡು ಸದ್ಗತಿಯನ್ನು ಸಾಧಿಸಬಹುದೆಂಬ ಸಂದೇಶವನ್ನು ಜಗತ್ತಿಗೆ ಸಾರಿ ಹೇಳಿದ ನವವೋನ್ಮೇಷಶಾಲಿಯಾದ ಧರ್ಮವಿದು.
ನಯ-ವಿನಯ, ಸ್ನೇಹ, ಸೌಜನ್ಯ, ಪ್ರೀತಿ ಮತ್ತು ಸೇವೆಗಳೇ ಬದುಕಿಗೆ ಮುಖ್ಯ ಎನ್ನುವ, ನಿತ್ಯ ನೂತನ ಚಿಂತನೆಗೆ ಹೆಸರಾದ ಶರಣರ ವಚನಗಳು ಧರ್ಮದ ತಳಹದಿಯ ಮೇಲೆ ತಾತ್ವಿಕ ಸೌಧವನ್ನು ನಿರ್ಮಿಸಿವೆ. ಆದ್ದರಿಂದ ಅವು ಜಾಗತಿಕ ಧರ್ಮಗಳ ಸಾಲಿನಲ್ಲಿ ನಿಲ್ಲಬಲ್ಲ ಲಿಂಗಾಯತದ ಆಧಾರ ಸ್ತಂಭಗಳಾಗಿರುವುದಲ್ಲದೆ ಸಂವಿಧಾನವೆನಿಸಿವೆ. ಇದೀಗ ಈ ಧರ್ಮಕ್ಕೆ ಕರ್ನಾಟಕ ಸರಕಾರ ಸ್ವತಂತ್ರ ಧರ್ಮವೆಂಬ ಮಾನ್ಯತೆ ನೀಡಿರುವುದು ಐತಿಹಾಸಿಕ ನಿರ್ಣಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.