ADVERTISEMENT

ವೃದ್ಧಾಪ್ಯವನ್ನು ಸಾರ್ಥಕಗೊಳಿಸು

ಡಾ.ಎಂ.ಎ ಜಯಚಂದ್ರ
Published 10 ಮೇ 2018, 20:22 IST
Last Updated 10 ಮೇ 2018, 20:22 IST
ಡಾ. ಎಂ.ಎ.ಜಯಚಂದ್ರ
ಡಾ. ಎಂ.ಎ.ಜಯಚಂದ್ರ   

ಮುದಿತನದ ಬದುಕು ತುಂಬ ವಿಚಿತ್ರವಾದುದು. ಆಗ ದೇಹದಲ್ಲಿ ಸತ್ವವಿರುವುದಿಲ್ಲ, ಆದರೆ ಆಂತರ್ಯದಲ್ಲಿ ಮಾತ್ರ ತೀವ್ರ ಇಚ್ಛೆಗಳಿರುತ್ತವೆ. ಆಗ ಹಲ್ಲುಗಳು ಸಡಿಲಗೊಂಡು ಉದುರುತ್ತವೆ, (ಆಗ ಕೃತಕ ದಂತ ಧರಿಸುತ್ತೇವೆ); ಕಣ್ಣಿನ ದೃಷ್ಟಿ ಮಂದವಾಗುತ್ತದೆ (ಕನ್ನಡಕ ಧರಿಸುತ್ತೇವೆ); ಸರಿಯಾಗಿ ಕಿವಿ ಕೇಳಿಸದಂತಾಗುತ್ತದೆ (ಶ್ರವಣ ಸಾಧನ ಬಳಸುತ್ತೇವೆ); ನಡಿಗೆ ನಿಧಾನವಾಗುತ್ತದೆ (ವಾಹನ ಆಶ್ರಯಿಸುತ್ತೇವೆ); ಅನೇಕ ರೋಗಗಳು ಅಮರಿಕೊಳ್ಳುತ್ತವೆ (ಆಗ ಅನೇಕ ಔಷಧಗಳನ್ನು ಆಹಾರದಂತೆ ಸೇವಿಸುತ್ತೇವೆ). ಹೀಗೆ ಅನೇಕ ದೈಹಿಕ ದೌರ್ಬಲ್ಯಗಳಿಗೆ, ಅನೇಕ ಹೊಸಹೊಸ ಪರಿಹಾರ ಹುಡುಕಿಕೊಂಡಿದ್ದೇವೆ.

ಆದರೂ ಮೃತ್ಯು ಖಂಡಿತವಾಗಿ ಹತ್ತಿರ ಹತ್ತಿರ ಬರುತ್ತಿದೆ ಅನಿಸುವುದು. ಆಗ ಕೌಟುಂಬಿಕ, ಆರ್ಥಿಕ, ಆಧ್ಯಾತ್ಮಿಕ ಶಲಾಕೆಗಳು ತಿವಿಯ ತೊಡಗುತ್ತವೆ. ಈ ಸಂಕಟಕ್ಕೆ ಮಹಾಕಲಿಯಾಗಲಿ, ಮಹಾಕವಿಯಾಗಲಿ, ಮಹಾರಾಜನಾಗಲಿ ಹೊರತಾದವನಲ್ಲ. ಎಲ್ಲರೂ ಶಾಂತಿ, ನೆಮ್ಮದಿಗಾಗಿ ಹಾತೊರೆಯುತ್ತಾರೆ. ಪ್ರಾಚೀನ ಕಾಲದಲ್ಲಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ ಎಂಬ ನಾಲ್ಕು ಆಶ್ರಮಗಳಲ್ಲಿ ಇಡೀ ಜೀವನವನ್ನು ಕಂಡಿದ್ದಾರೆ.

ಮನೋವಿಜ್ಞಾನಿಗಳು 14 ವರ್ಷಗಳ 4 ಘಟಕಗಳ ಮೂಲಕ ಮನುಷ್ಯನ ಮನೋವಿಕಾಸ ಹಾಗೂ ವರ್ತನೆಯನ್ನು ವಿವರಿಸಲು ಪ್ರಯತ್ನಿಸಿದ್ದಾರೆ. ಇದೇ ಮಾದರಿಯಲ್ಲಿ ಮಾನವನ ಬದುಕನ್ನು ಬಾಲ್ಯಾವಸ್ಥೆ, ತಾರುಣ್ಯಾವಸ್ಥೆ, ಪ್ರೌಢಾವಸ್ಥೆ ಹಾಗೂ ವೃದ್ಧಾವಸ್ಥೆ ಎಂದು ನಾಲ್ಕು ಭಾಗ ಮಾಡಿಕೊಳ್ಳಬಹುದು.

ADVERTISEMENT

ಬಾಲ್ಯಾವಸ್ಥೆಯಲ್ಲಿ ಜ್ಞಾನಾರ್ಜನೆ, ತಾರುಣ್ಯದಲ್ಲಿ ಧನಾರ್ಜನೆ, ಪ್ರೌಢಾವಸ್ಥೆಯಲ್ಲಿ ಕೀರ್ತಿಯ ಅರ್ಜನೆ, ವೃದ್ಧಾವಸ್ಥೆಯಲ್ಲಿ ಪುಣ್ಯಾರ್ಜನೆ ಮುಖ್ಯವಾಗುವುದು. ವೃದ್ಧಾಪ್ಯದಲ್ಲಿ ಸಾವಿನ ಆಲೋಚನೆ/ಇಚ್ಛೆ ತೀವ್ರವಾಗುವುದು. ಆಗ ಸಾಧಕನಾದವನು ಅಹಂಕಾರ, ಅಧಿಕಾರ, ಅಂಗೀಕಾರ ಹಾಗೂ ಅಲಂಕಾರದಿಂದ ಶೂನ್ಯನಾಗಬೇಕು. ಸಾಮರ್ಥ್ಯವಿದ್ದರೆ ಎಲ್ಲವನ್ನು ತೊರೆದು ತ್ಯಾಗಿ ಆಗಬೇಕು. ಅದು ಸಾಧ್ಯವಿಲ್ಲದಿದ್ದಾಗ ತನ್ನ ಕೌಟುಂಬಿಕ, ವ್ಯಾವಹಾರಿಕ ಜವಾಬ್ದಾರಿಗಳನ್ನು ತನ್ನ ಸಂತಾನಕ್ಕೆ ವಹಿಸಿ, ಅವರಿಗೆ ಸೇರಬೇಕಾದ ಆಸ್ತಿ ಪಾಸ್ತಿಯನ್ನು ಕೊಟ್ಟು, ತಾನು ಪರರ ಸೇವೆಯಿಂದ ನಿವೃತ್ತನಾಗಬೇಕು. ಆದರೆ ಸ್ವ-ಸೇವೆಯಲ್ಲಿ ಅಂದರೆ ಆತ್ಮ ಕಲ್ಯಾಣದಲ್ಲಿ ಪ್ರವೃತ್ತನಾಗಬೇಕು.

ಇದಕ್ಕಾಗಿ ಮಕ್ಕಳ ಮೇಲೆ ಅವಲಂಬಿತವಾಗದ ರೀತಿಯಲ್ಲಿ ಜೀವನ ನಿರ್ವಹಣೆಗೆ ಅಗತ್ಯವಾದ ನಿಯತವಾದ ಆದಾಯ ದೊರೆಯುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಆಗ ತನ್ನ ಶಕ್ತಿ ಹಾಗೂ ಸಮಯವನ್ನು ಎಷ್ಟು ಸಾಧ್ಯವೋ ಅಷ್ಟು ವ್ರತ, ಸಂಯಮದಲ್ಲಿ ಉಪಯೋಗಿಸಬೇಕು. ಚಿತ್ತವನ್ನು ಧರ್ಮಧ್ಯಾನದಲ್ಲಿ ತೊಡಗಿಸಬೇಕು. ಉಳಿದ ಸಂಪತ್ತನ್ನು ದಾನಮಾಡಿ ಪುಣ್ಯಕ್ಕೆ ಪರಿವರ್ತಸಿಕೊಳ್ಳಲು ಪ್ರಯತ್ನಿಸಬೇಕು. ಆಗ ಮಾತ್ರ ವೃದ್ಧಾಪ್ಯ ಸಾರ್ಥಕವಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.