ADVERTISEMENT

ಸತ್ಯ-ಅಹಿಂಸೆ; ನುಡಿ-ನಡೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 19:30 IST
Last Updated 3 ಜೂನ್ 2018, 19:30 IST

ಆಡಿದ ಮಾತಿನಂತೆ ನಡೆಯುವುದು ಅಷ್ಟು ಸುಲಭವಲ್ಲ. ಇಂಥ ವಿಷಯದಲ್ಲಿ ಯಾರು ಏನೇ ಹೇಳಿದರೂ ಪರಿಪೂರ್ಣತೆ ಎಂಬುದು ಸಾಧ್ಯವಿಲ್ಲದ್ದು; ಹಾಗೂ ಸಾಧ್ಯವಾಗದ್ದು. ಹರಿಶ್ಚಂದ್ರನ ಕುರಿತು ಹೇಳುವಾಗ ಸತ್ಯಹರಿಶ್ಚಂದ್ರ ಎಂಬ ಅಭಿದಾನವನ್ನೇ ಕೊಟ್ಟು ಸತ್ಯನಿಷ್ಠೆಯ ಬಗ್ಗೆ ಉದಾಹರಿಸುತ್ತೇವೆ. ಆದರೆ ಅವನೂ ಆಡಿದ ಮಾತಿಗೆ ತಪ್ಪಿ ಆಪದ್ಧರ್ಮ ಪಾಲಿಸಿ ಮಾತು ಉಳಿಸಿಕೊಂಡವನೇ ಆಗಿದ್ದಾನೆ. ಆಡಿದ ಮಾತಿನಂತೆ ಮಗನಾದ ಲೋಹಿತಾಶ್ವ ವನ್ನು ಬಲಿಕೊಡದೆ ಅಸ್ಪೃಶ್ಯರ ಮಗನಾದ ಶುನಶ್ಶೇಫನನ್ನು ದತ್ತುಪಡೆದು ಮಗ ಲೋಹಿತಾಶ್ವನಿಗೆ ಬದಲಾಗಿ ದತ್ತುಮಗ ಶುನಶ್ಶೇಫನನ್ನು ಬಲಿಕೊಟ್ಟು ಕೊಟ್ಟ ಮಾತನ್ನು ಉಳಿಸಿಕೊಂಡು ಸತ್ಯವಂತನಾಗುತ್ತಾನೆ. ಅಂದರೆ ಮಾತು ಕೊಡುವಾಗ ಮಾತಿನಾಳದ ಮೌಲ್ಯಭಾರದ ಬಗ್ಗೆ ಅರಿವಿರುವುದಿಲ್ಲ. ಅದು ಅನುಭವಕ್ಕೆ ಎದುರಾದಾಗ ಅದರ ತೀವ್ರತೆ ಎಷ್ಟು ಘೋರತರವಾದುದು ಎಂಬುದು ಅರಿವಿಗೆ ಬರುತ್ತದೆ. ಆಗ ತಪ್ಪಿಸಿಕೊಳ್ಳಲಾಗದ ಇಕ್ಕಟ್ಟಿನಲ್ಲಿ ಸಿಲುಕಿ ಆಪದ್ಧರ್ಮದ ಅನುಭವಕ್ಕೆ ಮೊರೆ ಹೋಗುತ್ತೇವೆ. ಇಲ್ಲಿ ಆಪತ್‌ಧರ್ಮವೆಂಬುದು ಸತ್ಯದ ಹೆಸರಿನ ಸುಳ್ಳೇ ಆಗಿರುತ್ತದೆ.

ಈ ಕಾರಣದಿಂದಲೇ ಮಾತನ್ನು ಆಡುವಾಗ ಹಿಂದು ಮುಂದು ಯೋಚಿಸಿ ಮಾತನಾಡಬೇಕು ಎಂದು ಅನುಭವಿಗಳು ಹೇಳುತ್ತಾರೆ. ಆದರೂ ಈ ಮಾತಿನ ಪರಿಪಾಲನೆಯೂ ಅಷ್ಟು ಸುಲಭದ್ದಲ್ಲ. ಏಕೆಂದರೆ ಮಾತನಾಡುವಾಗ ಸಂದರ್ಭದ ಸದ್ಯತನದಲ್ಲಿ ಯಾವುದೋ ಒಂದು ಸ್ವಾರ್ಥ ಅಥವಾ ಮೋಹ ಮಾತು ಉಚಾಯಿಸಿ ಹೊರ ಬರಲು ಒತ್ತಾಸೆಯಾಗಿರುತ್ತದೆ. ಅದು ಆ ಕ್ಷಣದಲ್ಲಿ ದೊಡ್ಡವನೆನ್ನಿಸಿಕೊಳ್ಳುವ ಉದಾರಿಯೆನಿಸಿಕೊಳ್ಳುವ ಅಥವಾ ಇಂಥ ಯಾವುದೋ ಒಂದು ಲೌಕಿಕ ಪ್ರತೀಕ್ಷೆಯ ಒತ್ತಾಸೆ ಕಾರಣವಾಗಿರುತ್ತದೆ. ಆಗ ಅದರ ಘನಘೋರ ಪರಿಣಾಮದ ಅರಿವು ಇರುವುದಿಲ್ಲ. ಹೀಗಾಗಿ ಮಾತು ಮನಸ್ಸಿನ ಮಾತಾಗದೆ ಅವಕಾಶವಾದಿ ಉಪಾಯ ವರ್ತನೆಯ ಮಾತಾಗಿ ಪ್ರಯೋಗಗೊಳ್ಳುತ್ತದೆ. ಇದು ಮಾತಿಗೂ ಬದುಕಿಗೂ ಇರುವ ಸಂದರ್ಭ ಸ್ಪರ್ಶದ ಅಂತರ್ ಸಂಬಂಧಿತ ವಸ್ತುಸ್ಥಿತಿ. ಅದೇ ರೀತಿ ಅಹಿಂಸೆಯ ಪರಿಪಾಲನೆ. ಅಹಿಂಸೆ ಸಾಧ್ಯವಿಲ್ಲದ ಆದರ್ಶ, ಜೀವವನ್ನು ತಿಂದು ಜೀವ ಬದುಕಬೇಕಿರುವ ನಿಸರ್ಗನಿಯತಿಯಲ್ಲಿ ಅಹಿಂಸೆ ಅಣುವಿನಷ್ಟು ಲೋಪವಿಲ್ಲದಂತೆ, ಅನುಷ್ಠಾನಗೊಳ್ಳುವುದು ಹೇಗೆ ಸಾಧ್ಯ? ನಿಸರ್ಗ ಸಹಜ ನಿಯತಿಧರ್ಮದ ನಡೆಯೊಳಗೆ ಅನಿವಾರ್ಯವೆನ್ನಿಸುವ ಹಿಂಸೆ ಅದು ಜೀವನ ಸಹಜ ಗತಿ.

ಹೀಗಾಗಿ ಸತ್ಯ-ಅಹಿಂಸೆಗಳು ಸೂರ್ಯ ಪ್ರಕಾಶದ ಉರಿಯುವ ಜ್ವಾಜ್ವ್ವಲ್ಯಗಳು. ಅವುಗಳನ್ನು ಪಾಲಿಸುವುದೆಂದರೆ ಕಣ್ಣರೆಪ್ಪೆಯ ನೆರಳಿನಲ್ಲಿ ಕಾಣುವುದು, ಅನುಭವಿಸುವುದು, ಅಷ್ಟೆ. ಇದಕ್ಕಾಗಿ ನಾವು ದೃಷ್ಟಿ ಹೀನರಾಗದೆ ಎಚ್ಚರದ ನೋಟವುಳ್ಳವರಾಗಿ ಮಿತಿಯರಿತು ಹಿತದಲ್ಲಿ ಬಾಳುವವರಾಗಬೇಕು. ನವನೀತವ ಅರೆದು ಸಣ್ಣಿಸಬೇಕೆಂದರೆ ಅದು ಉಭಯ ಪಾಷಾಣದ ಮಧ್ಯದಲ್ಲಿ ಜ್ವಾಲೆಯ ಡಾವರಕ್ಕೆ ಕರಗುವುದಲ್ಲದೆ ಅರೆಪುನಿಂದುಂಟೆ? ನೆರೆ ಅರಿದು ಹರಿದವನಲ್ಲಿ ಪರಿಭ್ರಮಣವ ವಿಚಾರಿಸಲಿಕ್ಕೆ ಆ ವಿಚಾರದಲ್ಲಿಯೇ ಲೋಪವಾಯಿತ್ತು ಸದ್ಯೋಜಾತಲಿಂಗದಲ್ಲಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.