ಸೃಷ್ಟಿಯ ನಿರ್ಮಿತಿಯ ಬಗ್ಗೆ ನಡೆದ ಚಿಂತನೆ ಇಂದು ನಿನ್ನೆಯಲ್ಲ. ಉಪನಿಷತ್ಕಾಲದ ಋಷಿ-ಮುನಿಗಳು, ಗ್ರೀಕ ಪ್ರಾಚೀನ-ಆರ್ವಾಚೀನ ತತ್ವಜ್ಞಾನಿಗಳು, ವಿಜ್ಞಾನಿಗಳೆಲ್ಲರೂ ಸೃಷ್ಟಿಯ ಸ್ವರೂಪ ಹಾಗೂ ನಿರ್ಮಿತಿಯನ್ನು ತಿಳಿದುಕೊಳ್ಳಲು ಪರಿಶ್ರಮಿಸಿದ್ದಾರೆ; ಸೃಷ್ಟಿಯ ವೈಚಿತ್ರ್ಯವನ್ನು ಕಂಡು ವಿಸ್ಮಯಗೊಂಡಿದ್ದಾರೆ. ವಿಜ್ಞಾನಿಗಳಂತೂ ದೂರದರ್ಶಕದ ಸಹಾಯದಿಂದ ಬ್ರಹ್ಮಾಂಡದ ಅನಂತ ವಿಸ್ತಾರವನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ಅವರಿಗೆ ಸೃಷ್ಟಿಯಲ್ಲಿ ವ್ಯಾಪ್ತಗೊಂಡಿರುವ ನಿಯಮಗಳ ಆವಿಷ್ಕಾರವನ್ನು ಕೈಕೊಳ್ಳಲು ಸಾಧ್ಯವಾಗಿದೆ ಹೊರತು ಸೃಷ್ಟಿಯ ಸ್ವರೂಪವನ್ನು ತಿಳಿಯಲು ಸಾಧ್ಯವಾಗಿಲ್ಲ. ಆದರೆ ತತ್ವಜ್ಞಾನಿಗಳಾಗಿರುವ ಋಷಿ-ಮುನಿಗಳು, ಅನುಭಾವಿಗಳಾಗಿರುವ ಶರಣರು ಸೃಷ್ಟಿಯ ಸ್ವರೂಪವನ್ನು ಕುರಿತು ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ. ಸೃಷ್ಟಿಗೆ ಮೂಲ ಕಾರಣಕರ್ತೃ ಪರಶಿವನಾಗಿದ್ದು, ಅವನು ಅತ್ತಿಯ ಮರದಂತಿದ್ದಾನೆ. ಅತ್ತಿಯ ಹಣ್ಣುಗಳು ಆ ಮರವನ್ನು ಆಶ್ರಯಿಸಿದಂತೆ ಅನಂತ ಬ್ರಹ್ಮಾಂಡಗಳು ಪರಶಿವನನ್ನು ಆಶ್ರಯಿಸಿವೆ ಎಂಬ ಮಾತೊಂದು ಉಪನಿಷತ್ತಿನಲ್ಲಿ ಉಕ್ತವಾಗಿದೆ. ಶಿವಶರಣರು ಜಗತ್ತನ್ನು ಸೃಷ್ಟಿಸಿದ ಪರಶಿವನಷ್ಟೇ ಜಗತ್ತೂ ಕೂಡ ಸತ್ಯವೆಂದು ತಮ್ಮ ವಚನಗಳಲ್ಲಿ ಪ್ರತಿಪಾದಿಸಿದ್ದಾರೆ.
ನಿರಾಕಾರ ಪರವಸ್ತುವೆನಿಸಿದ ಪರಶಿವನು ತನ್ನ ಲೀಲೆಯಿಂದ ತಾನೇ ಜಗತ್ಸೃಷ್ಟಿ ನಿಮಿತ್ತವಾಗಿ ನೆನಹುದೋರಲು, ಆ ನೆನಹೇ ಸೃಷ್ಟಿಗೆ ಕಾರಣವಾಯಿತ್ತು. ಬಯಲು ಮೊಳಗಿ, ಮಳೆ ಸೃಜಿಸಿ, ಆ ಬಯಲು ಮಳೆಯನೊಡಗೂಡಿ ದೃಷ್ಟವಾಗಿಪ್ಪ ವಾರಿಕಲ್ಲಾಗಿ ತೋರುವಂತೆ, ನಿಮ್ಮ ನೆನಹೇ ನಿಮಗೆ ಶಕ್ತಿಯಾಯಿತ್ತಲ್ಲಾ, ನಿಮ್ಮ ಆದಿಗೆ ಇದೇ ಪ್ರಥಮವಾಯಿತ್ತಲ್ಲಾ ಎಂದು ಹೇಳುವ ಶರಣ ಹಾವಿನಹಾಳ ಕಲ್ಲಯ್ಯನು ಆಕಾಶದಲ್ಲಿ ಸಣ್ಣ ಸಣ್ಣ ನೀರಿನ ಕಣಗಳು ಗಟ್ಟಿಯಾಗಿ ಆಲಿಕಲ್ಲು ಆಗುವಂತೆ ಪರಶಿವನ ನೆನಹು ಸೃಷ್ಟಿಗೆ ಆದಿ ಎನ್ನುತ್ತಾನೆ. ಶರಣರ ದೃಷ್ಟಿಯಲ್ಲಿ ಸೃಷ್ಟಿಯ ನಿರ್ಮಿತಿ ಎಂದರೆ ಅದು ಪರಶಿವನ ಲೀಲೆ. ಸೃಷ್ಟಿಯ ಪೂರ್ವದಲ್ಲಿ ಇದ್ದೂ ಇಲ್ಲದಂತೆ ಸರ್ವಶೂನ್ಯ ನಿರಾಲಂಬನಾಗಿದ್ದ ಪರಶಿವನು ತನ್ನ ಲೀಲಾ ವಿನೋದಕ್ಕೆ ಸಕಲ ಪ್ರಪಂಚವನ್ನು ಸೃಷ್ಟಿಸುತ್ತಾನೆ ಎಂಬುದು ಶರಣರ ಅಭಿಮತವಾಗಿದೆ. ಜಗದ ಲೀಲಾ ವೈಭವಂಗಳ ನಟಿಸಬೇಕೆಂಬ ಪರಶಿವನ ನೆನಹು ಚಿತ್ತಾಗಿ, ಆ ಚಿತ್ತಿಂದೆ ಚಿನ್ನಾದ ಚಿದ್ಬಿಂದು ಚಿತ್ಕಳೆಗಳು, ನಂತರ ತ್ರೈಲೋಕಂಗಳು, ಆ ತ್ರೈಲೋಕಂಗಳ ಮಧ್ಯದಲ್ಲಿ ಸಚರಾಚರ ಹೆಣ್ಣು-ಗಂಡು ನಾಮ ರೂಪು ಕ್ರಿಯಾದಿ ಸಕಲ ವಿಸ್ತಾರವಾಯಿತ್ತು ಎನ್ನುವ ಅವರು ಸಾಂಖ್ಯರ ಇಪ್ಪತ್ತೈದು ತತ್ವಗಳಿಗಿಂತ ಭಿನ್ನವಾಗಿ ಮೂವತ್ತಾರು ತತ್ವಗಳ ರೂಪವಾಗಿ ಆ ಚಿತ್ತು ಪರಿಣಮಿಸಿದೆ ಎನ್ನುತ್ತಾರೆ.
ಅಲ್ಲಮ ಪ್ರಭುದೇವರು- ಮರನೊಳಗಣ ಪತ್ರೆ ಫಲಂಗಳು, ಮರಕಾಲವಶದಲ್ಲಿ ತೋರುವಂತೆ, ಹರನೊಳಗಣ ಪ್ರಕೃತಿ ಸ್ವಭಾವಂಗಳು ಹರಭಾವದಿಚ್ಛೆಗೆ ತೋರುವವು, ಲೀಲೆಯಾದಡುಮಾಪತಿ ಲೀಲೆ ತಪ್ಪಿದಡೆ ಸ್ವಯಂಭು ಗುಹೇಶ್ವರಾ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.