ಗುಜರಾತ್ ಜಾತಿ ಸೂತ್ರ ಬದಲಾಯಿಸಿದ ಮೋದಿ
ದಿನೇಶ್ ಅಮಿನ್ ಮಟ್ಟು Published 16 ಡಿಸೆಂಬರ್ 2012, 19:59 IST Last Updated 16 ಡಿಸೆಂಬರ್ 2012, 19:59 IST ಗುಜರಾತ್ ಜಾತಿ ಸೂತ್ರ ಬದಲಾಯಿಸಿದ ಮೋದಿ
`ಗುಜರಾತ್ ರಾಜ್ಯವನ್ನು ನರೇಂದ್ರಮೋದಿ ತನ್ನ ಮಾಯಾಜಾಲದಲ್ಲಿ ಕೆಡವಿಹಾಕಿದಂತೆ ಕಾಣುತ್ತಿದೆ. ಯಾವ ಚುನಾವಣಾ ಸಮೀಕ್ಷೆಯ ಸೂತ್ರಗಳಿಗೂ ನಿಲುಕದ ಮೋದಿ ಯಶಸ್ಸಿನ ಒಗಟನ್ನು ಒಡೆಯುವುದು ಕಷ್ಟ. ಅವರ ಜನಪ್ರಿಯತೆ ನೂರಕ್ಕೆ ನೂರರಷ್ಟು ಮತಗಳಾಗಿ ಪರಿವರ್ತನೆ ಹೊಂದಿದರೆ ಬಿಜೆಪಿ ಈ ರಾಜ್ಯದಲ್ಲಿ `ಹ್ಯಾಟ್ರಿಕ್' ಜಯ ಗಳಿಸಬಹುದು..' ಎಂದು ಹತ್ತುವರ್ಷಗಳ ಹಿಂದೆ ( ಪ್ರಜಾವಾಣಿ ವರದಿ:11,ಡಿಸೆಂಬರ್ 2002) ಆ ರಾಜ್ಯಕ್ಕೆ ವಿಧಾನಸಭಾ ಚುನಾವಣಾ ಸಮೀಕ್ಷೆಗೆಂದು ಹೋದವನು `ಮೋದಿ ಮೋಡಿ'ಗೆ ಬೆರಗಾಗಿ ಬರೆದಿದ್ದೆ.
2002ರ ಕೋಮುದಂಗೆಯ ಹಸಿಹಸಿ ನೆನಪಿನ ಜತೆಯಲ್ಲಿಯೇ ನಡೆದ ಚುನಾವಣೆ ಅದು. `ನೀವು ನನಗೆ ಮತನೀಡಬೇಕೆಂದು ಹೇಳುವುದಿಲ್ಲ, ಆದರೆ ಗೋಧ್ರಾ ಹತ್ಯಾಕಾಂಡವನ್ನು ಮಾತ್ರ ಮರೆತುಬಿಡಿ ಎಂದು ಹೇಳಬೇಡಿ. ಅದನ್ನು ನಾನು ಹೇಗೆ ಮರೆಯಲಿ? ಬೆಂಕಿ ಹತ್ತಿಕೊಂಡ ರೈಲ್ವೆಬೋಗಿಯೊಳಗಿನ ದೈವಭಕ್ತರ ಆರ್ತನಾದ ನನ್ನ ಕಿವಿಗಳಲ್ಲಿ ಈಗಲೂ ಗುಂಯ್‌ಗುಡುತ್ತಿದೆ....' -ಮೋದಿಯವರ ಕಣ್ಣೀರು `ನರ್ಮದಾ ನದಿ'ಯಾಗಿ ಹರಿಯುತ್ತಿದ್ದರೆ, ಅವರ ಗುಜರಾತಿ ಭಾಷೆಯ ಭಾಷಣ ಕೇಳಿದವರು ನಿಂತಲ್ಲೇ ಕಣ್ಣೀರಾಗಿ ಬಿಡುತ್ತಿದ್ದರು. ಇದು ಮೋದಿ ಮೋಡಿ.
ಈ ಮೋಡಿಯೇ ನರೇಂದ್ರಮೋದಿ ಅವರನ್ನು ಸತತ ಎರಡು ಬಾರಿ ಗೆಲ್ಲಿಸಿದ್ದೇ? ಹಾಗೆಂದು 2002ರ ಚುನಾವಣೆಯ ಕಾಲದಲ್ಲಿ ಮೂರ್ಖನಂತೆ ನಾನೂ ತಿಳಿದುಕೊಂಡಿದ್ದೆ, ಆದರೆ 2007ರ ವಿಧಾನಸಭಾ ಚುನಾವಣೆಯನ್ನು ತುಸು ಆಳಕ್ಕೆ ಇಳಿದು ನೋಡಿದಾಗ ಮೋದಿಯವರ ಇನ್ನೊಂದು ಮುಖ ಅನಾವರಣಗೊಳ್ಳಹತ್ತಿತ್ತು. ಹೊರನೋಟಕ್ಕೆ ಕಟ್ಟಾ ಕೋಮುವಾದಿಯಂತೆ ಕಾಣುವ ನರೇಂದ್ರ ಮೋದಿ ಅವರೊಳಗೊಬ್ಬ ಚಾಣಾಕ್ಷ ರಾಜಕಾರಣಿ ಇದ್ದಾನೆ. ಸಂಖ್ಯೆಯ ಆಟವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಪಸಂಖ್ಯೆಯಲ್ಲಿ ಜಾತಿಜನರನ್ನು ಹೊಂದಿರುವ ರಾಜಕೀಯ ನಾಯಕರಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುವ ಅಸುರಕ್ಷತೆ ಅವರನ್ನು ಹೆಚ್ಚು ಜಾಗೃತರು ಮತ್ತು ಚಾಣಾಕ್ಷರನ್ನಾಗಿ ಮಾಡುತ್ತದೆ. ಮೋದಿ ಇದಕ್ಕೆ ಹೊರತಲ್ಲ. ಈ ಚಾಣಾಕ್ಷತನದ ಬಲದಿಂದಲೇ ಅವರು ಜನಸಂಖ್ಯೆಯಲ್ಲಿ ಶೇಕಡಾ ಹದಿನಾರರಷ್ಟಿರುವ ಮತ್ತು ಆರ್ಥಿಕವಾಗಿ ಬಲಿಷ್ಠರಾಗಿರುವ ಪಟೇಲರನ್ನು ಎದುರಿಸಿ ಹಿಂದಿನ ಎರಡು ಚುನಾವಣೆಗಳನ್ನು ಗ್ದ್ದೆದದ್ದು.
ಕಳೆದ ಹತ್ತುವರ್ಷಗಳಲ್ಲಿ ಗುಜರಾತ್ ರಾಜಕೀಯ ಬದಲಾಗಿದೆ ಎಂದು ಅನಿಸುವುದಿಲ್ಲ. ಕೇಶುಭಾಯಿಪಟೇಲ್ ಬಂಡೆದ್ದು ರಚಿಸಿರುವ ಹೊಸ ಪಕ್ಷದ ಪರಿಣಾಮದಿಂದಾಗಿ ಮೋದಿಗೆ ಹಿನ್ನಡೆ ಆಗಬಹುದು ಎಂದು ಹಲವಾರು ರಾಜಕೀಯ ಪಂಡಿತರು ಭವಿಷ್ಯ ನುಡಿಯುತ್ತಿದ್ದಾರೆ.
ಆದರೆ ಕೇಶುಭಾಯಿ ಬಿಜೆಪಿಯಿಂದ ಹೊರಬಂದು ಹೊಸ ಪಕ್ಷ ಕಟ್ಟಿದ್ದು ಹೊಸದಾಗಿದ್ದರೂ ಅವರ ಬಂಡಾಯ ಹೊಸದಲ್ಲ, ಹತ್ತುವರ್ಷಗಳ ಹಿಂದೆ ನರೇಂದ್ರ ಮೋದಿ ತನ್ನಿಂದ ಮುಖ್ಯಮಂತ್ರಿ ಪಟ್ಟ ಕಸಿದುಕೊಂಡ ದಿನದಿಂದಲೂ ಕೇಶುಭಾಯಿ ಬಂಡುಕೋರರು. ನರೇಂದ್ರ ಮೋದಿ ಹಿಂದುಳಿದ ಗಾಂಚಿ (ಗಾಣಿಗ) ಜಾತಿಗೆ ಸೇರಿದವರು. ಪಟೇಲರು ಎಣ್ಣೆಗಿರಣಿ ಮಾಲೀಕರು. ಕೆಳಜಾತಿಯ ಒಬ್ಬ ವ್ಯಕ್ತಿ ಪಟೇಲರ ನಾಯಕನನ್ನು ಕೆಳಗಿಳಿಸಿ ಮುಖ್ಯಮಂತ್ರಿಯಾಗಿದ್ದನ್ನು ಕೇಶುಭಾಯಿ ಪಟೇಲ್ ಮತ್ತು ಬೆಂಬಲಿಗರು ಇನ್ನೂ ಮರೆತಿಲ್ಲ. ಕಳೆದೆರಡೂ ಚುನಾವಣೆಗಳಲ್ಲಿ ಕೇಶುಭಾಯಿ ಬೆಂಬಲಿಗರು ಕಾಂಗ್ರೆಸ್ ಜತೆ ಗುಪ್ತಹೊಂದಾಣಿಕೆಯೂ ಸೇರಿದಂತೆ ಮೋದಿಯವರನ್ನು ಸೋಲಿಸುವ ಯಾವ ಅವಕಾಶವನ್ನೂ ಬಿಟ್ಟಿಲ್ಲ. ಸಾಮಾನ್ಯವಾಗಿ ಆಡಳಿತ ಪಕ್ಷದ ಆಂತರಿಕ ಬಂಡಾಯ ವಿರೋಧಪಕ್ಷಗಳಿಗೆ ನೆರವಾಗುತ್ತದೆ. ಒಳಗಿನ ಬಂಡುಕೋರರು ಪ್ರತ್ಯೇಕ ಪಕ್ಷ ಕಟ್ಟಿ ಚುನಾವಣೆ ಎದುರಿಸಿದಾಗ ಅವರ ಪಾಲಿನ ಮತಗಳು ಅವರ ಪಕ್ಷಕ್ಕೆ ಹೋಗುವುದರಿಂದ ವಿರೋಧಪಕ್ಷಗಳಿಗೆ ಹೆಚ್ಚು ಲಾಭವಾಗುವುದಿಲ್ಲ. ಹೌದು, ಈ ಬಾರಿ ಬಿಜೆಪಿ ಶಾಸಕರ ಸಂಖ್ಯೆ ಕುಸಿಯಲೂಬಹುದು, ಆದರೆ ಕೇಶುಭಾಯಿ ಬಂಡಾಯ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಾರದು.
ರಾಜಕೋಟ್, ಅಮ್ರೇಲಿ, ಪೋರಬಂದರ್, ಜುನಾಗಡ್,ಸುರೇಂದ್ರನಗರ ಮತ್ತು ಭಾವನಗರ ಜಿಲ್ಲೆಗಳನ್ನೊಳಗೊಂಡ ಸೌರಾಷ್ಟ್ರ ಎನ್ನುವುದು `ಪಟೇಲರ ಕೋಟೆ'. ರಾಜ್ಯದ 182 ಕ್ಷೇತ್ರಗಳ ಪೈಕಿ 60ರಲ್ಲಿ ಪಟೇಲರು ನಿರ್ಣಾಯಕರಾಗುವಷ್ಟು ಸಂಖ್ಯೆಯಲ್ಲಿದ್ದಾರೆ. ಇವರು ಮೂಲತ: ಕೃಷಿಕರಾದರೂ ಈಗ ಉದ್ಯಮ ಕ್ಷೇತ್ರವನ್ನೂ ಪ್ರವೇಶಿಸಿದ್ದಾರೆ. ಸೌರಾಷ್ಟ್ರದಲ್ಲಿನ ಎಣ್ಣೆ ಗಿರಣಿಗಳು ಮತ್ತು ಸೂರತ್‌ನಲ್ಲಿನ ವಜ್ರದ ವ್ಯಾಪಾರದಲ್ಲಿ ಅವರದ್ದೇ ಪ್ರಾಬಲ್ಯ. ಸಹಕಾರ ಮತ್ತು ಶಿಕ್ಷಣ ಕ್ಷೇತ್ರಗಳಿಗೂ ಅವರು ಕೈಚಾಚಿದ್ದಾರೆ.
ಅನಿವಾಸಿ ಗುಜರಾತಿಗಳಲ್ಲಿ ಪಟೇಲರದ್ದೇ ಮೇಲುಗೈ. ರಾಜ್ಯದ ನೌಕರಶಾಹಿಯಲ್ಲಿಯೂ ಅವರು ಆಯಕಟ್ಟಿನ ಸ್ಥಾನದಲ್ಲಿದ್ದಾರೆ.
ಇಂತಹ ಪಟೇಲರನ್ನು ಮೋದಿ ಎದುರಿಸಿದ್ದು ಹೇಗೆ? ಇದಕ್ಕೆ ಕಾರಣ- `ಗುಜರಾತ್‌ನಲ್ಲಿ ಈಗ ಇರುವುದು ದೇಶದಾದ್ಯಂತ ಕಾಣುತ್ತಿರುವ ಬಿಜೆಪಿ ಅಲ್ಲ, ಮೋದಿ ನೇತೃತ್ವದ ಪಕ್ಷದೊಳಗಿರುವುದು 20 ವರ್ಷಗಳ ಹಿಂದಿನ ಕಾಂಗ್ರೆಸ್'. ಈ ಒಳನೋಟವನ್ನು ನನಗೆ ನೀಡಿದ್ದವರು `ಗುಜರಾತ್‌ನ ದೇವರಾಜ ಅರಸು' ಎಂದೇ ಖ್ಯಾತರಾಗಿದ್ದ ಮಾಜಿ ಮುಖ್ಯಮಂತ್ರಿ ಮಾಧವಸಿನ್ಹ ಸೋಳಂಕಿ. 2007ರ ಚುನಾವಣಾ ಸಮೀಕ್ಷೆಗೆಂದು ಹೋದವ ಗಾಂಧಿನಗರದ ಹಳೆಯ ಬಂಗಲೆಯಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದ ಸೋಳಂಕಿ ಅವರನ್ನು ಭೇಟಿಮಾಡಿದ್ದೆ.
ಗುಜರಾತ್ ರಾಜಕೀಯವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ `ಪಟೇಲ್‌ಗಿರಿ'ಯನ್ನು `ಕ್ಷತ್ರಿಯ-ಹರಿಜನ- ಆದಿವಾಸಿ-ಮುಸ್ಲಿಮ್' ಸಮುದಾಯಗಳನ್ನೊಳಗೊಂಡ `ಖಾಮ್' ಕೂಟಕಟ್ಟಿ ಮೊದಲ ಬಾರಿ ಮುರಿದವರು ಸೋಳಂಕಿ. ಈ ಜಾತಿ ಸಮೀಕರಣದ ರಾಜಕೀಯ ಲಾಭವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟವರು ಹಿಂದುಳಿದ ಜಾತಿಗಳ ಹಿರಿಯ ನಾಯಕ ಜೀನಾಭಾಯಿ ದರ್ಜಿ. ಈ ಬಲದಿಂದ ಕಾಂಗ್ರೆಸ್‌ಪಕ್ಷಕ್ಕೆ ಸೇರಿರುವ ಕ್ಷತ್ರಿಯ ಸೋಳಂಕಿ ಮಾತ್ರವಲ್ಲ ಆದಿವಾಸಿ ಸಮುದಾಯಕ್ಕೆ ಸೇರಿರುವ ಅಮರ್‌ಸಿಂಗ್ ಚೌದರಿ ಕೂಡಾ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದ್ದು.
ಆದರೆ ಬದಲಾದ ರಾಜಕೀಯದ ಆಟ ಬಹಳ ದಿನ ನಡೆಯಲಿಲ್ಲ. ಜನಸಂಖ್ಯೆ ಮತ್ತು ಸಂಪನ್ಮೂಲದ ಬಲದಿಂದಾಗಿ ರಾಜಕೀಯವಾಗಿ ಶಕ್ತಿಶಾಲಿಯಾಗಿದ್ದ ಪಟೇಲರು ಬಹಳ ಬೇಗ ತಿರುಗೇಟು ನೀಡಿದ್ದರು. 1990ರ ವಿಧಾನಸಭಾ ಚುನಾವಣೆಯಲ್ಲಿ ಚಿಮಣ್‌ಭಾಯ್ ಪಟೇಲ್ ನಾಯಕತ್ವದಲ್ಲಿ ಪಟೇಲರು ಜನತಾದಳದ ಗಾಡಿ ಹತ್ತಿದರು. ಅದರ ಫಲವಾಗಿಯೇ 1990ರಲ್ಲಿ ಬಿಜೆಪಿ-ಜನತಾ ಮೈತ್ರಿಕೂಟ ಅಧಿಕಾರಕ್ಕೆ ಬಂದದ್ದು. ಆ ಸರ್ಕಾರದಲ್ಲಿ ಚಿಮಣ್‌ಭಾಯ್ ಮುಖ್ಯಮಂತ್ರಿಯಾಗಿದ್ದರೆ, ಕೇಶುಭಾಯಿ ಉಪಮುಖ್ಯಮಂತ್ರಿಯಾಗಿದ್ದರು. ಇಂತಹ ಜನತಾದಳವನ್ನು ಬಿಜೆಪಿಯೇ ಒಡೆದುಹಾಕಿತು. ಕಾಂಗ್ರೆಸ್ ಪಕ್ಷದ ಯಶಸ್ವಿ `ಖಾಮ್' ಸೂತ್ರವನ್ನು ಮುರಿಯುವ ಜತೆಯಲ್ಲಿ ಜನತಾದಳದಲ್ಲಿದ್ದ ಪಟೇಲರನ್ನು ಪಕ್ಷಕ್ಕೆ ಕರೆತರುವ `ಮಹಾ ಜಾತಿ ಧ್ರುವೀಕರಣ'ದ ಯೋಜನೆಯನ್ನು ರೂಪಿಸಿದ್ದ ಬಿಜೆಪಿ, ಅದಕ್ಕಾಗಿ ಕಣಕ್ಕಿಳಿಸಿದ್ದು ಕೇಶುಭಾಯಿ, ನರೇಂದ್ರಮೋದಿ ಮತ್ತು ಶಂಕರ್‌ಸಿಂಗ್ ವಘೇಲಾ ಎಂಬ ತ್ರಿಮೂರ್ತಿಗಳನ್ನು.
ನರೇಂದ್ರಮೋದಿ ಅವರು `ಮುಸ್ಲಿಮ್' ಭೂತವನ್ನು ಬಳಸಿಕೊಂಡು ಆದಿವಾಸಿಗಳನ್ನು `ಹಿಂದೂ'ಗಳಾಗಿ ಪರಿವರ್ತಿಸುವ ಕೆಲಸವನ್ನು ಮಾಡಿದರೆ, ಕ್ಷತ್ರಿಯರಾದ ವಘೇಲಾ `ಖಾಮ್' ಸೂತ್ರದ ಪ್ರಮುಖ ಕೊಂಡಿಯಾಗಿದ್ದ ಕ್ಷತ್ರಿಯರನ್ನು ಕರೆತಂದರು. ಮಾಧವಸಿನ್ಹಾ ಸೋಳಂಕಿಯವರ `ಖಾಮ್' ರಾಜಕೀಯದಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ನೆಲೆ ಕಳೆದುಕೊಂಡು ಜನತಾ ಮತ್ತು ಬಿಜೆಪಿಯಲ್ಲಿ ಸೇರಿಕೊಂಡಿದ್ದ ಪಟೇಲರನ್ನು ಬಿಜೆಪಿ ಕಡೆ ಎಳೆದು ತರುವ ಕೆಲಸವನ್ನು ಕೇಶುಭಾಯಿ ಮಾಡಿದರು. ಈ ಜಾತಿ ಮರುಧ್ರುವೀಕರಣದಿಂದಾಗಿ ಬಹುಸಂಖ್ಯೆಯಲ್ಲಿ `ಹಿಂದೂ' ಮತದಾರರು ಬಿಜೆಪಿ ಕಡೆ ವಲಸೆ ಹೋಗುವಂತಾಯಿತು. ಕಾಂಗ್ರೆಸ್ ಪಕ್ಷದ `ಖಾಮ್'ಕೂಟಕ್ಕೆ ನಿಷ್ಠರಾಗಿ ಉಳಿದವರು ಮುಸ್ಲಿಮರು ಮಾತ್ರ, ಅದು ಅವರಿಗೆ ಅನಿವಾರ್ಯವೂ ಆಗಿತ್ತು. ಇದರಿಂದಾಗಿ 1985ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದ ಗೆಲುವೇ ಕೊನೆಯದ್ದು, ಅದರ ನಂತರದ ಐದು ಚುನಾವಣೆಗಳಲ್ಲಿಯೂ ಅದು ಸೋತಿದೆ.
2002ರಲ್ಲಿ ನರೇಂದ್ರಮೋದಿ ಮುಖ್ಯಮಂತ್ರಿಯಾಗಿ ರಾಜಕೀಯ ಪ್ರವೇಶಿಸಿದ ನಂತರ ಈ ಜಾತಿ ಸಮೀಕರಣ ಮತ್ತೆ ಬದಲಾಗಿಹೋಯಿತು. ಕೇಶುಭಾಯಿ ಪದಚ್ಯುತಿಯಿಂದಾಗಿ ಅತೃಪ್ತರಾಗಿರುವ ಪಟೇಲರನ್ನು ನಂಬಿಕೊಂಡು ಅಧಿಕಾರದಲ್ಲಿ ಉಳಿಯುವುದು ಸಾಧ್ಯವಾಗಲಾರದು ಎಂಬ ವಾಸ್ತವ ಬಹಳ ಬೇಗ ಮೋದಿಯವರಿಗೆ ಅರಿವಾಗಿತ್ತು. ಆಗಲೇ ಅವರು `ಉಗ್ರ ಹಿಂದುತ್ವ'ದ ಪ್ರತಿಪಾದನೆಯ ಮೂಲಕ ಮುಸ್ಲಿಮೇತರರ ಸಮುದಾಯವನ್ನು ಒಗ್ಗೂಡಿಸುವ ಜತೆಗೆ ಪಟೇಲ್ ಸಮುದಾಯವನ್ನು ಒಡೆಯುವ ಪ್ರಯತ್ನಕ್ಕೆ ಚಾಲನೆ ನೀಡಿದ್ದು. ಲೇವಾ ಮತ್ತು ಕಡುವಾ ಎಂಬ ಪಟೇಲರೊಳಗಿನ ಎರಡು ಪ್ರಮುಖ ಒಳಪಂಗಡಗಳ ರಾಜಕೀಯವನ್ನು ಮೋದಿ ಕಳೆದ ಒಂದು ದಶಕದಲ್ಲಿ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಕೇಶುಭಾಯಿ ಪ್ರತಿನಿಧಿಸುವ ಲೇವಾ ಪಟೇಲರು ರಾಜಕೋಟ್ ಮತ್ತು ಅಮ್ರೇಲಿಗಳಲ್ಲಿ ಬಹುಸಂಖ್ಯೆಯಲ್ಲಿದ್ದರೆ ಸೂರತ್ ಮತ್ತು ಉತ್ತರ ಗುಜರಾತ್‌ಗಳಲ್ಲಿ ಕಡುವಾ ಪಟೇಲರಿದ್ದಾರೆ. ಮೋದಿ ಬಲಗೈಯಂತಿರುವ ವಜುಭಾಯಿವಾಲಾ ಕಡುವಾ ಪಟೇಲ್. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹೆಚ್ಚು ಟಿಕೆಟ್ ಪಡೆದದ್ದೇ ಕಡುವಾ ಪಟೇಲರು.
ಮೋದಿಯವರ ಇನ್ನೊಂದು ಶಕ್ತಿ ಕೇಂದ್ರ ಆದಿವಾಸಿ ಬಾಹುಳ್ಯದ ಪಂಚಮಹಲ್, ದಾಹೋದ್, ವಡೋದರ ಜಿಲ್ಲೆಗಳನ್ನೊಳಗೊಂಡ ಕೇಂದ್ರ ಗುಜರಾತ್. ಅಲ್ಲಿ ಒಟ್ಟು 48 ವಿಧಾನಸಭಾ ಕ್ಷೇತ್ರಗಳಿವೆ. ಕಳೆದೆರಡೂ ಚುನಾವಣೆಗಳಲ್ಲಿ ಬಿಜೆಪಿ ಇಲ್ಲಿ 40ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. 2007ರ ಚುನಾವಣೆಯ ಕಾಲದಲ್ಲಿ ಕಲೋಲ್ ಕಡೆ ಹೊರಟಿದ್ದ ನಾನು ಹೆದ್ದಾರಿ ಪಕ್ಕದ ಚಹದಂಗಡಿಯಲ್ಲಿ ಕೂತಿದ್ದೆ. ನಮ್ಮ ವಾಹನ ನೋಡಿ ಪತ್ರಕರ್ತನಿರಬಹುದೆಂಬ ಸುಳಿವು ಸಿಕ್ಕ ಹಣೆಗೆ ಕೇಸರಿಪಟ್ಟಿ ಕಟ್ಟಿಕೊಂಡಿದ್ದ ಯುವಕನೊಬ್ಬ `ಜೈ ಶ್ರಿರಾಮ್' ಎಂದು ಎದೆಯುಬ್ಬಿಸಿ ಕೂಗಿದ್ದ. ಅಲ್ಲಿಯೇ ಮೂಲೆಯೊಂದರಲ್ಲಿ ಕೂತಿದ್ದ ಅರೆಬೆತ್ತಲೆ ವೃದ್ಧರೊಬ್ಬರು ಎತ್ತಲೋ ನೋಡುತ್ತಾ ` ಹಮ್ಹಾರಾ ಬಾಬೋ ಪಿತೋರೋ ಚೆ' ಎಂದು ಸಣ್ಣಗೆ ಕೆಮ್ಮುವಂತೆ ಗೊಣಗಿದ. ಜಗಳದ ಕಿಡಿ ಹಾರಿಯೇ ಬಿಟ್ಟಿತ್ತು.
ಅಷ್ಟರಲ್ಲಿ ವೃದ್ಧ ವ್ಯಕ್ತಿ ಅಲ್ಲಿಂದ ಸದ್ದಿಲ್ಲದೆ ಕಣ್ಮರೆಯಾಗಿದ್ದ. ಆ ನಂತರ ತಿಳಿದುಬಂದಂತೆ ಇಬ್ಬರೂ ಆದಿವಾಸಿ ಸಮುದಾಯದವರು. ಇದು ಕೇವಲ ಬೀದಿ ಜಗಳ ಅಲ್ಲ, ಗುಜರಾತ್‌ನ ಜನಸಂಖ್ಯೆಯಲ್ಲಿ ಶೇಕಡಾ ಹದಿನೇಳರಷ್ಟಿರುವ ಆದಿವಾಸಿಗಳ `ಮನೆ' ಜಗಳ ಕೂಡಾ ಹೌದು.
ಆದಿವಾಸಿಗಳು ಪಾರಂಪರಿಕವಾಗಿ ಧಾರ್ಮಿಕ ವ್ಯಕ್ತಿಗಳು. ಆದರೆ ಅವರು ಪೂಜಿಸುವುದು ಅವರದ್ದೇ ದೇವತೆಗಳನ್ನು. ಗುಜರಾತ್‌ನ ಆದಿವಾಸಿಗಳು ಬಾಬೋ ಪಿತೋರೇ, ಇತೆರಾನ್, ಮಾಕಾಳಿ ಮೊದಲಾದ ದೇವತೆಗಳನ್ನು ಪೂಜಿಸುತ್ತಾ ಬಂದವರು. ಹಳೆಯ ತಲೆಮಾರಿನ ಆದಿವಾಸಿಗಳು ಈ ದೇವತೆಗಳಿಗೆ ನಿಷ್ಠರಾಗಿಯೇ ಉಳಿದಿದ್ದಾರೆ. ಆದರೆ ತಲೆಗೆ ಕೇಸರಿಪಟ್ಟಿ ಕಟ್ಟಿಕೊಂಡ ಹೊಸತಲೆಮಾರಿನ ಕುಟುಂಬಗಳ ಮನೆಯಲ್ಲಿ ಆಗಲೇ ರಾಮ,ಕೃಷ್ಣ, ಲಕ್ಷ್ಮಿ, ಸರಸ್ವತಿಗಳ ಪ್ರವೇಶವಾಗಿದೆ. ಆಸಾರಾಮ್ ಬಾಪೂ, ಜಯಶ್ರಿ ತಲವಾಲ್ಕರ್, ದಾದಾ ಭಗವಾನ್ ಪ್ರವಚನಗಳಿಗೆ ಪಂಚಮಹಲ್, ದಾಹೋದ್ ಜಿಲ್ಲೆಗಳಲ್ಲಿ ಸಾವಿರಾರು ಆದಿವಾಸಿಗಳು ಸೇರುತ್ತಾರೆ. ಒಂದು ಕಾಲದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಗುತ್ತಿಗೆಯಾಗಿ ಹೋಗಿದ್ದ ಆದಿವಾಸಿ ಪ್ರದೇಶದಲ್ಲಿ ಸಂಘ ಪರಿವಾರಕ್ಕೆ ಸೇರಿರುವ `ವನವಾಸಿ ಕಲ್ಯಾಣ ಪರಿಷತ್'ಗಳ ಶಾಖೆಗಳು ಕಳೆದ 15-20 ವರ್ಷಗಳಲ್ಲಿ ವ್ಯಾಪಕವಾಗಿ ಹರಡಿವೆ. ಅನಿವಾಸಿ ಗುಜರಾತಿಗಳ ದೇಣಿಗೆಯಿಂದಾಗಿ ಈ ಹಿಂದೂ ಎನ್‌ಜಿಒಗಳು ಸಂಪನ್ಮೂಲದ ವಿಷಯದಲ್ಲಿಯೂ ಕ್ರಿಶ್ಚಿಯನ್ ಮಿಷನರಿಗಳನ್ನು ಮೀರಿಸುವಂತಿವೆ. ಚಹದಂಗಡಿಯಲ್ಲಿ ನನ್ನೆದುರಿಗೆ ಬಂದು `ಜೈ ಶ್ರಿರಾಮ್'ಎಂದು ಕೂಗಿದ್ದ ಯುವಕನ ಹೆಸರು ಭಾನು ರಾತ್ವಾ. ಆತ ಒಂದಷ್ಟು ದಿನ ಕ್ರಿಶ್ಚಿಯನ್ ಮಿಷನರಿ ಜತೆ ಇದ್ದವನಂತೆ.
ಆದರೆ ಅಲ್ಲಿ ಆದಿವಾಸಿ ದೇವತೆಗಳ ಹಾಡು ಹಾಡಬಾರದು, ಅವರ ಚಿತ್ರ ಬಿಡಿಸಬಾರದು ಎಂದೆಲ್ಲ ಪ್ರತಿಬಂಧನೆಗಳು ಹೆಚ್ಚತೊಡಗಿದಾಗ ಪ್ರತಿಭಟಿಸಿ ಹೊರಬಂದವ. ಅಲ್ಲಿಂದ ಆತ ಪಾವಗಡದ ವನವಾಸಿ ಕಲ್ಯಾಣ ಪರಿಷತ್ ಸೇರಿಕೊಂಡು ಮೋದಿ ಪ್ರಚಾರಕನಾಗಿದ್ದಾನೆ. 2002ರ ಕೋಮುಗಲಭೆಯಲ್ಲಿ ಅಹಮದಾಬಾದ್ ನಗರವನ್ನು ಹೊರತುಪಡಿಸಿದರೆ ಅತಿಹೆಚ್ಚು ಸಾವು-ನೋವು ಸಂಭವಿಸಿದ್ದು ಪಂಚಮಹಲ್ ಮತ್ತು ದಾಹೋದ್ ಜಿಲ್ಲೆಗಳಲ್ಲಿ.
`ಕೋಮು ಗಲಭೆಗಳಲ್ಲಿ ಸಂಘಪರಿವಾರದ ಕಾಲಾಳುಗಳಾಗಿ ಕೆಲಸ ಮಾಡಿದ್ದವರು ನಿರುದ್ಯೋಗಿ ಆದಿವಾಸಿ ಯುವಕರು. ಅವರಲ್ಲಿ ಈಗಲೂ ಬಹಳಷ್ಟು ಮಂದಿ ಜೈಲಲ್ಲಿದ್ದಾರೆ. ತಮ್ಮ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರಿಗೆ ಅರಿವಾಗಿದೆ' ಎಂದು ಕಳೆದ ಚುನಾವಣೆಯ ಕಾಲದಲ್ಲಿ ವಡೋಧರಾದ ಸಮಾಜವಿಜ್ಞಾನ ಸಂಶೋಧಕ ಗಣೇಶ್ ದೇವಿ ನನಗೆ ಹೇಳಿದ್ದರು. ಆದರೆ `ಪಟೇಲರ ಬಂಡಾಯ, ಸಂಘಪರಿವಾರದ ಅಸಮಾಧಾನ, ಆದಿವಾಸಿ ಯುವಕರ ಜ್ಞಾನೋದಯ'ಗಳ ಹೊರತಾಗಿಯೂ 2007ರ ಚುನಾವಣೆಯಲ್ಲಿ ನರೇಂದ್ರಮೋದಿ ಗೆದ್ದಿದ್ದರು. ಈ ಬಾರಿಯೂ ಗೆಲ್ಲದಿರಲು ಕಾರಣಗಳು ಬಹಳ ಇಲ್ಲ.