ADVERTISEMENT

ಪತ್ರಕರ್ತ ಸಾಕ್ಷಿಯಾಗಬೇಕೆ, ರಕ್ಷಕನಾಗಬೇಕೆ?

ದಿನೇಶ್ ಅಮಿನ್ ಮಟ್ಟು
Published 18 ನವೆಂಬರ್ 2012, 19:30 IST
Last Updated 18 ನವೆಂಬರ್ 2012, 19:30 IST
ಪತ್ರಕರ್ತ ಸಾಕ್ಷಿಯಾಗಬೇಕೆ, ರಕ್ಷಕನಾಗಬೇಕೆ?
ಪತ್ರಕರ್ತ ಸಾಕ್ಷಿಯಾಗಬೇಕೆ, ರಕ್ಷಕನಾಗಬೇಕೆ?   

ಆತ್ಮಹತ್ಯೆ ಮಾಡಿಕೊಳ್ಳುವಂತಹ ಅಪರಾಧವನ್ನು ಅವನೇನು ಮಾಡಿರಲಿಲ್ಲ. ವೃತ್ತಿಯಲ್ಲಿ ಆತ ಒಬ್ಬ ಪತ್ರಿಕಾ ಛಾಯಾಗ್ರಾಹಕನಾಗಿದ್ದ. ಜಗತ್ತಿನ ಅತಿದೊಡ್ಡ ಪತ್ರಿಕೆಗಳು ಆತನ ಪೋಟೋಗಳನ್ನು ಪ್ರಕಟಿಸಲು ತುದಿಗಾಲಲ್ಲಿ ನಿಂತಿದ್ದವು. ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಒಲಿದು ಬಂದಿತ್ತು.
 
ಎಲ್ಲಕ್ಕಿಂತಲೂ ಮುಖ್ಯವಾಗಿ ಆತನ ವಯಸ್ಸು ಕೇವಲ ಮೂವತ್ತಮೂರು ಆಗಿತ್ತು. ಆ ವಯಸ್ಸಿಗೆ ಸಿಕ್ಕ ಯಶಸ್ಸು, ಮನ್ನಣೆಯನ್ನು ಗಮನಿಸಿದರೆ ವೃತ್ತಿಯಲ್ಲಿ ಆತನ ಭವಿಷ್ಯ ಉಜ್ವಲವಾಗಿತ್ತು ಎನ್ನುವುದಕ್ಕೆ ಅನುಮಾನವೇ ಇರಲಿಲ್ಲ. ಹೀಗಿದ್ದರೂ ಬದುಕುವ ಆಸೆಯನ್ನೇ ಕಳೆದುಕೊಂಡ ಆತ ಆತ್ಮಹತ್ಯೆ ಮಾಡಿಕೊಂಡ. ಆತನ ಹೆಸರು ಕೆವಿನ್ ಕಾರ್ಟರ್.

ಇಷ್ಟು ಹೇಳಿದರೆ ಬಹಳಷ್ಟು ಮಂದಿಗೆ ಗುರುತು ಹತ್ತಲಾರದು. ಆತ ಜಗತ್ತಿಗೆ ಪರಿಚಯವಾಗಿದ್ದೇ ಒಂದು ಫೋಟೊದ ಮೂಲಕ. ದಕ್ಷಿಣ ಆಫ್ರಿಕಾದವನಾಗಿದ್ದ ಕಾರ್ಟರ್ ಬರಗಾಲ ಮತ್ತು ಬಂಡುಕೋರರ ಹಿಂಸಾಚಾರದಿಂದ ನಲುಗಿಹೋಗಿದ್ದ ಸೂಡಾನ್‌ಗೆ ಹೋಗಿದ್ದಾಗ ಅಲ್ಲೊಂದು ಹೃದಯವಿದ್ರಾವಕ ದೃಶ್ಯವನ್ನು ಕಾಣುತ್ತಾನೆ. ತಕ್ಷಣ ಆತನೊಳಗಿದ್ದ ಕಸಬುದಾರ ಛಾಯಾಗ್ರಾಹಕ ಜಾಗೃತನಾಗುತ್ತಾನೆ.

ಹಸಿವಿನಿಂದಾಗಿ ಮೂಳೆಚಕ್ಕಳವಾಗಿ ಹೋಗಿದ್ದ ಮಗುವೊಂದು ಸಂತ್ರಸ್ತರ ಶಿಬಿರದಲ್ಲಿರುವ ಗಂಜಿ ಕೇಂದ್ರದ ಕಡೆ ತೆವಳುತ್ತಾ ಹೋಗುತ್ತಿರುವುದು ಮತ್ತು ಅದರ ಹಿಂದೆಯೇ ಒಂದು ರಣಹದ್ದು ಆ ಮಗುವಿನ ಮೇಲೆ ಎರಗಿಬೀಳಲು ಕಾಯುತ್ತಿರುವ ದೃಶ್ಯ ಅದು.

ಸದ್ದು ಮಾಡಿದರೆ ಹದ್ದು ಹಾರಿಹೋಗುತ್ತೇನೋ ಎಂಬ ಭಯದಿಂದ ಕಾರ್ಟರ್ ಕೂಡಾ ತೆವಳುತ್ತಾ ಸಾಧ್ಯ ಇರುವಷ್ಟು  ಹತ್ತಿರ ಹೋಗಿ ಫೋಟೊ ತೆಗೆಯುತ್ತಾನೆ. ಅದಕ್ಕಿಂತ ಮೊದಲು ಹದ್ದು ರೆಕ್ಕೆ ಬಿಚ್ಚಬಹುದೇನೋ ಎಂಬ ನಿರೀಕ್ಷೆಯಿಂದ ಆತ 20 ನಿಮಿಷ ಕಾದಿದ್ದನಂತೆ.

ಆ ಫೋಟೊ ಮೊದಲು `ದಿ ನೂಯಾರ್ಕ್ ಟೈಮ್ಸ~ ಮತ್ತು `ದಿ ಮೇಲ್ ಆ್ಯಂಡ್ ಗಾರ್ಡಿಯನ್~ ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಅದರ ನಂತರ  ಹಲವಾರು ಪತ್ರಿಕೆಗಳು ಅದನ್ನು ಮರುಮುದ್ರಿಸಿದ್ದವು. ಜಗತ್ತಿನಾದ್ಯಂತ ಓದುಗರು ಅದಕ್ಕೆ ಪ್ರತಿಕ್ರಿಯಿಸಿದ್ದರು.  ಬರಗಾಲ ಮತ್ತು ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿದ್ದ ಸೂಡಾನ್ ಸರ್ಕಾರಕ್ಕೆ ವಿಶ್ವದ ಎಲ್ಲ ಕಡೆಗಳಿಂದಲೂ ನೆರವು ಹರಿದುಬಂದಿತ್ತು.
 
ಆದರೆ ಬಹಳಷ್ಟು ಓದುಗರು ನೋವು, ದುಃಖ, ಆಕ್ರೋಶಗಳಿಂದ ಪ್ರತಿಕ್ರಿಯಿಸಿದ್ದರು. ಕೆಲವರು ಛಾಯಾಗ್ರಾಹಕನ ಅಸಂವೇದನಾಶೀಲತೆಯನ್ನು ಟೀಕಿಸಿದ್ದರು. `..ಒಬ್ಬ ಛಾಯಾಗ್ರಾಹಕ ಕೇವಲ ಒಂದು ಫೋಟೊ ಸಂಪಾದನೆಯನ್ನಷ್ಟೇ ನೋಡದೆ, ಮೊದಲು ಹದ್ದನ್ನು ಅಲ್ಲಿಂದ ಓಡಿಸಿ ಮಗುವನ್ನು ರಕ್ಷಿಸಬೇಕಿತ್ತು. ವೃತ್ತಿ ಏನೇ ಇರಲಿ ಆತ ಮೊದಲು ಮನುಷ್ಯನಾಗಬೇಕು..~ ಎಂದೆಲ್ಲ ಜನ ಪ್ರತಿಕ್ರಿಯಿಸಿದ್ದರು.

ಕೆಲವು ಪತ್ರಿಕೆಗಳು ಕಾರ್ಟರ್ ಕೂಡಾ ಒಬ್ಬ ರಣಹದ್ದು ಎಂದು ಬಣ್ಣಿಸಿ `ಎರಡು ಹದ್ದುಗಳ ನಡುವೆ ಮಗು ಇತ್ತು~ ಎಂದು ಬರೆದಿದ್ದವು. ಕೊನೆಗೆ `ನೂಯಾರ್ಕ್ ಟೈಮ್ಸ~ನ ಸಂಪಾದಕರು ವಿವರಣೆ ಕೊಡಬೇಕಾಯಿತು.

ಸತ್ಯಸಂಗತಿ ಏನೆಂದರೆ ಫೋಟೊ ತೆಗೆದ ಕೂಡಲೇ ಕಾರ್ಟರ್ ಹದ್ದನ್ನು ಅಲ್ಲಿಂದ ಓಡಿಸಿ ಆ ಹೆಣ್ಣುಮಗುವನ್ನು ತಕ್ಷಣದ ಅಪಾಯದಿಂದ ಪಾರು ಮಾಡಿದ್ದ. ಅದರ ನಂತರ ಮಗುವಿನ ಗತಿಯೇನಾಯಿತು ಎನ್ನುವುದು ಆತನಿಗೂ ತಿಳಿದಿರಲಿಲ್ಲ. ಬರಗಾಲಪೀಡಿತ ಸೂಡಾನ್‌ನಲ್ಲಿ ಮುಕ್ತಪತ್ರಿಕಾ ಸ್ವಾತಂತ್ರ್ಯ ಇರಲಿಲ್ಲ.

ಅಲ್ಲಿದ್ದ ಬರಪೀಡಿತ ಮನುಷ್ಯರ ಫೋಟೊ ತೆಗೆಯುವುದು ಅಲ್ಲಿನ ಪ್ರಭುತ್ವಕ್ಕೆ ಇಷ್ಟದ ಕೆಲಸವೂ ಆಗಿರಲಿಲ್ಲ. ಬರಪೀಡಿತ ವ್ಯಕ್ತಿಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಸಾಧ್ಯತೆ ಇರುವುದರಿಂದ ಅವರನ್ನು ಮುಟ್ಟುವುದಕ್ಕೆ ನಿರ್ಬಂಧ ಕೂಡಾ ಇತ್ತು. ಒಂದು ಫೋಟೊವನ್ನಷ್ಟೇ ನೋಡಿ ಕಾರ್ಟರ್ ಮನುಷ್ಯನೇ ಅಲ್ಲ ಎಂದು ತೀರ್ಮಾನಿಸಿದ ಅಮಾಯಕ ಜನರಿಗೆ ಈ ಎಲ್ಲ ವಿವರಗಳು ಗೊತ್ತಿರುವ ಸಾಧ್ಯತೆಗಳು ಕಡಿಮೆ. ಇದು ಎಲ್ಲ  ಕಾಲದ ಸತ್ಯ.

`ಆ ಬಾಲಕಿಯ ಫೋಟೊ ತೆಗೆದ ನಂತರ ಕಾರ್ಟರ್ ಮನಸ್ಸು ಕಲಕಿಹೋಗಿತ್ತು. ಆತ ಸಮೀಪದ ಮರವೊಂದರ ನೆರಳಲ್ಲಿ ಕೂತು ಸಿಗರೇಟ್ ಸೇದುತ್ತಾ ದೇವರ ಹತ್ತಿರ ಮಾತನಾಡಿದ್ದ. ಅವನು ಎಷ್ಟೊಂದು ದುಃಖಿತನಾಗಿದ್ದನೆಂದರೆ `ನನಗೆ ನನ್ನ ಮಗಳನ್ನು ಆಲಿಂಗಿಸಬೇಕೆನಿಸುತ್ತದೆ~ ಎಂದು ಬಡಬಡಿಸುತ್ತಿದ್ದ~ ಎಂದು ಆ ಸಮಯದಲ್ಲಿ ಕಾರ್ಟರ್ ಜತೆಯಲ್ಲಿದ್ದ ಸ್ನೇಹಿತ ಸಿಲ್ವಾ ನಂತರದ ದಿನಗಳಲ್ಲಿ ಬರೆದಿದ್ದ.

ಈ ವಿವಾದಗಳ ನಂತರವೂ ಆ ಚಿತ್ರಕ್ಕಾಗಿ ಕೆವಿನ್ ಕಾರ್ಟರ್  ಪ್ರತಿಷ್ಠಿತ `ಪುಲಿಟ್ಜರ್~ ಪ್ರಶಸ್ತಿ ಪಡೆಯುತ್ತಾನೆ. ರಾಯಿಟರ್ ಸುದ್ದಿ ಸಂಸ್ಥೆಯಲ್ಲಿ ಆಕರ್ಷಕ ಸಂಬಳದ ಉದ್ಯೋಗ ಪಡೆಯುತ್ತಾನೆ. ಆದರೆ ಆತ ಎಂದೂ ಸಂತೋಷವಾಗಿರಲಿಲ್ಲ.

ಕೆವಿನ್ ಕಾರ್ಟರ್‌ನ ಬದುಕನ್ನು ಸಾವು ಕೊನೆಗೊಳಿಸಿದರೂ, ಆ ಸಾವಿನಿಂದ ಹುಟ್ಟಿಕೊಂಡ ಅನೇಕ ಪ್ರಶ್ನೆಗಳು ಇಂದು ಕೂಡಾ ಮಾಧ್ಯಮಕ್ಷೇತ್ರದ ಮುಂದೆ ಇವೆ. `ಒಬ್ಬ ಪತ್ರಕರ್ತ ಸಾಕ್ಷಿಯಾಗಬೇಕೇ, ಇಲ್ಲವೇ ರಕ್ಷಕನಾಗಬೇಕೇ?~ ಎನ್ನುವುದು ಮೊದಲ ಪ್ರಶ್ನೆ. 

ಮಂಗಳೂರಿನ `ಸ್ಟೇಹೋಂ~ ಮೇಲೆ ದಾಳಿ ನಡೆಸಿ ಅಲ್ಲಿದ್ದ ಯುವಕ - ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದ ದುಷ್ಕರ್ಮಿಗಳ ಕೃತ್ಯವನ್ನು ವರದಿ ಮಾಡಿದ್ದ ಸುದ್ದಿವಾಹಿನಿಯ ವರದಿಗಾರ ನವೀನ್ ಸೂರಿಂಜೆಯ ಬಂಧನ ಕೆವಿನ್ ಕಾರ್ಟರ್ ಬಿಟ್ಟುಹೋಗಿರುವ ಪ್ರಶ್ನೆಗಳನ್ನು ಮತ್ತೆ ಕೇಳುವಂತೆ ಮಾಡಿದೆ.

ಅಂತರರಾಷ್ಟ್ರೀಯ ಖ್ಯಾತಿಯ ಪತ್ರಿಕಾಛಾಯಾಗ್ರಾಹಕ ರಘು ರಾಯ್ ಇತ್ತೀಚಿನ ಇಂತಹ ವಿವಾದಗಳ ಬಗ್ಗೆ ಪ್ರತಿಕ್ರಿಯಿಸುತ್ತಾ `ಶೂಟ್ ಮಾಡಿ ಚಿತ್ರ ಪಡೆಯುವುದು ಅದರ ಮೂಲಕ ಘಟನೆಗೆ ಸಾಕ್ಷ್ಯ ಒದಗಿಸುವುದು ಅಷ್ಟೇ ಒಬ್ಬ ಕ್ಯಾಮೆರಾಮೆನ್ ಕೆಲಸ~ ಎಂದಿದ್ದರು. ಎಲ್ಲರೂ ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ.

ಇದಕ್ಕೆ ರೋಚಕತೆಯ ಬೆನ್ನುಹತ್ತಿ ದಾರಿ ತಪ್ಪುತ್ತಿರುವ ಕೆಲವು ಸುದ್ದಿವಾಹಿನಿಗಳು ಮುಖ್ಯ ಕಾರಣ. `ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಇಂತಹ ಮಾಧ್ಯಮಗಳಿಗೆ ಮೂಗುದಾರ ಹಾಕಬೇಕು~ ಎಂದು ಜನ ಬಹಿರಂಗವಾಗಿಯೇ ಮಾತನಾಡತೊಡಗಿದ್ದಾರೆ. ವೃತ್ತಿನಿಷ್ಠ ಮಾಧ್ಯಮಗಳನ್ನು ಎಂದೂ ಬಯಸದ ಪ್ರಭುತ್ವ, ಹಾದಿ ತಪ್ಪಿರುವ ಕೆಲವು ಸುದ್ದಿವಾಹಿನಿಗಳನ್ನು ಉಲ್ಲೇಖಿಸಿ ಒಟ್ಟು ಪತ್ರಿಕಾ ಸ್ವಾತಂತ್ರ್ಯವನ್ನೇ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ.

ಅದು  ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದಿಂದ ಕರ್ನಾಟಕದ ಬಿಜೆಪಿ ಸರ್ಕಾರದವರೆಗೆ ಎಲ್ಲೆಡೆ ವ್ಯವಸ್ಥಿತವಾಗಿ ಪ್ರಾರಂಭವಾಗಿದೆ. ಆದುದರಿಂದ `ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗ~ ಮತ್ತು `ಪತ್ರಿಕಾ ಸ್ವಾತಂತ್ರ್ಯದ ಹರಣ~ವನ್ನು ಪ್ರತ್ಯೇಕವಾಗಿ ಇಟ್ಟುಕೊಂಡು ಚರ್ಚೆ ನಡೆಸಬೇಕಾಗಿದೆ. ಇವೆರಡನ್ನೂ ಸಾಮಾನ್ಯೀಕರಿಸುವುದರಿಂದ ಅಪಾಯ ಪತ್ರಕರ್ತರಿಗೆ ಮಾತ್ರ ಅಲ್ಲ, ಪ್ರಜಾಪ್ರಭುತ್ವಕ್ಕೂ ಇದೆ.

ಪತ್ರಕರ್ತರು, ಪತ್ರಿಕಾಛಾಯಾಗ್ರಾಹಕರು ಮತ್ತು ಕ್ಯಾಮೆರಾಮೆನ್‌ಗಳು `ಸಾಕ್ಷಿಗಳಾಗಬೇಕೆ, ರಕ್ಷಕರಾಗಬೇಕೆ?~ ಎನ್ನುವುದು ಇತ್ತೀಚಿನವರೆಗೆ ಕೇವಲ ನೈತಿಕ ಪ್ರಶ್ನೆಯಾಗಿತ್ತು. ಆದುದರಿಂದ ರಕ್ಷಕರಾಗದೆ ಸಾಕ್ಷಿಗಳಾಗಲಷ್ಟೇ ಹೊರಟವರನ್ನು ಪೊಲೀಸರು ಬಂಧಿಸುತ್ತಿರಲಿಲ್ಲ.

ಈಗಲೂ ಇದನ್ನು ನೈತಿಕ ಪ್ರಶ್ನೆಯಾಗಿಯೇ ಇಟ್ಟುಕೊಂಡು ಚರ್ಚೆ ನಡೆಯಲಿ, ನಡೆಯಲೇಬೇಕು. ಆದರೆ ಪೊಲೀಸರು ಈಗ ಇದನ್ನು ಕಾನೂನಿನ ಪ್ರಶ್ನೆಯನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. `ಪತ್ರಕರ್ತರಿಗೆ `ಸಾಕ್ಷಿದಾರನ ಕರ್ತವ್ಯ~ವಷ್ಟೇ ಮುಖ್ಯ ಅಲ್ಲ, ಆತನಿಗೆ `ರಕ್ಷಕನ ಜವಾಬ್ದಾರಿ~ಯೂ ಇರಬೇಕು, ಪತ್ರಕರ್ತನೊಬ್ಬ ರಕ್ಷಕನಾಗದೆ ಕೇವಲ ಸಾಕ್ಷಿಯಾದರೆ ಆತ ಅಪರಾಧಿ~ ಎಂದು ಪೊಲೀಸರು ಹೇಳುತ್ತಿದ್ದಾರೆ. 

ತನ್ನ ವರದಿ ಇಲ್ಲವೇ ಚಿತ್ರವನ್ನು ಸಾಕ್ಷಿಯಾಗಿ ಒದಗಿಸುವ ಮೂಲಕವೇ ಪತ್ರಕರ್ತ ರಕ್ಷಕನಾಗುತ್ತಾನೆ ಎಂಬುದನ್ನು ಪೊಲೀಸರು ಮರೆತಿದ್ದಾರೆ. ನವೀನ್ ಮತ್ತು ಗೆಳೆಯರು `ಹೋಂಸ್ಟೇ~ ದಾಳಿಯನ್ನು ಮಾಧ್ಯಮಗಳ ಮೂಲಕ ಬಯಲುಗೊಳಿಸದೆ ಇದ್ದಿದ್ದರೆ ಅಲ್ಲಿನ ಕೋಮುವಾದಿಗಳ ಅಟ್ಟಹಾಸ ಮತ್ತು ಪೊಲೀಸರ ನಿಷ್ಕ್ರಿಯತೆ ಖಂಡಿತ ಬಯಲಾಗುತ್ತಿರಲಿಲ್ಲ. ಈ ದುಷ್ಕೃತ್ಯವನ್ನು ಸಾಕ್ಷಿಸಮೇತ ಬಯಲುಗೊಳಿಸುವ ಮೂಲಕ ನವೀನ್ ಮತ್ತು ಗೆಳೆಯರು ಮುಂದೆ ಇನ್ನಷ್ಟು ಯುವಕ-ಯುವತಿಯರು ಈ ರೀತಿಯ ದಾಳಿಗೊಳಗಾಗದಂತೆ ರಕ್ಷಿಸಿದ್ದಾರೆ.

`ಒಬ್ಬ ವೃತ್ತಿನಿಷ್ಠ, ಸಂವೇದನಾಶೀಲ ಮತ್ತು ಪ್ರಾಮಾಣಿಕನಾದ ಪತ್ರಕರ್ತ ಇಲ್ಲವೇ ಪತ್ರಿಕಾಛಾಯಾಗ್ರಾಹಕ ಯಾವ ದೇಶ ಇಲ್ಲವೇ ಕಾಲದಲ್ಲಿ  ಸಂತೋಷ-ನೆಮ್ಮದಿಯಿಂದ ಬದುಕಲು ಸಾಧ್ಯವೇ?~ ಎನ್ನುವ ಎರಡನೆ ಪ್ರಶ್ನೆಯನ್ನು ಕೂಡಾ ಕೆವಿನ್ ಕಾರ್ಟರ್ ಬಿಟ್ಟುಹೋಗಿದ್ದಾನೆ. ಆತನ ಆತ್ಮಹತ್ಯೆಗೆ ಸೂಡಾನ್ ಬಾಲಕಿಯ ಫೋಟೊವೊಂದೇ ಕಾರಣ ಅಲ್ಲ.
 
ವರ್ಣದ್ವೇಷ ಅದರ ಉತ್ತುಂಗದಲ್ಲಿರುವ ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮ ವರ್ಗದ ಬಿಳಿಯರ ಕುಟುಂಬದಲ್ಲಿ ಹುಟ್ಟಿದ್ದ ಕಾರ್ಟರ್ ಬಾಲ್ಯದಿಂದಲೇ ಕಪ್ಪುಜನಾಂಗದವರ ಮೇಲೆ ಬಿಳಿಯರು ನಡೆಸುತ್ತಿದ್ದ ದೌರ್ಜನ್ಯಗಳಿಗೆ ಸಾಕ್ಷಿಯಾಗಿದ್ದವ. ಅವಕಾಶ ಸಿಕ್ಕಿದಾಗಲೆಲ್ಲ ಅದರ ವಿರುದ್ಧ ಪ್ರತಿಭಟನೆ ನಡೆಸಿದವ. `ದಿ ಬ್ಯಾಂಗ್ ಬ್ಯಾಂಗ್ ಕ್ಲಬ್~ ಎಂದು ಕರೆಯಲಾಗುತ್ತಿದ್ದ ನಾಲ್ಕು ಬಿಳಿಯ ಪತ್ರಿಕಾಛಾಯಾಗ್ರಾಹಕರ ಸಂಘಟನೆಯಲ್ಲಿ ಕಾರ್ಟರ್ ಒಬ್ಬನಾಗಿದ್ದ.

ದಕ್ಷಿಣ ಆಫ್ರಿಕಾದಲ್ಲಿ ಬಿಳಿಯ ದುಷ್ಕರ್ಮಿಗಳು ಕಪ್ಪುಜನಾಂಗಕ್ಕೆ ಸೇರಿದ ವ್ಯಕ್ತಿಗಳ ಕುತ್ತಿಗೆಗೆ ಟಯರ್‌ಗಳನ್ನು ತೂಗುಹಾಕಿ ಬೆಂಕಿಹಚ್ಚಿ ಸಾಯಿಸುವುದು ಸಾಮಾನ್ಯವಾಗಿತ್ತು. ಇದಕ್ಕೆ `ನೆಕ್ಲೆಸಿಂಗ್~ ಎಂದು ಕರೆಯುತ್ತಿದ್ದರು. ಇಂತಹ ಮೊದಲ ಘಟನೆಯ ಚಿತ್ರ ತೆಗೆದು ಪತ್ರಿಕೆಯಲ್ಲಿ ಪ್ರಕಟಣೆಗೆ ಕೊಟ್ಟವ ಕಾರ್ಟರ್. ಈ ರೀತಿಯ ಹಲವಾರು ಅಮಾನುಷ ಘಟನೆಗಳ ಚಿತ್ರಗಳನ್ನು ಕಾರ್ಟರ್ ತೆಗೆದಿದ್ದ. ವೃತ್ತಿಜೀವನದಲ್ಲಿ ಎದುರಿಸಿದ ಇಂತಹ ಘಟನೆಗಳಿಂದ ಆತ ನೊಂದುಹೋಗಿದ್ದ.

 ಅಷ್ಟೊತ್ತಿಗೆ ಆತನ ಜೀವದ ಗೆಳೆಯ ಮತ್ತು `ದಿ ಬ್ಯಾಂಗ್‌ಬ್ಯಾಂಗ್ ಕ್ಲಬ್~ನ ಸದಸ್ಯ ಕೆನ್ ಊಸ್ಟರ್‌ಬ್ರೋಕ್ ಫೋಟೊ ತೆಗೆಯುತ್ತಿದ್ದಾಗಲೇ ಪೊಲೀಸರ ಗುಂಡಿಗೆ ಬಲಿಯಾಗುತ್ತಾನೆ. ಸಾವಿನ ಸಮಯದಲ್ಲಿ ಗೆಳೆಯನ ಸಮೀಪವೇ ಕಾರ್ಟರ್ ಇದ್ದ. ಆತನ ಮನೋಕ್ಲೇಶಕ್ಕೆ ಈ ಘಟನೆ ಕೂಡಾ ಕಾರಣ. ನಂತರದ ದಿನಗಳಲ್ಲಿ ಕುಡಿತದ ದಾಸನಾಗಿ ಹೋಗಿದ್ದ, ಮಾದಕ ವ್ಯಸನಿಯೂ ಆಗಿದ್ದ.

ಕೊನೆಕೊನೆಗೆ ತಾನು ತೆಗೆದ ಚಿತ್ರಗಳೆಲ್ಲವೂ ಎದ್ದುಬಂದು ಆತನನ್ನು ಕಾಡತೊಡಗಿ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡುಬಿಟ್ಟಿದ್ದವು.  ಸಾಯುವ ಮೊದಲು ಬರೆದಿಟ್ಟಿದ ಪತ್ರ ಕೂಡಾ ಇದನ್ನೇ ಹೇಳುತ್ತಿದೆ:  `....ಹತ್ಯೆಗಳು... ಹೆಣಗಳು.. ಕೋಪ, ನೋವು... ಹಸಿವು ಮತ್ತು ಗಾಯದಿಂದ ನರಳುತ್ತಿರುವ ಮಕ್ಕಳು... ಹಿಂಸಾವಿನೋದಿ ಹುಚ್ಚು ಪೊಲೀಸರು... -ಈ ಎಲ್ಲ ನೆನಪುಗಳು ನನ್ನನ್ನು ಕಾಡುತ್ತಿವೆ. ನಾನು ನನ್ನ ಗೆಳೆಯ ಕೆನ್‌ನನ್ನು ಭೇಟಿಯಾಗಲು ಹೋಗುತ್ತಿದ್ದೇನೆ, ಆದೃಷ್ಟಶಾಲಿಯಾಗಿದ್ದರೆ ಆತನ ಭೇಟಿಯಾಗಬಹುದು....~ ಎಂದು ಕಾರ್ಟರ್ ಆ ಪತ್ರದಲ್ಲಿ ಬರೆದಿದ್ದ. 

 ಪತ್ರಕರ್ತರು ಸಂವೇದನಾಶೀಲರಾಗಿರಕೆಂದು ಸಮಾಜ ಬಯಸುತ್ತದೆ, ಸರ್ಕಾರವೂ ಅದನ್ನೇ ಹೇಳುತ್ತಿದೆ. ಆದರೆ ರಾಕ್ಷಸ ರೂಪ ಪಡೆಯುತ್ತಿರುವ ಸರ್ಕಾರ ಮತ್ತು ಸಂವೇದನೆಯನ್ನೇ ಕಳೆದುಕೊಳ್ಳುತ್ತಿರುವ ಸಮಾಜದ ಮಧ್ಯೆ ಪತ್ರಕರ್ತ ಸಂವೇದನಾಶೀಲನಾಗಿ ಉಳಿಯಲು ಹೇಗೆ ಸಾಧ್ಯ? ಬಹಳಷ್ಟು ಸಂದರ್ಭಗಳಲ್ಲಿ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂದು ಹೊರಟ ಪತ್ರಕರ್ತ ಹತಾಶನಾಗುತ್ತಾನೆ, ಸಿನಿಕನಾಗುತ್ತಾನೆ, ದುರ್ಬಲ ಮನಸ್ಸಿನವನಾಗಿದ್ದರೆ ಕೊನೆಗೆ ಕೆವಿನ್ ಕಾರ್ಟರ್‌ನಂತೆ ಆತ್ಮಹತ್ಯೆ ಮಾಡಿಕೊಳ್ಳಬಹುದು.

ಮತ್ತೆ ಮೊದಲಿನ ಪ್ರಶ್ನೆಗೆ ಬರುವುದಾದರೆ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಅಪರಾಧ ಮಾಡಿದ್ದ? ಇದನ್ನೇ ಇನ್ನು ಸ್ವಲ್ಪ ಬದಲಾಯಿಸಿ ಕೇಳುವುದಾದರೆ ನವೀನ್ ಸೂರಿಂಜೆ ಎಂಬ ಪತ್ರಕರ್ತ ಬಂಧನಕ್ಕೊಳಗಾಗುವಂತಹ ಯಾವ ಅಪರಾಧ ಮಾಡಿದ್ದ? ಅಪರಾಧ ಮಾಡದೆ ಇದ್ದಿದ್ದರೆ ಬಂಧಿತ ಪತ್ರಕರ್ತನ ವೃದ್ದ ತಂದೆ-ತಾಯಿಯ ನೋವು ನಮ್ಮದು ಕೂಡಾ ಎಂದು ಸಮಾಜಕ್ಕೆ ಯಾಕೆ ಅನಿಸುವುದಿಲ್ಲ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.