ನಾನು ನಿಮ್ಮೊಂದಿಗೆ ಮೀನಾಳ ಕಥೆ ಹಂಚಿಕೊಳ್ಳುವ ಮೊದಲು ವೇಗವಾಗಿ ಆಧುನೀಕರಣಗೊಳ್ಳುತ್ತಿರುವ ಬಾಡಿಗೆ ತಾಯ್ತನ ಕ್ಷೇತ್ರವನ್ನು ಅರ್ಥಮಾಡಿಕೊಳ್ಳೋಣ. ‘ಬಾಡಿಗೆ ತಾಯಿ’ ಎಂದರೆ ಪರ್ಯಾಯ ಎಂದರ್ಥ. ‘ಬಾಡಿಗೆ ತಾಯಿ’ ಮತ್ತೊಬ್ಬ ದಂಪತಿ ಅಥವಾ ವ್ಯಕ್ತಿಯ ಮಗುವನ್ನು ಹೊತ್ತು ಹೆರುವ ಮಹಿಳೆ.
‘ಸಾಂಪ್ರದಾಯಿಕ ಬಾಡಿಗೆ ತಾಯ್ತನ’ದಲ್ಲಿ ಮರುಸೃಷ್ಟಿ ಕಾರ್ಯದಲ್ಲಿ ಮಗುವನ್ನು ಬಯಸಿದ ತಂದೆಯ ವೀರ್ಯಾಣುಗಳನ್ನು ಕೃತಕ ಮಾರ್ಗದ ಮೂಲಕ ಮಹಿಳೆಯ ಗರ್ಭಕ್ಕೆ ಕಳುಹಿಸಲಾಗುತ್ತದೆ. ಇಲ್ಲಿ ಮಗು ಆನುವಂಶಿಕವಾಗಿ ಬಾಡಿಗೆ ತಾಯಿಗೆ ಸೇರುತ್ತದೆ. ಪುರುಷರಲ್ಲಿ ಗರ್ಭಾಶಯ ಇಲ್ಲದಿರುವುದರಿಂದ ಆತ ಅದನ್ನು ಕೊಂಡು, ತನ್ನ ವೀರ್ಯಾಣುಗಳನ್ನು ದಾನ ಮಾಡುತ್ತಾನೆ. ಪತ್ನಿ ಹಲವು ಕಾರಣಗಳಿಂದ ಗರ್ಭವತಿ ಆಗುವುದು ಸಾಧ್ಯವಿಲ್ಲದಿದ್ದಾಗ (ಗರ್ಭಕೋಶ ಮತ್ತು ಅಂಡಾಶಯದ ಸಮಸ್ಯೆಯಿಂದಾಗಿ) ಇಂಥ ಸನ್ನಿವೇಶಗಳು ಎದುರಾಗುತ್ತವೆ.
‘ಗರ್ಭಾವಧಿ ಬಾಡಿಗೆ ತಾಯ್ತನ’ದಲ್ಲಿ ಭ್ರೂಣ (ವೀರ್ಯ + ಅಂಡಾಣು) ಮರು ಉತ್ಪಾದನಾ ಲ್ಯಾಬ್‌ನಲ್ಲಿ ಸೃಷ್ಟಿಯಾಗಿ ‘ಬಾಡಿಗೆ ಗರ್ಭಾಶಯ’ಕ್ಕೆ ವರ್ಗಾವಣೆಯಾಗುತ್ತದೆ. ಈ ಮಗು ವಂಶವಾಹಿನಿಯಲ್ಲಿ ಎರಡೂ ಪೋಷಕರಿಗೆ ಸಂಬಂಧಿಸಿದ್ದಾಗಿರುತ್ತದೆ. ಅಂಥ ಮಕ್ಕಳ ಪೋಷಕರನ್ನು ಉದ್ದಿಷ್ಟ ಪೋಷಕ/ಪೋಷಕರು ಅಥವಾ ಸಾಮಾಜಿಕ ಪೋಷಕರು ಎಂದು ಕರೆಯಲಾಗುತ್ತದೆ.
‘ಪರೋಪಕಾರದ ಬಾಡಿಗೆ ತಾಯ್ತನ’ವು ಮಹಿಳೆ ಗರ್ಭಾವಧಿಯಲ್ಲಿ ಮಗುವಿನ ಪೋಷಣೆಗೆ ಯಾವುದೇ ಆರ್ಥಿಕ ಪ್ರತಿಫಲ ಪಡೆಯುವುದಿಲ್ಲ. ‘ವ್ಯಾವಹಾರಿಕ ಬಾಡಿಗೆ ತಾಯ್ತನ’ವು ಗರ್ಭಾಶಯವನ್ನು ಬಾಡಿಗೆಗೆ ಪಡೆಯುವುದು. ಇಲ್ಲಿ ಬಾಡಿಗೆ ತಾಯಿಯು ಉದ್ದಿಷ್ಟ ಪೋಷಕರ ಭ್ರೂಣವನ್ನು ಹೊತ್ತುಕೊಂಡು ಹೆರಿಗೆಯ ನಂತರ ಮಗುವನ್ನು ಅವರ ಕೈಗೊಪ್ಪಿಸುತ್ತಾಳೆ. ಈ ಸೇವೆಗೆ ಬೆಲೆಯನ್ನು ಕಟ್ಟಲಾಗುತ್ತದೆ. ಬೆಂಗಳೂರಿನಲ್ಲಿ ‘ಬಾಡಿಗೆ ತಾಯಿ ಅಂಗಡಿ’ಗಳಲ್ಲಿ ಬೆಲೆ ಶುರುವಾಗುವುದೇ ಒಟ್ಟು 15–30 ಲಕ್ಷ ರೂಪಾಯಿಯ ಪ್ಯಾಕೇಜ್‌ನಲ್ಲಿ.
ಈಗ ಮೀನಾಳ ಕಥೆಗೆ ಬರೋಣ. ತಡವಾಗಿ ವಿವಾಹವಾದ ಆಕೆ ಐದು ವರ್ಷಗಳ ಕಾಲ ಬಂಜೆತನದ ಚಿಕಿತ್ಸೆ ನೀಡಿದರೂ ಸಹಜ ಗರ್ಭಧರಿಸಲು ಸಾಧ್ಯವಾಗಲಿಲ್ಲ. ಸಿರಿವಂತ ಕುಟುಂಬದ ಈ ದಂಪತಿ ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ಉದ್ಯೋಗಿಗಳು. ಮಗುವಿಲ್ಲದೆ ಅವರಿಗೆ ಬದುಕು ನಿರರ್ಥಕವೆನಿಸತೊಡಗಿತ್ತು.
ಹೀಗಾಗಿ ಅವರು ಮಗುವೊಂದನ್ನು ದತ್ತು ತೆಗೆದುಕೊಳ್ಳುವ ತೀರ್ಮಾನಕ್ಕೆ ಬಂದರು. ಕಾನೂನುಬದ್ಧವಾಗಿ ದತ್ತು ತೆಗೆದುಕೊಳ್ಳಲು ದೇಶದ ಉದ್ದಗಲಕ್ಕೂ ಹುಡುಕಾಡಿದರು. ಈ ದತ್ತು ಕೇಂದ್ರಗಳ ಮುಂದೆ ಕಾದು ನಿಂತಿದ್ದವರ ಸಾಲು ದೀರ್ಘವಾಗಿತ್ತು. ಅಲ್ಲದೆ, ಕಾನೂನಿನಲ್ಲಿ ದತ್ತು ತೆಗೆದುಕೊಳ್ಳುವ ಪೋಷಕರ ವಯಸ್ಸಿನ ಮಿತಿಯೂ ಇರುವುದರಿಂದ, ಅದರ ಅನ್ವಯ ಮಗುವನ್ನು ಪಡೆದುಕೊಳ್ಳಲು ಅವರ ವಯಸ್ಸು ಮೀರಿತ್ತು.
ಅವರ ಮುಂದಿದ್ದ ಉತ್ತಮ ಆಯ್ಕೆಯೆಂದರೆ ಬಾಡಿಗೆ ತಾಯಿಯ ಮೊರೆ ಹೋಗುವುದು. ಮೀನಾರ ಗರ್ಭಾಶಯ ಭ್ರೂಣವನ್ನು ತನ್ನಲ್ಲಿರಿಸಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲದಿರುವುದರಿಂದ ಅದನ್ನು ತಮ್ಮ ಗರ್ಭದಲ್ಲಿ ಬೆಳೆಸಲು ನೆರವು ನೀಡುವಂತೆ ನೆಂಟರಿಷ್ಟರನ್ನೆಲ್ಲಾ ಬೇಡಿಕೊಂಡರು. ಗರ್ಭ ಧರಿಸುವ ತೊಂದರೆಗೆ ಒಳಗಾಗಲು ಸಂಬಂಧಿಕರಾರೂ ಸಿದ್ಧರಿರಲಿಲ್ಲ. ಮಗುವನ್ನು ಹೆತ್ತು ಅದನ್ನು ಮೀನಾರ ಕೈಗೊಪ್ಪಿಸುವುದು ಕಷ್ಟದಾಯಕವಾಗಿತ್ತು. ಅದರಿಂದ ಅವರಿಗೆ ಯಾವ ಲಾಭವೂ ಆಗುತ್ತಿರಲಿಲ್ಲ.
ದಿನದಿಂದ ದಿನಕ್ಕೆ ಆನಂದ್‌ರಲ್ಲಿ (ಮೀನಾರ ಪತಿ) ತೋಳತೆಕ್ಕೆಯಲ್ಲಿ ಮಗುವನ್ನು ಅವುಚಿಕೊಂಡು ಎದೆಹಾಲುಣಿಸುವ ಗಳಿಗೆಗಾಗಿ ಪರಿತಪಿಸುತ್ತಿರುವ ಪತ್ನಿ ಮೀನಾರ ಕುರಿತು ಆತಂಕ ಹೆಚ್ಚಾಗತೊಡಗಿತು. ಈ ಎಲ್ಲಾ ಸಂಕಷ್ಟಗಳ ನಡುವೆ ಅವರು ಮತ್ತೆರಡು ವರ್ಷ ಸವೆಸಿದರು.
ಮೂರು ಮಕ್ಕಳ ತಾಯಿಯಾಗಿದ್ದ ಮನೆಗೆಲಸದಾಕೆಯೊಬ್ಬಳು ಮಕ್ಕಳಿಲ್ಲದ ಈ ದಂಪತಿಗೆ ಸಹಾಯ ಮಾಡಲು ಮುಂದೆಬಂದಳು. ತನ್ನ ಭಾಷೆಯನ್ನು ಸರಿಯಾಗಿ ಮಾತನಾಡಲು ಬಾರದ ಕನ್ನಡತಿ ಆಕೆ. ಮೀನಾರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೂಡಲೇ ಅವರು ಬಾಡಿಗೆ ತಾಯ್ತನ ಮತ್ತು ಅದರ ಕಾನೂನು ಪ್ರಕ್ರಿಯೆಗಳತ್ತ ಗಮನ ಹರಿಸಿದರು.
ನಿರೀಕ್ಷಿತ ಹೆರಿಗೆಯ ದಿನದ ಕೆಲವು ತಿಂಗಳು ಮುನ್ನ ಮೀನಾ ನನ್ನನ್ನು ಭೇಟಿಯಾದರು. ಬಾಡಿಗೆ ತಾಯಿ ಮೂಲಕ ಪಡೆದ ಮಗುವಿಗೆ ಹಾಲುಣಿಸಲು ಸಾಧ್ಯವೇ ಎಂಬುದನ್ನು ತಿಳಿಯಲು ಅವರು ಬಯಸಿದ್ದರು. ಮೀನಾ ಗರ್ಭಾವಸ್ಥೆಗೆ ತಲುಪಿದವರಲ್ಲ. ಗರ್ಭಾವಸ್ಥೆಯೇ ಹಾಲು ಉತ್ಪಾದನೆಗೆ ಎದೆಯನ್ನು ಅಣಿಗೊಳಿಸುವುದು. ಸಂಮೋಹನ ತಜ್ಞೆ ಅಪೂರ್ವ ರಾಜಶೇಖರ್ ಮತ್ತು ನಾನು ಆಕೆಯ ಅರೆಪ್ರಜ್ಞಾವಸ್ಥೆಯ ಮನಸನ್ನು ಬದಲಿಸುವ ಪ್ರಯತ್ನ ಮಾಡಿದೆವು. ನಾನು ಯಾವಾಗಲೂ ಹೇಳುವುದೆಂದರೆ ಎದೆಹಾಲು ಉತ್ಪಾದನೆಯು ಒಂದು ವಿಶ್ವಾಸನೀಯ ಚಮತ್ಕಾರ!
ಅದೇ ವೇಳೆ ನಾನು ಒಂದು ವಾರ ದೆಹಲಿಗೆಂದು ಹೊರಡುತ್ತಿರುವುದು ಮೀನಾರಿಗೆ ತಿಳಿಯಿತು. ನಾನು ದೂರ ಊರಿನಲ್ಲಿದ್ದಾಗ ಹೆರಿಗೆ ಆಗುವುದಿಲ್ಲ ಎಂಬ ಭರವಸೆ ಆಕೆಯದು.
ಆದರೆ ನನ್ನ ಅದೃಷ್ಟವೋ, ಆಕೆಯ ದುರದೃಷ್ಟವೋ, ಗರ್ಭಾಶಯದಲ್ಲಿನ ಯಾವುದೋ ಸಮಸ್ಯೆಯಿಂದಾಗಿ ‘ಬಾಡಿಗೆ ಗರ್ಭದಲ್ಲಿದ್ದ ಮಗು’ ಭ್ರೂಣಾವಸ್ಥೆಯಲ್ಲಿಯೇ ತೊಂದರೆಗೆ ತುತ್ತಾಗಿತ್ತು. ಮನೆಗೆಲಸದಾಕೆ ಗರ್ಭಿಣಿಯಾಗಿದ್ದಾಗ ಅತೀವ ರಕ್ತದೊತ್ತಡ ಬೆಳೆಸಿಕೊಂಡಿದ್ದಳು. ಇನ್ನೂ ಏಳು ತಿಂಗಳು ಸಹ ಪೂರ್ಣಗೊಳ್ಳದ ಮಗುವನ್ನು ಸಿಸೇರಿಯನ್ ವಿಭಾಗದಲ್ಲಿ ತುರ್ತು ಚಿಕಿತ್ಸೆ ಮಾಡುವುದರ ಮೂಲಕ ಹೊರ ಜಗತ್ತಿಗೆ ಕರೆತರಬೇಕಿತ್ತು.
ಈ ಹೊತ್ತಿಗೆ ಭಾವೋದ್ವೇಗಕ್ಕೆ ಒಳಗಾದ ಕೆಲಸದಾಕೆಯ ಕುಟುಂಬದವರು ಕಂಗಾಲಾದರು. ದೊಡ್ಡ ಮೊತ್ತದ ಹಣ ಪಡೆದುಕೊಂಡಿದ್ದರೂ ಮೂರು ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಹೊಂದಿದ್ದ ಈ ಉದಾತ್ತ ಗುಣದ ತಾಯಿಗೆ ಯಾವುದೇ ಸಮಸ್ಯೆ ಉಂಟಾಗುವುದನ್ನು ಅವರು ಬಯಸಿರಲಿಲ್ಲ. ಯಾವುದೇ ಬಡ ಕುಟುಂಬಕ್ಕಾದರೂ ‘ಶಸ್ತ್ರಚಿಕಿತ್ಸೆ’ ಎಂಬ ಪದವೇ ಆತಂಕ ಹುಟ್ಟಿಸುತ್ತದೆ. ಇದಕ್ಕೆ ಆಕೆಯ ಕುಟುಂಬವೂ ಹೊರತಾಗಿರಲಿಲ್ಲ. ಅವರಿಗೆ ಬರಲಿದ್ದ ಹಣವಾಗಲೀ ಅಥವಾ ಆಕೆಯ ಗರ್ಭದಲ್ಲಿದ್ದ ಮಗುವಾಗಲೀ ಮುಖ್ಯವಾಗಿರಲಿಲ್ಲ. ಅವರಿಗೆ ಅವರ ತಾಯಿ/ಪತ್ನಿಯ ಸುರಕ್ಷತೆ ಮುಖ್ಯವಾಗಿತ್ತು.
ಏಳು ತಿಂಗಳ ನಂತರ (ಜೊತೆಗೆ ಏಳು ವರ್ಷಗಳ ದೀರ್ಘ ಕಾಯುವಿಕೆ) ಮೀನಾ ತೀರಾ ಹತಾಶರಾಗಿದ್ದರು. ಈ ಸುದೀರ್ಘ ಕಥೆಯನ್ನು ಪುಟ್ಟದಾಗಿ ಹೇಳುವುದಾದರೆ– ಸಿಸೇರಿಯನ್ ವಿಭಾಗದಲ್ಲಿ ಆಕೆಗೆ ಅಮೂಲ್ಯವಾದ ಹೆಣ್ಣುಮಗು 1.8 ಕೆ.ಜಿ. ತೂಕದೊಂದಿಗೆ ಜನಿಸಿತು. ನಾನು ಮೀನಾರ ಜೊತೆಗಿದ್ದು ‘ಕಾಂಗರೂ ಮದರ್ ಕೇರ್’ನಂತೆ ಮಗುವನ್ನು ಆಕೆಯ ಎದೆಗಳಿಗೆ ಆನಿಸಿದೆ. ಮಗು ಎದೆ ಚೀಪುವುದನ್ನು ಶುರುಮಾಡಿದಾಗ ಮೀನಾ ಅತೀವ ಸಂಭ್ರಮ ಅನುಭವಿಸಿದರು. ತಾಯ್ತನ ಮತ್ತು ಮಗು ಎದೆಹಾಲು ಕುಡಿಯುವುದರ ಖುಷಿಯನ್ನು ವರ್ಣಿಸಲು ಪದಗಳಿಲ್ಲ!
ಮೀನಾ ಕೆಲವು ಹನಿಗಳಷ್ಟು ಎದೆಹಾಲನ್ನು ಸ್ರವಿಸಿದರು. ತನ್ನ ಮಗುವಿಗೆ ಸ್ವಲ್ಪಮಟ್ಟಿನ ಎದೆಹಾಲುಣಿಸುವುದು ಅವರಿಗೆ ಸಾಧ್ಯವಾಯಿತು. ಇವು ತಾಯ್ತನದ ಅಚ್ಚರಿಯ ಸತ್ಯಗಳು. ತನ್ನ ಮಗುವನ್ನು ಮೀನಾರ ಕೈಗೆ ಒಪ್ಪಿಸಿದ ಕೆಲಸದಾಕೆಯದು ಇನ್ನೊಂದೆಡೆಯ ತಾಯ್ತನ. ಆಕೆ ನೋವಿನಿಂದ ಹೊರಳಾಡುತ್ತಿದ್ದಳು. ಶಸ್ತ್ರಚಿಕಿತ್ಸೆಯ ನೋವು ಮತ್ತು ಸ್ತನಗಳ ನೋವು ಆಕೆಯನ್ನು ಕಾಡುತ್ತಿತ್ತು. ಪ್ರಸವದ ಕೂಡಲೇ ಆಕೆಯ ಸ್ತನಗಳು ಹಾಲಿನಿಂದ ತುಂಬಿಕೊಂಡವು. ಹಾಲುಣಿಸದಿದ್ದರೆ ಅದು ಎದೆಯ ಊತ ಮತ್ತು ಎದೆ ರಕ್ತಗಟ್ಟುವಿಕೆಯ ಸಮಸ್ಯೆಗೆ ಎಡೆಮಾಡಿಕೊಡುವ ಅಪಾಯವಿರುತ್ತದೆ. ಸ್ತನ್ಯಪಾನದ ತಜ್ಞರಾದ ನಮಗೆ ಸ್ತನ ರಕ್ತಕಟ್ಟಿಕೊಳ್ಳುವುದರಿಂದ ಉಂಟಾಗುವ ತೀವ್ರ ನೋವಿನ ಅರಿವಿದೆ. ಅದು ಹೆರಿಗೆ ನೋವಿಗಿಂತಲೂ ಕೆಟ್ಟ ಅನುಭವ ನೀಡುತ್ತದೆ.
ವಿರೋಧಾಭಾಸವೆಂದರೆ, ತನ್ನ ಪುಟ್ಟ ಮಗಳಿಗೆ ಹಾಲುಣಿಸಲು ಮೀನಾ ವಿಪರೀತ ಹಂಬಲಿಸುತ್ತಿದ್ದರು. ಆದರೆ ಗರ್ಭಾವಸ್ಥೆಯನ್ನು ದಾಟಿ ಬಾರದ ಮತ್ತು ಅದರ ಹಾರ್ಮೋನಿನ ಬದಲಾವಣೆಗಳ ಕಾರಣಕ್ಕೆ ಆಕೆಯ ಎದೆ ಹಾಲಿನಿಂದ ತುಂಬಿಕೊಳ್ಳುವುದು ಸಾಧ್ಯವಿರಲಿಲ್ಲ. (ಎದೆಹಾಲು ಮಗುವಿನ ತೂಕ ಹೆಚ್ಚಳ ಮತ್ತು ಒಟ್ಟಾರೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ). ಮತ್ತೊಂದೆಡೆ ಕೆಲಸದಾಕೆ ತುಂಬಿಕೊಂಡ ಎದೆಹಾಲಿನಿಂದಾಗಿ ನೋವನ್ನನುಭವಿಸಿ ಹೊರಳಾಡುತ್ತಿದ್ದಳು! ಒಂದು ವೇಳೆ ಆಕೆ ಮಗುವಿಗೆ ಹಾಲುಣಿಸಿದರೆ ಮಗು ಆಕೆಯತ್ತಲೇ ಒಲವು ತೋರುತ್ತದೆ ಮತ್ತು ಅದಕ್ಕೆ ಬಾಡಿಗೆ ತಾಯ್ತನದ ಒಪ್ಪಂದ ಅನುವು ಮಾಡಿಕೊಡುವುದಿಲ್ಲ.
ಈ ಸ್ಥಿತಿ ನನ್ನನ್ನು ಭಾವುಕಗೊಳಿಸಿತು. ನನ್ನ ಸಂಕಟಕ್ಕೆ ಅಳುವುದರ ಹೊರತಾಗಿ ಬೇರೇನೂ ಮಾಡಲು ತೋಚಲಿಲ್ಲ. ಜನರಿಗೆ ಸಹಾಯ ಮಾಡಬೇಕೆಂಬ ನನ್ನ ಉತ್ಸಾಹವು ಅನೇಕ ವೇಳೆ ಭಾವುಕತೆಯ ಸುಳಿಗಳಲ್ಲಿ ಸಿಲುಕಿ ಅಂತ್ಯಕಾಣುವುದಿದೆ.
ದೆಹಲಿಯಿಂದ ಹಿಂದಿರುಗಿದ ಬಳಿಕ ಮೀನಾ ನನ್ನನ್ನು ಮತ್ತೆ ಎಂದಿಗೂ ಭೇಟಿ ಮಾಡಿಲ್ಲ. ಆಕೆಯ ಅತ್ಯಮೂಲ್ಯ ಮಗಳು ಮತ್ತು ಆ ಮಹಾನ್ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂಬ ಭರವಸೆ ನನ್ನದು.
ಒಂದು ತಿಂಗಳ ಹಿಂದೆ, ಎದೆಹಾಲುಣಿಸಲು ಒತ್ತಡಕ್ಕೆ ಒಳಗಾಗಿದ್ದ ತಾಯಿಯೊಬ್ಬಳು ಮತ್ತು ಆಕೆಯ 15 ದಿನಗಳ ಮಗುವಿಗೆ ಸಹಾಯ ಮಾಡುವ ಪ್ರಯತ್ನದಲ್ಲಿದ್ದೆ. ಮಗುವಿನ ಅಳು ಆಕೆಯನ್ನು ಮತ್ತಷ್ಟು ಒತ್ತಡಕ್ಕೆ ತಳ್ಳುತ್ತಿತ್ತು. ಆಕೆಯ ಎದೆಗಳಿಗೆ ಮಗು ಅಂಟಿಕೊಳ್ಳುತ್ತಲೇ ಇರಲಿಲ್ಲ. ನನ್ನ ಕ್ಲಿನಿಕ್‌ನ ಹೊರಭಾಗದಲ್ಲಿ ಕಾಯುತ್ತಿದ್ದ ತಾಯಿಯೊಬ್ಬರು ಬಾಗಿಲು ಬಡಿದು, ರೋದಿಸುತ್ತಿದ್ದ ಮಗುವಿಗೆ ಹಾಲುಣಿಸಲು ಅವಕಾಶ ನೀಡುವಂತೆ ಕೋರಿದರು. ಆಕೆ ಎದೆಯನ್ನು ತೆರೆದು ಮಗುವನ್ನು ಅದರತ್ತ ಹಿಡಿದುಕೊಂಡರು.
ಸಂತುಷ್ಟಗೊಂಡ ಮಗು ಹಾಲು ಕುಡಿದು ಹಾಗೆಯೇ ನಿದ್ರಿಸಿತು. ಅದರಿಂದ ಪ್ರೇರಿತಗೊಂಡ ಮತ್ತು ಕೃತಜ್ಞರಾದ ತಾಯಿಯ ಎದೆಯಿಂದ ಹಾಲು ತಾನಾಗಿಯೇ ಒಸರತೊಡಗಿತು. ಮಕ್ಕಳು ಸಂತೋಷದಿಂದ ಇದ್ದಾಗ ನಾವು ಮೂವರು ತಾಯಂದಿರು ಏಕಕಾಲದಲ್ಲಿ ಕಣ್ಣೀರು ಹಾಕತೊಡಗಿದ್ದು ಕ್ಲಿನಿಕ್‌ನಲ್ಲಿದ್ದ ಉಳಿದೆಲ್ಲರಿಗೂ ತಮಾಷೆ ಎನಿಸತೊಡಗಿತು. ಯಾವುದೇ ಗಡಿಗಳು ತಿಳಿದಿಲ್ಲದ, ಜಾತಿ, ವರ್ಗ, ಮತಗಳನ್ನು ಮೀರಿದ ತಾಯ್ತನಕ್ಕೆ ನನ್ನ ವಂದನೆಗಳು.
ಮಹಿಳೆಯರ ಮತ್ತು ಅವರ ತ್ಯಾಗದ ಬಗ್ಗೆ ನನಗೆ ಸದಾ ಮೆಚ್ಚುಗೆ. ತಾಯ್ತನವು ‘ತಾಯ್ತನದ ವ್ಯಾಪಾರೀಕರಣ’ದ ಕೆಸರಿನಲ್ಲಿ ಹೂತುಹೋಗುತ್ತಿರುವ ಬಗ್ಗೆ ನನಗೆ ಭಯ ಉಂಟಾಗುತ್ತಿದೆ. ಬಾಡಿಗೆ ತಾಯ್ತನದ ವ್ಯಾಪಾರ ಭಾರತದಲ್ಲಿ ಸಂಭವಿಸುತ್ತಿರುವ ಅಂಥ ಸನ್ನಿವೇಶಗಳಲ್ಲಿ ಒಂದು. ಹಾಲಿವುಡ್/ಬಾಲಿವುಡ್ ತಾರೆಯರು ತಮ್ಮ ದೇಹಾಕಾರ ಕೆಡಿಸಿಕೊಳ್ಳಲು ಮತ್ತು ಒಂಬತ್ತು ತಿಂಗಳು ತಮ್ಮ ವೃತ್ತಿ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳಲು ಸಿದ್ಧರಿಲ್ಲದೆ ಬಾಡಿಗೆ ತಾಯ್ತನದ ಮೊರೆ ಹೋಗುತ್ತಿದ್ದಾರೆ.
‘ಬೇಬಿ ಎಂ’ ಎಂದೇ ಹೆಸರಾಗಿದ್ದ ಮೆಲಿಸಾ ಸ್ಟರ್ನ್ 1986ರಲ್ಲಿ ಅಮೆರಿಕದಲ್ಲಿ ಜನಿಸಿದರು. ಆಕೆಯ ಜೈವಿಕ ಮತ್ತು ಬಾಡಿಗೆ ತಾಯಿ ಮೇರಿ ಬೆತ್ ತನ್ನ ಮಗು ಮೆಲಿಸಾಳನ್ನು ಬಾಡಿಗೆ ತಾಯಿಯ ಒಪ್ಪಂದ ಮಾಡಿಕೊಂಡಿದ್ದ ದಂಪತಿಗೆ ಹಸ್ತಾಂತರಿಸಲು ನಿರಾಕರಿಸಿದರು. ಕೋರ್ಟ್ ‘ಬೇಬಿ ಎಂ’ ಆಕೆಯ ಜೈವಿಕ ತಂದೆ ‘ಡಬ್ಲ್ಯೂಎಸ್’ ಮತ್ತು ಆತನ ಪತ್ನಿ ‘ಇ2’ ಅವರಿಗೇ ಸೇರಬೇಕು ಎಂದು ತೀರ್ಪು ನೀಡಿತು.
ಭಾರತದಲ್ಲಿ ಬಾಡಿಗೆ ತಾಯ್ತನದ ವ್ಯವಹಾರ ವೇಗವಾಗಿ ಬೆಳೆಯುತ್ತಿದೆ. ಈ ಪದ್ಧತಿ ಗ್ರಾಮೀಣ/ನಗರ ಮಹಿಳೆಯರಿಗೆ ಅವಕಾಶ ನೀಡುವುದರಿಂದ ಹಿಡಿದು ಶೋಷಣೆಗೂ ಕಾರಣವಾಗುತ್ತಿದೆ. ‘ಬೇಬಿ ಫಾರ್ಮ್’ ಅಭಿವೃದ್ಧಿಪಡಿಸಿ ಬಡತನ ನಿವಾರಣೆ ಮಾಡಿಕೊಳ್ಳುವ ಭವಿಷ್ಯತ್ತಿನ ಕುರಿತ ದುಃಸ್ವಪ್ನ ನನ್ನಲ್ಲಿ ಭಯ ಹುಟ್ಟಿಸುತ್ತಿದೆ.
ಭಾರತದಲ್ಲಿ ಮಹಿಳೆಯರು ತಮ್ಮದೇ ಆಸಕ್ತಿಯಿಂದ ಅಥವಾ ತಮ್ಮ ಕುಟುಂಬದ ಆರ್ಥಿಕ ಅಥವಾ ಭೌತಿಕ ಅಗತ್ಯಗಳನ್ನು ನೀಗಿಸುವುದಕ್ಕಾಗಿ ಬಲವಂತಕ್ಕೆ ಒಳಗಾಗಿ ಬಾಡಿಗೆ ತಾಯಿಯಾಗಲು ಒಪ್ಪಿಕೊಳ್ಳುತ್ತಾರೋ ಎನ್ನುವುದನ್ನು ಹೇಳುವುದು ಕಷ್ಟ– ಇದು ಸ್ತ್ರೀತ್ವದ ಶೋಷಣೆಯ ಮತ್ತೊಂದು ರೂಪ.
ಬಾಡಿಗೆ ತಾಯಂದಿರು ತನ್ನೊಳಗೆ ಬೆಳೆದ ಮಗುವಿನೊಂದಿಗೆ ವಿಶೇಷ ಬಾಂಧವ್ಯ ಬೆಳೆಸಿಕೊಳ್ಳುವುದನ್ನು ತಪ್ಪಿಸಲು ಮತ್ತು ಗರ್ಭಧಾರಣೆಯು ಅತ್ಯಗತ್ಯವಾದ ಹಣವನ್ನು ಸಂಪಾದಿಸಲು ಇರುವ ಒಂದು ಮಾರ್ಗವಷ್ಟೇ ಎಂಬ ಕಲ್ಪನೆಯನ್ನು ಒಪ್ಪಿಕೊಳ್ಳಲು ಹೆಣಗಾಡುತ್ತಾರೆ. ಈ ನೇತ್ಯಾತ್ಮಕ ಚಿಂತನೆಗಳು ಬೆಳೆಯುತ್ತಿರುವ ಭ್ರೂಣದ ಮೇಲೆ ಅಪಾಯಕಾರಿ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ದೈಹಿಕ ಸೇವೆಗಾಗಿ ಬೆಲೆ ನೀಡುವ ಬಗೆಯು ಬಾಡಿಗೆ ತಾಯಿಯನ್ನು ಅಪಮಾನುಷಗೊಳಿಸುತ್ತದೆ ಮತ್ತು ಆಕೆಯ ಪುನರುತ್ಪತ್ತಿಯ ಅಂಗಾಂಗಳನ್ನು ಶೋಷಿಸುತ್ತದೆ.
ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದಂತೆ ನೂರಾರು ನಡವಳಿಕೆ, ಕಾನೂನು, ಸಾಮಾಜಿಕ ಮತ್ತು ಮನೋವೈಜ್ಞಾನಿಕ ವಿಚಾರಗಳಿದ್ದು, ಅವುಗಳನ್ನು ಕಾನೂನಿನೊಳಗೆ ರೂಪಿಸಿ ಅನುಷ್ಠಾನಕ್ಕೆ ತರಬೇಕಾದ ತುರ್ತು ಅಗತ್ಯವಿದೆ. 2002ನೇ ಇಸವಿಯಿಂದ ವ್ಯಾವಹಾರಿಕ ಬಾಡಿಗೆ ತಾಯ್ತನವು ಭಾರತದಲ್ಲಿ ಕಾನೂನಿನ ಮಾನ್ಯತೆ ಪಡೆದಿದೆ. ಅದರ ವ್ಯವಹಾರ ವರ್ಷಕ್ಕೆ 44.5 ಕೋಟಿ ಡಾಲರ್ ತಲುಪಿದೆ.
ಗುಜರಾತ್ ಬಾಡಿಗೆ ತಾಯಿಯರ ರಾಜಧಾನಿಯಾಗಿ ಬೆಳೆದಿದೆ. ಬಾಡಿಗೆ ತಾಯ್ತನದ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪರಿಣಾಮಕಾರಿ ಶಾಸನವನ್ನು ತರಲು ಸಿದ್ಧತೆ ನಡೆಸಿದೆ.
ಒಬ್ಬ ಮಹಿಳೆಯಾಗಿ, ತಾಯಿ ಮತ್ತು ಮಕ್ಕಳ ತಜ್ಞೆಯಾಗಿ ‘ತಾಯ್ತನವನ್ನು ಮಾರಿಕೊಳ್ಳುವ’ ಅಸ್ವಾಭಾವಿಕ ವಿದ್ಯಮಾನದ ಕುರಿತು ಬೇಸರಪಟ್ಟುಕೊಳ್ಳಬಹುದೇ ಹೊರತು ಅದನ್ನು ತಡೆಯಲಾರೆ. ವೈದ್ಯಕೀಯ ವಿಜ್ಞಾನ ಮತ್ತು ಅದರ ತಂತ್ರಜ್ಞಾನಗಳ ಬೆಳವಣಿಗೆಯನ್ನು ಪ್ರಶಂಸಿಸುತ್ತಿರುವ ಸಂದರ್ಭದಲ್ಲಿ ನನಗೆ ಅದರ ವ್ಯಾಪಾರೀಕರಣದ ಕುರಿತು ಕಳವಳ ಉಂಟಾಗುತ್ತಿದೆ.
ಮತ್ತೊಂದು ಸಂತಸದ ಸುದ್ದಿಯೆಂದರೆ, ‘ಲಿಂಗ ನಿರ್ಣಯದ ತುರ್ತು ಅಗತ್ಯ’ದ ಕುರಿತ ಲೇಖನ ಬರೆದಾಗಿನಿಂದ ನನ್ನೊಂದಿಗೆ ಸಂಪರ್ಕದಲ್ಲಿರುವ, ಡೇಟಾ ಆಪರೇಟರ್ ವೃತ್ತಿ ಮಾಡುತ್ತಿರುವ 18ರ ಹರೆಯದ ರೀನಾ, ವಾಣಿ ವಿಲಾಸ ಆಸ್ಪತ್ರೆಯಲ್ಲಿ ಪ್ರೊ. ಕೆ.ವಿ. ಮಾಲಿನಿ ಮತ್ತು ಡಾ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾದಳು. ಈಕೆಯಲ್ಲಿ ವೃಷಣಗಳಿದ್ದವು, ಎದೆಗಳು ಸಂಪೂರ್ಣವಾಗಿ ಬೆಳೆದಿದ್ದವು ಮತ್ತು ಮುಟ್ಟಾಗುತ್ತಿರಲಿಲ್ಲ.
ಆಕೆಯಲ್ಲಿ ಬೆಳೆದಿದ್ದ ವೃಷಣಗಳು ಉದರದ ಕುಹರದ ಆಳದಲ್ಲಿ ಗಟ್ಟಿಯಾಗಿ ಬೆಸೆದುಕೊಂಡಿದ್ದವು. ಅವುಗಳನ್ನು ಬೇರ್ಪಡಿಸಲಾಯಿತು. ಆಕೆಯಲ್ಲಿದ್ದ ವರ್ಣತಂತು ಎಕ್ಸ್‌ವೈ (ಪುರುಷ) ಆಗಿತ್ತು. ತನ್ನಲ್ಲಿ ಪುರುಷ ಮತ್ತು ಮಹಿಳೆಯ ಅಂಗಾಂಗಳು ಎರಡೂ ಇದ್ದರೂ ಆಕೆ ಮಹಿಳೆಯಾಗಿ ಇರಲು ಬಯಸಿದಳು.
ಆಕೆಯನ್ನು ಹಾಗೆಯೇ ಬೆಳೆಸಲಾಗಿತ್ತು. ಪ್ರತಿ ಬಾರಿ ಆಕೆ ನನ್ನನ್ನು ಭೇಟಿ ಮಾಡಿದಾಗ ಅದರ ವೆಚ್ಚದ ಕುರಿತು ಚಿಂತಿಸುತ್ತಿದ್ದಳು. ಆದರೆ ಅದು ನಮ್ಮ ಆಸ್ಪತ್ರೆಯಲ್ಲಿ ಕೇವಲ ₨1200ಕ್ಕೆ ಮುಗಿದು ಹೋಯಿತು. ರೀನಾ ದೈಹಿಕವಾಗಿ ಮಹಿಳೆಯಾಗಿ, ಆದರೆ ಗರ್ಭಕೋಶವಿಲ್ಲದೆ ನಮ್ಮ ಆಸ್ಪತ್ರೆಯಿಂದ ಹೊರನಡೆದಳು.
ಹೀಗೆ ‘ಪ್ರಜಾವಾಣಿ’ ಮತ್ತು ‘ಅಂತಃಕರಣ’ ಮತ್ತೊಂದು ಜೀವಕ್ಕೆ ಸಹಾಯ ಮಾಡಿದ್ದಲ್ಲದೆ, ಆಕೆ ಹಿಜಡಾ ಆಗುವುದರಿಂದ ತಪ್ಪಿಸಿತು. ಆದರೆ ಭವಿಷ್ಯದಲ್ಲಿ ಆಕೆಯ ತಾಯ್ತನದ ಕಥೆಯೇನು? ಬಹುಶಃ ಉಳಿದಿರುವ ದಾರಿ ಬಾಡಿಗೆ ತಾಯ್ತನ! ಮನುಷ್ಯ ಜೀವಿಗಳು ಸಂಕೀರ್ಣ ಜಾತಿಯವರು; ಅವರಂತೆಯೇ ವೈದ್ಯಕೀಯ, ತಂತ್ರಜ್ಞಾನವೂ!
ashabenakappa@yahoo.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.