ಹರೆಯದ ಮಕ್ಕಳಲ್ಲಿ ಧೂಮಪಾನಿಗಳು ಹೆಚ್ಚುತ್ತಿರುವುದು ಕಳವಳದ ಬೆಳವಣಿಗೆ. ತಂಬಾಕು ಕಂಪನಿಗಳಿಗೆ ಯುವಪ್ರಾಯದವರೇ ಪ್ರಮುಖ ಗುರಿ. ಅಲ್ಲದೇ, ಹರೆಯದವರು ತಮ್ಮ ಸಮಕಾಲೀನ ಧೂಮಪಾನಿಗಳ ಪ್ರಭಾವಕ್ಕೆ ಸುಲಭವಾಗಿ ಒಳಗಾಗುತ್ತಿದ್ದಾರೆ. ಕೆಮ್ಮು, ಉಸಿರಾಟದ ಕೊರತೆ, ಉಸಿರಾಟ ಸಂಬಂಧಿ ಕಾಯಿಲೆಗಳು, ದೈಹಿಕ ಸಾಮರ್ಥ್ಯದ ಕುಗ್ಗುವಿಕೆ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಧೂಮಪಾನ ಆಹ್ವಾನಿಸುತ್ತದೆ. ಹೊಗೆರಹಿತ ತಂಬಾಕು ಬಾಯಿ, ಗಂಟಲಕುಳಿ ಮತ್ತು ಅನ್ನನಾಳದ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ.
ಜಾಗತಿಕ ಯುವ ತಂಬಾಕು ಸಮೀಕ್ಷೆಯ ಪ್ರಕಾರ ಶೇ 22ರಷ್ಟು ಯುವಕರು ಮತ್ತು ಶೇ 10.3ರಷ್ಟು ಯುವತಿಯರು ಪ್ರಸ್ತುತ ತಂಬಾಕು ದಾಸರಾಗಿದ್ದಾರೆ. ಶೇ 18.5ರಷ್ಟು ಯುವಕರು ಮತ್ತು ಶೇ 8.4ರಷ್ಟು ಯುವತಿಯರು ಹೊಗೆರಹಿತ ತಂಬಾಕು ಸೇವಿಸುತ್ತಿದ್ದಾರೆ. ಧೂಮಪಾನಿಗಳ ಸಂಖ್ಯೆ ಯುವಕರಲ್ಲಿ ಶೇ 10.5ರಷ್ಟಿದ್ದರೆ, ಯುವತಿಯರಲ್ಲಿ ಈ ಪ್ರಮಾಣ ಶೇ 4.4ರಷ್ಟಿದೆ.
ಭಾರತದಲ್ಲಿ ತಂಬಾಕನ್ನು ಸಿಗರೇಟ್/ ಹುಕ್ಕಾ/ ಚುಂಗಾಣಿಗಳ ಮೂಲಕ ಹೊಗೆ ಹೀರಿಕೊಳ್ಳಲು ಮತ್ತು ಹೊಗೆರಹಿತ ಉತ್ಪನ್ನಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಹೊಗೆರಹಿತ ತಂಬಾಕು ಎಂದರೆ ಅಗಿಯುವ, ಹೀರುವ ಅಥವಾ ಮೂಗಿನಿಂದ ಆಘ್ರಾಣಿಸುವಂಥ ಉತ್ಪನ್ನಗಳಲ್ಲಿ ಇರುವ ತಂಬಾಕು.
ನಾವು ಅತಿ ಎಚ್ಚರವಹಿಸಬೇಕಾದ ಅಪಾಯಕಾರಿ ಬೆಳವಣಿಗೆಯನ್ನು ಕಾಣುತ್ತಿದ್ದೇವೆ: ಹನ್ನೊಂದರ ಹರೆಯದಲ್ಲಿಯೇ ಮಕ್ಕಳು ಧೂಮಪಾನದ ವ್ಯಸನಿಗಳಾಗುತ್ತಿದ್ದಾರೆ ಮತ್ತು ಅದನ್ನು ತ್ಯಜಿಸಲು ಅವರಿಂದ ಸಾಧ್ಯವಾಗುತ್ತಿಲ್ಲ.
2013ರ ಡಿಸೆಂಬರ್ 2. ಹದಿಮೂರರ ಹರೆಯದ ಆರ್ಯನನ್ನು ಉಸಿರಿನ ಕೊರತೆ ಕಾರಣದಿಂದ ನನ್ನ ಯುನಿಟ್‌ಗೆ ದಾಖಲಿಸಲಾಯಿತು. ರೈತಾಪಿ ಕುಟುಂಬದ ಅನಕ್ಷರಸ್ಥ ದಂಪತಿಯ ಏಳನೇ ಮಗು ಆತ. ಏಳನೇ ತರಗತಿ ಓದುತ್ತಿದ್ದ ಆರ್ಯ ಹತ್ತಾರು ಧಾರ್ಮಿಕ ನಂಬಿಕೆಗಳ ಆಚರಣೆಗಳ ಬಳಿಕ ಹುಟ್ಟಿದ ಗಂಡುಮಗುವಾಗಿದ್ದರಿಂದ ಆ ದಂಪತಿಗೆ ಆತ ಅತ್ಯಮೂಲ್ಯ ಆಸ್ತಿಯಾಗಿದ್ದ. ಆರ್ಯನಿಗೆ ಆರು ಮಂದಿ ಅಕ್ಕಂದಿರು. ಕೆಲವರಿಗೆ ಮದುವೆಯಾಗಿದ್ದರೆ, ಇನ್ನು ಕೆಲವರು ಮನೆಯಲ್ಲೇ ಇದ್ದರು. ಹೆಣ್ಣುಮಕ್ಕಳ ಬಗ್ಗೆ ಯಾವ ಮಾಹಿತಿ ಕೇಳಿದರೂ ಪೋಷಕರು ಅಸಹನೆಗೆ ಒಳಗಾದವರಂತೆ ವರ್ತಿಸುತ್ತಿದ್ದರು.
‘ಆರ್ಯ’ನೇ ಅವರ ಜಗತ್ತಾಗಿದ್ದ. ಆತ ಕಳೆದ ಏಳೆಂಟು ತಿಂಗಳಿಂದ ಶಾಲೆಗೆ ಪದೇಪದೇ ಗೈರು ಹಾಜರಾಗಲು ಪ್ರಾರಂಭಿಸಿದ್ದ. ಬೆಂಗಳೂರಿನ ಆಸ್ಪತ್ರೆಯಲ್ಲಿ ಆತನನ್ನು ತೋರಿಸುವಂತೆ ಹಳ್ಳಿಯಲ್ಲಿ ಕೆಲವರು ಸಲಹೆ ನೀಡಿದರು. ಮೂರು ಆಸ್ಪತ್ರೆಗಳಲ್ಲಿ ಸುತ್ತಾಡಿದ ಅವರು ಕೊನೆಗೆ ನಮ್ಮೊಂದಿಗೆ ಮುಖಾಮುಖಿಯಾದರು.
ಮಗುವನ್ನು ನೋಡಿದಾಗಲೇ ಅದು ಉಸಿರಾಡಲು ಕಷ್ಟಪಡುತ್ತಿರುವುದು ತಿಳಿಯಿತು. ಎದೆಯ ತುರ್ತು ಎಕ್ಸ್‌ರೇಗೆ ಸೂಚಿಸಿದೆ. ಮೂವತ್ತು ನಿಮಿಷದ ಒಳಗೆ ಎಕ್ಸ್‌ರೇ ತೆಗೆದು ಮಗುವಿನ ಎಡ ಶ್ವಾಸ ಕುಳಿಯೊಳಗೆ ದ್ರವ್ಯವನ್ನು ಹೊರತೆಗೆಯಲು ಕೊಳವೆಯನ್ನು ಅಳವಡಿಸಲಾಯಿತು. ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾದಂತೆಯೇ ನನಗೆ ಈ ಮಗುವಿನಲ್ಲಿ ಮರಣದ ಗಂಟೆಯ ಸದ್ದು ಕೇಳಿಸತೊಡಗಿತು. ಈ ಕಾಯಿಲೆಯ ಬಗ್ಗೆ ಅನಕ್ಷರಸ್ಥ ಪೋಷಕರಿಗೆ ವಿವರಿಸುವುದು ಸುಲಭದ ಕೆಲಸವಾಗಿರಲಿಲ್ಲ.
ನಾವು ಚಿಕಿತ್ಸೆಯ ಉಭಯಸಂಕಟದಲ್ಲಿದ್ದೆವು. ಆತನನ್ನು ಜೀವಂತವಾಗುಳಿಸಲು ಮತ್ತು ಉಸಿರಾಡುವಂತೆ ಮಾಡಲು ಶ್ವಾಸಕೋಶದಿಂದ ದ್ರವ್ಯವನ್ನು ಹೊರತೆಗೆಯುವುದು ಬಹಳ ಮುಖ್ಯವಾಗಿತ್ತು. ಆದರೆ ಶ್ವಾಸದ ಕುಳಿಯಲ್ಲಿ ಕೊಳವೆಯನ್ನು ಶಾಶ್ವತವಾಗಿ ಇರಿಸಲು ಸಾಧ್ಯವಿರಲಿಲ್ಲ. ಅದರಿಂದ ಸೋಂಕು ತಗಲುವ ಸಂಭವವಿತ್ತು. ಒಂದುವೇಳೆ ಕೊಳವೆಯನ್ನು ತೆಗೆದರೆ ದ್ರವ್ಯ ಮತ್ತೆ ಶೇಖರಣೆಗೊಂಡು ಉಸಿರಾಟದ ಕೊರತೆ ಮರುಕಳಿಸುತ್ತಿತ್ತು. ಅದರ ಅಂತಿಮ ಫಲಿತಾಂಶ ಸಾವು.
ಇಂಥ ಸಂದಿಗ್ಧದಲ್ಲಿದ್ದ ನಾವು ಮಾರ್ಗದರ್ಶನ ನೀಡುವಂತೆ ಕಿದ್ವಾಯಿಯ ಡಾ. ಅವಿನಾಶ್ ಅವರನ್ನು ಸಂಪರ್ಕಿಸಿದೆವು. ತಕ್ಷಣವೇ ಅವರು ಈ ಮಗುವಿನ ಎಲ್ಲಾ ಮಾಹಿತಿಗಳನ್ನೂ ಪಡೆದುಕೊಂಡರು. ‘ಕ್ಯಾನ್ಸರ್ ಥೆರಪಿಗೆ ಸೂಕ್ತವಾಗಿ ಸ್ಪಂದಿಸಲು ಆತ ವಿಫಲನಾಗಿದ್ದಾನೆ; ಈಗ ಇರುವ ಏಕೈಕ ಪರಿಹಾರ ಮಾರ್ಗ ಉಪಶಮನದ ಆರೈಕೆ’ ಎಂದರು.
ಮುಂದೇನು ಮಾಡುವುದು ಎಂದು ನಾವು ಚರ್ಚಿಸುತ್ತಿರುವಾಗಲೇ ಪೋಷಕರು ತಮ್ಮ ಮಗುವಿನೊಂದಿಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟರು. ಶ್ವಾಸಕೋಶದೊಳಗೆ ಅಳವಡಿಸಿದ ಕೊಳವೆ ಹಾಗೆಯೇ ಉಳಿದಿತ್ತು. ಇದುವರೆಗೂ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆರ್ಯ ಇನ್ನೂ ಜೀವಂತವಾಗಿದ್ದಾನೆಯೇ? ಆ ಕೊಳವೆ ಹಾಗೆಯೇ ಇದೆಯೇ?
ಆರ್ಯನಿಗೆ ಶ್ವಾಸಕೋಶದ ಕ್ಯಾನ್ಸರ್‌ಗೆ ಹೇಗೆ ತಗುಲಿತು? ಆತನ ತಂದೆ ಆಸ್ಪತ್ರೆಯ ಸಮೀಪ ಬೀಡಿ ಸೇದುತ್ತಾ ನಿಂತಿದ್ದನ್ನು ನಾನು ಹಲವು ಬಾರಿ ಗಮನಿಸಿದ್ದೆ. ಕಡುಬಡತನದ ನಡುವೆಯೂ ಅಂಟಿಸಿಕೊಂಡಿದ್ದ ಈ ದುರಭ್ಯಾಸದ ಬಗ್ಗೆ ಅವರಿಗೆ ಛೀಮಾರಿಯನ್ನೂ ಹಾಕಿದ್ದೆ, ಧೂಮಪಾನದ ಅಪಾಯದ ಕುರಿತು ಪಾಠಗಳನ್ನೂ ಹೇಳಿದ್ದೆ. ಆರು ಹೆಣ್ಣುಮಕ್ಕಳ ನಂತರ ಹುಟ್ಟಿದ ಏಕೈಕ ಗಂಡು ಮಗ ಮಾತ್ರ ಪರೋಕ್ಷ ಧೂಮಪಾನದ ಸಮಸ್ಯೆಗೆ ಹೇಗೆ ಬಲಿಯಾದ?
ಪ್ರೊ. ಆರ್.ಕೃಷ್ಣಬಾಯಿ, ವಾಣಿವಿಲಾಸ ಆಸ್ಪತ್ರೆಯಲ್ಲಿ 1996ರ ಫೆಬ್ರುವರಿವರೆಗೆ ಸೂಪರಿಂಟೆಂಡೆಂಟ್ ಆಗಿದ್ದವರು.
ನೋಡಲು ಸ್ಫುರದ್ರೂಪಿಯಾಗಿದ್ದ ಅವರದು ಅದ್ಭುತ ಮಾನವೀಯ ವ್ಯಕ್ತಿತ್ವ ಕೂಡ. ನನ್ನ ಮಗ ಆದರ್ಶನನ್ನೂ ಒಳಗೊಂಡಂತೆ ಹೆಚ್ಚಿನ ವೈದ್ಯರ ಮಕ್ಕಳಿಗೆ ಹೆರಿಗೆ ಮಾಡಿಸಿದವರು ಅವರು. ನಾಲ್ವರು ಹೆಣ್ಣುಮಕ್ಕಳ ತಾಯಿಯೂ ಹೌದು. ನಮ್ಮಂಥ ಎಳೆಯರಿಗೆ ‘ಮಹಿಳೆ ಮತ್ತು ವೈದ್ಯಕೀಯ ವೃತ್ತಿ’ಯ ಕುರಿತು ಪ್ರತಿಹೆಜ್ಜೆಯಲ್ಲೂ ಮಾರ್ಗದರ್ಶನ ನೀಡುವ ಮಹಾನ್ ಚೇತನ ಕೃಷ್ಣಬಾಯಿ ಮೇಡಂ.
ಸರ್ಕಾರಿ ಸಂಬಳದೊಂದಿಗೆ ಜೀವನ ನಿರ್ವಹಣೆ ಕಷ್ಟಕರವಾಗಿದ್ದ ಆಗಿನ ದಿನಗಳಲ್ಲಿ ಖಾಸಗಿಯಾಗಿ ಕ್ಲಿನಿಕ್ ನಡೆಸುವಂತೆ ನನಗೆ ಅವರು ಸಲಹೆ ನೀಡಿದ್ದರು. ಪ್ರಮುಖ ಪ್ರಕರಣಗಳಿದ್ದಾಗ ಕೆ.ಆರ್. ರಸ್ತೆಯ ಕ್ಲಿನಿಕ್‌ನಿಂದ ನನ್ನನ್ನು ಶಿಶುವೈದ್ಯೆಯಾಗಿ ಕರೆದುಕೊಂಡು ಬರುತ್ತಿದ್ದರು. ಆಗ ನನ್ನ ಹತ್ತಿರ ವಾಹನವೂ ಇರಲಿಲ್ಲ. ನನ್ನಲ್ಲಿ ನೈತಿಕ ಸ್ಥೈರ್ಯ ತುಂಬಿದ ಅವರು ಖಾಸಗಿಯಾಗಿ ಕ್ಲಿನಿಕ್ ನಡೆಸುವಾಗ ಶ್ರೀಮಂತ ರೋಗಿಗಳೊಂದಿಗೆ ವ್ಯವಹರಿಸುವ ನಿಟ್ಟಿನಲ್ಲಿ ಆತ್ಮವಿಶ್ವಾಸ ತುಂಬಿದರು. ಖಾಸಗಿ ಚಿಕಿತ್ಸಾಲಯದ ಅವಧಿ ಆಸ್ಪತ್ರೆಯ ಅವಧಿಯ ಮೊದಲು ಅಥವಾ ನಂತರದ ಅವಧಿಯಲ್ಲಿರಬೇಕು ಎಂದವರು ಸೂಚಿಸಿದ್ದರು. ವೈದ್ಯಕೀಯದ ತತ್ವಾದರ್ಶಗಳು ಮತ್ತು ನೀತಿಸೂತ್ರಗಳಿಗೆ ಅವರು ಬದ್ಧರಾಗಿದ್ದವರು.
ಶಸ್ತ್ರಚಿಕಿತ್ಸೆಯ ಅವರ ಕೌಶಲ ಎಷ್ಟರಮಟ್ಟಿಗೆ ಇತ್ತೆಂದರೆ ಒಮ್ಮೆ ಏಳೇ ನಿಮಿಷದಲ್ಲಿ ಸಿಸೇರಿಯನ್ ನಡೆಸಿದ ದಾಖಲೆ ಅವರದು. ನರ್ಸಿಂಗ್ ಹೋಮ್‌ಗಳ ನಮ್ಮ ಭೇಟಿಯ ವೇಳೆ ಒಮ್ಮೆ ಅವರು ಚಿನ್ನದ ಕಾಲಂದುಗೆ ಧರಿಸಿದ್ದನ್ನು ಗಮನಿಸಿದೆ. ಕುತೂಹಲ ನನ್ನನ್ನು ಎಂದಿಗೂ ತಡೆಯಲಾರದು. ‘ಇದು ಚಿನ್ನದ್ದೇ?’ ಎಂದು ಅವರನ್ನು ಕೇಳಿದೆ. ‘ಹೌದು’ ಎಂದು ಅದನ್ನು ಖಚಿತಪಡಿಸುವಂತೆ ನುಡಿದ ಅವರು, ತಾವು ರಜಪೂತ ರಾಜಮನೆತನಕ್ಕೆ ಸೇರಿದವರು ಎಂಬುದನ್ನು ತಿಳಿಸಿದರು.
ಆಶ್ಚರ್ಯವೇ ಇಲ್ಲ, ಅವರೊಬ್ಬ ರಾಜಕುಮಾರಿ. ಸರ್ಜನ್ ಒಬ್ಬರೊಂದಿಗೆ ಅವರು ಪ್ರೇಮವಿವಾಹವಾಗಿದ್ದರು. ತಮ್ಮ ಪತಿ ಚೈನ್ ಸ್ಮೋಕರ್ ಎನ್ನುವುದನ್ನು ಅವರು ಹಲವು ಬಾರಿ ನಮಗೆ ಹೇಳಿದ್ದರು. ಪತಿಯ ಈ ದುರಭ್ಯಾಸವನ್ನು ಬಿಡಿಸಲು ಶತಪ್ರಯತ್ನ ನಡೆಸಿದರೂ, ಅವರು ತಮ್ಮ ಎಳೆ ವಯಸ್ಸಿನಿಂದಲೇ ಧೂಮಪಾನ ಪ್ರಾರಂಭಿಸಿದ್ದರಿಂದ ಅದು ತುಂಬಾ ಕಷ್ಟಕರವಾಗಿತ್ತು.
1996ರ ಫೆಬ್ರುವರಿ ಆರಂಭದಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ಮೇಡಂ ತುತ್ತಾಗಿದ್ದಾರೆ ಎನ್ನುವುದು ನಮಗೆ ತಿಳಿಯಿತು. ನಮಗೆ ಅದನ್ನು ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ವಾರಗಳುರುಳಿದಂತೆ ಅವರ ಕಾಯಿಲೆ ತೀವ್ರವಾಗತೊಡಗಿತು. ಅವರಿಗಾಗಿ ನಾವು ಏನನ್ನಾದರೂ ಮಾಡಬೇಕು, ಪ್ರಾಯಶಃ ಆಧುನಿಕ ವೈದ್ಯಕೀಯ ಸೌಲಭ್ಯಕ್ಕಾಗಿ ವಿದೇಶಕ್ಕೆ ಕಳುಹಿಸಬೇಕು ಎಂದುಕೊಳ್ಳುವ ಮೊದಲೇ ಅವರು ನಮ್ಮನ್ನಗಲಿದರು. ಅವರು ತಮ್ಮ ಕೊನೆಯುಸಿರೆಳೆದದ್ದು ಮಲ್ಯ ಆಸ್ಪತ್ರೆಯಲ್ಲಿ (ಕಾರ್ಪೋರೆಟ್ ಆಸ್ಪತ್ರೆ ಸಂಸ್ಕೃತಿ ಆಗ ತಾನೆ ಶುರುವಾಗಿತ್ತು).
ವಾಣಿ ವಿಲಾಸ, ವಿಕ್ಟೋರಿಯಾ, ಮಿಂಟೊ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗಳ ಎಲ್ಲಾ ಸಿಬ್ಬಂದಿ ಆಸ್ಪತ್ರೆಯ ನಿಮಯಗಳನ್ನು ಮುರಿದು ಗುಂಪುಗೂಡಿ ಅವರನ್ನು ನೋಡಲು ತೆರಳಿದ್ದರು. ಜನರ ನಿಯಂತ್ರಣಕ್ಕೆ ಪೊಲೀಸ್ ಸಹಾಯ ಪಡೆಯುವಷ್ಟು ದೊಡ್ಡ ಗುಂಪು ಆಸ್ಪತ್ರೆ ಬಳಿ ನೆರೆದಿತ್ತು. ಅವರ ಜನಪ್ರಿಯತೆಯೇ ಅಂಥದ್ದು. ಅವರೂ ಕೂಡ ಈ ಪರೋಕ್ಷ ಧೂಮಪಾನದ ಬಲಿಪಶು. ಅಲ್ವೆಯೊಲರ್ ಸೆಲ್ ಸರ್ಕಿನೊಮಾ ಎಂಬ ಅತಿ ಅಪರೂಪದ ಶ್ವಾಸಕೋಶ ಕ್ಯಾನ್ಸರ್‌ಗೆ ಅವರು ಬಲಿಯಾಗಿದ್ದರು. ವಾಣಿ ವಿಲಾಸ ಆ ದುರದೃಷ್ಟದ ವರ್ಷದಲ್ಲಿ ತನ್ನ ರಾಜಕುಮಾರಿಯನ್ನು ಕಳೆದುಕೊಂಡಿತು.
ತಮ್ಮ ಗರ್ಭಿಣಿ ಪತ್ನಿಯರ ಎದುರೇ ಹೊಗೆಯುಗುಳುತ್ತಾ ಆನಂದಿಸುವ ಪುರುಷರನ್ನು ನಾನು ನೋಡಿದ್ದೇನೆ. ಸಿಗರೇಟಿನ ಹೊಗೆ ನಾಲ್ಕು ಸಾವಿರಕ್ಕೂ ಅಧಿಕ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಸೈನೇಡ್, ಸೀಸದಂಥ ಹಾನಿಕಾರಕ ಅಂಶಗಳು ಅದರಲ್ಲಿರುತ್ತವೆ. ಕನಿಷ್ಠ 60 ಕ್ಯಾನ್ಸರ್‌ಕಾರಕ ಪದಾರ್ಥಗಳಿಂದ ಅದು ತುಂಬಿರುತ್ತದೆ. ನಿಕೋಟಿನ್ ಮತ್ತು ಕಾರ್ಬನ್ ಮೊನಾಕ್ಸೈಡ್ ಒಂದುಗೂಡಿ ಮಗುವಿಗೆ ಪೂರೈಕೆಯಾಗುವ ಆಮ್ಲಜನಕದ ಪ್ರಮಾಣವನ್ನು ತಗ್ಗಿಸುತ್ತವೆ. ರಕ್ತನಾಳಗಳನ್ನು ಸಂಕುಚಿತಗೊಳಿಸುವ ನಿಕೋಟಿನ್ ಹೊಕ್ಕುಳಬಳ್ಳಿಯ ಮೂಲಕ ಮಗುವಿಗೆ ಹೋಗುವ ಆಮ್ಲಜನಕವನ್ನು ತಡೆಹಿಡಿಯುತ್ತದೆ. ಆಗ ಕೆಂಪು ರಕ್ತಕೋಶಗಳು ಆಮ್ಲಜನಕದ ಬದಲು ಕಾರ್ಬನ್ ಮೊನಾಕ್ಸೈಡ್ ಅನ್ನು ಹೆಕ್ಕಿಕೊಳ್ಳುತ್ತದೆ. ಅಲ್ಲದೆ, ದೇಹಕ್ಕೆ ಪೂರೈಕೆಯಾಗುವ ಆಮ್ಲಜನಕದ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಧೂಮಪಾನದಿಂದ ಭ್ರೂಣಾವಸ್ಥೆಯಲ್ಲಿರುವ ಮಕ್ಕಳ ಮೇಲಾಗುವ ಪರಿಣಾಮಗಳೇನು? ಮಗು ಅವಧಿಗೂ ಮುನ್ನವೇ ಜನಿಸಬಹುದು, ಕಡಿಮೆ ಜನನ ತೂಕ ಅಥವಾ ಗರ್ಭಕೋಶದಲ್ಲಿಯೇ ಸಾವಿಗೀಡಾಗುವ ಸಂಭವವಿರುತ್ತದೆ. ಕೆಲವು ಶಿಶುಗಳು ಹುಟ್ಟಿನಿಂದಲೇ ಆಜನ್ಮ ಹೃದ್ರೋಗ ಕಾಯಿಲೆ, ಉಸಿರಾಟದ ಸಮಸ್ಯೆಗಳಿಗೆ ತುತ್ತಾಗಬಹುದು.
ಮಕ್ಕಳು ಮತ್ತು ತಾರುಣ್ಯಾವಸ್ಥೆಯವರಲ್ಲಿ ಕಂಡುಬರುವ ಧೂಮಪಾನದ ಚಟ ಉಸಿರಾಟದ ಅತಿ ಗಂಭೀರ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಧೂಮ ವ್ಯಸನಿ ಮಕ್ಕಳಲ್ಲಿ ಕೆಮ್ಮು, ಅಸ್ತಮಾ ಮತ್ತು ಶ್ವಾಸಕೋಶದ ಸೋಂಕುಗಳು ತಗಲುವ ಸಂಭವ ಅಧಿಕ. ಮುಂದೆ ಅವರು ಬೆಳೆದಂತೆ ಅವರ ಅಭ್ಯಾಸವು ಶ್ವಾಸಕೋಶ ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಗಳಿಗೆ ರಹದಾರಿಯಾಗುತ್ತವೆ.
ಮಕ್ಕಳು ಪರೋಕ್ಷ ಧೂಮಪಾನದ ಬಲಿಪಶುಗಳು ಸಹ. ಪರೋಕ್ಷ ಧೂಮಪಾನ (ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್) ಎಂದರೆ ಏನು? ಹಿಂದಿನ ದಿನಗಳಲ್ಲಿ ನಾವು ಅದನ್ನು ನಿಷ್ಕ್ರಿಯ ಧೂಮಪಾನ ಎಂದು ಕರೆಯುತ್ತಿದ್ದೆವು. ಧೂಮಪಾನ ಮಾಡದ ವ್ಯಕ್ತಿ ಧೂಮಪಾನಿಯ ಸಮೀಪದಲ್ಲಿದ್ದು ಆತ ಸೇದಿ ಬಿಡುವ ಹೊಗೆಯನ್ನು ಸೇವಿಸುವುದೇ ಪರೋಕ್ಷ ಧೂಮಪಾನ. ಪರಿಸರೀಯ ತಂಬಾಕು ಸೇವನೆ ಕೂಡ ಅದನ್ನೇ ಬಿಂಬಿಸುತ್ತದೆ. ಪರಿಸರದಲ್ಲಿನ ಎಲ್ಲಾ ಜೀವಾಂಗಗಳೂ ಈ ಹೊಗೆಯಲ್ಲಿನ ರಾಸಾಯನಿಕಗಳ ಅಪಾಯಕ್ಕೆ ಒಳಗಾಗುತ್ತವೆ. ಪರಿಸರೀಯ ಧೂಮಪಾನವು ಸಿಗರೇಟಿನ ಸುಡುವ ಅಂಚಿನಿಂದ ನೇರವಾಗಿ ಹೊರಹೊಮ್ಮುವ ಹೊಗೆ ಮತ್ತು ಧೂಮಪಾನಿಯಿಂದ ಹೊರಬರುವ ಹೊಗೆಯ ಮುಖ್ಯ ಹರಿವು– ಈ ಎರಡರ ಸಂಯೋಜನೆ. ನೇರವಾಗಿ ಹೊರಬರುವ ಹೊಗೆಯು ಮುಖ್ಯ ಹರಿವಿನ ಹೊಗೆಗಿಂತಲೂ ಅಧಿಕ ಸಾಮರ್ಥ್ಯದ ವಿಷವನ್ನು ಒಳಗೊಂಡಿರುತ್ತದೆ.
ಆಘಾತಕಾರಿ ಆದರೆ ಸತ್ಯ– ಸಿಗರೇಟ್‌ನ ಹೊಗೆಯಲ್ಲಿ ಇರುವ ಅಂಶಗಳೆಂದರೆ, ಅಮೋನಿಯ (ಶೌಚಾಲಯಗಳನ್ನು ತೊಳೆಯಲು ಬಳಕೆಯಾಗುತ್ತದೆ), ಸೈನೇಡ್ (ಇಲಿಗಳನ್ನು ಕೊಲ್ಲಲು ಬಳಸಲಾಗುತ್ತದೆ) ಮತ್ತು ಫಾರ್ಮಾಲ್ಡಿಹೈಡ್ (ಸತ್ತ ಕಪ್ಪೆಗಳನ್ನು ಸಂರಕ್ಷಿಸಿಡಲು ಬಳಕೆ ಮಾಡಲಾಗುತ್ತದೆ), ನಿಕೋಟಿನ್ ಸಿಗರೇಟ್ ವ್ಯಸನಿಯೊಳಗೆ ಮಾರಣಾಂತಿಕ ವಿಷವನ್ನು ತುಂಬುವ ರಾಸಾಯನಿಕ. ಒಂದು ಹನಿ (೭೦ ಮಿಲಿ ಗ್ರಾಂ) ಸರಾಸರಿ ಒಬ್ಬ ವಯಸ್ಕನನ್ನು ಸಾಯಿಸಬಲ್ಲದು.
ನೀವೂ ನನ್ನಂತೆ ನೀತಿ ಧೋರಣೆಗಳನ್ನು ಅಳವಡಿಸಿಕೊಳ್ಳುತ್ತೀರಾ? ಮಗುವೊಂದು ಸಿಗರೇಟ್ ಸೇದುವುದು ಕಣ್ಣಿಗೆ ಬಿದ್ದರೆ ಅದನ್ನು ಕಿತ್ತೆಸೆಯುವಿರಾ? ವಯಸ್ಕ ಧೂಮಪಾನಿಯ ಹೊಗೆಯುಗುಳುವ ಸಿಗರೇಟ್ ಅನ್ನು ಆರಿಸುವಿರಾ? ಮತ್ತು ತಾಯಿಯ ಗರ್ಭದಲ್ಲಿರುವ ಇನ್ನೂ ಜಗತ್ತು ಕಾಣಬೇಕಿರುವ ಮಗುವನ್ನು ರಕ್ಷಿಸುವಿರಾ? ಸಿಕ್ಕಿಂನಲ್ಲಿ ಇರುವಂತೆ ಧೂಮಪಾನಿ ಹೊತ್ತಿಸುವ ಪ್ರತಿ ಸಿಗರೇಟಿಗೆ ೧೦೦ ಗಿಡಗಳಿಗೆ ನೀರುಣಿಸುವ ಶಿಕ್ಷೆ ವಿಧಿಸುವಂಥ ಕಾನೂನನ್ನು ನಾವೂ ಅನುಸರಿಸಬೇಕೇ? ಅಥವಾ ಸುಪ್ರೀಂ ಕೋರ್ಟ್‌ನ ೨೧ನೇ ವಿಧಿಯಲ್ಲಿನ ಸಾರ್ವಜನಿಕ ಸ್ಥಳದಲ್ಲಿನ ಧೂಮಪಾನ ನಿಷೇಧದ ಕಾನೂನೇ ಸಾಕೇ? ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂಬ ಶಾಸನದ ಎಚ್ಚರಿಕೆಯ ಘೋಷಣೆಗೆ ತೃಪ್ತರಾಗಿ ಸುಮ್ಮನಾಗಬೇಕೆ?
ಈ ಬರಹದೊಂದಿಗೆ ಡಾ. ಆಶಾ ಬೆನಕಪ್ಪನವರ ‘ಅಂತಃಕರಣ’ ಅಂಕಣ ಕೊನೆಗೊಳ್ಳುತ್ತಿದೆ. –ಸಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.