ADVERTISEMENT

ಪರ್ಯಾಯವೇ ಇಲ್ಲದ ಕಾಲಘಟ್ಟದಲ್ಲಿ...

ಕುಲದೀಪ ನಯ್ಯರ್
Published 27 ಮೇ 2014, 19:30 IST
Last Updated 27 ಮೇ 2014, 19:30 IST
ಪರ್ಯಾಯವೇ ಇಲ್ಲದ ಕಾಲಘಟ್ಟದಲ್ಲಿ...
ಪರ್ಯಾಯವೇ ಇಲ್ಲದ ಕಾಲಘಟ್ಟದಲ್ಲಿ...   

ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಈ ಮಟ್ಟಿಗಿನ ಆಘಾತ ಉಂಟಾಗಿರುವುದು ಇದೇ ಮೊದಲೇನಲ್ಲ. 1977ರ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ದೊಡ್ಡ ಮಟ್ಟದಲ್ಲಿಯೇ ನಿರಾಸೆ ಕಂಡಿತ್ತು. ಎಪ್ಪತ್ತರ ದಶಕದ ಆ ಸೋಲಿಗಿಂತಲೂ ಈ ಸಲದ ಸೋಲು ಕಾಂಗ್ರೆಸ್‌ ಪಕ್ಷವನ್ನು ಇನ್ನಿಲ್ಲದಂತೆ ಪಾತಾಳಕ್ಕೆ ತಳ್ಳಿದೆ.

ಅಂದು ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಅವರ ಪುತ್ರ ಸಂಜಯ ಗಾಂಧಿ ನಿರಂಕುಶ ಪ್ರಭುವಿನಂತೆ ಅಧಿಕಾರ ಚಲಾಯಿಸಿ­ದ್ದರು. ಜನ ರೋಸಿ ಹೋಗಿದ್ದರು. ಹಾಗಿದ್ದರೂ ಅಂದು ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳ ರಾಜ್ಯಗಳು ಕಾಂಗ್ರೆಸ್‌ನ ಕೈಬಿಟ್ಟಿರಲಿಲ್ಲ. ಆಗ ಕಾಂಗ್ರೆಸ್‌ 150 ಸ್ಥಾನ ಗಳಿಸಲು ಶಕ್ತವಾಗಿತ್ತು. ಆದರೆ ಈ ಸಲ ಗಳಿಸಿರುವ ಕೇವಲ 44 ಸ್ಥಾನಗಳಿವೆಯಲ್ಲಾ, ಈ ಸಂಖ್ಯೆ ಕಾಂಗ್ರೆಸ್‌ ಪಾತಾಳ ತಲುಪಿರುವ ಸಂಕೇತದಂತಿದೆ. ದೇಶದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಇಂತಹ ದುರ್ಗತಿ ಹಿಂದೆಂದೂ ಬಂದಿರಲಿಲ್ಲ.

ತುರ್ತು ಪರಿಸ್ಥಿತಿಯ ಅತಿರೇಕಗಳ ಬಗ್ಗೆ ಅಂದು ಜನರು ತೀವ್ರ ಅಸಮಾಧಾನ­ಗೊಂಡಿ­ದ್ದರು. ಅದಕ್ಕಾಗಿ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿ ಜನ ಖುಷಿಪಟ್ಟಿದ್ದರು. ಆ ನಂತರ ಅಧಿಕಾರದ ಪಟ್ಟಕ್ಕೇರಿದ ಜನತಾ ಪಕ್ಷ ಕೂಡಾ ಜನರ ನಿರೀಕ್ಷೆಯನ್ನು ಹುಸಿಗೊಳಿಸಿತ್ತು. ಆಗ ಮತ್ತೆ ಅದೇ ಜನ ಕಾಂಗ್ರೆಸ್‌ ಪಕ್ಷದ ಕೈಹಿಡಿದು ಅಧಿಕಾರದ ಗದ್ದುಗೆಯಲ್ಲಿ ಕುಳ್ಳಿರಿಸಿದ್ದರು. ಆ ದಿನಗಳಲ್ಲಿ ಜನರು ಕಾಂಗ್ರೆಸ್‌  ಬಗ್ಗೆ ಅಸಮಾ­ಧಾನ ವ್ಯಕ್ತ ಪಡಿಸಿದ್ದು ಎದ್ದು ಕಾಣುವಂತಿತ್ತು. ಆದರೆ ಆ ಪಕ್ಷದಿಂದ ಸಂಪೂರ್ಣವಾಗಿ ಭಾವನಾತ್ಮಕ ಸಂಬಂಧವನ್ನೇನೂ  ಕಡಿದುಕೊಂಡಿರಲಿಲ್ಲ.

ಈ ಸಲ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಆಡಳಿತದಲ್ಲಿನ ಅದಕ್ಷತೆ ಮತ್ತು ಹತ್ತು ಹಲವು ಹಗರಣಗಳ ವಿರುದ್ಧ ಜನ ಮತ ನೀಡಿದ್ದಾರೆ. ಕಾಂಗ್ರೆಸ್ ಬಗ್ಗೆ ಜನರು ಸಂಪೂರ್ಣವಾಗಿ ಭ್ರಮನಿರಸನ ಗೊಂಡಿರುವು­ದರ ದ್ಯೋತಕ ಈ ಸಲದ ಫಲಿತಾಂಶ.
ಇದೀಗ ನರೇಂದ್ರ ಮೋದಿ ಮತ್ತು ಅವರ ಭಾರತೀಯ ಜನತಾ ಪಕ್ಷ ದೇಶದ ಜನತೆಯ ಮುಂದೆ ಬಲು ಸುಂದರ ಕನಸುಗಳನ್ನು ಕಟ್ಟಿಕೊಟ್ಟಿದೆ.

ವಿಪುಲ ಉದ್ಯೋಗ ಅವಕಾಶ ಮತ್ತು ಅಭಿವೃದ್ಧಿಯ ಕಾರ್ಯಸೂಚಿಗಳನ್ನೇ ಜನರ ಎದುರು ಇಟ್ಟಿದೆ. ಎಲ್ಲವೂ ಮೋದಿ­ಯವರ ಕಾರ್ಯಕ್ಷಮತೆಯನ್ನೇ ಅವಲಂಬಿಸಿವೆ. ಒಂದು ವೇಳೆ ಮೋದಿ ಅವರು ನುಡಿದಂತೆ ನಡೆದುಬಿಟ್ಟರೆ 2019ರಲ್ಲಿಯೂ ಕಾಂಗ್ರೆಸ್‌ ಪಕ್ಷ ಮರಳಿ ಗದ್ದುಗೆ ಏರುವುದು ಅಸಾಧ್ಯ. ಎನ್‌ಡಿಎ ದೇಶದಾದ್ಯಂತ ಜಯಭೇರಿ ಬಾರಿಸಿದ ನಂತರ ತಮ್ಮ ಪಕ್ಷದ ವಿಜೇತ ಸದಸ್ಯರನ್ನುದ್ದೇಶಿಸಿ ಮೋದಿ ಅವರು ಮಾತನಾಡಿದ್ದನ್ನು ನೋಡಿದರೆ, ಅವರು ಇನ್ನೊಂದು ದಶಕದ ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿರುತ್ತಾರೆನ್ನಿಸುತ್ತದೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಜಂಟಿಯಾಗಿ ದಕ್ಷಿಣದ ರಾಜ್ಯಗಳಲ್ಲಿ ತನ್ನ ಬೇರುಗಳನ್ನು ಆಳವಾಗಿ ಬೇರೂರುತ್ತಿರುವಾಗ ಹಿಂದುತ್ವದ ನಾಮಫಲಕ ಹಿಡಿದುಕೊಂಡು ಹೋಗುವ ಅಗತ್ಯವಿಲ್ಲ ಎಂಬುದನ್ನು ಅರಿತುಕೊಳ್ಳಲಾಗ­ದಷ್ಟು ಮೋದಿ ದಡ್ಡರೇನಲ್ಲ. ಮಧ್ಯಮವರ್ಗ ಹಿಂದುತ್ವದ ಬಗ್ಗೆ ಮೃದು ಧೋರಣೆ ತಳೆದಿರ­ದಿದ್ದರೆ ಬಿಜೆಪಿ ಈ ಮಟ್ಟಿಗೆ ಯಶಸ್ಸು ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದಂತೂ ನಿಜ. ಇದು ಗೊತ್ತಿರುವುದರಿಂದಲೇ ಮೋದಿ ಅಭಿ­ವೃದ್ಧಿಯ ಮಂತ್ರವನ್ನೇ ಪಠಿಸುತ್ತಾ ಬಂದಿದ್ದಾರೆ. ಈ ದೇಶದ ಮೂರನೇ ಒಂದು ಭಾಗದಷ್ಟು ಜನ ಬಡತನದ ರೇಖೆಗಿಂತ ಕೆಳಗಿರುವುದರಿಂದ ಆ ಜನರ ಮನದಾಳದಲ್ಲಿ ಅಭಿವೃದ್ಧಿಯ ಕನಸು ಅರಳಿಸುವಲ್ಲಿಯೂ ಮೋದಿ ಯಶಸ್ಸು ಗಳಿಸಿದ್ದಾರೆ.

ಹೌದು, ಹಿಂದಿನ ಪ್ರಧಾನಿ ಮನಮೋಹನ ಸಿಂಗ್‌ ಅವರ ಬದುಕು, ಚಿಂತನೆ ಎಲ್ಲವೂ ತೆರೆದ ಪುಸ್ತಕದಂತಿದೆ. ಆದರೆ ಇವರ ಆಡಳಿತಾವಧಿಯ ಸಾಧನೆಗಳ ಬಗ್ಗೆ ‘ವಿವರ’ ಬಹಳ ಕಡಿಮೆ ಎನಿಸುತ್ತದೆ! ಬೆಲೆ ಏರಿಕೆ ನಿಯಂತ್ರಣದಲ್ಲಿ ಎಡವಿದ್ದನ್ನು ಹೇಗೆ ಮರೆಯುವುದು. ಕಾಂಗ್ರೆಸ್‌ನ ಸಮಸ್ಯೆ ಸಿಂಗ್‌ ಅವರ ನಡೆಗಳು ಅಲ್ಲ. ಅವ­ರೇನಿದ್ದರೂ ನಿನ್ನೆ ಮೊನ್ನೆಯ ಒಂದು ಕಥಾನಕ ಅಷ್ಟೆ. ಕಾಂಗ್ರೆಸ್‌ನ ವಂಶ ಪಾರಂಪರ್ಯ ತಪ್ಪು ಹೆಜ್ಜೆಗಳನ್ನು ಕಾಂಗ್ರೆಸ್‌ ಮಂದಿ ಅದೇಗೆ ಕಡೆಗಣಿಸಲು ಸಾಧ್ಯ? ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್‌ ಗಾಂಧಿ ದೇಶವನ್ನು ಆಳಿದರೆನ್ನುವುದು ಸುಳ್ಳಲ್ಲ ತಾನೆ? ಇದೀಗ ಇವರಿಬ್ಬರೂ ಸೋತು ಸುಣ್ಣವಾಗಿರುವುದೂ ಅಷ್ಟೇ ನಿಜ.

ಚುನಾವಣೆಯ ನಂತರ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ಸೋಲಿನ ಬಗ್ಗೆ ನೈತಿಕ ಜವಾಬ್ದಾರಿ ಹೊತ್ತು ಅಮ್ಮ ಮತ್ತು ಮಗ ರಾಜೀನಾಮೆ ಸಲ್ಲಿಸಲು ಮುಂದಾದರು. ಆಗ ಸಭೆ ಅದನ್ನು ಒಪ್ಪಿಕೊಳ್ಳಲಿಲ್ಲ. ಆ ಪಕ್ಷದಲ್ಲಿ ಅವರೇ ಮುಖಂಡರು. ಅಲ್ಲಿ ಅವರಿಬ್ಬರಿಗಿಂತ ಪ್ರಬಲವಾಗಿ ಇನ್ನಾರೂ ತಲೆ ಎತ್ತದಂತೆ ನೋಡಿ­ಕೊಂಡವರೂ ಅಮ್ಮ ಮತ್ತು ಮಗ ತಾನೆ? ಸ್ವಾತಂತ್ರ್ಯಾ ನಂತರ ಈವರೆಗೆ ಕಾಂಗ್ರೆಸ್‌ ಪಕ್ಷ ಒಂದು ಕುಟುಂಬದ ಕಪಿಮುಷ್ಟಿಯಲ್ಲಿಯೇ ಸಿಲುಕಿದೆ. ಹೀಗಾಗಿ ಈ ಪಕ್ಷ ಎಲ್ಲರನ್ನೂ ತನ್ನ ಒಡಲಲ್ಲಿ ತುಂಬಿಕೊಂಡು ದಷ್ಟಪುಷ್ಟವಾಗಿ ಬೆಳೆಯಲು ಸಾಧ್ಯವಾಗಿಲ್ಲವೆನಿಸುತ್ತದೆ.

ಜವಾಹರಲಾಲ್‌ ನೆಹರೂ ಅವರ ಬಗ್ಗೆಯೂ ಹಿಂದಿನವರು ಒಂದು ಮಾತು ಹೇಳುವುದಿದೆ. ಆಲದ ಮರದ ಅಡಿಯಲ್ಲಿ ಇನ್ನೇನೂ ಬೆಳೆಯು­ವುದಿಲ್ಲ.  ಹೌದು, ಅಂದು ಕಾಂಗ್ರೆಸ್‌ ಪಕ್ಷ ಆ ಮಟ್ಟಿಗೆ ನೆಹರೂ ಅವರನ್ನು ಅವ­ಲಂಬಿಸಿತ್ತು. ಹೀಗಾಗಿ ನೆಹರೂ ಸತ್ತಾಗ ಅವರ ಸಮರ್ಥ ಉತ್ತರಾಧಿಕಾರಿ ಇಂತಹವರು ಎಂದು ಯಾರನ್ನೂ ಹೇಳುವ ಸ್ಥಿತಿ ಇರಲಿಲ್ಲ. ಆದರೆ ನೆಹರೂ ಅವರು ತಮ್ಮ ಮಗಳು ಇಂದಿರಾ ಗಾಂಧಿ ಅವರಿಗೆ ರಾಜಕೀಯದ ಪಾಠಗಳನ್ನು ಹೇಳಿಕೊಟ್ಟು ಬೆಳೆಸಿದ್ದರು. ಆದರೆ ಕಾಂಗ್ರೆಸ್‌ ಪಕ್ಷಕ್ಕೆ ಅಂದು ಇಂದಿರಾ ಅವರು ಬೇಕಾಗಿರಲಿಲ್ಲ.

ಅಂದು ಲಾಲ್‌ ಬಹದ್ದೂರ್‌ ಶಾಸ್ತ್ರಿಯವರೇ ಪ್ರಧಾನಿ ಸ್ಥಾನಕ್ಕೆ ಒಮ್ಮತದ ಆಯ್ಕೆಯಾಗಿದ್ದರು. ಆ ದಿನಗಳಲ್ಲಿ ತಮಗೆ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳ ಬೆಂಬಲವಿದೆ ಎಂದು ನಂಬಿ­ಕೊಂಡಿದ್ದ ಮೊರಾರ್ಜಿ ದೇಸಾಯಿ ಅವರೂ ಪ್ರಧಾನಿ ಹುದ್ದೆಗೆ ತಾವೂ ಸಿದ್ಧ ಎಂದು ಘೋಷಿಸಿ­ದ್ದರು. ಆದರೆ ಅಂದು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ­ರಾಗಿದ್ದ ಕೆ.ಕಾಮರಾಜ್‌ ಅವರು ಮೊರಾರ್ಜಿ ಅವರನ್ನು ಇಷ್ಟಪಡಲಿಲ್ಲ. ಮೊರಾರ್ಜಿ ಅವರ ನಿಷ್ಠುರ ನಿಲುವುಗಳು ಕಾಮರಾಜ್‌ ಅವರಿಗೆ ಇಷ್ಟವಾಗಿರಲಿಲ್ಲ. ನಂತರದ ದಿನಗಳಲ್ಲಿ ಈ ದೇಶದ ಪ್ರಧಾನಿ ಪಟ್ಟ ಇಂದಿರಾ ಅವರನ್ನೇ ಹುಡುಕಿಕೊಂಡು ಹೋಯಿತೆನ್ನಿ.

ಆದರೆ ಕಾಂಗ್ರೆಸ್‌ ಪಕ್ಷ ಇಂದು ಅಂದಿನಂತಿಲ್ಲ. ಸಂಪೂರ್ಣ ಭಿನ್ನವಾಗಿದೆ. ಇವತ್ತು ಕಾಮರಾಜ್‌ ಮತ್ತು ಇಂದಿರಾ  ಇಬ್ಬರನ್ನೂ ಸೋನಿಯಾ ಗಾಂಧಿಯವರಲ್ಲಿಯೇ ಕಾಣಬಹುದಾಗಿದೆ. ಹೀಗಾಗಿ ಪ್ರಸಕ್ತ ಸಾರ್ವತ್ರಿಕ ಚುನಾವಣೆಯ ಸೋಲಿನ ಬಗ್ಗೆ ಸೋನಿಯಾ ಅವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

ಹಿಂದೆ ಇಂದಿರಾ ಅವರು ಪ್ರಧಾನ ಮಂತ್ರಿ­ಗಳಾಗಿದ್ದಾಗಲೇ, ಪಕ್ಷದ ಅಧ್ಯಕ್ಷ ಸ್ಥಾನವನ್ನೂ ತಮ್ಮಲ್ಲಿಯೇ ಉಳಿಸಿಕೊಂಡಿದ್ದರು. ದೇಶದ ಆಡಳಿತದ ಕೀಲಿ ಕೈಯನ್ನು ತಮ್ಮ ಕೈಯಲ್ಲಿರಿಸಿ­ಕೊಂಡಿದ್ದಾಗಲೇ  ಪಕ್ಷದ  ಆಗುಹೋಗುಗಳ ಮೇಲೆ ಕಣ್ಣಿಟ್ಟಿದ್ದರು. ಅಂದು ಅದೊಂದು ತೆರ­ನಾದ ಅಧ್ಯಕ್ಷೀಯ ಆಡಳಿತ ವ್ಯವಸ್ಥೆಯಂತಿತ್ತು. ಇವತ್ತು ನರೇಂದ್ರ ಮೋದಿಯವರೂ ಒಂದು ತೆರನಾಗಿ ಅದೇ ಮಾದರಿಯಲ್ಲಿ ಆಡಳಿತ ನಡೆಸು­ವಂತೆ ಕಂಡು ಬರುತ್ತಿದೆ.

ಮೋದಿಯವರ ಚುನಾ­ವಣಾ ಪ್ರಚಾರದ ಕಾರ್ಯತಂತ್ರವೇ ಇದ­ಕ್ಕೊಂದು ಸ್ಪಷ್ಟ ನಿದರ್ಶನದಂತಿದೆ. ಅಧ್ಯಕ್ಷೀಯ ಪದ್ಧತಿ ಪ್ರಜಾತಂತ್ರ ವ್ಯವಸ್ಥೆಯ ಒಂದು ಭಾಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದು ನಿರಂಕುಶ ಆಡಳಿತಕ್ಕೆ ಎಡೆ ಮಾಡಿಕೊಡುತ್ತದೆ ಎನ್ನುವುದನ್ನೂ ಮರೆಯುವಂತಿಲ್ಲ.  ಪ್ರಧಾನಿ ಪಟ್ಟದ ಜತೆಗೆ ಎನ್‌ಡಿಎ ಮುಖ್ಯಸ್ಥನ ಜವಾ­ಬ್ದಾರಿ­ಯನ್ನೂ ತಾವೇ ನಿಭಾಯಿಸುವುದಾಗಿ ಮೋದಿಯವರು ಈಗಾಗಲೇ ತಿಳಿಸಿದ್ದಾರೆ.

ಚರಿತ್ರೆಯ ಪುಟಗಳಲ್ಲಿ ಇಂತಹ ಆಡಳಿತ­ಗಾರರ ಬಗ್ಗೆ ಹೇರಳವಾದ ಮಾಹಿತಿ ಸಿಗುತ್ತದೆ. ಸೋವಿಯತ್‌ ಒಕ್ಕೂಟದ ಆಡಳಿತವೂ ಇದೇ ರೀತಿ ಇತ್ತು. ಮಾಸ್ಕೊದಲ್ಲಿಯೇ ಎಲ್ಲಾ ಅಧಿಕಾರ ಕೇಂದ್ರೀಕರಣ ಗೊಂಡಿದ್ದರಿಂದಲೇ ಕೊನೆಗೆ ಆ ವಿಶಾಲ ರಾಷ್ಟ್ರ ವಿಭಜನೆಗೊಂಡಿತು. ಇವತ್ತೂ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಅದೇ ತೆರನಾದ ಧೋರಣೆಯನ್ನು ಹೊಂದಿದ್ದಾರೆನ್ನುವುದಕ್ಕೆ ಉಕ್ರೇನ್‌ ವಿರುದ್ಧ ರಷ್ಯಾ ಹೊಂದಿರುವ ನಿಲುವೇ ಸ್ಪಷ್ಟ ನಿದರ್ಶನ­ವಾಗಿದೆ. ಅಮೆರಿಕದಲ್ಲಿ ಜನಪ್ರತಿನಿಧಿಗಳ ಕೇಂದ್ರ­ವಾದ ಅಲ್ಲಿನ ಪಾರ್ಲಿಮೆಂಟ್‌ ಪ್ರಬಲವಾಗಿದೆ. ಹೀಗಾಗಿ ಅಧ್ಯಕ್ಷೀಯ ವ್ಯವಸ್ಥೆಯಲ್ಲಿಯೂ ಅಧ್ಯಕ್ಷ ನಿರಂಕುಶ ಪ್ರಭುವಾಗಲು ಅವಕಾಶ ಕಡಿಮೆ.

ಭಾರತದಲ್ಲಿ ಇವತ್ತು ಕಾಂಗ್ರೆಸ್‌ ಪಕ್ಷ ನೆಲ ಕಚ್ಚಿದ ಸ್ಥಿತಿಯಲ್ಲಿರಬಹುದು. ಆದರೆ ಮುಂದೊಂದು ದಿನ ಅದು ಮೈಕೊಡವಿಕೊಂಡು ಎದ್ದು ನಿಂತರೆ ಅಚ್ಚರಿ ಪಡುವಂತಹದ್ದೇನಿಲ್ಲ. ಏಕೆಂದರೆ ಜನರ ಬಳಿ ಹಲವು ಪರ್ಯಾಯ­ಗಳಿಲ್ಲ. ಜನರ ಮನಸ್ಸಿನಲ್ಲಿ ಇವತ್ತಿಗೂ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಪಕ್ಷ ಇದೆ. ಇಲ್ಲವೆಂದರೆ ಕಾಂಗ್ರೆಸ್‌ ಇದೆ. ಅಷ್ಟೇ. ಒಂದು ಸರಿ ಇಲ್ಲ ಎನಿಸಿದರೆ, ಇನ್ನೊಂದರತ್ತ ಜನ ಗಮನ ಹರಿಸುತ್ತಾರೆ.

ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸು­ತ್ತಿದ್ದ ಸಂಘಟನೆಯೊಂದು ಆಮ್‌ ಆದ್ಮಿ ಪಕ್ಷದ ಸ್ವರೂಪ ಪಡೆದುಕೊಂಡು, ಚುನಾವಣಾ ರಾಜ­ಕಾರಣಕ್ಕೆ ಇಳಿಯಿತು. ಇದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡರೆ, ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಜನಮನ ತಲುಪಲು ಸಾಧ್ಯವಾದರೆ ಇದೂ ಒಂದು ಪರ್ಯಾಯವಾಗಿ ಎದ್ದು ನಿಲ್ಲಲು ಸಾಧ್ಯವಿದೆ. ಇದು ಈ ಚುನಾವಣೆಯಲ್ಲಿ ಶೇಕಡ ಮೂರರಷ್ಟು ಮತಗಳನ್ನು ಪಡೆದಿರ­ಬಹುದು, ಆದರೆ ಭ್ರಷ್ಟಾಚಾರದ ವಿರುದ್ಧ ಇದು ಎತ್ತಿದ ಧ್ವನಿಯ ಸದ್ದು ಪರಿಣಾಮಕಾರಿ­ಯಾಗಿಯೇ ಇತ್ತು ಎನ್ನುವುದರ ಬಗ್ಗೆ ಎರಡು ಮಾತಿಲ್ಲ. ಆದರೆ ಚುನಾವಣೆಯಲ್ಲಿ ಮತದಾರ­ರನ್ನು ಒಲಿಸಿಕೊಳ್ಳಲು ದೂರದೃಷ್ಟಿಯಿಂದ ಕೂಡಿದ ಒಂದು ಪರಿಕಲ್ಪನೆ ಮತ್ತು ಸೈದ್ಧಾಂತಿಕ ನಿಲುವು ಅಗತ್ಯವಿದೆ ಎಂಬುದನ್ನು ಆಮ್‌ ಆದ್ಮಿ ಮಂದಿ ತಿಳಿದುಕೊಳ್ಳಬೇಕಿತ್ತು.

ಆಮ್‌ ಆದ್ಮಿ ಪಕ್ಷಕ್ಕೆ ದೆಹಲಿಯಲ್ಲಿ ಸಿಕ್ಕಿದ ಅದ್ಭುತವಾದ ಅವಕಾಶವೊಂದನ್ನು ಅದು ಸರಿಯಾಗಿ ನಿಭಾಯಿಸಲಿಲ್ಲ.  ಇದಕ್ಕೆ ಸಂಬಂಧಿಸಿ­ದಂತೆ ಆ ಪಕ್ಷ ಜನರಲ್ಲಿ ಕ್ಷಮೆ ಯಾಚಿಸಿದೆ, ನಿಜ. ಆದರೆ ಜನರ ಮನಸ್ಸಿನಲ್ಲಿ ಇದು ಬಹು ಕಾಲ ನಿಲ್ಲುತ್ತದೆ. ಹೀಗಾಗಿ ಈ ಪಕ್ಷದವರು ಜನರ ನಡುವೆ ಹೋಗಿ ಬಹಳಷ್ಟು ಕೆಲಸ ಮಾಡ­ಬೇಕಾಗಿದೆ. ಈ ಪಕ್ಷ ಕೇವಲ ಘೋಷಣೆಗಳನ್ನು ನಂಬಿ ಕುಳಿತರೆ ಆಗುವುದಿಲ್ಲ. ಪಕ್ಷ ಸಂಪೂರ್ಣ­ವಾಗಿ ಅರವಿಂದ ಕೇಜ್ರಿವಾಲ್‌ ಅವರನ್ನೇ ಕೇಂದ್ರ­ಬಿಂದುವಾಗಿಸಿಕೊಂಡು ಅದರ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಅದು ನಿಲ್ಲಬೇಕು. ಕೇಜ್ರಿವಾಲ್‌ ಅವರಂತಹ ಹತ್ತು ಹಲವು ಮುಖಂಡರು ಅಲ್ಲಿ ಬೆಳೆಯಬೇಕು. ಆ ರೀತಿ ನಡೆದರೆ ಮಾತ್ರ ಈ ಪಕ್ಷದ ಬೆಳವಣಿಗೆಯಾಗಬಹುದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.