ADVERTISEMENT

ಮಾಧ್ಯಮ ಸ್ವಾತಂತ್ರ್ಯವೂ ಮಾರುಕಟ್ಟೆ ಹಿಡಿತವೂ

ಕುಲದೀಪ ನಯ್ಯರ್
Published 10 ಜೂನ್ 2014, 19:30 IST
Last Updated 10 ಜೂನ್ 2014, 19:30 IST

ಮುಕೇಶ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಉದ್ದಿಮೆ ಸಂಸ್ಥೆಯು ಈಚೆಗೆ ದೇಶದ ಪ್ರಮುಖ ಟೆಲಿವಿಷನ್‌ ವಾಹಿನಿಯೊಂದನ್ನು ಖರೀದಿಸಿದ್ದು ಹೆಚ್ಚು ಸುದ್ದಿಯಾಗಲಿಲ್ಲ. ಇದು ನನಗೆ ಅಚ್ಚರಿಯನ್ನೇನೂ ಉಂಟು ಮಾಡಿಲ್ಲ. ಈ ದೇಶದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಇಂತಹ ಟಿ.ವಿ. ವಾಹಿನಿಗಳನ್ನು ಕೈಗಾರಿಕೋದ್ಯಮಿಗಳು ಅಥವಾ ರಿಯಲ್‌ ಎಸ್ಟೇಟ್‌ ವಹಿವಾಟು ನಡೆಸುವವರೇ ಹೊಂದಿದ್ದಾರೆ.

ಏನಿಲ್ಲವೆಂದರೂ ತಿಂಗಳಿಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಚಿಂತೆ ಇಲ್ಲದೆಯೇ ಖರ್ಚು ಮಾಡಲು ಅವರು ಶಕ್ತರು. ಇಂತಹ ಸಣ್ಣಪುಟ್ಟ ವಾಹಿನಿಗಳಲ್ಲಿ ಹಣ ಹೂಡಿರುವವರೆಲ್ಲರೂ ತಾವೂ ಒಂದಲ್ಲ ಒಂದು ದಿನ ರಿಲಯನ್ಸ್‌ನವರಂತೆ ಆಗಬೇಕೆಂದೂ ಬಯಸುತ್ತಿದ್ದಾರೆ.

ಮುದ್ರಣ ಮಾಧ್ಯಮಗಳಲ್ಲಿ ಈ ವ್ಯವಹಾರದ ಬಗ್ಗೆ ವರದಿಗಳು ಪ್ರಕಟವಾದವು, ನಿಜ. ಆದರೆ ದೊಡ್ಡ ಸುದ್ದಿಯಂತೂ ಆಗಲಿಲ್ಲ. ಈ ಬಗ್ಗೆ ಹೆಚ್ಚು ಚರ್ಚೆಗಳೂ ನಡೆಯಲಿಲ್ಲ. ಪ್ರಸಕ್ತ ಪತ್ರಿಕೋದ್ಯಮವು ಉದ್ಯಮದ ಸ್ವರೂಪ ಪಡೆದುಕೊಳ್ಳುತ್ತಿರುವುದಕ್ಕೆ ಸಂಬಂಧಿಸಿದಂತೆ ಯಾರೂ ಏನನ್ನೂ ಮಾತನಾಡುತ್ತಿಲ್ಲ. ಭಾರತ ಸಂಪಾದಕರ ಗಿಲ್ಡ್‌ ಸೇರಿದಂತೆ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಸಂಘ ಸಂಸ್ಥೆಗಳೂ ಈ ಕುರಿತು ನಿರಾಸಕ್ತ ಧೋರಣೆ ತಳೆದಿವೆ.

ಆದರೆ ಸಂಪಾದಕರೂ ತಮ್ಮ ಆಸ್ತಿಯ ವಿವರಗಳನ್ನು ನೀಡಬೇಕೆಂದು ಹಿಂದೆ ನಾನು ಹೇಳಿದ್ದಾಗ ಅದಕ್ಕೆ ಪ್ರತಿಕೂಲ ಪ್ರತಿಕ್ರಿಯೆ ಕಂಡು ಬಂದಿತ್ತು. ಆದರೆ ರಾಜಕಾರಣಿಗಳು ತಮ್ಮ ಆಸ್ತಿಯ ವಿವರಗಳನ್ನು ಬಹಿರಂಗಗೊಳಿಸಬೇಕು ಎಂದು ಮಾಧ್ಯಮಗಳು ಜನಾಭಿಪ್ರಾಯ ರೂಪಿಸುತ್ತಲೇ ಬಂದಿವೆ.  ಈ ತೆರನಾದ ದ್ವಂದ್ವ ನಿಲುವು ಏಕೆ?

ಕಾರ್ಪೊರೇಟ್‌ ವಲಯದ ಮಂದಿ ಮಾಧ್ಯಮ ಕ್ಷೇತ್ರದಲ್ಲಿ ಹಣ ಹೂಡುವುದಕ್ಕೆ ನನ್ನ ವಿರೋಧ ಇಲ್ಲವೇ ಇಲ್ಲ. ಹೆಚ್ಚುತ್ತಿರುವ ಖರ್ಚು, ಕುಸಿಯುತ್ತಿರುವ ಜಾಹೀರಾತು ಆದಾಯ ಮುಂತಾದ ಹತ್ತು ಹಲವು ಸಮಸ್ಯೆಗಳಿಂದಾಗಿ ಮಾಧ್ಯಮ ಸಂಸ್ಥೆಗಳು ಪಡುತ್ತಿರುವ ಪಡಿಪಾಟಲು ನನಗೆ ಗೊತ್ತಿದೆ. ಅದೇನೇ ಇರಬಹುದು, ಮಾಧ್ಯಮ ಸಂಸ್ಥೆಗಳು ಸ್ವಾವಲಂಬಿಗಳಾಗಿರಬೇಕು ಎನ್ನುವುದು ನನ್ನ ಆಶಯ. ಸೈದ್ಧಾಂತಿಕವಾಗಿಯೂ ಇದು ಸರಿ, ಹೌದು. ಆದರೆ ಈಗ ಮುದ್ರಣ ಮತ್ತು ದೃಶ್ಯ ಮಾದ್ಯಮಗಳಲ್ಲಿ ಇದು ಅಸಾಧ್ಯವೇನೋ ಎಂಬ ಪರಿಸ್ಥಿತಿಯನ್ನೂ ನೋಡುತ್ತಿದ್ದೇವೆ.

ಹಿಂದೆ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ವೃತ್ತಪತ್ರಿಕಾ ಸಂಸ್ಥೆಗಳಲ್ಲಿ ವಿದೇಶಿ ಹೂಡಿಕೆಯನ್ನು   ಶೇಕಡ 26ಕ್ಕೆ ಮಿತಿ­ಗೊಳಿಸಲಾಗಿತ್ತು. ಆದರೆ ನಂತರದ ದಿನ­ಗಳಲ್ಲಿ ಈ ಮಿತಿಯನ್ನು ಟೆಲಿವಿಷನ್‌ ವಲಯಕ್ಕೆ ವಿಸ್ತರಿಸಲಿಲ್ಲ. ಅದೇನೇ ಇದ್ದರೂ, ಮಾಧ್ಯಮ ಸಂಸ್ಥೆಗಳ ಮಾಲೀಕತ್ವವನ್ನು ಹೊರಗಿನವರು ಹೊಂದು­ವುದನ್ನು ತಡೆಯುವುದರ ಹಿಂದಿನ ಸೈದ್ಧಾಂತಿಕ ದೃಷ್ಟಿಕೋನ ಅರ್ಥವಾಗುವಂತಹದ್ದಾಗಿದೆ.

ಮಾಧ್ಯಮ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಒಂದು ಮಿತಿಯನ್ನು ಮೀರಬಾರದೆಂದು ಬಯಸುವಂತೆ, ಇದೇ ಕ್ಷೇತ್ರದಲ್ಲಿ ನಮ್ಮ ಕಾರ್ಪೊರೇಟ್‌ ವಲಯದ ಹೂಡಿಕೆಗೂ ಒಂದು ಲಕ್ಷ್ಮಣರೇಖೆ ಹಾಕಬೇಕಲ್ಲವೇ? ಮಾಧ್ಯಮ ಕ್ಷೇತ್ರದ ಮೇಲೆ ಉದ್ಯಮ ಪ್ರಭುಗಳ ಹಿಡಿತ ಬಿಗಿಯಾಯಿತೆಂದರೆ, ರಾಜಕಾರಣಿಗಳೂ, ಆಡಳಿತಗಾರರೂ ಅಂತಹ ಉದ್ಯಮಪ್ರಭುಗಳ ಓಲೈಕೆಗೆ ಇಳಿಯುವುದು ಸಹಜ ತಾನೆ.

ಇನ್ನೊಂದು ಕಡೆ, ಕೆಲವು ರಾಜಕಾರಣಿಗಳು ಕೆಲವು ಟೆಲಿವಿಷನ್‌ ವಾಹಿನಿಗಳಲ್ಲಿ ತಮ್ಮ ಷೇರುಗಳನ್ನು ಹೊಂದಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಅದೇಕೋ ಏನೋ, ಈಚೆಗಿನ ದಶಕಗಳಲ್ಲಿ ಕೇಂದ್ರದಲ್ಲಿ ಹಿಂದಿದ್ದ ಸರ್ಕಾರಗಳು ಮಾಧ್ಯಮ ಆಯೋಗವೊಂದರ ರಚನೆಗೆ ಮುಂದಾಗಲೇ ಇಲ್ಲ.

ಸ್ವಾತಂತ್ರ್ಯ ಸಿಕ್ಕಿದ ದಿನಗಳಲ್ಲೇ ಇಂತಹದ್ದೊಂದು ಆಯೋಗ ರಚನೆಯಾಗಿತ್ತು. ಎಪ್ಪತ್ತರ ದಶಕದಲ್ಲಿ ತುರ್ತು ಪರಿಸ್ಥಿತಿಯ ನಂತರ ಇಂತಹದ್ದೊಂದು ಆಯೋಗಕ್ಕೆ ಚಾಲನೆ ನೀಡಲಾಗಿತ್ತು. ತುರ್ತು ಪರಿಸ್ಥಿತಿಯ ನಂತರ ರೂಪುಗೊಂಡ ಆಯೋಗದ ಶಿಫಾರಸುಗಳನ್ನು ಮತ್ತೆ ಅಧಿಕಾರದ ಗದ್ದುಗೆ ಏರಿದ ಇಂದಿರಾ ಅವರೇ ಕಡೆಗಣಿಸಿದರು. ಪೊಲೀಸ್‌ ವಲಯದ ಸುಧಾರಣೆಗೆ ಸಂಬಂಧಿಸಿದ ಶಿಫಾರಸುಗಳಿಗೂ ಇದೇ ಗತಿ ಉಂಟಾಯಿತೆನ್ನಿ.

ಈಗ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಅಂತಹದ್ದೊಂದು ಆಯೋಗ ರಚನೆಯ ಕುರಿತು ಅವರು ದಾಪುಗಾಲು ಇಡಬೇಕಾದ ಅಗತ್ಯವಿದೆ.  ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ದೂರದರ್ಶನವೂ ಸೇರಿದಂತೆ ದೃಶ್ಯಮಾಧ್ಯಮಗಳ ಯಾವುದೇ ರೀತಿಯ ಮೌಲ್ಯ ನಿರ್ಣಯ ಈವರೆಗೂ ಆಗಿಯೇ ಇಲ್ಲ.

ವೃತ್ತಪತ್ರಿಕಾ ಸಂಸ್ಥೆಗಳು, ಟೆಲಿವಿಷನ್‌ ವಾಹಿನಿಗಳು ಮತ್ತು ರೇಡಿಯೊಗಳ ಮಾಲೀಕತ್ವದ ವಿಚಾರವೂ ಮುಖ್ಯವೇ ಆಗಿದೆ. ಅಮೆರಿಕದಂತಹ ದೇಶವೇ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಒಂದು ರೀತಿಯ ನಿಯಂತ್ರಣ ಇಟ್ಟುಕೊಂಡಿದೆ. ಆದರೆ ಭಾರತದಲ್ಲಿ ಅಂತಹ ಯಾವುದೇ ತೆರನಾದ ನಿಯಂತ್ರಣವೇ ಇಲ್ಲ. ಇಲ್ಲಿ ಇತರ ಕಾರ್ಖಾನೆಗಳಿಗೆ ಇರುವಂತಹ ಕಾನೂನು ಕಟ್ಟಳೆಗಳೇ ಮಾಧ್ಯಮ ಸಂಸ್ಥೆಗಳಿಗೂ ಅನ್ವಯಿಸುತ್ತವೆ ಅಷ್ಟೆ.

ಹಿಂದಿನಿಂದಲೂ ನಾನು ಪತ್ರಿಕಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಲೇ ಬಂದಿದ್ದೇನೆ, ಇವತ್ತೂ ಅದಕ್ಕೆ ಬದ್ಧನಾಗಿದ್ದೇನೆ. ಆದರೆ ಈಚೆಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ ಮಾತೊಂದು ನನ್ನನ್ನು ಕಾಡತೊಡಗಿದೆ. ಅವರು ಪತ್ರಿಕಾ ಸ್ವಾತಂತ್ರ್ಯ ಇರಲೇ ಬೇಕು ಎನ್ನುತ್ತಾ  ‘ಜತೆಗೆ ಕೆಲವು ಜವಾಬ್ದಾರಿಗಳೂ ಇರಬೇಕು’ ಎಂದಿದ್ದಾರೆ. ಇದರ ಅರ್ಥವಾದರೂ ಏನು?

ಭಾರತದ ಮಾಧ್ಯಮ ಕ್ಷೇತ್ರದಲ್ಲಿ ಇವತ್ತಿಗೂ ಒಂದಿಷ್ಟು ಮೌಲ್ಯಗಳು ಉಳಿದುಕೊಂಡಿವೆ. ಆದರೆ ಮೌಲ್ಯಾಧಾರಿತ ರಾಜಕಾರಣದಿಂದ ನಮ್ಮ ರಾಜಕಾರಣಿಗಳು ಬಹಳ ದೂರ ಬಂದಿದ್ದಾರೆ, ಬಿಡಿ. ಅದೇನೇ ಇದ್ದರೂ, ಸ್ವಾತಂತ್ರ್ಯಾ ನಂತರದ ದಿನಗಳಿಂದ ಇವತ್ತಿನವರೆಗೂ ಭಾರತದ ಪತ್ರಿಕೋದ್ಯಮ ತೀರಾ ಬೇಜವಾಬ್ದಾರಿಯಿಂದ ನಡೆದುಕೊಂಡ ಯಾವುದೇ ನಿದರ್ಶನವಿಲ್ಲ. ಆದರೆ 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರ್ಕಾರವೇ ವಿಧಿಸಿದ್ದ ಕಟ್ಟುಪಾಡುಗಳ ನಡುವಣ ಪತ್ರಿಕೋದ್ಯಮಕ್ಕೆ ಈ ಮಾತು ಅನ್ವಯಿಸುವುದಿಲ್ಲ.

ಬಹುತೇಕ ರಾಜ್ಯಗಳಲ್ಲಿ ವೃತ್ತಪತ್ರಿಕೆಗಳು ಮುಖ್ಯಮಂತ್ರಿಗಳ ಅಥವಾ ಆಡಳಿತಗಾರರ ಒತ್ತಡಗಳನ್ನೂ ಮೀರಿ ಗಟ್ಟಿಯಾಗಿ ನಿಂತಿವೆ. ತಮ್ಮನ್ನು ಹೊಗಳುವವರಿಗಷ್ಟೇ ಜಾಹೀರಾತು­ಗಳನ್ನು ನೀಡುವ ಆಡಳಿತಗಾರರು ಟೀಕಾಕಾರ­ರನ್ನು ಕಡೆಗಣಿಸುವ ಪ್ರವೃತ್ತಿ ಇದ್ದದ್ದೇ. ಸಣ್ಣ ಪತ್ರಿಕೆಗಳು ಜಾಹೀರಾತು ಇದ್ದರಷ್ಟೇ ಗಟ್ಟಿಯಾಗಿ ನಿಲ್ಲಲು ಸಾಧ್ಯ ತಾನೆ.

ಇಂತಹ ಜಾಹೀರಾತು­ಗಳಿಗೆಂದು ಸರ್ಕಾರ ನೀಡುವುದು ತೆರಿಗೆದಾರರ ಹಣವೇ ಆಗಿದೆ. ಆದರೆ ಆಡಳಿತಗಾರರು ಮಾತ್ರ ತಾರತಮ್ಯ ಮಾಡುವುದು ಸಾಮಾನ್ಯವೇ ಆಗಿದೆ. ಇಂತಹದೇ ಜಾಹೀರಾತು ವ್ಯವಸ್ಥೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿಯೂ ಇದೆ. ಅಲ್ಲಿನ ಸರ್ಕಾರಗಳಂತೂ ತೀರಾ ಭಂಡತನದಿಂದಲೇ ನಡೆದುಕೊಳ್ಳುತ್ತವೆ.

ಆಡಳಿತಗಾರರು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಕೋಟ್ಯಂತರ ರೂಪಾಯಿಗಳನ್ನು ವ್ಯಯ ಮಾಡುತ್ತಿದ್ದಾರೆ. ಅಲ್ಲಿಯೂ ಕಾರ್ಪೊರೇಟ್‌ ವಲಯ ಮತ್ತು ಕೆಲವೇ ಶ್ರೀಮಂತರು ಮಾಧ್ಯಮ ಕ್ಷೇತ್ರವನ್ನು ಆಳುತ್ತಿದ್ದಾರೆ. ಈಚೆಗೆ ನಾನು ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಗೆ ಭೇಟಿ ನೀಡಿದ್ದೆ.

ಅಲ್ಲಿನ ರಾಜಕಾರಣದ ಗೊಂದಲಮಯ ಸ್ಥಿತಿ, ಆಡಳಿತದಲ್ಲಿ ಸೇನೆಯ ಹಸ್ತಕ್ಷೇಪ ಇತ್ಯಾದಿಗಳ ಬಗ್ಗೆ ಬರೆಯುವುದು ಬಹಳಷ್ಟಿದೆ. ಅಲ್ಲಿನ ಮಾಧ್ಯಮಗಳ ಬಗ್ಗೆಯೇ ಹೇಳುವುದಿದ್ದರೆ, ಅಲ್ಲಿನ ರಾಜಕಾರಣದ ಮೇಲೆ ಮಾಧ್ಯಮಗಳ ಪ್ರಭಾವ ಬಹಳಷ್ಟಿದೆ. ಬಾಂಗ್ಲಾದೇಶದ ಮಟ್ಟಿಗೆ ಹೇಳುವುದಿದ್ದರೆ, ಅಲ್ಲಿರುವ ವೃತ್ತಪತ್ರಿಕೆ­ಗಳಿಗಿಂತಲೂ ಟೆಲಿವಿಷನ್‌ ವಾಹಿನಿಗಳ ಸಂಖ್ಯೆಯೇ ಹೆಚ್ಚು.

ಬಹುತೇಕ ಎಲ್ಲವೂ ಬಂಗಾಳಿ ಭಾಷೆಯಲ್ಲಿಯೇ ಇವೆ. ಅಧಿಕಾರ ಯಾರ ಕೈಯಲ್ಲಿರುತ್ತದೋ ಆ ಕಡೆ ಅಲ್ಲಿನ ಮುದ್ರಣ ಮಾಧ್ಯಮ ವಾಲುತ್ತದೆ ಎಂಬುದು ಅಲ್ಲಿನ ಸಾಮಾನ್ಯ ಅಭಿಪ್ರಾಯ. ಇದಕ್ಕೆ ಹೊರತಾದ ಕೆಲವು ಪತ್ರಿಕೆಗಳೂ ಇರಬಹುದು. ಪಾಕಿಸ್ತಾನದ  ಕುರಿತು ಹೇಳುವುದಿದ್ದರೆ ಇವತ್ತಿಗೂ ಅಲ್ಲಿ ಒಂದು ತೆರನಾದ ಊಳಿಗಮಾನ್ಯ ಪರಿಸ್ಥಿತಿಯೇ ಇದೆ. ಆದರೂ ಅಲ್ಲಿನ ಮಾಧ್ಯಮ ಮಾತ್ರ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.

ಈಚೆಗೆ ಅಲ್ಲಿನ ಟೆಲಿವಿಷನ್‌ ವಾಹಿನಿಯೊಂದರ ಹಮೀದ್‌ ಮಿರ್‌ ಎಂಬುವವರ ಮೇಲೆ ಕ್ರೂರವಾಗಿ ಹಲ್ಲೆ ನಡೆದಿದ್ದು ನಮಗೆಲ್ಲಾ ಗೊತ್ತಿರುವ ಸಂಗತಿ.  ಜೀವ ಬೆದರಿಕೆಗಳ ನಡುವೆಯೂ ದಿಟ್ಟವಾಗಿ ನಿತ್ಯವೂ ಕೆಲಸ ಮಾಡುವ ಅಸಂಖ್ಯ ಪತ್ರಕರ್ತರು ಅಲ್ಲಿದ್ದಾರೆ. ಆ ದೇಶದ ಐಎಸ್‌ಐ ಮತ್ತು ಭಯೋತ್ಪಾದಕರ ಉಗ್ರ ಕೋಪ ಮತ್ತು ಅಸಹನೆಯ ಎದುರು ಬಹಳಷ್ಟು ಪತ್ರಕರ್ತರು ಉತ್ತಮ ಕೆಲಸವನ್ನೇ ಮಾಡುತ್ತಿದ್ದಾರೆ.

ಅಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ದುಡಿಯುತ್ತಿರುವ ಪುರುಷರು ಮತ್ತು ಮಹಿಳೆಯರು ದೈನಂದಿನ ಘಟನೆಗಳನ್ನು ವಸ್ತುನಿಷ್ಠವಾಗಿ ವರದಿ ಮಾಡುತ್ತಿದ್ದಾರೆ. ಅದೇನೇ ಇರಲಿ,  ಭಾರತದ ನೆರೆಹೊರೆಯ ಹಲವು ದೇಶಗಳ ಮಾಧ್ಯಮ ಸಂಸ್ಥೆಗಳಲ್ಲಿ ಇವತ್ತಿಗೂ ವಿದೇಶಿ ಮಂದಿ ಮಾಲೀಕತ್ವ ಹೊಂದಿಲ್ಲ ಎನ್ನುವುದಂತೂ ನಿಜ.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಈ ದೇಶದ ಪ್ರಮುಖ ವೃತ್ತಪತ್ರಿಕಾ ಗುಂಪುಗಳ ಮಾಲೀಕತ್ವ ಹೊಂದಿದ್ದ ಆಂಗ್ಲರನ್ನು ಹೊರ ಕಳಿಸಲು ಅಂದು ದೊಡ್ಡ ಕೈಗಾರಿಕೋದ್ಯಮಿಗಳ ನೆರವು ಯಾಚಿಸಿದ್ದರು. ಆ ದಿನಗಳಲ್ಲೇ ಮುಂಬೈನ ಟೈಮ್ಸ್‌ ಆಫ್‌ ಇಂಡಿಯಾ, ಮದ್ರಾಸ್‌ನ ದಿ ಮೆಯಿಲ್‌, ಲಖನೌ ನಗರದ ದಿ ಪಯೋನಿರ್‌ ಪತ್ರಿಕೆಗಳಲ್ಲಿ ಆಂಗ್ಲರು ಹೊಂದಿದ್ದ ಹಿಡಿತ ಸಡಿಲಗೊಂಡವು.

ಮಾಲೀಕತ್ವದಲ್ಲಿ ಬದಲಾವಣೆ­ಗಳಾದವು. ಸ್ಟೇಟ್ಸ್‌ಮನ್‌ ಪತ್ರಿಕಾ ಗುಂಪು ಕೂಡಾ ಸ್ವದೇಶಿ ಕೈಗಾರಿಕೋದ್ಯಮಿ­ಯೊಬ್ಬರ ಒಡೆತನಕ್ಕೆ ಸೇರಿತು. ಹೌದು, ಭಾರತದಲ್ಲಿ ಮಾಧ್ಯಮ ಕ್ಷೇತ್ರ ಬಲು ದೂರ ಸಾಗಿ ಬಂದಿದೆ. ಈ ನಡುವೆ ‘ದೃಶ್ಯ ಮಾಧ್ಯಮಗಳೂ ನಮ್ಮ ವ್ಯಾಪ್ತಿಯೊಳಗೆ ಬರಬೇಕು’ ಎಂದು  ಭಾರತದ ಪ್ರೆಸ್‌ ಕೌನ್ಸಿಲ್‌ ಪದೇ ಪದೇ ಒತ್ತಾಯಿಸುತ್ತಲೇ ಇದೆ. ಆದರೆ ಆಡಳಿತಗಾರರು ಮಾತ್ರ ಈ ಬೇಡಿಕೆಗೆ ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ.

‘ಈ ದೇಶದಲ್ಲಿ ಮಾಧ್ಯಮ ವೃತ್ತಿ ಸಾಕಷ್ಟು ಬೆಳೆದಿದೆ. ಜನಮಾನಸದ ಮೇಲೆ ದೊಡ್ಡ ಮಟ್ಟದಲ್ಲಿಯೇ ಪ್ರಭಾವ ಬೀರುವ ಶಕ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ವೃತ್ತಿಗೆ ಸೇರುವವರಿಗೆ ನಿರ್ದಿಷ್ಟ ಅರ್ಹತೆ ಇರಲೇಬೇಕೆಂಬ ಕಾನೂನು ತರಬೇಕು’ ಎಂದು ಪ್ರೆಸ್‌ ಕೌನ್ಸಿಲ್‌ ಒತ್ತಾಯಿಸುತ್ತಲೇ ಇದೆ.

ಆದರೆ ಈ ದೇಶದಲ್ಲಿ ಮಾಧ್ಯಮ ತನ್ನ ಗಮನವನ್ನು ಹೆಚ್ಚಾಗಿ ಮಾರುಕಟ್ಟೆಯ ಮೇಲೆಯೇ ಕೇಂದ್ರೀಕರಿಸಿರುವುದೊಂದು ವಿಪರ್ಯಾಸ. ಅದೂ ಬಹಳ ಮುಖ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ವಸ್ತುನಿಷ್ಠ ಸುದ್ದಿಗೇ ಹೆಚ್ಚು ಪ್ರಾಶಸ್ತ್ಯ ಇರಬೇಕಲ್ಲವೇ ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.