ADVERTISEMENT

ಮಕ್ಕಳಲ್ಲಿ ಪುಸ್ತಕ ಸಂಸ್ಕೃತಿ ಬಿತ್ತುವುದು ಹೇಗೆ? ಅಕ್ಷರ್ ದಾಮ್ಲೆ ಅವರ ಅಂಕಣ

ಅಕ್ಷರ್ ದಾಮ್ಲೆ ಅವರ ಅಂತರಂಗ ಅಂಕಣ: ಟಿ.ವಿ, ಮೊಬೈಲ್‌, ಗ್ಯಾಜೆಟ್‌ ಹಾವಳಿಗಳ ನಡುವೆಯೂ ಮಕ್ಕಳಲ್ಲಿ ಪುಸ್ತಕ ಸಂಸ್ಕೃತಿಯನ್ನು ಬಿತ್ತುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 22:41 IST
Last Updated 8 ನವೆಂಬರ್ 2024, 22:41 IST
<div class="paragraphs"><p>ಮಕ್ಕಳಲ್ಲಿ ಪುಸ್ತಕ ಸಂಸ್ಕೃತಿ ಬಿತ್ತುವುದು ಹೇಗೆ? ಅಕ್ಷರ್ ದಾಮ್ಲೆ ಅವರ ಅಂಕಣ</p></div>

ಮಕ್ಕಳಲ್ಲಿ ಪುಸ್ತಕ ಸಂಸ್ಕೃತಿ ಬಿತ್ತುವುದು ಹೇಗೆ? ಅಕ್ಷರ್ ದಾಮ್ಲೆ ಅವರ ಅಂಕಣ

   

ಇತ್ತೀಚೆಗೆ ಆಸ್ಟ್ರೇಲಿಯಾದ ಪ್ರಧಾನಿ ಆಂಟನಿ ಅಲ್ಬನಿಸ್ ಅವರು 16 ವರ್ಷಗಳಿಗಿಂತ ಕೆಳಗಿನ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಲು ಕಾನೂನನ್ನು ತರುವುದಾಗಿ ಘೋಷಿಸಿದ್ದಾರೆ. ಒಂದು ರಾಷ್ಟ್ರದ ಸರ್ಕಾರ ಕಾನೂನು ಮಾಡುವಷ್ಟರ ಮಟ್ಟಿಗೆ ಆಲೋಚನೆ ಮಾಡುತ್ತಿದೆ ಅಂದರೆ, ಈ ಸಮಸ್ಯೆಯ ತೀವ್ರತೆ ಎಷ್ಟಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಈ ರೀತಿಯ ನಿಷೇಧ ಫ್ರಾನ್ಸ್ ಮತ್ತು ಅಮೆರಿಕದಲ್ಲಿ ಈಗಾಗಲೇ ಇದೆ. ಫ್ರಾನ್ಸ್‌ನಲ್ಲಿ 15 ವರ್ಷದಿಂದ ಕೆಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ನಿಷೇಧವಿದೆ, ಆದರೆ ಅವರುಗಳು ತಮ್ಮ ಹೆತ್ತವರ ಅನುಮತಿ ಪಡೆದುಕೊಂಡು ಬಳಸಬಹುದು. ಅಮೆರಿಕದಲ್ಲಿ 13 ವರ್ಷಗಳಿಗಿಂತ ಕಡಿಮೆಯ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ನಿಷಿದ್ಧವಿದೆ. ಇದರರ್ಥ ಈ ಎಲ್ಲಾ ದೇಶಗಳಲ್ಲೂ ಗ್ಯಾಜೆಟ್‍ಗಳ ಹಾವಳಿಗಳನ್ನು ಮತ್ತು ಅದರಿಂದಾಗುತ್ತಿರುವ ದುಷ್ಪರಿಣಾಮಗಳನ್ನು ಕಂಡುಕೊಂಡಿದ್ದಾರೆ. ಹಾಗಾದರೆ, ನಮ್ಮ ದೇಶದಲ್ಲೂ ಇಂಥ ಕಾನೂನಿನ ಅಗತ್ಯವಿದೆಯೇ ಎಂಬ ಒಂದು ತರ್ಕ ನಮ್ಮ ಮನದಲ್ಲಿ ಮೂಡುತ್ತಿದೆ. ಬಹುಶಃ ಇನ್ನು ಕೆಲವೇ ವರ್ಷಗಳಲ್ಲಿ ಈ ಕಾನೂನು ಬರಬಹುದು.

ಕಾನೂನು ಬರಲಿ, ಬಾರದೇ ಇರಲಿ, ಹೆತ್ತವರಾಗಿ ಮಕ್ಕಳನ್ನು ಗ್ಯಾಜೆಟ್‍ಗಳಿಂದ ದೂರವಿಡುವುದು ನಮ್ಮ ಕರ್ತವ್ಯ. ಯಾಕೆಂದರೆ, ಮನಃಶ್ಯಾಸ್ತ್ರೀಯ ಅಧ್ಯಯನಗಳ ಪ್ರಕಾರ, ಕನಿಷ್ಠ 12 ವರ್ಷಗಳವರೆಗೆ ಮಕ್ಕಳಿಗೆ ಯಾವುದೇ ರೀತಿಯ ಗ್ಯಾಜೆಟ್‍ಗಳ ಅವಕಾಶ ಸಿಗದಿದ್ದರೆ ಒಳ್ಳೆಯದು. ಅಂದರೆ, ಮಕ್ಕಳನ್ನು ಸಂಪೂರ್ಣವಾಗಿ ಗ್ಯಾಜೆಟ್‍ಗಳಿಂದ ದೂರ ಇಡಬೇಕು. ಆದರೆ ನಮ್ಮ ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಕಷ್ಟ ಸಾಧ್ಯ. ಯಾಕೆಂದರೆ ನಾವೆಲ್ಲರೂ ಗ್ಯಾಜೆಟ್‍ಗಳಿಗೆ ಅಧೀನರಾಗಿ ಬಿಟ್ಟಿದ್ದೇವೆ. ಗ್ಯಾಜೆಟ್‍ಗಳು ಇಲ್ಲ ಎಂದರೆ ನಮ್ಮ ಜೀವನವೇ ನಡೆಯುವುದಿಲ್ಲವೇನೋ ಎಂಬ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದರೂ ಮಕ್ಕಳನ್ನು ಗ್ಯಾಜೆಟ್‍ಗಳಿಂದ ವಿಮುಖರಾಗುವಂತೆ ಮಾಡಬಹುದು.

ADVERTISEMENT

ಮೊದಲನೆಯದಾಗಿ ಮಕ್ಕಳಿಗೆ ಎಳವೆಯಿಂದಲೇ ಮೊಬೈಲ್‌ ಅನ್ನು ಲಭ್ಯವಾಗದಂತೆ ನೋಡಿಕೊಳ್ಳಬೇಕು. ಊಟ ಮಾಡಲು ಮಗು ಒಲ್ಲೆ ಎಂದರೆ, ಹಿಂದಿನ ಕಾಲದ ಹಾಗೆ ಚಂದಮಾಮನನ್ನು ಅಥವಾ ಇನ್ಯಾವುದೋ ಹಕ್ಕಿಯನ್ನು ತೋರಿಸಿ ಉಣಿಸಬೇಕು. ಮಕ್ಕಳ ಜೊತೆಗಿರುವಾಗ ಸಾಧ್ಯವಾದಷ್ಟು ಮೊಬೈಲ್‌ ಅನ್ನು ದೂರ ಇಡಬೇಕು.

ಆದರೆ ಈಗಾಗಲೇ ಬೆಳೆದಿರುವ ಮಕ್ಕಳಿಗೆ ಏನು ಮಾಡುವುದು ಎಂಬುದು ಪ್ರಶ್ನೆ. ಯಾಕೆಂದರೆ ಅವರುಗಳೆಲ್ಲರೂ ಈಗಾಗಲೇ ಗ್ಯಾಜೆಟ್ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಅಂತಹ ಸಂದರ್ಭದಲ್ಲಿ ಮನೆಗಳಲ್ಲಿ ಸಾಮೂಹಿಕವಾಗಿ ಗ್ಯಾಜೆಟ್‌ಗಳನ್ನು ದೂರ ಮಾಡುವ ಸಾಂಸ್ಕೃತಿಕ ಬದಲಾವಣೆ ನಡೆಯಬೇಕು. ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಇರಬೇಕೆಂದರೆ, ಅದಕ್ಕೆ ಬೇಕಾದ ವಾತಾವರಣವನ್ನು ಸೃಷ್ಟಿ ಮಾಡಬೇಕು.

ಹೇಗೆ ನಮ್ಮ ಪರಿಸರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಉದಾಹರಣೆಯನ್ನು ಕೊಡುವುದಾದರೆ, ನನ್ನ ತಂದೆ - ತಾಯಿ ನಿರಂತರವಾಗಿ ಒಂದಿಲ್ಲಾ ಒಂದು ಪುಸ್ತಕವನ್ನು ಓದುತ್ತಾರೆ. ಟಿ.ವಿ ಕೇವಲ ವಾರ್ತೆಯನ್ನು ನೋಡುವುದಕ್ಕಷ್ಟೇ ಸೀಮಿತವಾಗಿರುತ್ತದೆ. ಕರೆ ಬಂದರೆ ಫೋನ್, ಇಲ್ಲದಿದ್ದರೆ ಅದು ಬದಿಯಲ್ಲೆಲ್ಲಾದರೂ ತನ್ನ ಪಾಡಿಗೆ ಮಿಣುಕುತ್ತಾ ಕೂತಿರುತ್ತದೆ. ಹಾಗಾಗಿ ನಾನು ಅವರ ಜೊತೆಗೆ ಸಮಯ ಕಳೆಯುವುದಕ್ಕೆ ಹೋದಾಗಲೆಲ್ಲಾ ನನ್ನ ಪುಸ್ತಕದ ಓದಿನ ವೇಗವೂ ಹೆಚ್ಚುತ್ತದೆ. ಮಾತ್ರವಲ್ಲ ಓದಿದ ಪುಸ್ತಕದ ಕುರಿತು ನಮ್ಮ ಹೊಳಹುಗಳ ಚರ್ಚೆ ಆಗುತ್ತದೆ. ತರ್ಕಗಳು ಮೂಡುತ್ತವೆ. ಮತ್ತು ಹೊಸ ಕಾಣ್ಕೆಗಳೂ ಕಾಣಿಸುತ್ತವೆ. ಮಾತ್ರವಲ್ಲ ಅಂತಹ ಸಂದರ್ಭದಲ್ಲಿ ಗ್ಯಾಜೆಟ್ ಯಾವತ್ತೂ ನಮ್ಮನ್ನು ಸೆಳೆಯುವುದೇ ಇಲ್ಲ.

ಗ್ಯಾಜೆಟ್‍ಗಳಿಂದ ನಾನೂ ಮುಕ್ತನೇನಲ್ಲ. ನನ್ನ ಹಲವಾರು ಕೆಲಸಗಳಿಗೆ ಗ್ಯಾಜೆಟ್‍ಗಳ ಮೇಲಿನ ಅವಲಂಬನೆ ಬಹಳವಾಗಿಯೇ ಇದೆ. ಈ ಲೇಖನವನ್ನು ಬರೆಯುವುದಕ್ಕೂ ನಾನು ನನ್ನ ಕಂಪ್ಯೂಟರನ್ನೇ ಬಳಸುತ್ತಿದ್ದೇನೆ. ಆದರೆ, ಒಂದು ನಾವು ಗಮನದಲ್ಲಿಟ್ಟುಕೊಳ್ಳಬೇಕಾದ ವಿಚಾರವೇನೆಂದರೆ, ನಾವು ಗ್ಯಾಜೆಟ್‍ಗಳ ಅಧೀನಕ್ಕೊಳಗಾಗಬಾರದು. ಅದಕ್ಕೆ ಮನಸ್ಸಿನ ಹತೋಟಿ ನಮ್ಮ ಕೈಯಲ್ಲೇ ಇರಬೇಕು.

ಇದಲ್ಲದೇ ಇತ್ತೀಚೆಗೆ ಅನೇಕ ಪಟ್ಟಣಗಳಲ್ಲಿ ಬುಕ್ ಕ್ಲಬ್ ಎಂಬಂತಹ ಹೊಸ ಪ್ರಯೋಗಗಳು ನಡೆಯುತ್ತಿವೆ. ವಾರಕ್ಕೊಮ್ಮೆ ಒಂದಷ್ಟು ಜನ ಒಟ್ಟು ಸೇರಿ ಪುಸ್ತಕಗಳನ್ನು ಓದುವ ಪರಿಪಾಠವನ್ನು ನಿರ್ಮಿಸಲಾಗುತ್ತಿದೆ. ಇಂತಹ ಜಾಗಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ. ಆರಂಭದಲ್ಲಿ ಮಕ್ಕಳು ಅದಕ್ಕೆ ಒಗ್ಗಿಕೊಳ್ಳದೇ ಇರಬಹುದು. ಆದರೆ, ನಿಧಾನವಾಗಿ ಅದು ಇಷ್ಟವಾಗುದಕ್ಕೆ ಆರಂಭವಾಗುತ್ತದೆ. ಮತ್ತು ಪುಸ್ತಕ ಪ್ರೀತಿ ಹುಟ್ಟುತ್ತದೆ. ಗ್ಯಾಜೆಟ್‍ಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.

****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.