ADVERTISEMENT

ಅಂತರಂಗ | ಗೌರವ ತೋರಿಸದ ಮಕ್ಕಳದ್ದು ವರ್ತನೆಯ ಸಮಸ್ಯೆಯೇ?

ಪ್ರಜಾವಾಣಿ ವಿಶೇಷ
Published 19 ಜುಲೈ 2024, 23:39 IST
Last Updated 19 ಜುಲೈ 2024, 23:39 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಅಂತರಂಗ: ಗೌರವ ತೋರಿಸದ ಮಕ್ಕಳದ್ದು ವರ್ತನೆಯ ಸಮಸ್ಯೆಯೇ?

ನನ್ನ ಮಗಳಿಗೆ ಯಾವುದೇ ಕಷ್ಟ ಸೋಕದಂತೆ ಬೆಳೆಸುತ್ತಿದ್ದೇನೆ. ಅವಳು ಕೇಳಿದ್ದೆಲ್ಲವನ್ನೂ ಕೊಡಿಸುತ್ತೇನೆ. ಆದರೂ ಅವಳಿಗೆ ಅಪ್ಪ ಅಮ್ಮ ಅಂದರೆ ಗೌರವವಿಲ್ಲ. ಕೊಡಿಸಿರುವ ಅನುಕೂಲಗಳ ಬಗ್ಗೆಯೂ ಗೌರವವಿಲ್ಲ. ಮುಚ್ಚಟೆಯಿಂದ ಕಾಪಿಡುವುದು ಗೊತ್ತಿಲ್ಲ. ಇವೆಲ್ಲವೂ ವರ್ತನೆಯ ಸಮಸ್ಯೆಗಳೇ?

ADVERTISEMENT

ಈ ಪ್ರಶ್ನೆಯಲ್ಲಿ ಅನೇಕ ಕಿರುಪ್ರಶ್ನೆಗಳು ಅಡಗಿವೆ. ಒಂದು, ಮಕ್ಕಳು ಕೇಳಿದ್ದನ್ನೆಲ್ಲಾ ಕೇಳಿದ ಕೂಡಲೇ ಒದಗಿಸಬೇಕಾ? ಮಕ್ಕಳಿಗೆ ಹೆಚ್ಚಿನ ಐಷಾರಾಮಿ ಜೀವನದ ರುಚಿಯನ್ನು ಎಳವೆಯಲ್ಲೇ ಕೊಡಬೇಕಾ? ಅಥವಾ ಮಕ್ಕಳಿಗೆ ಸಣ್ಣದಿರುವಾಗಿನಿಂದಲೇ ಕಷ್ಟವನ್ನು ಕಲಿಸಬೇಕಾ? ಹೀಗೆ ಬಗೆಯುತ್ತಾ ಹೋದರೆ, ಮುಗಿಯದಷ್ಟು ಪ್ರಶ್ನೆಗಳು ಬರುತ್ತಾ ಹೋಗುತ್ತವೆ. ಯಾವುದು ಸರಿ ಯಾವುದು ತಪ್ಪು ಎಂದು ಸಾಮಾನ್ಯವಾಗಿ ಹೇಳುವುದು ಸಾಧ್ಯವಿಲ್ಲ. ಆದರೂ ಮೇಲಿನ ಪ್ರಶ್ನೆಯನ್ನು ಗಮನದಲ್ಲಿಟ್ಟುಕೊಂಡು ಒಂದಷ್ಟು ತರ್ಕಿಸುವುದಾದರೆ, ಹೆತ್ತವರು ಎರಡು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

  • ನಿಮ್ಮ ಬಿಡುವಿಲ್ಲದ ಕೆಲಸಗಳ ನಡೆವೆಯೂ ಮಕ್ಕಳೊಂದಿಗೆ ಸಮಯವನ್ನು ವಿನಿಯೋಗಿಸಿ. ಮಕ್ಕಳಿಗೆ ಗ್ಯಾಜೆಟ್‌ಗಳನ್ನು ಕೊಟ್ಟು ಮೌನವಾಗಿರಿಸುವುದು ಯಾವ ದೊಡ್ಡ ಸಾಧನೆಯೂ ಅಲ್ಲ. ಬದಲಾಗಿ ಅದರಿಂದಾಗುವ ತೊಡಕುಗಳೇ ಜಾಸ್ತಿ. ಅದೇ ಈ ಪ್ರಶ್ನೆಯಲ್ಲೂ ಕಂಡಿರುವುದು.

  • ನಿಮ್ಮ ಬಾಲ್ಯ ಜೀವನದಲ್ಲಿ ಕಂಡ ಕಷ್ಟಗಳು ಯಾವುವೂ ನಿಮ್ಮ ಮಕ್ಕಳಿಗೆ ಸಿಗಬಾರದು ಎಂಬ ಮನಃಸ್ಥಿತಿಯನ್ನು ಬಿಡಿ. ಯಾಕೆಂದರೆ, ಕಷ್ಟಪಟ್ಟ ಕೂಡಲೇ, ಮಕ್ಕಳು ಕುಂದಿ ಹೋಗುವುದಿಲ್ಲ. ಆ ಕಷ್ಟಗಳನ್ನು ಎದುರಿಸುವ ಕೌಶಲಗಳನ್ನು ಕಲಿಯುತ್ತಾರೆ. ಸಣ್ಣವರಿದ್ದಾಗಿಂದ ಕಷ್ಟವೇ ಕಾಣದ ಮಕ್ಕಳಿಗೆ ಜೀವನದ ಮೌಲ್ಯಗಳೂ ಅರಿವಾಗುವುದಿಲ್ಲ. ಮತ್ತು ಆಮೇಲೆ ಜೀವನ ಪಾಠ ಕಲಿಸುವಾಗ, ತಮ್ಮ ಮನೋಬಲದ ಅಭಾವದಿಂದ ತೀವ್ರತೆರನಾದಂತಹ ಕೆಲವು ಅಹಿತಕರ ಘಟನೆಗಳಿಗೆ ಕಾರಣವಾಗುತ್ತವೆ.

ಆದ್ದರಿಂದ ಮಕ್ಕಳಿಗೆ ಅವರುಗಳು ಅಪೇಕ್ಷಿಸಿದ ವಸ್ತುಗಳನ್ನು ಒದಗಿಸುವ ಮೊದಲು ಹೆತ್ತವರಾಗಿ ನಿಮ್ಮದೇ ಆದಂತಹ ವಿಮರ್ಶೆಯನ್ನು ನಡೆಸಿ. ಒಂದು ವೇಳೆ ಕೊಡಿಸುವ ಅಗತ್ಯವಿಲ್ಲ ಎಂದು ಕಂಡು ಬಂದರೆ, ತಂದೆ- ತಾಯಿ ಇಬ್ಬರೂ ಒಟ್ಟಾಗಿ ನಿರ್ಧಾರವನ್ನು ತೆಗೆದುಕೊಳ್ಳಿ ಮತ್ತು ಆ ನಿರ್ಧಾರಕ್ಕೆ ಬದ್ಧರಾಗಿರಿ. ಒಂದು ವೇಳೆ ನಿಮ್ಮ ಮಧ್ಯೆ ಭಿನ್ನಾಭಿಪ್ರಾಯ ಇದ್ದಲ್ಲಿ ಅದನ್ನು ಮಕ್ಕಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ. ಒಂದು ವೇಳೆ ನೀವು ಕೊಡಿಸುವ ನಿರ್ಧಾರಕ್ಕೆ ಬಂದರೆ, ಸ್ವಲ್ಪ ನಿಧಾನಿಸಿಯೇ ಕೊಡಿಸಿ. ಇವತ್ತಿನ ಇ-ಕಾಮರ್ಸ್ ಯುಗದಲ್ಲಿ ದೇಶದ ಮೂಲೆ ಮೂಲೆಯಿಂದಲೂ ಕ್ಲಿಕ್ಕಿಸಿ ಒಂದು ದಿನದಲ್ಲಿ ತಪ್ಪಿದರೆ ಎರಡು ದಿನಗಳಲ್ಲಿ ವಸ್ತುಗಳನ್ನು ಮನೆಯ ಬಾಗಿಲಿನಲ್ಲಿ ಸ್ವೀಕರಿಸುವ ಅವಕಾಶಗಳಿದ್ದರೂ, ಆ ಕೊಂಡುಕೊಳ್ಳುವಿಕೆಯ ಹಿಂದೆ ಒಂದು ಪರಿಶ್ರಮ ಇದೆ ಎನ್ನುವುದನ್ನು ಮಕ್ಕಳಿಗೆ ಅರಿವಾಗಿಸಿ. ಸೈಕಾಲಜಿಯಲ್ಲಿ ಒಂದು ಡಿಲೇಯ್ಡ್ ಗ್ರಾತಿಫಿಚತಿಒನ್ ಅನ್ನುವ ಪರಿಕಲ್ಪನೆ ಇದೆ. ಅಂದರೆ ವಿಳಂಬಿತ ತೃಪ್ತಿ. ಯಾವಾಗ ಮಕ್ಕಳಿಗೆ ನಾವು ಈ ಪರಿಪಾಠವನ್ನು ಮಾಡುತ್ತೇವೆಯೋ ಆವಾಗ ಅವರುಗಳಿಗೆ ಪರಾಜಯವನ್ನೂ ತಡೆದುಕೊಳ್ಳುವ ಶಕ್ತಿ ಬರುತ್ತದೆ. ಹಾಗಾಗಿ ಮಕ್ಕಳಿಗೆ ಅಗತ್ಯವಾಗಿ ಏನೇನೆಲ್ಲಾ ಕೊಡಿಸಬೇಕೋ ಅವೆಲ್ಲವನ್ನೂ ಖಂಡಿತವಾಗಿ ಕೊಡಿಸಿ. ಆದರೆ ಅವರು ಕೇಳಿದ್ದೆಲ್ಲವನ್ನಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.