ಚುನಾವಣೆಗೆ ಮುಂಚೆ ಈ ಬಾಜಪ್ಪರುಗಳು ‘ಸ್ವಾಮಿ’ ದರ್ಶನ ಮಾಡಿ ಆಶೀರ್ವಾದವನ್ನಷ್ಟೇ ಕೇಳಿದರು. ಆದರೆ ಕಾಂಗಯ್ಯರು ‘ಸ್ವಾಮಿ’ಯ ರಹಸ್ಯ ಭೇಟಿ ಮಾಡಿ ‘ನಿಮ್ಮನ್ನೇ ಸಿ.ಎಂ. ಮಾಡ್ತೀವಿ’ ಅಂದ್ರು. ಅದಕ್ಕೇ ಹೀಗಾಗಿದೆ ಎಂದು ಫೇಸ್‌ಬುಕ್‌ನಲ್ಲಿ ನಾನು ಮಹಾ ರಾಜಕೀಯ ಪಂಡಿತನಂತೆ ಆತ್ಮಾವಲೋಕನವನ್ನು ಪೋಸ್ಟಿಸಿದ್ದೆ. ಅದಕ್ಕೆ ಬಂದ ಕಿರಿಕ್ ಪ್ರತಿಕ್ರಿಯೆಗಳನ್ನು ನೋಡಿ, ನನ್ನನ್ನು ಮೀರುವ ರಾಜಕೀಯ ಪಂಡಿತರಿದ್ದಾರಲ್ಲ ಅನಿಸಿತು. ಕೆಲವು ಸ್ಯಾಂಪಲ್ಲುಗಳು ಇಲ್ಲಿವೆ ಓದಿ.
ಸರ್ವರ್ ಸೋಮ
ಸ್ವಾಮಿಗೆ ಹೋಟೆಲ್ ನಡೆಸುವುದಕ್ಕೆ ಕೊಟ್ಟಿದ್ದಾರೆ. ಮಾಲೀಕರಿಗೆ ತಿಂಗಳಿಗೆ ಎಷ್ಟು ಕೊಡಬೇಕೂಂತ ಮಾತುಕತೆಯಾಗಿರುತ್ತೆ ಬಿಡಿ.
ಕಮಲಾಬಾಯಿ
ಬಾಜಪ್ಪರುಗಳು ಬಹುಮತ ಸಾಬೀತುಪಡಿಸದೇ ಇರಬಹುದು, ಆದರೆ ಕುದುರೆ ವ್ಯಾಪಾರ ಮಾಡದೆ ಸಜ್ಜನ ಪಕ್ಷ ಎಂದು ಇಡೀ ದೇಶಕ್ಕೆ ಸಾಬೀತುಪಡಿಸಲಿಲ್ಲವೇ! ಅದರ ‘ಕ್ರೆಡಿಟ್’ ಡಿಕ್ಸಿಗೆ ಸಲ್ಲಬೇಕು. ಒಟ್ಟಿನಲ್ಲಿ ಪ್ರಜಾಪ್ರಭುತ್ವವನ್ನು ಕೊಚ್ಚಿ ಕೊಚ್ಚಿ ಕೊಲೆ ಮಾಡುವುದು ತಪ್ಪಿದೆ.
ಕೇಸರಿಬಾತ್
ಎಂತಹ ಸಾವು ಮಾರಾಯರೇ! ಇವರ ‘ಮಿಷನ್’ ಗುಜರಿಗೆ ಹೋಯಿತು. ಎಟ್‌ಲೀಸ್ಟ್ ‘ಆಪರೇಷನ್’ ಮಾಡಿಯಾದ್ರೂ ನಿಧಾನಸೌಧವನ್ನು ಹೈಜಾಕ್ ಮಾಡುವುದಲ್ಲವೇ?! ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವುದಕ್ಕೆ ಹಾಗೆ ಮಾಡಿದರು ಅಂತ ನಮ್ಮ ಜಿಲ್ಲೆಯ ಜನರಿಗೆ ಭಯಂಕರ ಖುಷಿಯಾಗುತ್ತಿತ್ತು.
ಬಂಗಡೆಪ್ರಿಯ
ಹೌದೌದು. ನಮ್ಮ ಜಿಲ್ಲೆಯಲ್ಲಿ ಎಂತೆಂತಹ ಭೀಕರ ಕೊಲೆಗಳಾಗುತ್ತವೆ. ಪ್ರಜಾಪ್ರಭುತ್ವದ ಕೊಲೆಯಾಗಿದ್ದರೂ ಅದೊಂದು ದೊಡ್ಡ ಸಂಗತಿಯಲ್ಲ ಮಾರಾಯರೇ!
ಪೊಲಿಟಿಕಲ್ ಗುರು
ಮಾಜಿ ಸಿಎಮ್ಮಯ್ಯರು ತಾನೊಬ್ಬ ಮಹಾಮುನಿ ಎಂಬ ಭ್ರಮೆಯಲ್ಲಿ ಬಾಜಪ್ಪ ಮತ್ತು ಸ್ವಾಮಿ ಇಬ್ಬರಿಗೂ ‘ನಿಮ್ಮ ಅಪ್ಪನಾಣೆಗೂ ಸಿ.ಎಂ. ಆಗಲ್ಲ!’ ಎಂದು ಶಾಪ ಹಾಕಿದ್ದರಲ್ಲವೇ? ಏನಾಯಿತು? ಒಬ್ಬರಲ್ಲ, ಇಬ್ಬರೂ ಸಿ.ಎಂ. ಆಗಿಬಿಟ್ರು ನೋಡಿ!
ಐಡಿಯಾಪ್ಪ
ನಿಜ! ಮಾಜಿ ಸಿಎಮ್ಮಯ್ಯರ ಶಾಪ ಉಲ್ಟಾ ಕಿಕ್ ಕೊಡುತ್ತಿದೆ. 37 ಸೀಟುಗಳ ಸಿ.ಎಂ. ಸಾಹೇಬ್ರು ಆ ಮಹಾಮುನಿಗಳ ಬಳಿ ಹೋಗಿ, ‘ಅಪ್ಪನಾಣೆಗೂ ನೀನು ಸಿ.ಎಂ. ಆಗಿ ಐದು ವರ್ಷ ಅವಧಿ ಪೂರ್ತಿಗೊಳಿಸೊಲ್ಲ’ ಎಂದು ಶಾಪ ಕೊಡುವಂತೆ ಕೋರಬೇಕು.
ಸ್ವಾಮಿಯ ಕತೆ ಬಿಡಿ, ಪರಮ್ಮು ಡಿಸಿಎಂ ಆಗುವುದನ್ನು ಮಾಜಿ ಸಿಎಮ್ಮಯ್ಯ ಸತತವಾಗಿ ವಿರೋಧಿಸಿಕೊಂಡು ಬಂದವರು. ಈಗ ಅವರು ಈ ಇಬ್ಬರು ‘ಪರಿಸ್ಥಿತಿಯ ಕೂಸು’ಗಳನ್ನು ಬೇಡವೆಂದರೂ ನೋಡಬೇಕಾಗಿ ಬಂದಿರುವುದು ವಿಪರ್ಯಾಸ.
ಚೇ.ಲಾಲ್
ಮಾಜಿ ಸಿಎಮ್ಮಯ್ಯರು ಜನರಿಗೆ ಸಾರಾಸಗಟಾಗಿ ಎಂತೆಂತಹ ಭಾಗ್ಯಗಳನ್ನು ನೀಡಿದರು. ಆದರೆ ಜನ ಮಾತ್ರ ಪ್ರತಿಫಲವಾಗಿ ಅವರಿಗೆ ‘ಕುರ್ಚಿ ಭಾಗ್ಯ’ ಕೊಡಲಿಲ್ಲ!
ಜಗಳೂರು ರಾಂ
ಕಾದು ನೋಡಿ! ನಮ್ಮ ಮಾಜಿ ಸಿಎಮ್ಮಯ್ಯ ಶೀಘ್ರದಲ್ಲೇ ಮತ್ತೆ ಮುಖ್ಯಮಂತ್ರಿ ಆಗೇ ಆಗುತ್ತಾರೆ. ಎಲ್ಲಾ 37 ಜಾತ್ಯತೀತ ಶಾಸಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಜವಾಬ್ದಾರಿಯನ್ನು ಬಸ್ ಮಾಲೀಕರೊಬ್ಬರಿಗೆ ಕೊಟ್ಟಿದ್ದಾರಂತೆ !
ದಲ್ಲಾಳ್ ಜೀ
ಅಲ್ರೀ, ಸದ್ಯಕ್ಕೆ ರಾಜಕೀಯ ‘ಷೇರು’ ಮಾರುಕಟ್ಟೆ ಹ್ಯಾಗಿದೆ ಎಂದು ಯಾರಾದರೂ ಹೇಳ್ತೀರಾ?
ಸೇರು ಎಕ್ಸ್‌ಪರ್ಟ್
ರೀ, ಅದು ರಾಜಕೀಯ ‘ಷೇರು’ ಮಾರುಕಟ್ಟೆ ಅಲ್ರೀ! ‘ಸೇರಿಗೆ ಸವ್ವಾ ಸೇರು’ ಮಾರುಕಟ್ಟೆ ಅನ್ನಿ. ಕಳೆದ ಒಂದು ವಾರದಿಂದ ಭಾರಿ ಜಿಗಿತ ಕಂಡಿದೆ. ಆದರೆ ಖರೀದಿಗೆ ಒಳ್ಳೆಯ ಸಮಯ ಅಂದುಕೊಂಡವರು ಮೋಸ ಹೋಗಿದ್ದಾರೆ. ಮುಂದಿನ ದಿವಸಗಳಲ್ಲಿ ಮಾರುಕಟ್ಟೆಯಲ್ಲಿ ಏರುಪೇರು ಕಾಣಬಹುದು. ಬಾಜಪ್ಪರುಗಳು ಬಾಯಿಬಿಟ್ಟು ಕಾತರದಿಂದ ಕಾಯುತ್ತಿದ್ದಾರೆ.
ಚಿಂತಕಯ್ಯ
ಇಂದಿರಾ ಕ್ಯಾಂಟಿನ್‌ನಲ್ಲಿ ಇನ್ನು ಮುಂದೆ ರಾಗಿ ಮುದ್ದೆ ಕೊಡುವ ಬಗ್ಗೆ ನನ್ನ ತಕರಾರು ಇಲ್ಲ. ಆದರೆ ಕ್ಯಾಂಟಿನ್ ಹೆಸರನ್ನು ‘ಇಂದಿರಾ-ಜೆಪಿ ಕ್ಯಾಂಟಿನ್’ಗೆ ಬದಲಾಯಿಸುವ ಸುದ್ದಿ ಇದೆ. ಇದನ್ನು ನಾನು ಒಪ್ಪುವುದಿಲ್ಲ. ಇಂದು ‘ಹಾವು- ಮುಂಗುಸಿ’ ರಾಜಕಾರಣಿಗಳು ಬೇಕೆಂದಾಗ ಒಟ್ಟಾಗುತ್ತಾರೆ. ಹಾಗೆಂದು ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದ ಜಯಪ್ರಕಾಶ್ ನಾರಾಯಣ್ ಅವರನ್ನು ದಯವಿಟ್ಟು ಇಂದಿರಾ ಜತೆ ಸೇರಿಸಬೇಡಿ!
ರಮ್ಮಿ
ಈ ಸರ್ಕಾರವನ್ನು ‘ಕುಮ್ಮಿಶ್ರ ಸರ್ಕಾರ’ ಅನ್ನಬಹುದಲ್ಲವೇ?
ಸ್ವಾಮಿಭಕ್ತೇಶ್ವರ
‘ಕುಮ್ಮಿ’ ಎಂದು ಕರೆಯುವುದಕ್ಕೆ ನಮ್ಮ ಅಡ್ಡಿ ಇದೆ. ಯಾಕೆಂದರೆ ಹಿಂದೆ ‘ಯಡ್ಡಿಸರ್ಕಾರ’ ಎಂದು ಮಾಧ್ಯಮಗಳು ಬರೆಯುತಿದ್ದಾಗ ಬಾಜಪ್ಪರು ಹಾಗೆಲ್ಲಾ ಬರೆಯಬಾರದೆಂದು ಕಟ್ಟಪ್ಪಣೆ ಹೊರಡಿಸಿದಾಗ ಬಹುಶಃ ನೀವು ಹುಟ್ಟಿರಲಿಲ್ಲವೋ ಏನೋ!
ವಕ್ರಾಧಿಪತಿ
ಒಟ್ಟಾರೆ ಹೊಸ ರಾಜಕೀಯ ಸೆಕೆ ಆರಂಭವಾಗಿದೆ.
ಸ್ವಾಮಿಭಕ್ತೇಶ್ವರ
ಬ್ರದರ್, ಅದು ಸೆಕೆ ಅಲ್ರೀ! ರಾಜಕೀಯ ಶಕೆ.
ವಕ್ರಾಧಿಪತಿ
ಗೊತ್ತೂರೀ! ಮೈತ್ರಿ ಪಕ್ಷಗಳ ನಾಯಕರಿಗೆ ಇನ್ನು ಮುಂದೆ ವಿಪರೀತ ಒತ್ತಡಗಳಿರುವುದರಿಂದ ಮೈಕೈ ಬಿಸಿ ಏರಲಿದೆ. ಅದಕ್ಕೆ ನಾನು ಹೇಳಿದ್ದು ರಾಜಕೀಯ ಸೆಕೆ ಅಂತ.
ಗಾಸಿಪ್ ಕಮಲು
ಕೆಲವು ಶಾಸಕರಿಗೆ ಇನ್ನೈದು ವರ್ಷಗಳು ‘ರೆಸಾರ್ಟ್ ವಾಸ್ತವ್ಯ’ದ ಸೌಲಭ್ಯ ಕೊಡುವ ಬಗ್ಗೆಯೂ ಸರ್ಕಾರದ ‘ಕಾಮನ್ ಮಿನಿಮಮ್ ಪ್ರೋಗ್ರಾಮ್’ನಲ್ಲಿ ಸೇರಿಸಬೇಕೆಂದು ಸಿ.ಎಂ. ಸಲಹೆ ನೀಡಿದ್ದಾರಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.