ನನಗೆ ನಗುತರಿಸುವ ವಿಷಯವೊಂದಿದೆ.
ನನ್ನನ್ನು ಭಾಷಣಕ್ಕೆ ಕರೆದವರು ಒಳಗೊಳಗೇ ಕೊಂಚ ಭಯಗೊಂಡಿರುತ್ತಾರೆ. ಎಲ್ಲಿ ಇವನು ‘ಅದನ್ನೆಲ್ಲ’ ಮಾತಾಡಿಬಿಡುತ್ತಾನೋ ಎಂದು ಗಾಬರಿಯಾಗಿರುತ್ತಾರೆ. ಆ ವಿಚಾರ ಇಲ್ಲಿ ಬೇಡ ಅಂತ ಸೂಕ್ಷ್ಮವಾಗಿ ಹೇಳಲು ಯತ್ನಿಸುತ್ತಿರುತ್ತಾರೆ. ನಾನೇನು ಮಾತಾಡಬೇಕು ಎಂದು ಹೇಳಿ ಅಂದರೆ ನಾನೇನು ಮಾತಾಡಕೂಡದು ಅನ್ನುವುದನ್ನೇ ಎಲ್ಲರೂ ಹೇಳುವುದು ನನಗೆ ಒಳಗೊಳಗೇ ತಮಾಷೆಯಾಗಿ ಕಾಣಿಸುತ್ತಿರುತ್ತದೆ.
ಜನ ನನ್ನನ್ನು ಎಷ್ಟೊಂದು ತಪ್ಪು ತಿಳಿದುಕೊಂಡಿದ್ದಾರಲ್ಲ!
ಇತ್ತೀಚೆಗೆ ನಾನು ದುಬೈಯನಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳ ‘EXTRAORDINARY LEADERSHIP SUMMIT’ಗೆ ಮುಖ್ಯ ಅತಿಥಿಯಾಗಿ ಹೋಗಿದ್ದೆ. ಸುಮಾರು ಎಂಟುನೂರಕ್ಕೂ ಹೆಚ್ಚು ಚಾರ್ಟಡ್ ಅಕೌಂಟೆಂಟ್‌ಗಳನ್ನು ಉದ್ದೇಶಿಸಿ ಮಾತಾಡಬೇಕಾಗಿತ್ತು. ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕಾಮರ್ಸ್ ಓದಲು ಸೇರಿದ ದಿನಗಳು ನನಗೆ ನೆನಪಾದವು. ಅಲ್ಲಿ ನನಗೆ ಸಿಕ್ಕ ಜಿ.ಕೆ. ಗೋವಿಂದರಾವ್ ಹೇಳಿದ್ದರು; ‘ನೀನಿಲ್ಲಿ ಇದ್ದು ನನ್ನ ಸಮಯವನ್ನೂ ನಿನ್ನ ಸಮಯವನ್ನೂ ವ್ಯರ್ಥ ಮಾಡುತ್ತಿರುವೆ. ಹೋಗಿ ಬೇರೇನಾದರೂ ಮಾಡು’ ಎಂದು.
‘ನನಗೆ ಏನು ಬೇಕು ಅನ್ನುವುದು ಆಗ ಗೊತ್ತಿರಲಿಲ್ಲ. ಏನು ಬೇಡ ಅನ್ನುವುದು ಮಾತ್ರ ಸ್ಪಷ್ಟವಾಗಿ ಗೊತ್ತಿತ್ತು. ಒಂದು ವೇಳೆ
ನಾನು ಬಿ.ಕಾಂ ಓದಿದ್ದರೆ ನಿಮ್ಮ ಹಾಗೆಯೇ ಚಾರ್ಟಡ್ ಅಕೌಂಟೆಂಟ್ ಆಗಿರುತ್ತಿದ್ದೆನೇನೊ.. ನಿಮ್ಮ ನಡುವೆ ಕುಳಿತು ಇನ್ನೊಬ್ಬ ಅತಿಥಿಯ ಭಾಷಣ ಕೇಳುತ್ತಿದ್ದೆನೇನೊ...’ ಎಂದು ನಾನವರಿಗೆ ಹೇಳಿದೆ. ಅವರು ಚಪ್ಪಾಳೆ ತಟ್ಟಿ ಸಂತೋಷ ಸೂಚಿಸಿದರು. ಆದರೆ ಆ ವೃತ್ತಿಗೆ ಹೋಗಿದ್ದರೆ ನನಗೆ ಸಂತೋಷ ಸಿಗುತ್ತಿತ್ತೋ, ನಾನು ಅದಕ್ಕೆ ಹೊಂದಿಕೆ ಆಗುತ್ತಿದ್ದೆನೋ ನನಗೆ ಗೊತ್ತಿಲ್ಲ. ಯಾಕೆಂದರೆ ನಾನು ಲೆಕ್ಕಾಚಾರದ ಮನುಷ್ಯ ಅಲ್ಲ. ಯಾವುದನ್ನೂ ಯಾವತ್ತೂ ತೀರ ಲೆಕ್ಕ ಹಾಕಿ ಮಾಡಿದವನಲ್ಲ. ನಾನು ನಡೆದ ದಾರಿ ನನ್ನನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗಿದೆ.
ಈ ನಡಿಗೆಯೂ ಆಕಸ್ಮಿಕವೇ. ಕಾಲೇಜು ಬಿಟ್ಟ ನಂತರ ರಂಗಭೂಮಿಯತ್ತ ಹೊರಳಿಕೊಂಡೆ. ಅಲ್ಲಿ ನಾಟಕಗಳಲ್ಲಿ ನಟಿಸಿದೆ. ನಟಿ
ಸುತ್ತಲೇ ಹೋದೆ. ಅದು ನನ್ನನ್ನು ಮತ್ತೆಲ್ಲಿಗೋ ಕರೆದೊಯ್ದಿತು.
ಜೀವನದಲ್ಲಿ ನಾನು ಯಾವತ್ತೂ ನಟಿಸಲಿಲ್ಲ. ನಟನೆಯನ್ನು ಮೀರಿದ್ದು ಜೀವನ. ನನ್ನ ಜೀವನದಲ್ಲಂತೂ ನಟನೆಯ ಪಾಲು ಶೇಕಡಾ ಐದು ಮಾತ್ರ. ಸಿನಿಮಾದಲ್ಲಿ ನಟಿಸುವುದು ನನ್ನ ವೃತ್ತಿ ಅಷ್ಟೇ. ನಾನೊಬ್ಬ ರಿಲಕ್ಟೆಂಟ್ ಆ್ಯಕ್ಟರ್ ಅಂತ ನನಗೇ ಅನ್ನಿಸಿದೆ. ಅದರ ಅರ್ಥ ಉಡಾಫೆಯ ನಟ ಅಂತ ಅಲ್ಲ. ನಟನೆಯ ಮೇಲೆ ಅಂಥಾ ಒಲವೇನೂ ಇಲ್ಲದ ನಟ ಎಂದು ಹೇಳಬಹುದೇನೋ.
ನನ್ನ ಸಮಸ್ಯೆಯೆಂದರೆ ನನ್ನ ಕಣ್ಣಿಗೊಂದು ದಿಗಂತ ಕಾಣಿಸಿತು. ಅದನ್ನು ತಲುಪಬೇಕು ಅಂದುಕೊಂಡೆ. ಅಲ್ಲಿಗೆ ಹೋಗಿ ಮುಟ್ಟಿದ್ದೇ ತಡ, ಮತ್ತೊಂದು ದಿಗಂತ ಕಾಣತೊಡಗಿತು. ಅಲ್ಲಿಗೆ ಹೋದಾಗ ಇನ್ನೊಂದು ದಿಗಂತ. ಹೀಗೆ ಹತ್ತು ಹಲವು ದಿಗಂತಗಳನ್ನು ದಾಟುತ್ತಾ ದಾಟುತ್ತಾ ನಾನು ದಿಗಂತಗಳನ್ನು ಮುಟ್ಟುವ ಹಂಬಲವನ್ನು ಬಿಟ್ಟೆ. ಪ್ರಯಾಣವೇ ನಿಜಕ್ಕೂ ಸುಖಕರ, ಅದರಲ್ಲಿಯೇ ಎಲ್ಲ ಸೌಂದರ್ಯವೂ ಇದೆ. ಹೋಗಿ ಮುಟ್ಟುವುದರಲ್ಲಿ ಅರ್ಥವಿಲ್ಲ ಎಂದು ತಿಳಿದುಕೊಂಡೆ.
ನಾನಿದನ್ನು ಅನೇಕ ಸಲ ಹೇಳಿಕೊಂಡಿದ್ದೇನೆ. ನಾನೊಬ್ಬ ಸಾಮಾನ್ಯ ಮಧ್ಯಮ ವರ್ಗದ ಹುಡುಗ. ನಮ್ಮಮ್ಮ ನರ್ಸ್ ಆಗಿದ್ದವರು. ನಮ್ಮಪ್ಪ ಬುಕ್ ಬೈಂಡರ್ ಕೆಲಸ ಮಾಡುತ್ತಿದ್ದರು. ಬಡತನವಿತ್ತು. ಅಪ್ಪ ಅಷ್ಟಾಗಿ ಸಹಾಯಕ್ಕೆ ಬರುತ್ತಿರಲಿಲ್ಲ. ಹೊಟ್ಟೆ ಹೊರೆಯುವುದೇ ದೊಡ್ಡದಾಗಿದ್ದ ದಿನಗಳವು. ನನ್ನ ಹೆತ್ತವರಿಗೆ ಶಿಕ್ಷಣದ ಮಹತ್ವದ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ. ನನ್ನನ್ನು ಕಾಪಾಡಿದ್ದೂ ಅದೇ ಅಂತ ಈಗ ಅನ್ನಿಸುತ್ತಿದೆ. ಆಗ ನನ್ನಲ್ಲಿ ಅಸಾಧ್ಯ ಹಸಿವು. ಕಲಿಯುವ ದಾಹ. ಅಂಥ ದಿನಗಳಲ್ಲಿ ನಾನು ನನ್ನ ಹೃದಯದ ಮಾತು ಕೇಳಿದೆ. ನನ್ನ ಮನಸ್ಸು ನಡಿ ಅಂದಾಗೆಲ್ಲ ಹೆಜ್ಜೆ ಹಾಕಿದೆ. ನನ್ನ ಅಂತಃಸ್ಫೂರ್ತಿಗೆ ಕಿವಿಗೊಟ್ಟೆ. ಪ್ರಯಾಣಗಳು ನಾನು ನಡೆಯುವ ದಾರಿಯನ್ನು ನಿರ್ಧರಿಸತೊಡಗಿದವು.
ಆ ಪಯಣದ ಉದ್ದಕ್ಕೂ ನಾನು ಸಾಕಷ್ಟನ್ನು ಕಂಡಿದ್ದೇನೆ. ಕಟುವಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಅಪಾಯದ ಅಂಚಿನಲ್ಲಿ ಸಾಗಿದ್ದೇನೆ. ಗಡಿಗಳನ್ನು ದಾಟಿದ್ದೇನೆ. ಅಸಹನೀಯ ಕ್ಷಣಗಳಿಗೆ ಮುಖಾಮುಖಿಯಾಗಿದ್ದೇನೆ. ಗೋಡೆಗಳತ್ತ ತಳ್ಳಲ್ಪಟ್ಟಿದ್ದೇನೆ. ಇವೆಲ್ಲವೂ ನನ್ನನ್ನು ಕಟೆಯತ್ತಾ ಬಂದವು. ನನ್ನನ್ನು ರೂಪಿಸಿದವು. ಇವತ್ತು ನಾನೇನು ಆಗಿದ್ದೇನೋ ಅದಕ್ಕೆ ಕಾರಣ ನಾನು ಎದುರಿಸಿದ ದುರ್ಭರವಾದ ಕ್ಷಣಗಳೇ ಹೊರತು, ಸುಖದ ಗಳಿಗೆಗಳು ಅಲ್ಲ.
ನನ್ನ ವೃತ್ತಿ ಸಿನಿಮಾ ಅಂತ ಹೇಳಿದೆ. ಒಬ್ಬೊಬ್ಬರದು ಒಂದೊಂದು ವೃತ್ತಿ. ವೈದ್ಯರೋ ಮೇಷ್ಟರೋ ಮತ್ತೇನೋ ಆಗುವುದರಲ್ಲಿ ತಪ್ಪೇನಿಲ್ಲ. ಅವರವರ ಆಯ್ಕೆ ಅದು. ಆದರೆ ದಿನದ ಕೊನೆಗೆ ಈ ಜನಮಾನಸ, ಈ ಜಗತ್ತು ಒಂದು ಪ್ರಶ್ನೆ ಕೇಳುತ್ತದೆ. ‘ನೀನು ಪ್ರಾಮಾಣಿಕನೋ? ನಿನ್ನ ಪಾತ್ರವನ್ನು ನೀನು ನಿರ್ವಂಚನೆಯಿಂದ ನಿರ್ವಹಿಸಿದ್ದೀಯೋ?’ ಆ ಪ್ರಶ್ನೆಗೆ ಯಾರಲ್ಲಿ ಉತ್ತರ ಇರುತ್ತದೋ ಅವರು ನಿಜಕ್ಕೂ ಅರ್ಹವಾಗಿ ಬದುಕಿದ್ದಾರೆ, ಸಾರ್ಥಕವಾದ ಕ್ಷಣಗಳನ್ನು ಕಳೆದಿದ್ದಾರೆ ಎಂದೇ ನಾನು ಭಾವಿಸುತ್ತೇನೆ. ಎಲ್ಲಕ್ಕಿಂತ ದೊಡ್ಡ ಸಾಧನೆ ಅದು. ಮನಸ್ಸು ಕೇಳುವ ಪ್ರಶ್ನೆಗೆ ಉತ್ತರ ಕೊಟ್ಟುಕೊಳ್ಳಬಲ್ಲವನಿಗಿಂತ ನೆಮ್ಮದಿವಂತ ಮತ್ಯಾರೂ ಇಲ್ಲ.
ನನಗೆ ಬದುಕೆಂಬುದು ಭಾಷೆಯಂತೆ. ಭಾಷೆ ಎಲ್ಲರಿಗೂ ಒಂದೇ. ಒಂದು ಭಾಷೆಯಲ್ಲಿರುವ ಎಲ್ಲ ಅಕ್ಷರಗಳಿಗೂ ಎಲ್ಲರೂ ಒಡೆಯರೇ. ನಾನು ಬಳಸುವ ಪದಗಳನ್ನು ನೀವೂ ಬಳಸುತ್ತೀರಿ. ಒಬ್ಬ ಮಹಾ ಲೇಖಕನೂ ಬಳಸುತ್ತಾನೆ. ಬಣ್ಣಗಳೂ ಕುಂಚವೂ ಕ್ಯಾನ್ವಾಸೂ ಎಲ್ಲರಿಗೂ ಸಿಗುತ್ತದೆ. ಆದರೆ ಎಲ್ಲರೂ ಪೇಂಟರ್ ಆಗುವುದಕ್ಕೆ ಸಾಧ್ಯವಿಲ್ಲ. ನಮಗೆ ಸಿಕ್ಕಿದ್ದರಿಂದ ಮತ್ತೇನೋ ಹುಟ್ಟಿಸುವುದು ಆಯಾ ವ್ಯಕ್ತಿಯ ಪ್ರತಿಭೆಗೆ ಬಿಟ್ಟದ್ದು. ಅದೇ ಮುಖ್ಯಕೂಡ. ಒಬ್ಬರಿಗಿಂತ ಇನ್ನೊಬ್ಬರು ಭಿನ್ನರಾಗುವುದು ಹೇಗೆ ತಮ್ಮಲ್ಲಿರುವ ಪರಿಕರವನ್ನು ಬಳಸಿಕೊಳ್ಳುತ್ತಾರೆ ಅನ್ನುವುದರ ಮೇಲೆ.
ನನ್ನ ನಟನೆಯ ಚಿತ್ರಗಳು, ನಂತರ ನಾನು ನಿರ್ದೇಶಕನಾದದ್ದು, ನಂತರ ನಿರ್ಮಾಣಕ್ಕೆ ಇಳಿದದ್ದು ನನ್ನೊಳಗೇ ಆದ ಪರಿವರ್ತನೆ. ನನಗೆ ನಟನೆಯನ್ನೂ ಯಾರೂ ಕಲಿಸಲಿಲ್ಲ. ನಿರ್ದೇಶನವನ್ನೂ ಹೇಳಿಕೊಡಲಿಲ್ಲ. ನಿರ್ಮಾಣ ಮಾಡುವುದು ಹೇಗೆಂದು ತಿಳಿಹೇಳಲಿಲ್ಲ. ನಾನೇ ಅದನ್ನು ಕಲಿತುಕೊಂಡೆ. ಈ ಕಲಿಯುವ ದಾಹವೇ ನನ್ನನ್ನು ಇವತ್ತು ಇಲ್ಲಿಗೆ ತಂದುನಿಲ್ಲಿಸಿದೆ. ನನ್ನ ಮುಂದೆ ನಾನು ಕಾಣಲಾರದಷ್ಟು ದೂರದ ಹಾದಿಯನ್ನು ತೆರೆದಿಟ್ಟಿದೆ.
ಈ ನಟನೆಗೆ ಹೊರತಾಗಿ ನಾನೇನು ಮಾಡಿದೆ ಅಂತ ನನ್ನನ್ನು ನಾನು ಕೇಳಿಕೊಂಡಾಗ... ನಾನು ಓದಿದ ಸಾಹಿತ್ಯ, ನನ್ನ ಪ್ರೀತಿಯ ಪುಸ್ತಕ, ನಾನು ಕಂಡುಂಡ ಅನುಭವ, ನನಗೆ ಸಿಕ್ಕ ಅವಕಾಶ, ನಾನು ತೆಗೆದುಕೊಂಡ ಜವಾಬ್ದಾರಿ. ಚಪ್ಪಾಳೆ. ಹೊಗಳಿಕೆ, ಸಂಭಾವನೆಗಳ ಆಚೆನಾನು ನಿಲ್ಲಬಲ್ಲೆ ಅಂತ ಗೊತ್ತಾಗಿ ನನಗೆ ಸಂತೋಷವಾಯಿತು. ನಾನು ಬಿಡುಗಡೆಯ ಖುಷಿ ಅನುಭವಿಸಿದೆ. ಒಂದು ಅರ್ಥದಲ್ಲಿ ಸ್ವತಂತ್ರನಾದೆ. ಅದನ್ನೇ ನಟನೆಯಾಚೆಗೆ ಜೀವಿಸುವುದು ಅನ್ನುತ್ತೇನೆ ನಾನು. ಒಂದು ಸಲ ನನಗೆ ನಿಜಕ್ಕೂ ಅನ್ನಿಸಿದ್ದು ಇದು. ನಾನು
ನನ್ನ ಅಸ್ತಿತ್ವವನ್ನೇ ಮೀರಬೇಕು, ನನ್ನದೇ ದನಿಯಾಗಬೇಕು, ಪಡೆಕೊಂಡಿದ್ದನ್ನು ವಾಪಸ್ಸು ಕೊಡಬೇಕು. ಆದರೆ ಹೇಗೆ?
‘ಜಸ್ಟ್ ಆಸ್ಕಿಂಗ್’ ಅಭಿಯಾನ ಆರಂಭಿಸಿದೆ. ಅದು ರಾಜಕೀಯ ಪಕ್ಷವೂ ಅಲ್ಲ. ರಾಜಕಾರಣವೂ ಅಲ್ಲ. ಸುಮ್ಮ ಸುಮ್ಮನೆ ಕೇಳುವುದಲ್ಲ, ದ್ವೇಷಿಸುವುದೂ ಅಲ್ಲ. ಜಸ್ಟ್ ಆಸ್ಕಿಂಗ್ ಅಂದರೆ ಅತ್ಯಂತ ಮಾನವೀಯವಾಗಿ ತನ್ನನ್ನು ತಾನು ಪ್ರಕಟಪಡಿಸಿಕೊಳ್ಳುವುದು ಮಾತ್ರ. ಹುಡುಕಾಟ, ಪ್ರಶ್ನೆ ಇವೆಲ್ಲ ಮಾನವೀಯ ಗುಣಗಳು ಅಲ್ಲವೇ? ಅದಕ್ಕೆ ಜ್ಞಾನಿಗಳನ್ನು ನಾವು seeker ಅನ್ನುತ್ತೇವೆ.
ಕಳೆದ ಒಂದು ವರ್ಷದಿಂದ ನಾನು ಅನೇಕರಿಗೆ ಸ್ಫೂರ್ತಿಯಾಗಿದ್ದೇನೆ. ಅನೇಕರು ನನ್ನ ಧೈರ್ಯದಿಂದ ಪ್ರೇರಿತರಾಗಿದ್ದಾರೆ.
ಈಗ ನನಗೆ ಮತ್ತೊಂದು ದಿಗಂತ ಕಾಣಿಸುತ್ತಿದೆ. ನಾನೇಕೆ ಹೀಗೆ ಮಾಡಿದೆ ಅಂತ ಯಾರಾದರೂ ಕೇಳಿದರೆ ನನ್ನಲ್ಲಿ ಉತ್ತರ ಇದೆ. ನಮ್ಮ ನಮ್ಮ ವೃತ್ತಿಯಲ್ಲಿ ನಾವು ಒಂಚೂರು ಎತ್ತರದಲ್ಲಿದ್ದೇವೆ. ಹೀಗಾಗಿ ನಾವು ನಮ್ಮನ್ನು ಮಾರಿಕೊಳ್ಳಬಾರದು. ಅಷ್ಟೇ ಅಲ್ಲ, ನಮಗೆ ಗೊತ್ತಿಲ್ಲದೇ ಯಾರೋ ನಮ್ಮನ್ನು ಹರಾಜು ಹಾಕಲಿಕ್ಕೂ ಅವಕಾಶ ಕೊಡಕೂಡದು. ನಾನು ಮಾಡಿದ್ದು ಅಷ್ಟೇ. ಇನ್ನೊಬ್ಬರಿಗೆ ಭರವಸೆಯ ಬೆಳಕಾಗುವುದು, ಇಡಿಯಾಗಿ ಉಳಿಯುವುದು, ಸ್ಫೂರ್ತಿಯ ಸೆಲೆಯಾಗುವುದು ನಮ್ಮಿಂದ ಸಾಧ್ಯ ಅನ್ನಿಸಿದರೆ ಅದನ್ನು ಮಾಡಬೇಕು. ಅಲ್ಲಿಂದಲೇ ವಿಕಾಸದ ಹೊಸ ಹಾದಿ ಶುರುವಾಗುತ್ತದೆ. ನನ್ನ ಧೈರ್ಯದ ಬಗ್ಗೆ ನನಗೆ ಹೆಮ್ಮೆಯಿದೆ, ಗೌರವವಿದೆ.
ನಮಗೆಲ್ಲ ಒಂದು ಕಂಫರ್ಟ್ ಝೋನ್ ಇದೆ. ಅದನ್ನು ಮೀರುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಹಿಂಜರಿಕೆ ಕಾಡುತ್ತದೆ. ಆದರೆ ಅದರಿಂದ ಆಚೆ ಬಂದಾಗಲೇ ನಮ್ಮ ಸತ್ವ ಏನೆಂಬುದು ಗೊತ್ತಾಗುತ್ತದೆ. ಇದಲ್ಲ ಅಂತ ಹೇಳುವುದಕ್ಕೊಂದು ಧೈರ್ಯ ಬೇಕಾಗುತ್ತದೆ. ಚರಿತ್ರೆ ಕೆಟ್ಟದ್ದನ್ನು ಮಾಡಿದವರನ್ನು ಕ್ಷಮಿಸಿದರೂ ಕ್ಷಮಿಸೀತು, ಮರೆತೂ ಬಿಟ್ಟೀತು. ಆದರೆ ಕೆಟ್ಟದ್ದನ್ನು ನೋಡುತ್ತಾ ಮೌನವಾಗಿದ್ದವರನ್ನು ಅದು ಎಂದೂ ಕ್ಷಮಿಸಲಾರದು.
‘ನಾನು ಸಿಟ್ಟಿನ ಮನುಷ್ಯ. ಹೀಗೇ ಇರಲು ಬಯಸುತ್ತೇನೆ. ನಾನು ನಿನ್ನ ಜೊತೆ ಹೋರಾಡುತ್ತಿಲ್ಲ, ನಿನ್ನ ಹುನ್ನಾರಗಳ ಜೊತೆ ಹೋರಾಡುತ್ತಿದ್ದೇನೆ ಅಷ್ಟೇ. ನೀನು ಮನುಷ್ಯನಾಗಿ ನನಗಿಷ್ಟ. ಆದರೆ ನಿನ್ನ ಅಮಾನವೀಯತೆಯನ್ನು ನಾನು ಸಹಿಸಲಾರೆ’.
ಹಾಗಂತ ಹೇಳುವ ಧೈರ್ಯ ನನ್ನಲ್ಲಿ ಸದಾ ಇರಲಿ ಅನ್ನುವುದಷ್ಟೇ ನನ್ನ ಆಶೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.