ADVERTISEMENT

ನೋಡುವ ಮರವೊಂದೇ, ಕಾಣುತ್ತಿರುವುದು ಬೇರೆ ಬೇರೆ

ಪ್ರಕಾಶ್ ರೈ
Published 8 ಡಿಸೆಂಬರ್ 2018, 20:00 IST
Last Updated 8 ಡಿಸೆಂಬರ್ 2018, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಕ್ಕಳ ಕನಸುಗಳನ್ನು ನಾವು ಕಸಿದುಕೊಳ್ಳುವ ಬಗ್ಗೆ ಕಳೆದ ವಾರ ಮಾತಾಡುತ್ತಿದ್ದೆ. ಅದೇ ಹೊತ್ತಿಗೆ ನಾವು ಬಲಪಡಿಸುತ್ತಿ
ರುವ ಐದು ಸರ್ಕಾರಿ ಶಾಲೆಗಳ ಮಕ್ಕಳು ಐದು ನಾಟಕಗಳನ್ನು ಪ್ರದರ್ಶಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಅಂತ ಗೊತ್ತಾ
ಯಿತು. ಮಕ್ಕಳ ಗ್ರಹಿಕೆಯನ್ನು, ಕಲಿಯುವ ಹುಮ್ಮಸ್ಸನ್ನು ಸಮೃದ್ಧಿಗೊಳಿಸಲು ಐದೂ ಶಾಲೆಗಳಲ್ಲಿ ರಂಗ ತರಬೇತಿ ಶಿಕ್ಷಕರನ್ನು ನೇಮಿಸಿದ್ದೆ. ಮನಸ್ಸು ನಾಟಕಗಳ ಜಗತ್ತಿನತ್ತ ಹರಿಯಿತು.

ರಂಗಭೂಮಿ ಮೂಲತಃ ಗ್ರಹಿಕೆಯನ್ನು ವಿಸ್ತಾರ ಮಾಡುವಂಥದ್ದು. ಹತ್ತು ಮಂದಿ ನಟರನ್ನು ಕರೆದುಕೊಂಡು ಬಂದು ಕಮ್ಮಾರನ ಪಾತ್ರ ಮಾಡು ಅಂದರೆ, ಹತ್ತು ಮಂದಿಯೂ ಬೇರೆ ಬೇರೆ ಥರ ಕುಲುಮೆ ಕಾಯಿಸುತ್ತಾರೆ, ತಿದಿ ಒತ್ತುತ್ತಾರೆ, ಕುಟ್ಟುತ್ತಾರೆ, ಬಡಿಯುತ್ತಾರೆ. ಯಾಕೆಂದರೆ ಆ ಹತ್ತು ಮಂದಿ ನೋಡಿರುವ ಕಮ್ಮಾರರು ಬೇರೆ ಬೇರೆಯವರು. ತಾವು ನೋಡಿದ ತಮ್ಮೂರಿನ ಕಮ್ಮಾರ ಅವರ ಗ್ರಹಿಕೆಯೊಳಗೆ ಹಾದು, ನಟನೆಯಲ್ಲಿ ಮೂಡಿದಾಗ ಅದು ಅವರ ಅನನ್ಯ ಅಸ್ಮಿತೆಯ ಪ್ರತಿಬಿಂಬ ಆಗುತ್ತದೆ. ಅದೇ ಕಮ್ಮಾರನ ಪಾತ್ರ ಮಾಡಲು ಯಾವುದಾದರೂ ಹತ್ತು ರೋಬೋಟುಗಳಿಗೆ ಹೇಳಿದರೆ, ಎಲ್ಲವೂ ಒಂದೇ ಥರ ಮಾಡಿಯಾವು. ಯಾಕೆಂದರೆ ಅವುಗಳಿಗೆ ವಿಭಿನ್ನ ಅನುಭವವೇ ಇಲ್ಲ. ಅವುಗಳದೇ ಆದ ಜಗತ್ತು ಇಲ್ಲ. ಅವುಗಳಿಗೆ ಕಮ್ಮಾರ ಏನು ಮಾಡುತ್ತಾನೆ ಅನ್ನೋದು ಗೊತ್ತು. ಆದರೆ ಒಬ್ಬೊಬ್ಬ ಕಮ್ಮಾರನಿಗೂ ತನ್ನದೇ ಆದ ಜಗತ್ತು ಇದೆ ಅನ್ನುವುದು ಮಾತ್ರ ಗೊತ್ತಿಲ್ಲ.

ಹೀಗಾದಾಗ ವೈವಿಧ್ಯ ಸಾಧ್ಯವೇ ಇಲ್ಲ. ಶಿಕ್ಷಣ ಅಂದರೆ ಹೇಳಿದ್ದನ್ನು ಒಪ್ಪಿಸುವುದು ಅಲ್ಲವಲ್ಲ. ಹೇಳಿದ್ದನ್ನು ಒಪ್ಪಿಸುವುದಷ್ಟೇ ಆಗಿದ್ದರೆ, ನಮ್ಮಲ್ಲಿ ಉದ್ಯೋಗಸ್ತರು ಮಾತ್ರ ಸೃಷ್ಟಿಯಾಗುತ್ತಿದ್ದರು. ಕಲಾವಿದರು, ರಂಗನಟರು, ನಿರ್ದೇಶಕರು, ವಿಜ್ಞಾನಿಗಳು, ಕ್ರಿಕೆಟ್ ಆಟಗಾರರು ಹುಟ್ಟುತ್ತಿರಲಿಲ್ಲ. ಕ್ರಿಕೆಟ್ಟಿನಂಥ ಕ್ರಿಕೆಟ್ ಕೂಡ ಕಲಿತು ಆಡುವ ಆಟ ಆಲ್ಲ. ಆಡಿ ಕಲಿಯುವ ಆಟ. ಪ್ರತಿಯೊಂದು ಚೆಂಡು ಕೂಡ ಬೇರೆ ಬೇರೆ ನೆಲದಲ್ಲಿ, ಬೇರೆಬೇರೆ ಬೆರಳುಗಳ ನಡುವಿನಿಂದ, ಬೇರೆ ಬೇರೆ ವೇಗದಲ್ಲಿ ಚಿಮ್ಮುತ್ತದೆ ಅನ್ನುವುದು ಹೊಳೆದಾಗಲೇ ಕ್ರಿಕೆಟ್ ರೋಮಾಂಚಕ. ಬಾಲ್ ಡಿಸ್ಪನ್ಸಿಂಗ್ ಮಶಿನ್ ಜೊತೆ ಆಡಲು ಯಾರಿಗೆ ತಾನೇ ಇಷ್ಟವಾಗುತ್ತದೆ ಹೇಳಿ.

ADVERTISEMENT

‘ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ಹಲವರಿಗೆ ಓದಲು ಕೊಡಿ. ಅದರ ಮೊದಲ ಸಾಲು ಹೀಗಿದೆ; ‘ಕತ್ತಲೋ ಕತ್ತಲು’. ಈ ಕತ್ತಲನ್ನು ಪಟ್ಟಣದಲ್ಲಿ ಬೆಳೆದ ಹುಡುಗನಿಗೆ ಮನದಟ್ಟು ಮಾಡಿಸುವುದು ಸಾಧ್ಯವೇ ಇಲ್ಲ. ಅವನು ಕತ್ತಲನ್ನೇ ಕಂಡಿಲ್ಲ. ಅದೇ ಕತ್ತಲು ಚಿಕ್ಕನಾಯಕನ ಹಳ್ಳಿಯಲ್ಲಿ ಬೇರೆ, ಕತ್ತಾಳೆಯ ಪೊದೆಗಳು ತುಂಬಿರುವ ದ್ಯಾವನೂರಲ್ಲಿ ಬೇರೆ, ಕಡಲ ತಡಿಯಿರುವ ಮಂಗಳೂರಲ್ಲಿ ಬೇರೆ. ಕತ್ತಲೆಯ ಜತೆಗೆ ಮಡಿಕೇರಿಯಲ್ಲಿ ಚಳಿಯೂ ಚಿತ್ರದುರ್ಗದಲ್ಲಿ ಬಿಸಿಲೂ ಮೆತ್ತಿಕೊಂಡಿರುತ್ತದೆ. ಹೀಗೆ ಪ್ರತಿಯೊಂದು ಕೂಡ ವ್ಯಕ್ತಿಯ ಅಂತರಂಗದ ಕುಲುಮೆಯಲ್ಲಿ ಮತ್ತೇನೋ ಆಗಿ ಬದಲಾಗುತ್ತದೆ.

ನಾನು ಹೇಳುತ್ತಿರುತ್ತೇನೆ, ನೋಡಿ ಬಂದವನ ಊರೇ ಬೇರೆ, ಇದ್ದು ಬಾಳಿದವನ ಊರೇ ಬೇರೆ, ಕೇಳಿ ಬೆಳೆದವನ ಊರೇ ಬೇರೆ. ಒಂದೂರು ಸಾವಿರ ಮಂದಿಯ ಮನಸ್ಸಿನಲ್ಲಿ ಸಾವಿರ ಊರಾಗುವುದೇ ಪವಾಡವಲ್ಲವೇ?

ನಾವೆಲ್ಲ ಇವತ್ತು ಕರಿಯರ್‌ ಬಿಲ್ಡಿಂಗ್ ಬಗ್ಗೆ ಮಾತಾಡುತ್ತೇವೆ. ನಾವೀಗ ಮಾಡಬೇಕಾದ್ದು ನೇಷನ್ ಬಿಲ್ಡಿಂಗ್ ಅನ್ನೋದನ್ನು ಮರೆಯುತ್ತೇವೆ. ಇಂದಿನ ಶಿಕ್ಷಣ ಪದ್ಧತಿ ಹೇಗಿದೆಯೆಂದರೆ ಒಬ್ಬ ತುಂಬಾ ಚೆನ್ನಾಗಿ ಎಡಗಾಲಿನ ಚಪ್ಪಲಿ ಮಾಡುವುದು ಕಲಿಯುತ್ತಾನೆ. ಮತ್ತೊಬ್ಬ ಬಲಗಾಲಿನ ಚಪ್ಪಲಿ ಮಾಡುವುದನ್ನು ಕಲಿಯುತ್ತಾನೆ. ಅವರಿಬ್ಬರೂ ಜೀವನಪೂರ್ತಿ ಎಡಗಾಲು ಮತ್ತು ಬಲಗಾಲಿನ ಚಪ್ಪಲಿ ಮಾಡುತ್ತಾ ಹೋಗುತ್ತಾರೆ. ಎಡಗಾಲಿನ ಚಪ್ಪಲಿ ಮಾಡುವವನಿಗೆ ಬಲಗಾಲು ಇರುತ್ತದೆ ಅನ್ನುವುದು ಗೊತ್ತಿರುವುದಿಲ್ಲ. ಬಲಗಾಲಿನ ಚಪ್ಪಲಿ ಮಾಡುವನನಿಗೂ ಅಷ್ಟೇ. ಈ ಎರಡೂ ಚಪ್ಪಲಿಗಳನ್ನು ಹಾಕಿಕೊಂಡು ಮತ್ಯಾರೋ ನಡೆಯುತ್ತಿರುತ್ತಾರೆ.

ಈ ಶಿಕ್ಷಣ ಯಾವತ್ತೂ ಗುಲಾಮರನ್ನು ತಯಾರು ಮಾಡುತ್ತದೆ. ತನ್ನ ಮನಸ್ಸಿನ ಮಾತನ್ನೇ ಈ ದೇಹ ಕೇಳುವುದಿಲ್ಲ. ಅಷ್ಟರ ಮಟ್ಟಿಗೆ ಬಂಡುಕೋರನಾದ ದೇಹವುಳ್ಳ ಮನುಷ್ಯನ ಮನಸ್ಸು ಮಾತ್ರ ಜೀತದತ್ತ ತುಡಿಯುತ್ತಿರುತ್ತದೆ. ಯಾರು ಏನೇ ಹೇಳಿದರೂ ನಾವು ಮಾಡುವುದಕ್ಕೆ ಸಿದ್ಧವಿರುವ ಹಾಗೆ ವರ್ತಿಸುತ್ತೇವೆ. ನಮ್ಮ ಮನಸ್ಸಿನಲ್ಲಿ ನಡೆಯುವ ವ್ಯಾಪಾರವೇ ನಮ್ಮನ್ನು ನಿಯಂತ್ರಿಸಬೇಕೇ ಹೊರತು, ಜಗತ್ತಿನಲ್ಲಿ ನಡೆಯುವ ವ್ಯಾಪಾರ ಅಲ್ಲವಲ್ಲ. ಈಗ ಆಗಿರುವುದು ಏನು? ಹೊರಗಿನ ಬಿಸಿನೆಸ್ಸಿಗೆ ತಕ್ಕಂತೆ ನಾವು ನಮ್ಮ ಕಲಿಕೆ, ಗ್ರಹಿಕೆ ಎರಡನ್ನೂ ಬದಲಾಯಿಸಿಕೊಳ್ಳುತ್ತಾ ಹೋಗುತ್ತೇವೆ.

ಕಲಿಕೆಯಲ್ಲಿ ಗುರುವಿಗಿಂತ ಶಿಷ್ಯನೇ ಮುಖ್ಯ. ದ್ರೋಣರಂಥ ಗುರುಗಳು ರಾಜವಂಶಕ್ಕೆ ಮಾತ್ರ ಬಿಲ್ವಿದ್ಯೆ ಹೇಳಿಕೊಡುತ್ತಿದ್ದರು. ರಾಜವಂಶಕ್ಕೆ ಬಿಲ್ವಿದ್ಯೆ ಯಾಕೆ ಬೇಕು ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರ ಇರಲಿಲ್ಲ. ರಾಜವಂಶ ಗೆಲ್ಲಬೇಕಿತ್ತು, ಸಾಮ್ರಾಜ್ಯ ಕಟ್ಟಬೇಕಾಗಿತ್ತು. ಅವರಿಂದ ವಿದ್ಯೆ ಕಲಿತ ಅರ್ಜುನನಿಗಿಂತ ಏಕಲವ್ಯ ಒಳ್ಳೆಯ ಶಿಷ್ಯನಾದ. ಗುರುವನ್ನೇ ಮೀರಿಸಲು ಹೊರಟ. ಯಾಕೆಂದರೆ ಅವನು ಗುರುವನ್ನು ನೋಡಿರಲೇ ಇಲ್ಲ. ನೋಡದ ಗುರುವಿಗಿಂತ ಶ್ರೇಷ್ಠ ಗುರು ಮತ್ತೊಬ್ಬ ಇರಲಿಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ ನೋಡದ ಗುರುವಿನ ದೌರ್ಬಲ್ಯಗಳು ನಮಗೆ ತಿಳಿಯುವುದೇ ಇಲ್ಲ. ಆತ ಕೇವಲ ಗುರುವಷ್ಟೇ ಆಗಿರುತ್ತಾನೆ. ಕಟ್ಟಿಕೊಳ್ಳದ, ಜೊತೆಗೆ ವಾಸಿಸದ ಪ್ರೇಮಿ ಹಚ್ಚ ಹಸಿರಾಗಿ ಉಳಿಯುವಂತೆ ಎಂದೂ ಭೇಟಿ ಆಗದ ಗುರು ಕೂಡ ಸರ್ವಶ್ರೇಷ್ಠನಾಗಿರುತ್ತಾನೆ.

ಅದರ ಅರ್ಥ ಇಷ್ಟೇ. ನಮ್ಮ ಕಲ್ಪನೆಯ, ಗ್ರಹಿಕೆಯ ಸಾಮರ್ಥ್ಯ ಕಣ್ಣಿನ ಸಾಮರ್ಥ್ಯಕ್ಕಿಂತ ಸಾವಿರ ಪಟ್ಟು ಮೇಲು. ನೋಡದೇ ಇದ್ದಾಗ ಕಾಣಿಸುವುದು, ಕಂಡಾಗ ಕಾಣುವುದಕ್ಕಿಂತ ವಿಶಾಲವಾದದ್ದು. ದ್ರೋಣರು ಅರ್ಜುನನಿಗೆ ಹಕ್ಕಿಯ ಕಣ್ಣನ್ನು ನೋಡಲು ಹೇಳಿಕೊಟ್ಟರು. ಏಕಲವ್ಯ ಹಕ್ಕಿಯ ನೋಟವನ್ನೂ ನೋಡಬಲ್ಲವನಾಗಿದ್ದ.

ನಮಗೆಲ್ಲ ಗೊತ್ತಿರುವ ಕತೆಯೊಂದು ನಿಮಗೂ ಗೊತ್ತಿರಬಹುದು. ಕುರುಡ ಆನೆ ನೋಡಿದ ಕತೆ ಅದು. ಐವರು ಕುರುಡರು ಆನೆಯನ್ನು ನೋಡಿ ಐದು ಕಲ್ಪನೆ ಮಾಡಿಕೊಂಡು ಐದು ಉತ್ತರ ಹೇಳುತ್ತಾರೆ. ಇದನ್ನು ಎಲ್ಲರೂ ನೆಗೆಟಿವ್ ಆಗಿ ಬಳಸುತ್ತಿರುತ್ತಾರೆ. ಆದರೆ ಒಂದು ವಸ್ತುವನ್ನು ಒಂದು ಅನುಭವವನ್ನು ಕಣ್ಣಿರುವವರು ಕೂಡ ಬೇರೆ ಬೇರೆಯಾಗಿಯೇ ನೋಡುತ್ತಾ ಇರುತ್ತಾರೆ. ಹಾಗೆ ನೋಡಿದಾಗಲೇ ಬದುಕು ಸಂಕೀರ್ಣವೂ ಸುಂದರವೂ ಆಗುತ್ತಾ ಹೋಗುವುದು. ಆಗಲೇ ಕಲೆ ಹುಟ್ಟುವುದು.

ಒಮ್ಮೆ ತೆಲೆಯೆತ್ತಿ ಹೊರಗೆ ನೋಡಿ. ನಿಮಗೊಂದು ದೃಶ್ಯ ಕಾಣಿಸುತ್ತಿದೆ ಅಲ್ಲವೇ? ಅದರ ಪೋಟೊ ತೆಗೆಯಿರಿ. ನೂರು ಬಾರಿ ಕ್ಯಾಮೆರಾದಲ್ಲಿ ಫೋಟೊ ತೆಗೆದರೂ ಅದೇ ವಿವರ. ಅದನ್ನು ಚಿತ್ರಿಸಲು ನೂರು ಕಲಾವಿದರಿಗೆ ಹೇಳಿ. ಅವರ ಕೈಗೆ ಕುಂಚ ಕೊಡಿ. ನೂರು ಬೇರೆ ಬೇರೆ ಚಿತ್ರಗಳು ಮೂಡುತ್ತವೆ.

ಅದೇ ಜೀವನಕ್ಕಿರುವ ಶಕ್ತಿ. ಒಂದು ಸಿನಿಮಾ ಒಂದು ಸಿನಿಮಾ ಮಾತ್ರ. ಒಂದು ನಾಟಕ ಸಾವಿರ ನಾಟಕ. ಬೇರೆ ಬೇರೆ ಕಾಲದೇಶ ಸಂದರ್ಭಗಳಲ್ಲಿ ಅದು ಹುಟ್ಟುತ್ತಾ ಇರುತ್ತದೆ. ಹೀಗೆ ಮತ್ತೆ ಮತ್ತೆ ಹುಟ್ಟುವ ಶಕ್ತಿಯನ್ನು ನಾವು ಪಡೆದುಕೊಳ್ಳದೇ ಹೋದರೆ ಏನಾಗುತ್ತೇವೆ ಅನ್ನುವುದನ್ನು ನಾನು ಹೇಳಬೇಕಾಗಿಲ್ಲ. ಇತಿಹಾಸವೇ ನಮಗೆ ಹೇಳಿದೆ.

ಈ ಹುಡುಗರು ‘ನಾಟಕ ಮಾಡುತ್ತೇವೆ’ ಅಂತ ಹೇಳಿದಾಗ ಸಂತೋಷವಾಗಿ ಇದನ್ನೆಲ್ಲ ಬರೆದೆ.

(ಇನ್ನುಮುಂದೆ ಈ ಅಂಕಣವು ತಿಂಗಳಿಗೊಮ್ಮೆಮಾತ್ರ ಪ್ರಕಟವಾಗುವುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.