ಕುವೆಂಪು ಕತೆಗಳಲ್ಲಿ ಮಂಜಣ್ಣ ಎಂಬ ಮನುಷ್ಯನೊಬ್ಬ ಬರುತ್ತಾನೆ. ಅವನನ್ನು ಕತೆಗಾರ ಮಂಜಣ್ಣ ಅಂತಲೇ ಎಲ್ಲರೂ ಕರೆಯುತ್ತಿರುತ್ತಾರೆ. ಅವನು ನಿಂತಲ್ಲಿ ಕೂತಲ್ಲಿ ಕತೆ ಹೇಳುತ್ತಿರುತ್ತಾನೆ. ಅವನು ಹೇಳುತ್ತಿದ್ದದ್ದು ಬೇರೆಯವರ ಕತೆಗಳನ್ನಲ್ಲ, ತನ್ನದೇ ಅನುಭವಗಳನ್ನು. ರಾತ್ರಿ ಓಡಾಡುತ್ತಿದ್ದಾಗ ದೆವ್ವ ಕಂಡಿತು, ನನ್ನ ಹತ್ತಿರ ಒಂದು ಕಾಡು ಹಂದಿ ಮಾತಾಡಿತು, ಹಳ್ಳಕ್ಕೆ ಹೋಗಿದ್ದಾಗ ಒಬ್ಬಳು ದೇವತೆ ಪ್ರತ್ಯಕ್ಷಳಾಗಿ, ‘ನಿಂಗೇನು ಬೇಕು’ ಅಂತ ಕೇಳಿದಳು. ನಾನು ಏನೂ ಬೇಡ ಅಂತ ಹೇಳಿದೆ... ಹೀಗೆ ಚಿತ್ರ ವಿಚಿತ್ರವಾದ ಕತೆಗಳನ್ನು ಹೇಳುತ್ತಾ ಮಕ್ಕಳನ್ನು ರಂಜಿಸುತ್ತಿರುತ್ತಾನೆ. ಎರಡು ಹಕ್ಕಿಗಳು ಅಕ್ಕಪಕ್ಕ ಕೂತಿದ್ದರೆ ಅವು ಏನು ಮಾತಾಡಿಕೊಳ್ಳುತ್ತಿವೆ ಅನ್ನುವುದನ್ನೂ ಆತ ಹೇಳಬಲ್ಲ. ಅವನಿಗೆ ಎಲ್ಲಾ ಪ್ರಾಣಿಗಳ ಭಾಷೆಯೂ ಗೊತ್ತಿದೆ.
ಇಂಥವರು ನಮ್ಮ ಜನಪದದಲ್ಲಿ ಎಲ್ಲೆಡೆಯೂ ಇದ್ದರು. ನಾರಿ ಮನಸೋಲುವ ಚಿಕ್ಕಿಯುಂಗುರ, ಬೆಳ್ಳಿಯುಂಗುರ ತೊಟ್ಟ... ಬೆಟ್ಟಹತ್ತಿ ಬೆಟ್ಟ ಇಳಿದು ಹೋದರೆ ಸಿಗುವ... ಮನೆಯ ಒಡೆಯ ಜೋಗಪ್ಪ, ನರಸಿಂಹಸ್ವಾಮಿಯವರ ಪದ್ಯದಲ್ಲಿ ಮನೆಯಿಂದ ಮನೆಗೆ ಬರುವ ಬಳೆಗಾರ- ಎಲ್ಲರೂ ಇಂಥ ಕತೆಗಳನ್ನು ಹೇಳುತ್ತಲೇ ಇರುತ್ತಾರೆ. ಕತೆ ಹೇಳುವುದು ಮನುಷ್ಯನ ಮೂಲಗುಣ.
ನಾವು ಚಿಕ್ಕವರಿದ್ದಾಗ ಮೇಷ್ಟರು ಒಂದು ಕತೆ ಹೇಳುತ್ತಿದ್ದರು. ಒಬ್ಬಾತ ಬಂದು ಒಂದು ಕಪ್ಪು ಕಾಗೆ ನೋಡಿದೆ ಅಂತ ಮತ್ತೊಬ್ಬನಿಗೆ ಹೇಳುತ್ತಾನೆ. ಮತ್ತೊಬ್ಬನು ಅದನ್ನು ಇನ್ನೊಬ್ಬನಿಗೆ ಹೇಳುವಾಗ ಹತ್ತು ಕಪ್ಪು ಕಾಗೆ ನೋಡಿದೆ ಎಂದು ತನ್ನ ಕಲ್ಪನೆಯನ್ನು ಸೇರಿಸಿಕೊಂಡು ಹೇಳುತ್ತಾನೆ. ಅವನಿಂದ ಅದು ಮತ್ತೊಬ್ಬನ ಕಿವಿಗೆ ಹೋಗುವಾಗ ಆ ಕಾಗೆಗೆ ರೆಕ್ಕೆ ಪುಕ್ಕ ಸೇರಿ ಇನ್ನೇನೊ ಆಗಿರುತ್ತದೆ. ಆ ಮತ್ತೊಬ್ಬ ಇನ್ನೊಬ್ಬ ಜಾಣನಿಗೆ ಅದನ್ನು ಹೇಳುವಾಗ ಸಾವಿರ ಬಿಳಿ ಕಾಗೆಗಳಾಗಿ ನೂರನೇ ವ್ಯಕ್ತಿಯನ್ನು ತಲುಪುವ ಹೊತ್ತಿಗೆ ಲಕ್ಷಾಂತರ ಕಾಗೆಗಳಾಗಬಹುದು, ಕಾಗೆಯ ಬಣ್ಣ ಬದಲಾಗಬಹುದು. ಅದು ಬೇರೆಯೇ ಪಕ್ಷಿಯೂ ಆಗಬಹುದು. ಅವರವರ ಊಹಾಶಕ್ತಿ, ಕಲ್ಪನಾಶಕ್ತಿಗೆ ಅನುಗುಣವಾಗಿ ಎಲ್ಲವೂ ಬದಲಾಗುತ್ತಾ ಹೋಗುತ್ತದೆ.
ಅದರಲ್ಲಿ ತಪ್ಪೇನೂ ಇಲ್ಲ. ಕತೆಗಳು ಹುಟ್ಟುವುದೇ ಹಾಗೆ. ಒಬ್ಬನಿಂದ ಇನ್ನೊಬ್ಬನಿಗೆ ಒಂದು ಪ್ರಸಂಗ ಹೇಳುವಾಗ ಅದರಲ್ಲಿ ವೈಯಕ್ತಿಕ ಅಂಶವೂ ಸೇರಿಕೊಂಡರೇನೇ ಚೆನ್ನ. ಆಗಲೇ ಅದಕ್ಕೊಂದು ಮಾನವೀಯ ಗುಣ ಬರುವುದು.
ನೀವು ಮಾಸ್ತಿ ವೆಂಕಟೇಶ ಅಯ್ಯಂಗಾರರ ಕತೆಗಳನ್ನು ಓದಿದರೆ ಅಲ್ಲಿ ಕತೆಗಾರನೊಳಗೆ ಮತ್ತೊಬ್ಬ ಕತೆಗಾರ ಸೇರಿಕೊಂಡಿರುತ್ತಾನೆ. ಮಾಸ್ತಿಯವರ ಕತೆಗಳು ಹೀಗೆ ಶುರುವಾಗುತ್ತವೆ:
‘ಒಂದು ಸಾರಿ ನಾನೂ ರಾಮರಾಯರೂ ಜೊತೆಯಾಗಿ ಪ್ರಯಾಣ ಮಾಡುತ್ತಿದ್ದಾಗ, ರಾಮರಾಯರು ಅವರ ಸ್ನೇಹಿತರೊಬ್ಬರು ತೀರ್ಥಹಳ್ಳಿ ಪ್ರಾಂತ್ಯದಲ್ಲಿದ್ದಾಗ ಕೇಳಿದ ಕತೆಯೊಂದನ್ನು ಹೇಳಿದರು...’.
ಈ ಕತೆಯ ಮಜಾ ನೋಡಿ. ಮಾಸ್ತಿಯವರಿಗೆ ರಾಮರಾಯರು ಹೇಳಿದ ಕತೆಯನ್ನು ರಾಮರಾಯರಿಗೆ ತೀರ್ಥಹಳ್ಳಿಯ ಯಾರೋ ಹೇಳಿರುತ್ತಾರೆ. ತೀರ್ಥಹಳ್ಳಿಯವರಿಗೆ ಮತ್ಯಾರೋ ಹೇಳಿರುತ್ತಾರೆ. ಹೀಗೆ ಹೇಳುತ್ತಾ ಹೇಳುತ್ತಾ ಕತೆಯೊಳಗೆ ಅವರವರ ಅನುಭವ ಸೇರಿಕೊಂಡು ಅದೊಂದು ಮಾನವೀಯವಾದ ಕತೆಯೇ ಆಗುತ್ತದೆ.
ಮಹಾಭಾರತ ಬೆಳೆದದ್ದೂ ಹಾಗೆಯೇ ಅಲ್ಲವೇ. ದ್ವೈಪಾಯನ ಮುನಿಗಳು ಹೇಳಿದ ಕತೆಯನ್ನು ವೈಶಂಪಾಯನ ಮುನಿಗಳು ಜನಮೇಜಯನಿಗೆ ಹೇಳಿದರು ಅನ್ನುವುದು ಸೂತ ಮುನಿ ಮತ್ಯಾರಿಗೋ ಹೇಳುತ್ತಾನೆ. ಹೀಗೆ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಾ ಇಡೀ ಮಹಾಭಾರತ ಎಲ್ಲರ ಕತೆಯೂ ಆಯಿತಲ್ಲವೇ?
ಕತೆಗಳಿಗೆ ಮತ್ತೊಂದು ಗುಣವಿದೆ. ಮನುಷ್ಯತ್ವ ಉಳ್ಳವನು ಮಾತ್ರ ಕತೆ ಹೇಳಬಲ್ಲ. ಪ್ರೀತಿಸುವವನು ಮಾತ್ರ ಕತೆ ಹೇಳಬಲ್ಲ. ದ್ವೇಷಿಸುವವನಿಗೆ ಕತೆ ಹೇಳುವ ವ್ಯವಧಾನ ಇರುವುದಿಲ್ಲ, ಅವನ ಮನಸ್ಸು ಕತೆಗಳಿಂದ ಸುಖಿಸಲಾರದು. ಅದು ದ್ವೇಷಕ್ಕಾಗಿ ಹಪಹಪಿಸುತ್ತಲೇ ಇರುತ್ತದೆ.
ಇವತ್ತು ಆಗುತ್ತಿರುವುದು ಅದೇ... ನಾನು ‘ಅಯ್ಯಪ್ಪ ಸ್ವಾಮಿ ದೇವರೇ ಅಲ್ಲ’ ಎಂದು ಹೇಳಿದೆ ಎಂದು ಅನೇಕರು ಕತೆ ಕಟ್ಟಿ ಪ್ರಚಾರ ಮಾಡಿದರು. ನಾನು ದೈವವಿರೋಧಿ ಅಂದರು.
ಟ್ವಿಟರುಗಳಲ್ಲಿ, ಫೇಸ್ ಬುಕ್ಕುಗಳಲ್ಲಿ, ವಾಟ್ಸಾಪುಗಳಲ್ಲಿ ಈ ಸುಳ್ಳು ಸುದ್ದಿಯನ್ನು ಹಬ್ಬಿಸಿದವರು. ಮೊದಲು ಅದನ್ನು ಹಬ್ಬಿಸಿದವರಾಗಲೀ, ಆ ನಂತರ ಅದನ್ನು ಪಸರಿಸಿದವರಾಗಲೀ ನಾನೇನು ಹೇಳಿದೆ ಅನ್ನುವುದನ್ನು ಕೇಳಿಸಿಕೊಳ್ಳಲೇ ಇಲ್ಲ.
ಯಾರಿಗೂ ಅದು ಬೇಕಿರಲಿಲ್ಲ. ನನ್ನನ್ನು ವಿರೋಧಿಸುವುದು ಮಾತ್ರವೇ ಬೇಕಿತ್ತು. ನನ್ನ ಹೇಳಿಕೆಯನ್ನು ತಿರುಚಿದರೆ ಮಾತ್ರ ನನ್ನನ್ನು ವಿರೋಧಿಸುವುದು ಸಾಧ್ಯವಿತ್ತು. ನಾನೇನು ಹೇಳಿದೆ ಅಂತ ಪೂರ್ತಿ ಹೇಳಿದರೆ ಅದರಲ್ಲಿ ಗೊಂದಲವೇ ಇರುತ್ತಿರಲಿಲ್ಲ. ಆದರೆ ಯಾರಿಗೂ ಇಡೀ ಮಾತುಗಳು ಬೇಕಾಗಿಲ್ಲ. ಒಳ್ಳೆಯ ಅರ್ಥಗಳೂ ಬೇಕಾಗಿಲ್ಲ.
ನಾನು ಹೇಳಿದ್ದು ಇಷ್ಟೇ. ‘ನಾವು ಭಾರತಮಾತೆ ಅನ್ನುತ್ತೇವೆ. ಅನ್ನಪೂರ್ಣೆ ಎಂದು ಕರೆಯುತ್ತೇವೆ. ತಾಯಿಯೇ ದೇವರು ಅನ್ನುತ್ತೇವೆ. ಹೆಣ್ಣು ಎಲ್ಲಿ ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ವಾಸ ಮಾಡುತ್ತಾರೆ ಎಂದು ಶ್ಲೋಕ ಜಪಿಸುತ್ತೇವೆ. ಅಷ್ಟೊಂದು ಗೌರವಿಸುವ ಹೆಣ್ಣನ್ನು ದೇವಸ್ಥಾನದೊಳಗೆ ಬಿಡುವುದಿಲ್ಲ ಎಂದೂ ಹೇಳುತ್ತೇವೆ. ಹೆಣ್ಣನ್ನು ಕಡೆಗಣಿಸುವ ದೇವಸ್ಥಾನ ದೇವಸ್ಥಾನವೇ ಅಲ್ಲ, ಹೆಣ್ಣನ್ನು ಪೂಜಿಸಲು ಬಿಡದ ಭಕ್ತ ಭಕ್ತನೇ ಅಲ್ಲ... ಹೆಣ್ಣು ನನ್ನನ್ನು ನೋಡಬಾರದು ಅಂತ ಹೇಳುವ ದೇವರು ದೇವರೇ ಅಲ್ಲ’. ಅಷ್ಟೇ...
ಅಷ್ಟು ಹೇಳುತ್ತಿದ್ದಂತೆ ಕೆಲವರು ಮುಗಿಬಿದ್ದರು. ಅಯ್ಯಪ್ಪ ದೇವರೇ ಅಲ್ಲ ಅಂತ ಪ್ರಕಾಶ್ ರೈ ಹೇಳಿದರು ಅಂತ ಕೂಗಾಡಿದರು. ಕೇಸು ಹಾಕುವುದಾಗಿ ಆರ್ಭಟಿಸಿದರು. ನಾನು ಎಲ್ಲವನ್ನೂ ಮೌನವಾಗಿಯೇ ನೋಡುತ್ತಿದ್ದೆ.
ಎಲ್ಲ ಮಾತುಗಳನ್ನೂ ತಿರುಚುವುದಾದರೆ, ಎಲ್ಲವನ್ನೂ ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದಾದರೆ, ನಾವೇನು ಮಾಡುತ್ತಿದ್ದೇವೆ? ನಾವೆತ್ತ ಸಾಗುತ್ತಿದ್ದೇವೆ? ಇಮ್ಯಾಜಿನೇಷನ್ ಎಂಬ ಪದದ ಅರ್ಥವೇ ಬದಲಾಗಿದೆಯೇ? ಈ ಅಂತೆ ಕಂತೆಗಳ ಸಂತೆಯಲ್ಲಿ ನಿಂತು ಆಲೋಚಿಸುತ್ತಿದ್ದರೆ ಎಷ್ಟೋ ಸಲ ಗಾಬರಿಯಾಗುತ್ತದೆ. ನಾವಾಡುವ ಮಾತುಗಳು ಅಂತಿಮವಾಗಿ ಒಬ್ಬ ವ್ಯಕ್ತಿಯನ್ನು ಹೇಗೆ ತಲುಪುತ್ತವೆ. ನಾವು ಆಡಿದ ರೀತಿಯಲ್ಲೇ ಅಥವಾ ಅದನ್ನು ತಲುಪಿಸಿದವರಿಗೆ ಬೇಕಾದ ರೀತಿಯಲ್ಲೇ?
ಒಂದು ಕಾರ್ಯಕ್ರಮದಲ್ಲಿ ಮಾತಾಡುತ್ತಾ ಬಹಳ ಹಿಂದೆ ಅನಂತಮೂರ್ತಿ ಹೇಳಿದ್ದರು. ‘ನಾನು ಪತ್ರಕರ್ತರು ಇರುವಲ್ಲಿ ಮಾತಾಡುವುದಿಲ್ಲ. ನನ್ನ ಮಾತುಗಳನ್ನು ತಿರುಚಲಾಗುತ್ತಿದೆ. ನಾನು ಹೇಳಿಯೇ ಇಲ್ಲದ ಅರ್ಥವನ್ನು ನನ್ನ ಮಾತುಗಳ ಮೂಲಕವೇ ಹೊರಡಿಸುತ್ತಿದ್ದಾರೆ. ನಾನು ಹೇಳಿದ ಮಾತುಗಳನ್ನೇ ಅವರು ಬರೆದಿರುತ್ತಾರೆ. ಆದರೆ ಅರ್ಥವನ್ನು ಮಾತ್ರ ತಿರುಚಿರುತ್ತಾರೆ’ ಎಂದು.
ಅದಾದ ನಂತರ ಒಂದು ಸಮಾರಂಭದಲ್ಲಿ ಅವರು ಮಾತಾಡಿದರು ಕೂಡ. ಅದರ ಅರ್ಥವನ್ನು ತಿರುಚಲಾಯಿತು. ಅನಂತಮೂರ್ತಿಯವರನ್ನು ಬೆನ್ನಟ್ಟಿದರು. ಮಾನಸಿಕವಾಗಿ ಹಿಂಸಿಸಿದರು. ಜರ್ಜರಿತರಾಗುವಂತೆ ಮಾಡಿದರು. ದೇಶ ಬಿಟ್ಟು ಪಾಕಿಸ್ತಾನಕ್ಕೆ ಹೋಗಿ ಅಂತ ಕಾರ್ಡು ಬರೆದರು. ಸತ್ತು ಹೋಗಿ ಅಂತ ಫೋನ್ ಮಾಡಿ ಹೇಳಿದರು.
ಮಾತಿಗೆ ವಿಷ ಬೆರೆಸುವುದಕ್ಕಾಗಿಯೇ ಒಂದು ಗುಂಪು ತಯಾರಾಗಿದೆ... ಆಡದೇ ಇರುವ ಮಾತನ್ನು, ಧ್ವನಿಸದೇ ಇರುವ ಅರ್ಥವನ್ನು ದಾಟಿಸುವ ಹಡಗುಗಳನ್ನಾಗಿ ಜನಸಾಮನ್ಯರನ್ನು ದುರುಪಯೊಗ ಪಡಿಸಿಕೊಳ್ಳುತ್ತಿದೆ. ಇದನ್ನು ನೆನೆದರೆ ಸಂಕಟವಾ ಗುತ್ತದೆ. ಒಂದು ಕತೆಯಲ್ಲಿ ರಾಮ- ರಾವಣರ ಪ್ರಸ್ತಾಪ ಬಂದರೆ, ಕಪ್ಪುಮನುಷ್ಯ- ಬಿಳಿಮನುಷ್ಯ ಅನ್ನುವ ಮಾತು ಬಂದರೆ, ಒಳಿತಿನ ಎದುರು ಕೆಡುಕು ವಿಜೃಂಭಿಸುತ್ತದೆ ಎಂದು ಬರೆದರೆ, ಅಮಾನವೀಯ ವರ್ತನೆ ಎಂದರೆ ಅವರೇಕೆ ಥಟ್ಟನೆ ಜಾಗೃತರಾಗುತ್ತಾರೆ. ಜನತೆಯ ಶತ್ರು ಅಂದಾಕ್ಷಣ ಅವರು ಅದು ತಮಗೇ ಆಡಿದ ಮಾತು ಎಂದೇಕೆ ಅಂದುಕೊಳ್ಳುತ್ತಾರೆ.
ಒಂದು ಕತೆ ನೆನಪಾಗುತ್ತಿದೆ. ಪವಿತ್ರವೆಂದು ಜನ ಭಾವಿಸಿದಒಂದು ತಾಣ. ಅದರ ಒಳಗೆ ಹೋಗಲು ಯಾರಿಗೂ ಅವಕಾಶವೇ ಇಲ್ಲ. ಒಳಗೆ ದೇವರಿದ್ದಾನೆ ಎಂದು ಜನ ನಂಬಿದ್ದಾರೆ. ವಾಸ್ತವದಲ್ಲಿ ಒಬ್ಬಾತನನ್ನು ಆ ಕಟ್ಟಡದ ಒಳಗೆ ಬಂಧಿಸಿ ಇಡಲಾಗಿದೆ. ಅವನ ಮುಂದೆ ಒಂದು ಮೈಕು ಇಡಲಾಗಿದೆ. ಅವನು ಮಾತಾಡುತ್ತಾ ಹೋಗುತ್ತಾನೆ.
ಆದರೆ ಆ ಮೈಕಿಗೆ ಸಂಪರ್ಕ ಕಡಿತವಾಗಿದೆ. ಅದರ ಬದಲು ರೆಕಾರ್ಡ್ ಮಾಡಿದ ಮಾತುಗಳೇ ಹೊರಗಿದ್ದವರಿಗೆ ಕೇಳಿಸುತ್ತಿವೆ.
ಒಳಗಿರುವವನು ಹೇಳುತ್ತಿದ್ದಾನೆ: ‘ನಾನು ದೇವರಲ್ಲ. ನಾನು ನಿಮ್ಮಂತೆಯೇ ಮನುಷ್ಯ. ನನಗೆ ಬಿಡುಗಡೆ ಕೊಡಿ. ನನಗೆ ನಿಮ್ಮ ಹಣ ಬೇಕಿಲ್ಲ. ಈ ಯಾತನೆಯಿಂದ ಮುಕ್ತಿ ಕೊಡಿಸಿ’.
ಹೊರಗಿರುವವರಿಗೆ ಕೇಳಿಸುತ್ತಿದೆ: ‘ನಾನೇ ದೇವರು. ನಿಮಗೆ ಬಿಡುಗಡೆ ಬೇಕಿದ್ದರೆ ನನ್ನನ್ನು ನಂಬಿ. ಇಲ್ಲಿರುವ ಹುಂಡಿಗೆ ನಿಮ್ಮಲ್ಲಿರುವ ಹಣವನ್ನೆಲ್ಲ ಹಾಕಿ. ಅತ್ಯಂತ ಕಡಿಮೆ ಹಣ ಯಾರ ಬಳಿ ಇರುತ್ತದೋ ಅವನನ್ನು ನಾನು ಪ್ರೀತಿಸುತ್ತೇನೆ’.
ಹೇಳುವುದು ಒಂದು, ಕೇಳುವುದು ಒಂದು. ಅದು ಅಂದಿನ ಕತೆಯೂ ಹೌದು; ಇಂದಿನ ಕತೆಯೂ ಹೌದು. ಇವತ್ತು ಜಗತ್ತಿನ ಮತ್ತೊಂದು ಮೂಲೆಯಲ್ಲಿ ಆಡಿದ ಮಾತನ್ನು ಆ ಕ್ಷಣವೇ ಈ ಮೂಲೆಯಲ್ಲಿರುವ ವ್ಯಕ್ತಿ ಕೇಳಿಸಿಕೊಳ್ಳಬಹುದು. ತಂತ್ರಜ್ಞಾನ ಅದಕ್ಕೆ ಅವಕಾಶ ಕೊಟ್ಟಿದೆ.
ಆದರೆ ಆಡಿದ ಮಾತನ್ನೇ ಕೇಳಿಸಿಕೊಳ್ಳುತ್ತಿದ್ದೇವೆಯೆ ಅಥವಾ ಯಾರೋ ನಾವು ಹೇಗೆ ಕೇಳಬೇಕೆಂದು ತಿರುಚಿದ್ದನ್ನು ಕೇಳಿಸಿಕೊಳ್ಳುತ್ತಿದ್ದೇವೆಯೆ? ಈ ಅಂತೆ ಕಂತೆಗಳ ಸಂತೆಯಲ್ಲಿ ಉತ್ತರ ಹುಡುಕಿಕೊಳ್ಳಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.