ADVERTISEMENT

ನಮ್ಮ ಮರಿಯಾನೆಗೆ ಹಾರಲು ಕಲಿಸೋಣವೇ...

ಪ್ರಕಾಶ್ ರೈ
Published 1 ಡಿಸೆಂಬರ್ 2018, 20:05 IST
Last Updated 1 ಡಿಸೆಂಬರ್ 2018, 20:05 IST
ಚಿತ್ರ: ಭಾವು ಪತ್ತಾರ್‌
ಚಿತ್ರ: ಭಾವು ಪತ್ತಾರ್‌    

ಇತ್ತೀಚಿಗೆ ಕೇರಳದ ಕೊಚ್ಚಿಯಲ್ಲಿ ಪತ್ರಿಕೆಯೊಂದು ಆಯೋಜಿಸಿದ ‘ರೀ ಇಮ್ಯಾಜಿನ್ ದಿ ಫ್ಯೂಚರ್’ ಎಂಬ ಕಾರ್ಯಕ್ರಮಕ್ಕೆ ಹೋಗಿದ್ದೆ. ನಮ್ಮ ಶಿಕ್ಷಣ ಪದ್ಧತಿ ಮತ್ತು ಅದರ ಸುಳಿಯಲ್ಲಿ ಸಿಲುಕಿರುವ ನಮ್ಮ ಮಕ್ಕಳ ಭವಿಷ್ಯದ ಆತಂಕಗಳ ಬಗೆಗಿನ ಸಂವಾದದ ವೇದಿಕೆ ಅದಾಗಿತ್ತು.

ಮಕ್ಕಳು, ಪೋಷಕರು, ಅಧ್ಯಾಪಕರು ಸೇರಿದ್ದ ಸಭೆ. ಅಲ್ಲೊಬ್ಬ ಹದಿಮೂರು– ಹದಿನಾಲ್ಕು ವರ್ಷದ ಹುಡುಗ ಎದ್ದು ಮಾತಾಡುತ್ತಾ, ‘ನನಗೆ ಸಿನಿಮಾಕ್ಕೆ ಕತೆ ಬರೆಯಬೇಕು, ಚಿತ್ರಕತೆ, ಸಂಭಾಷಣೆ ಬರೆಯಬೇಕು. ಸಿನಿಮಾದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಸಕ್ತಿ. ಆದರೆ ಮನೆಯಲ್ಲಿ ಪ್ರೊತ್ಸಾಹವಿಲ್ಲ’ ಎಂದು ತನ್ನ ಕನಸನ್ನು ಬಿಚ್ಚಿಟ್ಟ. ನಾನು ಅವನ ಆಸಕ್ತಿಗಳ ಕುರಿತು ಮಾತಾಡುತ್ತಿರುವಾಗ ಅವನ ತಂದೆ ಮಾತಿಗೆ ತೊಡಗಿಕೊಂಡರು. ‘ಈ ಹುಡುಗ ಏನೇನೋ ಹೇಳ್ತಾನೆ. ಅವನಿಗೇನು ಗೊತ್ತಿದೆ? ಅವನ ಬಾಲಿಶ ಮಾತು ಕೇಳಕ್ಕಾಗತ್ತಾ? ನಾವು ಜವಾಬ್ದಾರಿಯಿಂದ ಅವನನ್ನು ಸಾಕಬೇಕಲ್ಲವೇ?’ ಎಂದು ಪೋಷಕರಿಗೆ ಇತ್ತೀಚೆಗೆ ಸಹಜವಾಗಿರುವ ಆತಂಕದಲ್ಲಿ ಕೇಳಿದರು.

‘ನಿಮಗೆ ಸಿನಿಮಾ ಅಂದರೇನು ಗೊತ್ತಾ? ಕತೆ, ಚಿತ್ರಕತೆ ಹೇಗೆ ಬರೆಯುತ್ತಾರೆ, ಸಿನಿಮಾ ಹೇಗೆ ತಯಾರಾಗುತ್ತದೆ ಅಂತೇನಾದರೂ ತಿಳಿದುಕೊಂಡಿದ್ದೀರಾ?’ ಎಂದು ನಾನು ಅವರನ್ನು ಕೇಳಿದೆ. ಅವರು ಕಿಂಚಿತ್ತೂ ಹಿಂಜರಿಕೆಯಾಗಲೀ ಸಂಕೋಚವಾಗಲೀ ಇಲ್ಲದೇ, ತಮಗೇನೂ ಗೊತ್ತಿಲ್ಲ ಅಂದುಬಿಟ್ಟರು.

ADVERTISEMENT

‘ನಿಮಗೆ ಗೊತ್ತಿಲ್ಲದೇ ಇರುವುದರ ಬಗ್ಗೆ ನೀವು ಹೇಗೆ ತೀರ್ಮಾನ ತಗೋತೀರಿ? ನಿಮ್ಮ ಮಗನಿಗೆ ನಿಜಕ್ಕೂ ಅದರಲ್ಲಿ ಆಸಕ್ತಿ ಇರಬಹುದಲ್ಲವೇ? ಅವನು ಆ ಕ್ಷೇತ್ರದಲ್ಲಿ ಮುಂದುವರಿದು ಗೆಲ್ಲಬಹುದು ಅಂತ ನೀವು ಯಾಕೆ ಭಾವಿಸುತ್ತಿಲ್ಲ? ನಿಮಗೆ ಆ ಬಗ್ಗೆ ಏನೂ ಗೊತ್ತಿಲ್ಲ ಎಂದು ಒಪ್ಪಿಕೊಳ್ಳಲು ಯಾವ ಅಹಂ ನಿಮ್ಮನ್ನು ತಡೆಯುತ್ತಿದೆ? ನೀವು ಹೆತ್ತ ನಿಮ್ಮ ಮಗುವಿನ ಭವಿಷ್ಯದ ಕನಸು ಅದು. ಸಿನಿಮಾ ತಿಳಿದುಕೊಂಡಿರುವವರ ಬಳಿಗೆ ಅವನನ್ನು ಕರೆದುಕೊಂಡು ಹೋಗಿ ಅವನ ಪ್ರತಿಭೆ ಎಂತಹುದೆಂದು ತಿಳಿದುಕೊಳ್ಳುವುದೋ ಅಥವಾ ತಿಳಿಹೇಳುವುದೋ ನಿಮ್ಮ ಜವಾಬ್ದಾರಿ ಅಲ್ಲವೇ?’ ಎಂದು ನಾನು ಅವರಿಗೆ ಮರುಪ್ರಶ್ನೆಗಳನ್ನು ಹಾಕಿದೆ. ಅವರ ಬಳಿ ಉತ್ತರ ಇರಲಿಲ್ಲ.

ಅವರಲ್ಲಷ್ಟೇ ಅಲ್ಲ, ಬಹುತೇಕ ಹೆತ್ತವರಲ್ಲಿ ತಮ್ಮ ಮಕ್ಕಳು ಇದನ್ನೇ ಯಾಕೆ ಮಾಡಬೇಕು, ಅದನ್ನು ಯಾಕೆ ಮಾಡಬಾರದು ಎಂಬ ಪ್ರಶ್ನೆಗೆ ಉತ್ತರ ಇರುವುದೇ ಇಲ್ಲ. ಪಕ್ಕದ ಮನೆ ಮಗು ಏನು ಓದುತ್ತಿದೆಯೋ ಅದನ್ನೇ ನಮ್ಮನೆ ಮಗು ಓದಬೇಕು ಅಂತ ಬಯಸುವುದರಲ್ಲಿ ಅನುಕೂಲಸಿಂಧುತ್ವ ಇದೆ. ಹೆತ್ತವರ ಕೆಲಸ ಅಷ್ಟರ ಮಟ್ಟಿಗೆ ಹಗುರಾಗುತ್ತದೆ. ನಿಮ್ಮ ಮಗಳು ಏನು ಮಾಡುತ್ತಿದ್ದಾಳೆ ಅಂತ ಯಾರಾದರೂ ಕೇಳಿದಾಗ ಉತ್ತರಿಸುವುದು ಸುಲಭವಾಗುತ್ತದೆ. ಮತ್ತೊಬ್ಬರಿಗೆ ಅರ್ಥವಾಗುತ್ತದೆ. ಆಗ ಅವರಿಗೆ ನಾವು ಸಮಾನರಾಗುತ್ತೇವೆ. ಶೈಕ್ಷಣಿಕ ಸಮಾನತೆ ಎಂಬುದು ಸಾಧ್ಯವಾಗುತ್ತದೆ ಎಂದು ನಂಬುತ್ತಾರೆ.

ನಾನು ಈ ಬಗೆಯ ಶೈಕ್ಷಣಿಕ ಸಮಾನತೆ ಎಂಬ ಪದವನ್ನೇ ಧಿಕ್ಕರಿಸುತ್ತೇನೆ. ಎಲ್ಲರಿಗೂ ಸಮಾನವಾದ ಶಿಕ್ಷಣ ಎಂಬ ಮಾತಿಗೆ ಅರ್ಥವೇ ಇಲ್ಲ. ಬಡಗಿ ಕೆಲಸ ಬಲ್ಲವನಿಗೆ ಇಪ್ಪತ್ತೈದು ವರ್ಷ ಶಿಕ್ಷಣ ಕೊಟ್ಟು ಅವನು ಕಮ್ಮಾರ ಆಗುವಂತೆ ಮಾಡುವುದು, ಕಮ್ಮಾರನಿಗೆ ಇಪ್ಪತ್ತೈದು ವರ್ಷ ಶಿಕ್ಷಣ ಕೊಟ್ಟು ಅವನನ್ನು ಬಡಗಿ ಮಾಡುವುದು- ಇದೇ ತನ್ನ ಗುರಿ ಎಂದು ಇಂದಿನ ಶಿಕ್ಷಣ ಅಂದುಕೊಂಡುಬಿಟ್ಟಿದೆ.

ಇವತ್ತಿನ ಶಿಕ್ಷಣದ ಉದ್ದೇಶ ಏನು ಎಂದು ಯಾರನ್ನಾದರೂ ಕೇಳಿದರೆ ಅವರು ಉತ್ತರ ಕೊಡಲು ಹಿಂಜರಿಯುತ್ತಾರೆ. ಮಕ್ಕಳು ಓದಬೇಕು, ಕೆಲಸ ಹಿಡಿಯಬೇಕು, ತಮ್ಮನ್ನು ಮುಪ್ಪಿನಲ್ಲಿ ಸಾಕಬೇಕು ಅನ್ನುವುದು ನಾನು ಚಿಕ್ಕವನಾಗಿದ್ದಾಗ ಚಾಲ್ತಿಯಲ್ಲಿದ್ದ ಶಿಕ್ಷಣದ ಉದ್ದೇಶ. ಈಗಲೂ ಅದೇ ಉದ್ದೇಶ ಶಿಕ್ಷಣಕ್ಕಿದೆ ಎಂದರೆ ನನಗೆ ನಂಬಲಿಕ್ಕೆ ಕಷ್ಟವಾಗುತ್ತದೆ.

ನನ್ನ ಮಗ ಸಿದ್ಧಾರ್ಥ ತೀರಿಕೊಂಡಾಗ ನನ್ನ ಮಗಳಿಗೆ ಒಂಬತ್ತು ವರ್ಷ. ಅವಳನ್ನು ನಾನು ಸಮುದ್ರದ ತೀರಕ್ಕೆ ಕರೆದೊಯ್ಡು ಒಂದಷ್ಟು ಸಮಾಧಾನದ ಮಾತುಗಳನ್ನು ಹೇಳಿದೆ. ಅದಾಗಿ ಎರಡು ವರ್ಷದ ನಂತರ ಅವಳು ಒಂದು ಚಿತ್ರ ಬಿಡಿಸಿದ್ದಳು. ಆ ಚಿತ್ರದಲ್ಲಿದ್ದದ್ದು ಒಂದು ಖಾಲಿ ತರಗತಿ, ಬಾಗಿಲ ಹತ್ತಿರ ಯಾರೋ ನಿಂತದ್ದನ್ನು ಸೂಚಿಸುವ ನೆರಳು ಮಾತ್ರ. ಅದೇನೆಂದು ಕೇಳಿದರೆ, ‘ನನ್ನ ತಮ್ಮ ಸಿದ್ಧಾರ್ಥ ಕ್ಲಾಸಿನ ಹೊರಗೆ ಬಂದು ನಿಂತಿದ್ದಾನೆ’ ಅಂದಳು. ಅವಳ ಗ್ರಹಿಕೆ, ಕಲ್ಪನೆ ಮತ್ತು ಆಸಕ್ತಿ ಪೇಟಿಂಗ್ ಅನ್ನುವುದನ್ನು ಅರ್ಥ ಮಾಡಿಕೊಂಡು ನಾನು ಅವಳನ್ನು ಪೇಂಟಿಂಗ್ ತರಗತಿಗೆ ಕಳುಹಿಸಿದೆ. ಸಾಂಪ್ರದಾಯಿಕ ಶಿಕ್ಷಣಕ್ಕೆ ಒಳಗಾಗಲು ಬಿಡಲಿಲ್ಲ. ಈಗ ಅವಳು ಅದೇ ದಾರಿಯಲ್ಲಿ ತನಗಿಷ್ಟ ಬಂದದ್ದನ್ನು ಮಾಡುತ್ತಿದ್ದಾಳೆ. ಕಲೆ ಅವಳ ಕೈ ಹಿಡಿದಿದೆ. ಪೇಂಟಿಂಗಿನಿಂದ ಸಂಗೀತ, ಸ್ಟಾಂಡಪ್ ಕಾಮಿಡಿ- ಹೀಗೆ ಅವಳ ಜಗತ್ತು ವಿಸ್ತಾರವಾಗಿದೆ.

ಆದರೆ ಮಕ್ಕಳನ್ನು ಹೀಗೆ ಶಾಲೆಯಿಂದ ಮುಕ್ತಿಗೊಳಿಸಲು ಅನೇಕರು ಅಂಜುತ್ತಾರೆ. ಅದಕ್ಕೆ ಕಾರಣ ನಮ್ಮಲ್ಲಿ ಬಲವಾಗಿ ಬೇರೂರಿರುವ ಶಿಕ್ಷಣದ ಕುರಿತ ಭಯ ಮತ್ತು ಭಕ್ತಿ. ಮಕ್ಕಳನ್ನು ನಾವು ಶಿಕ್ಷಣ ಕೊಡಿಸುವ ಮೂಲಕ ಶ್ರೇಷ್ಠರನ್ನಾಗಿ ಮಾಡುತ್ತಿದ್ದೇವೆ ಎಂಬುದು ಭ್ರಮೆಯೋ ಮೂಢನಂಬಿಕೆಯೋ ನನಗೆ ಗೊತ್ತಿಲ್ಲ. ಆದರೆ ಹೆತ್ತವರಾದರೂ ಏನು ಮಾಡಬಹುದು ಎಂದು ಯೋಚಿಸಿದಾಗ ಆತಂಕವಾಗುತ್ತದೆ. ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುವ ಗಂಡ- ಹೆಂಡತಿ, ಆಫೀಸು, ಒತ್ತಡ, ಪಿಂಕ್ ಸ್ಲಿಪ್, ಟ್ರಾಫಿಕ್ಕು, ಅದರ ಮಧ್ಯೆಯೇ ಅಡುಗೆ, ಆರೋಗ್ಯ, ಸಂತಾಪಸೂಚಕ ಸಭೆ, ಮದುವೆ, ಸಂಬಂಧಗಳನ್ನೆಲ್ಲ ನಿಭಾಯಿಸಬೇಕಾದ ತಾಯಿ-ತಂದೆಯರು ಮಕ್ಕಳ ಬಗ್ಗೆ ಭಿನ್ನವಾಗಿ ಯೋಚಿಸಲು ಮತ್ತಷ್ಟು ಕಷ್ಟಪಡಬೇಕು. ಅಲ್ಲದೇ, ಇಲ್ಲಿ ಮತ್ತೊಂದು ಆಯ್ಕೆಯೇ ಇಲ್ಲದಂಥ ವ್ಯವಸ್ಥೆಯಿದೆ. ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳು ಮಾತ್ರ ಬಲಿಪಶುಗಳಲ್ಲ, ಹೆತ್ತವರೂ ಬಲಿಪಶುಗಳೇ. ಬಲಿಪಶುಗಳ ಕೈಯಲ್ಲಿ ಬಲಿಪಶುಗಳು ಸಿಕ್ಕರೆ ಏನಾಗಬಹುದೋ ಅದೇ ಆಗುತ್ತಿದೆ.

ಮೊನ್ನೆ ಮೊನ್ನೆ ನನಗೆ ಗೊತ್ತಿರುವವರೊಬ್ಬರು ತಮ್ಮ ಮಗಳನ್ನು ಅದ್ಯಾವುದೋ ಪಿಯು ಕಾಲೇಜಿಗೆ ಸೇರಿಸಬೇಕು ಅಂತ ಓಡಾಡುತ್ತಿದ್ದರು. ನನಗೆ ಈ ಪಿಯು ಕಾಲೇಜುಗಳ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ನಾವು ಓದುತ್ತಿದ್ದಾಗ ಪಿಯು ಕಾಲೇಜುಗಳೆಂಬ ಪ್ರತ್ಯೇಕ ಘಟಕಗಳೇ ಇರಲಿಲ್ಲ. ಈಗ ನೋಡಿದರೆ ಒಂದೊಂದು ರಾಜ್ಯದಲ್ಲಿ ನೂರಾರು ಪಿಯು ಕಾಲೇಜುಗಳಿವೆ. ಅಲ್ಲಿಗೆ ಸೇರುವ ಮಕ್ಕಳನ್ನು ಅವರು ಅಲ್ಲೇ ವಸತಿಶಾಲೆಯಲ್ಲಿ ಇರಿಸಿಕೊಳ್ಳುತ್ತಾರೆ. ಬೆಳಗ್ಗೆ ಐದು ಗಂಟೆಗೆ ಎಬ್ಬಿಸುತ್ತಾರೆ. ರಾತ್ರಿ ಹನ್ನೊಂದರ ತನಕ ಓದಿಸುತ್ತಾರೆ. ಅವರು ಸಿನಿಮಾ, ನಾಟಕ, ಕ್ರೀಡೆಗಳಲ್ಲಿ ಭಾಗವಹಿಸುವಂತಿಲ್ಲ. ಅವರಿಗೆ ಮನರಂಜನೆಯಿಲ್ಲ. ಟಿ.ವಿ. ನೋಡುವಂತಿಲ್ಲ. ವಾರವಾರವೂ ಪರೀಕ್ಷೆಗಳಿರುತ್ತವೆ. ಭಾನುವಾರ ರಜೆಯಿಲ್ಲ. ಹೀಗೆ ಓದಿದ ಅವರು ಪಿಯುಸಿಯಲ್ಲಿ ಟಾಪರ್ಸ್‌ ಅನ್ನಿಸಿಕೊಳ್ಳುತ್ತಾರೆ. ಆಮೇಲೇ
ನಾಗುತ್ತಾರೆ ಅನ್ನುವುದು ಅವರಿಗೆ ಗೊತ್ತಿಲ್ಲ.

ಈ ಪಿಯು ಕಾಲೇಜುಗಳು ತಮ್ಮಲ್ಲಿಗೆ ಬರುವ ಎಲ್ಲಾ ಮಕ್ಕಳು ನೂರಕ್ಕೆ ನೂರು ಅಂಕ ಪಡೆಯಬೇಕು ಅಂತ ನಿರೀಕ್ಷಿಸುತ್ತವೆ. ಪಡೆಯುವಂತೆ ಮಾಡುತ್ತವೆ. ಬಹಳ ಒಳ್ಳೆಯ ಶಾಲೆ ಅಂತ ನನ್ನ ಜೊತೆ ಮಾತಾಡುತ್ತಿದ್ದವರು ಹೇಳಿದರು. ಅದನ್ನು ಕೇಳಿದ ಮತ್ತೊಬ್ಬರು ಹೇಳಿದ ಮಾತು ನನ್ನನ್ನು ಯೋಚಿಸುವಂತೆ ಮಾಡಿತು. ಆ ಶಾಲೆಗಳಿಗೆ ಮಕ್ಕಳು ನೂರಕ್ಕೆ ನೂರು ಅಂಕ ತೆಗೆಯುವುದರಲ್ಲಿ ಮಾತ್ರ ಆಸಕ್ತಿ. ಯಾಕೆಂದರೆ ಎಲ್ಲಾ ಮಕ್ಕಳು ನೂರಕ್ಕೆ ನೂರು ಅಂಕ ತೆಗೆದರೆ ಮುಂದಿನ ವರ್ಷ ಫೀಸು ಹೆಚ್ಚಿಸಬಹುದು ಎಂಬ ಆಲೋಚನೆ. ಅದು ಬಿಟ್ಟರೆ ಮಕ್ಕಳ ಮೇಲೆ ಎಳ್ಳಷ್ಟೂ ಪ್ರೀತಿಯಿಲ್ಲ. ಎಲ್ಲಾ ಮಕ್ಕಳು ನೂರಕ್ಕೆ ನೂರು ಅಂಕ ತೆಗೆದ ನಂತರ ಏನಾಗುತ್ತದೆ ಎಂದು ಯೋಚಿಸಿದಾಗ ಭಯವಾಗುತ್ತದೆ. ಈ ಪಿಯು ಕಾಲೇಜು ಶುರುವಾದಾಗಿನಿಂದ ಯಾವ ಭಾಷೆಯಲ್ಲೂ ಹೊಸ ನಟರು, ಲೇಖಕರು, ಕಲಾವಿದರು, ಮಿಮಿಕ್ರಿ ಮಾಡುವವರು, ನರ್ತಕರು, ಕೊಳಲು ನುಡಿಸುವವರು ಬರುತ್ತಿಲ್ಲ. ಎಲ್ಲರೂ ಅಂಕದ ಹಿಂದೆ ಬಿದ್ದಿದ್ದಾರೆ.

ಈ ಅಂಕಕ್ಕೂ ನಮ್ಮೂರಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೂ ಸಂಬಂಧವಿದೆ ಅಂತ ಈಗ ಅನ್ನಿಸುತ್ತಿದೆ. ನಮ್ಮೂರಲ್ಲಿ ಅಂಕದ ಕೋಳಿಗಳು ಅಂತ ಕೆಲವು ಕೋಳಿಗಳನ್ನು ಬೆಳೆಸುತ್ತಿದ್ದರು. ಅವುಗಳಿಗೆ ಚೆನ್ನಾಗಿ ತಿನ್ನಲು ಕೊಟ್ಟು, ಕೊಬ್ಬಿಸುತ್ತಿದ್ದರು. ಆ ಕೋಳಿಗಳ ಕಾಲುಗಳಿಗೆ ಹರಿತವಾದ ಕತ್ತಿಯನ್ನು ಕಟ್ಟಿ ಕೋಳಿ ಅಂಕಕ್ಕೆ ಬಿಡುತ್ತಿದ್ದರು. ಆ ಕೋಳಿಗಳು ಎದುರಾಳಿ ಕೋಳಿಗಳನ್ನು ಹೊಡೆದು ಉರುಳಿಸಬೇಕಾಗಿತ್ತು. ಇದನ್ನು ಮಿಕ್ಕವರು ಪಣ ಕಟ್ಟಿ ನೋಡಿ ಮಜಾ ತೆಗೆದುಕೊಳ್ಳುತ್ತಿದ್ದರು. ನಾವು ಕೂಡ ಮಕ್ಕಳನ್ನು ಅಂಕದ ಕೋಳಿಗಳಂತೆ ಬೆಳೆಸುತ್ತಿದ್ದೇವಾ?

ಓದು ಯಾಕೆ ಬೇಕು? ಉದ್ಯೋಗ ಹಿಡಿಯುವುದಕ್ಕೆ. ಹಸಿವು ನೀಗಿಸಿಕೊಳ್ಳುವುದಕ್ಕೆ. ಈಗಂತೂ ಹಸಿವೆಯೆಂಬುದೇ ಇಲ್ಲ. ಅದರಲ್ಲೂ ಈ ದುಬಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಹಸಿವೆ ಗೊತ್ತಿಲ್ಲ. ಅವರ ಹೆತ್ತವರು ಒಂದು ಮನೆ ಮೂರು ಸೈಟು ಆಗಲೇ ಮಾಡಿಟ್ಟುಕೊಂಡಿರುತ್ತಾರೆ. ಆದರೂ ಮಕ್ಕಳು ಓದಿ ದೊಡ್ಡ ಸಂಬಳದ ಕೆಲಸ ಹಿಡಿಯಬೇಕು ಅನ್ನುತ್ತಾರೆ. ಈ ಮಕ್ಕಳ ಅವಸ್ಥೆಯನ್ನೇ ನೋಡಿ. ಇಪ್ಪತ್ತೈದನೆಯ ವಯಸ್ಸಿಗೆಲ್ಲ ಮಕ್ಕಳು ಸಕಲ ಪುರುಷಾರ್ಥಗಳನ್ನೂ ಸಾಧಿಸಿಬಿಟ್ಟಿರುತ್ತಾರೆ. ನಾವೆಲ್ಲ ಸ್ವಂತ ಮನೆ ಸ್ವಂತ ಕಾರು ಹೊಂದುವುದಕ್ಕೆ ನಲವತ್ತು ವರ್ಷದ ತನಕ ಕಾಯಬೇಕಾಯಿತು. ಬೇರೆ ಬೇರೆ ಹುದ್ದೆಗಳಲ್ಲಿ ಇರುವವರು ಸ್ವಂತ ಮನೆ ಕಟ್ಟಲು 60 ವರ್ಷದ ತನಕ ದುಡಿಯುತ್ತಿರಬೇಕಾಗುತ್ತದೆ. ಮನೆ, ಕಾರು ಮುಂತಾದ ಮೂಲಭೂತ ಸೌಲಭ್ಯಗಳನ್ನು ಹೊಂದಲು ಶ್ರಮಿಸಬೇಕಾಗುತ್ತದೆ. ಅದು ಬದುಕಿನ ಉದ್ದೇಶವೂ ಆಗುತ್ತದೆ. ‘ಅಂತೂ ರಿಟೈರಾಗೋ ಮುಂಚೆ ಒಂದು ಮನೆ ಕಟ್ಟಿದೆ ಕಣಯ್ಯ’ ಅಂತ ಐವತ್ತೆಂಟು ವರ್ಷದ ಗೆಳೆಯ ಹೇಳುವ ಮಾತಲ್ಲಿ ಹೆಮ್ಮೆಯಿರುತ್ತದೆ.

ಈಗಿನ ಹುಡುಗರು ಇಪ್ಪತ್ತೈದನೇ ವರ್ಷಕ್ಕೇ ಸ್ವಂತ ಮನೆ ಸ್ವಂತ ಕಾರು ಹೊಂದಿರುತ್ತಾರೆ. ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸೂ ಇರುತ್ತದೆ. ಆ ನಂತರದ ಜೀವನದ ಸಾರ್ಥಕತೆ ಏನು ಅನ್ನುವುದು ಅವರಿಗೇ ಗೊತ್ತಿರುವುದಿಲ್ಲ. ಮುಂದೇನು ಮಾಡುವುದು ಅಂತ ಗೊತ್ತಾಗುವುದೂ ಇಲ್ಲ. ಕಲೆಯ ಸ್ಪರ್ಶವಿರುವುದಿಲ್ಲ. ಅಂಥವರು ಮುಂದೇನಾಗುತ್ತಾರೆ ಅಂತ ನನಗೂ ಗೊತ್ತಿಲ್ಲ.

ನಾವೀಗ ಮಕ್ಕಳಿಗೆ ಕನಸು ಕಾಣುವುದನ್ನು ಕಲಿಸುತ್ತಿಲ್ಲ. ಅಸಾಧ್ಯವನ್ನು ಸಾಧ್ಯವಾಗಿಸು ಅಂತ ಪಾಠ ಹೇಳುತ್ತಿರುತ್ತೇವೆ. ಅಜಿತ್ ನಿನಾನ್ ಅವರ ವ್ಯಂಗ್ಯಚಿತ್ರವೊಂದನ್ನು ನೋಡುತ್ತಿದ್ದೆ. ಅದರಲ್ಲಿ ಒಂದು ಆನೆ. ತನ್ನ ಮರಿಗೆ ಹೇಳುತ್ತಿರುತ್ತದೆ: ‘ಇದೀಗ ನೀನು ಹಾರುವುದನ್ನು ಕಲಿಯಬೇಕು’

ನಾವು ಮಾಡುತ್ತಿರುವುದು ಅದನ್ನೇ. ಆನೆಗೆ ಆಕಾಶದಲ್ಲಿ ಹಾರುವುದನ್ನು ಕಲಿಸುವುದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.