ADVERTISEMENT

ಎಲ್ಲ ಮರೆತಿರುವಾಗ...

ಪ್ರಕಾಶ್ ರೈ
Published 22 ಸೆಪ್ಟೆಂಬರ್ 2018, 20:40 IST
Last Updated 22 ಸೆಪ್ಟೆಂಬರ್ 2018, 20:40 IST
369
369   

ಬೆಂಗಳೂರಿನಲ್ಲಿ ಒಬ್ಬರು ಕ್ಷೌರಿಕರಿದ್ದರು. ಹಳೆಯ ಪುಟ್ಟ ಅಂಗಡಿ, ಪಾದರಸ ಉದುರಿಹೋಗಿ ಮಾಸಿದ ಪ್ರತಿಬಿಂಬ ತೋರುವ ಕನ್ನಡಿ, ಯಾವುದೋ ಕಾಲದ್ದು ಎಂಬಂತೆ ತೋರುವ ಒಂದೇ ಒಂದು ಕುರ್ಚಿ. ಅದಕ್ಕಿಂತ ಆಧುನಿಕವಾದ ಅನೇಕ ಕ್ಷೌರದಂಗಡಿಗಳು ಅಲ್ಲಲ್ಲಿ ಬಂದಿದ್ದವು. ಪ್ರಖರ ಬೆಳಕಿನ, ಚೆಂದದ ಒಳಾಂಗಣದ ಸೆಲೂನುಗಳಲ್ಲಿ ನೀಟಾದ ಕುರ್ಚಿ, ಹೊಳೆಯುವ ಕನ್ನಡಿ ಎಲ್ಲವೂ ಇದ್ದರೂ ಅನೇಕರು ಈ ಹಳೆಯ ಅಂಗಡಿಯ ಕ್ಷೌರಿಕನ ಬಳಿಗೇ ಹೋಗುತ್ತಿದ್ದರು. ಅದಕ್ಕೆ ಕಾರಣ ಅವನು ಹೇಳುತ್ತಿದ್ದ ಕತೆಗಳು. ಪ್ರತಿಸಲ ಹೋದಾಗಲೂ ಅವನು ಅಚ್ಚರಿ ಹುಟ್ಟಿಸುವ ಕತೆಗಳನ್ನು ಹೇಳುತ್ತಿದ್ದ.

ಕೆಲವು ವರ್ಷಗಳ ನಂತರ ಅದೇನಾಯಿತೋ ಏನೋ, ಅವನು ಹೇಳಿದ ಕತೆಗಳನ್ನೇ ಮತ್ತೆ ಮತ್ತೆ ಹೇಳಲು ಶುರುಮಾಡಿದ. ‘ಇದು ಗೊತ್ತು ಕಣಯ್ಯ’ ಅಂತ ಗಿರಾಕಿ ಹೇಳಿದರೂ ಮತ್ತೆ ಮತ್ತೆ ಅದನ್ನೇ ಹೇಳುತ್ತಿದ್ದ. ಕೊನೆಕೊನೆಗೆ ಅವನ ಕತೆಗೆ ಹೆದರಿ ಅವನಲ್ಲಿಗೆ ಗಿರಾಕಿಗಳು ಬರುವುದನ್ನೇ ಬಿಟ್ಟುಬಿಟ್ಟರು. ಅವನಿಗೆ ಅರಳುಮರುಳು ಅಂತ ಮಾತಾಡಿಕೊಳ್ಳತೊಡಗಿದರು. ಅವನ ಅಂಗಡಿಯ ಕನ್ನಡಿಯಲ್ಲಿ ಕಾಣುವ ಮಾಸಲು ಬಿಂಬದಂತೆ ಅವನೂ ಎಲ್ಲರ ಕಣ್ಣಿಗೆ ಕಾಣತೊಡಗಿದ.

ಅವನಿಗೆ ಏನಾಗಿತ್ತು ಅನ್ನುವುದು ನನಗೆ ಗೊತ್ತಾದದ್ದು ಆಲ್‌ಜೈಮರ್ ಎಂಬ ಕಾಯಿಲೆಯ ಬಗ್ಗೆ ತಿಳಿದುಕೊಂಡ ನಂತರವೇ. ಅಲ್ಲಿಯ ತನಕ ಅವನಿಗೆ ಅರಳುಮರಳು ಅಂತಲೇ ನಾನೂ ಭಾವಿಸಿದ್ದೆ. ಎಲ್ಲರ ಮನೆಯಲ್ಲೂ ವಯಸ್ಸಾದವರು ಇದ್ದಕ್ಕಿದ್ದಂತೆ ಏನೇನೋ ಮಾತಾಡುವುದು, ನೆನಪೇ ಇಲ್ಲದಂತೆ ವರ್ತಿಸುವುದು, ಯಾರೋ ಬಂದರೆ ‘ಬಂದ್ಯಾ ಮಗನೇ ಬಾ’ ಅನ್ನುವುದು, ಮಗಳು ಬಂದು ನಿಂತರೆ ‘ಯಾರವ್ವ ನೀನು?’ ಎಂದು ಕೇಳುವುದು... ಇಂಥದ್ದೆಲ್ಲ ನಡೆಯುತ್ತಿರುತ್ತದೆ.

ADVERTISEMENT

ಮೊನ್ನೆ ಮೊನ್ನೆಯ ತನಕ ಇದೊಂದು ಕಾಯಿಲೆ ಅನ್ನುವುದು ಯಾರಿಗೂ ಗೊತ್ತಿದ್ದಂತಿರಲಿಲ್ಲ. ಅದು ನೆನಪಿನ ಕೋಶಗಳನ್ನು ಕಳೆದುಕೊಳ್ಳುವ ಒಂದು ರೋಗ ಅನ್ನುವುದು ಮೊದಲು ಗೊತ್ತಾಯಿತು. ಅದಕ್ಕೆ ಔಷಧಿ ಇಲ್ಲ ಅನ್ನುವುದು ಆಮೇಲೆ ಗೊತ್ತಾಯಿತು. ಅದರ ಬಗ್ಗೆ ಅಧ್ಯಯನ ಮಾಡುತ್ತಾ ಹೋದ ಹಾಗೆ ಆಘಾತಕಾರಿ ಸಂಗತಿಗಳು ತಿಳಿಯುತ್ತಾ ಹೋದವು. ಇವತ್ತು ಎಷ್ಟು ಮಂದಿ ಆಲ್‌ಜೈಮರ್ ಮತ್ತು ಡಿಮೆನ್ಶಿಯಾದಿಂದ ನರಳುತ್ತಿದ್ದಾರೆ ಅಂತ ನೋಡಿದರೆ ಗಾಬರಿಯಾಗುತ್ತದೆ. ಭಯವಾಗುತ್ತದೆ. ಯಾವುದೋ ಹೆಸರು ಮರೆತರೆ ನಮ್ಮನ್ನೂ ಡಿಮೆನ್ಶಿಯಾ ಆವರಿಸಿಕೊಂಡಿತಾ ಎಂದು ಆತಂಕವಾಗುತ್ತದೆ.

ಈ ನೆನಪು ಮತ್ತು ಮರೆವಿನ ಚರಿತ್ರೆಯೇ ಕುತೂಹಲಕಾರಿಯಾಗಿದೆ. ಕೆಲವರಿಗೆ ಪೂರ್ವಜನ್ಮದ ನೆನಪುಗಳಿರುತ್ತವೆ ಎಂದು ಎಲ್ಲೋ ಓದಿದ ನೆನಪು. ಅದೆಲ್ಲ ಸುಳ್ಳು ಅಂತ ಗೊತ್ತಿದ್ದರೂ ಅಂಥ ಕತೆಗಳು ಕುತೂಹಲಕಾರಿಯಂತೂ ಆಗಿರುತ್ತವೆ. ಇದ್ದಕ್ಕಿದ್ದಂತೆ
ಚಿಕ್ಕಬಳ್ಳಾಪುರದಲ್ಲಿ ಹುಟ್ಟಿದ ಹುಡುಗನೊಬ್ಬ ಫ್ರೆಂಚ್ ಭಾಷೆಯಲ್ಲಿ ಮಾತಾಡುತ್ತಾನೆ. ‘ನನ್ನ ಅಪ್ಪ ಅಮ್ಮ ಪ್ಯಾರಿಸ್ಸಿನಲ್ಲಿದ್ದಾರೆ’ ಅನ್ನುತ್ತಾರೆ. ಅವರ ಹೆಸರು ಹೇಳುತ್ತಾನೆ. ಅಲ್ಲಿಗೆ ಹೋಗಿ ವಿಚಾರಿಸಿದರೆ ಅಲ್ಲಿ ಅದೇ ಹೆಸರಿನವರು ಇದ್ದರು ಅನ್ನುವುದು ಗೊತ್ತಾಗುತ್ತದೆ. ಇದು ವಿಜ್ಞಾನವನ್ನು ಮೀರಿದ ಸತ್ಯ ಅಂತ ಮಾತಾಡಿಕೊಳ್ಳುತ್ತಾರೆ.

ಈಗ ನೋಡಿದರೆ, ಪೂರ್ವಜನ್ಮದ್ದು ಹಾಗಿರಲಿ, ಈ ಜನ್ಮದ ನೆನಪುಗಳೇ ಕೈ ಕೊಡುತ್ತಿವೆ. ಕೈ ಕೊಟ್ಟ ನೆನಪುಗಳಲ್ಲೇ ನಮ್ಮ ಬದುಕು ಅಡಗಿರುತ್ತದಂತೆ. ಮನುಷ್ಯ ನೆನಪಿಟ್ಟುಕೊಳ್ಳುವುದು ಯಾತನೆಯನ್ನು ಮಾತ್ರ. ಸುಂದರವಾದ ಕ್ಷಣಗಳು ಅದು ಹೇಗೋ ನಮ್ಮ ನೆನಪಿನ ಕೋಶದಿಂದ ಮರೆಯಾಗಿರುತ್ತವೆ. ಅವುಗಳನ್ನು ನಾವು ಕಷ್ಟಪಟ್ಟು ನೆನಪಿಸಿಕೊಳ್ಳಬೇಕಾಗುತ್ತದೆ.

ಇತಿಹಾಸ ಮತ್ತು ಚರಿತ್ರೆ ಮರೆಗೆ ಸರಿಯುತ್ತವೆ ಅಂದುಕೊಂಡಿದ್ದೇವೆ. ಆದರೆ ಭವಿಷ್ಯದಲ್ಲಿ ಅವುಗಳ ಪ್ರಭಾವ ಗಾಢವಾಗಿರುತ್ತದೆ. ‘ನೀನೇನಾಗಿದ್ದೆ ಅಂತ ಒಮ್ಮೆ ನೆನಪು ಮಾಡಿಕೋ’ ಅಂತ ಹೇಳುವವರನ್ನು ನೋಡಿದ್ದೇವೆ. ‘ನೀನೇನಾಗುತ್ತೀಯ ಅಂತ
ಊಹಿಸಿಕೋ’ ಅಂತ ಹೇಳುವವರು ಸಿಗುವುದಿಲ್ಲ. ನಮ್ಮ ನೆನಪಿನ ಕೋಶದೊಳಗೆ ನಾವು ಪಡೆದ, ಅನುಭವಿಸಿದ ಕ್ಷಣಗಳು ಜೇನುಗೂಡಿನ ಕಣ್ಣುಗಳಂತೆ ಒಂದರ ಪಕ್ಕದಲ್ಲೊಂದು ಕೂಡಿಕೊಳ್ಳುತ್ತಾ ಅದೊಂದು ನೆನಪಿನ ಗೂಡೇ ಆಗಿಬಿಡುತ್ತದೆ. ಆ ನೆನಪಲ್ಲಿ ಯಾವುದಕ್ಕೆ ಕೈ ಹಾಕಿದರೂ ಆ ಕ್ಷಣ ನಮ್ಮ ಮುಂದೆ ಪ್ರತ್ಯಕ್ಷವಾಗಿನಾವು ಆ ಕಾಲಕ್ಕೆ ಹೋಗಿಬಿಡುತ್ತೇವೆ. ಆದರೆ ಆ ಕೋಶವೇ ನಾಶವಾದರೆ ಏನಾಗುತ್ತದೆ?

ನೆನಪುಗಳಿಲ್ಲದೇ ಮನಸ್ಸು ಬದುಕಬಲ್ಲದು, ದೇಹ ಜೀವಿಸಲಾರದು ಅನ್ನುತ್ತದೆ ವಿಜ್ಞಾನ. ನಮ್ಮ ಕೋಶಕೋಶಕ್ಕೂ ಯಾವ ವೈರಸ್ ಬಂದಾಗ ದಾಳಿ ಮಾಡಬೇಕು, ಯಾವ ಬ್ಯಾಕ್ಟೀರಿಯವನ್ನು ಹೊಡೆದಟ್ಟಬೇಕು ಎಂಬ ದಟ್ಟ ನೆನಪಿರುತ್ತದೆ. ಆ ನೆನಪು ದೇಹಕ್ಕೆ ಬೇಕು. ಶತ್ರು ಯಾರು ಮಿತ್ರ ಯಾರು ಅನ್ನುವುದಷ್ಟೇ ದೇಹಕ್ಕೆ ಗೊತ್ತಿರುತ್ತದೆ. ಆದರೆ ಮನಸ್ಸಿಗೆ ಶತ್ರುಗಳಿಲ್ಲ. ಮಿತ್ರರೂ ಇಲ್ಲ. ಅಲ್ಲಿರುವುದು ಅನುಭವಗಳು ಮಾತ್ರ.

ಒಂದು ಪುಟ್ಟ ಘಟನೆ ನೆನಪಾಗುತ್ತದೆ. ನನ್ನ ಗುರುಗಳಾದ ಕೆ.ಬಾಲಚಂದರ್, ಸಿನಿಮಾ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಅದು ನಾಯಕ ನಟನೊಬ್ಬನ ಸಿನಿಮಾ ಸಮಾರಂಭ. ಆ ಸಿನಿಮಾದಲ್ಲಿ ನಾನು ನಟಿಸಿರಲಿಲ್ಲ. ಗುರುಗಳು ಅಲ್ಲಿಗೆ ಹೋದವರೇ, ನನ್ನ ಮತ್ತು ಆ ನಾಯಕ ನಟನ ಕುರಿತು ಮಾತಾಡಿದ್ದರಂತೆ. ನಾನು ಮತ್ತು ಆ ನಾಯಕ ನಟ ಮೂರೋ ನಾಲ್ಕೋ ಸಿನಿಮಾಗಳಿಗೆ ಮುಂಚೆ ಜೊತೆಯಾಗಿ ನಟಿಸಿದ್ದೆವು. ಅವರ ಮನಸ್ಸಿನಲ್ಲಿ ಆ ಸಿನಿಮಾ ಇತ್ತು.

ಅವರು ಕಾರ್ಯಕ್ರಮ ಮುಗಿಸಿ ವಾಪಸ್ಸು ಹೋದ ನಂತರ ಆ ನಟ ನನಗೆ ಫೋನ್ ಮಾಡಿ, ‘ನಿನ್ನ ಗುರುಗಳಿಗೆ ತಲೆಕೆಟ್ಟಿದೆ. ನೀನಿಲ್ಲದ ಸಿನಿಮಾದಲ್ಲಿ ನಿನ್ನ ಬಗ್ಗೆ ಮಾತಾಡಿದ್ದಾರೆ’ ಅಂದ. ಏನೇನೋ ಮಾತಾಡಿದರು ಅಂತಲೂ ಹೇಳಿದ. ನಾನು ಯಾಕೆ ಹೀಗಾಗ್ತಿದೆ ಅಂತ ಗಾಬರಿಯಾಗಿ ಗುರುಗಳ ಮನೆಗೆ ಹೋದೆ.

ಅವರು ನೊಂದಿದ್ದರು. ನೆನಪಿನ ಕೋಶಗಳು ಸಾಯತೊಡಗಿದ್ದವು. ಅದು ಅವರಿಗೂ ಗೊತ್ತಾಗುತ್ತಿತ್ತು. ‘ನಿನ್ನ ಸಿನಿಮಾ ಅಂದುಕೊಂಡು ಮಾತಾಡಿದೆ. ನನಗೆ ಗೊತ್ತಾಗಲಿಲ್ಲ. ನೆನಪೇ ಆಗ್ತಿಲ್ಲ. ಭಾಷಣಕ್ಕೆ ಹೋಗೋದಕ್ಕೆ ಭಯವಾಗ್ತಿದೆ. ಎಲ್ಲಿಗೆ ಹೋಗೋದಿದ್ದರೂ ಎಲ್ಲವನ್ನೂ ಬರೆದುಕೊಂಡು ಹೋಗ್ತೇನೆ’ ಎಂದರು. ನನಗೆ ನೋವಾಯಿತು. ಎಷ್ಟೆಷ್ಟೋ ಸಿನಿಮಾ ಮಾಡಿದವರು. ದೊಡ್ಡ ದೊಡ್ಡ ಸಿನಿಮಾಗಳನ್ನು ಕೊಟ್ಟವರು. ಇಡೀ ಚಿತ್ರಕತೆಯನ್ನೂ ಸಂಭಾಷಣೆಯನ್ನೂ ನೆನಪಿಟ್ಟುಕೊಳ್ಳಬಲ್ಲವರು. ಅವರ ನೆನಪು ಹೋಗಿಬಿಟ್ಟಿದೆ. ಅದನ್ನು ಮರಳಿ ತರುವ ವಿದ್ಯೆ ನಮಗೆ ಗೊತ್ತಿಲ್ಲ.

ಆಮೇಲೆ ನೋಡಿದರೆ, ಪ್ರತಿ ಮನೆಯಲ್ಲೂ ಅಂಥವರಿರುತ್ತಾರೆ ಅಂತ ಗೊತ್ತಾಯಿತು. ಅವರ ವಿಸ್ಮೃತಿಯನ್ನು ನಾವು ಅರ್ಥ ಮಾಡಿಕೊಳ್ಳುತ್ತಿಲ್ಲ. ಅವರಿಗೆ ಅರಳುಮರಳು ಅನ್ನುತ್ತೇವೆ. ಏನೇನೋ ಮಾತಾಡಬೇಡಿ ಅಂತ ಬೈಯುತ್ತೇವೆ. ತೆಲೆಕೆಟ್ಟವರಂತೆ ರೇಗಾಡುತ್ತೇವೆ. ಆದರೆ ಅದೊಂದು ಸ್ಥಿತಿ ಅನ್ನುವುದು ನಮಗೆ ಗೊತ್ತಾಗುತ್ತಿಲ್ಲ. ನಾಳೆ ನಮ್ಮನ್ನು ಕಾಡಬಹುದಾದ ಮರೆವು ಅದು.

ಅವರಿಗೊಂದು ಘನತೆ ಕೊಡುವುದು ಹೇಗೆ ಅಂತ ಯೋಚಿಸುತ್ತಿದ್ದೇನೆ. ‘ಇದು ಸಹಜ... ವಯಸ್ಸಾದ ಮೇಲೆ ಬರುವ ಸಮಸ್ಯೆ’ ಅಂತ ಎಲ್ಲವನ್ನೂ ಚಾಪೆಯ ಕೆಳಗೆ ಸರಿಸುತ್ತಾ ಕೂತುಬಿಟ್ಟರೆ ಪ್ರಯೋಜನ ಇಲ್ಲ. ಹಾಗಿದ್ದರೆ ಅದನ್ನು ಎದುರಿಸುವ ವಿಧಾನ ಯಾವುದು? ಅದು ಗೊತ್ತಿಲ್ಲ. ವೈದ್ಯರುಗಳೆಲ್ಲ ಕೈ ಚೆಲ್ಲಿ ಕೂತಿದ್ದಾರೆ.

ನನ್ನ ಬಾಲ್ಯದಲ್ಲಿ ನಾನು ಕಂಡ ಮತ್ತೊಂದು ಘಟನೆಯಿದೆ. ಅದು ದೇವದಾಸ್ ಎಂಬುವನದ್ದು. ಅವನು ಒಂದು ದೊಡ್ಡಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಮನೆಯವರು ಹೇಳಿದಕೂಲಿಗಳನ್ನೆಲ್ಲ ಮಾಡುತ್ತಿದ್ದ. ಅವನನ್ನು ಚೆನ್ನಾಗಿ ಆ ಮನೆಯವರು ದುಡಿಸಿಕೊಳ್ಳುತ್ತಿದ್ದರು. ಆಮೇಲೆ ನನಗೆ ಗೊತ್ತಾದ ಸತ್ಯವೆಂದರೆ ಅವನೇ ಆ ಇಡೀ ಮನೆಗೆ, ಆಸ್ತಿಗೆ ಒಡೆಯ. ಆದರೆ ಅವನಿಗೆ ನೆನಪು ಕೈ ಕೊಟ್ಟಿದೆ. ತಾನು ಯಜಮಾನ ಅನ್ನುವುದು ಗೊತ್ತಿಲ್ಲ.

ಆಮೇಲೆ ಒಂದು ದಿನ ನೋಡಿದರೆ ಅವನು ಸತ್ತು ಹೋಗಿದ್ದ. ಈಗ ನೆನಪಿಸಿಕೊಂಡರೆ ಅವನದು ಸಹಜ ಸಾವಲ್ಲ, ಕೊಲೆ ಇದ್ದಿರಬಹುದು ಎಂಬ ಗುಮಾನಿ ನನಗೆ. ಎಲ್ಲಿ ಅವನಿಗೆ ನೆನಪು ಮರುಕಳಿಸುತ್ತದೋ ಎಂಬ ಭಯಕ್ಕೆ ಅವನನ್ನು ಅವರೆಲ್ಲ ಸೇರಿ ಕೊಂದಿರಬಹುದು. ಅವನನ್ನು ಕೊಂದದ್ದು ಅವರೋ ನೆನಪೋ?

ಇದ್ದಕ್ಕಿದ್ದಂತೆ ನೆನಪು ಹೋದರೆ ಗತಿಯೇನು? ಅವರನ್ನೇ ನಂಬಿಕೊಂಡವರ ಗತಿಯೇನು? ಪ್ರೀತಿಸಿದವರ ಪಾಡೇನು ಎಂಬ ಪ್ರಶ್ನೆ ಒಂದು ದಿನ ಇದ್ದಕ್ಕಿದ್ದ ಹಾಗೆ ಮೂಡಿದ್ದು ಅಮ್ಮನಿಗೆ ನೆನಪು ಕೈ ಕೊಟ್ಟಾಗ. ಆದರೆ ಅದಕ್ಕೆ ಕಾರಣ ಆಲ್‌ಜೈಮರ್ ಅಲ್ಲ. ಅಮ್ಮ ಆಸ್ಪತ್ರೆಯಲ್ಲಿದ್ದರು. ಮೆದುಳಿನ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು. ಅಮ್ಮನಿಗೆ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆ ಆಗಿದೆ ಅಂತ ಡಾಕ್ಟರು ಅಂದಿದ್ದರು. ಅವರಿಗೆ ಯಾರ ಗುರುತೂ ಸಿಗುತ್ತಿರಲಿಲ್ಲ. ಮಗನ ಹತ್ತಿರ ಕಪ್ಪು ಕಾರು ಇದೆ ಅನ್ನುತ್ತಿದ್ದಳು. ಮಗ ಬರುತ್ತಾನೆ ಅನ್ನುತ್ತಿದ್ದಳು. ಮಗ ಒಬ್ಬನೇ ಆಕೆಗೆ ನೆನಪಿದ್ದದ್ದು. ಮತ್ತೆ ಅಮ್ಮನಿಗೆ ನೆನಪು ವಾಪಸ್ಸು ಬರುವಂತೆ ಮಾಡುವುದು ಹೇಗೆ ಅಂತ ಯೋಚಿಸಿದೆ. ಅಮ್ಮನ ಬಾಲ್ಯಗೆಳತಿಯರನ್ನೆಲ್ಲ ಕರೆದುಕೊಂಡು ಬಂದೆ. ಅಮ್ಮನ ಜೊತೆ ಮಾತಾಡಲು ಹೇಳಿದೆ. ಆಕೆಯ ಹಳೆಯ ಕತೆಗಳನ್ನು ನನಗೆ ಹೇಳು ಎಂದು ಕೇಳುತ್ತ ಕೂತೆ. ಈಗಲೂ ನೆನಪಿಸಿಕೊಂಡು ಕಥೆಗಳನ್ನು ಹೇಳುತ್ತಲೇ ಇದ್ದಾಳೆ. ಆದರೂ ಅಮ್ಮ ಎಲ್ಲ ಮರೆತವಳಂತೆ ಇದ್ದಾಗಿನ ದಿನಗಳನ್ನು ನಾನಂತೂ ಮರೆಯಲಾರೆ.

ನೆನಪು ಎಲ್ಲಿರುತ್ತದೆ? ದುಷ್ಯಂತ ಶಕುಂತಲೆಗೆ ಕೊಟ್ಟ ಉಂಗುರ ಕಳೆದುಹೋದಾಗ ನೆನಪೂ ಮರೆತುಹೋಗುತ್ತದೆ. ಮತ್ತೆ ಆ ಉಂಗುರ ಸಿಕ್ಕಾಗಲೇ ನೆನಪು ಮರಳಿ ಬರುವುದು. ಎಲ್ಲರಿಗೂ ಆ ಉಂಗುರ ಸಿಗುತ್ತದಾ? ಆ ನೆನಪಿನುಂಗುರ ಯಾವುದು? ಎಲ್ಲಿ ಅದನ್ನು ಹುಡುಕುವುದು? ಯಾವ ಶಚೀತೀರ್ಥದ ಆಳದಲ್ಲಿ ಅದು ಮುಳುಗಿದೆಯೋ ಯಾರಿಗೆ ಗೊತ್ತು.

ಮಾವೋತ್ಸೆ ತುಂಗನ ಹುಚ್ಚಾಟಗಳನ್ನು ಕಂಡ ಕಂಬಾರರು ‘ಮರೆತೇನಂದರ ಮರೆಯಲಿ ಹ್ಯಾಂಗ ಮಾವೋತ್ಸೆ ತುಂಗಾ’ ಅಂತ ಬರೆದರು. ನೆನಪು ಕಳೆದುಕೊಂಡು ಯಾವುದೋ ಜ್ವರದಲ್ಲಿ ಕನವರಿಸುವಂತೆ ಮಾತಾಡುತ್ತಿದ್ದ ಮೂಕಜ್ಜಿಯ ಕತೆಯನ್ನು ಕಾರಂತರು ಬರೆದರು. ನೆನಪನ್ನು ಬ್ಯಾಂಕಿನ ಲಾಕರಿನಲ್ಲಿ ಭದ್ರವಾಗಿಟ್ಟು ಬೇಕಿದ್ದಾಗ ತರುವಂತಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ. ಅಷ್ಟಕ್ಕೂ ನೆನಪಿಗೆ ಕನ್ನ ಹಾಕುವ ಆಲ್‌ಜೈಮರ್ ಎಂಬ ಕಳ್ಳನನ್ನೂ ಡಿಮೆನ್ಷಿಯಾ ಎಂಬ ದರೋಡೆಕೋರನನ್ನೂ ದಂಡಿಸುವ ಉಪಾಯಗಳನ್ನು ಯಾರಾದರೂ ಕಂಡುಹಿಡಿಯಲಿ ಅಂತ ಈ ಕ್ಷಣ ಅನ್ನಿಸುತ್ತಿದೆ.

ಮರೆಯಬಾರದ್ದನ್ನು ಮರೆಯುವ ಮರೆಯಬೇಕಾದ್ದನ್ನು ನೆನಪಿಸಿಕೊಳ್ಳುವ ಮನಸ್ಸೇ, ನಿನ್ನಷ್ಟು ಎಡಬಿಡಂಗಿಯನ್ನು ನಾನು ಎಲ್ಲೂಕಂಡಿಲ್ಲ. ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರುವ ನೆನಪುಗಳು ಕಹಿಯಾಗಿರಲಿ ಸಿಹಿಯಾಗಿರಲಿ ನಮ್ಮನ್ನು
ಒಂಟಿಯಾಗಿಸುವುದಿಲ್ಲ. ಬದುಕಿದ ಬದುಕನ್ನು ನೆನಪಿಸುತ್ತ ಕಾಡುತ್ತವೆ. ಆದರೆ ಆಲ್‌ಜೈಮರ್, ಡಿಮೆನ್ಷಿಯಾ ಇದೆಯಲ್ಲ, ಇದು ಎಲ್ಲವನ್ನೂ ಮರೆಸಿ ಕೊನೆಗೆ ತನ್ನನ್ನೇ ಮರೆಸಿ ಮನುಷ್ಯನನ್ನು ಒಂಟಿಯನ್ನಾಗಿಸುತ್ತದೆ. ನಮ್ಮ ಸುತ್ತಲಿನ ಅಂಥ ಹಿರಿಯರು– ಅಂಥ ಮನುಷ್ಯರನ್ನು ಘನತೆಯಿಂದ ಬದುಕುವಂತೆ ನೋಡಿಕೊಳ್ಳೋಣ. ಯಾಕೆಂದರೆ ಎಲ್ಲವನ್ನೂ ಮರೆತದ್ದು ಅವರು; ನಾವಲ್ಲವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.