ಬದುಕಿನಲ್ಲಿ ತೃಪ್ತಿ ತಂದ ವಿಷಯ, ಮಂತ್ರಾಲಯದಲ್ಲಿ ಸಣ್ಣ ಮನೆ ಕಟ್ಟಿದ್ದು. ಮೊದಲು ಅಲ್ಲಿಗೆ ಹೋದದ್ದು 65ನೇ ಇಸವಿಯಲ್ಲಿ. ಸ್ನೇಹಿತ ವೀಡಾಲ್ ನಾಗರಾಜ್ ರಾಘವೇಂದ್ರ ಸ್ವಾಮಿಯ ಪರಮಭಕ್ತನಾಗಿದ್ದ. ಅಂಬುಜಾ, ನಾನು ಮೊದಲು ಅಲ್ಲಿಗೆ ಹೋಗಲು ಅವನೇ ಕಾರಣ. ಆಗ ಅಲ್ಲಿದ್ದದ್ದು ಬರೀ ಒಂದು ಛತ್ರ. ಎರಡು ಚಿಕ್ಕ ಗೆಸ್ಟ್‌ಹೌಸ್‌ಗಳಿದ್ದವು. ಅವುಗಳಲ್ಲಿ ಒಂದು ನಟಿ ಜಮುನಾ ಅವರದ್ದು. ಇನ್ನೊಂದು ಬೆಂಗಳೂರಿನ ಹರ್ಷ ಎಲೆಕ್ಟ್ರಿಕಲ್ಸ್‌ನವರು ಕಟ್ಟಿಸಿದ್ದು. ಮಠದ ಊಟ ಅಷ್ಟೇ ಆಗ ಗ್ಯಾರಂಟಿ. ಹೊರಗೆ ಕಾಫಿ ಕೂಡ ಸಿಗುತ್ತಿರಲಿಲ್ಲ. ಮೊದಲ ಸಲ ಮಂತ್ರಾಲಯಕ್ಕೆ ಹೋದಾಗ ಛತ್ರದ ಆವರಣದ ಮರದ ಕೆಳಗೆ ಮಲಗಿದ್ದೆ. ಆಗ ರಾಯರಲ್ಲಿ ನಾನು ಸಿನಿಮಾ ನಟನಾಗಬೇಕು, ಗೆಲುವು ಕಾಣುವಂತಾಗಬೇಕು ಎಂದಷ್ಟೇ ಬೇಡಿಕೊಳ್ಳಲಿಲ್ಲ; ದುಡ್ಡು ಬಂದರೆ ಇಲ್ಲಿ ಮನೆ ಕಟ್ಟಿ, ಆಗಾಗ ನಿನ್ನ ದರ್ಶನ ಮಾಡಬೇಕು ಎಂದೂ ಕೇಳಿಕೊಂಡೆ.
ಕೊನೆಗೂ 1984ರಲ್ಲಿ ಅಲ್ಲಿ ಮನೆ ಕಟ್ಟಿ, ಗೃಹಪ್ರವೇಶ ಮಾಡಿದೆ. ಅದಕ್ಕಿಂತ ಬೇರೆ ಭಾಗ್ಯವಿಲ್ಲ. ಒಂದು ಕಾಲದಲ್ಲಿ ನಾನು ಕಟ್ಟಿದ ಮನೆಗಳನ್ನೆಲ್ಲಾ ಮಾರಿದೆ. ಆದರೆ ಇದುವರೆಗೆ ಆ ಮನೆಯನ್ನು ಮಾರಿಲ್ಲ. ಅದು ಮಾರಲು ಆಗದ ಮನೆ. ಆ ದೇವರೇ ನನ್ನಿಂದ ಕಟ್ಟಿಸಿದ್ದು.
ಮಂತ್ರಾಲಯದಲ್ಲಿ ಶೇಷಗಿರಿ ಎಂಬ ಆಪ್ತ. ಅಲ್ಲಿನ ಪಂಚಾಯತಿಯ ಅಧ್ಯಕ್ಷನೂ ಆಗಿದ್ದ. ಅವನಿಗೆ ಸಿನಿಮಾ ಗೀಳು. ಸಿನಿಮಾದವರು ಚಿತ್ರೀಕರಣಕ್ಕೋ, ದರ್ಶನಕ್ಕೋ ಹೋದರೆ ಅವನೇ ನೋಡಿಕೊಳ್ಳುತ್ತಿದ್ದ. ಅಲ್ಲಿ `ಆದಿವಾನಿ' ಎಂಬ ಚಿತ್ರಮಂದಿರ ಇತ್ತು. ಅದರಲ್ಲಿ ಅವನು ಬೆಳಗಿನ ಆಟ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸುತ್ತಿದ್ದ. ನನ್ನಿಂದಲೇ ಕೆಲವು ಚಿತ್ರಗಳನ್ನು ಅವನು ಹಣ ಕೊಟ್ಟು ಪ್ರದರ್ಶಿಸಲು ಪಡೆದದ್ದೂ ಇದೆ.
1974ರ ನಂತರ ರಾಜ್‌ಕುಮಾರ್ ಜೊತೆ ನಟಿಸಲಾಗಲೀ ಅವರ ಸಿನಿಮಾಗಳನ್ನು ನಿರ್ಮಿಸಲಾಗಲೀ ಸಾಧ್ಯವಾಗಲಿಲ್ಲ. ಅವರ ಮಕ್ಕಳ ಚಿತ್ರಗಳಲ್ಲೂ ನಾನು ನಟಿಸಲಿಲ್ಲ. ವಿಷ್ಣು ದೂರವಾದ. ರಜನಿ ದೂರವಾದ. ಕೊನೆಗೆ ನಾನು ಮೂರು ಚಿತ್ರಗಳಲ್ಲಿ ನಾಯಕನನ್ನಾಗಿಸಿದ್ದ ಶಂಕರ್‌ನಾಗ್ ಅಪಘಾತದಿಂದ ಮೃತಪಟ್ಟು ಶಾಶ್ವತವಾಗಿ ದೂರವಾದ. ಅವನು ಇದ್ದಿದ್ದರೆ ಇನ್ನೂ ಇಪ್ಪತ್ತೈದು ಮೂವತ್ತು ಚಿತ್ರಗಳನ್ನು ಮಾಡಿರುತ್ತಿದ್ದೆನೋ ಏನೋ. ಶಂಕರ್‌ನಾಗ್ ನನ್ನ ಕುಟುಂಬಕ್ಕೂ ಆಪ್ತನಾಗಿದ್ದ. ನನ್ನ ಮಕ್ಕಳಿಗೆ `ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳಿ' ಎಂದು ಉಪದೇಶ ಮಾಡುತ್ತಿದ್ದ. ಆಗ ಶಂಕರ್‌ನಾಗ್ ಕಲ್ಪನೆ, ಹುಮ್ಮಸ್ಸನ್ನು ಕಂಡು ಕೇಳಿದವನು ನಾನು. ಸಿನಿಮಾ ಕುರಿತು ಅವನಿಗಿದ್ದ ಉತ್ಕಟತೆ ಕಂಡು ನಾನು ಬೆರಗಾಗಿದ್ದೆ. ಅವನ ಅಗಲಿಕೆಯಿಂದ ನನ್ನ ಕೈಮುರಿದ ಹಾಗಾಯಿತು.
ಒಬ್ಬೊಬ್ಬರೇ ದೂರವಾದಾಗಲೆಲ್ಲಾ ನಾನು ಖಿನ್ನನಾಗುತ್ತಿದ್ದೆ. ಆಗ ಅಂಬುಜಾ ಒಂದು ಮಾತು ಹೇಳುತ್ತಿದ್ದಳು- `ಪಾಂಡವರ ಹತ್ತಿರ ಕೃಷ್ಣ ಇದ್ದನೇ ಹೊರತು ಸೈನ್ಯ ಇರಲಿಲ್ಲ; ನೀನು ಕೃಷ್ಣ, ಗೆಲ್ಲು'. ಅವಳು ಆಗ ಆಡಿದ ಆ ಮಾತು ಈಗಲೂ ನೆನಪಾಗುತ್ತಲೇ ಇರುತ್ತದೆ.
ಎರಡು ಸಿನಿಮಾಗಳು ಒಂದರ ನಂತರ ಒಂದರಂತೆ ನೆಲಕಚ್ಚಿದರೂ ಹಣಕಾಸು ನೆರವು ನೀಡುವವರು ಕೈಬಿಡಲಿಲ್ಲ; ಬೆನ್ನುತಟ್ಟಿದರು. `ಅಂಕುಶ್' ಎಂಬ ಹಿಂದಿ ಸಿನಿಮಾ ನೋಡಿದ್ದೇ ಅದನ್ನು ಕನ್ನಡದಲ್ಲಿ ಮಾಡುವ ಮನಸ್ಸಾಯಿತು. `ಪರಸಂಗದ ಗೆಂಡೆತಿಮ್ಮ' ನಿರ್ದೇಶಿಸಿದ್ದ ಮಾರುತಿ ಶಿವರಾಂ ಅವರ ಮೇಲಿನ ಅತಿಯಾದ ನಂಬಿಕೆಯಿಂದ `ಬಂದಿ' ಎಂಬ ಅವರ ಚಿತ್ರಕ್ಕೆ ಹಣಕಾಸಿನ ನೆರವು ನೀಡಲು ನಿರ್ಧರಿಸಿದೆ.
`ದೇವರೇ ಕಾಪಾಡು' ಎಂದು ಕೇಳುವುದು ನನ್ನ ಜಾಯಮಾನವಲ್ಲ; `ದೇವರೇ ಧೈರ್ಯ ಕೊಡು' ಎಂದೇ ನಾನು ಮೊರೆ ಇಡುವುದು. ಹಾಗೆ ಕೇಳುತ್ತಲೇ ಇನ್ನೆರಡು ಚಿತ್ರಗಳಲ್ಲಿ ತೊಡಗಿಕೊಂಡೆ. `ಅಂಕುಶ್'ಗೆ `ರಾವಣರಾಜ್ಯ' ಎಂದು ಹೆಸರಿಟ್ಟೆವು. ರಾಷ್ಟ್ರಪ್ರಶಸ್ತಿ ದಕ್ಕುವಂಥ ಚಿತ್ರಗಳನ್ನು ನಿರ್ದೇಶಿಸಿದ್ದ ನಾಗಾಭರಣ ಆ ಚಿತ್ರದ ನಿರ್ದೇಶಕ. ಅಂಬುಜಾಗೆ ಅವರೆಂದರೆ ತುಂಬಾ ಮೆಚ್ಚು. ನನಗೂ ನಾಗಾಭರಣ ಅವರೆಂದರೆ ಪ್ರೀತಿ. ನಾಸಿರ್, ದೇವರಾಜ್ ಮೊದಲಾದ ನಟರು ಮೊದಲು ಬಣ್ಣಹಚ್ಚಿದ ಚಿತ್ರ ಅದು. ಅವರಿಗೆಲ್ಲಾ ಮೇಕಪ್ ಟೆಸ್ಟ್ ಹಾಕಿಸಿ, ಕರೆತಂದು ಎಲ್ಲವನ್ನೂ ನಿಭಾಯಿಸಿದವರು ನಾಗಾಭರಣ. ಎರಡು ಚಿತ್ರಗಳ ಶೂಟಿಂಗ್‌ಗೆ ಏರ್ಪಾಟು ಮಾಡಿದ್ದಾಯಿತು.
ಅದೇ ಸಂದರ್ಭದಲ್ಲಿ ವಿಷ್ಣು ಹಿಂದೊಮ್ಮೆ ಪರಿಚಯಿಸಿದ ದೀಪಕ್ ಬಲರಾಜ್ ಎಂಬ ನಿರ್ದೇಶಕರು ಮಾತಿಗೆ ಸಿಕ್ಕರು. ಹಿಂದಿ ಚಿತ್ರಗಳಲ್ಲಿ ನಟಿಸಲು ಅತ್ಯುತ್ಸಾಹ ತೋರುತ್ತಿದ್ದ ವಿಷ್ಣು ಅಲ್ಲಿ ಕೆಲವು ಸ್ನೇಹಿತರನ್ನೂ ಸಂಪಾದಿಸಿದ್ದ. ಒಮ್ಮೆ ಧರ್ಮೇಂದ್ರ ಬೆಂಗಳೂರಿನಲ್ಲಿ ಚಿತ್ರೀಕರಣಕ್ಕೆಂದು ಬಂದಾಗ ಅವರನ್ನು ವಿಷ್ಣು ಆತ್ಮೀಯವಾಗಿ ನೋಡಿಕೊಂಡಿದ್ದ. ಬಹುಶಃ ಆಗಲೇ ಅವನು ನನಗೆ ದೀಪಕ್ ಬಲರಾಜ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದು. ಅದೇ ದೀಪಕ್ ಮುಂದೆ ವಿಷ್ಣು ಅಭಿನಯದ `ಆರಾಧನೆ' ಕನ್ನಡ ಸಿನಿಮಾ ನಿರ್ದೇಶಿಸಿದರು ಎಂದು ನೆನಪು. ಬೆಂಗಳೂರಿನ ವಸಂತ್ ಲ್ಯಾಬ್‌ನಲ್ಲಿ ಆ ಚಿತ್ರವನ್ನು ನೋಡಿ ಇಷ್ಟಪಟ್ಟಿದ್ದೆ.
ಮದ್ರಾಸ್‌ಗೆ ಬಂದಾಗಲೆಲ್ಲಾ ದೀಪಕ್ ನನ್ನ ಮನೆಗೆ ಬರುತ್ತಿದ್ದರು. ಅವರಿಗೆ ನಾನು ಮತ್ತೆ ಹಿಂದಿ ಚಿತ್ರಗಳನ್ನು ನಿರ್ಮಿಸಬೇಕು ಎಂಬ ಒತ್ತಾಸೆ. ಆದರೆ ಕೈಸುಟ್ಟುಕೊಂಡಿದ್ದ ನನಗೆ ಆ ಸಂದರ್ಭದಲ್ಲಿ ಇನ್ನೊಂದು ಹಿಂದಿ ಚಿತ್ರಕ್ಕೆ ಬಂಡವಾಳ ಹೂಡುವುದು ಬೇಕಿರಲಿಲ್ಲ. ಹಾಗಿದ್ದೂ ಉತ್ತರ ಭಾರತದ ಅನೇಕ ವಿತರಕರು `ಮುಂದಿನ ಚಿತ್ರ ಯಾವಾಗ?' ಎಂದು ಕೇಳುತ್ತಲೇ ಇದ್ದರು.
ಒಂದು ದಿನ ಪೇಕೇಟಿ ಶಿವರಾಂ ಹಿಂದಿ ಚಿತ್ರವೊಂದನ್ನು ನೋಡಲು ನನ್ನನ್ನು ಕರೆದರು. ಅವರ ನಿರ್ದೇಶನದ `ಮಾತು ತಪ್ಪಿದ ಮಗ' ಚಿತ್ರದಲ್ಲಿ ನಾನು ಹಿಂದೆ ನಟಿಸಿದ್ದೆ. ಅವರು ತೋರಿಸಿದ ಹಿಂದಿ ಚಿತ್ರದ ಹೆಸರು ನೆನಪಿಲ್ಲ. ಅದನ್ನು ಪದ್ಮಾಲಯ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸಿತ್ತು. ನಟ ಕೃಷ್ಣ ಅವರ ಅಣ್ಣಂದಿರಾದ ಶೇಷಗಿರಿ ರಾವ್ ಹಾಗೂ ಹನುಮಂತರಾವ್ ಹಣ ವಿನಿಯೋಗಿಸಿದ್ದ ಸಿನಿಮಾ ಅದು. ಆ ನಿರ್ಮಾಪಕರು `ಸೂತ್ರದ ಬೊಂಬೆ' ಎಂಬ ಕನ್ನಡ ಚಿತ್ರಕ್ಕೂ ಬಂಡವಾಳ ಹಾಕಿದ್ದು, ಪೇಕೇಟಿ ಶಿವರಾಂ ಅವರೇ ಅದನ್ನು ನಿರ್ದೇಶಿಸಿದ್ದರು. ಈ ಹಿನ್ನೆಲೆಯಿಂದಲೇ ಆ ಹಿಂದಿ ಚಿತ್ರವನ್ನು ಶಿವರಾಂ ನನಗೆ ತೋರಿಸಿದ್ದು.
ಆ ಚಿತ್ರದಲ್ಲಿ ದಕ್ಷಿಣ ಆಫ್ರಿಕಾದ ಹೊರಾಂಗಣವಿತ್ತು. ನನಗೂ ಅಲ್ಲಿ ಒಂದು ಸಿನಿಮಾ ತೆಗೆಯುವ ಬಯಕೆ ಹುಟ್ಟಿತು. ಅದನ್ನು ಆ ಕ್ಷಣವೇ ಶಿವರಾಂ ಅವರಲ್ಲಿ ಹೇಳಿದೆ. ಒಂದು ವೇಳೆ ತೆಗೆಯುವುದೇ ಆದರೆ ಚಿತ್ರೀಕರಣಕ್ಕೆ ಬೇಕಾದ ಅನುಮತಿ, ಪರವಾನಗಿ ಎಲ್ಲವನ್ನೂ ತಾವೇ ಒದಗಿಸಿಕೊಡುವುದಾಗಿ ಹೇಳಿ, ಅವರು ನನ್ನ ಬಯಕೆಯನ್ನು ಇನ್ನಷ್ಟು ಹಿಗ್ಗಿಸಿದರು. ನನ್ನ ಹಿಂದೆ ಹಣಕಾಸು ನೆರವು ನೀಡುವವರು ಕಡಿಮೆಯೇನೂ ಇರಲಿಲ್ಲ. ಒಂದು ವಿಧದಲ್ಲಿ ಬ್ಯಾಂಕೇ ಹಿಂದೆ ಇತ್ತೆನ್ನಬಹುದು. ಸಿವಿಎಲ್ ಶಾಸ್ತ್ರಿ ಅವರ ಆಪ್ತರಾದ ಎಸ್.ರಾಮಚಂದ್ರ ಕೂಡ ತಾವೂ ಸಿನಿಮಾ ನಿರ್ಮಾಣಕ್ಕೆ ಸೇರಿಕೊಳ್ಳುವುದಾಗಿ ಹೇಳಿದ್ದರು.
ಎಂ.ಪಿ.ಶಂಕರ್ `ಕಾಡಿನ ರಹಸ್ಯ' ಸಿನಿಮಾ ಮಾಡಿದ ಸಂದರ್ಭದಲ್ಲಿ, `ನಾನು ದಕ್ಷಿಣ ಆಫ್ರಿಕಾಗೆ ಹೋಗಿ ಶೂಟ್ ಮಾಡಿಕೊಂಡು ಬರುತ್ತೇನೆ' ಎಂದು ತಮಾಷೆಗೆ ಹೇಳಿದ್ದೆ. ಬಾಲ್ಯದಲ್ಲಿ ಮೈಸೂರಿನ ಗಾಯತ್ರಿ ಟಾಕೀಸಿನಲ್ಲಿ ನೋಡಿದ್ದ `ವಿಕ್ಟೋರಿಯಾ ಫಾಲ್ಸ್' ಇಂಗ್ಲಿಷ್ ಚಿತ್ರ ಕೂಡ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಇವೆಲ್ಲದರ ಮೊತ್ತವೆಂಬಂತೆ `ಆಫ್ರಿಕಾದಲ್ಲಿ ಶೀಲಾ' ಸಿನಿಮಾ ಮಾಡುವ ಯೋಚನೆ ಬಂತು. ಕನ್ನಡ, ತಮಿಳು, ತೆಲುಗು, ಹಿಂದಿ ನಾಲ್ಕೂ ಭಾಷೆಗಳಲ್ಲಿ ಏಕಕಾಲದಲ್ಲಿ ಈ ಸಿನಿಮಾ ಮಾಡಲು ನಿರ್ಧರಿಸಿದೆ. ಕನ್ನಡದಲ್ಲಿ `ಆಫ್ರಿಕಾದಲ್ಲಿ ಶೀಲಾ', ತೆಲುಗು ಹಾಗೂ ಹಿಂದಿಯಲ್ಲಿ `ಶೀಲಾ', ತಮಿಳಿನಲ್ಲಿ `ಆಫ್ರಿಕಾ ವಿಲ್ ಶೀಲಾ' ಎಂದು ಹೆಸರಿಟ್ಟುಕೊಂಡೆ. ಎರಡು ದೊಡ್ಡ ಫ್ಲಾಪ್‌ಗಳನ್ನು ಕಂಡಮೇಲೂ ಇಂಥದೊಂದು ಸಿನಿಮಾ ಯೋಚನೆ ಮಾಡಿದ್ದು ವಿಚಿತ್ರವಾದರೂ ಸತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.