ADVERTISEMENT

ಗದ್ದಲದಲ್ಲಿ ಲೆಕ್ಕಾಚಾರಕ್ಕೆ ಮುನ್ನ ‘ಧ್ಯಾನ’ವೂ ಇರಲಿ

ಟಿ.ಕೆ.ತ್ಯಾಗರಾಜ್
Published 14 ಮೇ 2018, 19:30 IST
Last Updated 14 ಮೇ 2018, 19:30 IST
ಗದ್ದಲದಲ್ಲಿ ಲೆಕ್ಕಾಚಾರಕ್ಕೆ ಮುನ್ನ ‘ಧ್ಯಾನ’ವೂ ಇರಲಿ
ಗದ್ದಲದಲ್ಲಿ ಲೆಕ್ಕಾಚಾರಕ್ಕೆ ಮುನ್ನ ‘ಧ್ಯಾನ’ವೂ ಇರಲಿ   

ನೀವು ಈ ಅಂಕಣ ಓದುವ ಹೊತ್ತಿಗೆ ರಾಜ್ಯ ವಿಧಾನಸಭಾ ಚುನಾವಣೆ ಪ್ರಕ್ರಿಯೆಯ ಇನ್ನೊಂದು ಪ್ರಮುಖ ಘಟ್ಟವಾದ ಮತ ಎಣಿಕೆ ಆರಂಭವಾಗಿರುತ್ತದೆ. ಈಗಾಗಲೇ ಪ್ರಕಟಗೊಂಡಿರುವ ಚುನಾವಣಾಪೂರ್ವ ಮತ್ತು ಮತಗಟ್ಟೆ ಸಮೀಕ್ಷೆಗಳು ಬಹುತೇಕ ಅತಂತ್ರ ವಿಧಾನಸಭೆಯ ಚಿತ್ರವನ್ನೇ ಮುಂದಿಟ್ಟಿವೆ. ಇದು ನಿಜವೂ ಆಗಬಹುದು ಅಥವಾ ಎಲ್ಲ ಲೆಕ್ಕಾಚಾರಗಳನ್ನೂ ಮೀರಿ ಇನ್ನೇನೋ ಘಟಿಸಬಹುದು. ಯಾರು ಯಾರನ್ನು ಪಿಂಗಿಸಿರುತ್ತಾರೋ ಆ ಫಲಿತಾಂಶಾಂಬೆಯೇ ಬಲ್ಲಳು!

ಯಾರದೇ ನೆರವಿಲ್ಲದೆ ಕಾಂಗ್ರೆಸ್ ಪಕ್ಷವೇ ಸರ್ಕಾರ ರಚಿಸಲಿದ್ದು ತಾವೇ ಮುಂದೆಯೂ ಮುಖ್ಯಮಂತ್ರಿಯಾಗುವುದಾಗಿ ಸಿದ್ದರಾಮಯ್ಯ ಅಪಾರ ಆತ್ಮವಿಶ್ವಾಸದಿಂದ ಈಗಾಗಲೇ ಸಿದ್ಧರಾಗಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬೂ.ಸಿ. ಯಡಿಯೂರಪ್ಪ ತಾವು ಪ್ರಮಾಣವಚನ ಸ್ವೀಕರಿಸುವ ದಿನಾಂಕವನ್ನೂ ಪ್ರಕಟಿಸಿ ಪ್ರಧಾನಿ ನರೇಂದ್ರ ಮೋದಿಯೂ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಘೋಷಿಸಿದ್ದಾರೆ! ಹಾಗೆ ಹೇಳುವಾಗಲೂ ಅವರ ಪೇಲವ ಮುಖಭಾವ ಅದಕ್ಕೆ ತದ್ವಿರುದ್ಧ ಚಿತ್ರವನ್ನು ನಮ್ಮ ಕಣ್ಣೆದುರು ತರುತ್ತಿತ್ತು. ಹಾಗೆ ಹೇಳುವಂಥ ಆತ್ಮವಿಶ್ವಾಸ ಯಡಿಯೂರಪ್ಪ ಅವರಲ್ಲಿ ಇರಲಿಲ್ಲ. ಬಹುಶಃ ಅವರು ಬಿಜೆಪಿ ಪಿತುಮೆ ಪಿತಾಮಹ ಅಮಿತ್ ಶಾ ಹೇಳಿಕೊಟ್ಟಿದ್ದನ್ನೇ ಉರುಹೊಡೆದು ಒಪ್ಪಿಸಿರುವ ಸಾಧ್ಯತೆ ಇದೆ. ಚುನಾವಣೆ ಪ್ರಚಾರದ ಆರಂಭದಲ್ಲಿದ್ದ ಮಿಷನ್ 150 ಕ್ರಮೇಣ 130ಕ್ಕೆ ಇಳಿದಾಗಲೇ ಇದರ ಸುಳಿವಿತ್ತು. ಬಿಜೆಪಿಯ ಅತಿ ವಿಶ್ವಾಸದ ಮಾತುಗಳಿಗೂ ಅದರ ನಡವಳಿಕೆಗೂ ಅಜಗಜಾಂತರವಿತ್ತು. ಜನಾರ್ದನ ರೆಡ್ಡಿಯಂಥ ಕಳಂಕಿತರಿಗೂ ಪಕ್ಷದ ಪ್ರಚಾರ ಬಾಗಿಲು ತೆರೆದಿದ್ದು ಬಿಜೆಪಿಗಿದ್ದ ಸೋಲಿನ ಭೀತಿಯನ್ನು ಪ್ರದರ್ಶಿಸುತ್ತಿತ್ತು.

ಈ ಚುನಾವಣೆ ಸಂದರ್ಭದಲ್ಲೇ ಯಡಿಯೂರಪ್ಪ ಸ್ವತಃ ದುರ್ಬಲರಾಗುತ್ತಿರುವುದನ್ನು ಅವರೇ ಗಂಭೀರವಾಗಿ ಪರಿಗಣಿಸಿದಂತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದ ನಂತರ ಲಿಂಗಾಯತರ ಮತ ಹಂಚಿಹೋಗಬಹುದೆಂಬ ಅನುಮಾನದಿಂದಲೇ ಬಿಜೆಪಿಯು ಯಡಿಯೂರಪ್ಪ ಅವರಿಗಿಂತ ಶ್ರೀರಾಮುಲುವನ್ನು ಹೆಚ್ಚು ಬಿಂಬಿಸುವ ಕೆಲಸ ಆರಂಭಿಸಿತ್ತು. ಆ ಮೂಲಕವಾದರೂ ದಲಿತ ಮತಗಳನ್ನು ಸೆಳೆಯುವುದು ಅದರ ಉದ್ದೇಶವಾಗಿತ್ತು. ಯಡಿಯೂರಪ್ಪ ಅವರಿರುವ ಪಕ್ಷ, ತೋರಿಸಿಕೊಳ್ಳುತ್ತಿರುವ ತತ್ವವನ್ನು ಒಂದೆಡೆ ಸರಿಸಿನೋಡುವುದಾದರೆ ಅವರ ಬಗ್ಗೆ ಅನುಕಂಪ ಹುಟ್ಟಿಸುವಂಥ ಬೆಳವಣಿಗೆಗಳು ಈ ಪಕ್ಷದಲ್ಲಿ ನಡೆಯತೊಡಗಿದವು. ಅಮಿತ್ ಶಾ ಭಾಗವಹಿಸುವ ಪ್ರಚಾರ ಸಭೆಗಳಲ್ಲಿ ಅವರ ಎದುರು ಸೊಂಟ ಬಗ್ಗಿಸಿ ನಿಲ್ಲುವ ಪರಿಯನ್ನು ನೋಡಿದರೆ ಕೋಪಾವೇಶದ ಮಾತುಗಳ ಜನಾಕರ್ಷಣೆಯ ನಾಯಕರಾಗಿದ್ದ ಯಡಿಯೂರಪ್ಪ ಇವರೇನಾ ಎಂಬ ಅನುಮಾನ ಉಂಟಾಗುತ್ತಿತ್ತು. ಅವರ ಬಲಗೈ ಎಂದೇ ಭಾವಿಸಲಾಗಿರುವ ಶೋಭಾ ಕರಂದ್ಲಾಜೆ ಮತ್ತು ವರುಣಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದ ಅವರ ಪುತ್ರ ವಿಜಯೇಂದ್ರಗೂ ಟಿಕೆಟ್ ಭಾಗ್ಯದ ಅಮಿತಾನುಗ್ರಹವಾಗದಿದ್ದಾಗ ಯಡಿಯೂರಪ್ಪ ಅವರನ್ನು ಒಬ್ಬಂಟಿಯಾಗಿಸುವ ಬಿಜೆಪಿ ಸಂಚು ಒಂದೊಂದಾಗಿ ಬಯಲಾಗತೊಡಗಿತು. ಭ್ರಷ್ಟಾಚಾರದ ಆರೋಪಗಳಿದ್ದರೂ ಬಿಜೆಪಿಯಲ್ಲಿರುವ ಅದೆಷ್ಟೋ ಕೋಮುವ್ಯಾಧಿಗಳಿಗಿಂತ ಎಷ್ಟೋ ಉತ್ತಮ ನಾಯಕ ಮತ್ತು ಮನುಷ್ಯನಾಗಿರುವ ಯಡಿಯೂರಪ್ಪ ಅವನತಿ (ಮುಖ್ಯಮಂತ್ರಿ ಆಗಲಾರರು ಎನ್ನುವರ್ಥದಲ್ಲಿ ಅಲ್ಲ) ನನ್ನಂಥವನಲ್ಲೂ ಮರುಕ ಹುಟ್ಟಿಸುವಂತಿದೆ. ಇಷ್ಟರ ನಡುವೆಯೂ ಬಿಜೆಪಿ ಬಹುಮತ ಗಳಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದರೂ ಅವರಿಗೆ ಮೊದಲಿನ ಕಿಮ್ಮತ್ತಿರುವುದಿಲ್ಲ ಎನ್ನುವುದನ್ನು ಈ ಬೆಳವಣಿಗೆಗಳೇ ತೋರಿಸಿಕೊಟ್ಟಿವೆ.

ADVERTISEMENT

ಸಿದ್ದರಾಮಯ್ಯ ಅವರ ನಂಬಿಕೆಗಳನ್ನೂ ಮೀರಿ ಬಿಜೆಪಿಯೇ ಬಹುಮತ ಗಳಿಸಿದರೆ ಪ್ರತ್ಯೇಕ ಲಿಂಗಾಯತ ಧರ್ಮದ ಅಸ್ತ್ರ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದೆ ಎಂದೇ ಭಾವಿಸಬೇಕಾಗುತ್ತದೆ. ಯಾಕೆಂದರೆ ಮುಖ್ಯಮಂತ್ರಿಯಾದ ಮೊದಲ ದಿನವೇ ಘೋಷಿಸಿದ ಅನ್ನಭಾಗ್ಯ, ಕೆಲವು ತಿಂಗಳ ಹಿಂದೆ ಆರಂಭಿಸಿದ ಇಂದಿರಾ ಕ್ಯಾಂಟೀನ್, ಪ್ರತ್ಯೇಕ ಕರ್ನಾಟಕ ಧ್ವಜದ ಕನ್ನಡ ಸ್ವಾಭಿಮಾನ ಮೆರೆಯುವ ಯತ್ನ ಇವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಅನುಕೂಲಕರ ವಾತಾವರಣ ರೂಪಿಸಿತ್ತು. ಕಳೆದ ಐದು ವರ್ಷಗಳಲ್ಲಿ ಒಂದೊಂದಾಗಿ ಎಸೆದ ಕಾರ್ಯತಂತ್ರದ ಅಸ್ತ್ರಗಳು ಸಮಾಜದ ಎಲ್ಲ ವರ್ಗಗಳನ್ನು ಕಾಂಗ್ರೆಸ್ ತೆಕ್ಕೆಗೆ ಸೆಳೆಯುವ ರೀತಿಯಲ್ಲೇ ಇದ್ದವು. ಸಣ್ಣಪುಟ್ಟ ಆರೋಪಗಳನ್ನು ಹೊರತುಪಡಿಸಿದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ರಾಜ್ಯದ ಜನತೆ ತಿರುಗಿ ಬೀಳುವಂಥ ಕಳಂಕ ತರುವ ಪ್ರಕರಣ ದಾಖಲಾಗಿರಲಿಲ್ಲ. ಈ ಎಲ್ಲ ಕಾರಣಗಳಿಂದ ಕಾಂಗ್ರೆಸ್ ಪಕ್ಷ ಮತ್ತೆ ಬಹುಮತ ಗಳಿಸದಿದ್ದರೆ ಎಡವಟ್ಟಾಗಿರುವುದೆಲ್ಲಿ ಎನ್ನುವುದನ್ನು ಸ್ವತಃ ಸಿದ್ದರಾಮಯ್ಯ ಅವರೇ ಪತ್ತೆ (ಆತ್ಮಾವಲೋಕನ ಕೂಡಾ) ಹಚ್ಚಬೇಕಾಗುತ್ತದೆ. ಪ್ರಬಲ ಜಾತಿಗಳ ವ್ಯವಸ್ಥಿತ ಸಂಚಿನಿಂದಾಗಿಯೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಹುಮತ ಪಡೆಯುವಲ್ಲಿ ವಂಚಿತವಾದರೆ ಐದು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಿದ ಜನಪ್ರಿಯ ಕಾರ್ಯಕ್ರಮಗಳೂ ಇಂಥ ಶಕ್ತಿಗಳನ್ನು ಎದುರಿಸುವಲ್ಲಿ ವಿಫಲವಾಗಿವೆ ಎಂದೇ ಭಾವಿಸಬೇಕಾಗುತ್ತದೆ.

ಹಾಗೊಂದು ವೇಳೆ ಕಾಂಗ್ರೆಸ್ ಪಕ್ಷವೇ ಬಹುಮತ ಗಳಿಸಿ ಸಹಜವಾಗಿಯೇ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕಾದ್ದು ನ್ಯಾಯಯುತವಾಗಿದ್ದರೂ ಅವರ ಹಾದಿ ಅಷ್ಟು ಸುಲಭವಾಗಿಲ್ಲ. ಸಾತನೂರು ಸರದಾರ ಡಿ.ಕೆ. ಶಿವಕುಮಾರ್, ಡಾ.ಜಿ. ಪರಮೇಶ್ವರ್ ಅವರಲ್ಲಿನ ಮುಖ್ಯಮಂತ್ರಿಯಾಗಲೇಬೇಕೆಂಬ ಹಟ ಇನ್ನಷ್ಟು ಸದೃಢವಾಗಿದೆ. ಇಷ್ಟಲ್ಲದೇ ಮಲ್ಲಿಕಾರ್ಜುನ ಖರ್ಗೆ ಕಾರಣಕ್ಕಾಗಿ ದಲಿತ ಮುಖ್ಯಮಂತ್ರಿಯ ಪ್ರಾಮಾಣಿಕ ಅಪೇಕ್ಷೆ ಕೇಳಿ ಬಂದರೆ ಈಗಾಗಲೇ ಒಂದು ಅವಧಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಏನು ಮಾಡಬಹುದು? ಎಲ್ಲ ಕಾರ್ಯತಂತ್ರ, ಜನಪರ ಕಾರ್ಯಕ್ರಮಗಳ ಮೂಲಕ ಬಹುಮತ ಪಡೆಯುವುದು ಕಾಂಗ್ರೆಸ್‍ಗೆ ಸಾಧ್ಯವಾದರೆ ಆ ಅಧಿಕಾರವನ್ನು ಬಿಟ್ಟುಕೊಡುವುದು ಒಬ್ಬ ಸಾಮಾನ್ಯ ನಾಯಕನಿಂದ ಸಾಧ್ಯವಿಲ್ಲ. ಅದನ್ನು ಸಾಧ್ಯಗೊಳಿಸುವ ಶಕ್ತಿ ಇರುವುದೂ ಸಿದ್ದರಾಮಯ್ಯ ಅವರಿಗೆ ಮಾತ್ರ. ಆದರೆ ಅವರು ಈಗಾಗಲೇ, ‘ದಲಿತ ಮುಖ್ಯಮಂತ್ರಿಯನ್ನು ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ ತಮ್ಮ ಆಕ್ಷೇಪವೇನಿಲ್ಲ. ಆದರೆ ಶಾಸಕರ ಅಭಿಪ್ರಾಯವನ್ನು ನಿರ್ಲಕ್ಷಿಸಿ ಹೇರುವುದು ಸರಿಯಲ್ಲ’ ಎಂದು ಹೇಳುವ ಮೂಲಕ ಪರೋಕ್ಷ ಅಸಮ್ಮತಿ ಸೂಚಿಸಿಬಿಟ್ಟಿದ್ದಾರೆ. ಸಾಮಾಜಿಕ ನ್ಯಾಯದ ಅರಿವಿರುವ ಸಿದ್ದರಾಮಯ್ಯ ಸಕಾರಾತ್ಮಕ ನಿರ್ಧಾರ ಕೈಗೊಂಡರೆ ‘ಅಹಿಂದ’ ಋಣಸಂದಾಯಕ್ಕೂ ಐತಿಹಾಸಿಕ ಮಹಾತ್ಯಾಗಕ್ಕೂ ಸಿದ್ಧರಾಗಬೇಕಾಗುತ್ತದೆ. ಈ ಅವಕಾಶ ಪಡೆಯುವ ಮೂಲಕ ಸಿದ್ದರಾಮಯ್ಯ ರಾಜ್ಯ ರಾಜಕೀಯ ಇತಿಹಾಸದಲ್ಲಿ ಅಪೂರ್ವ ಸ್ಥಾನವೊಂದನ್ನು ಪಡೆದುಕೊಳ್ಳಬಲ್ಲರು. ಇಂಥ ನಿರ್ಧಾರ ಸುಲಭವಲ್ಲ ಎನ್ನುವುದು ನನಗೂ ಗೊತ್ತಿದೆ.

ವಿವಿಧ ಚುನಾವಣಾ ಸಮೀಕ್ಷೆಗಳು ಜೆಡಿಎಸ್ ಕೇವಲ 35 ರಿಂದ 45 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮೂರನೇ ಸ್ಥಾನ ಪಡೆಯುವ ಮುನ್ಸೂಚನೆ ನೀಡಿವೆ. ಚುನಾವಣಾ ಪ್ರಚಾರದ ಆರಂಭದಲ್ಲಿ ಸ್ವಂತ ಶಕ್ತಿಯಿಂದಲೇ ಸರ್ಕಾರ ರಚಿಸುವುದಾಗಿಯೂ ಹಾಗೊಂದು ವೇಳೆ ಅತಂತ್ರ ವಿಧಾನಸಭೆ ರಚನೆಯಾದರೆ ಯಾವುದೇ ಪಕ್ಷದ ಜತೆ ಕೈಜೋಡಿಸದೇ ವಿರೋಧ ಪಕ್ಷದಲ್ಲಿ ಕೂರುವುದಾಗಿಯೂ ಹೇಳುತ್ತಿದ್ದ ಎಚ್.ಡಿ. ಕುಮಾರಸ್ವಾಮಿ ಕ್ರಮೇಣ ತಮ್ಮ ಪಕ್ಷದಪ್ರಣಾಳಿಕೆಯನ್ನು ಅನುಷ್ಠಾನಗೊಳಿಸುವವರ ಜತೆ ಕೈಜೋಡಿಸುವುದಾಗಿ ರಾಗ ಬದಲಿಸತೊಡಗಿದ್ದು ಜೆಡಿಎಸ್ ದುರ್ಬಲ ಪ್ರದರ್ಶನ ನೀಡಲಿರುವುದರ ಮುನ್ಸೂಚನೆಯಂತಿತ್ತು.

ಇದರ ಫಲವಾಗಿಯೇ ಅವರು ಹಳೇ ಮೈಸೂರು ಭಾಗದಲ್ಲಿ ಪ್ರಚಾರಕ್ಕೆ ಹೋದಾಗಲೂ ಕಣ್ಣೀರುಗರೆಯುತ್ತಾ ತಮ್ಮ ಆರೋಗ್ಯ ಹದಗೆಟ್ಟಿರುವುದಾಗಿಯೂ ತಾವು ಉಳಿಯಬೇಕಾದರೆ ತಮ್ಮ ಪಕ್ಷಕ್ಕೆ ಮತ ನೀಡಬೇಕೆಂದು ಗೋಗರೆಯುತ್ತಿದ್ದುದು ಯಾವುದೇ ಒಬ್ಬ ನಿಜ ನಾಯಕನ ಲಕ್ಷಣವಾಗಿರಲಿಲ್ಲ. ಯಾವುದೇ ನಾಯಕ ಜನರ ಒಲವು ಗಳಿಸಬೇಕಿರುವುದು ಪಕ್ಷದ ಕಾರ್ಯಕ್ರಮ, ತನ್ನ ಪ್ರಾಮಾಣಿಕತೆ, ಕ್ರಿಯಾಶೀಲತೆ, ದಕ್ಷತೆ ಮತ್ತು ದಿಟ್ಟತನದಿಂದಲೇ ಹೊರತು ಅಂಗಲಾಚುತ್ತಾ ಅನಾರೋಗ್ಯದ ನೆಪದಲ್ಲಿ ಅನುಕಂಪ ಗಿಟ್ಟಿಸುವುದರಿಂದಲ್ಲ.

1996ರ ನಂತರ ಕುಟುಂಬ ಮಾಲೀಕತ್ವದ ಕೇವಲ ಹಳೇ ಮೈಸೂರು ಭಾಗದ ಉಪಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಸ್ವಂತ ಶಕ್ತಿಯಿಂದ ಅಧಿಕಾರ ಪಡೆಯುವುದು ಸಾಧ್ಯವೇ ಇಲ್ಲ ಎನ್ನುವುದನ್ನು ಕಳೆದ ಎರಡು ದಶಕಗಳ ಚುನಾವಣಾ ಫಲಿತಾಂಶಗಳೇ ಸಾಬೀತುಪಡಿಸಿವೆ. ಕೊಡು ಕೊಳ್ಳುವಿಕೆಗಳ ಕೇವಲ ಚೌಕಾಸಿ ಪಕ್ಷವಾಗಿರುವ ಜೆಡಿಎಸ್, ರಾಜಕೀಯ ಪಂಡಿತರ ಸೌಜನ್ಯದ ಭಾಷೆಯಲ್ಲಿ ಕಿಂಗ್ ಮೇಕರ್ ಎಂಬ ಶಾಶ್ವತ ಹಣೆಪಟ್ಟಿ ಹಚ್ಚಿಕೊಂಡಿದೆ. ಈ ಹಣೆಪಟ್ಟಿಯನ್ನು ಕಿತ್ತೆಸೆದು ಇಡೀ ಕನ್ನಡನಾಡಿನ ಬಹುದನಿಯ ಶಕ್ತಿಯಾಗಿ ಪಕ್ಷವನ್ನು ರೂಪಿಸುವಂಥ ನಿರ್ಧಾರಗಳನ್ನೂ ಅದಕ್ಕೆ ಕೈಗೊಳ್ಳಲಾಗುತ್ತಿಲ್ಲ. ಹಳೇ ಮೈಸೂರು ಬಿಟ್ಟರೆ ರಾಜ್ಯದ ಇತರ ಭಾಗಗಳಲ್ಲಿ ಸ್ಥಳೀಯ ಕಾರಣಗಳಿಂದ ಕಾಂಗ್ರೆಸ್ ಅಥವಾ ಬಿಜೆಪಿ ಜತೆ ಗುರುತಿಸಿಕೊಳ್ಳಲಾಗದಸ್ವಂತ ಶಕ್ತಿಯ ನಾಯಕರು ರಾಜಕೀಯದಲ್ಲಿ ನೆಲೆ ಉಳಿಸಿಕೊಳ್ಳುವ ಸಲುವಾಗಿ ಮಾತ್ರ ಜೆಡಿಎಸ್ ಜತೆ ಗುರುತಿಸಿಕೊಂಡು ಅನಿವಾರ್ಯವಾಗಿ ಆ ಪಕ್ಷದ ನಾಯಕರಾಗಿಬಿಟ್ಟಿದ್ದಾರೆ. ತನ್ನ ಬೆಣ್ಣೆ ಮಾತುಗಳನ್ನು ಕಾರ್ಯಗತಗೊಳಿಸುವುದಕ್ಕೆ ಸ್ವಂತ ಶಕ್ತಿ ಇಲ್ಲದಿರುವ ಜೆಡಿಎಸ್‍ನಂಥ ಪಕ್ಷದ ಅಗತ್ಯವಾದರೂ ಏನೆಂಬ ಪ್ರಶ್ನೆ ಈಗ ಎದುರಾಗಿದೆ. ಬಹುಮತ ಇಲ್ಲದಿದ್ದರೂ ಅಧಿಕಾರ ಭಾಗ್ಯ ಪಡೆಯುವ ಜೆಡಿಎಸ್ ತನ್ನ ಪ್ರಸ್ತುತತೆಯ ಸಮರ್ಥ ಕಾರಣಗಳನ್ನು ರಾಜ್ಯದ ಜನರ ಮುಂದಿಡಲೇಬೇಕಾಗಿದೆ.

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಸ್ವರ್ಗವನ್ನೇ ಭುವಿಗಿಳಿಸುವ ಭ್ರಮೆ ಹುಟ್ಟಿಸುವ ಆಶ್ವಾಸನೆಗಳನ್ನು ನೀಡಿವೆ. ಆದರೆ ಜನಸಾಮಾನ್ಯರೆಂದರೆ ಬೆಳದಿಂಗಳನ್ನು ಸೇವಿಸಿ ಜೀವಿಸುವುದೆಂದು ಭಾವಿಸಿರುವ ಜೊನ್ನವಕ್ಕಿಗಳಲ್ಲ. ಆತ್ಮಗೌರವದಿಂದ ಬದುಕಬೇಕೆಂದು ಬಯಸುವ ಎಲ್ಲರಿಗೂ ಅಸನವಸನ, ಸೂರು, ಕೈಗೊಂದು ಚಾಕರಿ ಬೇಕೇ ಬೇಕು. ಅಧಿಕಾರಕ್ಕೆ ಯಾರೇ ಬರಲಿ, ಈ ಸಣ್ಣ ಬೇಡಿಕೆಯನ್ನು ಪ್ರಾಮಾಣಿಕವಾಗಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮನಃಸ್ಥಿತಿ, ಇಚ್ಛಾಶಕ್ತಿ ಇರಬೇಕು. ಕೇವಲ ಗೆಲುವಿನ ಉನ್ಮಾದಕ್ಕೆ ಒಳಗಾದ ನಾಯಕ ಜನಸಾಮಾನ್ಯರಿಂದ ದೂರವಾಗುತ್ತಾ ಹೋಗುತ್ತಾನೆ. ಗೆಲುವನ್ನಷ್ಟೇ ಬಯಸುವ ಆತ ಅದಕ್ಕೆ ತಕ್ಕಂತೆ ಸಂಚು, ಹೊಂಚು, ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಕಾರ್ಯ ಮಗ್ನನಾಗುತ್ತಾನೆಯೇ ಹೊರತು ಜನಪರವಾಗಿ ಚಿಂತಿಸುವುದಕ್ಕೂ ಆತನಿಗೆ ಪುರಸೊತ್ತಿರುವುದಿಲ್ಲ. ಜನಸಾಮಾನ್ಯರ ಬೇಕುಬೇಡಗಳೂ ಆತನಿಗೆ ನಿಕೃಷ್ಟವಾಗಿ ಕಾಣತೊಡಗುತ್ತವೆ. ಈ ನೆಲದ ಇತಿಹಾಸದ ಎದೆಯೊಳಗೆ ಇಂಥ ಉದಾಹರಣೆಗಳು, ಕತೆಗಳು ಸಾಕಷ್ಟಿವೆ.

ಚುನಾವಣಾ ಫಲಿತಾಂಶ ಪ್ರಕಟವಾಗತೊಡಗಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಲೆಕ್ಕಾಚಾರದಲ್ಲಿ ನಿರತವಾಗುತ್ತವೆ. ಬಹುಮತ ಬಂದರೆ ಯಾರನ್ನೆಲ್ಲ ಮಂತ್ರಿ ಮಾಡಬೇಕು, ಯಾವ ಜಾತಿಗೆ ಎಷ್ಟು ಮಂತ್ರಿ ಸ್ಥಾನ ಕೊಡಬೇಕು, ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಇತರ ಪಕ್ಷಗಳಲ್ಲಿರುವ ತಮಗೆ ಅನುಕೂಲಕರ ಮನಃಸ್ಥಿತಿಯ ಜನಪ್ರತಿನಿಧಿ
ಯನ್ನು ಹೇಗೆ ಸೆಳೆದುಕೊಳ್ಳಬೇಕು ಎಂಬ ನಿಜಕ್ಕೂ ಜನತೆಗೆ ಯಾವ ರೀತಿಯಲ್ಲೂ ನೆರವಾಗದ ಚರ್ಚೆಗಳಲ್ಲಿ ಮುಖಂಡರು ಮುಳುಗಿರುತ್ತಾರೆ. ಹೀಗೆ ಲೆಕ್ಕಾಚಾರದಲ್ಲಿ ತೊಡಗುವ ಮುನ್ನ ಪ್ರತಿಯೊಬ್ಬ ನಾಯಕನೂ, ಪ್ರತಿನಿಧಿಯೂ ಧ್ಯಾನಮೌನದಲ್ಲಿ ಕೆಲವು ನಿಮಿಷಗಳನ್ನು ಕಳೆದರೂ ಸಾಕು ಕಿಲುಬುಗಟ್ಟಿದ ತಲೆಯಲ್ಲೂ ಹೊಸ ಹೊಳಹೊಂದು ಮೂಡಬಹುದು. ಈಗಾಗಲೇ ಮುಖ್ಯಮಂತ್ರಿಯಾಗಿ ಅನುಭವ ಇರುವ ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲರಲ್ಲೂ ತಮ್ಮ ಆಡಳಿತಾವಧಿಯಲ್ಲಿ ಮಾಡಿರುವ ತಪ್ಪುಗಳ ಅರಿವಾಗಬಹುದು.

ಕೇವಲ ರಾಜಕೀಯ ಲೆಕ್ಕಾಚಾರಗಳಿಗಾಗಿ ಜನಪರವಾಗಿ ಚಿಂತಿಸುವ ಶಾಸಕನನ್ನೂ ದೂರ ಇಡುವುದು, ಜಾತಿಬಲದ ಕಾರಣಕ್ಕಾಗಿ ಅಯೋಗ್ಯರನ್ನು ಮಂತ್ರಿ ಮಾಡುವುದು, ಜಾತಿವಂತರ ಒಡ್ಡೋಲಗ ನಿರ್ಮಿಸಿಕೊಳ್ಳುವುದು, ಕಾಳಧನದ ಖೂಳರನ್ನು ಅತ್ಯಾಪ್ತರ ಬಳಗಕ್ಕೆ ಸೇರಿಸಿಕೊಳ್ಳುವುದು ಇವೇ ಮೊದಲಾದ ವೃತ್ತಿಪರ ರಾಜಕಾರಣಿಗಳ ಚಾಳಿಗಳಿಂದ ದೂರ ಇರುವುದಕ್ಕೆ ಧ್ಯಾನಮೌನ ಅಸಾಧಾರಣ ಶಕ್ತಿ ನೀಡುತ್ತದೆ. ಮಾತನಾಡಲೇಬೇಕಾದ ಸಂದರ್ಭದಲ್ಲಿ ಮಾತನಾಡುವ ಧೈರ್ಯವನ್ನೂ ತಂದುಕೊಡುತ್ತದೆ. ಜನಪರ ನಿರ್ಧಾರ ಕೈಗೊಳ್ಳುವುದಕ್ಕೆ ಎಲ್ಲ ಅಡ್ಡಿಗಳನ್ನೂ ನಿವಾರಿಸುವ ಇಚ್ಛಾಶಕ್ತಿಯೂ ಲಭ್ಯವಾಗುತ್ತದೆ. ರೆಡ್ಡಿ ಸಹೋದರರು ಕೊಟ್ಟ ‘ಕೊಡುಗೆ’ಯನ್ನೂ ಯಡಿಯೂರಪ್ಪ ನೆನಪು ಮಾಡಿಕೊಂಡರೆ ಸಾಕು. ದುಬಾರಿ ಮೌಲ್ಯದ ಕೈಗಡಿಯಾರ ಹಚ್ಚಿದ ಕಳಂಕವನ್ನೂ ಸಿದ್ದರಾಮಯ್ಯ ಮರೆಯದಿದ್ದರೆ ಅದೂ ಇನ್ನಷ್ಟು ಉತ್ತಮ ಮಾರ್ಗವನ್ನು ತೋರಿಸಬಲ್ಲದು. ಎಲ್ಲ ಸಮುದಾಯಗಳನ್ನು ಒಳಗೊಂಡ ವಿಶಾಲ ತಳಹದಿಯ ಪ್ರಜಾಸತ್ತಾತ್ಮಕ ರಾಜಕೀಯ ಶಕ್ತಿಯೊಂದನ್ನು ಕನ್ನಡನಾಡಿನ ದನಿಯಾಗುವಂತೆ ರೂಪಿಸುವ ಪ್ರೇರಣೆಯೂ ಕುಮಾರಸ್ವಾಮಿಗೆ ದೊರೆಯಬಲ್ಲದು. ಈ ಚುನಾವಣಾ ಫಲಿತಾಂಶ ಆರೋಗ್ಯಕರ ಚಿಂತನೆಗಳಿಗೆ, ನಿರ್ಧಾರಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಲಿ ಎನ್ನುವುದಷ್ಟೇ ಈ ಮಾತುಗಳ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.