ADVERTISEMENT

ಜಾತಿ, ವಂಶ, ಥೈಲಿ: ಆಯ್ಕೆಗೆ ಮಾನದಂಡ?

ಟಿ.ಕೆ.ತ್ಯಾಗರಾಜ್
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST
ಜಾತಿ, ವಂಶ, ಥೈಲಿ: ಆಯ್ಕೆಗೆ ಮಾನದಂಡ?
ಜಾತಿ, ವಂಶ, ಥೈಲಿ: ಆಯ್ಕೆಗೆ ಮಾನದಂಡ?   

ರಾಜ್ಯ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟಗೊಂಡಿದ್ದು ಟಿಕೆಟ್ ಹಂಚಿಕೆ ಸಂತೆಯಲ್ಲಿ ಅತ್ತಿಂದಿತ್ತ ಅಂಡಲೆಯುವವರನ್ನು ಕಂಡು ಹೇವರಿಕೆ ಉಂಟಾಗುತ್ತಿದೆ. ಯಾವುದೇ ತತ್ವಕ್ಕೂ, ಪಕ್ಷಕ್ಕೂ, ಜನರಿಗೂ ನಿಷ್ಠರಲ್ಲದವರಲ್ಲಿ ಒಮ್ಮಿಂದೊಮ್ಮೆಗೇ ಕ್ರಿಯಾಶೀಲತೆ ಆವಾಹನೆಯಾಗಿದೆ. ನೆಹರೂ, ಇಂದಿರಾ ವಂಶಾಡಳಿತವನ್ನು ಟೀಕಿಸುತ್ತಿದ್ದ ಪ್ರಭೃತಿಗಳು-ವಂಶಾಡಳಿತದಲ್ಲಿ ತಪ್ಪೇನು ಎಂದು ಸಮರ್ಥಿಸಿಕೊಳ್ಳುತ್ತಿದ್ದ ವಂದಿಮಾಗಧರು ಈಗ ತಮ್ಮ ಮಕ್ಕಳಿಗೆ ಟಿಕೆಟ್ ಅನುಗ್ರಹಕ್ಕಾಗಿ ಒಂದಿನಿತೂ ಸಂಕೋಚ ಇಲ್ಲದೆ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಯಾವುದೇ ಬದ್ಧತೆ ಇಲ್ಲದಿದ್ದರೂ ಕೇವಲ ಫ್ಲೆಕ್ಸ್‌ಗಳ ಮೂಲಕ ನಾಯಕ(?)ರಾಗಿರುವ ಅದೆಷ್ಟೋ ರಿಯಲ್ ಎಸ್ಟೇಟ್ ಕುಳಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಟಿಕೆಟ್ ಖರೀದಿಗೆ ಮುಂದಾಗಿದ್ದಾರೆ. ಮುಖವೇ ಇಲ್ಲದವರು ಕೇವಲ ಜಾತಿ ಬಲವೊಂದರಿಂದಲೇ ತಮ್ಮ ಟಿಕೆಟ್ ಹಕ್ಕನ್ನು ಪ್ರತಿಷ್ಠಾಪಿಸುತ್ತಿದ್ದಾರೆ!

ಬಹುತೇಕ ಉತ್ತರ ಕರ್ನಾಟಕ ಸೇರಿದಂತೆ ಸುಮಾರು 60 ಕ್ಷೇತ್ರಗಳಲ್ಲಿ ಸುಲಭವಾಗಿ ಗೆಲ್ಲುವ ಲಿಂಗಾಯತರು, ಹಳೇ ಮೈಸೂರಿನಲ್ಲಿ 40ರಿಂದ 45 ಕ್ಷೇತ್ರಗಳಲ್ಲಿ ಇನ್ಯಾರ ಆಯ್ಕೆಗೂ ಅವಕಾಶ ಇಲ್ಲದಂತೆ ಒಕ್ಕಲಿಗರು, ಹದಿನೈದರಿಂದ ಇಪ್ಪತ್ತು ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯ ಇರುವ ಕುರುಬರು, ತಮ್ಮ ಸಂಖ್ಯಾಬಲಕ್ಕೆ ಅನುಗುಣವಾಗಿ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರೂ ಮೀಸಲಾತಿ ಮತ್ತು ಅಲ್ಪಸಂಖ್ಯಾತ ಹಣೆಪಟ್ಟಿ ಮೂಲಕ ಕೆಲವಾದರೂ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ದಲಿತರು ಮತ್ತು ಮುಸ್ಲಿಮರು, ಜೊತೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಸೇರಿದಂತೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಇನ್ನಿತರ ಸ್ಥಳೀಯ ಪ್ರಬಲ ಜಾತಿಗಳಿಗೆ ಸೇರಿದವರು ಟಿಕೆಟ್ ಕಬಳಿಸುತ್ತಿದ್ದಾರೆ. ಈ ಮಾತಿಗೆ ಕೆಲವು ಅಪವಾದಗಳೂ ಇರಬಹುದು. ಆದರೆ ಅಸಂಖ್ಯಾತ ಜಾತಿಗಳಿರುವ ಈ ನಾಡಿನಲ್ಲಿ ಪ್ರಬಲ, ಪ್ರಭಾವಿ ಮತ್ತು ಸಾಂವಿಧಾನಿಕ ಬೆಂಬಲ ಇರುವ ಜಾತಿಗಳು ಬಿಟ್ಟರೆ ಸಣ್ಣ, ಅತಿ ಸಣ್ಣ ಜಾತಿಗಳ ಸಮರ್ಥರಿಗೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಬಾಗಿಲನ್ನು ಪ್ರಬಲರು ಮತ್ತು ಪ್ರಭಾವಿಗಳು ಮುಚ್ಚಿರುವುದು ಯಾವ ಸಾಮಾಜಿಕ ನ್ಯಾಯ?

ಈ ಮೊದಲು ಮದ್ಯೋದ್ಯಮಿಗಳು, ಕ್ಯಾಪಿಟೇಷನ್ ಕುಳಗಳು, ನೆಲಗಳ್ಳರು, ಕಾಮಗಾರಿ ಗುತ್ತಿಗೆ ಲಾಬಿ, ಟಿಂಬರ್ ಲಾಬಿಯು ತಮ್ಮ ಹಿತಾಸಕ್ತಿ ಕಾಯುವವರಿಗೆ ಚುನಾವಣಾ ವೆಚ್ಚದ ನೆರವು ನೀಡಿ ಅದರ ಪ್ರತಿಫಲ ಪಡೆಯುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಥ ವಿವಿಧ ಗುಂಪುಗಳಿಗೆ ಸೇರಿದ ಕುಳಗಳು ಸ್ವತಃ ಚುನಾವಣಾ ಕಣಕ್ಕೆ ಇಳಿದು ತಮ್ಮ ಉದ್ಯಮದ ಅನುಕೂಲಕ್ಕೆ ತಕ್ಕಂಥ ನೀತಿ ರೂಪಿಸಲು ಸರ್ಕಾರದ ಮೇಲೆ ಪ್ರಭಾವ ಬೀರುವ ದೈತ್ಯಶಕ್ತಿಯಾಗಿ ಬೆಳೆದಿದ್ದಾರೆ. ಈ ನೆಲದ ಸಮಸ್ಯೆಗಳ ಮೂಲ ಇಲ್ಲೇ ಅಡಗಿದೆ.

ADVERTISEMENT

ನಿಜಕ್ಕೂ ಈ ನಾಡನ್ನು ಜನಪರರು, ಜಾತ್ಯತೀತರು, ಪ್ರಾಮಾಣಿಕರು, ದಕ್ಷರು, ಕ್ರಿಯಾಶೀಲರು, ದಿಟ್ಟರು, ಸರಳರು ಪ್ರತಿನಿಧಿಸುವಂತಾಗಬೇಕು. ಕನ್ನಡಿಗರ ದುರಂತ ಎಂದರೆ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಇದಕ್ಕೆ ತದ್ವಿರುದ್ಧ ವಾತಾವರಣ ಉಭಯ ಸದನಗಳಲ್ಲಿ ಕಾಣಬಹುದಾಗಿದೆ. ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಇರುವವರಿಗೇ ಟಿಕೆಟ್ ನೀಡಲಾಗುತ್ತದೆ ಎಂದು ಆಯಾ ಪಕ್ಷದ ಮುಖಂಡರು ಹೇಳುತ್ತಿದ್ದಾರೆಯೇ ಹೊರತು ನಿಜ ನಾಯಕನ ಲಕ್ಷಣಗಳಿರುವ ವ್ಯಕ್ತಿಗೆ ಟಿಕೆಟ್ ನೀಡುತ್ತೇವೆ ಎನ್ನುವ ಎದೆಗಾರಿಕೆ ಅವರ‍್ಯಾರಿಗೂ ಇಲ್ಲ. ಗೆಲ್ಲುವ ಸಾಮರ್ಥ್ಯ ಎಂದರೆ ಯಾವುದು? ಜಾತಿ, ವಂಶ, ಥೈಲಿ! ಇದೇ ಅಭ್ಯರ್ಥಿ ಆಯ್ಕೆಯ ಮಾನದಂಡವಾಗಿರುವುದರಿಂದ ಸದನದಲ್ಲಿ ಅಭಿರುಚಿಹೀನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಈ ಕಾರಣದಿಂದಲೇ ಚರ್ಚೆಯ ಗುಣಮಟ್ಟವೂ ಕುಸಿದಿದೆ.

ಜನಪ್ರತಿನಿಧಿಗಳಿಗೆ ಸಾಹಿತ್ಯ, ಸಂಗೀತ, ರಂಗಭೂಮಿ ಸೇರಿದಂತೆ ಸಾಂಸ್ಕೃತಿಕ ಅಭಿರುಚಿ ಇದ್ದರೆ ಚೆನ್ನ. ಅದೇ ಕಡ್ಡಾಯವೇನಲ್ಲ. ಆದರೆ ಜನರ ಋಣ ತೀರಿಸಿ ಒಳಿತು ಮಾಡುವ ಮನಸ್ಸಾದರೂ ಇರಬೇಡವೇ? ಪ್ರತಿಯೊಬ್ಬರೂ ಸರ್ವಗುಣ ಸಂಪನ್ನರಾಗಿರುವುದು ಸಾಧ್ಯವೂ ಇಲ್ಲ. ಆದರೆ ಕನಿಷ್ಠ ಒಂದಾದರೂ ವಿಶೇಷ ಸಾಮರ್ಥ್ಯ ಪ್ರದರ್ಶಿಸುವಂಥ ವ್ಯಕ್ತಿತ್ವವಾದರೂ ಬೇಡವೇ? ರಾಜಕಾರಣದಲ್ಲಿ ಕಾರ್ಯತಃ ಇದೆಲ್ಲ ಸಾಧ್ಯವಿಲ್ಲ ಎಂದು ವಾದಿಸಬಹುದು. ಆದರೆ ಓರ್ವ ಜನಪ್ರತಿನಿಧಿ ಪ್ರಾಮಾಣಿಕ ಮತ್ತು ಜನಪರವಾಗಿದ್ದರೆ, ದಿಟ್ಟತನ ಇರುವ ಕ್ರಿಯಾಶೀಲನಾಗಿದ್ದರೆ, ಸರಳ ಮತ್ತು ಜಾತ್ಯತೀತನಾಗಿದ್ದರೆ, ಪರಿವರ್ತನಾಶೀಲ ಮನಃಸ್ಥಿತಿಯವನಾಗಿದ್ದರೆ ಆತ ಯಾವ ಜಾತಿ, ಯಾವ ಧರ್ಮಕ್ಕೆ ಸೇರಿದವನು ಎಂಬ ಬಗ್ಗೆ ಮತದಾರ ತಲೆ ಕೆಡಿಸಿಕೊಳ್ಳುವುದಿಲ್ಲ. ಬಹುತೇಕ ಜನಪ್ರತಿನಿಧಿಗಳು ಎಲ್ಲ ರೀತಿಯಲ್ಲಿ ಅರ್ಹರೇ ಆಗಿದ್ದು ಒಂದೇ ಜಾತಿಗೆ ಸೇರಿದ್ದರೂ ಅದರ ಬಗ್ಗೆ ಚಕಾರ ಎತ್ತುವುದೂ ಸಾಧ್ಯವಿಲ್ಲ. ಆದರೆ ಜಾತಿ ಬಲ ಆಧರಿತ ಆಯ್ಕೆಯಲ್ಲೂ ಪ್ರತಿಭೆ, ಸಾಮರ್ಥ್ಯಕ್ಕಿಂತ ಥೈಲಿಗೇ ಮನ್ನಣೆ ನೀಡಲಾಗುತ್ತಿದೆ. ವಂಶಪಾರಂಪರ್ಯ ಪ್ರಾತಿನಿಧ್ಯದಲ್ಲಿ ಲಟ್ಟೆಕಾರರೇ ಅವಕಾಶ ಗಿಟ್ಟಿಸುತ್ತಿದ್ದಾರೆ.

ವಂಶಾಡಳಿತಕ್ಕೆ ಎಚ್.ಡಿ.ದೇವೇಗೌಡರು ನೀಡಿರುವ ಕೊಡುಗೆಯಂತೂ ಅಪರಿಮಿತ. ಇಂಥದ್ದೇ ವ್ಯಾಮೋಹಕ್ಕೆ ಬೂ.ಸಿ.ಯಡಿಯೂರಪ್ಪ ಶರಣಾಗಿದ್ದಾರೆ. ಅವರ ಓರ್ವ ಪುತ್ರ ರಾಘವೇಂದ್ರ ಸಂಸದನಾಗಿದ್ದೂ ಆಯಿತು, ಶಾಸಕನಾಗಿದ್ದೂ ಆಯಿತು. ಈಗ ಇನ್ನೋರ್ವ ಪುತ್ರ ವಿಜಯೇಂದ್ರ ಸ್ಪರ್ಧೆಗೆ ವರುಣಾ ಕ್ಷೇತ್ರದ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರಂತೆ. ಸಾಮಾಜಿಕವಾಗಿ ಯಾವುದೇ ಸತ್ಕಾರ್ಯಗಳಲ್ಲಿ ಗುರುತಿಸಿಕೊಳ್ಳದಿದ್ದರೂ ತಮ್ಮ ಪುತ್ರನನ್ನೂ ವಂಶಾಡಳಿತದ ಅಧ್ಯಾಯಕ್ಕೆ ಸೇರ್ಪಡೆಗೊಳಿಸುವ ಹಟ ತೊಟ್ಟು ತಾವು ಇತರರಿಗಿಂತ ಭಿನ್ನ ಅಲ್ಲ ಎಂಬುದನ್ನು ಸಾಬೀತುಪಡಿಸಲು ಹೊರಟಿದ್ದಾರೆ ಸಮಾಜವಾದಿ ಸಿದ್ದರಾಮಯ್ಯ. ಮುಖ್ಯಮಂತ್ರಿ, ಮಾಜಿ ಪ್ರಧಾನಿ ಅಥವಾ ಮಾಜಿ ಮುಖ್ಯಮಂತ್ರಿಯ ಪುತ್ರರಾಗಿರುವುದೂ ಒಂದು ಸಾಧನೆ! ಯಾರೇ ಜನಪ್ರತಿನಿಧಿ ಮೃತಪಟ್ಟರೆ ಆ ಕ್ಷೇತ್ರದಲ್ಲಿ ಟಿಕೆಟ್ ಪಡೆಯುವ ಆತನ ಪತ್ನಿ ಅಥವಾ ಪುತ್ರ ಅನುಕಂಪದ ಆಧಾರದಲ್ಲಿ ಮತ ಗಳಿಸಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಂಬಂಧಪಟ್ಟ ಪಕ್ಷಕ್ಕೆ ನೆರವಾಗುತ್ತಿದ್ದಾರೆಯೇ ಹೊರತು ಅಂಥ ಬಹುತೇಕರ ಆಯ್ಕೆ ಲೊಳಲೊಟ್ಟೆಯಾಗಿದೆ. ಮೃತಪಟ್ಟವರ ಕುಟುಂಬದವರನ್ನು ಬಿಟ್ಟು ಇನ್ನೋರ್ವ ಅರ್ಹನನ್ನು ಗುರುತಿಸುವ ಸಹನೆಯೂ ರಾಜಕೀಯ ಪಕ್ಷಗಳಿಗಿಲ್ಲ. ಈಗೀಗಂತೂ ಎಷ್ಟೋ ರಾಜಕಾರಣಿಗಳು ತಮಗಷ್ಟೇ ಅಲ್ಲದೇ ತಮ್ಮ ಮಕ್ಕಳಿಗೂ ಅದೇ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸುವ ಅತ್ಯಂತ ಮಾನಗೇಡಿ ವರ್ತನೆ ಪ್ರದರ್ಶಿಸುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಕೆಲವೇ ಕುಟುಂಬಗಳ ಗುತ್ತಿಗೆ ಎಂಬಂತೆ ಜಾರಕಿಹೊಳಿ (ಸತೀಶ್ ಜಾರಕಿಹೊಳಿಯ ವಿಚಾರಗಳೇನೇ ಇರಲಿ) ಬ್ರದರ್ಸ್‌, ಗುತ್ತೇದಾರ್‌ಗಳು, ಕತ್ತಿಗಳು, ಶಾಮನೂರ್‌ಗಳು ತಮ್ಮ ಚುನಾವಣಾ ಅಸ್ತ್ರಗಳಿಗೆ ಸಾಣೆ ಹಿಡಿಯಲು ಶುರು ಮಾಡಿದ್ದಾರೆ.

ಸಮಾಜಮುಖಿಯಲ್ಲದಿದ್ದರೂ ಥೈಲಿ ಬಲವೊಂದರಿಂದಲೇ ವಿಧಾನಸಭೆ ಮತ್ತು ಲೋಕಸಭೆ ಪ್ರವೇಶಿಸಬಹುದು ಎನ್ನುವುದನ್ನು ಬಳ್ಳಾರಿ ಬ್ರದರ್ಸ್, ಸಾತನೂರು ಸಹೋದರರು, ವಿಜಯನಗರದ ಅಪ್ಪ ಮತ್ತು ಮಗ, ಶ್ರೀರಾಮುಲು ಅಂಡ್ ಕಂಪನಿ ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಈ ಥೈಲಿವಂತರಿಗೆ ಸ್ವಂತ ಹಿತಾಸಕ್ತಿ ಕಾಪಾಡಿಕೊಳ್ಳುವ ನಿಷ್ಠೆ ಇದೆಯೇ ಹೊರತು ಅವರಿಗೆ ಯಾವುದೇ ತತ್ವ ಮತ್ತು ಬದ್ಧತೆ ಇಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸುವ ಈ ಥೈಲಿಶೂರರು ತಮ್ಮ ಕ್ಷೇತ್ರದ ಯಾರೇ ಮತದಾರರು ಮನೆಗೆ ಬಂದರೂ ಅವರ ಸಂಖ್ಯೆ ಎಷ್ಟೇ ಇದ್ದರೂ ಊಟ ಹಾಕುವುದು, ಮದುವೆ, ನಾಮಕರಣ ಮತ್ತು ತಿಥಿ ಕಾರ್ಯಗಳಿಗೆ ಒಂದಷ್ಟು ಕಾಸು ನೀಡುವುದನ್ನೇ ಸಮಾಜಮುಖಿ ಕಾರ್ಯ ಎಂಬಂತೆ ವಂಚಿಸುತ್ತಾ ನಿರಂತರ ಗೆಲುವನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಪ್ರಬಲ ಜಾತಿಗಳ ಜನಪ್ರತಿನಿಧಿಗಳಿಗೆ ಜನಪ್ರೀತಿಗಿಂತ ಮಠಬಲದ ಕೃಪಾಶ್ರಯ ಇದ್ದೇ ಇರಬೇಕು. ಈ ವಿಷಯದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಜನಪ್ರತಿನಿಧಿಗಳು ಜಾತ್ಯತೀತರು! ಪಕ್ಷಾತೀತರು! ಇಲ್ಲಿನ ಬಹುತೇಕ ಜನಪ್ರತಿನಿಧಿಗಳು ಉಡುಪಿಯ ಅಷ್ಟಮಠಗಳ ಹಿತ ಕಾಯುವುದು ತಮ್ಮ ಕರ್ತವ್ಯಗಳಲ್ಲಿ ಒಂದೆಂದು ಭಾವಿಸಿರುತ್ತಾರೆ! ಜನನಿಷ್ಠರಾದವರು ಮಠಗಳನ್ನು ಓಲೈಸುವ ಅಗತ್ಯವಾದರೂ ಏನು?

ಅದೊಂದು ಕಾಲವಿತ್ತು. ರಾಜ್ಯದಲ್ಲಿ ಸಮಾಜವಾದಿ ಚಳವಳಿಯ ಹರಿಕಾರರಾಗಿ ಬದುಕಿನುದ್ದಕ್ಕೂ ಈ ನೆಲದ ಸಂಸ್ಕೃತಿಯ ದನಿಯಾಗಿದ್ದ ಶಾಂತವೇರಿ ಗೋಪಾಲಗೌಡ ಅವರಂಥ ಮಹಾನ್ ನಾಯಕ ಇದೇ ವಿಧಾನಸಭೆಯ ಸದಸ್ಯರಾಗಿದ್ದರು. ದೇವರಾಜ ಅರಸು ಅವರು ಕೈಗೊಂಡ ಬಹುತೇಕ ಜನಪರ ನಿರ್ಧಾರಗಳ ಹಿಂದೆ ಗೋಪಾಲಗೌಡರ ಚಿಂತನೆಗಳ ಪ್ರಭಾವ ಇರುತ್ತಿತ್ತು. ಹಾಗೇ ರಾಜ್ಯದಲ್ಲಿ ಹಸಿರು ಶಕ್ತಿಯ ವಿರಾಟ ರೂಪ ಪ್ರದರ್ಶನಕ್ಕೆ ಕಾರಣಕರ್ತರಾದವರಲ್ಲಿ ಒಬ್ಬರಾದ ಎಂ.ಡಿ.ನಂಜುಂಡಸ್ವಾಮಿ ರೈತ ಚಳವಳಿಯ ಆಶಯಗಳನ್ನು ವಿಧಾನಸಭೆಯಲ್ಲಿ ಪ್ರತಿಧ್ವನಿಸುವಂತೆ ಮಾಡಿದ ನಿಷ್ಠುರ ಮಾತುಗಳ ನಿಜ ನಾಯಕರು. ದಿಟ್ಟತನ, ನೇರ ಮಾತುಗಳಿಗೆ ಹೆಸರಾಗಿದ್ದ ಬಿ.ಬಸವಲಿಂಗಪ್ಪ ಈ ನಾಡು ಕಂಡ ಅಪ್ಪಟ ನಾಯಕರು. ರಾಜ್ಯದಲ್ಲಿ ದಲಿತ ಚಳವಳಿಯ ಹುಟ್ಟಿಗೆ ಅವರೂ ಒಂದರ್ಥದಲ್ಲಿ ಕಾರಣಕರ್ತರು. ಕವಿ, ಪತ್ರಕರ್ತ, ಕನ್ನಡ ಕಾರ್ಯಕರ್ತ, ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ ಹೀಗೆ ಬಹುಮುಖೀ ವ್ಯಕ್ತಿತ್ವದ ಬಿ.ಎಂ. ಇದಿನಬ್ಬ ಮೂರು ಬಾರಿ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದವರು. ಚುರುಕು ಮುಟ್ಟಿಸುವ ಚುಟುಕುಗಳಿಂದಲೇ ವಿಧಾನಸಭೆಯಲ್ಲಿ ಗಮನ ಸೆಳೆಯುತ್ತಿದ್ದವರು. ಕೋಮು ಸಾಮರಸ್ಯಕ್ಕೆ ಇನ್ನೊಂದು ಹೆಸರಿನಂತಿದ್ದವರು.

ರಾಜ್ಯ ವಿಧಾನಸಭಾ ಇತಿಹಾಸದಲ್ಲಿ ಶಾಸಕಿಯರ ವಿಷಯಕ್ಕೆ ಬರುವುದಾದರೆ ಕೆ.ಎಸ್.ನಾಗರತ್ನಮ್ಮ ಅವರಂಥ ಇನ್ನೋರ್ವ ನಾಯಕಿಯ ಹೆಸರನ್ನು ಉದಾಹರಿಸುವುದು ಸಾಧ್ಯವಿಲ್ಲ. 1957ರಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ರಚನೆಯಾದಾಗ ಅಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು (ಕ್ರಮೇಣ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು) ತಮ್ಮ ಸಾಮರ್ಥ್ಯ ಪ್ರದರ್ಶಿಸಿದವರು ಅವರು. ಏಳು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ನಾಗರತ್ನಮ್ಮ ಪುರುಷರಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿ ಹೇಗೆ ಮಹಿಳೆಯರು ರಾಜಕಾರಣದಲ್ಲಿ ನೆಲೆಯೂರಬಹುದು ಎಂದು ತೋರಿಸಿಕೊಟ್ಟವರು. ವಿಧಾನಸಭಾಧ್ಯಕ್ಷರಾಗಿ ನಿಯಮಾನುಸಾರ ಕಾರ್ಯ ನಿರ್ವಹಿಸುವ ಮೂಲಕ ಗಮನ ಸೆಳೆದವರು. ವಿರೋಧ ಪಕ್ಷದ ನಾಯಕರಾಗಿ ಆ ಸ್ಥಾನದ ಘನತೆಗೆ ಕುಂದು ತರದಂತೆ ಆರೋಗ್ಯಕರ ರಾಜಕೀಯ ಟೀಕೆಗಳನ್ನು ಹೇಗೆ ಪ್ರಯೋಗಿಸಬಹುದೆಂದು ತೋರಿಸಿಕೊಟ್ಟವರು, ಆರೋಗ್ಯ ಸಚಿವರಾಗಿ ಅಪರೂಪದ ಜನಪರ ನಿರ್ಧಾರಗಳನ್ನು ಕೈಗೊಂಡವರು. ರಾಜ್ಯದಲ್ಲಿ ಕಮ್ಯುನಿಸ್ಟ್ ಚಳವಳಿಯ ಸ್ಥಾಪಕರಲ್ಲಿ ಒಬ್ಬರಾಗಿದ್ದ ಎಂ.ಎಸ್.ಕೃಷ್ಣನ್ ನಾಲ್ಕು ಸಲ ವಿಧಾನಸಭೆಗೆ ಆಯ್ಕೆಯಾಗಿದ್ದರು. ಸದನದಲ್ಲಿ ಶ್ರಮಿಕರು ಮತ್ತು ಮಧ್ಯಮ ವರ್ಗದ ಪರ ಇದ್ದ ಅವರ ಮನಮುಟ್ಟುವ ಮಾತುಗಳೆಂದರೆ ಎಲ್ಲ ಪಕ್ಷಗಳ ನಾಯಕರಿಗೂ ಎಲ್ಲಿಲ್ಲದ ಗೌರವ. ಸಿರಿವಂತ ಕುಟುಂಬದಲ್ಲಿ ಜನಿಸಿದ್ದರೂ ಅತ್ಯಂತ ಸರಳವಾಗಿ ಬದುಕಿದವರು, ಕೊನೆಯ ಉಸಿರಿನವರೆಗೂ ತತ್ವಬದ್ಧರಾಗಿ ಉಳಿದ ಅಪರೂಪದ ನಾಯಕರು. ಆರ್.ಗುಂಡೂರಾವ್ ನೇತೃತ್ವದ ಸರ್ಕಾರದ ಪತನಕ್ಕೆ ಪ್ರಮುಖ ಕಾರಣರಾಗಿದ್ದ ಎ.ಕೆ.ಸುಬ್ಬಯ್ಯ ವಿಧಾನ ಪರಿಷತ್‌ನಲ್ಲಿದ್ದ ಅವಧಿಯಂತೂ ರಾಜ್ಯ ರಾಜಕೀಯ ಇತಿಹಾಸದ ಪ್ರಮುಖ ಅಧ್ಯಾಯಗಳಲ್ಲಿ ಒಂದಾಗಿ ದಾಖಲಾಗಿದೆ. ಹೀಗೆ ಟಿ.ಆರ್.ಶಾಮಣ್ಣ, ಕೊಣಂದೂರು ಲಿಂಗಪ್ಪ, ಬಿ.ಎ.ಉಮರಬ್ಬ, ವೈ.ಕೆ.ರಾಮಯ್ಯ, ಜಿ.ಮಾದೇಗೌಡ, ಸಿ.ಬೈರೇಗೌಡ, ಎಚ್.ಎನ್.ನಂಜೇಗೌಡ, ಕೆ.ಎಚ್.ರಂಗನಾಥ್, ಬಿ.ಎಚ್.ಲಕ್ಷ್ಮಣಯ್ಯ, ಬಿ.ವಿ.ಕಕ್ಕಿಲ್ಲಾಯ, ಎಂ.ಸಿ.ನಾಣಯ್ಯ, ವಾಟಾಳ್ ನಾಗರಾಜ್, ಬಿ.ಜಿ.ಬಣಕಾರ್, ಬಿ.ಬಿ.ಶಿವಪ್ಪ, ಕೆ.ಎಸ್.ಪುಟ್ಟಣ್ಣಯ್ಯ ಇಂಥ ಒಬ್ಬೊಬ್ಬರೂ ಸರಳತೆ, ಮನಸೆಳೆಯುವ ಭಾಷಣ, ದಕ್ಷತೆ, ಸಜ್ಜನಿಕೆ, ಪ್ರಾಮಾಣಿಕತೆ, ದಿಟ್ಟತನ ಮುಂತಾದ ಕಾರಣಗಳಿಂದ ಜನಮಾನಸದಲ್ಲಿ ಉಳಿಯುವಂತೆ ಸ್ವಂತಿಕೆ ಮೆರೆದವರು. ಈಗಾಗಲೇ ಬಂದು ಹೋಗಿರುವ ಕೆಲವು ಮುಖ್ಯಮಂತ್ರಿಗಳೂ ಸೇರಿದಂತೆ ಇಂಥ ಇನ್ನಷ್ಟು ಮಹಾಮಹಿ ಮರಿದ್ದರೂ ಕೆಲವರ ಹೆಸರನ್ನಷ್ಟೇ ಉದಾಹರಣೆಯಾಗಿ ನೀಡಿದ್ದೇನೆ. ಅಭ್ಯರ್ಥಿಗಳಾಗಿ ಆಯ್ಕೆಯಾಗುವವರು ಈ ಮಹೋನ್ನತ ಪರಂಪರೆಯ ನಾಯಕರಿಂದ ಕಲಿಯುವುದು ಬಹಳಷ್ಟಿದೆ. ಬದಲಾವಣೆ ಬಯಸುವ ಮತದಾರರು ಎಂದಿನಂತೆ ಆಸೆಗಣ್ಣಿನಿಂದ ಕಾಯುತ್ತಲೇ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.