ಇದು ಸುಮಾರು ನಾಲ್ಕೈದು ದಶಕಗಳ ಹಿಂದಿನ ಸಂಗತಿ. ಅವರು ಓರ್ವ ಆದರ್ಶ ಅಧ್ಯಾಪಕರು. ತಮ್ಮ ಊರಿನಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ತಮ್ಮ ತೋಟದಲ್ಲಿ ಮನೆಯೊಂದನ್ನು ನಿರ್ಮಿಸುವ ಸಲುವಾಗಿ ಮತ್ತು ಪೀಠೋಪಕರಣಗಳಿಗಾಗಿ ಕೌಕೋಲು, ರಿಪೀಸ್ ಸೇರಿದಂತೆ ವಿವಿಧ ಗಾತ್ರದ ಮರದ ತುಂಡುಗಳನ್ನು ತರಿಸಿ ತಾವಿದ್ದ ಮನೆಯ ಕಾಂಪೌಂಡ್‍ನಲ್ಲಿ ಇರಿಸಿದ್ದರು. ವಾರ ಕಳೆಯುವಷ್ಟರಲ್ಲಿ ಕಾಂಪೌಂಡ್‍ನಲ್ಲಿ ಇರಿಸಿದ್ದ ಮರದ ತುಂಡುಗಳತ್ತ ಕಣ್ಣು ಹಾಯಿಸಿದರೆ ಏನೋ ವ್ಯತ್ಯಾಸವಾಗಿರುವುದು ಗಮನಕ್ಕೆ ಬಂತು. ಅಲ್ಲಿದ್ದ ಮರದ ತುಂಡುಗಳನ್ನು ಲೆಕ್ಕ ಹಾಕಿ ನೋಡಿದರೆ ಮೂರ್ನಾಲ್ಕು ಕೌಕೋಲು ಕಡಿಮೆಯಾಗಿದೆ ಅನ್ನಿಸಿತು. ತರಿಸಿದ್ದು ಅಷ್ಟೇ ಇರಬೇಕೇನೋ ಅಥವಾ ಲೆಕ್ಕ ತಪ್ಪಿರಬೇಕು ಎಂದು ಮೊದಲು ಅಂದುಕೊಂಡು ಸುಮ್ಮನಾದರು.
ಇನ್ನೆರಡು ದಿನ ಬಿಟ್ಟು ನೋಡಿದರೆ ಮರದ ತುಂಡುಗಳನ್ನು ಇರಿಸಿದ್ದ ಜಾಗದಲ್ಲಿ ಇನ್ನೂ ಕೆಲವು ತುಂಡುಗಳು ಕಡಿಮೆಯಾಗಿರುವುದು ಗೋಚರಿಸಿತು. ಲೆಕ್ಕ ಹಾಕಿ ನೋಡಿದರೆ ಇನ್ನೆರಡು ಕೌಕೋಲುಗಳು ಕಡಿಮೆಯಾಗಿರುವುದು ಖಾತ್ರಿಯಾಯಿತು. ಯಾರು ಈ ಕೆಲಸ ಮಾಡುತ್ತಿರಬಹುದು? ಯಾರನ್ನೆಂದು ಅನುಮಾನಿಸುವುದು? ಆ ಬಗೆಯ ಕಳ್ಳತನ ಹಿಂದೆಂದೂ ನಡೆದಿರಲಿಲ್ಲ. ಹಿಂದೊಮ್ಮೆ ಕೂಡ ಮನೆಗೆ ಬೇಕಿದ್ದ ಪೀಠೋಪಕರಣಗಳಿಗಾಗಿ ಮರದ ತುಂಡುಗಳನ್ನು ತರಿಸಿ ಮನೆಗೆ ತಗಲಿಕೊಂಡಂತಿದ್ದ ಎಡಭಾಗದ ದಿಣ್ಣೆಯ ಮೇಲೆ ಇರಿಸಿದ್ದರೂ ಕಳ್ಳತನವಾಗಿರಲಿಲ್ಲ. ಕಳ್ಳರನ್ನು ಪತ್ತೆ ಹಚ್ಚಲೇಬೇಕೆಂದು ದೃಢ ನಿಶ್ಚಯ ಮಾಡಿ ರಾತ್ರಿಯಾಗುತ್ತಿದ್ದಂತೆ ಮನೆಯ ಎಲ್ಲ ಲೈಟ್‍ಗಳನ್ನು ಆರಿಸಿ ಬೆಡ್ ರೂಂ ಕಿಟಕಿಯಿಂದ ಕಳ್ಳರು ಈಗ ಬರಬಹುದು ಆಗ ಬರಬಹುದು, ಇನ್ನೇನು ಬರಬಹುದು ಎಂದು ಮನೆಯವರೆಲ್ಲ ಉಸಿರು ಬಿಟ್ಟರೂ ಸದ್ದಾಗಬಹುದು ಎಂಬ ಎಚ್ಚರಿಕೆಯಿಂದ ಕಾಯತೊಡಗಿದರು. ಮನೆಯ ಎಲ್ಲರಿಗೂ ನಿರಾಶೆ ಕಾದಿತ್ತು. ಆ ದಿನ ಮರದ ತುಂಡುಗಳನ್ನು ಕದಿಯಲು ಯಾರೂ ಬರಲಿಲ್ಲ.
ಮರದ ತುಂಡುಗಳನ್ನು ಸ್ಥಳಾಂತರ ಮಾಡದೇ ಇದ್ದುದರಿಂದ ಕಳ್ಳರು ಮತ್ತೆ ಬರದೇ ಇರಲಾರರು ಎಂಬ ನಂಬಿಕೆಯಿಂದ ಎರಡನೇ ದಿನ ರಾತ್ರಿಯೂ ಬೆಡ್ ರೂಂ ಕಿಟಕಿಯಿಂದ ಕಳ್ಳರನ್ನು ಕಾಯುವ ಕೆಲಸ ಆರಂಭವಾಯಿತು. ರಾತ್ರಿ ಹನ್ನೊಂದೂವರೆ ಆಗಿರಬೇಕು. ಎಲ್ಲ ಲೈಟ್‍ಗಳನ್ನು ಆರಿಸಿದ್ದರಿಂದ ಒಳಗೂ ಕತ್ತಲು. ಹೊರಗೆ ಬೀದಿ ದೀಪವೂ ಇಲ್ಲದ್ದರಿಂದ ಭೀಕರ ಕತ್ತಲು. ತಲೆಯ ಮೇಲೆ ಸೆರಗು ಹೊದ್ದುಕೊಂಡಿದ್ದ ವ್ಯಕ್ತಿಯೊಬ್ಬರು ಇಬ್ಬರು ಮಕ್ಕಳ ಸಹಾಯದಿಂದ ಒಂದಿಷ್ಟೂ ಸದ್ದಾಗದಂತೆ ಮರದ ತುಂಡುಗಳನ್ನು ಸಾಗಿಸುವ ಕೆಲಸ ಆರಂಭಿಸಿದರು. ಅದನ್ನು ನೋಡುತ್ತಲೇ ಕಳ್ಳರು ಸಿಕ್ಕೇಬಿಟ್ಟರೆಂದು ಮನೆಯಿಂದ ಹೊರಗೆ ಬಂದ ಆ ಅಧ್ಯಾಪಕರಿಗೆ ಅಚ್ಚರಿ ಕಾದಿತ್ತು. ಕಳ್ಳರು ಬೇರಾರೂ ಅಲ್ಲ. ತಮ್ಮ ಮನೆಯವರಿಗೆಲ್ಲ ಗೊತ್ತಿರುವ ಮಹಿಳೆ!
ತಮ್ಮ ಮನೆಯಿಂದ ಕಣ್ಣಿಗೆ ಕಾಣುವ ದೂರದ ಮನೆಯೊಂದರಲ್ಲಿದ್ದ ಬಡ ಮುಸ್ಲಿಂ ಕುಟುಂಬಕ್ಕೆ ಸೇರಿದ ಮಹಿಳೆಯೇ ತನ್ನಿಬ್ಬರು ಮಕ್ಕಳೊಂದಿಗೆ ಕಳವು ಮಾಡುತ್ತಿದ್ದುದನ್ನು ನೋಡಿ ಆ ಅಧ್ಯಾಪಕರಿಗೆ ಬೇಸರ, ಸಿಟ್ಟು ಏಕಕಾಲದಲ್ಲಿ ಮೂಡಿಬಂತು. ಆ ಮಹಿಳೆ ಮತ್ತು ಮಕ್ಕಳನ್ನು ತಡೆದು, ‘ಯಾಕೆ ಹೀಗೆ ಮಾಡಿದ್ರಿ? ಎಷ್ಟು ದಿನದಿಂದ ಇದೇ ಕೆಲಸ ಮಾಡ್ತಿದ್ದೀರಿ? ಈವರೆಗೆ ಕದ್ದಿರುವ ಮರದ ತುಂಡುಗಳನ್ನು ಎಲ್ಲಿಟ್ಟಿದ್ದೀರಿ’ ಎಂದು ಪ್ರಶ್ನಿಸಿ ಸೂಕ್ತ ಉತ್ತರ ದೊರೆಯದೇ ‘ನಡೀರಿ ಪೊಲೀಸ್ ಸ್ಟೇಷನ್‍ಗೆ. ಅಲ್ಲಿ ಕಂಪ್ಲೇಂಟ್ ಕೊಟ್ಟರೆ ಎಲ್ಲ ಹೇಳ್ತೀರಿ’ ಎನ್ನುತ್ತಾ ಮಕ್ಕಳನ್ನು ಮನೆಗೆ ಹೋಗುವಂತೆ ಸೂಚಿಸಿ ಆಕೆಯನ್ನು ಕರೆದೊಯ್ಯಲು ಮುಂದಾದರು.
ಆ ಹೊತ್ತಿಗೆ ಅಧ್ಯಾಪಕರ ಪತ್ನಿ ಮನೆಯಿಂದ ಹೊರಬಂದು ಪತಿಗೆ, ‘ಪೊಲೀಸ್ ಕಂಪ್ಲೇಂಟ್ ಕೊಡೋದೇನೂ ಬೇಡ. ಹೋಗಲಿ ಪಾಪ ಬಿಟ್ಟುಬಿಡಿ’ ಎಂದರೂ ಅಧ್ಯಾಪಕರು ಕೇಳಲಿಲ್ಲ. ‘ಅವರು ಇನ್ನೊಂದು ಸಲ ತಪ್ಪು ಮಾಡದಂತೆ ದೂರು ಕೊಡಲೇಬೇಕು. ಹೀಗೇ ಬಿಟ್ಟರೆ ಅವರು ಇಂಥ ತಪ್ಪುಗಳನ್ನು ಮಾಡುತ್ತಾ ಹೋಗುತ್ತಾರೆ’ ಎಂದರು. ‘ಏನೋ ಬಡತನ. ಅವಳ ಗಂಡ ಕುಡಿದು ದುಡ್ಡು ಹಾಳು ಮಾಡುತ್ತಿದ್ದಾನೆ. ನಾಲ್ಕೈದು ಮಕ್ಕಳಿಗೆ ಊಟ, ಬಟ್ಟೆಗೆ ಅವಳು ಏನು ತಾನೇ ಮಾಡಿಯಾಳು?’ ಎಂಬ ಪತ್ನಿಯ ಮಾತನ್ನು ಅಧ್ಯಾಪಕರು ಒಪ್ಪಲಿಲ್ಲ. ‘ನನಗೂ ಅವರ ನೋವು ಅರ್ಥವಾಗುತ್ತದೆ. ಕಳ್ಳತನ ಮಾಡುವ ಬದಲು ನಮ್ಮನ್ನೇ ಕೇಳಿದ್ದರೆ ಸಹಾಯ ಮಾಡುತ್ತಿರಲಿಲ್ಲವಾ?’ ಎಂದು ಕೇಳಿದರು ಪತಿ. ‘ಬಡತನ ಅಂತ ಹೇಳಿಕೊಳ್ಳಲೂ ಅವಳಿಗೆ ಸಂಕೋಚವಾಗಿರಬಹುದು. ಹೀಗಾಗಿ ಅವಳು ಈ ಕೆಲಸಕ್ಕೆ ಇಳಿದಿರಬಹುದು’ ಎಂದರು ಪತ್ನಿ.
ತಂದೆ ಎದುರು ತಮ್ಮ ತಾಯಿ ನಿಂತು ವಾದಿಸುತ್ತಿದ್ದುದನ್ನು ಅವರ ಮಕ್ಕಳು ಅದೇ ಮೊದಲ ಬಾರಿ ನೋಡಿದ್ದರು. ಚೆನ್ನಾಗಿಯೇ ಉರ್ದು ಮಾತಾಡುತ್ತಿದ್ದ ಅಧ್ಯಾಪಕರ ಪತ್ನಿ ಆ ಮುಸ್ಲಿಂ ಮಹಿಳೆಗೆ ಉರ್ದುವಿನಲ್ಲೇ ಏನೋ ಬೈದಂತೆ ಮಾಡಿ, ‘ಹೀಗೆ ಮಾಡೋದು ಸರಿಯಾ’ ಅಂತ ಪ್ರಶ್ನಿಸಿ ತಮ್ಮ ಪತಿಗೂ ಮನವೊಲಿಸಿ ಆಕೆಯ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಡದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಹಾಗೆ ಅವರು ತಮ್ಮ ಪತಿಯನ್ನು ಮನವೊಲಿಸಲು ಕಾರಣವಾಗಿದ್ದ ಮುಖ್ಯ ಅಂಶ ಯಾವುದು ಗೊತ್ತೇ? ಒಂದು ವಾರದಿಂದ ಆ ಮುಸ್ಲಿಂ ಮಹಿಳೆಯ ಮನೆಯಲ್ಲಿ ಯಾರೂ ಸರಿಯಾಗಿ ಊಟ ಮಾಡಿರಲಿಲ್ಲ. ಅಕ್ಕಿ, ಬೇಳೆ, ಸೀಮೆಎಣ್ಣೆಯೂ ಇಲ್ಲದೆ ಒಲೆಯನ್ನೂ ಹಚ್ಚಿರಲಿಲ್ಲ. ಆ ಕುಟುಂಬದಲ್ಲಿದ್ದ ಐವರು ಪುಟ್ಟ ಮಕ್ಕಳೂ ಉಪವಾಸ ಬಿದ್ದಿದ್ದ ವಿಷಯ ತಿಳಿದು ಅಧ್ಯಾಪಕರು ಮತ್ತು ಅವರ ಪತ್ನಿಯ ಕಣ್ಣಂಚಿನಲ್ಲಿ ನೀರು ಒತ್ತರಿಸಿತ್ತು. ‘ನಮ್ಮನ್ನೇ ಕೇಳಬಹುದಿತ್ತಲ್ಲಾ? ಹೀಗೆ ಕಳ್ಳತನ ಮಾಡೋದು ಸರಿಯಾ?’ ಎಂದು ಇಬ್ಬರೂ ಆ ಮಹಿಳೆಗೆ ಬೈದು ಕೈಗೊಂದಿಷ್ಟು ದುಡ್ಡು, ಅಕ್ಕಿ, ಬೇಳೆಯನ್ನೂ ಕೊಟ್ಟು ಕಳಿಸಿದರು.
ಅಂದಹಾಗೆ ಆ ಅಧ್ಯಾಪಕರು ನನ್ನ ತಂದೆ ಟಿ.ಕೆ. ಕೃಷ್ಣಸ್ವಾಮಿ. ಅಧ್ಯಾಪಕರ ಪತ್ನಿ ನನ್ನ ತಾಯಿ ಕಮಲಮ್ಮ. ನನಗೆ ಆಗಿನ್ನೂ ಹತ್ತೋ ಹನ್ನೆರಡೋ ವರ್ಷ ಇರಬೇಕು. ಆದರೂ ಅಪ್ಪ ಮತ್ತು ಅಮ್ಮನ ನಡುವೆ ನಡೆದ ವಾಗ್ವಾದ ನನ್ನ ಕಿವಿಯಲ್ಲಿನ್ನೂ ಅನುರಣಿಸುತ್ತಿದೆ. ಆ ಮಹಿಳೆಯ ಅಸಹಾಯಕ ದೈನ್ಯ ನೋಟ ಇನ್ನೂ ನನ್ನ ಕಣ್ಣೆದುರಲ್ಲೇ ಹಸಿರಾಗಿದೆ. ಆಗ ನನಗೆ ಇದು ಕೇವಲ ಕಳ್ಳತನಪ್ರಕರಣದಲ್ಲಿ ಅಪ್ಪ ಅಮ್ಮ ಆಕೆಯನ್ನು ಪೊಲೀಸರಿಗೊಪ್ಪಿಸದೇ ದೊಡ್ಡತನ ಮೆರೆದಿದ್ದ ಪ್ರಕರಣವಾಗಿಯಷ್ಟೇ ಕಂಡಿತ್ತು. ಆಕೆಯನ್ನು ಕಾನೂನಿಗೆ ಒಪ್ಪಿಸಬೇಕೆನ್ನುವ ಅಪ್ಪ, ಕಠಿಣ ಹೃದಯದವರೇನೂ ಆಗಿರಲಿಲ್ಲ. ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುತ್ತಿದ್ದವರು. ಯಾರೂ ಯಾವುದೇ ತಪ್ಪು ಮಾಡಬಾರದು. ತಪ್ಪು ಮಾಡಿದವರಿಗೆ ಶಿಕ್ಷೆಯಾಗುವ ಮೂಲಕ ಅವರ ಮನಃಪರಿವರ್ತನೆಯಾಗಬೇಕು ಎಂದು ಹೇಳುತ್ತಿದ್ದರೇ ಹೊರತು ಆ ಮಹಿಳೆಗೆ ತೊಂದರೆ ಕೊಡಬೇಕು ಅನ್ನುವ ಯಾವ ಉದ್ದೇಶವೂ ಅವರಿಗಿರಲಿಲ್ಲ. ಅವರ ಮಾತುಗಳು ನೈತಿಕತೆ ಮತ್ತು ಕಾನೂನಿನ ಪ್ರಶ್ನೆಯನ್ನು ಎತ್ತಿದ್ದರೆ, ಅಮ್ಮನ ಮಾತುಗಳು ಸಾಮಾಜಿಕ ಮೌಲ್ಯದ ಪ್ರಶ್ನೆಯನ್ನು ಎತ್ತಿದ್ದವು ಎನ್ನುವುದು ವರ್ಷಗಳು ಕಳೆದಂತೆ ನನ್ನ ಅರಿವಿಗೆ ಬಂತು. ಅವರ ಬೈಗುಳ ಕೂಡ ನೆರೆಮನೆಯವರು ಹಸಿವಿನಿಂದ ಒದ್ದಾಡುತ್ತಿದ್ದಾರಲ್ಲಾ ಎಂಬ ನೋವು ಮತ್ತು ಮನುಷ್ಯ ಸಹಜವಾದ ಪ್ರೀತಿಯಿಂದ ಕೂಡಿತ್ತು. ಆ ಘಟನೆ ಬಹುಸಂಸ್ಕೃತಿಯ ಭಾರತದಲ್ಲಿ ಸಹಬಾಳ್ವೆ ಎಂದರೇನೆಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿತ್ತು. ತಮಗಿಂತ ದುರ್ಬಲರನ್ನು ಪೋಷಿಸಬೇಕೆನ್ನುವ ಪಾಠವನ್ನೂ ಆ ಘಟನೆ ನನಗೆ ಕಲಿಸಿತ್ತು.
ಇದೆಲ್ಲ ಆಗಿ ಎಷ್ಟೋ ವರ್ಷಗಳ ನಂತರ ನಾನು ದೇಶದಲ್ಲಿ ಹಸಿರು ಕ್ರಾಂತಿಗೆ ಮುಖ್ಯ ಕಾರಣರಾಗಿದ್ದ ಮಾಜಿ ಉಪಪ್ರಧಾನಿ ಜಗಜೀವನರಾಂ ಅವರ ಬಗ್ಗೆ ಓದುತ್ತಿದ್ದಾಗ ಅವರೇ ಹೇಳಿದ್ದ ಒಂದು ಮಾತು ನೋಡಿ ಅಮ್ಮ ನೆನಪಾಗಿದ್ದಳು. ಯಾಕೆಂದರೆ ಜಗಜೀವನರಾಂ, ‘ನನ್ನ ಆಡಳಿತದಲ್ಲಿ ಅನ್ನಕ್ಕಾಗಿ ಕಳ್ಳತನ ಮಾಡಿದವನಿಗೆ ಶಿಕ್ಷೆ ಇಲ್ಲ. ಯಾಕೆಂದರೆ ಎಲ್ಲರಿಗೆ ಅನ್ನ ಕೊಡಲು ನನಗೆ ಸಾಧ್ಯವಾಗದಿದ್ದರೆ ಅನ್ನಕ್ಕಾಗಿ ಕಳವು ಮಾಡಿದವರನ್ನು ಶಿಕ್ಷಿಸುವ ಅಧಿಕಾರವೂ ನನಗಿಲ್ಲ’ ಎಂದು ಹೇಳಿದ್ದರು. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಜಗಜೀವನರಾಂ ಓರ್ವ ಮುತ್ಸದ್ದಿಯಾಗಿ ಮಾತ್ರವಲ್ಲದೇ ಅಪ್ಪಟ ಮನುಷ್ಯನಾಗಿಯೂ ಆ ಮಾತುಗಳನ್ನು ಹೇಳಿದ್ದರು. ಹಾಗೆ ಹೇಳುವುದು ಜನಸಾಮಾನ್ಯರ ಹಸಿವು, ನೋವುಗಳ ಅರಿವಿರುವ ನಿಜನಾಯಕನಿಂದ ಮಾತ್ರ ಸಾಧ್ಯ. ಆದರೆ ನನ್ನ ಅಮ್ಮ? ಸಾಮಾನ್ಯರಲ್ಲೇ ಸಾಮಾನ್ಯಳಾಗಿದ್ದ ಆಕೆ ಹಾಗೆ ನಡೆದುಕೊಳ್ಳುವುದಕ್ಕೆ ಸ್ವತಃ ಆಕೆಗಿದ್ದ ತಾಯಿ ಹೃದಯವೂ ಕಾರಣವಾಗಿದ್ದಿರಬಹುದು, ಆ ಕಾಲದ ಸಾಮಾಜಿಕ ಮೌಲ್ಯಗಳೇ ಕಾರಣವಾಗಿದ್ದಿರಬಹುದು.
ಆದರೆ ಈಗ ಆಗುತ್ತಿರುವುದಾದರೂ ಏನು? ಕೆಲವು ತಿಂಗಳ ಹಿಂದೆ ಕೇರಳದಲ್ಲಿ ಆಹಾರ ಪದಾರ್ಥಗಳನ್ನು ಕದ್ದಿದ್ದಾನೆ ಎಂಬ ಅನುಮಾನದ ಮೇಲೆ ಬುಡಕಟ್ಟು ಸಮುದಾಯಕ್ಕೆ ಸೇರಿದ ಯುವಕನೊಬ್ಬನನ್ನು ಗುಂಪೊಂದು ಹೊಡೆದು ಕೊಂದಿತ್ತು. ಆ ನಂತರ ಆತನ ಮನೆಯಲ್ಲಿದ್ದ ಚೀಲ ತೆರೆದು ನೋಡಿದರೆ ಅದರಲ್ಲಿದ್ದದ್ದು ಒಂದು ಹಿಡಿಯಷ್ಟು ಅಕ್ಕಿ ಮತ್ತು ಚಿಟಿಕೆ ಸಾಂಬಾರ ಪುಡಿ! ಉತ್ತರಪ್ರದೇಶದ ಯಾವುದೋ ಊರಿನ ಮುಸ್ಲಿಮರಿದ್ದ ಮನೆಯೊಂದರಲ್ಲಿ ದನದ ಮಾಂಸ ಇಟ್ಟುಕೊಂಡಿದ್ದರೆಂಬ ಶಂಕೆಯ ಮೇಲೆ ಆ ಮನೆಯ ವೃದ್ಧ ಯಜಮಾನನನ್ನೇ ಕೊಂದುಹಾಕಿದ್ದರು. ಆನಂತರ ಗೊತ್ತಾದ ಸತ್ಯವೆಂದರೆ ಅವರ ಮನೆಯಲ್ಲಿದ್ದುದು ಕುರಿ ಮಾಂಸ! ಹಾಗೊಂದು ವೇಳೆ ಬುಡಕಟ್ಟು ಯುವಕನ ಮನೆಯಲ್ಲಿ ಕೆಜಿಗಟ್ಟಲೆ ದಿನಸಿ ಪದಾರ್ಥಗಳೂ, ಮುಸ್ಲಿಮರ ಮನೆಯಲ್ಲಿ ದನದ ಮಾಂಸ ಇತ್ತೆಂದೇ ಇಟ್ಟುಕೊಂಡರೂ ಅವರನ್ನು ಕೊಲ್ಲುವ ಅಧಿಕಾರ ಯಾರಿಗಿದೆ? ಹಾಗೇ ದನಗಳನ್ನು ಸಾಗಿಸುತ್ತಿದ್ದಾರೆಂದೋ ಮಕ್ಕಳ ಕಳ್ಳರೆಂದೋ ಕೇವಲ ಅನುಮಾನದ ಮೇಲೆ ಸೈರಣೆ ಕಳೆದುಕೊಂಡ ಗುಂಪು ದಾಳಿಯಿಂದ ಅದೆಷ್ಟೋ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇಂಥ ಎಲ್ಲ ಘಟನೆಗಳಲ್ಲೂ ಸಾವನ್ನಪ್ಪಿರುವುದು ಅಸಹಾಯಕ ದುರ್ಬಲರು. ಕಾನೂನನ್ನು ತಮ್ಮ ಕೈಗೇ ತೆಗೆದುಕೊಳ್ಳುವ ಸಮೂಹಸನ್ನಿಗೆ ಒಳಗಾದ ನಿರಕ್ಷರಕುಕ್ಷಿ ಸಮುದಾಯ, ಬಲಾಢ್ಯರ ಠೇಂಕಾರ, ತಮ್ಮ ಮಾತೇ ನಡೆಯಬೇಕೆಂಬ ಬಹುಸಂಖ್ಯಾತರ ಒಣ ಹಟ ಈ ಎಲ್ಲ ಘಟನೆಗಳ ಹಿಂದಿದೆ.
ಭಾರತಮಾತೆಯ ಮಡಿಲಲ್ಲೇ ಇಂಥೆಲ್ಲ ಅಮಾನವೀಯ, ಕಾನೂನುಬಾಹಿರ ಘಟನೆಗಳು ಒಂದರ ನಂತರ ಒಂದರಂತೆ ನಡೆಯುತ್ತಲೇ ಇವೆ. ಅಮಾಯಕರು, ಅಸಹಾಯಕರ ರೋದನದ ನಡುವೆ ಅಷ್ಟದಿಕ್ಕುಗಳಲ್ಲೂ ಪ್ರತಿಧ್ವನಿಸುತ್ತಿರುವ ಬೊಗಳೆ ನಾಯಕರ ಅಭಿವೃದ್ಧಿ ಮಂತ್ರಗಳೂ ಕರ್ಕಶವಾಗಿ ಕೇಳುತ್ತಿವೆ. ಆ ದಿನಗಳಲ್ಲಿ ಹಾಗಿತ್ತು, ಈ ದಿನಗಳಲ್ಲಿ ಹಾಗೇಕಿಲ್ಲ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ ಸತ್ಯದ ಹೊಳಹೊಂದು ಸಿಗುತ್ತದೆ. ಮನುಷ್ಯ ಆಧುನಿಕನಾದಷ್ಟೂ ವಿಶಾಲ ಹೃದಯಿಯಾಗುವ ಬದಲು ಸಂಕುಚಿತ ಮನಸ್ಸಿನ ರಾಕ್ಷಸನಾಗುತ್ತಿದ್ದಾನೆ. ವಿಜ್ಞಾನದ ಅತ್ಯಾಧುನಿಕ ಆವಿಷ್ಕಾರಗಳಿಲ್ಲದ ಅಂದಿನ ದಿನಗಳಲ್ಲಿ ಸಾಮಾಜಿಕ ಮೌಲ್ಯಗಳು ಸಮೃದ್ಧವಾಗಿದ್ದವು. ಈಗ ವಾಟ್ಸ್ ಆ್ಯಪ್, ಫೇಸ್ ಬುಕ್‍ನಂಥ ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯಿಂದಾಗಿ ಅಮಾನವೀಯ, ತರ್ಕಹೀನ, ಕಾನೂನುಬಾಹಿರ ಕೃತ್ಯಗಳು ಹೆಚ್ಚುತ್ತಿರಬಹುದು. ಇದರರ್ಥ ಸಾಮಾಜಿಕ ಮೌಲ್ಯಗಳಿಂದ ಮನುಷ್ಯ ವಿಮುಖನಾಗಿರುವುದೇ ಈ ಬದಲಾವಣೆಗೆ ಕಾರಣ ಆಗಿರಬಹುದು. ಸಾಮಾಜಿಕ ಮೌಲ್ಯ ಮತ್ತು ನೈತಿಕತೆಗಳು ಮತ್ತೆ ಮುನ್ನೆಲೆಗೆ ಬಂದರೆ ಜೀವ ವಿರೋಧಿ ಕೋಮುವಾದ, ಭ್ರಷ್ಟಾಚಾರ ಸೇರಿದಂತೆ ಎಲ್ಲ ಅನಿಷ್ಟಗಳನ್ನೂ ಮೂಲೋತ್ಪಾಟನೆ ಮಾಡುವುದು ಅಷ್ಟು ಕಷ್ಟವಲ್ಲ. ಹೊಟ್ಟೆಪಾಡಿಗಾಗಿ ಮಾತ್ರ ರೂಪುಗೊಂಡಿರುವ ವೃತ್ತಿಶಿಕ್ಷಣದಷ್ಟೇ ಮನುಷ್ಯ ಸಂಬಂಧಗಳ ನಿಜ ಅರಿವಿನ ಶಿಕ್ಷಣವೂ ಅತ್ಯಗತ್ಯ. ಈ ಕಾರಣದಿಂದಲೇ ಅಪ್ಪ ಅಮ್ಮಂದಿರೂ ತಮ್ಮ ಮಕ್ಕಳಿಗೆ ಕೇವಲ ಹಣ ಗಳಿಕೆಯ ಮಾರ್ಗವನ್ನಷ್ಟೇ ಹೇಳಿಕೊಟ್ಟರೆ ಸಾಲದು, ಸಾಮಾಜಿಕ ಮೌಲ್ಯಗಳನ್ನೂ ಬಾಲ್ಯದಿಂದಲೇ ತಲೆಗೆ ತುಂಬುವ ಕೆಲಸ ಮಾಡಬೇಕು. ಕಲುಷಿತ ವ್ಯವಸ್ಥೆಯಲ್ಲಿ ಆಗಲಾದರೂ ಮಲ್ಲಿಗೆಯ ಪರಿಮಳ ಪಸರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.