ADVERTISEMENT

ಕುಮಾರಸ್ವಾಮಿ ಅವರಿಗೆ ಒಂದು ‘ಬಿನ್ನವತ್ತಳೆ’!

ಪ್ರಾಮಾಣಿಕತೆ, ಸಂವಿಧಾನಬದ್ಧ ನಿಲುವು ನಿಜನಾಯಕನ ಲಕ್ಷಣಗಳೇ ಹೊರತು ಅಳುಮುಂಜಿಯಾಗಿರುವುದಲ್ಲ

ಟಿ.ಕೆ.ತ್ಯಾಗರಾಜ್
Published 23 ಜುಲೈ 2018, 20:16 IST
Last Updated 23 ಜುಲೈ 2018, 20:16 IST
   

ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ,

ನಮಸ್ತೆ. ಈ ಪತ್ರದಲ್ಲಿ ನಿಮ್ಮನ್ನು ಪ್ರಿಯರೇ ಅಥವಾ ಆತ್ಮೀಯರೇ ಎಂದು ಸಂಬೋಧಿಸಲು ನನ್ನ ಮನಸ್ಸೇಕೋ ಒಪ್ಪುತ್ತಿಲ್ಲ. ಹಾಗೆ ಬರೆಯುವುದು ಆತ್ಮವಂಚನೆ ಎಂದು ನಾನು ಭಾವಿಸಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ನಿಮ್ಮನ್ನು ಭೇಟಿಯಾಗಿದ್ದು, ಮಾತನಾಡಿದ್ದು ತುಂಬ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ನಿಮ್ಮ ತಂದೆ ಮುಖ್ಯಮಂತ್ರಿಯಾಗುವ ಮುನ್ನ ಮನೆಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ನೀವು ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡಿದ್ದೀರಿ. ಪ್ರಧಾನಿಯಾದ ನಂತರ ಅವರೇ ನನ್ನ ಭೇಟಿ ಬಯಸಿದ್ದರಿಂದ ಬನಶಂಕರಿ ಎರಡನೇ ಹಂತದಲ್ಲಿ ನೀವು ಆಗಿದ್ದ ಮನೆಗೆ ಬಂದಿದ್ದಾಗ ನಿಮ್ಮನ್ನು ನೋಡಿದ್ದಿದೆ. ಇತ್ತೀಚಿನ ನಿಮ್ಮ ಕಣ್ಣೀರು ಜಗದ್ವಿಖ್ಯಾತವಾಗದಿದ್ದರೆ ನಿಮಗೆ ಪತ್ರ ಬರೆಯುವ ಸಂದರ್ಭವೂ ಬರುತ್ತಿರಲಿಲ್ಲ.

ಕಣ್ಣೀರು ಅಸಹಾಯಕತೆಯ ಸಂಕೇತ. ನಾಯಕನಾದವನು ಅಸಹಾಯಕತೆಯ ಬಹಿರಂಗ ಪ್ರದರ್ಶನ ಮಾಡಕೂಡದು. ಅದು ನಿಮ್ಮ ದುರ್ಬಲ ವ್ಯಕ್ತಿತ್ವವನ್ನಷ್ಟೇ ಪ್ರದರ್ಶಿಸು
ತ್ತದೆ. ನೀವು ಸ್ವಲ್ಪ ಮಟ್ಟಿಗೆ ಭಾವಜೀವಿಯೂ ಆಗಿರಬಹುದು, ಅನುಕಂಪ ಗಿಟ್ಟಿಸುವ ಸಲುವಾಗಿ ಕಣ್ಣೀರಿನ ನಾಟಕವನ್ನೂ ಆಡುತ್ತಿರಬಹುದು. ಅದು ಪಿತ್ರಾರ್ಜಿತ ಅರ್ಥಾತ್ ವಂಶವಾಹಿಯಾಗಿ ಬಂದಿರಲಿಕ್ಕೂ ಸಾಕು. ‘ಪಿತ್ರಾರ್ಜಿತ’ ಎಂದು ನಾನು ತಮಾಷೆಯಾಗಿ ಬಳಸಿದ್ದರೂ ಅದಕ್ಕೆ ಸಕಾರಣಗಳೂ ಇವೆ. ಅದು 1993ರ ಕೊನೆಯ ಭಾಗ ಅಥವಾ 1994ರ ಆರಂಭ ಇರಬೇಕು. ರೇಸ್‍ಕೋರ್ಸ್ ರಸ್ತೆಯಲ್ಲಿದ್ದ ಆಗಿನ ಜೆಡಿಎಸ್ ಕಚೇರಿಯಲ್ಲಿ ನಿಮ್ಮ ತಂದೆ ದೇವೇಗೌಡರನ್ನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಅವರು ರಾಮಕೃಷ್ಣ ಹೆಗಡೆ ಮತ್ತು ಎಸ್.ಆರ್.ಬೊಮ್ಮಾಯಿ ಅವರಿಂದ ತಮಗೆ ಅನ್ಯಾಯವಾಗಿತ್ತು ಎಂಬುದನ್ನು ವಿವರಿಸುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅಂಥ ಹಿರಿಯ ರಾಜಕಾರಣಿ ನನ್ನಂಥ ಓರ್ವ ಯುವ ಪತ್ರಕರ್ತನ ಎದುರು ಅಳುವುದನ್ನು ನಿರೀಕ್ಷಿಸಿರಲಿಲ್ಲ. ಅದೇ ದಿನ ಸಂಜೆ ನಾನು ಆಗ ಕಾರ್ಯನಿರ್ವಹಿಸುತ್ತಿದ್ದ ಲಂಕೇಶ್ ಪತ್ರಿಕೆ ಕಚೇರಿಗೆ ಹೋಗಿ ಆದದ್ದನ್ನೆಲ್ಲ ಲಂಕೇಶರಿಗೆ ವಿವರಿಸಿದೆ. ಅವರು ನನ್ನ ಮಾತನ್ನು ತಳ್ಳಿ ಹಾಕಿ ‘ದೇವೇಗೌಡರು ನಾಟಕ ಆಡುತ್ತಾರೆ, ಅದನ್ನೆಲ್ಲ ನೀನು ನಂಬಿದ್ದೀಯಲ್ಲ’ ಎಂದು ನನಗೇ ಬೈದು ಬಾಯಿ ಮುಚ್ಚಿಸಿದ್ದರು. ದೇವೇಗೌಡರು ಯಾಕೆ ಮುಖ್ಯಮಂತ್ರಿಯಾಗಬೇಕು ಎಂಬರ್ಥದ ಲೇಖನ ಬರೆಯಬೇಕೆಂಬ ನನ್ನ ಆಸೆಗೆ ಲಂಕೇಶ್ ಆ ಕ್ಷಣದಲ್ಲಿ ತಣ್ಣೀರೆರಚಿದ್ದರಾದರೂ ಮಾರನೇ ದಿನ ‘ನಿನ್ನ ಸ್ವಾತಂತ್ರ್ಯಕ್ಕೆ ನಾನೇಕೆ ಅಡ್ಡಿ ಬರಲಿ? ನಿನಗೆ ಅನ್ನಿಸಿದ್ದನ್ನು ಬರೆದುಬಿಡು’ ಎಂದರು. ಆ ವಾರ ಲಂಕೇಶ್ ಪತ್ರಿಕೆಯ ಮುಖಪುಟದ ಬಹುಭಾಗವನ್ನು ‘ದೇವೇಗೌಡ: ಮುಖ್ಯಮಂತ್ರಿ? ಅಮುಖ್ಯಮಂತ್ರಿ?’ ಎಂಬ ನನ್ನ ಮುಖ್ಯವರದಿಯ ಶೀರ್ಷಿಕೆ ದೇವೇಗೌಡರ ಫೋಟೊದೊಂದಿಗೆ ಆಕ್ರಮಿಸಿತ್ತು.

ADVERTISEMENT

ಅದೇನೇ ಇರಲಿ. ನಿಮ್ಮ ರಾಜಕೀಯ ಜೀವನದ ಮಹತ್ವದ ಘಟ್ಟಗಳನ್ನು ಮೆಲುಕು ಹಾಕಿದರೆ ನಿಮಗೇ ಗೊತ್ತಾಗುತ್ತದೆ ಶ್ರಮ ಮತ್ತು ಹೋರಾಟವಿಲ್ಲದೇ ಸುಲಭ
ವಾಗಿ ಗಳಿಸುವ ಅಧಿಕಾರ ಒಂದೊಂದು ಹೆಜ್ಜೆಯನ್ನೂ ತಪ್ಪಾಗಿ ಇರಿಸಲು ಪ್ರೇರಣೆ ನೀಡುತ್ತದೆ. ಅದು ಅಸಹಾಯಕತೆಯನ್ನೂ ತರುತ್ತದೆ, ಹತಾಶೆಯನ್ನೂ ಉಂಟುಮಾಡುತ್ತದೆ ಎನ್ನುವುದಕ್ಕೆ ನಿಮಗಿಂತ ಇನ್ನೊಂದು ಉತ್ತಮ ಉದಾಹರಣೆ ಇರಲಾರದು.

1996ರಲ್ಲಿ ನಿಮ್ಮ ತಂದೆ ದೇವೇಗೌಡರೊಂದಿಗೆ ನೀವೂ ಲೋಕಸಭೆ (ಕನಕಪುರ ಕ್ಷೇತ್ರ) ಪ್ರವೇಶಿಸುವವರೆಗೂ ರಾಜಕೀಯದಿಂದ ದೂರವೇ ಇದ್ದಿರಿ. ಆ ಹೊತ್ತಿಗೆ ನಿಮ್ಮ ಅಣ್ಣ ರೇವಣ್ಣ ಜಿಲ್ಲಾ ಪಂಚಾಯಿತಿ ಮೂಲಕ ರಾಜಕೀಯಕ್ಕೆ ಬಂದು 1994ರಲ್ಲಿ ರಾಜ್ಯ ವಿಧಾನಸಭೆ ಪ್ರವೇಶಿಸಿ 1996ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಮಂತ್ರಿಯೂ ಆಗಿದ್ದರು. ರೇವಣ್ಣ ಅವರ ಪತ್ನಿ ಭವಾನಿ ನಿಮ್ಮೆಲ್ಲರಿಗಿಂತ ಮೊದಲೇ ಹಾಸನ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಚುನಾವಣಾ ಜವಾಬ್ದಾರಿಯನ್ನು ಹೊತ್ತು ರಾಜಕೀಯದ ಆಳ, ಅಗಲ ಬಲ್ಲವರಾಗಿದ್ದರು. ರಾಜ್ಯ ರಾಜಕಾರಣದಲ್ಲಿ ರೇವಣ್ಣ ಸಕ್ರಿಯರಾಗಿರುವಾಗಲೇ ಅವರನ್ನು ಹಿಂದಿಕ್ಕುವ ಕಾರ್ಯವನ್ನು 1999ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಆರಂಭಿಸಿದಿರಾದರೂ ನಿಮ್ಮ ಕುಟುಂಬದ ಬದ್ಧ ವೈರಿ ಎಂದೇ ಮೊನ್ನೆ ಮೊನ್ನೆವರೆಗೂ ಪರಿಗಣಿಸಿದ್ದ ಡಿ.ಕೆ.ಶಿವಕುಮಾರ್ ವಿರುದ್ಧ ಸೋಲನುಭವಿಸಿದಿರಿ. ಅಲ್ಲೇ ನೆಲೆಯೂರಲು ಪ್ರಯತ್ನಿಸುವ ಬದಲು ಡಿ.ಕೆ.ಯನ್ನು ಎದುರಿಸುವ ಶಕ್ತಿ ಇಲ್ಲದೇ 2004ರಲ್ಲಿ ರಾಮನಗರಕ್ಕೆ ಪಲಾಯನ ಮಾಡಿ ಯಶಸ್ಸನ್ನೂ ಗಳಿಸಿದಿರಿ. 2006ರಲ್ಲಿ ಅದೊಂದು ಕ್ಷಿಪ್ರ ಕ್ರಾಂತಿಯ ರೀತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳಿಸಿ ಮೊದಲ ಬಾರಿ ನೀವು ಮುಖ್ಯಮಂತ್ರಿಯಾದಾಗ ಆದ ಅಚ್ಚರಿ ಅಷ್ಟಿಷ್ಟಲ್ಲ. ಎಡ ಪಕ್ಷಗಳೊಂದಿಗೆ ದಶಕಗಳ ಕಾಲ ಆತ್ಮೀಯ ಸಂಬಂಧ ಇರಿಸಿಕೊಂಡಿದ್ದ ದೇವೇಗೌಡರ ಮಗ ಜಾತ್ಯತೀತ ಹೆಸರಿನ ಪಕ್ಷದ ಮೂಲಕ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದಾಗ ಇನ್ನೇನು ತಾನೇ ಆಗುತ್ತದೆ? ಕುಟುಂಬ ಒಡೆದು ಅಧಿಕಾರ ಹಿಡಿಯುವ ಬಿಜೆಪಿ ಸಂಚಿಗೆ ನೀವು ಬಲಿಪಶುವಾಗಿದ್ದಿರಿ ಅಂದುಕೊಂಡಿದ್ದೆ. ಆದರೆ ನಿಮಗೆ ಅಧಿಕಾರದ ಆಸೆ ಇಲ್ಲದೇ ಹೋಗಿದ್ದರೆ ಬಿಜೆಪಿ ಜತೆ ಯಾಕಾದರೂ ಕೈಜೋಡಿಸುತ್ತಿದ್ದಿರಿ? ಅಷ್ಟೇ ಅಲ್ಲ. ಕೊಟ್ಟ ಮಾತಿನಂತೆ ಇಪ್ಪತ್ತು ತಿಂಗಳ ನಂತರ ಬಿಜೆಪಿ ನಾಯಕ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದೇ ಬಿಲಂದರ ಎನಿಸಿಕೊಂಡಿರಿ. ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲನ್ನೇ ತೆರೆಯದಿದ್ದ ರಾಜ್ಯಗಳೆಂಬ ಖ್ಯಾತಿ ಇದ್ದ ದಿನಗಳಲ್ಲೇ ಕರ್ನಾಟಕದ ಮೂಲಕ ಹೆಬ್ಬಾಗಿಲನ್ನೇ ತೆರೆದು ಕೋಮುವಾದಕ್ಕೆ ‘ಜಾತ್ಯತೀತ’ ಕೊಡುಗೆಯನ್ನೂ ನೀಡಿದ ‘ಗೌರವ’ ಸಂಪಾದಿಸಿಬಿಟ್ಟಿರಿ!

ಅದೇನೇ ಆದರೂ ನೀವು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಚಾಲನೆ ನೀಡಿದ ಗ್ರಾಮ ವಾಸ್ತವ್ಯ, ಸುಡುಗಾಡು ಸಿದ್ಧರು, ಎಚ್.ಐ.ವಿ. ಸೋಂಕು ತಗುಲಿದ ಕುಟುಂಬ ಸೇರಿದಂತೆ ವಿವಿಧ ಶೋಷಿತ ಸಮುದಾಯಗಳಿಗೆ ಸೇರಿದವರ ಮನೆಗಳಲ್ಲಿ ನೀವು ವಾಸ್ತವ್ಯ ಹೂಡಿದ್ದು ಬೆನ್ನು ತಟ್ಟಿ ಭೇಷ್ ಹೇಳುವುದಕ್ಕೆ ಉದಾಹರಣೆಗಳಾಗಿದ್ದವು. ಹಾಗೇ ಉತ್ತರ ಕರ್ನಾಟಕದ ಜನರನ್ನು ನಿರ್ಲಕ್ಷಿಸಿಲ್ಲ ಎನ್ನುವುದನ್ನು ತೋರಿಸುವ ಸಾಂಕೇತಿಕ ಪ್ರಯತ್ನವಾಗಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಕಾರ್ಯ ನಿಮ್ಮ ಅಧಿಕಾರಾವಧಿಯಲ್ಲಿ ತೀವ್ರ ಗತಿ ಪಡೆಯುವಂತೆಯೂ ಮಾಡಿದ್ದಿರಿ. ಅಂದಹಾಗೆ ನಿಮ್ಮ ಮಾತಿನ ಧಾಟಿಯೂ ದೇವೇಗೌಡರಿಗಿಂತ ಭಿನ್ನ. ಎಲ್ಲೋ ಕೆಲವು ಸಂದರ್ಭಗಳನ್ನು ಹೊರತುಪಡಿಸಿದರೆ ಮುಖ ಗಂಟಿಕ್ಕಿಕೊಳ್ಳದೆ ಸೌಜನ್ಯದಿಂದ ನಮ್ಮ ಪಕ್ಕದ ಮನೆಯವನೋ ಅಥವಾ ಗೆಳೆಯನೋ ಎಂಬಂತೆಯೂ ಜನಸಾಮಾನ್ಯರೊಂದಿಗೆ ನೀವು ಮಾತನಾಡಿದ್ದಿದೆ. ಒಂದು ಹಂತದವರೆಗೆ ಯುವ ಸಮುದಾಯವನ್ನೂ ನೀವು ಆಕರ್ಷಿಸಿದ್ದು ನಿಜ.

ಜೆಡಿಎಸ್, ಕುಟುಂಬ ರಾಜಕಾರಣದ ಪಕ್ಷ ಅಂದುಕೊಂಡರೂ ರೇವಣ್ಣ ಅವರನ್ನು ಹಿಂದಕ್ಕೆ ತಳ್ಳಿ ನೀವೇ ಮುಖ್ಯಮಂತ್ರಿಯಾಗುವ ಜಾಣತನ ಮೆರೆದಿದ್ದೀರಿ. ಅವರ ಪತ್ನಿ ಭವಾನಿ ಮತ್ತು ನಿಮ್ಮ ಕುಟುಂಬದಲ್ಲೇ ರಾಜಕೀಯದ ಹೊಸ ತೇಜಸ್ಸಿನಂತಿರುವ ಅವರ ಮಗ ಪ್ರಜ್ವಲ್ ಆಕಾಂಕ್ಷೆಗಳಿಗೆ ತಣ್ಣೀರೆರಚಿ, ನಿಮ್ಮ ಪತ್ನಿ ಅನಿತಾಗೆ ಮಾತ್ರ ರಾಜಕೀಯ ಅವಕಾಶಗಳನ್ನು ಅನುಗ್ರಹಿಸಿದ್ದೀರಿ. ಒಡಹುಟ್ಟಿದ ರೇವಣ್ಣ, ಅವರ ಪತ್ನಿ ಭವಾನಿ ಮತ್ತು ಮಗ ಪ್ರಜ್ವಲ್‍ರನ್ನೇ ಮೂಲೆಗುಂಪು ಮಾಡಿರುವ ನೀವು ರಾಜ್ಯದ ಹಿತವನ್ನೇನು ಕಾಯಬಲ್ಲಿರಿ ಎನ್ನುವ ಅನುಮಾನವೂ ನನ್ನನ್ನು ಕಾಡಿದ್ದಿದೆ. 2013ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರೂ ವಿರೋಧ ಪಕ್ಷದ ನಾಯಕ ಸ್ಥಾನ ಕಳೆದುಕೊಂಡ ಒಂದೇ ಕಾರಣದಿಂದ 2014ರಲ್ಲಿ ಅನಗತ್ಯವಾಗಿ ಚಿಕ್ಕಬಳ್ಳಾಪುರದಿಂದ ಲೋಕಸಭೆಗೆ ಸ್ಪರ್ಧಿಸಿ ಸೋಲನುಭವಿಸಿದಿರಿ. ಬೆಂಗಳೂರು ಗ್ರಾಮಾಂತರ ಡಿ.ಕೆ. ಸಹೋದರರ ಸಾಮ್ರಾಜ್ಯವಾಗಿ ಪರಿವರ್ತನೆ ಹೊಂದಿದ ಹಿನ್ನೆಲೆಯಲ್ಲಿ ನೀವು ಚಿಕ್ಕಬಳ್ಳಾಪುರಕ್ಕೆ ಹಾರಿರಬಹುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಲ್ಲಿ ನಿಮಗೆ ಸೋಲಿನ ಭೀತಿ ಇರದಿದ್ದರೂ ಪಕ್ಕದ ಚನ್ನಪಟ್ಟಣ ಕ್ಷೇತ್ರದಿಂದಲೂ ಸ್ಪರ್ಧಿಸಿ ಎರಡೂ ಕಡೆ ಗೆದ್ದು ಅನಗತ್ಯವಾಗಿ ಉಪಚುನಾವಣೆಗೆ ಕಾರಣರಾಗಿದ್ದೀರಿ. ಹಾಗೊಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಿ.ಪಿ.ಯೋಗೀಶ್ವರ್ ಮಂತ್ರಿಯಾಗಿ ನಿಮ್ಮ ಮತ್ತು ಡಿ.ಕೆ. ರಾಜಕಾರಣಕ್ಕೆ ಅಡ್ಡಗಾಲು ಆಗಬಹುದೆಂಬ ಲೆಕ್ಕಾಚಾರದಿಂದ ಈ ಸಂಚು ರೂಪಿಸಿ
ದ್ದಲ್ಲವೇ ಕುಮಾರಸ್ವಾಮಿಯವರೇ? ಈಗ ರಾಮನಗರದ ಬದಲು ಚನ್ನಪಟ್ಟಣ ಉಳಿಸಿಕೊಂಡು ನಾನಾ ರೀತಿಯ ಕತೆಗಳು ಹುಟ್ಟಿಕೊಳ್ಳಲು ಕಾರಣರಾಗಿದ್ದೀರಿ.

ಈ ಎಲ್ಲ ಉದಾಹರಣೆಗಳ ಮೂಲಕ ನೀವು ತಂದೆಗೂ ನಿಷ್ಠರಲ್ಲ, ತತ್ವ, ರಕ್ತಸಂಬಂಧ, ಕೊಟ್ಟ ಮಾತು, ಅಷ್ಟೇ ಏಕೆ ಕ್ಷೇತ್ರನಿಷ್ಠರೂ ಅಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದೀರಿ.
ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗಳಲ್ಲಿ ತಮ್ಮ ಆರೋಗ್ಯ ಸರಿ ಇಲ್ಲವೆಂದೂ, ತಾವು ಬದುಕಿ ಉಳಿಯಬೇಕಾದರೆ ತಮ್ಮನ್ನು ಆಯ್ಕೆ ಮಾಡುವ ಜತೆ ಜೆಡಿಎಸ್‍ಗೆ ಬಹುಮತ ನೀಡುವಂತೆಯೂ ಮನವಿ ಮಾಡಿದ್ದಿರಿ. ಪ್ರಧಾನಿ ನರೇಂದ್ರ ಮೋದಿ ಅವರು ನಿಮಗೆ ಫಿಟ್‍ನೆಸ್ ಸವಾಲು ಹಾಕಿದಾಗ ತಮ್ಮ ಆರೋಗ್ಯಕ್ಕಿಂತ ರಾಜ್ಯದ ಆರೋಗ್ಯ ಮುಖ್ಯ ಎಂದಿರಿ. ಮೋದಿ ಹೇಳಿದ ಮಾತ್ರಕ್ಕೆ ಅವರ ಸವಾಲನ್ನು ಸ್ವೀಕರಿಸಬೇಕೆಂದೇನಿಲ್ಲ ನಿಜ. ಆದರೆ ನಿಮ್ಮ ಆರೋಗ್ಯ ಚೆನ್ನಾಗಿದ್ದರೆ ತಾನೇ ಉಳಿದದ್ದೆಲ್ಲ. ಮೊನ್ನೆ ಮೊನ್ನೆಯಷ್ಟೇ ಸಭೆಯೊಂದರಲ್ಲಿ ತಾವು ಕಣ್ಣೀರಿಟ್ಟು ತಮ್ಮ ಪರಿಸ್ಥಿತಿ ವಿಷಕಂಠನಂತಿದೆ, ತಾವು ಜನಪರವಾಗಿದ್ದರೂ ಜನರೇಕೋ ತಮ್ಮ ಪಕ್ಷಕ್ಕೆ ಬಹುಮತ ನೀಡುತ್ತಿಲ್ಲ, ಪ್ರಚಾರ ಸಭೆಗಳಿಗೆ ಸೇರುತ್ತಿದ್ದ ಜನಸಂಖ್ಯೆ ಮತಗಳಾಗಿ ಪರಿವರ್ತನೆಯಾಗಿಲ್ಲ ಎಂದು ಗೋಳಾಡಿದ್ದೀರಿ. ಎಲ್ಲದಕ್ಕೂ ನೆಪಗಳ ಮೊರೆ ಹೋಗುವ ಬದಲು ನೀವೇ ಬದಲಾಗಬೇಕು. ಏಕೆಂದರೆ ಈ ಎಲ್ಲ ಸಮಸ್ಯೆಗಳ ಸೃಷ್ಟಿಕರ್ತರೂ ನೀವೇ ಎನ್ನುವುದು ನಿಮಗೆ ಗೊತ್ತಿರಲಿ. ಯಾಕೆಂದರೆ ನಿಮ್ಮನ್ನು ಸಂಪೂರ್ಣವಾಗಿ ನಂಬುವಂಥ ನಡವಳಿಕೆ ಈವರೆಗೆ ಕಂಡು ಬಂದಿಲ್ಲ.

ಬೇಷರತ್ ಬೆಂಬಲ ಎನ್ನುವ ಕಾಂಗ್ರೆಸ್ ಪಕ್ಷದ ಆಹ್ವಾನಕ್ಕೆ ನೀವು ಮನ್ನಣೆ ನೀಡಬೇಕಾದ ಅಗತ್ಯವೇ ಇರಲಿಲ್ಲ. ಚುನಾವಣೆಗೆ ಮೊದಲು ನೀವು ಹೇಳಿದಂತೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದಲೂ ಸಮಾನ ಅಂತರ ಕಾಯ್ದುಕೊಂಡಿದ್ದರೆ ಕರ್ನಾಟಕವೇನೂ ಸಂಕಷ್ಟದಲ್ಲಿ ಮುಳುಗಿ ಹೋಗುತ್ತಿರಲಿಲ್ಲ. ಇನ್ನೊಂದು ಚುನಾವಣೆ ಆಗುತ್ತಿತ್ತಷ್ಟೇ. ಅಥವಾ ಬಿಜೆಪಿ ಮತ್ತೊಂದು ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದಿದ್ದರೂ ಕೆಲವೇ ಸಮಯದಲ್ಲಿ ಹೆಸರು ಕೆಡಿಸಿಕೊಂಡು ಉಗಿಸಿಕೊಳ್ಳುತ್ತಿತ್ತು ಎನ್ನುವುದಕ್ಕೆ ಹಿಂದಿನ ಬಿಜೆಪಿ ಆಡಳಿತವೇ ಸಾಕ್ಷಿಯಾಗಿದೆ. ಯಾವುದೇ ತತ್ವನಿಷ್ಠೆ ಇಲ್ಲದ ಈ ದಿನಗಳಲ್ಲಿ ಅಧಿಕಾರದಲ್ಲಿ ಇರಲೇಬೇಕೆನ್ನುವ ನಿಮ್ಮ ಹಟ ಆರೋಗ್ಯಕರವಾಗಿ ಕಾರ್ಯರೂಪಕ್ಕೆ ಬರಬೇಕೇ ಹೊರತು ಪ್ರತಿಯೊಂದು ಚುನಾವಣೆ ಸಂದರ್ಭದಲ್ಲೂ ನಡೆಸುವ ಚೌಕಾಸಿ ರಾಜಕಾರಣದಿಂದಲ್ಲ. ಅದಕ್ಕೆ ಶ್ರಮ ಮತ್ತು ಹೋರಾಟ ಅಗತ್ಯ.

ಈ ನಿಟ್ಟಿನಲ್ಲಿ ಜಾತ್ಯತೀತ ಜನತಾದಳಕ್ಕೆ ಒಂದು ವ್ಯಾಪಕತೆ ತಂದುಕೊಡಲು ನೀವು ಮುಂದಾಗಬೇಕು. ಜಾತ್ಯತೀತ ಜನತಾದಳವನ್ನು ಜಾತ್ಯತೀತವಾಗಿ ರೂಪಿಸು
ವುದು ಕೇವಲ ಮಾತುಗಳಿಂದಲ್ಲ. ಕೇವಲ ಒಕ್ಕಲಿಗ ಪ್ರಾಬಲ್ಯದ (ಉತ್ತರ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‍ಗೆ ಅನಿವಾರ್ಯವಾಗಿ ಹೋಗಲಾಗದ ಸ್ಥಳೀಯ ನಾಯಕರು ಸ್ವಂತ ಬಲದಿಂದ ಗೆಲ್ಲುತ್ತಿದ್ದಾರೆಯೇ ಹೊರತು ಅದನ್ನು ಜೆಡಿಎಸ್ ಗೆಲುವೆಂದು ಹೇಳಲಾಗದು) ಕ್ಷೇತ್ರಗಳಲ್ಲಿ ಮಾತ್ರ ನಿಮ್ಮ ಪಕ್ಷದ ಅಸ್ತಿತ್ವ ಇದೆ ಎಂದರೆ ಒಕ್ಕಲಿಗ ಸಮುದಾಯ ನಿಮ್ಮನ್ನು ನಂಬಿರುವ ಅಥವಾ ಜಾತಿ ಕಾರಣದಿಂದ ಪ್ರೀತಿಸುವವರಿಂದಾಗಿಯೇ ಹೊರತು ಇದಕ್ಕೆ ಜಾತ್ಯತೀತ ಕಾರಣಗಳೇನೂ ಇಲ್ಲ. ಜೆಡಿಎಸ್ ಕೇವಲ ಹಳೇ ಮೈಸೂರು ಪ್ರಾಂತ್ಯದ ಉಪಪ್ರಾದೇಶಿಕ ಪಕ್ಷ ಎಂಬ ಕಳಂಕದಿಂದ ಮುಕ್ತವಾಗಬೇಕಾದರೆ ಕರ್ನಾಟಕದ ಎಲ್ಲ ಪ್ರಾಂತ್ಯ, ಜಾತಿ, ಧರ್ಮಗಳ ಜನರೂ ಮಾನಸಿಕವಾಗಿ ಒಳಗೊಳ್ಳುವಂಥ ವಾತಾವರಣ ನಿರ್ಮಾಣ ಮಾಡಬೇಕು. ಅದು ನಿಮ್ಮೆದೆಯಿಂದಲೇ ಬರುವ ಪ್ರಾಮಾಣಿಕ ನಿಲುವಾಗಿರಬೇಕು. ಒಂದಲ್ಲ ಒಂದು ಕಾರಣವನ್ನಿಟ್ಟುಕೊಂಡು ಆಗಿಂದಾಗ್ಗೆ ಕಣ್ಣೀರಿನ ಮೊರೆ ಹೋಗುತ್ತಿದ್ದರೆ ‘ತೋಳ ಬಂತು ತೋಳ’ ಎಂಬ ಕತೆಯಂತೆ ಯಾರೂ ನಂಬದಂತಾಗಿಬಿಡುತ್ತದೆ ನಿಮ್ಮ ಪರಿಸ್ಥಿತಿ. ಸಕಾರಾತ್ಮಕ ಮಾತು, ದಿಟ್ಟತನ, ಜಾತ್ಯತೀತತೆ, ಸರಳತೆ, ಪ್ರಾಮಾಣಿಕತೆ ಮತ್ತು ಸಂವಿಧಾನಬದ್ಧ ನಿಲುವು ನಿಜ ನಾಯಕನ ಲಕ್ಷಣಗಳೇ ಹೊರತು ಸದಾ ಅಳುಮುಂಜಿಯಾಗಿರುವುದಲ್ಲ. ಹೀಗೇ ಇದ್ದರೆ ಕೆಲಸಕ್ಕೆ ಬರದವನು ವಲಸೆ ಹೋದರೇನಂತೆ ಎಂದು ನಿಮ್ಮನ್ನೇ ನಿರ್ಲಕ್ಷಿಸುವ ದಿನಗಳೂ ಬರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.