ADVERTISEMENT

ಅವಕಾಶಗಳ ಆಕಾಶ

ಶಂಕರ ಬಿದರಿ
Published 29 ಜೂನ್ 2013, 19:59 IST
Last Updated 29 ಜೂನ್ 2013, 19:59 IST

ಐ.ಎ.ಎಸ್ ಅಧಿಕಾರಿ ಕೃಷ್ಣಕುಮಾರ್ ಅವರನ್ನು ನಾನು ಕೃಷ್ಣಕುಮಾರ್ ಸಾಹೇಬರು ಎಂದೇ ಕರೆಯುತ್ತಿದ್ದುದು. 1973ರಲ್ಲಿ ನಾನು ಬಿ.ಎ. ಮೊದಲ ವರ್ಷದಲ್ಲಿ ಕೈತುಂಬಾ ಅಂಕಗಳನ್ನು ಗಳಿಸಿ ಪಾಸಾದೆ. ಕಾಲೇಜಿನಲ್ಲಿ ಓದಿ ಪರೀಕ್ಷೆ ಕಟ್ಟಿದವರಿಗೆ ರ‍್ಯಾಂಕ್ ಕೊಡುತ್ತಿದ್ದರು. ನಾನು ದೂರಶಿಕ್ಷಣದ ಮೂಲಕ ಪರೀಕ್ಷೆ ಬರೆದಿದ್ದೆನಾದ್ದರಿಂದ ರ‍್ಯಾಂಕ್ ಇರಲಿಲ್ಲ. ಕಾಲೇಜಿಗೆ ಹೋಗಿ ಪರೀಕ್ಷೆ ಬರೆದು ಮೊದಲ ರ‍್ಯಾಂಕ್ ಗಳಿಸಿದ್ದ ವಿದ್ಯಾರ್ಥಿಗಿಂತ ಹೆಚ್ಚು ಅಂಕ ನನಗೇ ಸಂದಿತ್ತು. ಆ ಸಂತೋಷವನ್ನು ಕೃಷ್ಣಕುಮಾರ್ ಅವರಲ್ಲಿ ಹಂಚಿಕೊಳ್ಳಬೇಕೆನಿಸಿತು.

ಅವರು ಅಷ್ಟು ಹೊತ್ತಿಗೆ ಹಣಕಾಸು ಇಲಾಖೆಯ `ಬಜೆಟ್ ಅಂಡ್ ರಿಸೋರ್ಸಸ್' ವಿಭಾಗದ ಡೆಪ್ಯುಟಿ ಸೆಕ್ರೆಟರಿ ಆಗಿದ್ದರು. ನಾನು ಟೆಲಿಫೋನ್ ಎಕ್ಸ್‌ಚೇಂಜ್‌ನಲ್ಲಿ ಕೆಲಸ ಮಾಡುತ್ತಿದ್ದರಿಂದ ಟ್ರಂಕಾಲ್ ಉಚಿತ. ಅವರಿಗೆ ಫೋನ್ ಮಾಡಿದೆ. ಅವರ ಪಿ.ಎ. ಫೋನ್ ಎತ್ತಿಕೊಂಡು, ಯಾವುದೋ ಸಭೆಯಲ್ಲಿದ್ದಾರೆ ಎಂದರು.

ಆದರೂ ನನ್ನ ಹೆಸರನ್ನು ಹೇಳಿ, ತಕ್ಷಣ ಮಾತನಾಡಲೇಬೇಕು ಎಂದು ಕೇಳಿಕೊಂಡೆ. ಅವರು ಸಭೆಯ ನಡುವೆಯೇ ಎದ್ದುಬಂದು ನನ್ನ ಜೊತೆ ಮಾತನಾಡಿದರು. ನನ್ನಷ್ಟೇ ಖುಷಿ ಅವರಿಗೆ ಆಯಿತು. ಅವರು ನೀಡಿದ ಸ್ಫೂರ್ತಿಯಿಂದಲೇ ನಾನು ದೂರಸಂಪರ್ಕ ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸಿದ್ದು.

1972ರಿಂದ 1974ರ ಅವಧಿಯಲ್ಲಿ ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಬರಗಾಲ ಬಂತು. ಉತ್ತರ ಕರ್ನಾಟಕದಲ್ಲೂ ಅದೇ ಪರಿಸ್ಥಿತಿ. ಆಗ `ಇಲ್ಲಸ್ಟ್ರೇಟೆಡ್ ವೀಕ್ಲಿ'ಯಲ್ಲಿ ಖುಷ್ವಂತ್ ಸಿಂಗ್ ಬರಗಾಲದ ಒಂದು `ಪ್ಯಾಕೇಜ್' ಬರೆದಿದ್ದರು. ಅದರಲ್ಲಿ ಉತ್ತರ ಕರ್ನಾಟಕದಲ್ಲಿ ಬರಗಾಲ ಇದೆಯೆಂಬ ಸಂಗತಿ ಪ್ರಕಟವಾಗಿರಲಿಲ್ಲ.

ನಾನು ಆ ಪತ್ರಿಕೆಗೆ ಒಂದು ಪತ್ರ ಬರೆದೆ. ಉತ್ತರ ಕರ್ನಾಟಕದ ಬರಗಾಲದಿಂದ 60 ಲಕ್ಷ ಜನರು, ಅಸಂಖ್ಯ ಜಾನುವಾರುಗಳಿಗೆ ಸಮಸ್ಯೆಯಾಗಿರುವ ವಿಷಯವನ್ನು ಉಲ್ಲೇಖಿಸಿ, ಈ ಸಂಗತಿ ನಿಯತಕಾಲಿಕೆಯಲ್ಲಿ ಪ್ರಕಟವಾಗದೇ ಇರುವುದು ವಿಷಾದನೀಯ ಎಂದು ಬರೆದೆ. ಪತ್ರ `ಇಲ್ಲಸ್ಟ್ರೇಟೆಡ್ ವೀಕ್ಲಿ'ಯಲ್ಲಿ ಪ್ರಕಟವಾಯಿತು.

ಆಗ ಜೆ.ಕೆ. ಅರೋರಾ ಎಂಬುವರು ಡೆಪ್ಯುಟಿ ಕಮಿಷನರ್ ಆಗಿದ್ದರು. ಅವರು ಇಂಡಿಗೆ ಬಂದಾಗ ಪತ್ರಿಕೆಯಲ್ಲಿ ಪತ್ರ ಬರೆದದ್ದು ಯಾರು ಎಂದು ಹುಡುಕಿಕೊಂಡು ನನ್ನ ಬಳಿ ಬಂದರು. ಚಹಾ ಕುಡಿಯುತ್ತಾ ನಾನು ಬರೆದ ಪತ್ರವು ಇಡೀ ದೇಶದ ಗಮನ ಸೆಳೆದ ಬಗೆಯನ್ನು ಹೇಳಿಕೊಂಡು ಬೆನ್ನುತಟ್ಟಿದರು. ಓದುಗರ ಪತ್ರದ ಪರಿಣಾಮ ಆಗ ಅಷ್ಟು ಗಾಢವಾಗಿತ್ತು.

ಇಂಡಿಯಲ್ಲಿ ಟೆಲಿಫೋನ್ ಎಕ್ಸ್‌ಚೇಂಜ್‌ಗೂ ಜನರಿಗೂ ದೊಡ್ಡ ಬಾಂಧವ್ಯ ಬೆಳೆಯಿತು. ಜನ ಎಕ್ಸ್‌ಚೇಂಜ್‌ಗೆ ಬರುತ್ತಿರಲಿಲ್ಲ. ಯಾರಾದರೂ ಹುಟ್ಟಿದರೆ ಅಥವಾ ಸತ್ತರೆ ಯಾರು ಯಾರಿಗೆ ವಿಷಯ ತಿಳಿಸಬೇಕೋ ಅವರ ಫೋನ್ ನಂಬರ್‌ಗಳ ಪಟ್ಟಿಯನ್ನು ಬರೆದುಕೊಂಡು ನನ್ನ ಮನೆಗೆ ತಂದಿಡುತ್ತಿದ್ದರು. ಅಷ್ಟೂ ಕರೆಗಳಿಗೆ ಎಷ್ಟು ಖರ್ಚು ಆಗಬಹುದು ಎಂಬ ಅಂದಾಜೂ ಅವರಿಗೆ ಇರುತ್ತಿತ್ತು. ಅಷ್ಟು ಹಣವನ್ನು ಅಲ್ಲಿ ಇಟ್ಟು ಹೋಗುತ್ತಿದ್ದರು.

ನಾನು ಆ ಪಟ್ಟಿಯಲ್ಲಿದ್ದ ನಂಬರ್‌ಗಳಿಗೆ ಫೋನ್ ಮಾಡಿ ವಿಷಯ ಮುಟ್ಟಿಸುತ್ತಿದ್ದೆ. ಆಮೇಲೆ ಹಣ ಉಳಿದಿದ್ದರೆ ಆಯಾ ಮಂದಿಗೆ ಮರಳಿಸುತ್ತಿದ್ದೆ. ಹಾಗೆ ನೋಡಿದರೆ ಅಂಚೆ ಇಲಾಖೆ ಮೂಲಕ ಟ್ರಂಕಾಲ್‌ಗಳನ್ನು ಬುಕ್ ಮಾಡುವುದು ಕ್ರಮ. ಇಂಡಿಯ ಜನ ಹಾಗೂ ನನ್ನ ನಡುವಿನ ಬಾಂಧವ್ಯದಲ್ಲಿ ಎಷ್ಟು ನಂಬಿಕೆ ಇತ್ತೆಂದರೆ ನಾವು ನಮ್ಮದೇ ಆದ ಮಾನವೀಯತೆಯ ಪ್ರಕ್ರಿಯೆಯನ್ನು ರೂಢಿಗೆ ತಂದಿದ್ದೆವು. ಯಾರೂ ನಯಾ ಪೈಸೆ ಮೋಸ ಮಾಡುತ್ತಿರಲಿಲ್ಲ.

ಆಗ ಆಹಾರಧಾನ್ಯಗಳ ಸಮಸ್ಯೆ ಇತ್ತು. ಅಂಥ ಪರಿಸ್ಥಿತಿಯಲ್ಲೂ ಗಡಿ ಪ್ರದೇಶಗಳಲ್ಲಿ ಧಾನ್ಯದ ಮೂಟೆಗಳ ಕಳ್ಳ ಸಾಗಾಣಿಕೆ ನಡೆಯುತ್ತಿತ್ತು. ಪೊಲೀಸರು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮಾಲನ್ನು ವಶಪಡಿಸಿಕೊಂಡು, ತಾಲ್ಲೂಕು ಆಫೀಸ್‌ಗೆ ತಂದು ಹರಾಜು ಹಾಕುತ್ತಿದ್ದರು. ಪ್ರತಿ ತಿಂಗಳು 50 ಕೆ.ಜಿ. ಜೋಳ, 50 ಕೆ.ಜಿ. ಅಕ್ಕಿಯನ್ನು ಹರಾಜಿನಲ್ಲಿ ನನಗೆ ಮೊದಲು ಕೊಡುತ್ತಿದ್ದರು.

ಸಹೋದ್ಯೋಗಿಯಾಗಿದ್ದ ಕೆ.ಪಿ. ಕುಲಕರ್ಣಿಯವರಿಗೆ ಕೆನರಾ ಬ್ಯಾಂಕ್‌ನಲ್ಲಿ ಕ್ಲರ್ಕ್ ಕೆಲಸ ಸಿಕ್ಕಿತು. ನಮಗಿಂತ ಆಗ 60-70 ರೂಪಾಯಿ ಹೆಚ್ಚು ಸಂಬಳ ತರುವ ಕೆಲಸ ಅದಾಗಿತ್ತು. ಅವರು ಆ ಕೆಲಸಕ್ಕೆ ಜಿಗಿದರು. ಅವಿನಾಶ್ ಧರ್ಮಾಧಿಕಾರಿ ತಮ್ಮೂರಾದ ಬೆಳಗಾವಿಗೆ ವರ್ಗ ಮಾಡಿಸಿಕೊಂಡು ಹೋದರು. ಮೂರು ಕೋಣೆಗಳ ದೊಡ್ಡ ಮನೆಯಲ್ಲಿ ನಾನು ಒಬ್ಬನೇ ಆದೆ. ನನ್ನ ತಮ್ಮ, ತಂಗಿಯರನ್ನೂ ಕರೆದುಕೊಂಡು ಬಂದು ಅಲ್ಲಿಯೇ ಅವರಿಗೆ ವಿದ್ಯಾಭ್ಯಾಸ ಕೊಡಿಸಿದೆ.

ವಿಶ್ವ ಹಿಂದೂ ಪರಿಷತ್‌ನವರು ಕನ್ಯಾಕುಮಾರಿಯಲ್ಲಿ ವಿವೇಕಾನಂದ ಪ್ರತಿಮೆ ಸ್ಥಾಪಿಸಲು ಬೇರೆ ಬೇರೆ ಊರುಗಳಲ್ಲಿ ಹಣ ಸಂಗ್ರಹಿಸುತ್ತಿದ್ದರು. ಇಂಡಿಗೂ ಅವರು ಬಂದರು. ಊರಿನ ಜನ ನನಗೆ ತುಂಬಾ ಹತ್ತಿರವಿದ್ದರಿಂದ ಹಣ ಸಂಗ್ರಹಿಸಿ ಕೊಡುವಂತೆ ನನ್ನನ್ನು ಕೇಳಿದರು. ಆಗ 760 ರೂಪಾಯಿ ಸಂಗ್ರಹವಾಗಿತ್ತು.

1975ರಲ್ಲಿ ನಾನು ಬಿ.ಎ. ಪದವಿಯಲ್ಲಿ ಪಾಸಾದೆ. ಆಗಸ್ಟ್ ಹೊತ್ತಿಗೆ ಮಾರ್ಕ್ಸ್‌ಕಾರ್ಡ್ ಬಂದಿತು. ಹದಿಮೂರು ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿದೆ. ನಾಲ್ಕು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಅಧಿಕಾರಿ ಪೋಸ್ಟ್‌ಗಳಿಗೆ, ಇಂಡಿಯನ್ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾದಲ್ಲಿ ಅಸಿಸ್ಟೆಂಟ್ ಸ್ಟೇಷನ್ ಸೂಪರಿಂಟೆಂಡೆಂಟ್ ಹುದ್ದೆಗೆ, ಎಲ್‌ಐಸಿ ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗೆ, ಕೆಎಫ್‌ಸಿಯಲ್ಲೂ ಅಧಿಕಾರಿ ಹುದ್ದೆಗೆ ಅರ್ಜಿ ಹಾಕಿದೆ. ಎಲ್ಲಾ ಕಡೆ ಕೆಲಸಗಳು ಸಿಕ್ಕವು.

ನಾನು ಹೊಸ ಕೆಲಸದ ಹುಡುಕಾಟದಲ್ಲಿದ್ದಾಗಲೇ ಸೂರ್ಯಮುಖಿ ಗಲಗಲಿ ಎಂಬ ಲೇಡಿ ಮೆಡಿಕಲ್ ಆಫೀಸರ್ ಇಂಡಿಗೆ ಬಂದರು. ಅವರ ಮನೆಯವರಿಗೂ ನಮ್ಮ ಮನೆಯ ಸದಸ್ಯರಿಗೂ ಬಾಂಧವ್ಯ ಬೆಳೆಯಿತು. ಕಾಲಕ್ರಮೇಣ ನನಗೂ ಅವರಿಗೂ ಸಂಬಂಧವಿದೆ ಎಂದು ಮಾತು ಬೆಳೆಯಿತು. ನನ್ನ ಮನೆಯ ಹಿರಿಯರಿಗೆ ವಿಷಯ ಮುಟ್ಟಿದ್ದೇ ಅವರು ಬಂದು ಮಾತನಾಡಿದರು. 1975, ಡಿಸೆಂಬರ್ 13ಕ್ಕೆ ಇಂಡಿಯಿಂದ ಹದಿನೆಂಟು ಕಿ.ಮೀ. ದೂರದಲ್ಲಿದ್ದ ಸೂರ್ಯಮುಖಿ ಗಲಗಲಿಯವರ ಊರಿನಲ್ಲೇ ನಮ್ಮ ಮದುವೆಯಾಯಿತು. ಅನುಭಾವಿ ಕವಿ ಮಧುರಚೆನ್ನರ ಕೊನೆಯ ಮಗಳು ಅವರು. ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಮಾಡಿದ್ದರು. ಅವರ ಹೆಸರನ್ನು ಆಮೇಲೆ ಉಮಾದೇವಿ ಎಂದು ಬದಲಿಸಿದೆವು.

ಮದುವೆಯಾದ ನಂತರ ಇಂಡಿಯಲ್ಲಿ ನನ್ನ ಮನೆ ಖಾಲಿ ಮಾಡಿ, ಪತ್ನಿಯ ಕ್ವಾರ್ಟ್ರಸ್‌ನಲ್ಲಿ ನೆಲೆಗೊಂಡೆವು. ಕೆಲವೇ ದಿನಗಳಲ್ಲಿ ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್‌ನಲ್ಲಿ ನನಗೆ ಅಧಿಕಾರಿ ಕೆಲಸ ಸಿಕ್ಕಿತು. ಅದರ ತರಬೇತಿಗೆ ಸೇರಿ 20 ದಿನಗಳಾಗಿದ್ದವಷ್ಟೆ, ಅಸಿಸ್ಟೆಂಟ್ ಕಮಿಷನರ್- ಕೆ.ಎ.ಎಸ್ ಹುದ್ದೆಯ ಅವಕಾಶ ಒಲಿದುಬಂದಿತು. ಒಂದು ಸಂಬಳವನ್ನೂ ತೆಗೆದುಕೊಳ್ಳದೆ ಬ್ಯಾಂಕ್ ಅಧಿಕಾರಿ ಕೆಲಸವನ್ನು ಬಿಟ್ಟು, ಫೆಬ್ರುವರಿ 7, 1977ರಂದು ಹೊಸ ಕೆಲಸಕ್ಕೆ ಸೇರಿದೆ.

ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಸೇನೆಯಲ್ಲಿ ಕೆಲಸ ಮಾಡಿದ್ದ ಒಬ್ಬರು ಅಧಿಕಾರಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲು ಇಂಡಿಗೆ ಬಂದರು. ಅವರು ತುಂಬಾ ಸ್ವಾಭಿಮಾನಿ. ರಂ ಕುಡಿಯುವ ಅಭ್ಯಾಸ ಅವರಿಗಿತ್ತು. ಬೆತ್ತದ ಬುಟ್ಟಿಯಲ್ಲಿ ತಮಗೆ ಬೇಕಾದಷ್ಟು ರಂ ಅನ್ನು ತಾವೇ ಕೊಂಡೊಯ್ಯುತ್ತಿದ್ದರು. ಒಮ್ಮೆ ಅವರ ಮನೆಗೆ ಹೋದೆ. ಒಂದು ಕಡೆ `ಥ್ರಿಬಲ್ ಎಕ್ಸ್' ರಂನ ಖಾಲಿ ಬಾಟಲಿಗಳು. ಇನ್ನೊಂದು ಕಡೆ ತುಂಬಿದ `ಬ್ಲ್ಯಾಕ್ ನೈಟ್' ಬಾಟಲುಗಳು. `ಬ್ಲ್ಯಾಕ್ ನೈಟ್' ಬಾಟಲುಗಳಿಂದ ರಂ ಅನ್ನು `ಥ್ರಿಬಲ್ ಎಕ್ಸ್' ಬಾಟಲುಗಳಿಗೆ ಬಗ್ಗಿಸಿದರು. ಯಾಕೆ ಎಂದು ಕೇಳಿದಾಗ, `ನನಗೆ ಗುಣಮಟ್ಟ ಮುಖ್ಯ. ಆದರೆ ನೋಡುವವರ ಕಣ್ಣುಗಳಲ್ಲಿ ಅಸೂಯೆ ಇರುತ್ತದೆ. ಅವರು ಅಸೂಯೆ ಪಡದೇ ಇರಲಿ ಎಂದು ಈ ಅದಲು ಬದಲು' ಎಂದರು. ಅವರಿಂದ ನಾನು ಬದುಕಿನ ಪಾಠ ಕಲಿತೆ.

ಐದು ವರ್ಷ ಇಂಡಿಯಲ್ಲಿ ಕಳೆದ ದಿನಗಳನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಅಲ್ಲಿ ಗ್ರಂಥಾಲಯದ ಪಕ್ಕದಲ್ಲೇ ಇದ್ದ ಜಾಗದಲ್ಲಿ ಯುವಕರ ಜೊತೆ ವಾಲಿಬಾಲ್ ಆಡುತ್ತಿದ್ದೆ. ಹಾಗಾಗಿ ಹಿರಿಯರು, ಕಿರಿಯರು, ಅಧಿಕಾರಿಗಳು, ಪೊಲೀಸರು ಎಲ್ಲರ ಜೊತೆಗೆ ಬಾಂಧವ್ಯ ಬೆಳೆಯಿತು. ನನ್ನಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದ ಅನೇಕರು `ನೀವು ಐಎಎಸ್ ಅಧಿಕಾರಿ ಆಗಬೇಕು, ಐಪಿಎಸ್ ಅಧಿಕಾರಿ ಆಗಬೇಕು' ಎಂದು ಹೇಳುತ್ತಿದ್ದರು. ಪೊಲೀಸ್ ಇಲಾಖೆಯ ಕೆಲಸಗಳನ್ನು ಮಾಡಿ ನನ್ನ ಕೈ ಪಳಗಿತ್ತು. ಮನಸ್ಸು ಕೂಡ ಆ ಇಲಾಖೆಯತ್ತ ಒಲವು ಬೆಳೆಸಿಕೊಂಡಿತ್ತು. ಪೊಲೀಸ್ ಅಧಿಕಾರಿ ಆಗುವ ಕನಸು ದಿನದಿಂದ ದಿನಕ್ಕೆ ಮರವಾಗಿ ಬೆಳೆದದ್ದು ಇಂಡಿಯಲ್ಲೇ.

ಮುಂದಿನ ವಾರ: ಅಸಿಸ್ಟೆಂಟ್ ಕಮಿಷನರ್ ದಿನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.