ತಿಪಟೂರಿನಲ್ಲಿ ಕೊಬ್ಬರಿ ಪ್ರಮುಖ ವ್ಯಾಪಾರ. ಅಲ್ಲಿನ ಆರ್ಥಿಕ ವ್ಯವಸ್ಥೆ ಕೊಬ್ಬರಿಯನ್ನೇ ಅವಲಂಬಿಸಿತ್ತು. ರಾಜ್ಯದಲ್ಲೇ ಅತಿ ದೊಡ್ಡ ಕೊಬ್ಬರಿ ವ್ಯಾಪಾರದ ಮಾರುಕಟ್ಟೆ ಇದ್ದದ್ದು ಅಲ್ಲಿಯೇ. ನೆರೆಯ ತುರುವೇಕೆರೆ, ಅರಸೀಕೆರೆ, ಚನ್ನರಾಯಪಟ್ಟಣ, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ಬೆಳೆದ ತೆಂಗಿನಿಂದ ತಯಾರಿಸಿದ ಕೊಬ್ಬರಿಯನ್ನು ಕೃಷಿಕರು ತಿಪಟೂರಿಗೆ ತಂದು ಮಾರುತ್ತಿದ್ದರು. ಆಗ ಆ ತಾಲ್ಲೂಕುಗಳಲ್ಲಿ ಕೊಬ್ಬರಿ ವ್ಯಾಪಾರದ ಮಾರುಕಟ್ಟೆಗಳು ಅಭಿವೃದ್ಧಿ ಆಗಿರಲಿಲ್ಲ.
ಸ್ವಲ್ಪ ಕೆಟ್ಟುಹೋದ ಕೊಬ್ಬರಿಯನ್ನು ಕವಟು ಕೊಬ್ಬರಿ ಎನ್ನುತ್ತಾರೆ. ಅದನ್ನು ಕೊಬ್ಬರಿ ಎಣ್ಣೆ ಉತ್ಪಾದಿಸಲು ಬಳಸುತ್ತಾರೆ. ಅಂಥ ಕೊಬ್ಬರಿ ವ್ಯಾಪಾರವೂ ಬಹುದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ವ್ಯಾಪಾರಿಗಳಲ್ಲಿ ಹಿಂದೂ, ಮುಸ್ಲಿಂ ಜನಾಂಗಗಳ ಎರಡು ಗುಂಪುಗಳಿದ್ದವು.
ಏಪ್ರಿಲ್ 28, 1982ರಲ್ಲಿ ಈ ಎರಡು ಗುಂಪುಗಳ ಮಧ್ಯೆ ತೀವ್ರ ವಿವಾದ ನಡೆದು, ಅದು ಕೇವಲ ಎರಡು ಗಂಟೆಗಳಲ್ಲಿ ಕೋಮುಗಲಭೆಯಾಗಿ ಪರಿವರ್ತಿತವಾಯಿತು.
ಕವಟು ಕೊಬ್ಬರಿ ವ್ಯಾಪಾರದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿದ್ದರು. ಅವರಲ್ಲಿ ಒಂದು ಗುಂಪಿನವರು ರಾತ್ರಿ ಎಂಟೊಂಬತ್ತು ಗಂಟೆಯ ಸುಮಾರಿಗೆ ಅಲ್ಪ ಸಂಖ್ಯಾತರಿಗೆ ಸೇರಿದ ಅಂಗಡಿಗಳು, ವಾಹನಗಳಿಗೆ ಬೆಂಕಿ ಹಚ್ಚಲಾರಂಭಿಸಿದರು. ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಯುವಕರು ಕೂಡ ಬಹು ಸಂಖ್ಯಾತರಿಗೆ ಸೇರಿದ ಕೊಬ್ಬರಿ ಗೋದಾಮುಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು.
ವೈದ್ಯಾಧಿಕಾರಿಯಾಗಿದ್ದ ನನ್ನ ಹೆಂಡತಿಯ ನಿವಾಸ ಇದ್ದದ್ದು ಊರ ಹೊರಗೆ. ನಾನು ಕೂಡ ಅಲ್ಲಿಯೇ ವಾಸವಿದ್ದದ್ದು. ರಾತ್ರಿ ನಾನು ಊಟ ಮಾಡುತ್ತಿದ್ದಾಗ ಈ ಬೆಳವಣಿಗೆಗಳ ಮಾಹಿತಿ ತಲುಪಿತು. ತಕ್ಷಣ ಊಟ ನಿಲ್ಲಿಸಿ, ಕೈತೊಳೆದು ಡ್ರೈವರ್‌ನ ಕರೆದುಕೊಂಡು ಹೊರಟೆ. ಅವರಸರದಲ್ಲಿ ರಿವಾಲ್ವರ್ ತೆಗೆದುಕೊಂಡು ಹೋಗುವುದನ್ನು ಮರೆತಿದ್ದೆ.
ಸಮೀಪದಲ್ಲಿದ್ದ ನಮ್ಮ ಕಚೇರಿಯಲ್ಲಿ ನಗರದಲ್ಲಿದ್ದ ಎರಡು ಠಾಣೆಗಳಿಗೆ ಫೋನ್ ಮಾಡಿ, ಸಿಬ್ಬಂದಿಗೆ ಪರಿಸ್ಥಿತಿಯ ಕುರಿತು ಸೂಚನೆ ನೀಡಿದೆ. ಅಷ್ಟರಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನ ಮೂಲಕ ನನ್ನ ಹೆಂಡತಿ ರಿವಾಲ್ವರ್ ಕಳುಹಿಸಿಕೊಟ್ಟಳು. ನಾನು ಅದನ್ನು ತೆಗೆದುಕೊಂಡು ಸ್ಥಳಕ್ಕೆ ಧಾವಿಸುತ್ತಿದ್ದಾಗ ರಸ್ತೆಯಲ್ಲಿ ಎದುರಾದ ನಾಲ್ಕೈದು ಕಾನ್‌ಸ್ಟೆಬಲ್‌ಗಳನ್ನು ಜೀಪಿಗೆ ಹತ್ತಿಸಿಕೊಂಡು, ಸ್ಥಳ ತಲುಪಿದೆ.
ತಿಪಟೂರು ಮಧ್ಯಭಾಗದಲ್ಲಿ ಇರುವ ಕೊಬ್ಬರಿ ಮಾರುಕಟ್ಟೆ ಸಮೀಪದ ರಸ್ತೆಯ ಎರಡೂ ಬದಿಗಳಲ್ಲಿ ಬೆಂಕಿಯ ಜ್ವಾಲೆಗಳು ಕಂಡವು. ಅಗ್ನಿಶಾಮಕ ದಳದವರನ್ನು ಕರೆಸಲು ತಿಳಿಸಿ, ಸಿಬ್ಬಂದಿಯನ್ನು ಕರೆದುಕೊಂಡು ಅಲ್ಲಲ್ಲಿ ದೊಂಬಿಯಲ್ಲಿ ನಿರತರಾಗಿದ್ದ ಜನರನ್ನು ಚದುರಿಸಲು ಪ್ರಾರಂಭಿಸಿದೆ. ಈ ಕಾರ್ಯದಲ್ಲಿ ಮಗ್ನನಾಗಿದ್ದಾಗ ಏಳೆಂಟು ಜನರ ಗುಂಪೊಂದು ನನ್ನ ಹತ್ತಿರ ಬಂದಿತು. ಗಲಭೆ ಹತ್ತಿಕ್ಕಲು ತಾವೂ ಸಹಾಯ ಮಾಡುವುದಾಗಿ ಆ ಗುಂಪಿನಲ್ಲಿದ್ದವರು ಹೇಳಿ, ನಮ್ಮಂದಿಗೆ ಸೇರಿಕೊಂಡರು. ಉದ್ರಿಕ್ತ ಗುಂಪನ್ನು ಚದುರಿಸುತ್ತಾ ನಾವು ಮುಂದೆ ಹೋಗುತ್ತಿದ್ದಾಗ ಆ ಗುಂಪು ಸ್ವಲ್ಪ ದೂರದಲ್ಲಿ ಹಿಂಬಾಲಿಸುತ್ತಿತ್ತು.
ಸುಮಾರು 200 ಮೀಟರ್ ದೂರ ಕ್ರಮಿಸಿ, ಹಿಂತಿರುಗಿ ನೋಡಿದಾಗ ಬೆಂಕಿಯ ಜ್ವಾಲೆಗಳು ಇನ್ನೂ ಹೆಚ್ಚಾಗಿದ್ದವು. ನನಗೆ ಆಶ್ಚರ್ಯವಾಯಿತು. ಆಗ ನಾನು ಜೊತೆಗಿದ್ದ ಕಾನ್‌ಸ್ಟೆಬಲ್‌ಗಳನ್ನು ಒಬ್ಬೊಬ್ಬರನ್ನಾಗಿ ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ, ಜನರನ್ನು ನಾವು ಚದುರಿಸಿದ್ದರೂ ಮತ್ತೆ ಬೆಂಕಿಯ ಪ್ರಮಾಣ ಹೆಚ್ಚಾದದ್ದು ಹೇಗೆ ಎಂದು ವಿಚಾರಿಸಿದೆ.
ಆಗ ಒಬ್ಬ ಕಾನ್‌ಸ್ಟೆಬಲ್, `ಸರ್, ನಮ್ಮ ಜೊತೆ ಹಿಂದೆ ಬರುತ್ತಿದ್ದ ಗುಂಪಿನವರ ಹಿಂದೆ ಇನ್ನೊಂದು ಸಣ್ಣ ಗುಂಪು ಇದ್ದು, ಅಲ್ಲಿದ್ದವರು ಪೆಟ್ರೋಲ್-ಬೆಂಕಿಪೊಟ್ಟಣ ತೆಗೆದುಕೊಂಡು ಹಿಂಬಾಲಿಸುತ್ತಿದ್ದಾರೆ. ನಾವು ಮುಂದೆ ಹೋದಾಗ, ಅವರು ಹಿಂದೆ ಉಳಿದು ಪೆಟ್ರೋಲ್ ಹಾಕಿ ಬೆಂಕಿ ಹಚ್ಚುತ್ತಿದ್ದಾರೆ' ಎಂದು ಕಿವಿಯಲ್ಲಿ ಉಸುರಿದ. ಇದನ್ನು ಕೇಳಿ ನನಗೆ ದಿಗ್ಭ್ರಮೆಯಾಯಿತು.
ತಕ್ಷಣವೇ ಯೋಚಿಸಿ, ನಿಧಾನಗತಿಯಲ್ಲಿ ಹೆಜ್ಜೆ ಹಾಕತೊಡಗಿದೆ. ನಾಲ್ಕೈದು ನಿಮಿಷದ ನಂತರ ಒಮ್ಮೆಲೇ ಹಿಂತಿರುಗಿ ನಾಲ್ಕೈದು ಕಾನ್‌ಸ್ಟೆಬಲ್‌ಗಳನ್ನು ಕರೆದುಕೊಂಡು ಹೋಗುತ್ತಿದ್ದ ಮಾರ್ಗದಲ್ಲಿ ವಾಪಸ್ ಬಂದೆ. ಆಗ ಯಾವ ಗುಂಪು ಸಹಾಯ ಮಾಡುವುದಾಗಿ ಹೇಳಿ ಹಿಂದೆ ಬಂದಿತ್ತೋ, ಅದರಲ್ಲಿ ಇದ್ದ ಒಬ್ಬನು ಪೆಟ್ರೋಲ್ ಹಾಕಿ ಅಂಗಡಿಗೆ ಬೆಂಕಿ ಹಚ್ಚುತ್ತಿದ್ದ. ಕೋಮುಗಲಭೆಗಳನ್ನು ನಿಯಂತ್ರಿಸುವಾಗ ಎರಡನೇ ಯೋಚನೆಯೇ ಇಲ್ಲದೆ ಅತಿ ಹೆಚ್ಚಿನ ಬಲಪ್ರಯೋಗ ಮಾಡಬೇಕು ಎಂದು ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಕೇಳಿದ್ದ ಪಾಠ ನೆನಪಾಯಿತು.
ನನ್ನಲ್ಲಿದ್ದ ರಿವಾಲ್ವರ್ ತೆಗೆದು, ಬೆಂಕಿ ಹಚ್ಚುತ್ತಿದ್ದ ವ್ಯಕ್ತಿಯತ್ತ ಗುರಿಯಿಟ್ಟು ಗುಂಡು ಹಾರಿಸಿದೆ. ಗಾಯಗೊಂಡ ಅವನು ಕುಸಿದುಬಿದ್ದ. ಉಳಿದವರು ಓಡಿಹೋದರು. ತಕ್ಷಣ ಕಾನ್‌ಸ್ಟೆಬಲ್ ಒಬ್ಬನಿಗೆ ಆಟೊರಿಕ್ಷಾ ತಂದು, ಗಾಯಗೊಂಡವನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸುವಂತೆ ಹೇಳಿದೆ. ಹತ್ತು ನಿಮಿಷದಲ್ಲೇ ರೈಲ್ವೆ ಸ್ಟೇಷನ್‌ನಿಂದ ಆಟೊ ತಂದು, ಅವನು ಗಾಯಗೊಂಡವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ.
ಕೂಡಲೇ ನಾನು ಜೊತೆಗಿದ್ದ ಮೂರು ನಾಲ್ಕು ಕಾನ್‌ಸ್ಟೆಬಲ್‌ಗಳನ್ನು ಕರೆದುಕೊಂಡು ಆ ಪ್ರದೇಶದಲ್ಲಿ ಸುತ್ತಾಡಿ, ಎಲ್ಲೆಲ್ಲಿ ಜನಜಂಗುಳಿ ಇತ್ತೋ ಅಲ್ಲೆಲ್ಲಾ ಗಾಳಿಯಲ್ಲಿ ಗುಂಡು ಹಾರಿಸಿದೆ. ಉದ್ರಿಕ್ತ ಗುಂಪುಗಳು ಚದುರಿಹೋದವು. ನಮ್ಮಲ್ಲಿ ಹೆಚ್ಚು ಸಿಬ್ಬಂದಿ ಇಲ್ಲದ್ದರಿಂದ ಲಾಠಿ ಚಾರ್ಜ್ ಮಾಡಲು ಸಾಧ್ಯವಿರಲಿಲ್ಲ. ಮೀಸಲು ಪಡೆ ಪೊಲೀಸರು ಇಲ್ಲದ ಕಾರಣ ಅಶ್ರುವಾಯು ಸಹಿತ ಇರಲಿಲ್ಲ. ಹೀಗಾಗಿ ಗಾಳಿಯಲ್ಲಿ ಗುಂಡು ಹಾರಿಸದೇ ವಿಧಿಯಿರಲಿಲ್ಲ. ಸುಮಾರು ರಾತ್ರಿ 11ಗಂಟೆಯ ಹೊತ್ತಿಗೆ ಅಲ್ಲಿ ಪರಿಸ್ಥಿತಿ ಹತೋಟಿಗೆ ಬಂತು.
ಮಧ್ಯರಾತ್ರಿ ಹೊತ್ತಿಗೆ ಹಾಸನ ಜಿಲ್ಲೆಯಿಂದ ಒಂದು ಜಿಲ್ಲಾ ಮೀಸಲು ತುಕಡಿ ಬಂತು. ಹಾಸನವು ದಕ್ಷಿಣ ವಲಯಕ್ಕೆ ಸೇರಿತ್ತು. ಅಲ್ಲಿಯ ಎಸ್‌ಪಿ ಎಸ್.ಎಸ್. ಹಸದಿ ನನಗೆ ಪರಿಚಿತರಾದ್ದರಿಂದ ಎರಡನೇ ಯೋಚನೆಯೇ ಇಲ್ಲದೆ ತುಕಡಿ ಕಳುಹಿಸಿಕೊಟ್ಟಿದ್ದರು. ಅರಸೀಕೆರೆಯ ಆಗಿನ ಪೊಲೀಸ್ ಉಪ ವಿಭಾಗಾಧಿಕಾರಿ (ಡಿಎಸ್‌ಪಿ) ಗೋಪಾಲ್ ಹೊಸೂರು ನಮ್ಮ ಮನವಿಗೆ ಓಗೊಟ್ಟು ಇನ್ನೊಂದು ತುಕಡಿ ಕಳುಹಿಸಿದರು.
ತುಮಕೂರಿನಿಂದ ಸಹ ಒಂದು ಜಿಲ್ಲಾ ಮೀಸಲು ಪಡೆ ತುಕಡಿ ಬಂತು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಮೇಲೆ ನಾನು ಠಾಣೆಗೆ ತೆರಳಿ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್‌ಗಳ ಜೊತೆ ಮಾತುಕತೆ ನಡೆಸಿ, ಗಲಭೆಗಳಲ್ಲಿ ಭಾಗವಹಿಸಿದ ಎರಡೂ ಕೋಮುಗಳ ಶಂಕಿತರ ಪಟ್ಟಿ ಸಿದ್ಧಪಡಿಸಿದೆ.
ಬೆಳಗಿನ ಜಾವ ಸುಮಾರು 3 ಗಂಟೆಯ ಹೊತ್ತಿಗೆ ಬೆಂಗಳೂರಿನಿಂದ ರಾಜ್ಯ ಮೀಸಲು ಪಡೆಯ `ಪ್ಲಟೂನ್' ಒಂದು ನಮ್ಮ ಸಹಾಯಕ್ಕೆ ಬಂತು. ಕೂಡಲೇ ನಾನು ಸ್ಥಳೀಯ ಸಿಬ್ಬಂದಿ, ಮೀಸಲು ಪಡೆಗಳ ಸಹಾಯ ಪಡೆದು, ಶಂಕಿತರ ಮನೆಗಳನ್ನು ಶೋಧಿಸಿದೆ. ಸುಮಾರು 60 ಮಂದಿ ಶಂಕಿತರನ್ನು ಬಂಧಿಸಿ, ಲಾಕಪ್‌ಗೆ ಹಾಕಿದೆವು. ಪ್ರಕರಣ ದಾಖಲು ಮಾಡಿಕೊಂಡದ್ದೂ ಆಯಿತು.
ಬೆಳಿಗ್ಗೆ ತಿಪಟೂರಿಗೆ ಬಂದ ನಮ್ಮ ಜಿಲ್ಲಾ ಎಸ್‌ಪಿ ಪಾರ್ಶ್ವನಾಥ್ ಅವರಿಗೆ ಗಲಭೆ ನಡೆದ ಪ್ರದೇಶಗಳನ್ನು ತೋರಿಸಿ, ನಡೆದ ಘಟನೆಗಳ ವಿವರ ನೀಡಿದೆ. ಅವರು ನಾವು ತೆಗೆದುಕೊಂಡ ಕ್ರಮಗಳ ಕುರಿತು ಸಂತೋಷ ವ್ಯಕ್ತಪಡಿಸಿದರು. ಆಗ ಗುಂಡೂರಾಯರು ಮುಖ್ಯಮಂತ್ರಿ. ಕಾರ್ಮಿಕ ಚಳವಳಿ, ರೈತ ಚಳವಳಿಗಳು ಚುರುಕಾಗಿದ್ದವು.
ಕೋಮುಗಲಭೆಗಳಲ್ಲಿ ಹಲವು ಸಲ ಗೋಲಿಬಾರ್ ಘಟನೆಗಳು ನಡೆದಿದ್ದವು. ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಬಂದ ಡಿಐಜಿ ರಘುರಾಮನ್ ಪರಿಸ್ಥಿತಿಯನ್ನು ಪರಿಶೀಲಿಸಿದ ಮೇಲೆ ಅಸಮಾಧಾನ ವ್ಯಕ್ತಪಡಿಸಲಿಲ್ಲವಾದರೂ ಮತ್ತೆ ಇಲ್ಲಿ ಗೋಲಿಬಾರ್ ನಡೆದದ್ದರಿಂದ ಅವರಲ್ಲಿ ಆತಂಕವಿತ್ತು. ಅದನ್ನು ಸರ್ಕಾರದ ಗಮನಕ್ಕೆ ಹೇಗೆ ತರಬೇಕೆಂಬ ಚಿಂತೆಯಲ್ಲಿ ಮುಳುಗಿದರು.
10.30 ಗಂಟೆಯ ಸುಮಾರಿಗೆ ಆಗಿನ ಡಿಜಿಪಿ ಜಿ.ವಿ.ರಾವ್ ಅವರು ಹೆಚ್ಚುವರಿ ಐಜಿಪಿ (ಆಡಳಿತ) ಆಗಿದ್ದ ಗರುಡಾಚಾರ್ ಅವರೊಂದಿಗೆ ಘಟನೆ ನಡೆದ ಪ್ರದೇಶಕ್ಕೆ ಬಂದರು. ಅವರಿಬ್ಬರೂ ಏನೂ ಮಾತನಾಡದೆ ಗಲಭೆ ನಡೆದ ಪ್ರದೇಶಗಳಿಗೆ ಭೇಟಿ ನೀಡಿದರು. ನಮ್ಮ ಕಚೇರಿಗೆ ಬಂದು, ಆಗ ಗುಪ್ತಚರ ವಿಭಾಗದ ಅಧಿಕಾರಿಯಾಗಿದ್ದ ಕಾರ್ತಿಕೇಯನ್ ಅವರ ಜೊತೆ ಫೋನ್ ಮೂಲಕ ಸಮಾಲೋಚನೆ ನಡೆಸಿದರು.
ಅಷ್ಟರಲ್ಲಿ ನಾನು ಹಾರಿಸಿದ ಗುಂಡಿನಿಂದಾಗಿ ಬಹುಸಂಖ್ಯಾತ ಕೋಮಿಗೆ ಸೇರಿದ ವ್ಯಕ್ತಿ ಮೃತಪಟ್ಟ ಸುದ್ದಿ ತಿಳಿದುಬಂತು. ರಾವ್ ಹಾಗೂ ಗರುಡಾಚಾರ್ ನನ್ನೊಬ್ಬನನ್ನೇ ಒಳಗೆ ಕರೆಸಿ, ಗುಂಡು ಹಾರಿಸಿದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಅವರಿಬ್ಬರೂ ಪರಿವೀಕ್ಷಣಾ ಮಂದಿರಕ್ಕೆ ಹೋಗಿ, ಊಟ ಮಾಡಿ ಅಲ್ಲಿಂದ ತೆರಳುವುದೆಂದು ತೀರ್ಮಾನಿಸಿದರು. ಊಟ ಮಾಡುವ ವೇಳೆಗೆ ಮೃತಪಟ್ಟ ವ್ಯಕ್ತಿಯ ಹೆಸರು, ವಿಳಾಸ ಗೊತ್ತಾಯಿತು.
ಆಗ ಮೂರು ವರ್ಷಕ್ಕೊಮ್ಮೆ ಪ್ರತಿ ಜಿಲ್ಲೆಯಲ್ಲೂ `ಕೋಮುಗಲಭೆ ನಿಯಂತ್ರಣ ಯೋಜನೆ' ತಯಾರಿಸಿ, ಅದನ್ನು ಪೊಲೀಸ್ ಪ್ರಧಾನ ಕಚೇರಿಗೆ ಕಳುಹಿಸುವ ಪದ್ಧತಿ ಇತ್ತು. ಈ ಯೋಜನೆಯಲ್ಲಿ ಆಯಾ ಪ್ರದೇಶಗಳಲ್ಲಿ ಕೋಮುಗಲಭೆ ನಡೆದರೆ ಕೈಗೊಳ್ಳಬೇಕಾದ ಕ್ರಮಗಳ ವಿವರ ಇರುತ್ತಿತ್ತು. ಜೊತೆಗೆ ಗಲಭೆ ನಡೆಯಬಹುದಾದ ಪ್ರದೇಶಗಳಲ್ಲಿ ಇರುವ ಹಿಂಸಾತ್ಮಕ ಕ್ರಿಮಿನಲ್ ಗೂಂಡಾಗಳ ಪಟ್ಟಿಯನ್ನು ಲಗತ್ತಿಸಲಾಗುತ್ತಿತ್ತು. ಗಲಭೆ ನಿಯಂತ್ರಣ ಸುಲಭವಾಗಲಿ ಎಂಬುದು ಇದರ ಉದ್ದೇಶ.
ಮೂರು ವರ್ಷಗಳ ಹಿಂದೆ ತುಮಕೂರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಸಿದ್ಧಪಡಿಸಿದ್ದ `ಕೋಮುಗಲಭೆ ನಿಯಂತ್ರಣ ಯೋಜನೆ'ಯ ಪುಸ್ತಕದಲ್ಲಿ ಲಗತ್ತಿಸಲಾಗಿದ್ದ ಗೂಂಡಾಗಳ ಪಟ್ಟಿಯಲ್ಲಿ `ಶ್ರೀಧರ್' ಎಂಬ ಹೆಸರು ಮೊದಲಿನದಾಗಿತ್ತು. ನಾನು ಹಾರಿಸಿದ ಗುಂಡಿನಿಂದ ಮೃತಪಟ್ಟ ವ್ಯಕ್ತಿಯ ಹೆಸರೂ ಅದೇ. ನಾನು ಡಿಐಜಿ ರಘುರಾಮನ್ ಅವರಿಗೆ ಪುಸ್ತಕ ತೋರಿಸಿದಾಗ ಅವರ ಮುಖದಲ್ಲಿ ಸಂತೋಷದ ಛಾಯೆ ಮೂಡಿತು. ಕೂಡಲೇ ಪರಿವೀಕ್ಷಣಾ ಮಂದಿರಕ್ಕೆ ಹೋಗಿ, ಡಿಜಿಪಿ ರಾವ್ ಹಾಗೂ ಗರುಡಾಚಾರ್ ಅವರಿಗೆ ಪುಸ್ತಕ ತೋರಿಸಿದೆ. ಅವರಿಬ್ಬರೂ ಒಳ್ಳೆಯ ಕೆಲಸ ಮಾಡಿದೆ ಎಂದು ಹೇಳಿದರು.
ಡಿಐಜಿ ನಮ್ಮ ಡಿಜಿಪಿ ಕಚೇರಿಗೆ ಹೋಗಿ, ಕಾರ್ತಿಕೇಯನ್ ಅವರಿಗೆ ಫೋನ್ ಮೂಲಕ ವಿಷಯ ಮುಟ್ಟಿಸಲು ಮುಂದಾದರು.ಮುಖ್ಯಮಂತ್ರಿಗೆ ವಿಷಯ ಮುಟ್ಟಿಸಬೇಕಾದದ್ದು ಕಾರ್ತಿಕೇಯನ್. ಆದರೆ ಫೋನ್ ಮೂಲಕ ಹೇಳಿದ ಸಂಗತಿಯನ್ನು ಅವರು ತಕ್ಷಣಕ್ಕೆ ನಂಬಲಿಲ್ಲ. ಪುಸ್ತಕವನ್ನು ಮತ್ತೆ ಪರಿಶೀಲಿಸಿ ಆಮೇಲೆ ಫೋನ್ ಮಾಡುತ್ತೇನೆ ಎಂದರು. 15 ನಿಮಿಷದ ನಂತರ ಮತ್ತೆ ಫೋನ್ ಮಾಡಿ, `ನೀವು ಹೇಳಿದ್ದು ಸರಿ, ತೆಗೆದುಕೊಂಡಿರುವ ಕ್ರಮ ಶ್ಲಾಘನೀಯ' ಎಂದು ಡಿಐಜಿ ಅವರಿಗೆ ತಿಳಿಸಿದರು. ಆಗ ನನಗೆ ಸ್ವಲ್ಪ ಸಮಾಧಾನವಾಯಿತು.
ತಿಪಟೂರಿನಲ್ಲಿ ಕೆಳವರ್ಗದಿಂದ ಬಡ್ತಿ ಪಡೆದು, ಕಷ್ಟಪಟ್ಟು ಮೇಲೆಬಂದು ಅನುಭವ ಸಂಪಾದಿಸಿದ್ದ ಇನ್ಸ್‌ಪೆಕ್ಟರ್ ವೈ.ಬಿ. ಪಾಟೀಲ್ ಅವರ ಸಹಾಯದಿಂದ ಗಲಭೆಯ ಪ್ರಕರಣವನ್ನು ನಾನೇ ಖ್ದ್ದುದು ತನಿಖೆ ಮಾಡಿದೆ. ಯಾಕೆಂದರೆ, ಪೊಲೀಸ್ ಉಪ ವಿಭಾಗಾಧಿಕಾರಿ ಆದವರು ತನಿಖೆಗಳನ್ನು ಖ್ದ್ದುದಾಗಿ ಮಾಡಲೇಬೇಕು ಎಂಬ ನಿಯಮವಿದೆ.
ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಹಲವಾರು ಆರೋಪಿಗಳಿಗೆ ಶಿಕ್ಷೆಯಾಯಿತು. ಮೂವತ್ತನಾಲ್ಕು ವರ್ಷಗಳ ಪೊಲೀಸ್ ಸೇವಾವಧಿಯಲ್ಲಿ ಕೋಮುಗಲಭೆ ಪ್ರಕರಣಗಳಲ್ಲಿ ನಾನು ಕಂಡ ಶಿಕ್ಷೆಯಾದ ಪ್ರಕರಣ ಇದೊಂದೇ.
ತಿಪಟೂರು ನಗರದ ಬಹುಸಂಖ್ಯಾತ, ಅಲ್ಪಸಂಖ್ಯಾತ ಜನರೆಲ್ಲಾ ಗಲಭೆ ನಿಯಂತ್ರಿಸಿದ್ದಕ್ಕಾಗಿ ನಮ್ಮನ್ನು ಮೆಚ್ಚಿದರು. ಕೊಬ್ಬರಿ ಮಾರ್ಕೆಟ್ ಗೋದಾಮುಗಳಿಗೆ ಬೆಂಕಿ ಅನಾಹುತ ಆಗದಂತೆ ತಪ್ಪಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ತಿಪಟೂರಿನ ಜನರ ಜೊತೆ ಈಗಲೂ ನನಗೆ ಮಧುರ ಬಾಂಧವ್ಯ ಇದೆ.
ಕಾರಣಾಂತರಗಳಿಂದಾಗಿ ಈ ಅಂಕಣ ಇನ್ನು ಮುಂದೆ ಪ್ರಕಟವಾಗುವುದಿಲ್ಲ. -ಸಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.