ADVERTISEMENT

ಜನರತ್ತ ಗುಂಡು ಹಾರಿಸಿದ ಮೊದಲ ಪ್ರಸಂಗ

ಶಂಕರ ಬಿದರಿ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST

ತಿಪಟೂರು ಪೊಲೀಸ್ ಉಪ ವಿಭಾಗ ಮೂಲತಃ ಕೃಷಿ ಆಧಾರಿತ ಪ್ರದೇಶ. ಅಮ್ಮಸಂದ್ರದಲ್ಲಿ ಇದ್ದಂಥ ಒಂದು ಸಿಮೆಂಟ್ ಕಾರ್ಖಾನೆ ಬಿಟ್ಟರೆ ಬೇರೆ ಯಾವುದೇ ಕೈಗಾರಿಕೆಯೂ ಅಲ್ಲಿ ಇರಲಿಲ್ಲ. ಇತ್ತೀಚೆಗೆ ನಡೆಯುತ್ತಿರುವಂತೆ ಕಬ್ಬಿಣದ ಅದಿರಿನ ಗಣಿಗಾರಿಕೆಯೂ ಆಗ ನಡೆಯುತ್ತಿರಲಿಲ್ಲ. ಆಗ ಅದು ಲಾಭದಾಯಕ ಆಗಿರಲಿಲ್ಲ. ತುಮಕೂರು ಜಿಲ್ಲೆಯ ಕಬ್ಬಿಣದ ಅದಿರಿನ ಗಣಿಗಳು ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನಲ್ಲೇ ಇವೆ. ನಾಲ್ಕು ತಾಲ್ಲೂಕಿನಲ್ಲಿ ಹನ್ನೊಂದು ಪೊಲೀಸ್ ಠಾಣೆಗಳು ಇದ್ದವು.

ನಾನು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊನೆಹಳ್ಳಿ ಎಂಬಲ್ಲಿ ಭೀಕರ ಅಪಘಾತವಾಯಿತು. ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ಮಾಲೀಕರ ಕುಟುಂಬಕ್ಕೆ ಸೇರಿದವರು ಹೋಗುತ್ತಿದ್ದ ಕಾರ್ ಮರಕ್ಕೆ ಡಿಕ್ಕಿ ಹೊಡೆದು, ಅದರಲ್ಲಿ ಇದ್ದವರೆಲ್ಲಾ ಅಸುನೀಗಿದ್ದರು. ದಾರುಣ ಘಟನೆ. ಬೆಟ್ಟೇಗೌಡ ಎಂಬುವರು ಹೊನ್ನವಳ್ಳಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದರು. ಅವರು ವೈರ್‌ಲೆಸ್ ಮೂಲಕ ಸಂದೇಶ ಕಳುಹಿಸಿದ್ದೇ ನಾನು ಹೋಗಿ ಸ್ಥಳ ಪರಿಶೀಲನೆ, ಮಹಜರು ಮಾಡಿದೆವು. ಸಿಕ್ಕ ವಸ್ತುಗಳ ಯಾದಿ ಸಿದ್ಧಪಡಿಸಿದೆವು.

ಬೆಲೆ ಬಾಳುವ ಬಂಗಾರದ ಒಡವೆಗಳು ಅಪಘಾತವಾಗಿದ್ದ ಕಾರ್‌ನಲ್ಲಿ ಸಿಕ್ಕವು. ಅಷ್ಟೂ ಒಡವೆಗಳನ್ನು ಠಾಣೆಯಲ್ಲಿಟ್ಟೆವು. ಮುಂದೆ ಕೋರ್ಟ್‌ನ ಅನುಮತಿ ಪಡೆದು ಅದನ್ನು ಅಪಘಾತಗೊಂಡವರ ಕುಟುಂಬಕ್ಕೆ ಹಿಂದಿರುಗಿಸಿದೆವು. ಹಲವರನ್ನು ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬದವರಿಗೆ ಒಂದು ಗ್ರಾಂ ಕೂಡ ಕಡಿಮೆ ಇಲ್ಲದಂತೆ ನಾವು ವಶಪಡಿಸಿಕೊಂಡ ಬಂಗಾರ ನೀಡಿದಾಗ ಸ್ವಲ್ಪ ಸಮಾಧಾನವಾಯಿತು. ಮುಂದೆ 1982ರಲ್ಲಿ ನಾನು ಮಂಡ್ಯಕ್ಕೆ ವರ್ಗಾವಣೆಯಾಗಿ ಹೋದಾಗ ಆ ಕುಟುಂಬದವರೇ ಒಬ್ಬರು ಅಲ್ಲಿ ವೈದ್ಯಾಧಿಕಾರಿಯಾಗಿದ್ದರು. ಅಲ್ಲಿ ಅವರ ಸ್ನೇಹ ದೊರೆಯಿತು. ನನಗೆ ವಿಶೇಷವಾಗಿ ಥ್ಯಾಂಕ್ಸ್ ಹೇಳಿದರು. ತಿಪಟೂರಿನಲ್ಲಿ ಕೆಲಸ ಮಾಡಲು ಆರಂಭಿಸಿದ ನಂತರ ಕಂಡ ಮೊದಲ ಗಂಭೀರ ಪ್ರಕರಣ ಇದಾಗಿತ್ತು. ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ ಜನ ಪೊಲೀಸರಿಗೆ ಎಷ್ಟು ಕೃತಜ್ಞರಾಗಿರುತ್ತಾರೆ ಎಂಬುದಕ್ಕಿದು ಸಣ್ಣ ಉದಾಹರಣೆಯಷ್ಟೆ.

ಎಚ್.ಎ. ಪಾರ್ಶ್ವನಾಥ್ ಆಗ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ (ಎಸ್.ಪಿ) ಆಗಿದ್ದರು. ಅನುಭವಿ, ಪ್ರಾಮಾಣಿಕ ಅಧಿಕಾರಿ. ನನ್ನ ಮೇಲೆ ಅವರಿಗೆ ವಿಶ್ವಾಸ. ಕಾನ್‌ಸ್ಟೆಬಲ್‌ಗಳ ಬಡ್ತಿಯಿಂದ ಹಿಡಿದು ಸರ್ಕಾರದ ಸಂಬಂಧಪಟ್ಟವರಿಗೆ ಏನಾದರೂ ಪತ್ರ ಬರೆಯುವುದಿದ್ದರೆ ನನಗೇ ಹೇಳುತ್ತಿದ್ದರು. ಗುಂಡೂರಾಯರು ಆಗ ಮುಖ್ಯಮಂತ್ರಿಯಾಗಿದ್ದರು. ಆದರೆ ತುರುವೇಕೆರೆ ತಾಲ್ಲೂಕಿನಲ್ಲಿ ವಿಚಿತ್ರ ಪರಿಸ್ಥಿತಿ. ಅಲ್ಲಿ ಎರಡು ಬಣಗಳಿದ್ದವು- ಲೋಕಸಭಾ ಸದಸ್ಯರ ಬೆಂಬಲಿಗರದ್ದು ಒಂದು, ಸ್ಥಳೀಯ ಶಾಸಕರ ಅನುಯಾಯಿಗಳದ್ದು ಇನ್ನೊಂದು. ಲೋಕಸಭಾ ಸದಸ್ಯರನ್ನು ಮಾಜಿ ಶಾಸಕರು ಬೆಂಬಲಿಸಿದ್ದರಿಂದ ಸಹಜವಾಗಿಯೇ ಅವರ ಹಿಂಬಾಲಕರು ಆ ಬಣದಲ್ಲಿ ಹೆಚ್ಚಾಗಿದ್ದರು. ಪೊಲೀಸ್ ಠಾಣೆಯಲ್ಲಿ ಕೂಡ ನಮಗೆ ಗೊತ್ತೇ ಇಲ್ಲದಂತೆ ಎರಡು ಬಣಗಳಾಗಿದ್ದವು. ಸಬ್ ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳು ಶಾಸಕರ ಪರವಾಗಿದ್ದ ಬಣದ ಜೊತೆ ಗುರ್ತಿಸಿಕೊಂಡಿದ್ದರೆ, ಇನ್ನೊಬ್ಬ ಹೆಡ್ ಕಾನ್‌ಸ್ಟೆಬಲ್ ಮಾಜಿ ಶಾಸಕರ ಕಡೆಯವನಾಗಿದ್ದ. ಪೊಲೀಸ್ ಪ್ರಕರಣಗಳಿಗೆ ಸಂಬಂಧಪಟ್ಟ ವಿಷಯಗಳು ಠಾಣೆಯಿಂದ ಆಯಾ ಬಣಗಳಿಗೆ ಹೋಗಿ ಮುಟ್ಟಲು ಈ ಒಡಕು ಕಾರಣವಾಗಿತ್ತು. ಅದನ್ನು ಸರಿಪಡಿಸಬೇಕೆಂಬುದು ಪಾರ್ಶ್ವನಾಥ್ ಉದ್ದೇಶ. ಆ ಬಗೆಗೆ ಮಾತನಾಡುತ್ತಾ ಇರುವಾಗಲೇ ದಂಡಿನಶಿವರ ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿ ಒಂದು ಕೊಲೆ ನಡೆದ ಸುದ್ದಿ ಬಂತು.

ನಾವಿಬ್ಬರೂ ದಂಡಿನಶಿವರದಿಂದ ಮಾಯಸಂದ್ರ ಹಾದು ಹೊರಟೆವು. ತುರುವೇಕೆರೆಯ ಇನ್‌ಸ್ಪೆಕ್ಷನ್ ಬಂಗ್ಲೋ (ಐಬಿ) ಇದ್ದದ್ದು ಅದೇ ರಸ್ತೆಯಲ್ಲಿ. ಮುಂದಿನ ಮಾಹಿತಿಗೆ ಕಾಯುತ್ತಾ ಅಲ್ಲಿ ತಂಗಿದೆವು. ಸ್ವಲ್ಪ ಹೊತ್ತಿನಲ್ಲೇ ಕೊಲೆ ನಡೆದ ಊರಿನಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂಬ ವರ್ತಮಾನ ಬಂತು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಹೆಡ್ ಕಾನ್‌ಸ್ಟೆಬಲ್ ಒಬ್ಬರನ್ನು ಊರಿನ ವೈದ್ಯರ ಕ್ಲಿನಿಕ್‌ನಲ್ಲಿ ಅಲ್ಲಿನ ಕೆಲವರು ಕೂಡಿಹಾಕಿ, ಕೀಲಿ ಹಾಕಿದ್ದರು. ಸಬ್ ಇನ್ಸ್‌ಪೆಕ್ಟರ್ ಯಾವುದೋ ಪ್ರಕರಣದಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಠಾಣೆಯ ಎದುರೂ ಜನಜಂಗುಳಿ ಜಮಾಯಿಸಿತ್ತು ಎಂದು ಗೊತ್ತಾಯಿತು. ನಾನು ಎಸ್‌ಪಿ ಅವರ ಕಾರಿನಲ್ಲೇ ಪ್ರಯಾಣ ಮಾಡಿದ್ದೆ. ಆ ಕಾರಿನ ಹಿಂದೆ ನನ್ನ ಜೀಪ್ ಫಾಲೊ ಮಾಡುತ್ತಿತ್ತು. ಅದರಲ್ಲಿ ಹನ್ನೆರಡು ವರ್ಷದ ನನ್ನ ತಮ್ಮ ಕುಳಿತಿದ್ದ. ಊರಿನಲ್ಲಿ ಜನ ಭುಗಿಲೆದ್ದಿದ್ದಾರೆ ಎಂಬ ಮಾಹಿತಿ ಬಂದಾಗ ಐಬಿಯಲ್ಲಿ ಎಸ್‌ಪಿ ಇನ್ನೂ ತಿಂಡಿ ತಿನ್ನುತ್ತಿದ್ದರು. ಸಂಜೆ ಸುಮಾರು ಐದೂವರೆ ಗಂಟೆಯ ಸಮಯ. ಅಲ್ಲಿ ಏನಾಗಿದೆ ಎಂದು ನೋಡಲು ನಾನೇ ಹೊರಟೆ. ತಮ್ಮನನ್ನು ಜೀಪ್‌ನಲ್ಲೇ ಬಿಟ್ಟು, ಠಾಣೆಯತ್ತ ಹೆಜ್ಜೆ ಹಾಕಿದೆ.

ಎರಡು ಮೂರು ಸಾವಿರ ಜನ ಸೇರಿದ್ದರು. ಖುದ್ದು ಎಸ್‌ಪಿ ಅಲ್ಲಿಗೆ ಬರಲಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲಿದ್ದಾರೆ ಎಂದು ಹೇಳಿದ ಮೇಲೂ ಜನ ಸುಮ್ಮನಾಗಲಿಲ್ಲ. ಕೂಡಿಹಾಕಿದ್ದ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್‌ಸ್ಟೆಬಲ್ ಇಬ್ಬರನ್ನೂ ಬಿಡಿಸಲು ಮುಂದಾದೆವು. ಪರಿಪರಿಯಾಗಿ ತಿಳಿಹೇಳಿದರೂ ಬೀಗ ತೆಗೆಯಲಿಲ್ಲ. ಕೀಲಿ ತೆಗೆಯಲು ನಾನು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಇನ್ನೂರು ಮೀಟರ್ ದೂರದಲ್ಲಿದ್ದ ಠಾಣೆಗೆ ಹೋದರೆ ಅಲ್ಲಿ ಜನ ನಮ್ಮತ್ತ ಕಲ್ಲು ತೂರಲು ಆರಂಭಿಸಿದರು. ಮಹದೇವ ಎಂಬ ಸೆಂಟ್ರಿ ಕಾನ್‌ಸ್ಟೆಬಲ್ ಅಷ್ಟೇ ನನ್ನ ಜೊತೆ ಠಾಣೆಯಲ್ಲಿದ್ದರು. ಎಷ್ಟು ವಿನಂತಿಸಿಕೊಂಡರೂ ಜನ ಶಾಂತರಾಗಲಿಲ್ಲ. ನನಗೆ, ಸೆಂಟ್ರಿ ಕಾನ್‌ಸ್ಟೆಬಲ್‌ಗೆ ಗಾಯಗಳಾದವು. ಜೀವಕ್ಕೆ  ಅಪಾಯವಿದೆ ಎಂಬುದು ಬಲು ಬೇಗ ಗೊತ್ತಾಯಿತು. ನನ್ನ ಬಳಿ ಆಗ ಯಾವುದೇ ಆಯುಧ ಇರಲಿಲ್ಲ. ಸೆಂಟ್ರಿ ಹತ್ತಿರ ಇದ್ದ ರೈಫಲ್ ತೆಗೆದುಕೊಂಡೆ. ಹತ್ತು ಸುತ್ತು ಗುಂಡುಗಳಿದ್ದವು.

ನಾನು ಎರಡು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದೆ. ಅಕಸ್ಮಾತ್ತಾಗಿ ಒಂದು ಗುಂಡು ವಿದ್ಯುತ್ ತಂತಿಗೆ ತಗುಲಿ ಇಡೀ ಊರಿನಲ್ಲಿ ವಿದ್ಯುತ್ ಇಲ್ಲದಂತೆ ಆಯಿತು. ಕತ್ತಲು ಕವಿದಿದ್ದರಿಂದ ಜನ ಇನ್ನಷ್ಟು ಕ್ರುದ್ಧರಾದರು. ಕಲ್ಲು ತೂರಾಟ ತೀವ್ರಗೊಂಡಿತು. ವಿಧಿಯಿಲ್ಲದೆ ಜನಜಂಗುಳಿಯತ್ತ ಏಳೆಂಟು ಸುತ್ತು ಗುಂಡು ಹಾರಿಸಲೇಬೇಕಾಯಿತು. ಜನಜಂಗುಳಿ ಚದುರಿಹೋಯಿತು. ಸೆಂಟ್ರಿ ಕಾನ್‌ಸ್ಟೆಬಲ್‌ನನ್ನು ಕರೆದುಕೊಂಡು ಹೋಗಿ, ಕ್ಲಿನಿಕ್‌ನ ಬೀಗ ಒಡೆದು ಅಲ್ಲಿ ಕೂಡಿಹಾಕಿದ್ದ ಪೊಲೀಸರನ್ನು ಬಿಡಿಸಿಕೊಂಡು ಬಂದೆ. ಚದುರಿದ್ದ ಜನ ಮತ್ತೆ ಗಲಭೆ ಮಾಡಲು ಪೊಲೀಸ್ ಕ್ವಾರ್ಟ್ರಸ್‌ನತ್ತ ಧಾವಿಸುತ್ತಿದ್ದರು. ಅಲ್ಲಿಗೆ ಹೋಗಿ ಮತ್ತೆ ಗಾಳಿಯಲ್ಲಿ ಗುಂಡು ಹಾರಿಸಿದ ಮೇಲೆ ಅವರೆಲ್ಲಾ ಕಾಲುಕಿತ್ತರು.

ಇಷ್ಟರ ನಡುವೆ ಕತ್ತಲಲ್ಲಿ ನಾವು ಜನರತ್ತ ಗುಂಡು ಹಾರಿಸಿದ್ದರಿಂದ ಏನೇನು ಅನಾಹುತಗಳಾಗಿವೆ ಎಂಬುದು ಗೊತ್ತಾಗಿರಲಿಲ್ಲ. ವಿದ್ಯುತ್ ಇಲ್ಲದೇ ಇದ್ದರಿಂದ ಲಾಟೀನು ಬೆಳಕಿನಲ್ಲಿ ಸಬ್ ಇನ್ಸ್‌ಪೆಕ್ಟರ್ ನೆರವಿನಿಂದ ಗುಂಡು ಹಾರಿಸಿದ್ದ ಸ್ಥಳವನ್ನು ಸೂಕ್ಷ್ಮವಾಗಿ ನೋಡಿದೆವು. ಮೂರ‌್ನಾಲ್ಕು ಜನರಿಗೆ ಗಾಯಗಳಾಗಿದ್ದವು. ಒಬ್ಬನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸೇರಿಸಿದೆವು. ಆತ ಬದುಕಲಿಲ್ಲ.

ಜೀಪಿನಲ್ಲಿ ನಾನು ಬಿಟ್ಟು ಬಂದಿದ್ದ ತಮ್ಮ ನೆನಪಾದ. ಅವನಿಗೆ ಏನಾಗಿದೆಯೋ ಎಂಬ ಆತಂಕ. ಅವನು ಜೀಪಿನಿಂದ ಇಳಿದು ಜನಜಂಗುಳಿಯ ನಡುವೆ ಇದ್ದಿದ್ದರೂ ಗುಂಡು ಹಾರಿಸುವುದು ಆಗ ನಮಗೆ ಅನಿವಾರ್ಯವಾಗಿತ್ತು. ಆಮೇಲೆ ಪೊಲೀಸರು ಅವನನ್ನು ಕರೆತಂದರು. ನಮ್ಮ ಪೊಲೀಸ್ ಜೀಪಿಗೆ ಜನ ಬೆಂಕಿ ಇಟ್ಟಾರು ಎಂದು ಎಚ್ಚರಿಕೆಯಿಂದ ಅದನ್ನು ತುರುವೇಕೆರೆಯಿಂದ ಒಂದು ಕಿ.ಮೀ. ದೂರಕ್ಕೆ ಪೊಲೀಸರು ಓಡಿಸಿಕೊಂಡು ಹೋಗಿದ್ದರು. ನನ್ನ ತಮ್ಮ ಅದರಲ್ಲೇ ಇದ್ದುದರಿಂದ ಅವನಿಗೆ ಏನೂ ಆಗಲಿಲ್ಲ. ಗಾಯಗೊಂಡಿದ್ದವರಿಗೆ ಚಿಕಿತ್ಸೆ ಕೊಡಿಸಿದೆವು. ಏಪ್ರಿಲ್ 28, 1981ರ ಆ ದಿನ ಈಗಲೂ ಕಣ್ಣಿಗೆ ಕಟ್ಟಿದಹಾಗೆ ಇದೆ.

ಮರುದಿನ ಬೆಳಿಗ್ಗೆ ಗೃಹ ಕಾರ್ಯದರ್ಶಿಯಾಗಿದ್ದ ಮೋಹನ್‌ದಾಸ್ ಮೋಸೆಸ್ ಹಾಗೂ ಹೆಚ್ಚುವರಿ ಇನ್ಸ್‌ಪೆಕ್ಟರ್ ಜನರಲ್ ಆಗಿದ್ದ ಗರುಡಾಚಾರ್ ಬಂದರು. ನಾನಿನ್ನೂ ಹೊಸಬನಾದ್ದರಿಂದ ಘಟನೆಯ ವಿವರಗಳನ್ನು ತಿಳಿಸಿದೆ. ನನ್ನ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರಾದರೂ ಅವರಿಗೆ ಎಸ್‌ಪಿ ಆ ಸ್ಥಳಕ್ಕೆ ಬರಲಿಲ್ಲ ಎಂಬ ಕುರಿತು ಬೇಸರವಿತ್ತು. ನಾನು ಗಲಭೆ ನಡೆದ ಊರಿಗೆ ಹೊರಟ ಮೇಲೆ ಎಸ್‌ಪಿ ಕಿಬ್ಬನಹಳ್ಳಿ ಕ್ರಾಸ್‌ಗೆ ಹೋಗಿ, ಅಲ್ಲಿಂದ ತುಮಕೂರಿನ ಪೊಲೀಸ್ ಪಡೆ ಕರೆಸುವ ಯೋಚನೆ ಮಾಡಿದ್ದರು. ಅವರದ್ದೇನೂ ತಪ್ಪಿರಲಿಲ್ಲ. ನಾನೇ ಮೈಮೇಲೆ ಎಳೆದುಕೊಂಡ ಪ್ರಸಂಗ ಅದಾಗಿತ್ತು. ವೃತ್ತಿಬದುಕಿನಲ್ಲಿ ನಾನು ಎದುರಿಸಿದ ಮೊದಲ ದೊಡ್ಡ ಸವಾಲು ಅದು.

ಮುಂದಿನ ವಾರ
ರಾಜಕೀಯದ ನಡುವೆಯೂ ಏಗಿದ್ದು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.