ನಮೋ ಯಂಕಟೇಶಾ...
ನಮೋ ವಾರಣಾಸಿ ವಾಸಾ...
‘ಏನಯ್ಯಾ ‘ಘಾ’, ಇತ್ತೀಚೆಗೆ ತಿರುಪತಿಗೇನಾದ್ರೂ ಹೋಗಿ ಬಂದ್ಯಾ? ಗೋವಿಂದನ ಭಜನೆ ಶುರುಮಾಡಿಕೊಂಡು ಬಿಟ್ಟಿದ್ದೀಯಲ್ಲಾ...’ -ಪೆಕರ, ನಮೋ ಸುಪ್ರಭಾತ ಪಠಿಸುತ್ತಿದ್ದ ಘಾನನ್ನು ಅಚ್ಚರಿಯಿಂದ ಪ್ರಶ್ನಿಸಿದ.
‘ಹೇಳಲೇ ಬೇಕಲ್ಲಾ ಸಾರ್, ಇನ್ಮುಂದೆ ದಿನಾ ಬೆಳಿಗ್ಗೆ ನೀವೂ ‘ನಮೋ’ ಜಪ ಮಾಡದಿದ್ದರೆ ನಿಮಗೂ ಗ್ರಾಚಾರ ತಪ್ಪಿದ್ದಲ್ಲ, ನೀವೂ ಬೇಗ ಪ್ರ್ಯಾಕ್ಟೀಸ್ ಮಾಡಿಕೊಳ್ಳಿ, ಇಲ್ಲಾಂದ್ರೆ ದೇಶ ಬಿಡಬೇಕಾಗುತ್ತದೆ’ - ಎಂದು ಘಾ ಪೆಕರನಿಗೆ ಹಿತೋಕ್ತಿ ಹೇಳಿದ.
‘ಈಗ ದೇಶದಲ್ಲಿ ನಮೋ ನಮೋ ಎಂದರೆ ಭಯವಿಲ್ಲಾ... ನಮೋ ನಾಮಕೆ ಸಾಟಿ ಬೇರಿಲ್ಲ... ಅನ್ನುವಂತಾಗಿದೆ. ಆದರೂ ನಮೋ ಯಂಕಟೇಶಾ ಅಂತ ದಕ್ಷಿಣ ಭಾರತದ ಶೈಲಿಯಲ್ಲಿ ಸುಪ್ರಭಾತ ಹೇಳಬಾರದು ಮಿಸ್ಟರ್ ಘಾ, ಉತ್ತರ ಭಾರತದ ಶೈಲಿಯಲ್ಲಿ ಹರಹರ ನಮೋನಮೋ, ಹರಹರ ನಮೋನಮೋ ಎನ್ನಬೇಕು, ಇಲ್ಲದಿದ್ದರೆ ಗಂಗಾ ಪುತ್ರಕೀ ಜೈ ಎನ್ನಬೇಕು ಗೊತ್ತಾಯ್ತಾ’ ಎಂದು ಪೆಕರ ಸಣ್ಣ ಕರೆಕ್ಷನ್ ಹಾಕಿದ.
‘ನಾನು ಸುಮ್‌ಸುಮ್ನೆ ಏನೂ ಹೇಳಲ್ಲ ಸಾರ್, ನಮೋ ಅಲೆಯಲ್ಲಿ ಎಂಥೆಂಥವರೋ ಗೋವಿಂದ ಆಗಿಬಿಟ್ರಲ್ಲಾ ಅದಕ್ಕೆ ಗೋವಿಂದನ ಸುಪ್ರಭಾತವೇ ಸರಿ ಅನ್ಸುತ್ತೆ. ದೊಡ್ಡೇಗೌಡರು ಮತ್ತೆ ಪಿಎಮ್ಮೂ ಆಗೇಬಿಟ್ಟೆ ಅಂದಕೊಂಡಿದ್ರು, ಅವರ ಆ ಆಸೆನೂ, ಅವರ ಸನ್‌ದೂ, ಅವರ ಪಾರ್ಟಿದೂ, ಅವರ ಪಕ್ಷಾಧ್ಯಕ್ಷರದ್ದೂ ಹೋಲ್‌ಸೇಲಾಗಿ ಗೋವಿಂದಾ ಆಗ್ಬಿಡ್ತಲ್ಲಾ ಸಾರ್, ಮತ್ತೆ ಐದ್‌ವರ್ಷ ಈ ಛಾನ್ಸ್‌ಗಾಗಿ ಕಾಯಬೇಕಲ್ಲಾ ಸಾರ್!
ಅದ್ಬಿಡಿ, ನಮ್ಮ ಟೆಕ್ಕಿ ನಿಲೇಕಣಿ ಅವರೂ, ಮೈಸೂರಿನಲ್ಲಿ ಇಶ್ವನಾಥ್ ಸಾಹೇಬರೂ, ಮಂಗಳೂರಲ್ಲಿ ಪೂಜಾರ್ರು, ಮಂಡ್ಯದಲ್ಲಿ ರಮ್ಯಮ್ಮನವರೂ...ಹೀಗೆ ಸಾಲುಸಾಲಾಗಿ ಗೋವಿಂದ ಪಾರ್ಟಿಗಳಾಗಿ ಬಿಟ್ರಲ್ಲಾ ಸಾರ್, ಅದಲ್ಲದೆ, ಒಂದ್ವರ್ಷದ ಅಯ್ಯ ಸರ್ಕಾರಕ್ಕೆ ಇನ್ನೇನ್ ಕಂಟಕ ಬಂದು ವಕ್ಕರಿಸಿಕೊಳ್ಳುತ್ತೋ ಗೊತ್ತಿಲ್ಲ’ ಎಂದು ಘಾ, ಸುನಾಮಿ ಎಫೆಕ್ಟನ್ನೂ, ಅದರಲ್ಲಿ ಕೊಚ್ಚಿಕೊಂಡು ಹೋದವರ ದುರಂತ ಕತೆಯನ್ನೂ ವಿವರಿಸಿದ.
ದೇಶದಲ್ಲಿ ಇನ್ಮುಂದೆ ಮೋದಿ ಪರ್ವ
ಹುಟ್ಟಡಗಿತು ವಿರೋಧಪಕ್ಷಗಳ ಗರ್ವ
ಕಾಂಗ್ರೆಸ್ಸಿಗಾಯ್ತು ಮಹಾ ಮಂಗಳಾರತಿ
ಫುಲ್‌ಖುಷ್ ಮೋದಿಯಿಂದ ಗಂಗಾ ಆರತಿ
‘ನಮೋ ಅಲೆಯಲ್ಲಿ ಕಾಂಗ್ರೆಸ್ ಪಕ್ಷ ಛಿದ್ರಛಿದ್ರವಾಗಿ ವಿರೋಧಪಕ್ಷ ಆಗಲಿಕ್ಕೂ ಸಾಧ್ಯವಾಗದ ರೀತಿಯಲ್ಲಿ ನಾಮಾವಶೇಷ ಆಯ್ತು ಅನ್ನೋದು ಇತಿಹಾಸ ಸೇರಿಕೊಂಡ್ತು ಬಿಡು, ನಮೋ ಸುನಾಮಿಯಲ್ಲಿ ಕಾಂಗ್ರೆಸ್ ಒಂದೇ ಅಲ್ಲ, ಕಮಲ ಪಕ್ಷದಲ್ಲಿರೋ ಅಡ್ವಾಣಿಜಿ, ಸುಷ್ಮಾಜಿ ಮೊದಲಾದ ಘಟಾನುಘಟಿಗಳೇ ಮೂಲೆ ಸೇರಿಕೊಂಡ್ರು, ಇನ್ನು ಧರ್ಮರಾಯ ಸಿಂಗ್ಜೀ ನೆಲಕಚ್ಚಿದ್ದು ಯಾವ ಲೆಕ್ಕ ಬಿಡು’ ಎಂದು ಪೆಕರ ಮತ್ತಷ್ಟು ವಿವರ ಸೇರಿಸಿದ.
‘ನಮೋ ಸಾಹೇಬ್ರು ಪಿಎಮ್ಮಾದ್ರೆ ದೇಶಬಿಡ್ತೀನಿ ಅಂತಾರೆ, ಕಮಲ ಪಕ್ಷಕ್ಕೆ ೨೭೨ ಸೀಟು ಸಿಕ್ಕಿದ್ರೆ ಈ ರಾಜ್ಯದಲ್ಲಿ ಇರಲ್ಲ ಎಂದು ಮತ್ತೊಬ್ಬರು ಪ್ರತಿಜ್ಞೆ ಮಾಡ್ತಾರೆ, -ಅವರೆಲ್ಲಾ ಹೇಳಿದಂತೆ ನಡ್ಕೊತಾರಾ?’ -ಘಾನಿಗೆ ಅನುಮಾನ.
‘ಅದೆಲ್ಲಾ ಆಯಾ ಸಂದರ್ಭದಲ್ಲಿ ಬಾಯಿಯಿಂದ ಅವರಿಗೇ ಗೊತ್ತಿಲ್ಲದಂತೆ ಉದುರಿದ ಮಾತುಗಳು. ವಯಸ್ಸಾಯ್ತಲ್ಲಾ, ಯಾವಯಾವ ಸಮಯದಲ್ಲಿ ಏನೇನು ಉದುರುತ್ತೊ ಹೇಳೋಕಾಗಲ್ಲ, ಬಹಳ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ವಿಷ ಕುಡೀತೀನಿ ಎಂದು ಯಾರೋ ಒಬ್ಬರು ಹೇಳಿದಂತೆ ನೆನಪು... ಆದನ್ನು ಇತ್ತೀಚೆಗೆ ಡಾಜಿಪ ಅವರು ನೆನಪಿಸಿ, ಹಾಸ್ಯಾಸ್ಪದ ಸನ್ನಿವೇಶ ಸೃಷ್ಟಿಯಾಯ್ತು...
ರಾಜಕಾರಣಿಗಳ ಮಾತನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬಾರದು. ಮೊನ್ನೆ ನೋಡು ಏನಾಯ್ತು, ನಮ್ಮ ಲಂಚಾವತಾರದ ನಟ ರತ್ನಾಕರ ಅವರು ಅಯ್ಯ ಅವರ ಕ್ಷೇತ್ರದಲ್ಲಿ ಸೋನಿಯಾ ಮೇಡಂ ಬಗ್ಗೆನೂ, ಅಯ್ಯ ಅವರ ಬಗ್ಗೆನೂ ಬಾಯಿ ತಪ್ಪಿ ಏನೋ ಹೇಳಬಾರದ್ದು ಹೇಳಿಬಿಟ್ಟರಂತೆ, ಅಯ್ಯಾಭಿಮಾನಿಗಳು ಉರಿದೆದ್ದರಲ್ಲಾ, ನಟ ರತ್ನಾಕರರು ನೇರವಾಗಿ ಅಯ್ಯ ಅವರ ಮನೆಗೇ ಹೋಗಿ, ನಾನು ಹಾಗೆ ಮಾತನಾಡಿದ್ದರೆ ತಪ್ಪು, ಬಾಯಿ ತಪ್ಪಿ, ನಾಲಿಗೆ ಹೇಗೇಗೋ ಹೊರಳಿ, ಆಕಸ್ಮಿಕವಾಗಿ ಯಾವುದ್ಯಾವುದೋ ಪದಗಳು ಉರುಳಿ ಬಿದ್ದಿವೆ, ನಿಮ್ಮ ಪಟಾಲಂಗೆ ಬುದ್ಧಿ ಹೇಳಿ, ನನಗೆ ರಕ್ಷಣೆ ಕೊಡಿ ಎಂದು ಪರಿಪರಿಯಾಗಿ ಅಂಗಲಾಚಲಿಲ್ಲವೇ? ಹೀಗೆ ವಯಸ್ಸದಾವರು, ತಟಕ್ ಅಂತ ಹೇಳಿದ ಮಾತನ್ನು ಪಟಕ್ ಅಂತ ನಂಬಬಾರದು’ ಎಂದು ಪೆಕರ ಕಥೆ ಹೇಳಿದ.
‘ಆದರೂ ಬಾವಿಗೆ ಬಿದ್ರೂ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಲಾರೆ ಎನ್ನುವಂತೆ ಪೆರಿಯವರ್ ಮಣಿಶಂಕರ ಅಯ್ಯರ್ ‘ನಮೋ ಒಬ್ಬ ಹಿಟ್ಲರ್’ ಎಂದು ಬಡಬಡಿಸಿದ್ದಾರಲ್ಲಾ ಸಾರ್’ ಎಂದು ಘಾ ಗಾಬರಿ ವ್ಯಕ್ತಪಡಿಸಿದ.
‘ಆಡಿದವರು ಅನುಭವಿಸ್ತಾರೆ ಬಿಡು, ನಮೋ ಅಂಥದ್ದಕ್ಕೆಲ್ಲಾ ಹೆದರುವ ಆಸಾಮಿ ಅಂತೀಯಾ?’ ಎಂದು ಪೆಕರ ಸಮಾಧಾನ ಮಾಡಿದ.
ಮೋದಿ ವಿರುದ್ಧ ಅಂದು ಟೀಕಾಸ್ತ್ರಗಳ ಪೂರ
ದೇಶಾದ್ಯಂತ ಇಂದು ಹೊಗಳಿಕೆಯ ಹಾರ
ಏನದು ದೇಶ ಗೆದ್ದ ನರೇಂದ್ರನ ತಂತ್ರ
ಗುಜರಾತ್ ಮಾದರಿಯೇ ಅಭಿವೃದ್ಧಿ ಮಂತ್ರ
‘ಈ ದೇಶದಲ್ಲಿ ಕಷ್ಟಪಟ್ಟರೆ ಯಾರು ಬೇಕಾದರೂ
ಪಿ.ಎಂ ಆಗಬಹುದು. ನಾನೂ ಮೋದಿ ತರ ಆಗ ಬೇಕಾದ್ರೆ ಏನ್ಮಾಡಬೇಕು ಬಾಸ್?’ ಎಂದು ಘಾ ಪೆಕರುಪೆಕರಾಗಿ ಕೇಳಿದ.
‘ರೈಲ್ವೆ ಸ್ಟೇಷನ್‌ನಲ್ಲಿ ಟೀ ಮಾರಬೇಕು’ ಎಂದು ಪೆಕರ ಥಟ್ಟನೆ ಉತ್ತರಿಸಿದ.
‘ತಮಾಷೆ ಮಾಡಬೇಡಿ ಬಾಸ್, ಟೀ ಮಾರೋವರೆಲ್ಲಾ ಪಿ.ಎಂ ಆಗೋಕೆ ಆಗುತ್ತಾ? ಟೀ ಮಾರೋದಕ್ಕೂ ದಮ್ ಇರಬೇಕು’ ಎಂದು ಘಾ ದಬಾಯಿಸಿದ.
‘ನಾನು ತಮಾಷೆ ಮಾಡ್ತಾ ಇಲ್ಲಾ ಮಿಸ್ಟರ್ ಘಾ, ಈ ಮಾತನ್ನು ಮೋದಿ ಅವರೇ ಬಹಿರಂಗ ಮಾಡಿದ್ದಾರೆ. ಇದನ್ನು ಗೇಲಿ ಮಾಡಿದ ಕಾಂಗ್ರೆಸ್, ಈಗ ಟೀ ಕುಡಿಯಲೂ ಕಂಪನಿಯಿಲ್ಲದೆ ಪರದಾಡಬೇಕಾಗಿದೆ, ದೇಶದಾದ್ಯಂತ ಜನ ಟೀ ಕುಡಿದು, ಟೀ ಸೇಲ್ ಮಾಡಿ, ಮೋದಿಗೆ ಮತ್ತಷ್ಟು ಗೌರವ ಬರುವಂತೆ ಆಯಿತು.
ಅದಕ್ಕೇ ನೀನೂ ಟೀ ಮಾರೋದನ್ನು ಶುರುಹಚ್ಕೋ’ ಎಂದು ಪೆಕರ ಹುರಿದುಂಬಿಸಿದ.
‘ಅಯ್ಯೋ ಬಿಡಿ ಬಾಸ್, ನಮೋ ಅವರು ಚಿಕ್ಕಂದಿನಲ್ಲೇ ಮನೆ ಬಿಟ್ಟು, ಮೂವತ್ತು ವರ್ಷ ಪರಿವ್ರಾಜಕರಾಗಿದ್ದರಂತೆ, ದೇಶಕಟ್ಟುವ ಬಗ್ಗೆ ಚಿಂತಿಸುತ್ತಾ, ಒಂದೇ ಬಟ್ಟೆಯಲ್ಲಿ ಅಲೆದಾಡ್ತಿದ್ದರಂತೆ, ಮದುವೆಯಾಗಿ ಮೂರೇ ತಿಂಗಳಿಗೆ ಪತ್ನಿಯನ್ನೂ, ಮನೆಯನ್ನು ತ್ಯಜಿಸಿ ದೇಶ, ದೇಶ ಎನ್ನುತ್ತಾ ಕನಸು ಕಾಣುತ್ತಾ ಅಲೆಮಾರಿಯಾಗಿದ್ದವರು ಇಂದು ದೆಹಲಿ ಗದ್ದುಗೆ ಏರ್ತಾ ಇದ್ದಾರೆ, ಅದೆಲ್ಲಾ ನಾವೆಲ್ಲಿ ಮಾಡೊಕ್ಕಾಗುತ್ತೆ? ಇದಕ್ಕೆಲ್ಲಾ ನಸೀಬು ನೆಟ್ಟಗಿರಬೇಕು’ ಎಂದು ಘಾ, ಮೋದಿ ಜೀವನಚರಿತ್ರೆ ಬಿಚ್ಚಿದ.
‘ಬಿಡಪ್ಪಾ, ಅವರಿಗೆ ಕುಟುಂಬದ ಕಾಟ ಇಲ್ಲ. ಏಕೇಶ್ವರರಾಗಿರುವುದರಿಂದ ಭ್ರಷ್ಟಾಚಾರ ದೂರ. ಆಸ್ತಿ ಮಾಡಿ ಯಾರಿಗೆ ಇಡಬೇಕು? ಕಳಂಕಿತರನ್ನು ಸಂಪುಟದಿಂದ ದೂರ ಇಡಲಾಗುವುದು ಎಂದು ಅವರು ಹೇಳಿರುವುದನ್ನು ಸ್ವಾಗತಿಸಬಹುದು’ ಪೆಕರ ಒಂದು ಕಾಂಪ್ಲಿಮೆಂಟ್ ಕೊಟ್ಟ.
‘ಪರಿಶುದ್ಧರಿಗೆ ಮಾತ್ರ ಖಾತೆ ಅಂತ ಹೇಳಿರೋದನ್ನು ಕೇಳಿ, ರಪ್ಪ, ನಗುವಾನಂದಗೌಡ, ಅನಂತಾನಂತಕುಮಾರ್ ಮೊದಲಾದವರೆಲ್ಲಾ ಬೆಚ್ಚಿಬಿದ್ದಿದ್ದಾರಂತೆ ಸಾರ್, ಇದೀಗ ದೆಹಲಿಯಿಂದ ಬಂದವರು ಯಾರೋ ಹೇಳಿದರು’ ಎಂದು ಘಾ, ಒಂದು ಗಾಸಿಪ್ ಬಿಟ್ಟ.
‘ಅವರು ಯಾಕೆ ಬೆಚ್ಚಿಬೀಳ್ತಾರೆ?! ಈಗಾಗ್ಲೆ ಆರ್‌ಎಸ್‌ಎಸ್ ಕಚೇರಿ ಮುಂದೆ ಹೋಗಿ ನಿಂತಿದ್ದಾರೆ’ ಎಂದು ಪೆಕರ ಹೇಳುತ್ತಿದ್ದಂತೆಯೇ ಸಂಪಾದಕರಿಂದ ಮೊಬೈಲ್ ಕರೆ ಬಂತು.
‘ಏನ್ರೀ ಪೆಕರಾ ಅವರೇ, ಇನ್ನೂ ಇಲ್ಲೇ ಇದ್ದೀರಾ? ನಮೋ ಪ್ರಮಾಣವಚನ ಸಮಾರಂಭಕ್ಕೆ ಹೊರಡಿ, ಪ್ರತ್ಯಕ್ಷ ವರದಿ ಕೊಡಿ’ ಎಂಬ ಫರ್ಮಾನು ಬಂತು.
ಪೆಕರ ಲಗುಬಗೆಯಿಂದ ಹೊರಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.