ADVERTISEMENT

ಪೆಕರನ ಚುನಾವಣಾ ಯಾತ್ರೆ ಶುರು...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಮಾರ್ಚ್ 2014, 19:30 IST
Last Updated 23 ಮಾರ್ಚ್ 2014, 19:30 IST
ಪೆಕರನ ಚುನಾವಣಾ ಯಾತ್ರೆ ಶುರು...
ಪೆಕರನ ಚುನಾವಣಾ ಯಾತ್ರೆ ಶುರು...   

ಸಂಪಾದಕರಿಂದ ಫೋನ್ ಕರೆ ಬಂದ ಕೂಡಲೇ ಪೆಕರ ನಖಶಿಖಾಂತ ಬೆವೆತು­ಹೋದ. ಬಿಸಿಲೂ ಏರುತ್ತಿದೆ. ಚುನಾ­ವಣಾ ಕಾವೂ ಏರುತ್ತಿದೆ. ಇಂತಹ ಸಮಯದಲ್ಲಿ ಸ್ಟಿಂಗ್ ಆಪರೇಷನ್ ಮಾಡುತ್ತಾ ಕುಳಿತಿರುವುದರ ಬಗ್ಗೆ ಬೈಯ್ಯುವುದು ಗ್ಯಾರಂಟಿ ಎನ್ನುವ ಭಯದಿಂದ ಪೆಕರ ಒಂದು ಕ್ಷಣ ತಡ­ಬಡಾಯಿಸಿದ. ಕೊನೆಗೂ ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ ಅಂದುಕೊಂಡು ಫೋನ್ ಎತ್ತಿಕೊಂಡ.

‘ಏನ್ರೀ ಪೆಕರ ಅವರೇ, ಇಡೀ ರಾಜ್ಯದಲ್ಲಿ ಚುನಾವಣೆ ಕಾವು ಏರ್‍ತಾ ಇದೆ. ಎಲ್ಲ ಕ್ಷೇತ್ರಗ­ಳಲ್ಲೂ ಭಾರೀ ಭಾರೀ ಬಿಗ್‌ ಫೈಟ್ ನಡೀತಾ ಇದೆ. ನೀವು ಚುನಾವಣಾ ಯಾತ್ರೆ ಮಾಡೋದು ಬಿಟ್ಟು, ಡಿಕುಶಿಮಾರ ಸೇರಿ ಆರು ಜನ ಸಚಿವರ ಸ್ಟಿಂಗ್ ಮಾಡ್ತಾ ಇದೀರಲ್ರಿ? ನನಗೆ ಅದೆಲ್ಲಾ ಗೊತ್ತಿಲ್ಲ, ತಕ್ಷಣ ನೀವು ಚುನಾವಣಾ ಯಾತ್ರೆ ಆರಂಭಿಸಿ ವರದಿ ಕಳುಹಿಸಿ’ -ಎಂದು ಸಂಪಾದಕರು ಕಟ್ಟಪ್ಪಣೆ ಮಾಡಿದರು.

‘ಹೌದು ಸಾರ್, ನಾನು ರಾಷ್ಟ್ರದ ಎಲ್ಲಕಡೆ ಚುನಾವಣಾ ಯಾತ್ರೆ ಹೋಗ್ಬೇಕು ಅಂತ ಯೋಚ್ನೆ ಮಾಡ್ತಾ ಇದ್ದೆ. ಅಷ್ಟ್ರರಲ್ಲಿ ನಿಮ್ ಫೋನ್ ಬಂದು ಬಿಡ್ತು. ನೋಡಿ ಸಾರ್, ದೊಡ್ಡ ವ್ಯಕ್ತಿಗಳೆಲ್ಲಾ ಒಂದೇ ತರ ಚಿಂತಿಸ್ತಾರೆ’ ಎಂದು ಪೆಕರ ಹ್ಹಿಹ್ಹಿಹ್ಹಿ ಎಂದು ನಕ್ಕ.

‘ಜೋಕ್ ಸಾಕು, ನಾನು ರಾಷ್ಟ್ರದ ಎಲ್ಲ ಕಡೆ ಹೋಗಿ ಅಂತ ಹೇಳ್ಲಿಲ್ಲ. ಮುಂದೆ ನೋಡೋಣ. ಈಗ ರಾಜ್ಯದಲ್ಲೇ ಎಲ್ಲ ಕಡೆ ಟಿಕೆಟ್ ಹಂಚಿ­ಕೆಯಿಂದ ಅಸಮಾಧಾನ ಆಗಿದೆ ಅಂತ ಗಲಾಟೆ ನಡೀತಿದೆ. ಸ್ವಲ್ಪ ಅಲ್ಲಿ ಇಲ್ಲಿ ತಿರುಗಾಡಿ’ ಎಂದು ಸಂಪಾದಕರು ಕ್ಲೂ ಕೊಟ್ಟರು.

ಟಿಕೆಟ್ ಬೇಕೇಬೇಕಂತೆ ಸೀನಿಯರ್‌ಗೆ
ಕೊಡಲ್ಲ ಅಂದ್ರೆ ಹೊರಡ್ತೀನಿ ಮೆಕ್ಕಾಗೆ
ಯಾರೇ ಬಂದು ಕರೆದ್ರೂ ನಡೀತೀನಿ ಜೊತೆಗೆ
ಕೊನೆಗೂ ಬಿದ್ರಲ್ಲಾ ದೊಡ್ಡಗೌಡರ ಬಲೆಗೆ
ಪೆಕರ ಜಾಫರ್‌ ಷರೀಫ್ ಸಾಹೇಬರ ಎದುರು ನಿಂತಿದ್ದ. ಮಾತುಕತೆ ಆರಂಭವಾಯಿತು.

‘ತಾವು ಚುನಾವಣೆ ಸಂದರ್ಭದಲ್ಲಿ ಪ್ರವಾಸ ಹೊರಟಿರುವುದರ ಉದ್ದೇಶ?’
‘ಕಾಂಗ್ರೆಸ್‌ನವರಿಗೆ ಒಳ್ಳೆಯ ಬುದ್ಧಿಕೊಡು ಅಂತ ಪ್ರಾರ್ಥಿಸಲಿಕ್ಕೆ’
‘ರಾಜಕೀಯ ಸಾಕು ವಿಶ್ರಾಂತಿ ಬೇಕು ಎಂದು ನಿಮಗೆ ಎಂದಾದರೂ ಅನಿಸಿತ್ತೇ?’
‘ರಾಜಕಾರಣಿಗಳಿಗೆ ಎಲ್ಲಿದೆ ವಿಶ್ರಾಂತಿ? ನನ್ನ ವೃತ್ತಿಯೇ ರಾಜಕಾರಣ. ಇನ್ನೂ ನೂರು ವರ್ಷ ನನಗೆ ಅಧಿಕಾರ ಬೇಕು. ನನಗೆ ಕೊನೆಯ ಚುನಾ­ವಣೆ ಅನ್ನೋದೆ ಇಲ್ಲ. ನನಗೆ ಟಿಕೆಟ್ ಬೇಕು. ನನ್ನ ಅಳಿಯನಿಗೂ ಒಂದಿರಲಿ. ಮೊಮ್ಮ ಗನಿಗೆ ಒಂದು ಟಿಕೆಟ್ ಕೊಟ್ರೆ ಅದೂ ಸಂತೋಷ. ನಾವು ಮನೆ ಮಂದಿಯೆಲ್ಲಾ ‘ವಿಶ್ರಾಂತಿ’ಯೇ ಇಲ್ಲದೆ ದುಡೀತೀವಿ’.
‘ರಾಜಕಾರಣಿಗಳು ಎದ್ದು ನಡೆದಾಡಲು ಸಾಧ್ಯ­ವಾಗದೇ ಇದ್ದರೂ ಚುನಾವಣೆ ಬಂತೆಂದರೆ ಲವಲವಿಕೆಯಿಂದ ಓಡಾಡ್ತಾರೆ ಹೇಗೆ?’ -ಪೆಕರ ಪಟ್ಟುಬಿಡದೆ ಮತ್ತೊಂದು ಪ್ರಶ್ನೆ ಎಸೆದ.
ಸಾಹೇಬರಿಗೆ ಸ್ವಲ್ಪ ಸಿಟ್ಟು ಬಂತು. ಒಂದು ಕ್ಷಣ ಪೆಕರನತ್ತ ನೋಡಿ ಗುರಾಯಿಸಿದರು.

‘ನಮಗೆಲ್ಲಾ ವಯಸ್ಸಾಯ್ತು ಅಂತಾ ಇನ್‌­ಡೈ­ರೆ­ಕ್ಟಾಗಿ ಹೇಳ್ತಾ ಇದ್ದೀರಾ. ನನಗೆಲ್ರೀ ವಯ­ಸ್ಸಾಯ್ತು? ಹುಣಸೇ ಮರಕ್ಕೆ ಮುಪ್ಪಾದ್ರೂ ಹುಳಿ ಮುಪ್ಪೇ?  ಅದಕ್ಕೇ ನಾನು ಡಿಮಾಂಡ್ ಮಾಡ್ತಾ ಇರೋದು, ನನ್ನ ವಿರುದ್ಧ,
ಹಾಸನದಲ್ಲಿ ದೊಡ್ಡ­ಗೌಡರ ವಿರುದ್ಧ ಯಾರನ್ನೂ ನಿಲ್ಲಿಸಬೇಡಿ. ನಮ್ಮನ್ನು ಅವಿರೋಧ  ಆಯ್ಕೆ ಮಾಡಿ. ನಾವು ಯಾವತ್ತಿದ್ದರೂ ದೇಶದ ಅಸೆಟ್’- ಎಂದು ಹೇಳಿ
ಸಾಹೇಬರು ಅವಸರವಸರವಾಗಿ ವಿಮಾನ ನಿಲ್ದಾಣದತ್ತ ಹೊರಟರು.

ಪೆಕರ ಚಿಕ್ಕಬಳ್ಳಾಪುರ ಪ್ರವಾಸ ಆರಂಭಿಸಿದ.
ಮೊಯ್ಲಿ ಸಾಹೇಬರು ಕೈಕೈ ಹಿಸುಕಿಕೊಳ್ಳುತ್ತಾ ಶತಪಥ ತಿರುಗಾಡುತ್ತಿದ್ದರು. ಅಂಜಿ­ದವನ ಮೇಲೆ ಕಪ್ಪೆ ಎಸೆದ ಹಾಗೆ ಆಗಿತ್ತು ಅವರ ಸ್ಥಿತಿ.
‘ಸಾರ್, ತಮಗೆ ಕಾಂಗ್ರೆಸ್‌ನಲ್ಲಿ ಫಸ್ಟ್‌ ಲಿಸ್ಟ್‌­ನಲ್ಲೇ ಟಿಕೆಟು ಕೊಡಲಿಲ್ಲ. ಈಗ ಮಾರ­ಸ್ವಾಮಿ­ಗಳು ನಿಮ್ಮ ಎದುರು  ನಿಲ್ತಾರಂತೆ. ಗಾಬರಿ­ಯಾ­ಗಿದೆಯಾ?’
‘ನಿಮಗೆ ಗೊತ್ತುಂಟಾ? ಅವರು ಇಲ್ಲಿಂದ ಚುನಾವಣೆಗೆ ನಿಲ್ಲುವುದಿಲ್ಲ’ ಎಂದು ಮೊಯ್ಲಿ ಸಾಹೇಬರು ಖಚಿತ ದನಿಯಲ್ಲಿ ಹೇಳಿದರು.

‘ಏನ್ಸಾರ್, ಹೊಸ ಬಾಂಬ್ ಹಾಕ್ತಾ ಇದೀರಿ? ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಖಚಿತ ಎಂದು ಮಾರ­ಸ್ವಾಮಿಗಳು ಹೇಳಿದ್ದರಿಂದ ರಾಮ­ನಗರ­ದಲ್ಲಿ ಅಭಿಮಾನಿಗಳು ‘ವಿಷ’ ಕೇಳ್ತಾ ಇದಾರೆ. ನೀವು ನೋಡಿದ್ರೆ, ಅವ್ರು ಇಲ್ಲಿಗೆ ಬರಲ್ಲ ಎಂದು ಬ್ರೇಕಿಂಗ್‌ನ್ಯೂಸ್ ಕೊಡ್ತಾ ಇದ್ದೀರಿ’ ಎಂದು ಪೆಕರ ಆಶ್ಚರ್ಯದಿಂದ ಪ್ರಶ್ನಿಸಿದ.
‘ಅಯ್ಯೋ, ನನ್ನ ರಾಜಕೀಯ ಜೀವನದಲ್ಲಿ ಅಪ್ಪ­-ಮಕ್ಕಳ ಇಂಥ ನಾಟಕವನ್ನು ಎಷ್ಟು ನೋಡಿಲ್ಲ? ಇವರ ಕತೆ ಇಟ್ಟು ಕೊಂಡೇ ನಾನು ‘ಅಪ್ಪ-ಮಗ ಮಹಾ ಕಾವ್ಯಂ’ ಬರೆಯುತ್ತಿದ್ದೇನೆ. ಮಾರಸ್ವಾಮಿಗಳ ಒಂದು ಡಿಮಾಂಡ್ ಉಂಟು. ನಾನು ಅಂಬಾನಿ ಜೊತೆ ಮಾತನಾಡಿ ಸಮ್‌­ತಿಂಗ್ ಅಡ್ಜೆಸ್ಟ್ ಮಾಡ್ತೀನಿ ಮಾರಾಯ್ರೆ’ ಎಂದು ಹೇಳುತ್ತಾ, ಜೇಬಿನಲ್ಲಿ ಐನೂರರ ನೋಟೊ­ಂ­ದನ್ನು ಇಟ್ಟುಕೊಂಡು ದೇವಸ್ಥಾನದತ್ತ ಹೊರ-­ಟರು.

ರಾಮನಗರದಲ್ಲಿ ಕಣ್ಣೀರಧಾರೆ ಕಣ್ವ ಜಲಾ­ಶಯ ಸೇರುತ್ತಿದೆ ಎಂಬ ಫ್ಲ್ಯಾಷ್‌ನ್ಯೂಸ್ ಬಂತು. ತಕ್ಷಣ ಪೆಕರ ರಾಮನಗರದತ್ತ ಹೆಜ್ಜೆ ಹಾಕಿದ. ಎದುರಿಗೇ ಮಾರಸ್ವಾಮಿ­ಗಳು ಸಿಕ್ಕರು. ಅತ್ತೂ ಅತ್ತೂ ಕಣ್ಣುಗಳೆಲ್ಲಾ ಕೆಂಪಗಾಗಿದ್ದವು. ಪೆಕರ ಸಂದರ್ಶನ ಆರಂಭಿಸಿದ.

‘ಸಾರ್ ತಪ್ಪು ತಿಳ್ಕೋಬೇಡಿ. ಅಳುವ ಗಂಡ­ಸ­ರನ್ನ ನಂಬ­ಬಾರದು ಅಂತ ಗಾದೆ ಮಾತಿದೆ. ಆದರೆ ನೀವು ಒಂದೇ ಸಮನೆ ಕಣ್ಣೀರಾಕ್ತಾ ಇದೀರಾ. ಲೋಕಸಭೆ ಉಪಚುನಾವಣೆಯಲ್ಲಿ ನಿಮ್ಮ ಮಿಸೆಸ್ ಭಯಂಕರವಾಗಿ ಕಣ್ಣೀರು ಹರಿಸಿ­ದರು. ಹಾಸನದಲ್ಲಿ ದೊಡ್ಡಗೌಡರು ಅತ್ತರು. ಹೀಗೆ ಎಲ್ರೂ ಅಳ್ತಾ ಇದ್ರೆ, ಶ್ರೀಸಾಮಾನ್ಯನ ಕಣ್ಣೀರು ಒರೆಸುವವರಾರು?’

‘ಜನರ ಕಣ್ಣೀರು ಒರಸೋದಿಕ್ಕೇ ನಾನು ನನ್ನ ಧರ್ಮಪತ್ನಿ­ಯನ್ನು ಕಳೆದ ಬಾರಿ ಎಲೆಕ್ಷನ್‌ಗೆ ನಿಲ್ಲಿ­ಸಿದ್ದೆ. ಹೆಣ್‌ ಹೆಂಗ್ಸು ಅಂತ್ಲೂ ನೋಡದೆ, ಎಲ್ಲರೂ ‘ಕೊಲೆಗಾರ’ನೊಬ್ಬನಿಗೆ ವೋಟ್ ಹಾಕಿದ್ರು. ನಾನೇನ್ ತಪ್ಪು ಮಾಡ್ದೆ ಅಂತ ನನಗೆ ಈ ಶಿಕ್ಷೆ? ಅದಕ್ಕೇ ಚಿಕ್ಕಬಳ್ಳಾಪುರಕ್ಕೆ ಹೋಗ್ತೀನಿ’ ಮಾರಸ್ವಾಮಿ­ಗಳು ಪುನರುಚ್ಚರಿಸಿದರು.

‘ನೀವೂ ಮಕ್ಕಳ ತರಹ ಈ ರೀತಿ ಹೇಳಿದ್ರೆ ಹೇಗೆ ಸಾರ್? ಪಾಪ! ಜನಾ ಏನ್‌ಮಾಡ್ತಾರೆ? ಕ್ಯಾಂಡಿ­ಡೇಟ್‌ಗಳು ಹಸಿರು­ನೋಟು, ಕೆಂಪುನೋಟು ತೋರಿಸಿ ಮತದಾರರನ್ನು ಮರಳು ಮಾಡ್ತಾರೆ. ನೀವಂತೂ ಎಲ್ಲೂ ಒಂದ್ ಕಾಸು ಬಿಚ್ಚುವ­ವರಲ್ಲ. ಪಾಪ ವೋಟರ್ ಏನು ಮಾಡ್ಬೇಕು?’ ಪೆಕರ ಪ್ರಶ್ನಿಸಿಯೇ ಬಿಟ್ಟ.

‘ನಿಮ್ಮ ಪೆಕರು ಪೆಕರಾದ ಪ್ರಶ್ನೆ ಕೇಳಿ ಅಳ­ಬೇಕೋ ನಗಬೇಕೋ ಗೊತ್ತಾಗ್ತ ಇಲ್ಲ’ ಎಂದು ಮಾರ­ಸ್ವಾಮಿಗಳು ಕಣ್ಣೀರೊರೆಸಿ­ಕೊಳ್ಳುತ್ತಾ ಹೇಳಿದರು.

‘ಆದರೂ ನೀವೂ. ನಿಮ್ಮ ಮಿಸೆಸ್ಸೂ, ನಿಮ್ಮ ಅಪ್ಪಾಜೀನೂ ಒಂದೊಂದು ಎಲೆಕ್ಷನ್‌ಗೆ ಒಂದೊಂದ್ ಕ್ಷೇತ್ರ ಹುಡುಕ್ತಾ ಹೋದ್ರೆ ಹೇಗೆ? ಎಲ್ಲಾದರೂ ಒಂದು ಕಡೆ ಪರ್ಮೆನೆಂಟಾಗಿ ನಿಂತು ಕ್ಷೇತ್ರ ಸೇವೆ ಮಾಡ್ಬಾರ್ದೇ?’ ಎಂದು ಪೆಕರ ಪ್ರಶ್ನೆ ಹಾಕಿದ.

‘ಏನ್ ಹೀಗಂತೀರಾ? ನಾವು ಈ ನಾಡಿನ ‘ಮಣ್ಣಿನ ಮಕ್ಕಳು’ ಆದ್ದರಿಂದ ಎಲ್ಲಿ ಬೇಕಾದರೂ ನಿಲ್ಲಬಹುದು’ ಎಂದು ಹೇಳುತ್ತಾ ಮಾರಸ್ವಾಮಿ­ಗಳು ಹೊರಟರು.

ಟಿಕೆಟ್ ಸಿಗದ್ದಕ್ಕೆ ಆಯ್ತು ಬೇಜಾರು
ಬೀದರ್‌ನಲ್ಲಿ ಕುರ್ಚಿಗಳು ಚೂರುಚೂರು
ಕ್ಷೇತ್ರ ಬದಲಿಸಿದ್ದಕ್ಕೂ ತಕರಾರು
ನಾಯಕರು ಹರಿಸಿದ್ರು ಮೊಸಳೆ ಕಣ್ಣೀರು
ಪೆಕರನ ಚುನಾವಣಾ ಯಾತ್ರೆ ಹಾಗೆಯೇ ಮಂಡ್ಯ ಸಮೀಪದ ಗೆಜ್ಜಲ ಗೆರೆಯ ಕಡೆ ಸಾಗಿತು. ಅಲ್ಲಿನ ರುದ್ರ ಭೂಮಿಯಿಂದ ವೋಟ್‌ಫಾರ್ ಕಾಂಗ್ರೆಸ್, ವೋಟ್ ಫಾರ್ ಜೆಡಿಎಸ್ ಎಂದು ಕೆಲವರು ಕಂಯ್ಯಪಿಂಯ್ಯ ಎಂದು ಅರಚಾಡುತ್ತಿ­ರು­ವುದನ್ನು ಕಂಡ ಪೆಕರ ಅತ್ತ ಧಾವಿಸಿದ.

ಅಲ್ಲಿನ ದೃಶ್ಯ ನೋಡಿ ಬೆಚ್ಚಿಬಿದ್ದ. ಯೋಧನೊಬ್ಬನ
ಶವದ ಮುಂದೆ ಹಸಿರುಶಾಲು ಹೊದ್ದು ನಿಂತ
ಏಕೈಕ ಶಾಸಕನಿಗೆ ಮುತ್ತಿಗೆ ಹಾಕಿ ಲೋಕಸಭಾ ಅಭ್ಯರ್ಥಿಗಳು ಆಶೀರ್ವದಿಸಿ, ಆಶೀರ್ವದಿಸಿ ಎಂದು ದುಂಬಾಲು
ಬಿದ್ದಿದ್ದರು. ಗಾಬರಿಯಾದ ಪೆಕರ, ಸೀದಾ ಮೈಸೂರಿಗೆ ತೆರಳಿದ.

ಅಲ್ಲಿ ಶಿರ­ಚ್ಛೇದನ ಮಾಡಿ, ಶಿರಚ್ಛೇದನ ಮಾಡಿ...
ಎಂದು ಹುರಿ­ದುಂಬಿಸುತ್ತಿದ್ದ ವೀರ ಪ್ರತಾಪ ಗರ್ಜನೆಗೆ
ಬೆದರಿ ಪ್ರವಾಸ ಮೊಟಕು ಮಾಡಿ ಓಡಿ ಬಂದ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.