ADVERTISEMENT

ಮೂರು ‘ಎ.ಕೆ’, ಒಬ್ಬ ‘ಪಿ.ಕೆ’

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 30 ಮಾರ್ಚ್ 2014, 19:30 IST
Last Updated 30 ಮಾರ್ಚ್ 2014, 19:30 IST
ಮೂರು ‘ಎ.ಕೆ’, ಒಬ್ಬ ‘ಪಿ.ಕೆ’
ಮೂರು ‘ಎ.ಕೆ’, ಒಬ್ಬ ‘ಪಿ.ಕೆ’   

‘ಎಲ್ಲಿದ್ದೀರಾ?’ ಎಂದು ಸಂಪಾದಕರು ಫೋನ್ ಮಾಡಿದಾಗ ವಾರಾಣಸಿ­ಯಲ್ಲಿ ಚುನಾವಣಾ ಯಾತ್ರೆ ಕೈಗೊಂಡಿದ್ದ ಪೆಕರ, ಉರಿ­ಬಿಸಿಲನ್ನೂ ಲೆಕ್ಕಿಸದೆ ಕ್ಷೇತ್ರದ ಗಲ್ಲಿ ಗಲ್ಲಿ ಸುತ್ತು­ತ್ತಿದ್ದ. ಪೊರಕೆ ಹಿಡಿದವರು, ಕಮಲ ಹಿಡಿದ­ವರು, ಸೈಕಲ್ ಹೊಡೆಯುವವರು, ಆನೆ ಮೇಲೆ ಸವಾರಿ ಮಾಡುವವರು, ಕೈ ತೋರಿಸುವವರ ಗದ್ದ­ಲದ ನಡುವೆಯೂ ಫೋನ್ ಎತ್ತಿ ಮಾತನಾಡಿದ.

‘ಏನ್ರೀ ಪೆಕರ ಅವರೇ, ಉತ್ತರ ಭಾರತ ಟೂರ್ ಹೇಗಿದೆ? ಹೇಗೂ ‘ಯಾತ್ರೆ’ ತಾನೇ? ಕಾಶಿ ವಿಶ್ವನಾಥನ ದರ್ಶನ ಮಾಡಿ, ಪ್ರಸಾದ ತನ್ನಿ’ ಎಂದು ಸಂಪಾದಕರು ಚುಡಾಯಿಸಿದರು.

‘ಸುಮ್ನಿರಿ ಸಾರ್, ಊರಿಗೆಲ್ಲಾ ಉಗಾದಿ, ನನಗೆ ಮಾತ್ರ ತಗಾದಿ ಅನ್ನುವ ಹಾಗೆ ಆಯ್ತು. ನಮ್ಮೂರಿ­ನಲ್ಲಿದ್ದಿದ್ರೆ, ಇಷ್ಟೊತ್ತಿಗೆ ಮೂರ್ನಾಲ್ಕು ಕಡೆ ಕರೆದು, ಒಬ್ಬಟ್ಟು ನೀಡ್ತಿದ್ರು. ಅಂತಹದ್ದರಲ್ಲಿ ನೀವು ನನ್ನನ್ನು ಬಿಸಿಲೂರಿಗೆ ಕಳುಹಿಸಿ, ಸಾಸಿವೆ ಎಣ್ಣೆ ಪೂರಿ, ಆಲೂಗೆಡ್ಡೆ ಪಲ್ಯ ತಿನ್ನೋಹಾಗೆ ಮಾಡಿ­ಬಿಟ್ರಿ’ ಎಂದು ಪೆಕರ ಗೊಣಗಿದ.

‘ಇರಲಿ, ಇರಲಿ ಚುನಾವಣೆ ಟೂರ್ ಹೋದ ಮೇಲೆ ಉಂಡಿದ್ದೇ ಉಗಾದಿ, ಮಿಂದದ್ದೇ ದೀಪಾ­ವಳಿ.  ಭಾವೀ ಪ್ರಧಾನಿ ಕ್ಷೇತ್ರದಲ್ಲಿ ಏನು ನಡೀ­ತಿದೆ?’ ಎಂದು ಸಂಪಾದಕರು ಪೆಕರನನ್ನು ಪ್ರಶ್ನಿಸಿದರು.

‘ಬಹಳ ಬ್ಯಾಡ್ ಎಕ್ಸ್‌ಪೀರಿಯನ್ಸ್ ಸಾರ್. ರೈಲಿ­ನಿಂದ ಇಳಿದು ಕಾಶಿ ವಿಶ್ವನಾಥನ ದರ್ಶನ ಪಡೆ­ಯೋಣ ಎಂದು ದೇವಸ್ಥಾನದ ಕಡೆ ನಡೆದು­ಕೊಂಡೇ ಹೋಗ್ತಾ ಇದ್ದೆ. ಬಿಸಿಲು ಮಂಡೆ ಸುಡ್ತಾ ಇತ್ತು ಅಂತ ತಲೆ ಮೇಲೆ ಟೋಪಿ ಹಾಕ್ಕೊಂ­ಡಿದ್ದೆ. ನನ್ನನ್ನೇ ಕ್ರೇಜಿವಾಲ್ ಅಂದು­ಕೊಂಡು ಅಪರಿಚಿತರು ಮೊಟ್ಟೆ, ಟೊಮೆಟೊ ಎಸೆ­ದರು. ಕೆಲವರು ಮಸಿ ಎರಚಿ ಬಿಟ್ಟರು ಸಾರ್’ ಎಂದು ಪೆಕರ ಗೋಳಿಟ್ಟ.

‘ಹೋಗ್ಲಿ ಬಿಡಿ, ವಾರಾಣಸಿಯ ರಾಜ್‌­ಘಾಟ್‌ನಲ್ಲಿ ಗಂಗಾಸ್ನಾನ ಮಾಡಿಬಿಡಿ, ಮಸಿಯೂ ಹೋಗುತ್ತೆ, ನೀವೇನಾದರೂ, ಪಾಪ ಮಾಡಿದ್ರೆ ಅದೂ ತೊಳೆದುಕೊಂಡು ಹೋಗುತ್ತೆ.’ ಎಂದು ಸಂಪಾದಕರು ಸಮಾಧಾನ ಮಾಡಿದರು.

‘ಹಾಗೇ ಮಾಡಿದ್ದೇನೆ ಸಾರ್’ -ಎಂದು ಪೆಕರ ಉತ್ತರಿಸಿದ.
ದೇವರ ವಾಸಸ್ಥಾನವಂತೆ ವಾರಾಣಸಿ
ಬಳಿಯುತ್ತಾರೆ ಇಲ್ಲಿ ಮುಖಕ್ಕೆ ಮಸಿ
ಹಾಗೆ ನೋಡಿದರೆ ಕರ್ನಾಟಕವೇ ವಾಸಿ
ಹರಿಯುವ ಭರವಸೆಗಳೆಲ್ಲಾ ಹುಸಿ
‘ದೇಶದಲ್ಲಿ ಮೂರು ‘ಎ.ಕೆ’ ಹಾಗೂ ಒಬ್ಬ ‘ಪಿ.ಕೆ’ ಶಾಂತಿ ಕದಡುತ್ತಿದ್ದಾರೆ ಎಂದು ಹೇಳಿ ನಮ್ಮ ಮಹಾನ್ ಲೀಡರ್ರು ಅಲ್ಲೋಲಕಲ್ಲೋಲ ಮಾಡಿದ್ದಾರೆ. ಕಾಶ್ಮೀರದಲ್ಲಿ ರಕ್ತದೋಕುಳಿ ಹರಿ­ಸಲು ಎ.ಕೆ ೪೭ ಬಳಕೆ ಆಗ್ತಾ ಇದೆ. ಎ.ಕೆ ಆಂಟನಿ ಅವರು, ಪಾಕ್ ಸೇನೆಯ ಸಮವಸ್ತ್ರ ತೊಟ್ಟ­ವರು ಬಂದು ನಮ್ಮ ಸೈನಿಕರ ಶಿರಚ್ಛೇದ ಮಾಡಿ­ದರು ಎಂದು ಹೇಳಿದ್ದಾರೆ. ೪೯ ದಿನ ಮಾತ್ರ ಸಿಎಮ್ಮಾಗಿ ನಂತರ ಕುರ್ಚಿಬಿಟ್ಟ ಮತ್ತೊಬ್ಬ ಎ.ಕೆ ಬಗ್ಗೆಯೂ ಗೊತ್ತು. ಆದರೆ ‘ಪಿ.ಕೆ’ ಎಂದರೆ ಯಾರು? ಅರ್ಥವಾಗಲಿಲ್ಲ. ಅಲ್ಲೇ ಚುನಾವಣಾ ರ್‍ಯಾಲಿಯಲ್ಲಿರುತ್ತಾರೆ. ಕೇಳಿ ಯಾರೂ ಅಂತ ತಿಳ್ಕೊಂಡು ವರದಿ ಮಾಡಿ’ ಎಂದು ಕೆಲಸ ವಹಿಸಿ, ಸಂಪಾದಕರು ಫೋನ್ ಕಟ್ ಮಾಡಿದರು.

ವಾರಾಣಸಿಗೆ ಬಂದು ‘ಪಿ.ಕೆ’ ಯಾರು ಅನ್ನೋ­ದನ್ನು ತಿಳ್ಕೊಳ್ಳೋದೂ ಒಂದೇ, ಮಲೇಷ್ಯಾ ವಿಮಾನ ಹುಡುಕೋದೂ ಒಂದೇ ಎನ್ನುವುದು ಪೆಕ­ರ­ನಿಗೆ ಅರಿವಾಗಿತ್ತು. ಅಷ್ಟರಲ್ಲಿ ರಸ್ತೆಯಲ್ಲಿ ಹರ­ಹರ ನಮೋ ನಮೋ ಎಂದು ಕೆಲವರು ಭಜನೆ ಮಾಡುತ್ತಾ ಹೋಗುತ್ತಿದ್ದರು. ಅದರ­ಲ್ಲೊಬ್ಬ ಭಕ್ತಾಗ್ರೇಸರನ್ನು ಕರೆದ ಪೆಕರ, ‘ಪಿ.ಕೆ ಮಾನೆ ಕ್ಯಾ ಹೈ?’ ಎಂದು ಪ್ರಶ್ನಿಸಿದ.

‘ಏ ಕ್ಯಾ ಪಿ.ಕೆ, ಬಿ.ಕೆ ಕ್ಯಾಬೀ ಮಾಲೂಮ್ ನಹೀ, ಹಮಾರ ನಮೋ ಸಾಬ್, ಚುನ್‌ಚುನ್ ಕೆ ಮಾರೂಂಗ’ ಎಂದು ಒಂದೇ ಉಸಿರಿನಲ್ಲಿ ಹೇಳಿದ ಭಕ್ತಾಗ್ರೇಸರ ಮತ್ತೆ ಗುಂಪಿನಲ್ಲಿ ಗೋವಿಂದಾ ಆದ.

‘ಇದೇನಪ್ಪಾ ಗ್ರಹಚಾರ? ಏನೋ ಡೌಟ್ ಬಂದದ್ದು ಕೇಳಿದರೆ, ಹುಡುಕಿ ಹುಡುಕಿ ಹೊಡೆಯುತ್ತೇನೆ ಅಂತಾನಲ್ಲಾ, ಗೋಧ್ರಾದಲ್ಲಿ ಹೊಡೆದದ್ದು ಸಾಲದೇ? ಈ ಚುನಾವಣೆಯಲ್ಲೂ ಅಡ್ವಾಣಿ, ಜಸ್ವಂತ್‌ ಸಿಂಗ್, ಮುರಳಿಮನೋಹರ ಜೋಷಿ ಎಲ್ಲರನ್ನೂ ಹುಡುಕಿಹುಡುಕಿ ಹೊಡೆಯ­ಲಿಲ್ವೆ?’ ಎಂದು ಕೊಂಡ ಪೆಕರ, ನನ್ನನ್ನೂ ಎಲ್ಲಿ ಹೊಡೀ­ತಾರೋ ಎಂದು ಭಯಬಿದ್ದು ಸಹಾರ­ನ­ಪುರ ಕಡೆ ಬಂದ. ‘ನಮೋ ನಮೋ ಅವರನ್ನು ತುಂಡು­ತುಂಡಾಗಿ ಕತ್ತರಿಸಿ ಹಾಕುತ್ತೇನೆ, ಏಕ್ ಮಾರ್ ಚಾರ್ ತುಕಡಾ’ ಎಂದು ಕೈ ಪಾರ್ಟಿಯ ಕ್ಯಾಂಡಿ­ಡೇಟ್ ಕೂಗಿಕೂಗಿ ಅಬ್ಬರಿಸುತ್ತಿದ್ದುದನ್ನು ಕಂಡು ಪೆಕರ ಬೆಚ್ಚಿಬಿದ್ದ. ನಮ್ ಕಡೆಯೇ ಪರವಾಗಿಲ್ಲ. ಈಶ್ವರಪ್ಪನವರು ನಾಲಿಗೆ ಕತ್ತರಿಸು­ತ್ತೇನೆ, ರುಂಡಮುಂಡ ಚೆಲ್ಲಾಡುವೆ ಎಂದು ಹೇಳಿ­ದರೂ ಅಷ್ಟು ಕರ್ಕಶವಾಗಿರಲ್ಲ, ಇಲ್ಲಿ ಹೊಡಿ­ಬಡಿಕಡಿ ಜಾಸ್ತಿಯಿದೆಯಲ್ಲಾ ಎಂದುಕೊಂಡು ಸಂಪಾದಕರಿಗೆ ಫೋನ್ ಮಾಡಿ, ಕತ್ತರಿಸಿ ಹಾಕುವ ವಿಷಯ ತಿಳಿಸಿದ.

ಮೋದಿಗೆ ಮಾಡ್ತಾರಂತೆ ಪೀಸ್‌ಪೀಸ್
ಇದನ್ನು ಹೇಳಿದ ಅಭ್ಯರ್ಥಿ ಕಂಬಿ ಹಿಂದೆ ಬುಸ್‌ ಬುಸ್‌
ಕೈ ಪಕ್ಷಕ್ಕೆ ಇದರಿಂದ ಹೆವಿ ಲಾಸ್
‘ಉತ್ತರಪ್ರದೇಶದಲ್ಲಿ ಜನರಿಗೆ ಹಿಂದಿ ಮಾತ­ನಾ­ಡಲೂ ಬರುವುದಿಲ್ಲ, ಇಂಗ್ಲಿಷೂ ಅರ್ಥವಾ­ಗು­ವುದಿಲ್ಲ. ಪೀಸ್ ಅಂದ್ರೆ ಶಾಂತಿ ಅಂತ ಅರ್ಥ. ಕೈ ಅಭ್ಯರ್ಥಿ ಶಾಂತಿಶಾಂತಿ ಎಂದು ಹೇಳಿರಬಹುದೇ? ಇರ್ಲಿ ಬಿಡಿ, ಇದು ಕೈ ಪಾರ್ಟಿಯ ತಲೆನೋವು. ಅವರು ಹೇಗಾದ್ರೂ ಮಾಡಿಕೊಳ್ಳಲಿ, ನೀವು ‘ಪಿ.ಕೆ’ ಯಾರು ಅನ್ನೋದನ್ನು ವಿಚಾರಿಸಿ. ಅಷ್ಟು ಸಾಕು’ ಎಂದು ಸಂಪಾದಕರು ಹೇಳಿದರು.

‘ಉತ್ತರ ಪ್ರದೇಶದಲ್ಲಿ ಶಾಂತಿಯಂತೂ ಇಲ್ಲ ಬಿಡಿ ಸಾರ್. ಒಟ್ಟಾರೆ ಎಲ್ಲ ಪಕ್ಷದಲ್ಲೂ ಗಜಿಬಿಜಿ ಇದೆ’ ಎಂದು ಪೆಕರ ವರದಿ ಒಪ್ಪಿಸಿದ.
‘ಈ ಸಲದ ಚುನಾವಣೆಯಲ್ಲಿ ಕ್ರಿಮಿನಲ್‌ಗಳೇ ಹೆಚ್ಚಾಗಿ ಕಣದಲ್ಲಿದ್ದಾರೆ. ಹುಷಾರಾಗಿರಿ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಕಡೆಯ­ಲ್ಲೆಲ್ಲಾ ಪೆಕರುಪೆಕರಾಗಿದ್ದು ಏಟು ತಿನ್ನಬೇಡಿ’ ಎಂದು ಸಂಪಾದಕರು ಎಚ್ಚರಿಸಿದರು.

ಉತ್ತರಪ್ರದೇಶದಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆಯೇ ಎಲ್ಲ ಪಕ್ಷಗಳಲ್ಲೂ ಅಸಮಾಧಾನ ಭುಗಿ­ಲೆದ್ದು, ಪ್ಯಾರಾಚೂಟ್ ಮೂಲಕ ಅಭ್ಯರ್ಥಿ­ಯನ್ನು ತಂದಿಳಿಸುವ ಸಂಸ್ಕೃತಿ ವಿರುದ್ಧ ಪ್ರತಿಭಟನೆ ಬಹುತೇಕ ಕ್ಷೇತ್ರಗಳಲ್ಲಿ ಜೋರಾಗುತ್ತಿದ್ದಂತೆಯೇ ಭಯಬಿದ್ದ ಪೆಕರ, ದೆಹಲಿಗೆ ಓಡಿಬಂದು ಕರ್ನಾಟಕ ಭವನ ಸೇರಿಕೊಂಡ.

ಅಯ್ಯ ಅವರು ರೆಸ್ಟ್ ತಗೋತಿದ್ದಾರೆ ಎಂದು ವಿಷಯ ತಿಳಿದು ತಕ್ಷಣ ಅವರ ಬಳಿ ಬಂದು, ‘ಕರ್ನಾ­ಟಕದಲ್ಲಿ ಮೋದಿ ಅಲೆ ಬೀಸ್ತಾ ಇದೆಯಾ? ಅಯ್ಯಾ ಅಲೆ ಬೀಸ್ತಾ ಇದೆಯಾ? ಶಾಂತಿ ಕದಡಲು ಪಿ.ಕೆ ಕಾರಣ ಎಂದು ನಮೋ­ನಮೋ ಹೇಳಿದ್ದಾರೆ ನಿಮಗೇನಾದರೂ ಅದು ಗೊತ್ತೇ?’ ಎಂದು ಪ್ರಶ್ನಿಸಿದ.

‘ಕರ್ನಾಟಕದಲ್ಲಿ ಮೋದಿ ಅಲೆಯೂ ಇಲ್ಲ ಗೋದಿ ಅಲೆಯೂ ಇಲ್ಲ. ಕೆಲವು ಪತ್ರಿಕೆಗಳಿಗೆ, ಸುದ್ದಿ ವಾಹಿನಿಗಳಿಗೆ ಹಣ ನೀಡಿ ಮೋದಿ ಪ್ರಚಾರ ಪಡೆಯುತ್ತಿದ್ದಾರೆ. ಶಾಂತಿ ಕದಡು­ತ್ತಿ­ರುವ ಪಿ.ಕೆ ಅಂದರೆ ಪತ್ರಕರ್ತರು ಗೊತ್ತಾಯ್ತ?’ ಎಂದು ಅಯ್ಯ ಅವರು ಖಡಕ್ ದನಿ­ಯಲ್ಲಿ ಹೇಳಿದರು.
‘ಅಯ್ಯೋ ಬಿಡಿ ಸಾರ್, ಎಲ್ಲ ಅನಾಹುತಕ್ಕೂ ಪತ್ರ­ಕರ್ತರೇ ಕಾರಣ ಅಂತ ನೀವು ರಾಜ­ಕಾ­ರಣಿ­ಗಳು ದೂರುವುದು ಪ್ರಾಚೀನ ಕಾಲದಿಂದಲೂ ನಡೆದು­ಬಂದಿದೆ. ನೀವು ಹೀಗೆ ಹೇಳ್ತೀರಿ, ನೀಲೇ­ಕಣಿ­ಯವರು ಎರಡು ಮಾಧ್ಯಮಗಳ ವಿರುದ್ಧ ಚುನಾ­ವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಆದರೆ ಧಾರವಾಡದಲ್ಲಿ ಏನಾಯ್ತು ಅಂತ ಗೊತ್ತಿಲ್ವ? ಅಭ್ಯರ್ಥಿ ಕೊಟ್ಟ ವಾಚು, ಷರಟು­ಪೀಸುಗಳನ್ನು ಪತ್ರಕರ್ತರು ರಿಜೆಕ್ಟ್ ಮಾಡಿ, ಚೆನ್ನಾಗಿ ಗುದ್ದಿ ಕಳುಹಿಸಿ ಬುದ್ಧಿ ಕಲಿಸಿದ್ದಾರೆ ನಿಮ­ಗಿದು ಗೊತ್ತಿಲ್ಲವಾ?’ ಎಂದು ಪೆಕರ ಎದೆ ಉಬ್ಬಿಸಿದ.

‘ಬಹಳ ಒಳ್ಳೆಯ ಕೆಲಸ ಬಿಡಿ, ಆದರೆ ಚಿಕ್ಕ­ಬಳ್ಳಾಪುರ ಹೊರವಲಯದ ರೆಸ್ಟೋರೆಂಟ್‌ನ ಔತಣಕೂಟದಿಂದ ಮಾಧ್ಯಮ ಪ್ರತಿನಿಧಿಗಳು ದಿಕ್ಕಾಪಾಲಾಗಿ ಓಡಿ ಹೋದದ್ದು ಏಕೆ?’ ಎಂದು ಅವರು ಪ್ರಶ್ನಿಸಿ ಪೆಕರನತ್ತ ಪ್ರಶ್ನಾರ್ಥಕವಾಗಿ ನೋಡಿದರು.

‘ಪತ್ರಕರ್ತರೇ ಹೀಗೆ ಸಾರ್, ಊಟ ಮಾಡು­ವಾ­ಗಲೂ ಬ್ರೇಕಿಂಗ್‌ನ್ಯೂಸ್ ಏನಾದರೂ ಸಿಕ್ಕಿದ್ರೆ ಊಟ ತಿಂಡಿ ಬಿಟ್ಟು ಓಡಬೇಕಾಗುತ್ತದೆ’ ಎಂದು ಪೆಕರ ಪತ್ರಕರ್ತರ ಪಲಾಯನಕ್ಕೆ ಹೊಸ ವ್ಯಾಖ್ಯಾನ ನೀಡಿದ.

ಅಷ್ಟರಲ್ಲಿ ಸಂಪಾದಕರಿಂದ ಮತ್ತೆ ಫೋನ್ ಬಂತು. ‘ಪಿ.ಕೆ’ ಅಂದ್ರೆ ಪೆಕರ ಅಂತ ಈಗ ಗೊತ್ತಾಯ್ತು. ನೀವು ಅದೇನು ಅಂತ ಎಲ್ಲರನ್ನೂ ಕೇಳಿಕೊಂಡು ಓಡಾಡಬೇಡಿ’ ಎಂದು ಹೇಳಿ ಸಂಪಾದಕರು ಫೋನ್ ಕಟ್‌ ಮಾಡಿದರು.
ಪೆಕರ ಪೆಚ್ಚಾದ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.