ADVERTISEMENT

ಮೋದಿಗೆ ಪಟ್ಟ, ಸಾಹಿತಿಗಳಿಗೆ ಸಂಕಷ್ಟ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST
ಮೋದಿಗೆ ಪಟ್ಟ, ಸಾಹಿತಿಗಳಿಗೆ ಸಂಕಷ್ಟ!
ಮೋದಿಗೆ ಪಟ್ಟ, ಸಾಹಿತಿಗಳಿಗೆ ಸಂಕಷ್ಟ!   

‘ಡಿಸೆಂಬರ್ ನಂತರ ನಾನು ಜೀವಿಸಿರಲಾರೆ, ಆದ್ದರಿಂದ ಇವತ್ತೇ ರಾಜೀನಾಮೆ ಕಳುಹಿಸುತ್ತಿ ದ್ದೇನೆ, ಸ್ವೀಕರಿಸಿ ಸಾರ್’ - ಎಂದು ಬರೆದ ಪೆಕರನ ಪತ್ರ  ನೋಡಿ ಸಂಪಾದಕರು ಬೆಚ್ಚಿಬಿದ್ದರು. ‘ಏನಾಯ್ತು ಇವನಿಗೆ’ ಎಂಬ ಕುತೂಹಲವೂ ಮೂಡಿತು.

ತಕ್ಷಣವೇ ಫೋನ್ ಮಾಡಿ, ‘ಯಾಕ್ರೀ ಏನಾಯ್ತು ನಿಮಗೆ? ಕೆಲಸ ಬಿಟ್ಟು ಏನು ಮಾಡ್ತೀರಾ?’ ಎಂದು ಕೇಳಿದರು.

‘ಈ ದೇಶದಲ್ಲಿ ಜೀವಿಸಲಾರೆ, ದೇಶ ತ್ಯಜಿಸುತ್ತೇನೆ’ ಪೆಕರ ಥಟ್ಟಂತ ಹೇಳಿಬಿಟ್ಟ.

‘ನಿಮಗೇನ್ರೀ ದೊಡ್ಡರೋಗ ಬಂತು? ದೇಶ ತ್ಯಜಿಸುವಂಥಾದ್ದು, ದೇಹ ತ್ಯಜಿಸುವಂಥಾದ್ದು ಏನಾಯ್ತು?’ ಸಂಪಾದಕರು ಪ್ರಶ್ನಿಸಿದರು.
‘ಡಿಸೆಂಬರ್ ವೇಳೆಗೆ ಲೋಕಸಭಾ ಚುನಾವಣೆ ಆಗುತ್ತೆ. ನಂತರ ಮೋದಿ ಪ್ರಧಾನಿ ಆಗುತ್ತಾರೆ. ಕೋಮುವಾದಿ ಮುಖವಾಡ ಧರಿಸಿದವರು ಈ ದೇಶದ ಪ್ರಧಾನಿ ಆಗುವುದು ನನಗೆ ಬೇಕಿಲ್ಲ. ನಾನು ಸಮಾಜವಾದಿ ಹಿನ್ನೆಲೆಯಲ್ಲಿ ಬಂದವನು, ನಾನಿದನ್ನೆಲ್ಲಾ ಒಪ್ಪುವುದಿಲ್ಲ ಸಾರ್’ ಎಂದು ಪೆಕರ ವಿವರಣೆ ಕೊಡಲಾರಂಭಿಸಿದ.

‘ನಿಮ್ಮ ಮಾತು ಕೇಳಿ ಎಲ್ಲಿಂದ ನಗಬೇಕು ಗೊತ್ತಾಗ್ತಾನೇ ಇಲ್ಲ. ಎಕ್ಸಾದರೇನು, ವೈಆದ್ರೆ ಏನು? ಝಡ್ ಆದ್ರೆ ಏನು? ಯಾರು ಪ್ರಧಾನಿ ಆದ್ರೆ ನಿಮಗೇನು? ನೀವುಂಟು, ನಿಮ್ಮ ಕೆಲಸ ಉಂಟಲ್ಲವೇ? ಸುಮ್ನಿರ್ರಿ ಸಾಕು’ ಎಂದು ಸಂಪಾದಕರು ಸ್ವಲ್ಪ ಗದರಿದರು.
“ಪರಿಸ್ಥಿತಿ ಆ ರೀತಿ ಅಲ್ಲ ಸಾರ್, ಮೋದಿ ರಾಶಿ ಭಯಂಕರ ಖಡಕ್ ಇದೆ, ಮೋದಿ ಹೆಸರು ಹೇಳಿದ ಕೂಡಲೇ ಜಗಜಟ್ಟಿ ಅಡ್ವಾಣಿಜೀ ತಣ್ಣಗಾಗೋದ್ರು, ಶಂಕರ್‌ ಸಿಂಗ್ ವಘೇಲಾ, ಕೇಶು ಭಾಯ್ ಪಟೇಲ್, ಸುರೇಶ್‌ ಮೆಹ್ತಾ ಇವರೆಲ್ಲಾ ಗೇಟ್‌ಪಾಸ್ ತಕ್ಕೊಂಡ್ರು, ಗೋಧ್ರಾದಲ್ಲಿ ಬಹಳ ಜನ ‘ನಮೋ ನಮೋ’ ಹರಹರ ಮಹಾದೇವ್ ಅಂತ ಶಿವನಪಾದ ಸೇರಿಕೊಂಡ್ರು. ಈಗ ಕರ್ನಾಟಕದಲ್ಲಿ ಸಾಹಿತಿಗಳೆಲ್ಲಾ ದೇಶ ತ್ಯಜಿಸುವ, ದೇಹ ತ್ಯಜಿಸುವ ಮಾತು ಹೇಳ್ತಾ ಇದಾರೆ. ಇನ್ನು ನನ್ನಂತಹವರಿಗೆ ಉಳಿಗಾಲ ಇದೆಯೇ ಸಾರ್? ಮೋದಿ ಪಟ್ಟಕ್ಕೆ ಬರುವ ವೇಳೆಗೆ ನಾನು ಚಟ್ಟಕ್ಕೆ ಏರುತ್ತೇನೆ ಸಾರ್, ನನ್ನ ನಿಲುವು ಅಚಲ’’ ಎಂದು ಪೆಕರ ಖಚಿತದನಿಯಲ್ಲಿ ಹೇಳಿದ.

‘ಪೆಕರ ಅವರೇ, ಸ್ವಲ್ಪ ಕೂಲ್ ಆಗಿ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಬಹಳಷ್ಟು ಸಾಹಿತಿಗಳು ‘ಅಡ್ಜೆಸ್ಟ್’ ಮಾಡ್ಕೊಂಡು, ಲಾಭ ಮಾಡ್ಕೊಳ್ಳಲಿಲ್ವೇ? ಈಗ ಅಯ್ಯ ಅವರು ಅಧಿಕಾರಕ್ಕೆ ಬಂದ ಕೂಡಲೇ ಸಾಹಿತಿಗಳು ‘ಆಸ್ಥಾನ’ ಸಾಹಿತಿಗಳಾ ಗಲು ನಾಮುಂದು, ತಾಮುಂದು ಎಂದು ಅಡ್ವೈಸ್ ಮಾಡಲು ಮುಕುರಿ ಕೊಳ್ತಾ ಇಲ್ವೇ? ಅಯ್ಯ ಅವರ ಪಾರ್ಟಿಗೆ ಸೇರಿಕೊಳ್ಳುವ ಬಯಕೆಯಲ್ಲಿ ಅವರು ಭಾಗವಹಿಸಿದ ಸಭೆಗಳಿಗೆಲ್ಲಾ ಹೋಗಿ ಚಪ್ಪಾಳೆ ತಟ್ತಾ ಇಲ್ಲವೇ? ಹೀಗೆಲ್ಲಾ ಸಾಹಿತಿಗಳ ಮಾತನ್ನು ನಿಜ ಅಂತ ನಂಬಿಕೊಂಡು ಜೀವನ ಹಾಳುಮಾಡಿ ಕೊಳ್ಳಬೇಡಿ. ಈಗ ತಕ್ಷಣ ಬೇರೆ ಬೇರೆ ಸಾಹಿತಿಗಳನ್ನು ಭೇಟಿಯಾಗಿ, ಮೋದಿ ಪ್ರಧಾನಿ ಆದರೆ ಏನ್ ಮಾಡ್ತೀರಾ ಎಂದು ಕೇಳಿ, ಉತ್ತರ ಪಡೆದು ವರದಿ ರೆಡಿ ಮಾಡಿ’ ಎಂದು ಸಂಪಾದಕರು ಪೆಕರನಿಗೆ ಕರ್ತವ್ಯ ನೆನಪಿಸಿದರು.

ಪೆಕರನಿಗೆ ಹೌದಲ್ಲಾ ಅನಿಸಿತು. ಬೇರೆ ಬೇರೆ ಸಾಹಿತಿಗಳು ದೇಶ ತ್ಯಜಿಸು ತ್ತಾರಾ? ಜೀವ ತ್ಯಜಿಸುತ್ತಾರಾ? ತಿಳಿದು ಕೊಳ್ಳಬೇಕು ಎಂಬ ಕುತೂಹಲ ಮೂಡಿತು. ‘ನಮ್ಮ ಅಯ್ಯ ಅವರು ಮೋದಿ ಇದ್ದಂಗೆ’ ಎಂದು ನಟ ಭಯಂಕರ ಹಂಬರೀಷ್ ಹೇಳಿದ್ದರಲ್ಲಾ? ಅಯ್ಯ ಅವರ ಅಭಿಪ್ರಾಯ ಪಡೆದರೆ ಹೇಗೆ?

ಪೆಕರನ ಆಲೋಚನೆಯೇನೋ ಚೆನ್ನಾಗಿಯೇ ಇತ್ತು. ರಾಜ್ಯದಲ್ಲಿ ಸಿಕ್ಕಾಪಟ್ಟೆ ಮಳೆ ಸುರಿದು, ಕೆರೆಕಟ್ಟೆ ಗಳೆಲ್ಲಾ ತುಂಬಿವೆ. ಜಲಾಶಯಗಳೆಲ್ಲಾ ಭರ್ತಿಯಾಗಿ ‘ಬರ’ ಪರಿಸ್ಥಿತಿ ದೂರ ವಾಗಿದೆ. ಅಯ್ಯ ಅವರ ಕಾಲ್ಗುಣ ಚೆನ್ನಾಗಿರುವುದರಿಂದ ರಾಜ್ಯದಲ್ಲಿ ‘ಬರ’ ಇಲ್ಲ ಎಂದು ಅಯ್ಯ ಅವರ ಆಸ್ಥಾನ ವಿದ್ವಾಂಸರು ಭಜನೆ ಮಾಡುತ್ತಿದ್ದಾರೆ. ಆದರೆ, ಸಾಹಿತಿಗಳೆಲ್ಲಾ ಮೋದಿ ಎನ್ನುವ ಹೆಸರಿಗೇ ಹೆದರಿಕೊಂಡು ಜೀವ ತ್ಯಜಿಸಿಬಿಟ್ಟರೆ, ರಾಜ್ಯದಲ್ಲಿ ‘ಸಾಹಿತಿಗಳ ಬರ’ ಬಂದುಬಿಡುತ್ತೆ. ಬರಹಗಾರರ ಬರ ಬಂದು ಅಮರಿಕೊಂಡರೆ, ಸರ್ಕಾರಕ್ಕೆ ನ್ಯಾಷನಲ್ ಲೆವೆಲ್‌ನಲ್ಲಿ ಟ್ರಬಲ್ ಆಗುವುದಿಲ್ಲವೇ? ಇದರಿಂದ ಅಭಿವೃದ್ಧಿ ಕುಂಠಿತವಾಗಿ, ನಾಳೆ ಡಾಜಿಪ ಅವರು ನಡೆಸುವ ಸಚಿವ, ಶಾಸಕರ ಮೌಲ್ಯಮಾಪನದಲ್ಲಿ ಸರ್ಕಾರ ಫೇಲಾ ದರೆ ಏನು ಗತಿ? ಪೆಕರನ ಆಲೋಚನೆ ಲಂಗುಲಗಾಮಿಲ್ಲದೆ ಢುಂಢಿ ಗಣೇಶನ ಕತೆಯ ರೀತಿಯಲ್ಲಿ ಸಾಗಲಾರಂಭಿಸಿತು.

ಸಾಕು, ಈ ಚಿಂತನೆ. ಕೆಲಸ ಆರಂಭಿಸೋಣ ಎಂದು ಚಿಂತಿಸುತ್ತಾ ಪೆಕರ ಮುಂದೆ ಸಾಗುತ್ತಿರುವಂತೆಯೇ ಪರಿಷ್ಕೃತ ನವ್ಯಕವಿ­ಯೊಬ್ಬರು ಚಿಂತಾಕ್ರಾಂತರಾಗಿ ಸಾಗುತ್ತಿರುವುದು ಕಂಡಿತು. ‘ಏನ್ಸಾರ್ ಈ ರೀತಿ ಡಲ್ಲಾಗಿದ್ದೀರಾ? ಕಾರಣ ಕೇಳ­ಬಹುದೇ?’ ಪೆಕರ ಕವಿಗಳನ್ನು ಪ್ರಶ್ನಿಸಿದ.

ಕವಿಗಳು ಮಾತನಾಡಲಿಲ್ಲ. ಜುಬ್ಬಾ ಜೇಬಿನಿಂದ ಒಂದು ತುಂಡು ಪೇಪರ್ ತೆಗೆದು ಓದಲಾರಂಭಿಸಿದರು.

ಈ ದೇಶದಿಂದ ದೂರನಾದೆ
ಏಕೆ ಸಾಹ್ತಿಯೇ?
ಆಧಾರ ನೀನೇ ಎಂದು ಈ
ಸಾಹಿತ್ಯಲೋಕ ನಂಬಿದೆ...

ಪೆಕರ ಕೇಳಲಾಗದೆ, ಕಿವಿ ಮುಚ್ಚಿಕೊಂಡು ಮುಂದೆ ನಡೆದ. ಸಾಹಿತಿಗಳೆಲ್ಲಾ ದೇಹ–ದೇಶ ತ್ಯಜಿಸಿದರೆ, ಈ ರೀತಿಯ ಅಭಿಮಾನಿಕವಿ ಬಳಗದಿಂದ ವಿರಹಕಾವ್ಯ ಪ್ರವಾಹವೇ ಹರಿದು ಬಂದು, ವಿರಹಸಾಹಿತ್ಯ ಪರಂಪರೆಯೇ ಆರಂಭವಾಗಬಹು ದೇನೋ ಎಂದು ಮನದಲ್ಲೇ ಗುಣಾಕಾರ ಮಾಡಿದ.

ಅಷ್ಟರಲ್ಲಿ ಎದುರುಬದಿಯಲ್ಲಿ ಹೆಸರಾಂತ ವಿದ್ವಾಂಸ ದಾನಾನಂದ ಮೂರ್ತಿಗಳು ಕಂಡರು. ‘ಸಾರ್, ಮುಂದೆ ಈ ದೇಶಕ್ಕೆ ಯಾರು ಪ್ರಧಾನಿಯಾಗಬೇಕು?’ ಪೆಕರ ಪ್ರಶ್ನಿಸಿದ.

‘ರಾಹುಲ್ ಪ್ರಧಾನಿಯಾದರೆ ಅದನ್ನು ನೋಡಲು ನಾನು ಜೀವಿಸಿರ ಲಾರೆ. ನೇರವಾಗಿ ಹಂಪಿಗೆ ಹೋಗಿ, ನದಿಯಲ್ಲಿ ಮುಳುಗುತ್ತೇನೆ’ ಎಂದು ಹೇಳುತ್ತಾ ವಿದ್ವಾಂಸರು ಮುಂದೆ ಹೊರಟರು.

ಅಷ್ಟರಲ್ಲಿ ಹಾಸನ ಕಡೆಯ ಸಾಹಿತಿಗಳೊಬ್ಬರ ದರ್ಶನವಾಯಿತು. ಪೆಕರ ಸಂದರ್ಶನ ಆರಂಭಿಸಿದ. ‘ನೋಡಿ ಸಾರ್, ಕೆಲವರು ಮೋದಿ ಪ್ರಧಾನಿ ಅಭ್ಯರ್ಥಿ ಅಂತಿದ್ದಾರೆ. ಇನ್ನು ಕೆಲವರು ರಾಹುಲ್ ಅಂತಿದ್ದಾರೆ. ಮತ್ತೆ ಕೆಲವರು ಥರ್ಡ್‌ಫ್ರಂಟ್ ಬಂದುಬಿಡುತ್ತೆ, ದೊಡ್ಡಗೌಡ್ರು ಪ್ರಧಾನಿ ಆಗ್ತಾರೆ ಅಂತಿದ್ದಾರೆ, ನಿಮಗೆ ಯಾರು ಬಂದರೆ ಖುಷಿ?’ ಪೆಕರ ಪ್ರಶ್ನಿಸಿದ.

‘ದೊಡ್ಡಗೌಡ್ರು ಪಿಎಂ ಆದ್ರೆ ನಾನು ಹಾಸನದಲ್ಲಿ ಜೀವಿಸಲಾರೆ, ಹಾಸನ ಜಿಲ್ಲೆಯನ್ನೇ ತ್ಯಜಿಸುತ್ತೇನೆ’ ಎಂದು ಸಾಹಿತಿಗಳು ಪ್ರತಿಕ್ರಿಯಿಸಿ ಮುನ್ನಡೆದರು.

ಅಷ್ಟರಲ್ಲಿ ಧಾರವಾಡ ತ್ಯಜಿಸಿ ಬೆಂಗಳೂರಿಗೆ ಬಂದು ಸೆಟಲ್ ಆಗಿರುವ ಕವಿ, ಸಾಹಿತಿ ಚಂಬಾಜೀ ಅವರ ದರ್ಶನವಾಯ್ತು. ಪೆಕರ ಅವರಿಗೂ ಅದೇ ಪ್ರಶ್ನೆ ಎಸೆದ.

‘ನೋಡ್ರೀ ಸಾಹಿತಿಗಳಿಗೆ ಕಡೆಗಾಲದಲ್ಲಿ ತ್ಯಜಿಸುವುದಕ್ಕೆ ಏನೂ ಉಳಿದಿರುವುದಿಲ್ಲ. ಪ್ರಶಸ್ತಿಗಳನ್ನು, ಸರ್ಕಾರಿ ಹುದ್ದೆಗಳನ್ನು, ಅಕಾಡೆಮಿ, ನಿಗಮಗಳ ಸ್ಥಾನಗಳನ್ನು ಪಡೆಯುವುದ ಕ್ಕಾಗಿ ಮಾನ, ಮರ್ಯಾದೆ ಎಲ್ಲವನ್ನೂ ಮೊದಲೇ ತ್ಯಜಿಸಿಬಿಟ್ಟಿರುತ್ತಾರೆ, ಈಗ ತ್ಯಜಿಸಲು ಇನ್ನೇನ್ ಉಳಿದೈತ್ರೀ’ ಎಂದು ಚಂಬಾಜೀ ನಗೆ ಚೆಲ್ಲಿದರು.

ಮುಂದೆ ಸಾಗುತ್ತಿದ್ದಂತೆಯೇ ಸಿನಿಮಾ ಸಾಹಿತಿ ಚಿಕ್ಕರಂಗೇಗೌಡರು ಎದುರಾದರು. ಪೆಕರ ಅವರನ್ನೂ ಬಿಡದೆ ಸೇಮ್ ಪ್ರಶ್ನೆ ಕೇಳಿದ.
‘ನೋಡಿ, ಪರಭಾಷಾ ನಟಿಯರನ್ನು ಕರೆತಂದು, ಅವರನ್ನು ಮೆರೆಸುವುದು ನಮ್ಮ ಕನ್ನಡ ನಿರ್ಮಾಪಕರಿಗೆ ಚಟ ಆಗಿಬಿಟ್ಟಿದೆ. ರೀಮೇಕ್ ಬೇಡ ಎಂದು ನಾನು ಎಷ್ಟು ಸಲ ಹೇಳಿದರೂ ಯಾರೂ ಕೇಳ್ತಿಲ್ಲ’ ಎಂದು ಚಿಕ್ಕರಂಗೇಗೌಡರು ವಿವರಿಸಲಾರಂಭಿ ಸಿದರು.

‘ಸಾರ್, ನಾನು ಕೇಳ್ತಿರೋದು ಏನು? ನೀವು ಹೇಳ್ತಾ ಇರೋದು ಏನು? ಮೋದಿ ಪ್ರಧಾನಿ ಆದ್ರೆ ದೇಶ ತ್ಯಜಿಸ್ತೀರಾ? ದೇಹ ತ್ಯಜಿಸ್ತೀರಾ? ಈ ಹೇಳಿಕೆ ಸರೀನಾ? ಇದಕ್ಕೆ ಪ್ರತಿಕ್ರಿಯಿಸಿ ಸಾರ್ ಸಾಕು’ ಎಂದು ಪೆಕರ ಪ್ರಶ್ನೆಯನ್ನು ಮನದಟ್ಟು ಮಾಡಲು ಯತ್ನಿಸಿದ.

‘ನಾನೂ ಅದೇ ವಿಷಯಾನೇ ಮಾತನಾಡ್ತಾ ಇದೀನಿ ಮಿಸ್ಟರ್ ಪೆಕರ ಅವರೇ’ ಎಂದು ಹೇಳಿ ಚಿಕ್ಕರಂಗೇಗೌಡರು ತಮ್ಮ ವಿವರಣೆ ಮುಂದುವರೆಸಿದರು.

‘ಟೀಕೆ ಮಾಡುವವರು ಸಾಹಿತಿಗಳನ್ನು ಪೂನಂ ಪಾಂಡೆಗೆ ಹೋಲಿಸಿದ್ದು ತಪ್ಪು. ವರ್ಲ್ಡ್‌ಕಪ್‌ನಲ್ಲಿ ಇಂಡಿಯಾ ಗೆದ್ದರೆ ಬೆತ್ತಲಾಗ್ತೇನೆ ಎಂದು ಬೂಸಿಬಿಟ್ಟ ಮಾಡೆಲ್‌ ಬೆಡಗಿ ಪೂನಂ ಹೆಸರೇ ಬೇಕಾಗಿತ್ತಾ? ನಮ್ಮ ಪೂಜಾ ಗಾಂಧಿ ಏನಾಗಿದ್ಲು? ‘ದಂಡು ಪಾಳ್ಯ’ದಲ್ಲಿ ಪೂರ್ತಿ ಬೆತ್ತಲೆ ಬೆನ್ನು ತೋರಿಸಿದ್ದು, ಯಾವ ಪೂನಂ ಪಾಂಡೆಗೆ ಕಮ್ಮಿಯಾಗಿತ್ತೂ ಅಂತೀನಿ’ ಸಿನಿಮಾ ಸಾಹಿತಿಗಳು ಚಡಪಡಿಸಿದರು.

ಮೊಬೈಲ್ ಒಂದೇ ಸಮನೆ ಅರಚಿಕೊಳ್ಳುತ್ತಿದ್ದುದರಿಂದ ಪೆಕರ ಅದನ್ನು ಕಿವಿಗೇರಿಸಿದ. ಅಮೆರಿಕದಿಂದ ನಾವಿಕ ಬಣದ ತಿರುಳ್ಗನ್ನಡ ಕವಿಗಳೊಬ್ಬರು ಉತ್ಸಾಹ ದಿಂದ ಹೇಳಲಾರಂಭಿಸಿದ್ದರು. ‘ಪೆಕರ ಅವರೇ, ಮುಂದೆ ಪ್ರಿಯಾಂಕಾ ಪ್ರಧಾನಿಯಾದರೆ ನಾನು ಅಮೆರಿಕ ತ್ಯಜಿಸುತ್ತೇನೆ’
ಪೆಕರ ಸುಸ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.