‘ರೀ ...ಸ್ವಾಮಿ, ಸಾಹಿತಿಗಳೇ... ಸ್ವಲ್ಪ ನಿಂತ್ಕೊಳ್ರೀ...’ ಎಂದು ಜನ ಕೂಗುತ್ತಿದ್ದುದು ಕಿವಿಗಪ್ಪಳಿಸುತ್ತಲೇ ಪೆಕರ ಒಮ್ಮೆ ತಿರುಗಿ ನೋಡಿದ. ಒಂದಷ್ಟು ಜನ ಅವಸರವಸರವಾಗಿ ಇವನತ್ತಲೇ ಕೂಗುತ್ತಾ ಬರುತ್ತಿದ್ದರು.
‘ಸಾಹಿತಿಗಳೇ ಅಂತ ಕೂಗುತ್ತಿದ್ದಾರೆ. ನನ್ನತ್ತಲೇ ಬರುತ್ತಿದ್ದಾರೆ. ಬಸವನಗುಡಿಯಲ್ಲಿ ಓಡಾಡೋದೂ ಕಷ್ಟ ಆಗೋಯ್ತಲ್ಲಾ?’ ಎಂದುಕೊಂಡ ಪೆಕರ, ‘ಕರೆದದ್ದು ಸಾಹಿತಿಗಳನ್ನು, ನಾನ್ಯಾಕೆ ನಿಂತುಕೊಳ್ಳಬೇಕು’ ಎಂದು ಗೊಣಗುತ್ತಾ ಮುನ್ನಡೆದ. ಚುನಾವಣಾ ಪ್ರಚಾರದ ಸಮಯದಲ್ಲಿ ಇವೆಲ್ಲಾ ಇದ್ದದ್ದೇ. ಆ ಪಕ್ಷ, ಈ ಪಕ್ಷ ಅನ್ನುವ ರಾಮಾಯಣವೆಲ್ಲಾ ನನಗ್ಯಾಕೆ ಎಂದುಕೊಂಡು ಪೆಕರ, ತನ್ನ ಪಾಡಿಗೆ ತಾನು ಮುಂದಡಿಯಿಟ್ಟ.
ಪೆಕರನನ್ನು ಓವರ್‌ಟೇಕ್ ಮಾಡಿಕೊಂಡು, ಮುಂದೆ ಬಂದ ಗುಂಪು, ಪೆಕರನನ್ನು ಉದ್ದೇಶಿಸಿ: ‘ಸ್ವಲ್ಪ ನಿಂತ್ಕೊಳ್ರೀ ಸ್ವಾಮಿ’ ಎಂದು ಜಬರ್‌ದಸ್ತ್ ಮಾಡಿತು. ಏನೋ ಗುಂಪು ಘರ್ಷಣೆ ಇರಬಹುದು ಇಲ್ಲವೆ ರೌಡಿಗ್ಯಾಂಗ್ ಇರಬಹುದಾ ಎಂಬೆಲ್ಲಾ ಆಲೋಚನೆ ಬಂದು ಪೆಕರ ಗಾಬರಿಯಾದ.
‘ಏನ್ರೀ ಸಾಹಿತಿಗಳೇ, ಬಸವನಗುಡೀಲಿ ಓಡಾಡ್ತಾ ಇದೀರಾ? ನೀವೇನ್ ಕಾಂಗ್ರೆಸ್ ಕೂಗುಮಾರಿಗಳಾ? ಸೆಕ್ಯುಲರ್‌ವಾದಿಗಳಾ? ಸಮಾಜದ ವ್ಯಾಧಿಗಳಾ?’ ಎಂದು ಗುಂಪು ವ್ಯಂಗ್ಯವಾಗಿ ಪ್ರಶ್ನಿಸಿತು.
‘ನೀವು ತಪ್ಪು ತಿಳ್ಕೊಂಡಿದೀರಾ. ನಾನು ಸಾಹಿತಿಯಲ್ಲ. ನಾನೊಬ್ಬ ಪೆಕರ’ ಎಂದು ಪೆಕರ ದೈನ್ಯದಿಂದ ಹೇಳಿದ.
‘ಅದೆಲ್ಲಾ ಬೂಸಿ ಬಿಡಬೇಡ್ರಿ ಸ್ವಾಮಿ, ನೀವು ಹಾಕ್ಕೊಂಡಿರುವ ಜುಬ್ಬ ನೋಡಿದ್ರೆ ನಿಮ್ಮನ್ನು ಬೆಂಬುಜೀ ಎಂದು ಹೇಳಬಹುದು. ನಿಮ್ಮ ಮುಖ ನೋಡಿದ್ರೆ ಅದರಲ್ಲಿ ಬೆಳೆದಿರುವ ಬಿಳೀಗಡ್ಡ ನೋಡಿದ್ರೆ ನಕ್ಸಲೀಯ ಸಂಪರ್ಕದಲ್ಲಿರೋ ಸಾಹಿತಿ ಎಂದು ಹೇಳಬಹುದು. ನೀವೀಗ ನಂದನಕಣಿ ಅವರಿಗೆ ವೋಟು ಹಾಕಿ ಅಂತ ಹೇಳೋಕೆ ಬಂದಿದ್ದೀರಿ. ನಮ್ಮನ್ನೆಲ್ಲಾ ಮರುಳರು ಅಂತಾ ತಿಳಿದುಕೊಂಡ್ರಾ ಹೇಗೆ?’ ಎಂದು ಗುಂಪು ಒಕ್ಕೊರಲಿನಿಂದ ದಬಾಯಿಸಿತು.
ಪೆಕರನ ಜಂಘಾಬಲವೇ ಉಡುಗಿಹೋಯಿತು. ಅಯ್ಯ ಅವರ ಆಸ್ಥಾನ ಸಾಹಿತಿಗಳೆಲ್ಲಾ ಬೀದಿಗಿಳಿದು ನಂದನಕಣಿಗೆ ಮತ ಹಾಕಿ ಅಂತ ಹೇಳ್ತಾ ಇರೋದಕ್ಕೆ ಕಮಲ ಪಕ್ಷದವರು ಸಿಡಿದೆದ್ದು, ಸಾಹಿತಿಗಳ ಮಾನವನ್ನು ಬೀದಿಯಲ್ಲೇ ಹರಾಜು ಹಾಕುತ್ತಿದ್ದಾರೆ. ನನ್ನನ್ನು ಸಾಹಿತಿ ಎಂದು ತಿಳ್ಕೊಂಡಿದ್ದಾರೆ. ಆಗಿರುವ ಅನಾಹುತ ಅದೇ. ನಾನೂ ಇವರ ಕಣ್ಣಿನಲ್ಲಿ ಸಾಹಿತಿ ಆದೆನಲ್ಲಾ ಎಂದು ಪೆಕರನಿಗೆ ಸ್ವಲ್ಪ ಖುಷಿಯಾಯಿತು. ಏಕೆಂದರೆ ಎಂದಾದರೂ ಒಂದು ದಿನ ಜ್ಞಾನಪೀಠ ಹೊಡ್ಕೋಬಹುದಲ್ಲಾ!
ಸಾಹಿತಿಗಳಿಗೇಕೆ ರಾಜಕೀಯ?
ಅಲ್ಲಿಗೆ ಬಂದರೆ ಆಗ್ತಾರೆ ನಕ್ಸಲೀಯ
ಕೋಮುವಾದ ಬಹಳ ಅಪಾಯ
ಬೀದಿಗಿಳಿಯದೆ ಇಲ್ಲ ಬೇರೆ ಉಪಾಯ
ಪೆಕರ, ಏನಾದ್ರೂ ಸಬೂಬು ಹೇಳಿ ಅಲ್ಲಿಂದ ಪೇರಿ ಕೀಳಬೇಕಿತ್ತು. ಆದರೂ ನಿಷ್ಠಾವಂತ ಎನಿಸಿಕೊಂಡಿರುವ ಪೆಕರನಿಗೆ ಸಾಹಿತಿಗಳನ್ನು ಬಿಟ್ಟುಕೊಡಲು ಮನಸ್ಸಾಗಲಿಲ್ಲ. ಅವರೆಲ್ಲಾ ಒಂದು ಕಾಲದಲ್ಲಿ ನನ್ನ ನೆಚ್ಚಿನ ಸಾಹಿತಿಗಳೇ ಅಲ್ಲವೇ? ಹಿಂದೆ ಅವರೆಲ್ಲಾ ಎಲ್ಲಿಂದ ಕೃತಿಚೌರ್ಯ ಮಾಡಿದ್ದಾರೆ ಎನ್ನುವ ಆಪಾದನೆ, ಹಗರಣ ಆದಾಗ ಪೆಕರನೂ ಸಾಹಿತಿಗಳ ಪರವಾಗಿ ವಾದಿಸಿದ್ದ. ಅಂತಹ ಸಾಹಿತಿಗಳನ್ನು ಈಗ ಹೀಯಾಳಿಸಿದರೆ ಸುಮ್ಮನಿರಲಾದೀತೇ?
‘ಸ್ವಾಮೀ, ಖಂಡಿತಾ ನಾನು ಸಾಹಿತಿಯಲ್ಲ. ನಾನೊಬ್ಬ ಶ್ರೀ ಸಾಮಾನ್ಯ. ಜುಬ್ಬ ಹಾಕ್ಕೊಂಡವರೆಲ್ಲಾ ಸಾಹಿತಿಗಳಲ್ಲ. ಆದರೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕುರಿತು, ಸದಾ ಅಯ್ಯ ಅವರ ಆಸ್ಥಾನದಲ್ಲಿರೋ ಸಾಹಿತಿಗಳ ಬಗ್ಗೆ ಅಧಿಕಾರಕ್ಕಾಗಿ ಅಲೆಯುತ್ತಿದ್ದಾರೆ ಎಂದು ಸುಮ್‌ಸುಮ್ನೆ ಆರೋಪ ಮಾಡಿದ್ರೆ ನಂಗೆ ತಡ್ಕೊಳ್ಳೊದಿಕ್ಕೆ ಆಗಲ್ಲ.
ವಾಗ್ದೇವಿಯ ಭಂಡಾರದ ಮುದ್ರೆಯನೊಡೆದ, ಸಾರಸ್ವತಮೆನಿಪ ಕವಿತೆಗಳೊಳ್ ಸಾಹಿತ್ಯರತ್ನಂಗಳ್ ಅವರ್‌ಗಳ್’ ಎಂದು ತನ್ನ ಸಾಹಿತ್ಯ ಸಾಮರ್ಥ್ಯ ಪ್ರದರ್ಶಿಸಿದ ಪೆಕರ. ‘ಸಾಹಿತಿಗಳು ಸರ್ಕಾರಿ ಕೃಪಾಪೋಷಿತ ಇರಬಾರದು ಎಂಬ ರೂಲ್ಸ್ ಎಲ್ಲಿದೇ? ಪಂಪ ಮಹಾಕವಿಯೇ ಅರಿಕೇಸರಿಯ ಆಸ್ಥಾನ ಕವಿಯಾಗಿದ್ದ. ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿಕೊಂಡು ವಿಕ್ರಮಾರ್ಜುನ ವಿಜಯ ಬರೆದ. ನಮ್ಮ ಕವಿ ಚಕ್ರವರ್ತಿ ರನ್ನ, ಭೀಮನನ್ನು ಸತ್ಯಾಶ್ರಯನಿಗೆ ಹೋಲಿಸಿ ಕಾವ್ಯ ಬರೆದ. ನಮ್ಮ ಆಸ್ಥಾನ ಕವಿಗಳು ಅಯ್ಯ ಅವರನ್ನು ಹಾಡಿಹೊಗಳಿ, ‘ಅಯ್ಯಾರ್ಜುನ ವಿಜಯ’ ಎಂಬ ಕಾವ್ಯ ಬರೆಯಲಿ ಬಿಡಿ, ಏನು ತಪ್ಪು?’ ಎಂದು ಪೆಕರ, ಗುಂಪನ್ನುದ್ದೇಶಿಸಿ ಭಾಷಣ ಮಾಡಿಯೇ ಬಿಟ್ಟ.
‘ರೀ ಸ್ವಾಮೀ, ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪ, ಅಂತಹ ಕವಿತಾ ಗುಣಾರ್ಣವನನ್ನು ತುರ್ತು ಪರಿಸ್ಥಿತಿ ಘೋಷಿಸಿದಾಗ ಪ್ರತಿಭಟಿಸದ, ಟೂಜಿ, ಕಲ್ಲಿದ್ದಲು ಹಗರಣದ ಬಗ್ಗೆ ಮಾತನಾಡದ, ವಂಶಪಾರಂಪರ್ಯ ಆಡಳಿತ ಇರುವ ಸರ್ಕಾರವನ್ನು ಬೆಂಬಲಿಸುವ ಸಾಹಿತಿಗಳಿಗೆ ಹೋಲಿಸಬೇಡಿ. ಆಮ್ ಆದ್ಮಿಯವರೂ ಭ್ರಷ್ಟಾಚಾರ ವಿರೋಧಿಗಳೇ, ಅವರನ್ನ ಬಿಟ್ಟು, ಏಳುಸಾವಿರ ಕೋಟಿ ರೂಪಾಯಿ ಒಡೆಯನೊಬ್ಬನನ್ನು ಬೆಂಬಲಿಸುವುದರ ರಹಸ್ಯ ಏನು? ಅದನ್ನು ಹೇಳ್ರಿ ಮೊದಲು’ ಎಂದು ಗುಂಪು ರೇಗಿತು.
ರೇಗ್ತಾ ರೇಗ್ತಾ ಪೆಕರನಿಗೆ ಹುಂಬ ಧೈರ್ಯ ಬಂದಿತ್ತು. ‘ನಮ್ಮ ಯೂಆರ್ ಸಾಹೇಬರು ನಮಗೆ ಇಂಪಾರ್ಟೆಂಟ್. ನಮೋನಮೋ ಪಿಎಮ್ಮಾಗಿಬಿಟ್ರೆ ಅವರು ದೇಶಾನೇ ಬಿಟ್ಟು ಹೋಗಿಬಿಡ್ತಾರೆ. ಅವರನ್ನು ಇಲ್ಲೇ ಉಳಿಸಿಕೊಳ್ಳಬೇಕು. ಅಡ್ವಾಣಿ ಪಿಎಮ್ಮಾದ್ರೆ ಭಯಾನೇ ಇಲ್ಲಾ ಎಂದು ಹೇಳಿದ್ದಾರಲ್ಲಾ ಅದನ್ನೂ ಸ್ವಲ್ಪ ಕಿವಿಗೆ ಹಾಕ್ಕೊಳ್ರೀ’ ಎಂದು ಪೆಕರ ಮಾತುಮುಗಿಸುತ್ತಿದ್ದಂತೆಯೇ ರಾಂಗ್‌ಬಿರಾಂಗ್ ಆದ ಗುಂಪು, ಪೆಕರನನ್ನು ಅಟ್ಯಾಕ್ ಮಾಡಲು ಮುನ್ನುಗ್ಗಿತು.
‘ಬದುಕಿದೆಯಾ ಬಡಜೀವವೇ’ ಅಂದು ಕೊಂಡ ಪೆಕರ ತಪ್ಪಿಸಿಕೊಂಡು ಡಾ.ದಾನಾನಂದ ಮೂರ್ತಿ ಅವರ ಮನೆಗೆ ಬಂದು ನಿಂತ. ‘ಸರ್, ನೀವು ದೊಡ್ಡ ವಿದ್ವಾಂಸರು. ಆದರೆ ಇತ್ತೀಚೆಗೆ ನೀವು ಕಮಲದಳ ಬೆಂಬಲಿಸಿದ್ರಿ. ನಿಮ್ಮ ಬೋಧನೆ ದಾರಿ ತಪ್ಪಿದೆ ಅಂತ ಸಾಹಿತಿಗಳು ಮಾತನಾಡ್ತಾ ಇದಾರೆ, ಏನಂತೀರಿ?’ ಎಂದು ಪ್ರಶ್ನಿಸಿದ.
‘ಏನ್ ಮಾತಾಡ್ತಾ ಇದೀರಾ? ಟಿಪಿಕಲ್ ಕಮ್ಯುನಿಸ್ಟ್ ತುಕಡಾ ತರ ಪ್ರಶ್ನೆ ಕೇಳ್ತಾ ಇದೀರಲ್ರೀ? ನಿಮ್ ಸಂಪಾದಕರಿಗೆ ನಿಮ್ಮ ಮೇಲೆ ದೂರು ಕೊಡ್ತೀನಿ’ ಎಂದು ದಾನಾನಂದ ಮೂರ್ತಿಗಳು ಉರಿದೆದ್ದ ಕೂಡಲೇ ಪೆಕರ ಅಲ್ಲಿಂದ ಪರಾರಿಯಾದ.
‘ಇವತ್ಯಾಕೋ ದಿನಾನೇ ಸರಿಯಿಲ್ಲ. ಸುಮ್ನೆ ಮನೇಗೆ ಹೋಗೋದೇ ವಾಸಿ’ ಎಂದುಕೊಂಡು ಗಾಂಧಿನಗರ ದಾಟುವಾಗ, ಅದಷ್ಟೇ ಮುಂಬೈನಿಂದ ಬರಿಗೈಲಿ ವಾಪಸು ಬಂದಿದ್ದ ರಾಗರಾಜಭಟ್ಟರು ತೆತೆತೆ ಪೆಪೆಪೆ ಎಂದು ಹಿಂದಿ ಭಾಷೆಯಲ್ಲಿ ಗುನುಗುತ್ತಾ ಹೋಗುತ್ತಿದ್ದರು.
ಎದುರಾದ ಪೆಕರ, ‘ಸಾಹಿತಿಗಳು ರಾಜಕೀಯ ಪಕ್ಷವೊಂದರ ಪರ ಬಹಿರಂಗವಾಗಿ ಪ್ರಚಾರ ನಡೆಸುತ್ತಾ ಬೀದಿಗಿಳಿದಿರುವುದು ಸರಿಯೇ, ನಿಮ್ಮ ಅಭಿಪ್ರಾಯವೇನು?’ ಎಂದು ಪ್ರಶ್ನಿಸಿದ.
ಸಾಹಿತಿಗಳಿಗಿದು ವೀರ
ಕಾಂಗ್ರೆಸ್‌ಗೆ ಪರಮವೇದದ ಸಾರ
ಜ್ಞಾನಪೀಠಿಗಳ ತತ್ವ ವಿಚಾರ
ನೀಲೇಕಣಿಗೆ ಆಯ್ತು ‘ಆಧಾರ’
ಚುಟುಕೊಂದನ್ನು ಬಿಸಾಡಿ, ರಾಗರಾಜಭಟ್ಟರು ಮುಂದೆ ನಡೆದರು. ಪೆಕರ ಮನೆ ಹಾದಿ ಹಿಡಿದ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.