ಐಪಿಎಲ್ ಮ್ಯಾಚ್ ನೋಡಬೇಕು ಎಂಬುದು ಪೆಕರನ ಜೀವಮಾನದ ಆಸೆ. ಅದ್ಯಾವ ದೊಡ್ಡಾಟಾರೀ? ಅದನ್ಯಾಕೆ ಆ ಸ್ಟೇಡಿಯಂಗೆ ಹೋಗಿ, ಆ ರಶ್ಶಿನಲ್ಲಿ ಕೂತು ನೋಡಿ ಸುಸ್ತಾಗ್ತೀರಿ? ಕೆಲವೇ ಜನ ಆಡೋ ಆಟವನ್ನು ಸಾವಿರಾರು ಮೂರ್ಖರು ಕೂತು ನೋಡುವ ಆಟ ಅಂಥಾ ಆಡುಮಾತು ಕೇಳಿಲ್ಲವಾ? ಅಷ್ಟೂ ಆಸೆ ಇದ್ರೆ ಮನೇಲಿ ಆರಾಮಾಗಿ ಕೂತು ಟಿ.ವಿ.ನಲ್ಲಿ ನೋಡಿ ಎಂಜಾಯ್ ಮಾಡಿ, ಅಷ್ಟಕ್ಕೂ ಎಲ್ಲಿ ನೋಡಿದ್ರೆ ಏನು, ಎಲ್ಲವೂ ಮ್ಯಾಚ್ ಫಿಕ್ಸಿಂಗ್ ಅಲ್ಲವೇ? ಎಂದು ಸ್ನೇಹಿತರು ಪೆಕರನಿಗೆ ಪುಕ್ಕಟೆ ಸಲಹೆ ಕೊಟ್ಟರು.
ಈ ದೇಶದಲ್ಲಿ ಜನ ಉಚಿತ ಸಲಹೆಗಳನ್ನು ಧಾರಾಳವಾಗಿ ಕೊಡುವಷ್ಟು ಬೇರೇನನ್ನೂ ನೀಡಲಾರರು ಎಂದು ಮನಸ್ಸಿನಲ್ಲೇ ಗೊಣಗಿಕೊಂಡ ಪೆಕರ, ಆದರೂ ನೇರ ಆಟದ ಖದರ್ ನೋಡಲೇ ಬೇಕು ಎಂದು ಎರಡು ಟಿಕೆಟನ್ನು ಹೇಗೋ ಗಿಟ್ಟಿಸಿದ. ಜನಸಾಮಾನ್ಯರು ಹಗಲೂ ರಾತ್ರಿ ಟಿಕೆಟ್‌ಗಾಗಿ ಕ್ಯೂ ನಿಂತುಕೊಳ್ಳುವುದು, ಕ್ರಿಕೆಟ್ ಮ್ಯಾಚ್ ಇದ್ದಾಗ ಹಿಂದಿನ ರಾತ್ರಿಯೇ ಕೌಂಟರ್ ಬಳಿ ಮಲಗುವುದು, ಹತ್ತು ಜನಕ್ಕೆ ಟಿಕೆಟ್ ವಿತರಿಸಿದ ನಂತರ, ‘ಟಿಕೆಟ್ ಸೋಲ್ಡ್ ಔಟ್’ ಎಂಬ ಬೋರ್ಡ್ ನೋಡಿ, ಕ್ರಿಕೆಟ್ ಹುಚ್ಚು ಅಭಿಮಾನಿಗಳು ಜೋಲುಮೋರೆ ಹಾಕಿಕೊಂಡು ವಾಪಸಾಗುವುದು, ಇವೆಲ್ಲವನ್ನೂ ನೋಡಿದ್ದ ಪೆಕರ ಹದಿನೈದು ದಿನದ ಮುನ್ನವೇ ಶಿಫಾರಸು ಮಾಡಿಸಿ, ಎರಡು ಟಿಕೆಟ್ ಖರೀದಿಸಿ ಚಿನ್ನಸ್ವಾಮಿ ಸ್ಟೇಡಿಯಂ ಕಡೆ; ‘ಘಾ’ (ಸನ್ ಆಫ್ ‘ಘ’) ನನ್ನೂ ಜೊತೆಗೆ ಕರೆದುಕೊಂಡು ಹೊರಟ. ಒಬ್ಬರಿಗಿಂತ ಇಬ್ಬರಿದ್ದರೆ ಲೇಸಲ್ಲವೇ?
ರಾತ್ರಿ ಎಂಟು ಗಂಟೆಗೆ ಆಟ ಶುರು. ಆದರೆ, ಮಧ್ಯಾಹ್ನದಿಂದಲೇ ನಗರ ಸಂಚಾರ ಅಸ್ತವ್ಯಸ್ತವಾದದ್ದರಿಂದ ಸ್ಟೇಡಿಯಂ ಸೇರುವ ವೇಳೆಗೆ ಪೆಕರ ಚಿತ್ರಾನ್ನವಾಗಿ ಬಿಟ್ಟಿದ್ದ. ಇಲ್ಲೇನೋ ವಾರ್ ನಡೀತಿದೆ ಎನ್ನುವಷ್ಟು ಸಶಸ್ತ್ರಪಡೆ ಸುತ್ತ ಕಾವಲು ಕಾಯುತ್ತಿರುವುದನ್ನು ಕಂಡು ಪೆಕರನೂ, ‘ಘಾ’ನೂ ಬೆಚ್ಚಿಬಿದ್ದರು. ಗೇಟ್ ಬಳಿಯೇ ಇಬ್ಬರಿಗೂ ಮೈದಡವಿ, ಜೇಬಿಗೆ ಕೈಹಾಕಿ ಸಂಪೂರ್ಣ ಚೆಕಪ್ ಮಾಡಲಾಯಿತು. ಈ ಆಟಕ್ಕೇ ಹೀಗೆ, ಇನ್ನು ಒಂದನೇ ತಾರೀಖು ಫೈನಲ್‌ನಲ್ಲಿ ಇನ್ನೆಷ್ಟು ನುಜ್ಜುಗುಜ್ಜು ಮಾಡ್ತಾರೋ ಎಂದುಕೊಂಡ. ಜನ ಸಂಭ್ರಮಿಸುತ್ತಾ, ಕೈಯಲ್ಲಿ ಬಾವುಟ, ಪೀಪಿ ಇತ್ಯಾದಿ ಇತ್ಯಾದಿ ಹಿಡಿದು ನುಗ್ಗುತ್ತಲೇ ಇದ್ದರು.
‘ಸ್ವಾಮೀ, ಅಲ್ಲಿ ನೋಡಿ ಕೈಯಲ್ಲಿ ದೊಣ್ಣೆ, ಬಾವುಟ, ಅಪಾಯಕಾರಿ ವಸ್ತುಗಳನ್ನು ಹಿಡಿದುಕೊಂಡು ಜನ ನುಗ್ಗುತ್ತಲೇ ಇದ್ದಾರೆ. ಅವರನ್ನೆಲ್ಲಾ ಬಿಟ್ಟು, ಬಡಕಲು ಪ್ರಜೆಗಳಾದ ನನ್ನನ್ನೂ, ‘ಘಾ’ನನ್ನೂ ತಡವುತ್ತಾ ಇದ್ದೀರಲ್ಲಾ. ಮೊದಲು ಅವರನ್ನು ಹಿಡೀರಿ ಸ್ವಾಮಿ’ ಎಂದು ಪೆಕರ ಕೆಎಸ್‌ಆರ್‌ಪಿ ಪಡೆಯವರನ್ನು ಕೇಳಿಕೊಂಡ.
‘ಅವರೆಲ್ಲಾ ಆಟ ನೋಡೋಕೆ ಬಂದಿದ್ದಾರೆ. ನಿನ್ನನ್ನು ನೋಡಿದರೆ ಆಟ ನೋಡೋಕೆ ಬಂದವನಂತೆ ಕಾಣೋದಿಲ್ಲ. ಕಿತಾಪತಿ ಮನುಷ್ಯ ಇದ್ದಂಗೆ ಕಾಣ್ತೀಯಾ. ಜೊತೆಯಲ್ಲಿ ನಿನ್ನ ತರಹಾನೇ ಇರೋ ಜೂನಿಯರ್ ಪೆಕರನನ್ನೂ ಕರೆದುಕೊಂಡು ಬಂದಿದ್ದೀಯಾ. ಅದಕ್ಕೆ ನಿಮಗೆ ಸ್ಪೆಷಲ್ ಚೆಕಪ್. ಪೆವಿಲಿಯನ್ ಹತ್ತೋಕೆ ಮುನ್ನ ನಿಮ್ಮನ್ನು ಇನ್ನೊಂದು ಸಲ ಚೆಕ್ ಮಾಡ್ತೀವಿ’ ಎಂದು ಭದ್ರತಾ ಪಡೆಯವರು ಎಚ್ಚರಿಸಿದರು.
‘ಮ್ಯಾಚ್ ಫಿಕ್ಸಿಂಗ್ ಮಾಡುವವರನ್ನು, ಬೆಟ್ಟಿಂಗ್ ಆಡೋ ದಲ್ಲಾಳಿಗಳನ್ನು, ಚಿಯರ್ ಬೆಡಗಿಯರ ನೃತ್ಯದ ಝಲಕ್ ನೋಡಲು ಬರುವವರನ್ನು ಸಲೀಸಾಗಿ ಬಿಟ್‌ಬಿಡ್ತೀರಾ, ಬಡವಾ ನೀ ಮಡಗಿದಂತಿರು ಅಂದುಕೊಂಡು ಬದುಕ್ತಾ ಇರುವವರನ್ನು ಹಿಡ್ಕಂಡು ಬಡೀತೀರಾ. ಏನ್ರೀ ನಿಮ್ಮ ಪೊಲೀಸ್ ನ್ಯಾಯ?’ ಎಂದು ಪೆಕರ ಸಿಡಿದೆದ್ದ. ಸ್ಟೇಡಿಯಂ ಒಳಗೆ ನುಗ್ಗಿದವನೇ ಪೆಕರ ಅಚ್ಚರಿಗೊಂಡ. ಒಂದು ಸೂಜಿಗೂ ಜಾಗವಿಲ್ಲದಂತೆ ಜನ ಮುಕುರಿಕೊಂಡಿದ್ದರು. ‘ಬೆಂಗಳೂರಿನಲ್ಲಿ ಇಷ್ಟೊಂದು ಜನ ಎಲ್ಲಿಂದ ಬಂದ್ರಪ್ಪಾ’ ಎಂದು ಉದ್ಗರಿಸಿದ.
‘ಮತದಾನದ ದಿನ ವೋಟ್ ಹಾಕೋದಿಕ್ಕೆ ಒಬ್ಬರೂ ಬರಲಿಲ್ಲ. ಕ್ರಿಕೆಟ್ ನೋಡೋದಿಕ್ಕೆ ಮನೆಮಠ ಬಿಟ್ಟು ಬಂದಿದ್ದಾರೆ’ ಎಂದು ‘ಘಾ’ ಒಗ್ಗರಣೆ ಹಾಕಿದ.
ರಾಜಧಾನಿಯಲ್ಲಿ ಏರಿದೆ ಐಪಿಎಲ್ ಜ್ವರ
‘ಯುವ’ ಆಟಗಾರರಲ್ಲಿಲ್ಲ ಅಬ್ಬರ
ಯುವಿ, ಕೊಹ್ಲಿ ನಡೆದರು ಪ್ರೀತಿಗುಂಟಾ
ಲಕ್ಕಿ ಆದಳು ಕಿಂಗ್ಸ್ ಇಲೆವನ್ ಜಿಂಟಾ
ಆರ್‌ಸಿಬಿ ಟೀ ಷರ್ಟ್ ಧರಿಸಿ, ಕೆನ್ನೆಯ ಮೇಲೆ ಬಣ್ಣದ ಬಾವುಟದ ಪೆಯಿಂಟ್ ಮಾಡಿಸಿಕೊಂಡು, ಪೀಪಿ ಊದುತ್ತಾ ಆನಂದದಿಂದ ಕೇಕೆ ಹಾಕುತ್ತಿದ್ದ ಯುವಕನೊಬ್ಬನ ಜೊತೆ ಪೆಕರ ಮಾತಿಗಿಳಿದ:
‘ಚುನಾವಣೆಯಲ್ಲಿ ಈ ಬಾರಿ ಮತದಾನ ಮಾಡಿದಿರಾ? ಯಾರು ಪಿಎಂ ಆಗಬಹುದು ಅಂಥಾ ನಿಮ್ಮ ಅಭಿಪ್ರಾಯ?’
‘ಅಯ್ಯೋ ಅಂದಾಂಡೆ ಪೋಯಾ, ಇಪ್ಪೋ... ಗ್ಲೆನ್ ಮ್ಯಾಕ್ಸ್‌ವೆಲ್ ಸಿಕ್ಸರ್ ಅಡಿಪ್ಪಾ ಪಾರ್’ ಎಂದು ಸಿಡುಕಿದ ಆ ಕ್ರೀಡಾಭಿಮಾನಿ, ಪೆಕರನನ್ನು ತಳ್ಳಿದ.
‘ಇದೇನಪ್ಪಾ ವಿಚಿತ್ರವಾಗಿದೆ ವರ್ತನೆ’, ಎಂದುಕೊಂಡು ಇಬ್ಬರೂ ಕೇಕೆ ಹಾಕುತ್ತಿದ್ದ ಮತ್ತೊಬ್ಬನ ಹತ್ತಿರ ಹೋದರು.
‘ಸ್ವಾಮೀ, ಸರ್ವೇ ಮಾಡ್ತಾ ಇದ್ದೀವಿ... ನೀವು ವೋಟ್ ಮಾಡಿದ್ರಾ? ಮತದಾನದ ದಿನ ಎಲ್ಲಿದ್ರಿ?’
‘ವೀರೂಕಾ ಖೇಲ್ ದೇಖ್ನಾ ಹೈ...ಚುಪ್ಕೆ ಜಾವ್’ ಎಂದು ಆತನೂ ರೇಗಿ ಕೂಗಿಕೊಂಡ.
ಇಂಗು ತಿಂದ ಮಂಗನಂತಾದ ಪೆಕರ ಪೆವಿಲಿಯನ್‌ನ ಮತ್ತೊಂದು ಕಡೆ ಹೋಗಿ, ಅಲ್ಲೊಬ್ಬ ಗಿರಾಕಿಯನ್ನಿಡಿದು, ಅದೇ ಪ್ರಶ್ನೆಯನ್ನು ಪುನರಾವರ್ತಿಸಿದ.
‘ನಡಿಚೆ ಆಟನು ಚೂಸ್ತುನ್ನಾನು, ನುವ್ವು ನೋರು
ಮೂಸ್ಕೊನಿ ಪೊ...’ ಎಂದು ಆತನೂ ಲೆಜೆಂಡ್ ಹೀರೊ ತರಹಾ ಗರ್ಜಿಸಿದ.
ಇಬ್ಬರೂ ಬೆಚ್ಚಿಬಿದ್ದರು. ‘ಸಾರ್, ಬೆಂಗಳೂರಿನಲ್ಲಿ ನಾರಾಯಣಗೌಡ ಅಂಡ್ ಕಂಪನಿ ಬಿಟ್ಟರೆ ಬೇರೆ ಯಾರೂ ಕನ್ನಡಿಗರೇ ಇಲ್ಲಾ ಅಂತಾ ಕಾಣುತ್ತೆ. ಈ ಸ್ಟೇಡಿಯಂನಲ್ಲಿ ಒಬ್ರೂ ಕನ್ನಡದಲ್ಲಿ ಮಾತನಾಡ್ತಾ ಇಲ್ವಲ್ಲಾ ಸಾರ್, ಬೇರೆ ಭಾಷೆನಲ್ಲೇ ಬೈಯ್ತಾ ಇದ್ದಾರಲ್ಲಾ’ ಎಂದು ‘ಘಾ’ ಪೆಕರನ ಬಳಿ ಗೊಣಗಿದ.
‘ಬೆಂಗಳೂರಿನಲ್ಲಿ ಎಲೆಕ್ಷನ್ ನಡೆದಾಗ ಕನ್ನಡದಲ್ಲಿ ಪ್ರಚಾರ ಭಾಷಣ ನಡೀತು. ಇವರಿಗೆಲ್ಲಾ ಅದೆಲ್ಲಿ ಅರ್ಥವಾಗುತ್ತೆ? ಅದಕ್ಕೇ ರಾಜಧಾನಿಯಲ್ಲಿ ವೋಟ್ ಪ್ರಮಾಣ ಡಲ್ಲು’ ಎಂದು ಪೆಕರ ವ್ಯಾಖ್ಯಾನಿಸಿದ.
‘ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕಲಿಕಾ ಮಾಧ್ಯಮವಾಗಿ ಮಾತೃಭಾಷೆಯನ್ನು ಹೇರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಅಂಥಾ ಸುಪ್ರೀಂಕೋರ್ಟ್ ತೀರ್ಪು ನೀಡಿಬಿಟ್ಟಿದೆ. ಈ ಸ್ಟೇಡಿಯಂಗೆ ಬಂದಿರೋವರನ್ನು ನೋಡಿದರೆ, ಕನ್ನಡ ಬಿಟ್ಟು ಭಾರತದ ಇತರ ಎಲ್ಲ ಭಾಷೆಗಳನ್ನೂ ಮಾತಾಡ್ತಾ ಇದಾರೆ! ತೀರ್ಪಿನಿಂದ ಕನ್ನಡ ಭಾಷೆಗೆ ತೀವ್ರ ಹಿನ್ನಡೆ ಆಗುತ್ತೆ ಅಂಥಾ ಸ್ಮಾಲ್ ಸಾಹಿತಿಗಳು, ಬಿಗ್‌ಸಾಹಿತಿಗಳು, ಆಸ್ಥಾನ ಸಾಹಿತಿಗಳು ಭಾಷಣ ಮಾಡೋಕೆ ರೆಡಿ ಆಗಿಬಿಟ್ಟಿದ್ದಾರೆ. (ವಿಧಾನಪರಿಷತ್ಗೆ ನಾಮಕರಣ ಸಮಯದಲ್ಲಾದರೂ ಹೀಗೆ ಮಾಡದಿದ್ದರೆ ಹೇಗೆ?) ಅವರೆಲ್ಲಾ ಹೇಳ್ತಾ ಇರೋದು ಕೇಳಿದ್ರೆ ನಿಜವಾಗ್ಲೂ ಕನ್ನಡಕ್ಕೆ ಹಿನ್ನಡೆ ಆಗುತ್ತೆ ಅನ್ಸುತ್ತೆ ಸಾರ್’ ಎಂದು ‘ಘಾ’ ಪುಟ್ಟದೊಂದು ಭಾಷಣ ಮಾಡಿದ.
‘ಆ ತರಹ ಭಯಪಡಬೇಕಾದ್ದು ಅನಗತ್ಯ ಮಿಸ್ಟರ್ ‘ಘಾ’, ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಾಮಾನ್ಯ ಜನರಿಗಿಂತ, ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಓದಿಸಿರುವ ಬಿಗ್‌ಬಿಗ್ ಸಾಹಿತಿಗಳೇ ಹೆಚ್ಚು ಗಾಬರಿಯಾದಂತೆ ಕಾಣ್ತಾ ಇದೆ. ಈ ಸಾಹಿತಿಗಳು ಆಡುಮಾತಾಗಿಯೂ ಇಂಗ್ಲಿಷ್ ಕಲಿಸಬಾರದು ಅಂಥಾ ಹೇಳ್ತಾ ಇದಾರೆ. ಗೋಕಾಕ್ ಚಳವಳಿ ರೀತಿಯಲ್ಲಿ ಮತ್ತೊಂದು ಚಳವಳಿ ಮಾಡೋಣ ಎಂದು ಕೆಲವು ನಿರುದ್ಯೋಗಿ ಸಾಹಿತಿಗಳು, ಹೊಸ ಜುಬ್ಬಾ ಹಾಕ್ಕೊಂಡು ರೆಡಿಯಾಗ್ತಾ ಇದ್ದಾರೆ. ಶೇ ೧೬ ರಷ್ಟು ಶಾಲೆಗಳು ಮಾತ್ರ ಭಾಷಾನೀತಿಯ ವ್ಯಾಪ್ತಿಯಿಂದ ಹೊರಗಿರುತ್ತವೆ, ಇನ್ನುಳಿದ ಶೇ ೮೪ ರಷ್ಟು ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವ ಅವಕಾಶ ಇದೆ ಎನ್ನುವುದನ್ನು ಮೊನ್ನೆ ಅಯ್ಯ ಅವರ ಮುಂದೆ ಕೂತು ಮಾತನಾಡಿದ ಎಲ್ಲ ಸಾಹಿತಿಗಳು ಮರೆಮಾಚಿದ್ದಾರೆ ನೋಡು’ ಎಂದು ಪೆಕರ ವಿವರಿಸಿದ.
‘ಗೋಕಾಕ್ ಚಳವಳಿ ತರಹ ಇನ್ನೊಂದು ಚಳವಳಿ ಮಾಡೋಕೆ ರಾಜ್‌ಕುಮಾರೇ ಇಲ್ಲವಲ್ಲಾ ಸಾರ್, ಜ್ಞಾನಪೀಠ, ಪದ್ಮಶ್ರೀ, ಕನ್ನಡರತ್ನ ಎಲ್ಲ ವಾಪಸ್ ಕೊಡಿ ಎಂದು ಚಂಪಾಜೀ ಅವರು ಅಪ್ಪಣೆ ಕೊಡಿಸಿದ್ದಾರಲ್ಲಾ ಸಾರ್’ ಎಂದು ‘ಘಾ’ ಮತ್ತೊಂದು ಸಂಗತಿಯನ್ನು ತಿಳಿಸಿದ.
‘ಅವರ ಜೇಬಿನಲ್ಲಿರುವ ಸರ್ಕಾರಿ ಪ್ರಶಸ್ತಿಯನ್ನೇ ಚಂಪಾಜೀ ಮರೆತುಬಿಟ್ಟಿದ್ದಾರಲ್ಲಾ! ಮೊದಲು ಅದನ್ನು ವಾಪಸು ಕೊಟ್ಟು ಬೇರೆಯವರಿಗೆ ಬುದ್ಧಿ ಹೇಳಿದ್ದರೆ ಚೆನ್ನಾಗಿತ್ತು’.
‘ನಮ್ಮದನ್ನು ವಾಪಸು ಕೊಟ್ಟರೆ ಏನು ಪ್ರಯೋಜನ? ಬೇರೆಯವರ ಕಾಲೆಳೆಯುವುದರಲ್ಲೇ ಇರೋದು ಖುಷಿ’.
ಅಷ್ಟರಲ್ಲಿ ಡಿವಿಲಿಯರ್ಸ್ ಪೆವಿಲಿಯನ್‌ನತ್ತ ಕೈ ಬೀಸಿಕೊಂಡು ಹೋಗುತ್ತಿರುವುದು ಕಂಡಿತು. ಜನಸಾಗರವೂ ಹೋ ಎಂದು ಕೂಗುತ್ತಾ, ಎದ್ದು ಮನೆಕಡೆಗಭಿಮುಖವಾಯಿತು.
‘ನಮ್ಮೂರಿನ ಟೀಂಗೆ ಏನಪ್ಪಾ ಗತಿ ಬಂತು? ಮಲ್ಯಪ್ಪನಿಗೆ ಸೋಲಿನ ಮೇಲೆ ಸೋಲು ಬರಬಾರದಿತ್ತು’ ಎಂದು ಪೆಕರ ಲೊಚಗುಟ್ಟಿದ.
‘ನಮ್ಮೂರಿನ ಟೀಂ ಅಂತೀರಾ, ಒಬ್ಬರೂ ನಮ್ಮವರಿಲ್ಲ. ಅಲ್ಲೂ ಕನ್ನಡಕ್ಕೆ ಹಿನ್ನಡೆ ಆಗಿದೆ ಸಾರ್’ ಎಂದು ‘ಘಾ’ ಸ್ವಲ್ಪ ಘಾಟು ಹಾಕಿದ.
ಐಪಿಎಲ್‌ನಲ್ಲಿ ಅಂದು ಮೋಸದಾಟ
ಈ ಬಾರಿ ನಡೀತಿದೆ ಪ್ರೇಮದಾಟ
ಆರ್‌ಸಿಬಿಯಲ್ಲಿ ಕನ್ನಡಿಗರೇ ಇಲ್ಲ
ಅದಕ್ಕೆ ಐದ್‌ಮ್ಯಾಚ್ ಸೋಲ್ತಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.