ಮಕ್ಕಳಿಗೆ ದಿನದ ಕೊನೆಯ ಬೆಲ್ಲೆಂದರೆ ಅದೇನೋ ಸಡಗರ. ಜೈಲಿನಿಂದ ಬಿಡುಗಡೆಯಾದಷ್ಟೇ ಸಂಭ್ರಮ. ಲಾಂಗ್ ಬೆಲ್ ಕಿವಿಗೆ ಬಿದ್ದರೆ, ದಂಟು ಸೊಪ್ಪಿನಂತೆ ಬಾಡಿದ ಅವುಗಳ ಬಾಡಿಯಲ್ಲಿ ಕರೆಂಟಿನ ಸಂಚಲನವೇ ಆಗುತ್ತೆ. ಮುಖ ಅರಳಿ ನಗು ಚೆಲ್ಲಾಡುತ್ತದೆ. ತಮ್ಮ ಬ್ಯಾಗುಗಳನ್ನು ಬಾಚಿಕೊಂಡು, ಹೊರಗೆ ಓಡಲವರು ಸ್ವಲ್ಪವೂ ತಡಮಾಡುವುದಿಲ್ಲ. ಬೆಳಿಗ್ಗೆಯಿಂದ ಕೂತು ಬೇರೆ ಬೇರೆ ಉಪನ್ಯಾಸಕರ ಕೊರೆತ ಕೇಳಿ ಸುಸ್ತಾದ ಅವರಿಗೆ ಆ ಗಂಟೆಯ ನಾದವೇ ವಿಮೋಚನೆ.
ಒರಟಾದ ಆ ಬೆಂಚುಗಳ ಮೇಲೆ ಕೂತು ಪಾಠಗಳನ್ನು ಕೇಳುವುದು ಅಷ್ಟು ಸಲೀಸಲ್ಲ. ವರ್ಷಕ್ಕೊಮ್ಮೆ ನಾವು ಹೀಗೆ ಕೂತಿದ್ದು ತರಬೇತಿ ಪಾಠ ಕೇಳಬೇಕಾದ ಪ್ರಸಂಗ ಬರುತ್ತದೆ. ಆಗ ಪುಷ್ಠಗಳು ಅನುಭವಿಸುವ ನೋವು ವಿಚಿತ್ರ ಮಾದರಿಯಲ್ಲಿರುತ್ತವೆ. ಆಗಲೇ ನಾವೆಲ್ಲಾ ‘ಪಾಪ ಮಕ್ಕಳು ದಿನವಿಡೀ ಹ್ಯಾಗ್ರಿ ಈ ಬೆಂಚ್ ಮೇಲೆ ಕೂತಿರ್ತವೆ. ಅರ್ಧ ದಿನಕ್ಕೇ ನಮಗೆ ಏಳಬಾರದ ಕಡೆಯಲ್ಲಾ ನೋವು ಎದ್ದೇಳ್ತಿದ್ದಾವೆ’ ಎಂದು ಗೊಣಗಿಕೊಳ್ಳುತ್ತೇವೆ.
ನಮ್ಮ ಮಕ್ಕಳು ಹರಿದಾಡುವ ಚಂಚಲ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಇಷ್ಟವಿರದ ಪಾಠಕ್ಕೂ ಕಿವಿಯೊಡ್ಡುತ್ತವೆ. ಇಂಥ ಸಂಕಷ್ಟದಲ್ಲಿದ್ದಾಗ ಕೊನೆಯ ಬೆಲ್ಲು ಮಾತ್ರ ಓಹೋ... ಎಂದು ಹಾರಿಕೊಂಡು ಹೋಗಲು ಅವಕ್ಕೆ ಅವಕಾಶ ಕೊಡುತ್ತದೆ. ಈಗ ಮಕ್ಕಳ ಜಾಗದಲ್ಲಿ ಓದುಗರಾದ ನೀವೆಲ್ಲಾ ಇದ್ದೀರಿ. ಇಷ್ಟು ದಿನ ಕೊರೆದು ತಲೆತಿಂದ ನಾನು ಮೇಷ್ಟ್ರರ ಜಾಗದಲ್ಲಿದ್ದೇನೆ. ಕ್ಲಾಸ್ ಟೀಚರ್ ಅಂಕಣಕ್ಕೆ ಇದು ಲಾಂಗ್ ಬೆಲ್ ಸಮಯ.
ಪ್ರತಿ ಗುರುವಾರದ ನನ್ನ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವ ದಿನ. ಎಲ್ಲರಂತೆ ನನಗೂ ಕಾತರವಿರುತ್ತಿತ್ತು. ನನ್ನ ಬರಹಗಳನ್ನು ಓದಿ ಪ್ರಶಂಸಿಸುವ, ತಪ್ಪಾಗಿದ್ದರೆ ತಿದ್ದಿ ಹೇಳುವ ಅನೇಕ ಜನ ಓದುಗರ ಪ್ರೀತಿ ನನಗೆ ಸಿಗುತ್ತಿತ್ತು. ಫೋನು, ಇ-ಮೇಲುಗಳಲ್ಲೇ ಪರಿಚಿತರಾಗಿರುವ ಗೆಳೆಯರು ಅನೇಕ. ಅವರೆಲ್ಲರ ಮಾತುಗಳು ನನಗೆ ಹಾರ್ಲಿಕ್ಸ್, ಬೂಸ್ಟ್ ಕುಡಿದಷ್ಟು ತೃಪ್ತಿ ತರುತ್ತಿದ್ದವು. ಮತ್ತೆ ಬರೆಯಲು ಟಾನಿಕ್ಕಿನಂತೆ ಕೆಲಸ ಮಾಡುತ್ತಿದ್ವು.
ಇಷ್ಟೊಂದು ಜನರ ಪ್ರೀತಿ, ವಿಶ್ವಾಸಗಳು ನನಗೆ ಸಿಗಬಹುದೆಂದು ನಾನು ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ. ಇದನ್ನು ದೊರಕಿಸಿಕೊಟ್ಟ ಪ್ರಜಾವಾಣಿ ಸಂಪಾದಕೀಯ ಬಳಗಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಪ್ರಿನ್ಸಿಪಾಲರುಗಳನ್ನು ವಿಲನ್ ರೀತಿ ಚಿತ್ರಿಸಿದ್ದೇನೆ ಎಂದು ಕೆಲವರು ತಕರಾರು ಹೇಳುತ್ತಾರೆ. ಅದು ಹಾಗಿದ್ದರೂ ಸುಳ್ಳಲ್ಲ. ತಮ್ಮ ಹಿರಿಯ ಅಧಿಕಾರಿಗಳನ್ನು ಸದಾ ಬೈಕೊಂಡು ತಿರುಗದಿದ್ದರೆ ತಿಂದಕೂಳು ಮೈಗತ್ತುವುದಿಲ್ಲ.
ಹೀಗಾಗಿ ಏನು ಮಾಡುವುದು, ಬರೆಯಲೇಬೇಕಾಯಿತು. ನಾನು ಯಾರನ್ನೂ ಉದ್ದೇಶಿಸಿ ಬರೆಯದಿದ್ದರೂ ಕೆಲವರು ಆ ಬಡ್ಡೀಮಗ ನನ್ನ ಮೇಲೆ ಗುರಿ ಇಟ್ಟು ಬರೆದಿರೋದು ಎಂದು ಆಕ್ಷೇಪಿಸಿಕೊಂಡು ಮುಖವೂದಿಸಿಕೊಂಡಿದ್ದಾರೆ. ಆಕಸ್ಮಿಕವಾಗಿ ಕೆಲವರಿಗೆ ಅನ್ವಯಿಸಿದ್ದರೂ ಇರಬಹುದು. ವಿದ್ಯಾರ್ಥಿಗಳ, ಮೇಷ್ಟ್ರುಗಳ, ಕ್ಲಾಸ್ ರೂಮುಗಳ ಸುಖ ದುಃಖಗಳು ಈ ಮೂಲಕ ಅನಾವರಣವಾದವಲ್ಲ ಎಂಬ ಸಂತೋಷವೂ ನನಗಿದೆ.
ನನ್ನ ಕಾಲಂ ಓದಿ ಮೈಸೂರಿನಿಂದ ಬೆಳ್ಳಂಬೆಳಿಗ್ಗೆ ಏಳು ಗಂಟೆಗೆ ಫೋನು ಮಾಡುತ್ತಿದ್ದ ರಮೇಶ್ ಇಂಥದ್ದೇ ಅಪರೂಪದ ವ್ಯಕ್ತಿ. ನಿವೃತ್ತ ಎಂಜಿನಿಯರ್ ಆದ ಅವರ ಜೊತೆ ಗಂಟೆಗಟ್ಟಲೆ ಮಾತಾಡುತ್ತಿದ್ದೆ. ಅವರೂ ತಮ್ಮ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಒಂದರ್ಥದಲ್ಲಿ ಅವರ ಮಗ, ಮಗಳು, ಪತ್ನಿ ಎಲ್ಲರೂ ನನ್ನ ರಕ್ತ ಸಂಬಂಧಿಗಳಿಗಿಂತ ಮಿಗಿಲಾಗಿ ಬಿಟ್ಟರು. ಒಂದು ದಿನ ಬೆಳಿಗ್ಗೆ ರಮೇಶ್ ಅವರ ಫೋನು ಬಂತು. ಆ ಕಡೆಯಿಂದ ಅವರ ಪತ್ನಿ ದುಗುಡದಿಂದ ‘ನಾವು ಶಿವಮೊಗ್ಗಕ್ಕೆ ಇವರ ತಮ್ಮನ ಮನೆಗೆ ಬಂದಿದ್ವಿ.
ನಿಮ್ಮನ್ನು ಇವತ್ತು ಮುಖತಃ ನೋಡಿ ಮಾತಾಡಿಸಬೇಕು ಅಂತ ನಮ್ಮವರು ಹೇಳ್ತಿದ್ರು. ಅದೇನಾಯಿತೋ ನೋಡಿ, ಎದೆ ನೋವು ಅಂತ ಕುಸಿದು ಕುಂತು ಬಿಟ್ಟರು. ತಕ್ಷಣ ಇಲ್ಲಿನ ಹಾರ್ಟ್ ಆಸ್ಪತ್ರೆಗೆ ಕರ್ಕೊಂಡ್ ಬಂದ್ವಿ. ತಕ್ಷಣ ಆಪರೇಶನ್ ಆಗಬೇಕಂದ್ರು. ಅದೂ ಆಯಿತು. ಈಗ ಎಚ್ಚರವಾಗಿದ್ದಾರೆ. ನಿಮ್ಮನ್ನು ನೋಡಬೇಕು ಅಂತ ಬೆಳಿಗ್ಗೆಯಿಂದ ಕನವರಿಸುತ್ತಿದ್ದಾರೆ. ಒಂಚೂರು ಆಸ್ಪತ್ರೆಗೆ ಬರ್ತಿರಾ ಸಾರ್’ ಎಂದರು. ಅವರ ಮಾತು ಕೇಳಿದ ನನ್ನ ಮೈ ಜುಮ್ ಎಂದಿತು.
ತಕ್ಷಣ ನನ್ನ ಹೆಂಡತಿಯನ್ನು ಕರೆದುಕೊಂಡು ಆಸ್ಪತ್ರೆಗೆ ಓಡಿದೆ. ಐ.ಸಿ.ಯು ಬೆಡ್ ಮೇಲೆ ರಮೇಶ್ ಮಲಗಿದ್ದರು. ನನ್ನ ಕಂಡು ಕಣ್ತುಂಬಿಕೊಂಡರು. ‘ನಿಮ್ಮನ್ನು ಮೊದಲ ಸಲ, ಅದೂ ಇಂಥ ಸ್ಥಿತಿಯಲ್ಲಿ ನೋಡ್ತೀನಂತ ನಾನು ಊಹಿಸಿರಲಿಲ್ಲ ಸಾರ್. ಈಗ ಹೇಗಿದ್ದೀರಿ’ ಎಂದು ವಿಚಾರಿಸಿದೆ. ಪ್ರಜಾವಾಣಿಯನ್ನು ಕಳೆದ ಮೂವತ್ತು ವರ್ಷಗಳಿಂದ ಬಿಡದೆ ಓದುತ್ತಿರುವ ಅವರು ಅಪರೂಪದ ಆತ್ಮೀಯ ಮನುಷ್ಯ. ಅಂಥ ಸ್ಥಿತಿಯಲ್ಲೂ ನನ್ನ ಕಾಲಂ ಬಗ್ಗೆ ಮಾತನಾಡಲು ಶುರು ಹಚ್ಚಿಕೊಂಡರು. ‘ಆಯಾಸ ಮಾಡ್ಕೊಬ್ಯಾಡಿ ಸಾರ್.
ಮೊದಲು ಹುಷಾರಾಗಿ ಆಮೇಲೆ ಮತ್ತೆ ಮಾತಾಡೋಣ’ ಎಂದು ಹೇಳಿ ಶುಭ ಹಾರೈಸಿ ಹೊರಗೆ ಬಂದೆ. ಅವರ ಆ ಗಟ್ಟಿಪ್ರೀತಿ, ಹೃದಯಪೂರ್ಣ ಮಮಕಾರಗಳು ನನ್ನನ್ನು ಭಾವುಕನನ್ನಾಗಿ ಮಾಡಿಬಿಟ್ಟವು. ಕ್ಲಾಸ್ ಟೀಚರ್ ಅಂಕಣ ರೂಪಿಸಿದ ಇಂಥ ಅಪರೂಪದ ಮನಸ್ಸುಗಳ ಪ್ರೀತಿ ಜೀವನದಲ್ಲಿ ನನಗೆ ಸಿಕ್ಕ ಅತಿ ದೊಡ್ಡ ಉಡುಗೊರೆ ಎಂದು ನಾನು ಭಾವಿಸುವೆ.
ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ಶರಣ ಬಸಪ್ಪ ದೂರದ ರಾಯಚೂರಿನಿಂದ ಒಮ್ಮೆ ನನ್ನ ಹುಡುಕಿಕೊಂಡು ಬಂದರು. ಒಂದು ದಿನವಿಡೀ ನನ್ನ ಮನೆಯಲ್ಲಿದ್ದರು. ಅವರ ಓದುವ ಆಸಕ್ತಿ, ಹೊಸದನ್ನು ತಿಳಿದುಕೊಳ್ಳಬೇಕೆಂಬ ಹಂಬಲ ನನ್ನ ಕಣ್ಣನ್ನು ತೆರೆಸಿತು. ಅವರ ವಿನಮ್ರ ನಡವಳಿಕೆ, ತೂಕದ ಮಾತು, ಚಿಕ್ಕ ವಯಸ್ಸಿನಲ್ಲೇ ಅವರು ಗಳಿಸಿರುವ ಪಾಂಡಿತ್ಯ ನಿಜಕ್ಕೂ ಅಪರೂಪವಾದದ್ದು. ನನ್ನ ಗೆಳೆಯ ನೂರ್ ಅಹಮದ್ ನನ್ನ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಂಡ ಗೆಳೆಯ.
ಅವನು ಒಂದೊಮ್ಮೆ ಹೆಣ್ಣಾಗಿ ಹುಟ್ಟಿದ್ದರೆ ನನಗೆ ಒಳ್ಳೆಯ ಹೆಂಡತಿಯಾಗುತ್ತಿದ್ದ. ಆ ಅವಕಾಶ ತಪ್ಪಿ ಹೋಯಿತು. ಅವನಿಗೆ ಬೇಜಾರಾಗಬಾರದೆಂದು ಅವರ ಅಕ್ಕನನ್ನೇ ನಾನು ಮದುವೆಯಾಗಿದ್ದೇನೆ. ನನ್ನ ಬರವಣಿಗೆಯ ಮೊದಲ ವಿಮರ್ಶಕರು ಈ ಅಕ್ಕ ಮತ್ತು ತಮ್ಮ. ಅವರಿಬ್ಬರಿಂದ ನನಗೆ ತುಂಬಾ ಸಹಾಯವಾಗಿದೆ. ಇಶ್ರತ್ ಎಂಬ ಪುಟಾಣಿ ಮಗುವಿನ ಸಾವನ್ನು ಕುರಿತು ಬರೆದ ಕಾಲಂ ಬಹಳ ಜನರ ಮನಸ್ಸಿನಲ್ಲಿ ಉಳಿದಿದೆ.
ಇದನ್ನು ಓದಿದ ಶಿರಸಿಯ ಡಾ.ಕೆ.ಬಿ ಪವಾರ್ ಎಂಬ ಕವಿವೈದ್ಯರೊಬ್ಬರು ಭಾವುಕಗೊಂಡು ಇಶ್ರತ್ ಮೇಲೊಂದು ಪದ್ಯ ಬರೆದು ಕಳಿಸಿದರು. ಶಿವಮೊಗ್ಗದ ಗೃಹಿಣಿ ಶಬೀನಾ, ಸಾಗರದ ಸಮೀನ ಇಡೀ ಕಾಮನಬಿಲ್ಲನ್ನು ಇಲ್ಲೀ ತನಕ ಬಿಡದೆ ಓದಿದ್ದಾರೆ. ಸಿಂಧೂ ಪಾಟಕ್ ಎಂಬ ಎಪ್ಪತ್ತಾರು ವರ್ಷದ ನಿವೃತ್ತ ಶಿಕ್ಷಕಿ ನನ್ನ ಫೋನು ನಂಬರನ್ನು ತಮ್ಮ ಮೊಮ್ಮಗಳ ಮೂಲಕ ಪಡೆದುಕೊಂಡು ಮಾತಾಡಿದರು. ‘ನಾನು ಎದ್ದು ಓಡಾಡಲಾಗದ ಸ್ಥಿತಿಯಲ್ಲಿದ್ದೇನೆ.
ನಿಮ್ಮ ಅಂಕಣವನ್ನು ತಪ್ಪದೆ ಓದುತ್ತೇನೆ’ ಎಂದು ತಮ್ಮ ಬದುಕಿನ ಸಂಗತಿಗಳನ್ನೆಲ್ಲಾ ನೆನಪಿಸತೊಡಗಿದರು. ತಮ್ಮ ವೃತ್ತಿ ಜೀವನದ ಸಿಹಿ ಕಹಿ ಅನುಭವಗಳನ್ನು ಹೇಳಿಕೊಂಡರು. ಕೊನೆಯಲ್ಲಿ ‘ನಾನು ಕಣ್ಮರೆಯಾಗುವ ಮೊದಲೊಮ್ಮೆ ಬಂದು ಹೋಗಿ’ ಎಂದು ಹೇಳಿಬಿಟ್ಟರು. ಅವರಾಡಿದ ಆ ಕೊನೆಯ ಮಾತಿಗೆ ನಾನು ಕಣ್ಣೀರು ಹಾಕದೆ ಬೇರೆ ದಾರಿಯಿರಲಿಲ್ಲ.
ಅರಸೀಕೆರೆಯಿಂದ ಕೃ.ನಾಗೇಶ್ ಎಂಬ ಗೆಳೆಯರು ನನ್ನ ಬರವಣಿಗೆಯ ದೋಷಗಳನ್ನು ಪತ್ತೆ ಹಚ್ಚಿ ಹೇಳುತ್ತಿದ್ದರು. ಅನೇಕ ಸೂಕ್ತ ಸಲಹೆಗಳನ್ನು ಸೂಚಿಸುತ್ತಿದ್ದರು. ಕನ್ನಡ ಭಾಷೆಯ ಬಗ್ಗೆ ಅವರಿಗಿರುವ ಶ್ರದ್ಧೆ ಹಾಗೂ ಬದ್ಧತೆಯನ್ನು ನಾನು ತುಂಬು ಮನಸ್ಸಿನಿಂದ ಸ್ಮರಿಸುತ್ತೇನೆ. ಮಿಡ್ಲ್ ಸ್ಕೂಲ್ ಓದುವ ಮಗುವೊಂದು ನನ್ನ ಬರವಣಿಗೆ ಓದಿ ಪತ್ರ ಬರೆದಿದ್ದನ್ನು, ಬೆಂಗಳೂರಿನ ಡಾ.ಜುಲೇಖ ಎಂಬ ವೈದ್ಯೆ ಪ್ರತಿವಾರವೂ ಬಿಡದೆ ಅಂಕಣವನ್ನು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾ ಬಂದಿದ್ದನ್ನು ನಾನೆಂದೂ ಮರೆಯಲಾರೆ.
ಜೀವನದಲ್ಲಿ ವೈಚಾರಿಕ ಶಿಸ್ತನ್ನು ಕಲಿಸಿದ, ಶ್ರದ್ಧೆಯಿಂದ ಪಾಠವನ್ನು ತಯಾರಿ ಮಾಡಿಕೊಳ್ಳುವ ಮಾದರಿಯ ತಿಳಿ ತುಂಬಿದ ನನ್ನ ಪ್ರಿಯ ಮೇಷ್ಟ್ರು ಶ್ರೀಕಂಠ ಕೂಡಿಗೆ ಅವರನ್ನು ಕುರಿತು ನಾನು ಬರೆಯಲಿಲ್ಲವೆಂಬ ಕೊರಗು ನನಗಿದೆ. ಮನಸ್ಸಿಗೆ ತುಂಬ ಹತ್ತಿರ ಇರುವ ಜನರ ಬಗ್ಗೆ ಬರೆಯುವುದು ಕಷ್ಟ. ಆ ತೊಂದರೆಯನ್ನು ನಾನೂ ಅನುಭವಿಸಿದ್ದೇನೆ. ಮೇಷ್ಟ್ರುಗಳ ಅನಪೇಕ್ಷಿತ ನಡವಳಿಕೆಗಳನ್ನು ವ್ಯಂಗ್ಯವಾಗಿನೋಡುವ ಕ್ರಮವನ್ನು ನಮಗೆಲ್ಲಾ ಕಲಿಸಿದವರು ಅವರೇನೆ.
ಕಟ್ಟೆಪುರಾಣದ ಚಂದ್ರೇಗೌಡರ ಹಾಸ್ಯ ಪ್ರಜ್ಞೆ, ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳ ಪ್ರಭಾವದ ದೆಸೆಯಿಂದ ನಾನು ಇಷ್ಟೆಲ್ಲಾ ಬರೆಯಲು ಸಾಧ್ಯವಾಗಿದೆ. ಬಿ.ಎ.ಯಲ್ಲಿ ನನಗೆ ಇಂಗ್ಲೀಷ್ ಪಾಠ ಹೇಳಿದ್ದ ಹೆಗಡೆ ಸಾರ್ ಒಂದು ದಿನ ರಣ ಬಿಸಿಲಿನಲ್ಲಿ ನನ್ನ ಹುಡುಕಿಕೊಂಡು ಕಾಲೇಜಿಗೆ ಬಂದರು. ಅವರು ನನ್ನ ಅಂಕಣವನ್ನು ತಪ್ಪದೆ ಓದುತ್ತಿದ್ದರಂತೆ. ಖುಷಿಯಾಗಿ ಶಿಷ್ಯನ ಮಾತಾಡಿಸಲು ವಯಸ್ಸಾದ ಕಾಲುಗಳನ್ನೇ ಎಳಕೊಂಡು ಕಷ್ಟಬಿದ್ದು ಬಂದರು.
ಅವರ ಅಭಿಮಾನವನ್ನು ನಾನೆಂತು ಮರೆಯಲಿ. ಕ್ಲಾಸ್ ಟೀಚರ್ ಅಂಕಣ ಓದುವ ರಾಮದುರ್ಗದ ಕಾಲೇಜಿನ ಪಾಟೀಲರು ಹಾಗೂ ಅಲ್ಲಿನ ಹಿರಿಯ ಜೀವಗಳಾದ ಪ್ರೊ. ಚಿಕ್ಕನರಗುಂದ ಹಾಗೂ ಹಸನ್ ನಯೀಂ ಸುರಕೋಡ ನನ್ನನ್ನು ತಮ್ಮೂರಿಗೆ ಕರೆಸಿಕೊಂಡು ಅಳಿಯನಂತೆ ಸತ್ಕರಿಸಿದರು. ಪ್ರಜಾವಾಣಿಯ ಕಾಮನಬಿಲ್ಲು ಕೊಟ್ಟ ಉಡುಗೊರೆಯಿದು.
ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುವ ಅಕ್ಷರ ಸ್ನೇಹದ ಜನ ನನಗೆ ಆಪ್ತರಾದರು. ನನ್ನಂತೆ ಮೇಷ್ಟ್ರುಗಳಾಗಿ ದುಡಿಯುತ್ತಿರುವ ಎಸ್.ಸುಂದರ್, ಡಾ. ಕುಂಸಿ ಉಮೇಶ್, ನಂಜನಗೂಡಿನ ಪುಷ್ಟಲತಾ, ಹಾ.ಉಮೇಶ್ ಸೊರಬ, ನನ್ನ ಕ್ಲಾಸ್‌ಮೇಟ್ ಉಡುಪಿಯ ಎಸ್.ಸುಮಾ, ಮೈಸೂರಿನ ಮುನಿರಾಜು, ಮಂಗಳೂರಿನ ಡಾ.ವಾಸುದೇವ ಬೆಳ್ಳೆ, ಗುರುಗಳು ಮತ್ತು ಅಣ್ಣನೂ ಆದ ಡಾ.ರಹಮತ್ ತರೀಕೆರೆ, ಮುಂತಾದವರು ನನ್ನ ತಿದ್ದುವ ಮಾನಿಟರ್ ಕೆಲಸ ಮಾಡಿದ್ದಾರೆ. ನೆಟ್ಟಗೆ ಬರೆಯದಿದ್ದಾಗ ಜಗಳವಾಡಿದ್ದಾರೆ.
‘ಹೀಗೆ ಬರೆಯಬಹುದಿತ್ತು, ಇಂಥಲ್ಲಿ ತಪ್ಪಾಗಿದೆ, ಇದು ಸರಿಯಿಲ್ಲ’ ಎಂದೆಲ್ಲಾ ತಿಳಿಸಿ ಹೇಳಿದ್ದಾರೆ. ಇವರ ಜೊತೆ ಗೆಳೆಯರಾದ ಅನನ್ಯ ಶಿವು, ಕಿಟ್ಟಿ, ಮಹಿಷಿ, ಕುಟ್ರಿ, ಗವೀಶ್, ಎ.ಕೆ.ಚಂದ್ರಪ್ಪ, ಚನ್ನಯ್ಯ ಬಿ. ಮಾರವಳ್ಳಿ, ಮೈಸೂರಿನ ಶಿವೇಗೌಡ್ರು, ಹೆಚ್.ಎಸ್. ಮಲ್ಲಿಕಾರ್ಜುನ ಸ್ವಾಮಿ, ಲಕ್ಷಪ್ಪ, ನಾಗರಾಜ್, ಗೋಪಾಲಕೃಷ್ಣ, ನಟರಾಜ್, ಸುಂದರಮಣಿ ಮಾಡ್ಯಾಳ್ ಮುಂತಾದ ಗೆಳೆಯರು ನನಗೆ ಬರೆಯುವ ಶಕ್ತಿಯನ್ನು ತುಂಬಿದ್ದಾರೆ.
ಕಥೆಗಾರರಾದ ಕುಂ.ವೀರಭದ್ರಪ್ಪ ಸಿಕ್ಕಾಗೆಲ್ಲಾ ‘ಚಲೋ ಬರೀತಿದ್ದೀರಿ ಬರೀರಿ. ದಕ್ಷಿಣ ಕನ್ನಡದ ಕಡೆಯ ಹೆಣ್ಣು ಮಕ್ಕಳೆಲ್ಲಾ ಸಿಕ್ಕಾಗ ನಿಮ್ಮ ಫೋನ್ ನಂಬರ್ ಕೇಳ್ತಾರೆ ಕಂಡ್ರಿ’ ಎಂದು ಆಸೆ ಹುಟ್ಟಿಸಿದ್ದು ಕೂಡ ನನಗೆ ಪ್ರೇರಣೆಯಾಗಿದೆ. ಹದಿ ವಯಸ್ಸಿನ ಯುವಕರು, ‘ನೀವು ಬರೆದ ಆ ಪ್ರೇಮಪ್ರಕರಣ ಥೇಟ್ ನನ್ನದೇ ಆಗಿತ್ತು ಸಾರ್. ಅದನ್ನು ನಿಮಗೆ ಯಾರು ಹೇಳಿದರು’ ಎಂದು ಕೇಳಿದ್ದೂ ಇದೆ. ‘ನೀವು ಬರೆಯೋದೆಲ್ಲಾ ನಿಜಾನ? ನಮಗೇನೋ ಕೆಲವೆಲ್ಲಾ ಸುಳ್ಳು ಅನ್ನಿಸುತ್ತೆ’ ಎಂದು ಅನುಮಾನ ವ್ಯಕ್ತಪಡಿಸಿದವರೂ ಇದ್ದಾರೆ.
ಸಾವಿನ ಸಂಗತಿ ಬರೆದಾಗ ಅತ್ತವರಿದ್ದಾರೆ. ತಮಾಷೆ ಪ್ರಸಂಗಗಳಿಗೆ ನಕ್ಕವರಿದ್ದಾರೆ. ನಿಮ್ಮ ಅನುಭವ ನಮ್ಮದೂ ಆಗಿದೆ ಎಂದು ನನ್ನ ಮಾತಿಗೆ ತಮ್ಮ ಅನುಭವ ಕೂಡಿಸಿದವರೂ ಇದ್ದಾರೆ. ಅವರೆಲ್ಲರ ಮಾತು, ಅಭಿಮಾನಕ್ಕೆ, ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿರುತ್ತೇನೆ. ಈ ಅಂಕಣದ ಬರಹಗಳು ಪುಸ್ತಕವಾಗಲೆಂಬ ಹಂಬಲವನ್ನು ಬಹಳ ಜನ ಓದುಗರು ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಬಳಗ ನನಗೆ ಕೊಟ್ಟ ಈ ಅವಕಾಶವನ್ನು ಸ್ಮರಿಸುತ್ತಾ ಕ್ಲಾಸ್ ಟೀಚರ್ ಪಾಠದ ಕೊನೆಯ ಬೆಲ್ಲು ಹೊಡೆಸುತ್ತಿದ್ದೇನೆ. ಇ-ಮೇಲ್ ಮೂಲಕ ಗೆಳೆಯರಾದ ಅನೇಕ ಓದುಗರಿದ್ದಾರೆ. ಅವರನ್ನು ನಾನು ಮುಖತಃ ನೋಡಿಲ್ಲ. ಅವರೆಂದಾದರೂ ಸಿಗಬಹುದು. ಅವರಿಗೆಲ್ಲಾ ವಿಶೇಷ ಧನ್ಯವಾದಗಳನ್ನು ಈ ಕೊನೆಯ ಅಂಕಣದ ಮೂಲಕ ಸಮರ್ಪಿಸುತ್ತೇನೆ. ಎಲ್ಲರಿಗೂ ಮತ್ತೊಮ್ಮೆ ಪ್ರೀತಿಪೂರ್ವಕ ನಮಸ್ಕಾರಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.