ಒಂದು ಊರಿನಲ್ಲಿ ಒಬ್ಬ ತರಲೆ ತಮ್ಮಯ್ಯ ಎಂಬ ಮನುಷ್ಯನಿದ್ದ. ಊರ ಜನರಿಗೆ ತೊಂದರೆ ಕೊಡೋದ್ರಲ್ಲಿ ಅವನದ್ದು ಎತ್ತಿದ ಕೈ. ಯಾವ ಕೆಲಸವೂ ಇಲ್ಲದ ಸೋಮಾರಿ. ಹಲ್ಲಂಡೆ ಹೊಡ್ಕೊಂಡು ಎಲ್ಲರಿಗೂ ಬೆದರಿಸಿಕೊಂಡು ಓಡಾಡಿ ಕೊಂಡಿದ್ದ. ಊರ ಜನರೂ ಇವನ ಥರಾವರಿ ಕಾಟದಿಂದ ರೋಸಿ ಹೋಗಿದ್ದರು.
ಅವನ ಕಣ್ಣು, ಬಾಯಿಗೆ ಸಿಗದಂತೆ ಎಲ್ಲಾ ಅಂಜಿಕೊಂಡು ಓಡಾಡುತ್ತಿದ್ದರು. ಈ ಸಂಗತಿಯೇ ತಮ್ಮಯ್ಯನಿಗೆ ವರದಾನವಾಗಿತ್ತು. ಪೊಲೀಸ್ ಇಲಾಖೆಗೆ, ಸರ್ಕಾರಕ್ಕೆ ಆಗಾಗ ಪತ್ರ ಬರೆದು ‘ಊರ ಜನ ನನಗೆ ತೊಂದರೆ ಕೊಡುತ್ತಿದ್ದಾರೆ; ನನ್ನ ಪ್ರಾಣ ಅಪಾಯದಲ್ಲಿದೆ ಕಾಪಾಡಿ’ ಎಂದು ಸುಳ್ಳು ಸುಳ್ಳೇ ಮೂಕರ್ಜಿ ಬರೆಯುತ್ತಿದ್ದ. ತರಲೆ ಎಬ್ಬಿಸುವ ಪತ್ರಗಳನ್ನು ಗೀಚುವುದು ಅವನ ರಕ್ತಗತ ಸ್ವಭಾವವಾಗಿ ಬಿಟ್ಟಿತ್ತು.
ಓಡಾಡುವ ಜನ ನೋಡುವಂತೆ ಮನೆ ಕಟ್ಟೆ ಮೇಲೆ ಕೂತು ಅರ್ಜಿಗಳನ್ನು ಕೆತ್ತುತ್ತಿದ್ದ. ಅವನಿಗೆ ನಿರೀಕ್ಷಿತ ಗೌರವ ಕೊಡದ, ಕೇಳಿದ ತಕ್ಷಣ ಕಾಸು ಬಿಚ್ಚದ ಎಲ್ಲರ ಹೆಸರುಗಳ ಮೇಲೂ ದೂರುಗಳನ್ನು ಬರೆದು ಕಳಿಸುತ್ತಿದ್ದ. ಇವನ ಈ ದುಷ್ಟಚಟಕ್ಕೆ ಬಹಳಷ್ಟು ಜನ ಬಲಿಯಾಗಿ ಪೊಲೀಸ್ ಸ್ಟೇಶನ್ ಮೆಟ್ಟಿಲನ್ನೂ ತುಳಿದು ಬಂದಿದ್ದರು. ಈ ಶನಿ ಹೇಗಾದರೂ ಊರಿನಿಂದ ತೊಲಗಿದರೆ ಸಾಕಪ್ಪ ಎಂದು ಊರ ದೇವರಲ್ಲಿ ಬೇಡಿಕೊಳ್ಳುತ್ತಿದ್ದರು.
ಒಂದು ದಿನ ಈ ತರಲೆ ತಮ್ಮಯ್ಯ ತಾನೇ ವಿಧೇಯಕನಾಗಿ ಊರ ಜನರ ಮುಂದೆ ಬಂದ. ‘ನಾನು ನಿಮಗೆಲ್ಲಾ ಬಹಳ ತೊಂದರೆ ಕೊಟ್ಟಿದ್ದೀನಿ ನನ್ನನ್ನು ಕ್ಷಮಿಸಿ’ ಎಂದು ದೈನ್ಯದಿಂದ ಬೇಡಿಕೊಂಡ. ಅವನ ಕಣ್ಣೀರಿನ ಮಾತಿಗೆ ಜನ ಕರಗಿ ಹೋದರು. ‘ಇಲ್ಲೀ ತಂಕ ಆಗಿದ್ದು ಆಗೋಯ್ತು.
ದೇವ್ರು ನಿನಗೆ ಈಗಲಾದರೂ ಒಳ್ಳೇ ಬುದ್ಧಿ ಕೊಟ್ನಲ್ಲ. ಅಷ್ಟೇ ಸಾಕು ಬಿಡು. ಇನ್ನು ಊರಲ್ಲಿ ತರಲೆ ಎಬ್ಬಿಸದೆ ಆರಾಮಾಗಿರು’ ಎಂದು ಸಾರಾಸಗಟಾಗಿ ಊರ ಜನ ತಮ್ಮಯ್ಯನನ್ನು ಕ್ಷಮಿಸಿದರು. ಆಗ ಅವನು ‘ನನ್ನದೊಂದು ಕೊನೆಯ ಕೋರಿಕೆ ಐತೆ. ನನ್ನ ಊರವರಾದ ನೀವದನ್ನು ನೆಡೆಸಿಕೊಡಬೇಕು’ ಎಂದು ವಿನೀತನಾಗಿ ಭಿನ್ನವಿಸಿಕೊಂಡ.
‘ಆಯ್ತು ಅದೇನು ನಿಂದು ಹೇಳಪ್ಪ’ ಎಂದು ಊರವರು ಮರುಕದಿಂದ ಕೇಳಿದರು. ಅದಕ್ಕವನು ಮತ್ತಷ್ಟು ಮುಖ ಸಪ್ಪೆ ಮಾಡಿಕೊಳುತ್ತಾ ‘ಎಲ್ರಿಗೂ ಅಯ್ಯೋ ಅನ್ಸಿರೋ ನಾನು ಸತ್ತೋಗಬೇಕು ಅಂದ್ಕೊಂಡಿದ್ದೀನಿ. ನಾನು ಸತ್ ಮೇಲೆ ನನ್ನ ಶವದ ಪೆಟ್ಟಿಗೆಗೆ ನಿಮ್ ನಿಮ್ ಪಾಲಿನ ಒಂದೊಂದು ಮೊಳೆ ಹೊಡೆಯಬೇಕು.
ಇದೇ ನನ್ನ ಕೊನೇ ಆಸೆ. ಇದನ್ನು ನೀವೆಲ್ಲಾ ನೆಡೆಸಿಕೊಡ್ತೀರಂತ ನನಗೆ ಪ್ರಮಾಣ ಮಾಡಬೇಕು. ಆಗ್ಲೆ ನಾನ್ ಸಾಯೋದು’ ಎಂದು ಕರುಣೆ ಉಕ್ಕುವಂತೆ ಆಗ್ರಹಿಸಿದ. ಊರವರು ಇವನ ಸಾವಿನ ಮಾತು ಕೇಳಿ ದಂಗಾಗಿಬಿಟ್ಟರು. ಕರುಣೆ, ಪ್ರೀತಿಯ ಕಣ್ಣುಗಳಿಂದ ಅವನನ್ನು ಕಂಡರು. ‘ಸಾಯೋವಂಥದ್ದು ಏನಾಗೈತಪ್ಪ ನಿಂಗೆ.
ನೀನು ಒಳ್ಳೇಯವನಾಗಿದ್ದೀಯಲ್ಲ ಅಷ್ಟೇ ಸಾಕು. ನಾವು ಇನ್ಮುಂದೆ ನಿನಗೆ ವೈನಾಗಿ ನೋಡ್ಕೋತೀವಿ. ಜೀವಂತವಾಗೇ ಇರು. ಸಾಯಕ್ಕೆಲ್ಲಾ ಹೋಗಬೇಡ’ ಎಂದರು. ಅವನು ಯಾರ ಮಾತೂ ಕೇಳೋ ಸ್ಥಿತಿಯಲ್ಲಿರಲಿಲ್ಲ. ಹಟಕ್ಕೆ ಬಿದ್ದಿದ್ದ. ‘ದೇವರ ಕರೆ ಆಗೈತಿ ಅದನ್ನ ನಿಲ್ಸಾಕಾಗದಿಲ್ಲ. ನೀವು ಮಾತು ಕೊಡಿ ಮೊದಲು’ ಎಂದು ಪಟ್ಟು ಹಿಡಿದ. ಊರವರು ‘ನಿನ್ನಾಸೆ ಇದ್ದಂಗಾಗಲಿ ಬಿಡು.
ದೇವ್ರು ಅಪ್ಪಣೆ ಬೇರೆ ಆಗೈತೆ ಅಂತ ನುಡೀತೀಯ’ ಎಂದು ಭಾವುಕಗೊಂಡು ಕೈಮೇಲೆ ಕೈಯಿಟ್ಟು ಭಾಷೆ ಕೊಟ್ಟರು. ಆ ದಿನ ಸಂಜೆಯೇ ತರಲೆ ತಮ್ಮಯ್ಯ ಸತ್ತು ಹೋದ. ಅವನ ಕೊನೆ ಆಸೆಯಂತೆ ಊರ ಜನ ಬಂದು ಸೇರಿದರು. ಅವನ ಶವದ ಪೆಟ್ಟಿಗೆಗೆ ತಮ್ಮ ಪಾಲಿನ ಮೊಳೆಗಳನ್ನು ಹೊಡೆದು ಸ್ಮಶಾನದಲ್ಲಿ ಮಣ್ಣು ಮಾಡಿದರು.
ಮಾರನೆಯ ದಿನ ಊರಿಗೆ ಪೊಲೀಸ್ ಜೀಪು ಬಂತು. ಅವರ ಕೈಯಲ್ಲಿ ಊರ ಜನರ ಹೆಸರಿದ್ದ ಒಂದು ಉದ್ದ ಪಟ್ಟಿಯಿತ್ತು. ಹೆಸರಿದ್ದ ಜನರನ್ನೆಲ್ಲಾ ಅರೆಸ್ಟ್ ಮಾಡಲು ಪೊಲೀಸರು ರೆಡಿಯಾಗಿ ಬಂದಿದ್ದರು. ಊರ ಜನ ಪೊಲೀಸರಲ್ಲಿ ಯಾಕೆಂದು ವಿಚಾರಿಸಿದಾಗ ತರ್‍ಲೆ ತಮ್ಮಯ್ಯ ಸಾಯೋ ಮೊದಲು ಪೊಲೀಸರಿಗೆ ಒಂದು ಕಂಪ್ಲೇಂಟ್ ಬರೆದು ಪೋಸ್ಟ್ ಮಾಡಿ ಹೋಗಿದ್ದ.
ಅದರಲ್ಲಿ ‘ಸ್ವಾಮಿ... ನಮ್ಮೂರಿನ ಜನ ದುಷ್ಟರಿದ್ದಾರೆ. ಎಲ್ಲಾ ಸೇರಿ ನನ್ನ ಸಾಯಿಸುವ ಪ್ಲಾನು ರೂಪಿಸಿಕೊಂಡಿದ್ದಾರೆ. ನನ್ನ ಜೀವಂತ ಹೂತು ಹಾಕಲು ಶವದ ಪೆಟ್ಟಿಗೆ ತಯಾರಿಸಿಟ್ಟುಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇವರೆಲ್ಲಾ ನನ್ನ ಸಾಯಿಸಿದ ಮೇಲೆ ನನ್ನ ಶವದ ಪೆಟ್ಟಿಗೆಗೆ ಒಂದೊಂದು ಮೊಳೆಗಳನ್ನು ಹೊಡೆಯಲಿದ್ದಾರೆ. ನನ್ನ ಸಾವಿಗೆ ಕಾರಣವಾಗುವ ಇವರ್‍್ಯಾರನ್ನೂ ಬಿಡಬೇಡಿ.
ನನ್ನ ಕೊಲೆಗೆ ಇವರೆಲ್ಲರೂ ಕಾರಣ’ ಎಂದು ತನಗಾಗದವರ ಹೆಸರುಗಳಿದ್ದ ಒಂದು ದೊಡ್ಡ ಪಟ್ಟಿಯನ್ನು ಕೊಟ್ಟಿದ್ದ. ಊರ ಜನ ‘ಬಡ್ಡೀ ಮಗ ಬದುಕಿದ್ದಾಗಲೂ ಜೀವ ತಿಂದ. ಸತ್ತ ಮೇಲೂ ತನ್ನ ಐನಾತಿ ಕೆಲಸ ಮಾಡೇ ಹೋಗಿದ್ದಾನಲ್ಲಪ್ಪೋ... ಕರ್ಮದ ನನ್ಮಗ’ ಎಂದು ಶಪಿಸಿಕೊಂಡರು.
ತಮ್ಮ ಮೂಗಿನ ನೇರಕ್ಕೆ ಮೂಕರ್ಜಿ ಬರೆದು ಜನರನ್ನು ಗೋಳಾಡಿಸುವ ತರಲೆ ತಮ್ಮಯ್ಯನಂಥ ಪಾಖಡಗಳು ಇವತ್ತೂ ನಮ್ಮ ನಡುವೆ ಇದ್ದಾರೆ. ಈ ಕರ್ಮದ ಕೆಲಸ ಮಾಡುವಲ್ಲಿ ಅವರಿಗೆ ಏನು ಸುಖವಿರುತ್ತೋ ಗೊತ್ತಿಲ್ಲ. ಇವರ ತಲೆ ಮಾತ್ರ ಇದೊಂದೇ ಕೆಲಸದಲ್ಲಿ ಸದಾ ಸಕ್ರಿಯವಾಗಿರುತ್ತದೆ. ತಮಗಾಗದವರ ಮೇಲೆ ಪುಕಾರುಗಳನ್ನು ಹುಟ್ಟಿಸುವುದು, ಸುಳ್ಳು ಕಥೆಗಳನ್ನು ಕಟ್ಟುವುದು, ತೇಜೋವಧೆಗೆ ಪ್ರಯತ್ನಿಸುವುದು ಇವರಿಗೆ ನೀರು ಕುಡಿದಷ್ಟೇ ಸಲೀಸು.
ಕೆಲವರು ಇದನ್ನೇ ತಮ್ಮ ಆದಾಯದ ಮೂಲವನ್ನಾಗಿಯೂ ಮಾಡಿಕೊಂಡಿದ್ದಾರೆ. ಸಭ್ಯ ಜನರಿಗೆ ಇವರಿಂದ ಆಗುವ ತೊಂದರೆ, ಕಿರಿಕಿರಿಗಳು ಅಪಾರ. ನಮ್ಮ ಮೇಷ್ಟ್ರು ಕುಲದಲ್ಲೂ ಇಂಥ ಪುಣ್ಯಾತ್ಮ ಜನರಿದ್ದಾರೆ. ಸದಾ ಕುಹಕ, ಪಿತೂರಿಗಳ ಜೇಡರ ಬಲೆ ಹೆಣೆಯುವ ಇವರು ತಮ್ಮ ಕ್ರಿಮಿಬುದ್ಧಿ ಯಿಂದ ಬಹಳ ಜನರ ನೆಮ್ಮದಿ ಕೆಡಿಸಬಲ್ಲರು.
ನಿವೃತ್ತಿಗೆ ಇನ್ನೊಂದು ವರ್ಷವಷ್ಟೇ ಬಾಕಿಯಿರುವ ನಮ್ಮ ಸದಾಶಿವ ಮೇಷ್ಟ್ರಿಗೊಬ್ಬ ತರಲೆ ತಮ್ಮಯ್ಯ ಗಂಟು ಬಿದ್ದಿದ್ದಾನೆ. ಅವನು ಯಾರಂತ ಅವರಿಗೂ ಗೊತ್ತಿಲ್ಲ. ಮೊದಲ ಸಲ ಮೂಕರ್ಜಿ ಬಂದಾಗ ಸದಾಶಿವರು ತಡಬಡಾಯಿಸಿ ಹೋದರು. ಸೌಮ್ಯ ಎನ್ನುವ ಹುಡುಗಿ ‘ಮೇಷ್ಟ್ರು ನನ್ನ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ’ ಎಂದು ದೂರು ಬರೆದಿದ್ದಳು.
ಇಂಥ ಕಠಿಣ ಅಪಾದನೆಯನ್ನು ಅವರೆಂದೂ ಎದುರಿಸಿರಲಿಲ್ಲ. ವಿಷಯ ಸೀರಿಯಸ್ಸಾಗಿದೆ ಎಂದರಿತ ಪೊಲೀಸರು ದೂರಿನ ಪ್ರತಿ ಹಿಡಿದುಕೊಂಡು ಕಾಲೇಜಿಗೆ ಬಂದಾಗ, ಸದಾಶಿವರು ತತ್ತರಿಸಿ ಹೋದರು. ‘ಚೆನ್ನಾಗಿ ಸರ್ವೀಸ್ ಮಾಡಿ. ಇನ್ನೇನು ರಿಟೈರ್ಡ್ ಆಗ್ತಿದ್ದೀನಿ ಅನ್ನೋ ಟೈಮಲ್ಲಿ ಇದ್ಯಾವುದೋ ಶನಿ ಹೆಗಲಿಗೇರಿತಲ್ಲಾ’ ಎಂದು ಸಂಕಟಪಟ್ಟು ರೋಧಿಸಿದರು.
ಸಜ್ಜನರಾಗಿದ್ದ ಸದಾಶಿವರಿಗೆ ಹೀಗೆ ಸಿಡಿಲಂತೆ ಎರಗಿ ಬಂದ ಮಹಾ ಆಪಾದನೆ ತಡೆದುಕೊಳ್ಳಲಾಗಲಿಲ್ಲ. ಬಂದಂಥ ಅರ್ಜಿಗೆ ವಿಳಾಸವಿರಲಿಲ್ಲ. ಅಸಲಿಗೆ ಸೌಮ್ಯ ಎನ್ನುವ ಹುಡುಗಿಯಿದ್ದ ತರಗತಿಗೆ ಸದಾಶಿವರು ಕ್ಲಾಸನ್ನೇ ತೆಗೆದುಕೊಳ್ಳುತ್ತಿರಲಿಲ್ಲ. ಆದರೂ, ಆ ಹೆಣ್ಣು ಮಗುವನ್ನು ಕರೆಸಿ ವಿಚಾರಿಸಿದಾಗ ಅವಳು ಇದಕ್ಕೂ ತನಗೂ ಸಂಬಂಧವಿಲ್ಲ ಎಂದು ಉತ್ತರಿಸಿದಳು.
ಈ ಹಿಂದೆ ಓದು ಮುಗಿಸಿ ಹೋದವರು ಯಾರಾದರೂ ಬರೆದಿರಬಹುದಾ? ಎಂಬ ಬಗ್ಗೆಯೂ ಸುದೀರ್ಘ ತನಿಖೆ ನಡೆಯಿತು. ಸದಾ ನಗುನಗುತ್ತಾ, ತಮಾಷೆಯಿಂದ ಇರುತ್ತಿದ್ದ ಸದಾಶಿವರಿಗೆ ಮಂಕು ಹಿಡಿದಂತಾಯಿತು. ಅವರ ಇಷ್ಟು ವರ್ಷದ ಸರ್ವೀಸಿನಲ್ಲೇ ಇಂಥ ಮರ್ಮಾಘಾತವನ್ನು ಅವರು ಅನುಭವಿಸಿರಲಿಲ್ಲ.
ಹಲವು ಹಂತದ ವಿಚಿತ್ರ ತನಿಖೆಗಳು ಮತ್ತೆ ಮತ್ತೆ ನಡೆದವು. ಮೂರು ತಿಂಗಳು ಸತತವಾಗಿ ನಡೆದ ವಿಚಾರಣೆ, ಸ್ಟೇಷನ್ನಿನ ಅಲೆದಾಟ, ಹೇಳಿದ್ದನ್ನೇ ಮತ್ತೆ ಮತ್ತೆ ಒದರಾಡಬೇಕಾದ ಅನಿವಾರ್ಯತೆಗಳನ್ನೆದುರಿಸಿ ಸದಾಶಿವರು ಹೈರಾಣಾದರು. ಮಾನಸಿಕವಾಗಿ ನೊಂದುಕೊಂಡರು.
ಇದರ ಪರಿಣಾಮ ಅವರ ಆರೋಗ್ಯದ ಮೇಲಾಗಿ ದೇಹ, ಮನಸ್ಸುಗಳು ಏರುಪೇರಾದವು. ಕೆಲಸ ಬಿಡ್ತೀನಿ ಅನ್ನೋ ಹಂತಕ್ಕೂ ಬಂದರು. ಮಕ್ಕಳಿಗೆ ಒಳ್ಳೆಯ ಮೇಷ್ಟರಾಗಿದ್ದ ಸದಾಶಿವರಿಗೆ ಒಂದು ಸಣ್ಣ ಮೂಕರ್ಜಿ ವಾಂತಿಭೇಧಿ ಎಲ್ಲಾ ಮಾಡಿಸಿ ಬಿಟ್ಟಿತು. ತನ್ನ ಸುತ್ತಮುತ್ತ ಇರುವ ಯಾರೋ ಗೆಳೆಯರೇ ಈ ಹರಾಮಿ ಕೆಲಸ ಮಾಡಿರಬಹುದೇ ಎಂಬ ಗುಮಾನಿಯೂ ಅವರೊಳಗೆ ಹುಟ್ಟಿತು.
ಅಡಕತ್ತರಿಯಲ್ಲಿ ಸಿಕ್ಕು ಒದ್ದಾಡುವಾಗ ಹೀಗೆ ಎಲ್ಲರ ಮೇಲೆ ಅನುಮಾನಗಳು ಮೂಡುವುದು ಸಹಜ. ಯಾರು ನನ್ನ ಮೇಲೆ ಬರೆಸಿರಬಹುದೆಂದು ತಿಂಗಳಾನುಗಟ್ಟಲೆ ತಡಕಾಡಿದರು. ತಮಗಿರಬಹುದಾದ ಶತ್ರುಗಳ ತಲೆ ಲೆಕ್ಕಹಾಕಿದರು. ಹೊಸ ವೈರಿಗಳು ಯಾರು ಹುಟ್ಟಿ ಕೊಂಡಿರಬಹುದೆಂದು ಊಹಿಸಿದರು. ಯಾವ ಉತ್ತರವೂ ಸಿಗಲಿಲ್ಲ.
ಹೀಗೆ ಮೂರು ತಿಂಗಳ ವನವಾಸ ಅನುಭವಿಸಿದ ಮೇಲೆ ಎಲ್ಲರಿಗೂ ಇದೊಂದು ಸುಳ್ಳು ದೂರಿನ ಮೂಕರ್ಜಿ ಎಂಬುದು ಖಾತರಿಯಾಗತೊಡಗಿತು. ಬದುಕಿದೆ ಎಂದು ಸದಾಶಿವರು ಸುಧಾರಿಕೊಂಡರು. ಅಷ್ಟರಲ್ಲೇ ಕಾವ್ಯ ಎಂಬ ಹೆಸರಿನಿಂದ ಮತ್ತೊಂದು ‘ಲೈಂಗಿಕ ಕಿರುಕುಳ’ದ ಅರ್ಜಿ ಅವರ ಹೆಸರಿನಲ್ಲಿ ಮೇಲಿನಿಂದ ಗುದ್ದುಕೊಂಡು ಬಂತು.
ಆ ಹೆಸರಿನ ಎಲ್ಲಾ ಮಕ್ಕಳ್ಳನ್ನು ಕರೆಸಿ ಮತ್ತೆ ಹೊಸ ವಿಚಾರಣೆಗಳು ನಡೆದವು. ಏನು ಮಾಡಿದರೂ ಆ ದೂರಿನ ಕಾವ್ಯಕನ್ನಿಕೆ ಸಿಗಲಿಲ್ಲ. ವಿಷಯ ಸುಳ್ಳಿದ್ದರೂ, ಸದಾಶಿವರು ಮತ್ತೊಂದು ಸುತ್ತಿನ ವಿಚಾರಣೆಗೆ ತಲೆಕೊಡಬೇಕಾಯಿತು. ಅದೇ ಕಥೆಯನ್ನು ಅನೇಕ ವಿಚಾರಣಾ ಆಯೋಗಗಳ ಎದುರು ಹೇಳಿ, ಸಮಜಾಯಿಷಿ ಬರೆದುಕೊಟ್ಟು ಸುಸ್ತಾದರು.
ಇಂಥ ಆರೋಪ ಅವರ ಮೇಲೆ ಬಂದಿದ್ದು, ಅತ್ಯಂತ ಅಸಹಜವೆಂಬುದು ಅವರನ್ನು ಬಲ್ಲ ನಮಗೆಲ್ಲಾ ತಿಳಿದಿತ್ತು. ಆದರೂ, ಅವಮಾನದ, ಅನುಮಾನದ ಉಳಿಪೆಟ್ಟುಗಳನ್ನು ಅವರು ತಿನ್ನಲೇಬೇಕಿತ್ತು. ಕೆಲವರು ಇದ್ದರೂ ಇರಬಹುದು ಎಂದು ಗೊಣಗಿಕೊಂಡರು. ಎಲ್ಲರ ಕಣ್ಣಿಗೆ ಅನುಮಾನದ ವಸ್ತುವಾಗಿ, ಸದಾಶಿವರು ಮೂರು ವಸಂತಗಳನ್ನು ನೆಮ್ಮದಿ ರಹಿತವಾಗಿ ಕಳೆದರು.
ಅವರ ಮಾನಸಿಕ ಸ್ಥಿತಿ ಪೂರಾ ಹಾಳಾಗಿ ಹೋಯಿತು. ಕಣ್ಣೀರು ಹಾಕುತ್ತಲೇ, ಇದರ ಹಿಂದಿರುವ ತರಲೆ ತಮ್ಮಯ್ಯ ಯಾರು ಅನ್ನೋದನ್ನು ಅವರು ಬಿಡುವಿಲ್ಲದೆ ಅನ್ವೇಷಣೆ ಮಾಡುತ್ತಲೇ ಇದ್ದರು. ದೂರದ ಸಂಬಂಧಿಯೊಬ್ಬ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಬಡಿಯುತ್ತಿರುವ ಗೂಟ ಇದಿರಬಹುದೇ ಎಂಬ ಬಗ್ಗೆಯೂ ಅವರು ತಮ್ಮ ಸಂಶೋಧನೆ ಯನ್ನು ನಡೆಸುತ್ತಿದ್ದಾರೆ.
ತಮ್ಮ ರಿಟೈರ್ಡ್‌ಮೆಂಟ್ ಆಗುವುದರೊಳಗೆ ಮತ್ತ್ಯಾವ ಹೊಸ ಹುಡುಗಿಯ ಹೆಸರಲ್ಲಿ ಮೂಕರ್ಜಿ ಬರುವುದೋ, ಎಂಬ ದುಗುಡದಲ್ಲೇ ಅವರು ಕಾಲ ನೂಕುತ್ತಿದ್ದಾರೆ. ಅವರಿಗೆ ಫಿಟ್ಟಿಂಗ್ ಇಟ್ಟ ತರ್‍ಲೆ ತಮ್ಮಯ್ಯನನ್ನು ನಿಖರವಾಗಿ ಪತ್ತೆ ಮಾಡಲಾಗದೆ ಒದ್ದಾಡುತ್ತಿದ್ದಾರೆ. ದಿನದಿನವೂ ಅವನ ನಾಮವನ್ನು ಭಜಿಸುತ್ತಿದ್ದಾರೆ.
ಮೂಕರ್ಜಿಯ ದೂರಿಗೆ ಅರ್ಹರಾದವರು ನಮ್ಮ ನಡುವೆ ಬಹಳಷ್ಟು ಜನರಿದ್ದಾರೆ. ಅಂಥವರಿಗೆ ಖಂಡಿತಾ ಶಿಕ್ಷ್ಷೆಯಾಗಬೇಕು. ಇದಕ್ಕಾಗಿ ಒಬ್ಬ ಒಳ್ಳೆ ತಮ್ಮಯ್ಯನ ಅವಶ್ಯಕತೆಯಿದೆ. ಮೂಕರ್ಜಿಗಳ ಜಾಗದಲ್ಲಿ ನಿಜವಾದ ಅರ್ಜಿಗಳು ಬರಬೇಕಾಗಿದೆ. ನೊಂದವರ ದೂರಿಗೆ ನಿಜವಾದ ಮಾನ್ಯತೆ ಸಿಗಲು ಈ ಮೂಕರ್ಜಿಗಳ ಹಾವಳಿ ನಿಲ್ಲಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.