ಇಂಥ ಉಪನ್ಯಾಸಕರೂ ಇರ್ತಾರಾ ಅಂತ ನಿಮಗೆ ಆಶ್ಚರ್ಯವಾಗಬಹುದು. ಆದರಿದು ನಿಜ. ಆತನ ಹೆಸರು ಚಂದ್ರಶೇಖರ. ಪಕ್ಕಾ ವಿಕ್ಷಿಪ್ತ ಮನಸ್ಸಿನ ಮನುಷ್ಯ. ಕಾಲೇಜಿನ ಎಲ್ಲಾ ಆಗುಹೋಗುಗಳಲ್ಲೂ ಆತ ಮೂಗು ತೂರಿಸುತ್ತಿದ್ದ. ಸಣ್ಣಪುಟ್ಟ ತಪ್ಪು ಕಂಡು ಹಿಡಿಯೋದು, ಕಿರಿಚಾಡುವುದು ಚಂದ್ರಶೇಖರ ನಿಗೆ ರಕ್ತಗತವಾಗಿ ಹೋಗಿತ್ತು. ಆತ ಯಾವಾಗಲೂ ಕಾದ ಎಣ್ಣೆ ಬಾಣಲಿಯಂತೆ ಹೊಗೆಯಾಡುತ್ತಿದ್ದ.
ಆತನ ಬಾಯಿಗೆ ಒಂದು ದಿನವೂ ಬೀಗ ಬೀಳಲಿಲ್ಲ. ಸಿಟ್ಟಾಗಲು ಅವನಿಗೆ ದೊಡ್ಡ ಕಾರಣಗಳೂ ಬೇಕಿರಲಿಲ್ಲ. ಕಾಲೇಜಿನಲ್ಲಿ ಸಿಗುವ ಜುಜುಬಿ ಕಾರಣಗಳನ್ನೇ ಜೋಡಿಸಿ ಕೊಂಡು ಆತ ಹಾರಾಡುತ್ತಿದ್ದ. ಇರುವ ಕಡ್ಡಿಗಳಲ್ಲೇ ಆತ ಬೆಟ್ಟವನ್ನು ಕಟ್ಟುತ್ತಿದ್ದ. ದಿನಾ ಏನಾ ದರೊಂದು ವಿಷಯ ಕೆದಕಿ ಕಾಲೇಜಿನಲ್ಲಿ ಕೂಗಾಡದಿದ್ದರೆ ಅವನು ತಿಂದಕೂಳು ಕರುಳಿನಲ್ಲಿ ಕರಗುತ್ತಿರಲಿಲ್ಲ. ಅವನಿಗೆ ಬುಲ್ಡೆ ಚಂದ್ರ, ಚೌರಶೇಖರ, ರಂದ್ರಶೇಖರ ಎಂಬ ಅಡ್ಡ ಹೆಸರುಗಳಿದ್ದವು.
ಅವನಿಗೆ ಸಿಟ್ಟು ತರಿಸುವ ಕಾರಣಗಳು ನಮಗೆಲ್ಲಾ ತಮಾಷೆ ಎನಿಸುತ್ತಿದ್ದವು. ಉದಾ ಹರಣೆಗೆ ಪ್ರಿನ್ಸಿಪಾಲರು ತರಿಸಿದ ಟೀಯಲ್ಲಿ ಸಕ್ಕರೆ ಕಮ್ಮಿ ಇತ್ತು. ನನಗೆ ಕೊಟ್ಟ ಟೀ ಆರಿ ಹೋಗಿತ್ತು. ಲಾಂಗ್ ಬೆಲ್ ಹೊಡೆಯುವುದು ಇವತ್ತು ಎರಡು ನಿಮಿಷ ತಡವಾಯಿತು; ತರಗತಿಯಲ್ಲಿ ಕೆಲ ಹುಡುಗರು ಇವತ್ತು ನೋಟ್ಸ್ ತಂದಿರಲಿಲ್ಲ; ಆ ಹುಡುಗ ನಾನು ಕರೆದ ಹಾಜರಿಗೆ ತಕ್ಷಣಕ್ಕೆ ‘ಎಸ್ ಸಾರ್’ ಅಂತ ಅನ್ನಲಿಲ್ಲ. ಬೇಕಂತ ನಿಧಾನವಾಗಿ ಹೇಳಿದ. ಅವನಿಗೆ ಹೀಗೆ ಮಾಡು ಅಂತ ನನಗಾಗದವರು ಯಾರೋ ಪಿತೂರಿ ಮಾಡಿದ್ದಾರೆ.
ಪ್ರಿನ್ಸಿಪಾಲರು ತರಿಸಿರುವ ಸೀಮೆಸುಣ್ಣ ಲೋ ಕ್ವಾಲಿಟಿಯದು; ಬರೆಯುವಾಗ ಬೇಗ ತುಂಡಾಗುತ್ತೆ. ಹಾಗಾಗಿ, ಇದರಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ; ನಾನು ಕೂರುವ ಕುರ್ಚಿ ಪಕ್ಕ ಯಾರೋ ಬೇಕಂತಲೇ ನೀರು ಚೆಲ್ಲಿದ್ದಾರೆ. ನಾನು ಬಿದ್ದು ಸಾಯಲಿ ಅನ್ನೋದು ಅವರ ಪ್ಲಾನು. ಆ ‘ಬಿ’ ಸೆಕ್ಷನ್ ಹಲ್ಲಂಡೆ ಹುಡ್ಗೀರು ಹುಡುಗರನ್ನ ನೋಡಿ ಕಿಸಕ್ಕಂತ ನಗ್ತಾವೆ ಇದಕ್ಕೆಲ್ಲಾ ಯಂಗ್ ಲೆಕ್ಚರೆರ್‍ಸ್ ಪಾಠವೇ ಕಾರಣ.
ನೆನ್ನೆ ನಾನು ಕಾಲೇಜು ಮೈದಾನದಲ್ಲಿ ಎಡವಿ ಬಿದ್ದೆ. ಅಲ್ಲೊಂದು ಬೆಣಚು ಕಲ್ಲಿತ್ತು. ಕಾಲೇಜಿನಲ್ಲಿ ನನಗಾಗದವರು ಯಾರೋ ಅಲ್ಲಿ ಬೇಕಂತಲೇ ಕಲ್ಲು ನೆಟ್ಟಿದ್ದಾರೆ. ಮೊನ್ನೆಯಿಂದ ಯಾಕೋ ಹೊಟ್ಟೆ ಗುಡುಗುಡು ಅನ್ತಾ ಇದೆ. ಇಲ್ಲೇ, ನನಗಾಗದವರು ಯಾರೋ ಮಾಟಮಂತ್ರ ಮಾಡಿಸಿದ್ದಾರೆ. ಇಲ್ಲ ಅಂತ್ರನಾದ್ರೂ ಹಾಕಿಸಿದ್ದಾರೆ. ಇಲ್ಲವೇ ಮಾರಜ್ಜಿಗೆ ಕೆಂಪುಕಾರ ಹಚ್ಚಿದ್ದಾರೆ... ಅನ್ನೋ ಇಲ್ಲದ ಕಾರಣಗಳೆಲ್ಲಾ ಆತ ಹೆಕ್ಕಿಕೊಂಡು ದಿನದಿನವೂ ಧಗಧಗ ಉರಿಯುತ್ತಿದ್ದ.
ಅವನ ದೆಸೆಯಿಂದ ಕಾಲೇಜಿನ ಆವರಣದಲ್ಲಿ ನೆಮ್ಮದಿಯೇ ಇಲ್ಲವಾಗಿತ್ತು. ಮಕ್ಕಳು ಅವನ ಪಾಠಕ್ಕೆ ತತ್ತರಿಸಿ ಹೋಗಿದ್ದವು. ‘ಸಾರ್, ಪ್ಲೀಸ್ ಅವರನ್ನ ಪಾಠ ಮಾಡೋಕ್ಕೆ ಕಳಿಸಬ್ಯಾಡಿ ಸಾರ್. ನಾವೇ ಹೆಂಗಾದ್ರೂ ಓದ್ಕೊಂಡು ಪರೀಕ್ಷೆ ಬರೀತೀವಿ. ಒಂದು ಗಂಟೆ ಸುತ್ತಿಗೆ ತಕ್ಕೊಂಡು ತಲೆ ಮೇಲೆ ರಮರಮ ಅಂತ ಬಾರಿಸಿದ ಹಾಗಿರುತ್ತೆ ಸಾರ್ ಅವರ ಪಾಠ. ಟಾರ್ಚರ್ ಅಂದ್ರೆ ಟಾರ್ಚರ್ ಸಾರ್. ತಡಕ್ಕೊಳ್ಳೋಕೆ ಆಗಲ್ಲ’ ಎಂದು ಚೆನ್ನಾಗಿ ಓದುವ ವಿದ್ಯಾರ್ಥಿ ಸುರೇಶ ಕಂಪ್ಲೇಂಟ್ ಹೇಳಿದ.
ಅದಕ್ಕೆ ದನಿಗೂಡಿಸಿದ ಆ ತರಗತಿ ಮಾನಿಟರ್ ಸೌಮ್ಯ ‘ಸಾರ್ ನಮಗೆ ಪಾಠ ಹೇಳೋ ಗುರುಗಳು ಅಂದರೆ ದೇವರ ಸಮಾನ. ಅಂಥವರ ಬಗ್ಗೆ ನಾವು ಕೇವಲವಾಗಿ ಹೀಗೆಲ್ಲಾ ಮಾತಾಡಬಾರದು. ಆದ್ರೆ ಏನ್ಮಾಡೋದು ಸಾರ್ ಅನಿವಾರ್ಯ ಹೇಳ್ತಾ ಇದ್ದೀವಿ. ಅವರು ಮೊದಲು ಅರ್ಧ ಗಂಟೆ ಕಾಲೇಜನ್ನ, ಪ್ರಿನ್ಸಿಪಾಲರನ್ನ ಬೈತಾರೆ ಸಾರ್. ಮುಂದೆ ಕಾಲು ಗಂಟೆ ಅವರ ಹೆಂಡ್ತಿ ಮಕ್ಕಳ ವಿಷಯ ಎತ್ಕೊತಾರೆ ಸಾರ್.
ಅವರಿಗೆ ಮದ್ವೆ ಟೈಮಲ್ಲಿ ಹೆಣ್ಣು ಕೊಟ್ಟ ಮಾವ ಮೋಸ ಮಾಡಿದ್ದು, ಅವರ ಹೆಂಡತಿ ಒಳ್ಳೆ ಅಡುಗೆ ಮಾಡ್ದೆ ಇರೋದು, ಅವರ ಮಕ್ಕಳು ಅವರ ಮಾತು ಕೇಳ್ದೆ ಇರೋದೆಲ್ಲಾ ಹೇಳ್ತಾರೆ ಸಾರ್. ಕೊನೇ ಕಾಲು ಗಂಟೇಲಿ ಏನಾದ್ರು ಕ್ಯಾತೆ ತಕ್ಕೊಂಡು, ಸಿಕ್ಕಾಪಟ್ಟೆ ಉಗೀತಾರೆ ಸಾರ್. ಕೋಲಲ್ಲಿ ಛಟೀರಂತ ಕಾರಣ ಇಲ್ದೇ ಹೊಡೀತಾರೆ ಸಾರ್. ಹೊಲಸು ಬೈಗುಳ ಬೈತಾರೆ ಸಾರ್. ಅವ್ರ ಮನೆ ಹಿಸ್ಟರಿಯನ್ನೆಲ್ಲಾ ಕ್ಲಾಸಲ್ಲಿ ಬಂದು ಹೇಳೋದು ಇತಿಹಾಸದ ಪಾಠ ಆಗುತ್ತಾ ನೀವೇ ಹೇಳಿ ಸಾರ್. ಒಟ್ನಲ್ಲಿ ಅವರ ಪಿರಿಯೆಡ್ ಅಂದ್ರೇನೇ ನಮಗೆ ದೊಡ್ಡ ತಲೆಬಿಸಿ ಸಾರ್’ ಎಂದು ಬೇಸರದಿಂದ ಹೇಳಿದಳು.
‘ಇದನ್ನೆಲ್ಲಾ ನೀವು ಪ್ರಿನ್ಸಿಪಾಲರ ಗಮನಕ್ಕೆ ತರಬೇಕು. ಅವರಿಗೆ ಇದನ್ನೆಲ್ಲಾ ಹೇಳಿದ್ರಾ?’ ಎಂದು ವಿಚಾರಿಸಿದೆ. ‘ಅಯ್ಯೋ, ಅವರಿಗೆ ಇದೆಲ್ಲಾ ಗೊತ್ತು ಸಾರ್. ನಾವು ಸಾಕಷ್ಟು ಸಲ ಕಂಪ್ಲೇಂಟ್ ಮಾಡಿದ್ದೀವಿ. ಅದಕ್ಕೆ ಪ್ರಿನ್ಸಿಪಾಲ್ ಸಾರ್, ನೀವೆ ಅಡ್ಜೆಸ್ಟ್ ಮಾಡ್ಕೊಂಡು ಹೋಗ್ಬೇಕುಎಂದು ತಿಪ್ಪೆ ಸಾರಿಸಿ ಕೈತೊಳ ಕೊಂಡ್ರು ಸಾರ್’ ಎಂದು ನೊಂದುಕೊಂಡವು. ಮೊದಮೊದಲು ಅಂಜಿಕೆ, ಕಿರಿಕಿರಿ, ಅನ್ನಿಸುತ್ತಿದ್ದ ಅವನ ಬೈಗುಳ, ರಗಳೆಗಳು ನಿಧಾನವಾಗಿ ಅಭ್ಯಾಸವಾಗಿ ಹೋದವು.
ಅವನ ಕೂಗಾಟದಿಂದ ಸ್ಟಾಫ್ ರೂಮಿನೊಳಗೊಂದು ಅಸಹನೆಯ ವಾತಾವರಣ ಸೃಷ್ಟಿಯಾಗುತ್ತಿತ್ತು. ಒಂದು ತರಗತಿಗೆ ಹೋಗುವ ಮೊದಲು ಅಧ್ಯಾಪಕನ ಮನಸ್ಸು ತಿಳಿಯಾಗಿರಬೇಕು. ಹೇಳಬೇಕಾದ ವಿಷಯಗಳನ್ನೊಮ್ಮೆ ನೋಡಿ ಕೊಂಡು ಹೋಗಬೇಕು. ಒಂದಿಷ್ಟು ಅಧ್ಯಯನ ನಡೆಸಬೇಕು. ಇಂಥ ಸೂಕ್ಷ್ಮ ಪ್ರಕ್ರಿಯೆಗಳು ನಡೆಯುವ ಸ್ಥಳವನ್ನೇ ಹಾಳು ಮಾಡಿ ಹಾಕುತ್ತಿದ್ದ. ಅವನ ದೆಸೆಯಿಂದ ಸ್ಟಾಫ್‌ರೂಮ್‌ನಲ್ಲಿ ಬಸ್‌ಸ್ಟ್ಯಾಂಡ್ ವಾತಾವರಣ ನೆಲೆಗೊಳ್ಳುತ್ತಿತ್ತು.
ನಮ್ಮ ಕಾಲೇಜಿನಲ್ಲಿ ಇನ್ನೂ ಮದುವೆ ಯಾಗದ ಯುವ ಉಪನ್ಯಾಸಕರಿದ್ದರು. ಮನೆ ಕಡೆಯ ಸಮಸ್ಯೆ, ತಂಗಿ ಮದುವೆ ಮಾಡಬೇಕು, ಸಾಲ ತೀರಿಸಬೇಕು ಎಂಬ ಹಲವು ಕಾರಣಗಳಿಂದ ಅವರ ಮದುವೆಗಳಿನ್ನೂ ಆಗಿರಲಿಲ್ಲ. ಹೊಸ ತಲೆಮಾರಿನ ಈ ಯುವಕರನ್ನು ಕಂಡರೆ ಸಾಕು ಅವನ ಬಿ.ಪಿ. ಏರೇರಿ ಇಳಿಯುತ್ತಿತ್ತು. ಅವರ ವೈಯಕ್ತಿಕ ಬದುಕಿನ ಬಗ್ಗೆ ತನ್ನ ಮನಸ್ಸಿಗೆ ತೋಚಿದ, ಸಾವಿರಾರು ಕಾರಣಗಳನ್ನು ಆತ ಊಹಿಸುತ್ತಿದ್ದ. ಅವನ ಆಲೋಚನೆಗಳಿಗೆ ತರ್ಕ, ನ್ಯಾಯ ಒಂದೂ ಇರಲಿಲ್ಲ.
‘ಕೆಲಸ ಸಿಕ್ಕು ಇಷ್ಟು ವರ್ಷ ಕಳೆದರೂ ಇನ್ನೂ ಇವನ ಮದ್ವೆ ಆಗಿಲ್ಲ ಅಂದ್ರೆ ಓಹೋ! ಇದರ ಹಿಂದೆ ಏನೋ ಭಾರಿ ರಹಸ್ಯವೇ ಇರಬೇಕು. ಇಲ್ಲಾ ಇವನ ಚಾರಿತ್ರ್ಯ ಕೆಟ್ಟಿರಬೇಕು. ಇವಳು ಮದ್ವೆ ಇನ್ನೂ ಬೇಡ ಅಂತಿದ್ದಾಳಲ್ಲ ಇವಳ ನಡತೆಯಲ್ಲಿ ಏನೋ ದೋಷವಿರಬೇಕು’ ಎಂದೆಲ್ಲಾ ಆತ ಮುಕ್ತವಾಗಿ ಯೋಚಿಸುತ್ತಿದ್ದ. ಈ ಮದ್ವೆ ವಿಷಯಗಳ ಬಗ್ಗೆಯೇ ಅವರಿಗೆಲ್ಲಾ ನೂರಾರು ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ಯುವ ಉಪನ್ಯಾಸಕರ ತಲೆತಿನ್ನುತ್ತಿದ್ದ. ‘ನಮ್ಮ ಮದ್ವೆ ವಿಷಯ ಕಟ್ಕೊಂಡು ಇವನಿಗೇನಾಗಬೇಕು ಸಾರ್’ ಎಂದು ಅವರೆಲ್ಲಾ ಗೊಣಗಿಕೊಳ್ಳುತ್ತಿದ್ದರು.
ಅವನ ಕಣ್ಣಿಗೆ ಕಾಣುವಂತೆ ಯುವ ಮೇಷ್ಟ್ರುಗಳು ನಿಂತು ಮಾತಾಡುವಂತಿರಲಿಲ್ಲ, ನಗುವಂತಿರಲಿಲ್ಲ. ಊಟ, ತಿಂಡಿ, ಹಂಚಿಕೊಂಡು ತಿನ್ನುವಂತಿರಲಿಲ್ಲ. ಒಟ್ಟಿಗೆ ಟೀ ಕುಡಿಯಲೂ ಹೊರಗಡೆ ಹೋಗುವಂತಿರಲಿಲ್ಲ. ಇದಕ್ಕೆಲ್ಲಾ ಬಣ್ಣ ಕಟ್ಟಿ ಆತ ಮಾತಾಡುತ್ತಿದ್ದ. ಗುಮಾನಿ ಹುಟ್ಟಿಸುವ ಕಥೆಗಳನ್ನು ಸೃಷ್ಟಿಸುತ್ತಿದ್ದ. ಬೇರೆಯವರ ವಿಷಯ ಮಾತಾಡುವುದು ಅವನಿಗೆ ನೀರು ಕುಡಿದಷ್ಟೇ ಸಲೀಸಾಗಿತ್ತು. ನಮ್ಮಲ್ಲಿ ಇನ್ನೂ ಮದುವೆಯಾಗದ ಉಪನ್ಯಾಸಕರಿದ್ದಂತೆ; ಉಪನ್ಯಾಸಕಿಯರೂ ಇದ್ದರು.
ಅತಿಥಿ ಉಪನ್ಯಾಸಕ್ಕೆ ಬರುವ ಅವಿವಾಹಿತ ಹೆಣ್ಣು ಮಕ್ಕಳಿದ್ದರು. ಒಂದೇ ಓರಗೆಯ ಅವರೆಲ್ಲಾ ಸಹಜವಾಗಿ ನಗುನಗುತ್ತಾ ಮಾತಾಡುತ್ತಿದ್ದರು. ವಿರಾಮವಿದ್ದಾಗ ಹರಟೆ ಕೊಚ್ಚುತ್ತಿದ್ದರು. ಇದು ಚಂದ್ರಶೇಖರನಿಗೆ ಸರಿ ಕಾಣುತ್ತಿರಲಿಲ್ಲ. ಈ ಸಮಯದಲ್ಲಿ ಅವನ ಬ್ರೇನ್ ಸಾವಿರಪಟ್ಟು ವೇಗದಲ್ಲಿ ಕೆಲಸ ಮಾಡುತ್ತಿತ್ತು. ಅಲ್ಲಿ ಇಲ್ಲದ ಸಂಬಂಧಗಳನ್ನು ಆತ ಕಲ್ಪಿಸುತ್ತಿದ್ದ. ಮರೆಯಲ್ಲಿ ನಿಂತು ಕದ್ದು ಕದ್ದು ಏನೋ ರಹಸ್ಯ ಕಂಡು ಹಿಡಿಯುವ ತಜ್ಞನಂತೆ ನೋಡುತ್ತಿದ್ದ.
ಅವರ ನಡುವೆ ಏನೋ ಕೆಮಿಸ್ಟ್ರಿ ನಡೀತಾ ಇದೆ ಅನ್ನೋದೆ ಅವನ ಬಲವಾದ ನಂಬಿಕೆ. ‘ಅಷ್ಟಿಲ್ಲದೆ ವಯಸ್ಸಿಗೆ ಬಂದ ಹುಡುಗ ಹುಡುಗಿ ನಿಂತು ಮಾತಾಡ್ತಾರೇನ್ರಿ. ಏನೋ ಇದೆ. ನೋಡಿ ನಾನು ಪತ್ತೆ ಹಚ್ಚುತ್ತೀನಿ’ ಅಂತ ಸ್ವಯಂ ಸಿ.ಬಿ.ಐ. ಅಧಿಕಾರಿಯಾಗುತ್ತಿದ್ದ. ಎಲ್ಲರಿಗೂ ಸಹಜವಾಗಿ ಕಾಣುವ ಕ್ರಿಯೆಗಳು ಆತನಿಗೆ ಮಾತ್ರ ಹಳದಿ ಬಣ್ಣದಲ್ಲಿ ಕಾಣುತ್ತಿದ್ದವು. ಇರುವುದೆಲ್ಲಾ ಬಿಟ್ಟು, ಇರದುದ ಹುಡುಕುವುದು ಅವನಿಗೆ ರಕ್ತಗತವಾಗಿ ಹೋಗಿತ್ತು.
ನಮ್ಮ ಪಾಲಿಗೆ ದಿನದ ಅನಾಸಿನ್ ಆಗಿದ್ದ ಬುಲ್ಡೆ ಚಂದ್ರನ ವಿಷಯ ಮಾತಾಡುತ್ತಾ ನಿಂತಿದ್ದಾಗ ಕಾಲೇಜಿನ ಅಟೆಂಡರ್ ಪೊನ್ನಪ್ಪ ಬಂದ. ವಯಸ್ಸಿನಲ್ಲಿ ಎಲ್ಲರಿಗಿಂತ ಹಿರಿಯನಾದ ಪೊನ್ನಪ್ಪ ಪ್ರಾಮಾಣಿಕ ಮನುಷ್ಯ. ಕಡಿಮೆ ಸಂಬಳದಲ್ಲಿ ಬದುಕುತ್ತಿದ್ದರೂ ನೀತಿ, ನಿಯತ್ತು ಬಿಟ್ಟಿರಲಿಲ್ಲ. ಪ್ರಾಮಾಣಿತೆಗೆ, ನಂಬಿಕೆಗೆ ಮಾದರಿ ಯಂತಿದ್ದ ಪೊನ್ನಪ್ಪ ಮಾತಾಡುವುದೇ ಕಡಿಮೆ. ಅಂಥವನೇ ಅವತ್ತು ರಾಂಗಾಗಿ ಮಾತಾಡಿದ.
‘ಮನೇಲಿ ಹೆಂಡ್ತಿಗೆ ಹೆದರಿ ಸಾಯೋ ನನ್ಮಕ್ಕಳೇ ಹಿಂಗೆ ಹೊರಗಡೆ ಕೂಗಾಡಿ ಸಾಯೋದು ಸಾರ್. ಇವರ ಮಾತಿಗೆ ಮನೆ ಒಳಗೆ ಕಿಮ್ಮತ್ತಿನ ಬೆಲೆಯೂ ಇರಲ್ಲ. ಅಲ್ಲಿ ಇವರ ಜೋರು ಜಬರ್ದಸ್ತ್ ಏನೂ ನಡೆಯಲ್ಲ ನೋಡಿ. ಅದನ್ನು ಬಂದು ಇಲ್ಲಿ ತೋರಿಸ್ತಾವೆ. ಬೊಗಳ್ತಾ ಇರೋದು ಇವರ ಜನ್ಮಕ್ಕಂಟಿದ ಶಾಪ ಸಾರ್. ಇವು ಒಂಥರ ಸೀಳು ನಾಯಿಗಳಿದ್ದಂಗೆ. ಇವುನ್ನ ಸರಿ ಮಾಡಕ್ಕಾಗಲ್ಲ. ಯಾವ ಮನುಷ್ಯ ತನ್ನನ್ನೇ ತಾನು ನಂಬೋದಿಲ್ಲವೋ ಅವನು ಬೇರೆಯವರನ್ನು ಏನ್ ನಂಬ್ತಾನೆ ಸಾರ್.
ಹಿಂದಿನ ಜನ್ಮದಲ್ಲಿ ಇವನು ಪೊಲೀಸ್ ನಾಯಿ ಆಗಿದ್ದ ಅಂತ ಕಾಣುತ್ತೆ. ಅದೇ ಬುದ್ಧಿ ಈ ಜನ್ಮಕ್ಕೂ ನಡ್ಕೊಂಡು ಬಂದು ಬಿಟ್ಟಿದೆ. ಈ ಹತ್ತು ವರ್ಷದಲ್ಲಿ ನನ್ನಂಥ ನಿಯತ್ತು ಮನುಷ್ಯನಿಗೇ ಬಿಟ್ಟಿಲ್ಲ ಇವನು. ನನಗೇನೆ ಹತ್ತತ್ರ ಹದಿನೈದು ಅನೈತಿಕ ಸಂಬಂಧ ಕಲ್ಪಿಸಿದ್ದಾನೆ ಇವನು ಅಂತೀನಿ. ನೋಡಿ ನನಗೇ ಗೊತ್ತಿಲ್ಲದೆ ನಾನು ನನ್ನ ಹೆಂಡ್ತಿಗೆ ಮೋಸ ಮಾಡಿ ಹದಿನೈದು ಕಡೆ ಸಂಸಾರ ನಡೆಸಿದ್ದೀನಿ ಅಂದ್ರೆ ಅವನ ಅನುಮಾನದ ಕೆಪಾಸಿಟೀನ ನೀವೇ ಲೆಕ್ಕ ಹಾಕಿ. ಇವನ ಮಾತು ನಿಜ ಅಂತ ಯಾರಾದ್ರು ನಂಬಿಬಿಟ್ರೆ ಮನೆಗಳೇ ಏನು, ಊರಿಗೆ ಊರೇ ಮುಳುಗಿ ಹೋಗ್ತಾವೆ ಸ್ವಾಮಿ.
ಅವ್ನದೇನು ಮಾತು ಬಿಟ್ಟಾಕಿ ಅತ್ಲಾಗೆ’ ಎಂದು ಅಟೆಂಡರ್ ಪೊನ್ನಪ್ಪ ಚಂದ್ರಶೇಖರನ ಜನ್ಮ ಜಾಲಾಡಿ ಬಿಟ್ಟ. ಅವನಿಗೂ ಚೌರಶೇಖರನ ಬಿಸಿ ಸರಿಯಾಗೇ ತಟ್ಟಿರುವುದು ಎದ್ದು ಕಾಣತೊಡಗಿತು. ಹೊಸದಾಗಿ ಬಂದಿದ್ದ ಪ್ರಿನ್ಸಿಪಾಲರು ಒಂದಿಷ್ಟು ಬಡಹುಡುಗರನ್ನು ಗುರುತಿಸಿ ಚಪ್ಪಲಿ, ಬಟ್ಟೆ, ಪುಸ್ತಕ, ಪೆನ್ನು ಕೊಡಿಸಿದರು. ಅವರೆಲ್ಲರ ಫೀಸನ್ನು ತಾವೇ ಕಟ್ಟಿದರು. ನಾವೆಲ್ಲಾ ಅವರ ಉದಾರ ಮನಸ್ಸಿಗೆ ಕೃತಜ್ಞತೆ ಹೇಳಿದೆವು. ಆದರೆ ಬುಲ್ಡೆ ಶೇಖರನಿಗೆ ಇದು ಇಷ್ಟವಾಗಲಿಲ್ಲ.
ಸಹಾಯ ಪಡೆದ ಕೆಲ ಹುಡುಗರು ಚಂದ್ರಶೇಖರನ ಜಾತಿಗೆ ಸೇರಿದ್ದರಂತೆ. ಇದನ್ನು ಅವನೇ ಪತ್ತೆ ಹಚ್ಚಿಕೊಂಡಿದ್ದ. ಅವತ್ತೇ ಅಲ್ಲೇ ಜಗಳಕ್ಕೆ ನಿಂತ. ‘ನಮ್ ಜಾತಿ ಹುಡುಗರಿಗೆ ಸಹಾಯ ಮಾಡೋಕೆ ನೀವ್ಯಾರ್ರಿ? ನಂಗೊತ್ತಿಲ್ವ ನಿಮ್ ಕಿತಾಪತಿ! ನಮ್ಮವರೆದುರು ನನ್ನ ಕೀಳ್ ಮಾಡಿ ತೋರಿಸೋಕೆ ತಾನೆ ಇದೆಲ್ಲಾ ನೀವ್ ಮಾಡ್ತಾ ಇರೋದು. ನನಗೆ ಎಲ್ಲಾ ಗೊತ್ತಾಗುತ್ತೆ ಕಂಡ್ರಿ. ನನ್ ತಂಟೆಗೆ ಬಂದ ಯಾರನ್ನೂ ನಾನ್ ಬಿಟ್ಟ ಮಗಾನೇ ಅಲ್ಲ’ ಎಂದು ವದರಾಡಿದ. ಅವನ ಮಾತಿಗೂ, ವಿಷಯಕ್ಕೂ ಒಂದಕ್ಕೊಂದು ಸಂಪರ್ಕವೇ ಇರಲಿಲ್ಲ.
ವಾರದ ಹಿಂದೆ ಬಂದು ಡ್ಯೂಟಿ ರಿಪೋರ್ಟ್ ಮಾಡಿಕೊಂಡಿದ್ದ ಪ್ರಿನ್ಸಿಪಾಲರು ಸುಮ್ಮನೆ ನಿಂತು ಕೇಳಿಸಿಕೊಂಡು ನಕ್ಕು ಹೊರಟು ಹೋದರು. ಅವರ ನಗುವಿನ ಮೇಲೂ ಮತ್ತೆ ರೇಗಾಡಿ ಕೂಗಾಡಿದ. ಅವನ ದನಿ ಕಾಲೇಜಿನಿಂದ ಅರ್ಧ ಫರ್ಲಾಂಗು ದೂರವಿರುವ ರಸ್ತೆಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಅವನ ಹುಚ್ಚು ವಾದ, ಕೆಟ್ಟಮಾತು, ಹುಚ್ಚು ವರ್ತನೆಗಳಿಂದ ಎಲ್ಲರಿಗೂ ಸಾಕಾಗಿ ಹೋಗಿತ್ತು. ಹುಚ್ಚಾಸ್ಪತ್ರೆಗೆ ಸೇರಿಸುವುದೊಂದೇ ಬಾಕಿ ಉಳಿದಿತ್ತು.
ಹೊಸ ಪ್ರಿನ್ಸಿಪಾಲ್ ಚಿದಂಬರ್ ಬಹಳ ಸಜ್ಜನ ಮನುಷ್ಯರಾಗಿದ್ದರು. ಬುಲ್ಡೆ ಚಂದ್ರನ ನಾವು ಒಂದು ಹುಚ್ಚು ಗಿರಾಕಿ ಎಂದು ನೋಡಿ ಅಸಹ್ಯಪಟ್ಟು ದೂರ ಮಾಡುವಾಗ ಅವರು ಅವನ ಮೇಲೆ ಮಮತೆ ತೋರಿಸುತ್ತಿದ್ದರು. ಆತನೊಬ್ಬ ರೋಗಿ. ಅವನಿಗೆ ವಿಶ್ರಾಂತಿಯ ಅಗತ್ಯವಿದೆ. ಅವನ ಮನಸ್ಸನ್ನು, ಆಲೋಚನೆಗಳನ್ನು ನಾವು ಬದಲಾಯಿಸೋದಕ್ಕೆ ಆಗಲ್ಲ. ತಲೆ ನೆಟ್ಟಗಿಲ್ಲದ ಅರೆಹುಚ್ಚರ ವರ್ತನೆಗಳನ್ನು ನಾನು ನನ್ನ ಕುಟುಂಬದಲ್ಲೇ ನೋಡಿದ್ದೇನೆ.
ತುಂಬಾ ಸಹಿಸಿಕೊಂಡಿದ್ದೇನೆ. ಸಾಮಾನ್ಯ ಸ್ಥಿತಿಯಲ್ಲಿರುವ ನಾವು ಅವರನ್ನು ಅತ್ಯಂತ ಸಹನೆಯಿಂದ ಕಾಣಬೇಕು ಎನ್ನುತ್ತಿದ್ದರು. ಅವರು ಹೇಳುವಷ್ಟು ಶಾಂತ ಚಿತ್ತ ನಮಗಿರಲಿಲ್ಲ. ಬುಲ್ಡೆ ಮಾತು ಕೇಳಿದ ಕೂಡಲೇ ಪಿತ್ತ ನೆತ್ತಿಗೇರುತ್ತಿದ್ದ ನಾವು ಅವನನ್ನು ಕ್ಷಮಿಸುವ ಔದಾರ್ಯವನ್ನು ಎಂದೂ ತೋರಿಸಲೇ ಇಲ್ಲ. ಒಂದು ದಿನ ಬುಲ್ಡೆ ತನ್ನ ಸ್ಕೂಟರ್‌ನಲ್ಲಿ ಬರುವಾಗ ಲಾರಿಗೆ ಗುದ್ದಿ ಬಿದ್ದು ಹೋಗಿದ್ದ. ಇರಲಿ ಎಷ್ಟಾದರೂ ಸಹೋದ್ಯೋಗಿ ಅಲ್ವಾ ಎಂದು ಅವನನ್ನು ನೋಡಲು ಮನೆಗೆ ಹೋದೆವು.
ಆಶ್ಚರ್ಯವೆಂದರೆ ದಿನಾ ಬುಲ್ಡೆಯಿಂದ ಉಗಿಸಿಕೊಳ್ಳುತ್ತಿದ್ದ ಪ್ರಿನ್ಸಿಪಾಲರು ನಮಗಿಂತ ಮೊದಲು ಅಲ್ಲಿಗೆ ತಲುಪಿದ್ದರು. ಚಂದ್ರಶೇಖರನ ಪಕ್ಕ ಕೂತು ಆರೈಕೆ ಮಾಡುತ್ತಿದ್ದರು. ಅವನ ನೋವಿಗೆ ತಾವು ಕಣ್ಣೀರು ಹಾಕುತ್ತಿದ್ದರು. ನಮಗೆ ಅರ್ಥವಾಗದ ಒಗಟಾಗಿ ಕಾಣುತ್ತಿದ್ದರು. ಸದಾ ವಟವಟ ಎನ್ನುತ್ತಿದ್ದ ಬುಲ್ಡೆ ಚಂದ್ರಶೇಖರ ಬಾಯಿಗೇ ಹೊಲಿಗೆ ಜಡಿಸಿಕೊಂಡಿದ್ದ. ಪಿಳಿಪಿಳಿ ಕಣ್ಣು ಬಿಡುತ್ತಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.